ಲೇಖಕರು: ರುಖಿಯಾ ರಜಾಕ್, ಉಡುಪಿ.

2002ರ ಗುಜರಾತ್ ಹತ್ಯಾಕಾಂಡ, ಭಾರತದ ಇತಿಹಾಸದಲ್ಲಿ ಮರೆಯಲಾಗದ ಕಪ್ಪುಚುಕ್ಕೆಯನ್ನುಳಿಸಿತು. ಬಹಳಷ್ಟು ಸಾವು-ನೋವುಗಳಿಗೆ ಕಾರಣವಾದ ಈ ಗಲಭೆಯಲ್ಲಿ ನಡೆದ ಕ್ರೌರ್ಯತೆಯು ಜನಮಾನಸದಲ್ಲಿ ಹಸಿರಾಗುಳಿದಿದೆ. ಮುಸಲ್ಮಾನರನ್ನು ಕಂಡಲ್ಲಿ ಕೊಚ್ಚಿಹಾಕಿದ್ದು, ಅವ್ಯಾಹತವಾಗಿ ಅತ್ಯಾಚಾರ ನಡೆಸಿದ್ದು, ಗರ್ಭಿಣಿಯ ಗರ್ಭವನ್ನು ಸೀಳಿ,  ಭ್ರೂಣವನ್ನೇ ತ್ರಿಶೂಲಕ್ಕೆ ಚುಚ್ಚಿ, ಬೆಂಕಿಗೆ ತೋರಿಸಿದ ರಾಕ್ಷಸೀಯತೆಯನ್ನು ಮರೆತರೂ ಮರೆಯುವುದು ಹೇಗೆ? ಇಹ್ಸಾನ್ ಜಾಫ್ರಿ ಯವರ ಹತ್ಯೆ, ಬೆಸ್ಟ್ ಬೇಕರಿ ಪ್ರಕರಣಗಳು ಒಂದೇ ಎರಡೇ?  ಬಹಳಷ್ಟು ಕಡೆ ಈ ಕ್ರೌರ್ಯಗಳು ಪೋಲೀಸ್ ಕಣ್ಗಾವಲಿನಲ್ಲೇ ನಡೆಯಿತು ಎನ್ನುವುದು ತೀರಾ ಲಜ್ಜೆಗೇಡಿ ವಿಷಯವಾಗಿದೆ. ಅದಾಗಿ ಈಗ ಇಪ್ಪತ್ತು ವರ್ಷಗಳು ಸಂದಿವೆ.

2002 ರಲ್ಲಿ ಘಟನೆ ನಡೆದ ಬಳಿಕ ಮಾನವಹಕ್ಕು ಆಯೋಗದ ಮುಂದೆ ಹೇಳಿಕೆ ನೀಡದಂತೆ ತಡೆಯಲು, ಸಂತ್ರಸ್ತರಿಗೆ ನಾನಾರೀತಿಯ ಬೆದರಿಕೆ ನೀಡಲಾಗಿತ್ತು ಆದರೂ ಬಿಲ್ಕೀಸ್ ಬಾನು ಎಂಬ ಅತ್ಯಾಚಾರ ಸಂತ್ರಸ್ತೆ, ಧೈರ್ಯದಿಂದ ಆಯೋಗದ ಮುಂದೆ ಬಂದು, ಹತ್ತು ಅಪರಾಧಿಗಳಿಂದ ತನ್ನ ಮೇಲಾದ ಸಾಮೂಹಿಕ ಅತ್ಯಾಚಾರ, ಮತ್ತು ತನ್ನ ಕಣ್ಣಮುಂದೆಯೇ ಎಳೆಕಂದಮ್ಮನ ಸಹಿತ ಕುಟುಂಬಿಕರ ಹತ್ಯೆಮಾಡಿದ ಹೃದಯವಿದ್ರಾವಕ ಸತ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಬಹಿರಂಗ ಪಡಿಸಿದಾಗ ಆಕೆಯ ಮಾನಸಿಕ ಸ್ಥಿತಿ ಹೇಗಿರಬಹುದು? ಯಾವ ರೀತಿಯ ನೋವು ಆಕೆ ಅನುಭವಿಸಿರಬಹುದು? ಪೋಲೀಸ್ ಮತ್ತು ರಾಜಕಾರಣಿಗಳ ಭಂಡ “ಸಿಸ್ಟಮ್” ಮುಂದೆ ನಿಂತು ಧ್ವನಿಯೆತ್ತಲು ಆಕೆಗೆ ಅದೆಷ್ಟು ಗಟ್ಟಿಗುಂಡಿಗೆ ಬೆಕಾಗಿದ್ದಿರಬಹುದು? ಹಾಗೂ ಹೀಗೂ ತಾನು ಕಳೆದುಕೊಂಡಿದ್ದನ್ನು ಮರಳಿ ಪಡೆಯಲಾಗದ ಸಂಕಟವಿದ್ದರೂ, ತನ್ನ ಪುಟ್ಟ ಕಂದಮ್ಮನ ಹಂತಕರಿಗೆ ಮತ್ತು ಅತ್ಯಾಚಾರ ಅಪರಾಧಿಗಳಿಗೆ ಅವರ ನೆಲೆ ತಲುಪಿಸಿದ ನೆಮ್ಮದಿ ದೊರಕಿತ್ತು ಬಿಲ್ಕೀಸ್ ಗೆ,… ಆದರೆ…. ಅದಾದ ಇಪ್ಪತ್ತು ವರುಷಗಳ ಬಳಿಕ, ಮತ್ತೆ ಆ ರಾಕ್ಷಸರನ್ನು ಸರಕಾರವು ‘ಕ್ಷಮೆ’ಗೆ ಅರ್ಹವಾಗಿ ಪರಿಗಣಿಸಿದ್ದು, ಇನ್ನು ಅವರು, ರಾಜಾರೋಷವಾಗಿ ಸುತ್ತುವುದನ್ನು ಕಾಣುವಾಗ ಆ ಅತ್ಯಾಚಾರ ಸಂತ್ರಸ್ತೆಯ,  ತಾಯಿಯ ಹೃದಯಕ್ಕೆ ಹೇಗಾಗಬೇಡ? ನ್ಯಾಯಾಲಯದ ಈ ನಿಲುವು ಆ ತ್ಯಾಚಾರಿಗಳ ಅತ್ಯಾಚಾರಕ್ಕಿಂತಲೂ, ಹಂತಕರ ಕೊಲೆಗಿಂತಲೂ ಭೀಭತ್ಸವಾಗಿ ಕಾಣದೇ? ತನ್ನ ಅತ್ಯಾಚಾರಿಗಳು ಈಗ ಬಿಡುಗಡೆ ಗೊಂಡಿದ್ದು, ಇನ್ನು ತನ್ನ ಮತ್ತು ತನ್ನ ಪರಿವಾರದ ಸುರಕ್ಷೆಯ ಗತಿಯೇನು ಎಂಬ ಭಯ ಕಾಡಲಾರದೇ? ಈಗಾಗಲೇ ಬಲ್ಕಿಸ್ ಮತ್ತು ಕುಟುಂಬಕ್ಕೆ ಈ ಹೇಡಿಗಳು ಬಹಳಷ್ಟು ಬಾರಿ ಬೆದರಿಸಿದ್ದಾರೆ‌. ಅವರ ಬೆದರಿಕೆಗೆ ಅಂಜಿ, ಎರಡು ವರುಷಗಳಲ್ಲಿ ಕನಿಷ್ಠ ಇಪ್ಪತ್ತು- ಇಪ್ಪತ್ತೈದು ಬಾರಿಯಾದರೂ ಮನೆ ಬದಲಿಸಿಕೊಂಡಿದ್ದಾರೆ ಬಿಲ್ಕಿಸ್, ಹಾಗಾದರೆ ಇನ್ನು ಮುಂದಕ್ಕೇ ಈಕೆ ಸುರಕ್ಷಿತಳೇ?

ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣವಾದಾಗ ಕ್ಯಾಂಡಲ್ ಹಿಡಿದುಕೊಂಡು ಮಾರ್ಚ್ ಮಾಡುವ ನಾವುಗಳು, ಬಿಲ್ಕಿಸ್ ನಂತಹಾ ಪ್ರಕರಣಗಳ ವಿರುದ್ಧ ಚಕಾರವೆತ್ತುವುದಿಲ್ಲ. “ಬೇಟಿ ಪಢಾವೋ; ಬೇಟಿ ಬಚಾವೋ”  ಎಂಬ ಸ್ಲೋಗನ್ ಭಜಿಸುವ ಭಾಜಪ ಆಡಳಿತದಲ್ಲಿ ಈ ಪ್ರತೀತಿ ಯಾಕೆ? ಅಪರಾಧಿಗಳು ಧರ್ಮದ ಆಧಾರದಲ್ಲಿ ನಿರಪರಾಧಿಗಳಾಗಿ ಬಿಡವುದು ಹೇಗೆ? ಹಾತ್ರಸ್ ನಲ್ಲಿ ಕೆಳಜಾತಿಯ ಯುವತಿಯ ಅತ್ಯಾಚಾರವಾದಾಗ ಅಪರಾಧಿಗಳನ್ನು ರಕ್ಷಿಸುವ ಸಲುವಾಗಿ ಯುವತಿಯ ಮೃತದೇಹವನ್ನು ಅಪರಾತ್ರಿಯಲ್ಲಿ ಸುಡಲಾಯಿತು; ಅದೂ ಕೂಡಾ “ಸಾಕ್ಷಿ ಸಮೇತ”!!. ಅದೆಷ್ಟೋ ಬೇಟಿಗಳನ್ನು ಇದೇರೀತಿ ಸುಡಲಾಗಿದೆಯೋ, ನ್ಯಾಯದಿಂದ ವಂಚಿಸಲಾಗಿದೆಯೋ ದೇವನೇ ಬಲ್ಲ.

ಬಿಲ್ಕಿಸ್ ಬಾನೂ ಮುಸಲ್ಮಾನಳಾಗಿರದೇ ಹಿಂದೂ ಆಗಿದ್ದರೆ??!! ಈಗ ಈ ಪ್ರಕರಣ ಬಿಜೆಪಿಗೆ ಮತಬ್ಯಾಂಕ್ ಆಗುತ್ತಿತ್ತು. ಅಪರಾಧಿಗಳು ಈಗಾಗಲೇ ಗಲ್ಲಿಗೇರಿರುತ್ತಿದ್ದರು. ಮತ್ತು ಈ ಕೆಚ್ಚಿನ ಕಿಚ್ಚನ್ನು ಯುವ ಸಮೂಹದ ಎದೆಗೆ ಹಚ್ಚಿ ದೇಶದ ಉದ್ದಗಲಕ್ಕೂ ಹರಡುವಂತೆ ನೋಡಿಕೊಳ್ಳಲಾಗುತ್ತಿತ್ತು ಅಲ್ಲವೇ?

