ಹುಚ್ಚು ಮನಸ್ಸಿನ ಸಾವಿರ ಮುಖಗಳು 03

  • ಯೋಗೀಶ್ ಮಾಸ್ಟರ್, ಬೆಂಗಳೂರು

ಮನಸ್ಸಿನ ರಚನೆ, ಚಟುವಟಿಕೆ, ವ್ಯವಹಾರ, ಕಾರಣ ಮತ್ತು ಪರಿಹಾರಗಳಿಗೆ ಸಂಬಂಧಪಟ್ಟಂತೆ ವೈಜ್ಞಾನಿಕ ಅಧ್ಯಯನ ಮತ್ತು ಚಿಕಿತ್ಸಿಕ ಚಟುವಟಿಕೆಗಳು ಇವೆಯಲ್ಲಾ; ಅವನ್ನು ಮನೋವಿಜ್ಞಾನ ಅಂತ ಕರೆಯೋಣ. ಹಾಗೆಯೇ ಮನೋತಾತ್ವಿಕತೆ ಕೂಡಾ ಇದೆ. ಮನಸ್ಸಿನ ರಚನೆ ಮತ್ತು ಅದರ ವ್ಯವಹಾರಗಳ ಕುರಿತಾಗಿ ಮನೋಸೈದ್ಧಾಂತಿಕ ