ಮಲಯಾಳಂನ ಖ್ಯಾತ ಕವಿ ವೈ.ಕಂ ಮುಹಮ್ಮದ್ ಬಶೀರ್ ಅವರ ಕುರಿತಾದ ಕಥಾ ಲೇಖನ.
ಅದು 2080 ನೇ ಇಸವಿಯ ಬೆಳಗಿನ ಜಾವ. ಕೆಟ್ಟ ಕನಸೊಂದು ಬಿದ್ದು ಬಶೀರ್ ಎದ್ದ. ಕತ್ತಲು ಕೋಣೆಯಲ್ಲಿ ಸುತ್ತಲೂ ಕಟ್ಟಿದ್ದ ಜೇಡರ ಬಲೆಯನ್ನು ಬದಿಗೆ ಸರಿಸಿ ಕೋಣೆಯ ಬಾಗಿಲು ತೆರೆಯಲು ಯತ್ನಿಸಿದ. ಬಹುಪಾಲು ಗೆದ್ದಲು ತಿಂದ ಬಾಗಿಲು ನೆಲಕ್ಕುರುಳಿತು. ತನ್ನ ಮನೆಯಲ್ಲಿ ನಿದ್ರೆ ಹೋಗಿದ್ದವ ಹೊಸ ‘ತಲಯೋಲಪ್ಪರಂಬ್’ ಎಂಬ ಊರಲ್ಲಿ ಮತ್ತೆ ಹುಟ್ಟಿರುವೆನೆಂದು ಆತನಿಗರಿವಾಯಿತು. ಅರೆಬರೆ ಬರೆದಿಟ್ಟ ಕಾದಂಬರಿ ತುಣುಕು ಕೈಗೆತ್ತಿ ಬೆವರನ್ನು ನೆತ್ತಿಯಿಂದ ಒರೆಸಿಕೊಂಡ.
ಪಕ್ಕದ ಕೋಣೆಯಲ್ಲಿ ‘ಬಾಲ್ಯಕಾಲ ಸಖಿ’ ಮತ್ತು ‘ಗೋಡೆಗಳು’ ಸಹಿತ ಹಲವು ಕೃತಿಗಳ ವಿವಿಧ ಪ್ರತಿಗಳು ಮಾರಾಟವಾಗದೆ ಕೂಡಿಟ್ಟಿತ್ತು. ಇದಿನ್ನೂ ಮುಗಿದಿಲ್ಲವೇ ಎಂದು ಗೊಣಗಿ, ಚಹಕ್ಕಾಗಿ ಹೆಂಡತಿಯನ್ನು ಉದ್ದಕ್ಕೆ ಕರೆದ. ಸ್ಪಂದನೆ ಸಿಗದೇ ಸಿಟ್ಟಿನಲ್ಲಿ ಹೊರಗಿಳಿದ ಬಶೀರ್, ತನ್ನ ಲೋಕವು ತನ್ನ ಹಾಗೂ ಭೂಮಿಯ ಕೆಲವು ಹಕ್ಕುದಾರರ ಮಾತ್ರಕ್ಕೆ ಸೀಮಿತವಾಗಿದೆಯೆಂದು ಬಶೀರ್ ಅರಿತುಕೊಂಡ.
‘ಗೋಡೆ’ಗಳಾಚೆ ರಸ್ತೆಯಲ್ಲಿ ವಾಹನಗಳು ಅತ್ತಿಂದಿತ್ತ ವೇಗವಾಗಿ ಓಡಾಡುತ್ತಿವೆ. ಹೊಟ್ಟೆಗೇನಾದರೂ ಇಳಿಸಬೇಕೆಂದು ಭಾವಿಸಿ ಬಶೀರ್ ದಾರಿಗಿಳಿದ. ಎಲ್ಲವೂ ಅಪರಿಚಿತ ಮುಖಗಳು. ಯಾರಿಗೂ ನನ್ನ ಪರಿಚಯ ಇಲ್ಲ ಎಂದು ಅರಿತ ಬಶೀರ್ ಹತ್ತಿರವಿದ್ದ ಅಂಗಡಿಯೊಂದನ್ನು ಪ್ರವೇಶಿಸಿದ. ಅಂಗಡಿಯವನ ಸಂಶಯಾಸ್ಪದ ಮುಖ ಕಂಡೇ ಇರಬೇಕು ಬಶೀರ್ ಸ್ವಪರಿಚಯ ಮಾಡಿಕೊಂಡ.
“ನಾನೇ ಬೇಪೂರ್ ಸುಲ್ತಾನ್…” ಗೊಳ್ಳೆಂದು ನಕ್ಕ ಆತ ನೀನು..? ಸುಲ್ತಾನಾ..? ಎಂದು ಕೇಳಿದಾಗ ಅವಮಾನಿತನಾಗಿ ಬಶೀರ್ ಮನೆ ಕಡೆ ಹೆಜ್ಜೆ ಹಾಕಿದ.