“ಒಬ್ಬ ಅತ್ಯಾಚಾರಿಯನ್ನು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಯನ್ನು ಬಿಡುಗಡೆ ಮಾಡಬಾರದು..” ಎಂಬ ತಾನೇ ಮಾಡಿದ ಅನುಶಾಸನವನ್ನು ಬಿಜೆಪಿ ಅದು ಹೇಗೆ ಮರೆತಿತು? ಅದು ಹೇಗೆ ಆ ರಾಕ್ಷಸರು “ಕ್ಷಮೆ”ಗೆ ಅರ್ಹರಾದರು? ಸರಕಾರದ ಈ ರೀತಿಯ ನಡೆಯಿಂದ ಇನ್ನು ಮುಂದಿನ ಯುವ ಪೀಳಿಗೆಗೆ ಯಾವ ಸಂದೇಶ ದೊರಕುವುದು? ಈಗಾಗಲೇ ನಮ್ಮ ಯುವ ಸಮೂಹವು “ಕಲಿಕೆ” ಮತ್ತು “ಉದ್ಯೋಗ” ವನ್ನರಸುವುದನ್ನು ಬಿಟ್ಟು “ಕೋಮುಗಲಭೆ”ಯೆಂಬ ನೀಚ ಕಸುವಿಗೆ ಕೈಹಾಕಿದೆ. ಇದರ ಉದಾಹರಣೆ ನಮಗೆ ದಿನಂಪ್ರತಿ ಕಾಣಲು ಸಿಗುತ್ತಿದೆ. ಮಂಗಳೂರು, ಶಿವಮೊಗ್ಗ, ಸುರತ್ಕಲ್ ಗಳಲ್ಲಿ ನಾವು ಈ “ಮಾಡೆಲ್” ಗಳನ್ನು ನೋಡುತ್ತಲೇ ಬರುತ್ತಿದ್ದೇವೆ. ಇನ್ನು ಅಪರಾಧಿಗಳು ಈ ರೀತಿ ಕ್ಷಮೆಗೆ ಅರ್ಹರಾಗುವ ರೂಢಿ ಇದೇ ರೀತಿ ಮುಂದುವರೆದರೆ, ದೇಶದ ಭವಿಷ್ಯದ ಗತಿಯೇನು? ಯುವ ಸಮಾಜ ಎತ್ತ ಸಾಗಬಹುದು? ಈ ರೀತಿಯ ಬಿಡುಗಡೆಗಳು, ‘ಅಪರಾಧ ಮಾಡಿದಕ್ಕಿಂತಲೂ ವೇಗವಾಗಿ ಬಿಡುಗಡೆ ಹೊಂದಬಹುದೆಂಬ’ ಸಂದೇಶ ಕೊಡದೇ ಅವರಿಗೆ?

ಅತ್ಯಾಚಾರ ಪ್ರಕರಣದಿಂದ ಬಿಡುಗಡೆಗೊಂಡ ನಂತರ ಸನ್ಮಾನಿಸಿದ ಸಂದರ್ಭ.

ಮಹಿಳೆಯರ, ಮಕ್ಕಳ, ದೇಹದ ಜೊತೆಗೆ, ಅವರ ಆತ್ಮವನ್ನೂ , ಅಸ್ಮಿತೆಯನ್ನು, ಹರಿದುಮುಕ್ಕುವ ನರರೂಪಿ ರಾಕ್ಷಸರಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು. ಹೀಗಿರುವಾಗ ಈ ಕ್ರೂರಿಗಳಿಗೆಂತಹಾ ಕ್ಷಮೆ? ಆದರೀಗ ಅಂದರೆ ಎಪ್ಪತ್ತೈದರ ಸ್ವಾತಂತ್ರ್ಯ ದ ಈ ಅಮೃತಮಹೋತ್ಸವದ ಸುಸಂದರ್ಭದಲ್ಲಿ ಈ ಅಪರಾಧಗಳ ಅರ್ಥ, ಮಾನದಂಡಗಳು ಬದಲಾಗುತ್ತಿವೆಯೇ? ಎಂಬ ಅನುಮಾನ ಭಯ ಕಾಡುತ್ತಿದೆ. ಈಗ ಮಾನವನಿಂದ ಮಾನವನ ಹತ್ಯೆ ಮಾಡುವುದು ಅಪರಾಧವಾಗುವುದಕ್ಕಿಂತಲೂ ಆ ಧರ್ಮದವನು ಈ ಧರ್ಮದವನನ್ನು ಹತ್ಯೆ ಮಾಡಿದ್ದು ಎಂಬುವುದು ಶಿಕ್ಷೆಗೆ ಅರ್ಹಾವಾದ ವಿಷಯವಾಗುತ್ತಿದೆ. ಮತ್ತು “ಮುಸಲ್ಮಾನನನ್ನು ಹತ್ಯೆಮಾಡಿದ ಹಿಂದು” ನಾಮಧಾರಿ ಆದಷ್ಟು ಬೇಗ ನಿರಪರಾಧಿಯಾಗಿ ಕ್ಷಮೆಗೆ ಅರ್ಹವಾಗುವುದು, ಬಿಡುಗಡೆಯಾಗುವುದು ಸಾಮಾನ್ಯವಾಗುತ್ತಿದೆಯೇ? ಸಮಾನತೆ, ನ್ಯಾಯ, ಸಂಹಿತೆಗಳು ಒಂದೊಂದಾಗಿ ಮಾಯವಾಗುತ್ತಿದೆ ಎನ್ನುವುದಕ್ಕೆ ಬುಲ್ಡೋಝರ್ ಕಾರ್ಯಾಚರಣೆಗಳು, ಹಿಜಾಬ್ ನಿರಾಕರಣೆಗಳು, ಹತ್ಯೆಗಳು, ಮತ್ತು ಸ್ವಾತಂತ್ರ್ಯ ಸಂದರ್ಭದ ಫ್ಲೆಕ್ಸ್ ನಾಟಕಗಳು ತಿಳಿಸಿಕೊಟ್ಟಿವೆ.

