ನಾನು ಸದಾ ದೇಶಪ್ರೇಮಿಯೇ.
ನಾನೇನು ದೇಶದ್ರೋಹಿ ಅಲ್ಲ
ಆದರೂ ನನ್ನ ಮನೆಯಲ್ಲಿ ತಿರಂಗ ಇಡುವುದಿಲ್ಲ
ನನ್ನ ದೇಶಪ್ರೇಮ ಬರೀ ಒಂದು ದಿನಕ್ಕಲ್ಲ
ನಾನು ಸದಾ ದೇಶಪ್ರೇಮಿಯೇ
ನಾನು ಮರೆತಿಲ್ಲ ಎಂದಿಗೂ
ಭಾರತಾಂಬೆಯನ್ನು ಮುಕ್ತಿಗೊಳಿಸಿದ ಮಹನೀಯರನ್ನು
ನಾನು ಮರೆಯುವುದಿಲ್ಲ
ಹಿರಿಯರು ಸಾರಿದ ಶಾಂತಿ ಮಂತ್ರವನು
ಹರ್ ಘರ್ ತಿರಂಗ ದೇಶಾಭಿಮಾನವಾದರೆ
ಎಲ್ಲಿ ಮರೆಯಾಯಿತು ನನ್ನ ನೇಕಾರರ ಖಾದಿ?
ಯಾಕೆ ನಾನು ದುಬಾರಿ ತಿರಂಗವೇ ಖರೀದಿಸಬೇಕು
ನನ್ನಲ್ಲಿದ್ದ ಖಾದಿಯ ತಿರಂಗ ಸಾಲಲ್ಲವೇ ಈ ಬಾರಿಯೂ?
ದೇಶದ ಕೋಮುಜ್ವಾಲೆ
ಬೆಲೆಯೇರಿಕೆಯ ತತ್ತರ
ಸರಕಾರದ ನಿರ್ಲಕ್ಷ್ಯ
ಇದೆಲ್ಲೆದರ ಮರೆಮಾಚುವ ತಂತ್ರವೇ ತಿರಂಗಾಭಿಯಾನ?
ನಾನು ಆಚರಿಸುವೆ ಸ್ವಾತಂತ್ರ್ಯೋತ್ಸವವನು
ಟಿಪ್ಪು ಬಾಪು ನೇತಾರರು ಕೊಟ್ಟ ಶಾಂತಿಯ ಸಂದೇಶಗಳನು
ನಾನು ನಿರಾಕರಿಸುತ್ತಿರುವೆ ಮೂರು ದಿನಗಳ ಡಂಬರಾಟವ
ಉಳ್ಳವರ ವ್ಯವಹಾರ ತಂತ್ರದ ತಿರಂಗೋತ್ಸವವ
ಭಾರತವಿಂದು ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಭಾರತ ಎತ್ತ ಸಾಗುತ್ತಿವೆಯೆಂದು ಭಯವಾಗುವುದು
ಅಂದು ಅನಕ್ಷರಸ್ಥರಾಗಿ ನಾವು ಗುಲಾಮರಾದೆವು
ಇಂದು ಅಕ್ಷರಸ್ಥರೇ ಗುಲಾಮಗಿರಿಯನ್ನು ಸೆಳೆಯುತ್ತಿರುವೆವು
ಮತ್ತೊಮ್ಮೆ ಆಲೋಚಿಸಬೇಕಾಗಿದೆ
ಯಾರಿಗೆ ಬಂತು ಎಪ್ಪತ್ತೈದರ ಸ್ವಾತಂತ್ರ್ಯ
ಬಡವರಿಗಿಲ್ಲ, ಕೂಲಿಕಾರನಿಗಿಲ್ಲ, ಹೆಣ್ಣಿಗಿಲ್ಲ
ಮತ್ಯಾರಿಗೆ ಇಂದು ಎಪ್ಪತ್ತೈದರ ಸಂಭ್ರಮ.