ಒಂದೆರೆಡು ದಿನಗಳಿಂದ ಖಾಲಿಯಾದ ಹೊಟ್ಟೆಯ ಜೊತೆ ತನ್ನ ಪುಸ್ತಕಗಳ ಕಟ್ಟನ್ನು ಹೊತ್ತು ಬಶೀರ್ ಮಾರುಕಟ್ಟೆಗಿಳಿದ. ಬಹಳ ಹೊತ್ತು ಸುತ್ತಾಡಿದರೂ ಕೆಲವು ಕೃತಿಗಳಷ್ಟೇ ಮಾರಾಟವಾಯಿತು.
ಮರುದಿನ ಬೆಳಗ್ಗೆ ಬಶೀರ್ ಕಣ್ಣು ತೆರೆಯುವುದು ಮನೆಯಂಗಳದಲ್ಲಿ ಜಮಾಯಿಸಿದ್ದ ಜನರ ಬೊಬ್ಬೆಯಿಂದಾಗಿತ್ತು. ನಿನ್ನೆ ಮಾರಿದ್ದ ‘ಮುಚ್ಚೀಟುಕಾರನ್ಡೆ ಮಗಳ್’ ಕಥೆಯಲ್ಲಿ ಸ್ತ್ರೀ ವಿರೋಧಿ ಅಂಶವಿದೆಯೆಂಬ ಆರೋಪ ಹೊತ್ತು ಬಂದವರೆಂದು ತಿಳಿದವ ಸದ್ದಿಲ್ಲದೆ ಬಾಗಿಲು ಹಾಕಿ ಒಳಗೆ ಕುಳಿತ. ಇನ್ನು ತನ್ನ ಸದ್ರಿ ಕಥೆಗಳು ಮಾರಿ ಹೋಗಲ್ಲವೆಂದರಿತು ಬಶೀರ್ ಹೊಸ ಕಥೆಗಳಿಗಾಗಿ, ಅದರ ಪಾತ್ರಗಳಿಗಾಗಿ ಮಾರನೇ ದಿನವೇ ಊರು ಬಿಟ್ಟ.
ಹಲವು ದಿನಗಳ ಹುಡುಕಾಟದ ಬಳಿಕ ಹೊಸ ತಲೆಯೊಲಪ್ಪರಂಬಿನ ‘ರೈಡರ್ ಕುಂಜಾಪ’ನ್ನು ಕಂಡ. ಕ್ಷೇಮ ವಿಚಾರಗಳು ವಿವರಿಸುವಡೆಯಲ್ಲಿ ಬಶೀರ್ ಕೇಳಿದ “ಮಡದಿ ಮಕ್ಕಳಿಗೆಲ್ಲರಿಗೂ ಸುಖ ತಾನೇ?”
“ಮಡದಿ’? ನನ್ನ ಜೊತೆಯಾಗಿ ನನ್ನ ‘ಚಾಯ್ಸ್’ ಗಂಡನ್ನೇ ತಾನೇ..?” ರೈಡರ್ ಕುಂಞಾಪಿನ ಉತ್ತರ ಕೇಳಿ ಹೌಹಾರಿದ ಬಶೀರ್..!”
ಅದ್ಹೇಗೆ ಕಣೋ, ಅಂದ್ರೆ ಮಕ್ಕಳು..?”
“ಮಕ್ಕಳಾ?, ಮಕ್ಕಳೆಲ್ಲಾ ಯಾಕೆ..
“ದೀರ್ಘ ದಿನಗಳ ಯಾತ್ರೆಯ ಬಳಿಕ ಒಂದು ಕಥೆ ಕಟ್ಟಿದ ಸಂಭ್ರಮದಲ್ಲಿ ಬಶೀರ್ ಮನೆ ಸೇರಿದ.
ಧೂಳು ಹಿಡಿದಿದ್ದ ತನ್ನ ಗ್ರಾಮ ಫೋನಿನಲ್ಲಿ ವಿರಹ ಗೀತೆಯೊಂದನ್ನು ಚಾಲು ಮಾಡಿ ತನ್ನ ಒರಗುರ್ಚಿಯಲ್ಲಿ ಕುಳಿತು ಬಶೀರ್ ಲೇಖನಿ ಹಿಡಿದ. ಗಂಟೆಗಳು ಸರಿದರೂ ತನ್ನ ನವಪಾತ್ರಗಳಿಗೆ ಸರಿಹೋಗುವ ‘ಜಂಡರ್ ನ್ಯೂಟ್ರಲ್’ ನಾಮಗಳು ಸಿಗದೇ ‘ಪ್ರಗತಿ ಹೊಂದದ’ ಬಶೀರ್ ಮತ್ತೆ ನಿದ್ರೆಗೆ ಜಾರಿದ.
ಮಲಯಾಳಂನ ಮೂಲ ಲೇಖಕರು: ಮುಹಮ್ಮದ್ ಅಲಿ ಎರಿಮಯೂರ್.