ಇನ್ನು, ದೇಶದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆನೇ ಬೆದರಿಕೆ ನೀಡುವಂತಹಾ ವಾತಾವರಣ ಸೃಷ್ಟಿಯಾಗಿರುವಾಗ, ಇದೆಲ್ಲಾ ಅಪೇಕ್ಷಿತ ಘಟನೆಗಳೇ.. ಅಪರಾಧಿಗಳಿಗೆ ಕ್ಲೀನ್ ಚಿಟ್ ನೀಡುವುದು, ಮತ್ತು ಅವರನ್ನೇ ಅಧಿಕಾರದಲ್ಲಿ ಕೂರಿಸುವುದು, ಅಧಿಕಾರಕ್ಕೆ ಬಂದ ರಾಜಕಾರಣಿಯು ತನ್ನ ಮೇಲಿನ ಎಲ್ಲಾ ಪ್ರಕರಣಗಳ ಸಫಾಯಿ ಮಾಡಿಸುವುದು, ಈಗೀಗ ಸಾಮಾನ್ಯವಾಗುತ್ತಿರುವ ಇತರೇ ವಿಷಯಗಳು.

ದೇಶದ ಚುಕ್ಕಾಣಿ ಹಿಡಿಯಲು, ತಮ್ಮ ಸ್ವಾರ್ಥ ರಾಜಕೀಯದಾಟ ಆಡಲು, ಅಜೆಂಡಾಗಳನ್ನು ಹೇಗಾದರೂ ಜಾರಿಗೆ ತರಲು ಬಿಜೆಪಿ ಪಕ್ಷವು ಜನಮಾನಸದಲ್ಲಿ ಈಗಾಗಲೇ ಹುಳಿಹಿಂಡಿಯಾಗಿದೆ. “ಅವರು- ನಾವು, ಹಸಿರು -ಕೇಸರಿ” ಬಣ್ಣಗಳಲ್ಲಿ ಜನರನ್ನು ವಿಂಗಡಿಸಿ, ಅನ್ಯಾಯದ ಎಲ್ಲಾ ಎಲ್ಲೆಮೀರಿ, ತನ್ನ ನೀಚತನ ತೋರಿದೆ. ಇದೀಗ ಅಪರಾಧಿಗಳ ಬಿಡುಗಡೆ ಮಾಡಿ ಅವರಿಗೆ ಹೂಹಾರ ಹಾಕಿ, ಸಿಹಿ ತಿನ್ನಿಸಿ ರಾಜಮರ್ಯಾದೆಯೊಂದಿಗೆ ಬರಮಾಡಿಕೊಳ್ಳುವ ಮೂಲಕ ಪೊಳ್ಳು ಪೌರುಷವನ್ನು ತೋರಿಸಿದೆ. ತನ್ನ ಅರಾಜಕತೆಗಾಗಿ ಈಗಾಗಲೇ ವಿಶ್ವಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ಬಿಜೆಪಿ ಇನ್ನೂ ಕೀಳು ರಾಜಕೀಯದಾಟ ಯಾಕಾಗಿ ಆಡುತ್ತಲಿದೆ ಎಂದು ಗುಪ್ತವಾಗಿ ಉಳಿದಿಲ್ಲ.

ಮಾತಾಂಧತೆಯ ಅಮಲಿನಲ್ಲಿ ಈಗಾಗಲೇ ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾ ಅದು ಯಾವರೀತಿಯಲ್ಲಿ ಮಣ್ಣುಮುಕ್ಕಿತು ಎಂಬುವುದನ್ನು ಜಗತ್ತೇ ಕಂಡಿತು. ನಮ್ಮ ಜನ ಈ ಕುರಿತು ಜಾಗೃತರಾಗಬೇಕಿದೆ. ಈಗ ಅಲ್ಪಸಂಖ್ಯಾತರು ನೋವನುಭವಿಸುತ್ತಿದ್ದಾರೆ, ಮುಂದೊಂದು ದಿನ ಈ ಬೆಂಕಿ ಇಡೀ ಭಾರತವನ್ನೇ ಅಪೋಶನ ಪಡೆಯಲಿದೆ. ಈಗ ಹತ್ತು ಅಪರಾಧಿಗಳು ಬಿಡುಗಡೆಯಾದರು, ಇನ್ನು ಮುಂದಕ್ಕೆ ಅದೆಷ್ಟು ಅಪರಾಧಿಗಳು ಬಿಡುಗಡೆಯಾಗಲಿರುವರು, ಮತ್ತು ಈ ಪರಂಪರೆ ದೇಶವನ್ನು ಯಾವ ಅಧೋಗತಿಗೆ ಕೊಂಡೊಯ್ಯಲಿದೆ  ಎಂಬುವುದನ್ನು ಊಹಿಸಿದರೂ ಭಯವಾಗುತ್ತದೆ..‌ ಅಪರಾಧಿಗಳ ಧರ್ಮ ನೋಡಿಯಲ್ಲ ಅವನ ಅಪರಾಧದ ಪ್ರಮಾಣ ನೋಡಿ ಶಿಕ್ಷೆಯಾಗಬೇಕು. ಮತ್ತು ಅತ್ಯಾಚಾರದಂತಹಾ ಅಪರಾಧಿಯನ್ನು ಒಂದುವೇಳೆ ಕ್ಷಮಿಸುವುದಿದ್ದರೆ ಆ ಹಕ್ಕು ಸಂತ್ರಸ್ತೆಗೆ ಮಾತ್ರವೇ ಇರಬೇಕೇ ಹೊರತು, ಅದು ಯಾವುದೋ ರಾಜಕೀಯ ಪಕ್ಷಕ್ಕೋ ಅಥವಾ ನ್ಯಾಯಾಲಯಕ್ಕೋ ಅಲ್ಲ. ಸಮಾಜಘಾತಕರನ್ನು ಬಿಡುಗಡೆ ಮಾಡುವುದರೊಂದಿಗೆ, ಆಡಳಿತ ಪಕ್ಷವು ತಾನು “ಗುಂಡಾರಾಜ್” ಗೆ ಒತ್ತುಕೊಡುತ್ತಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.”ಹಿಂದುತ್ವ ಹಿಂದುತ್ವ” ಎಂದು ಜಪಿಸುವವರು ಎಲ್ಲೋ ಒಂದುಕಡೆ ಹಿಂದುಗಳನ್ನು ಅಪರಾಧಿಗಳಾಗಿಸುತ್ತಿದ್ದಾರೆ ಅನ್ನಿಸುತ್ತಿದೆ. ಮತ್ತು ಇದು ಅತ್ಯಂತ ಖೇದಕರ.

LEAVE A REPLY

Please enter your comment!
Please enter your name here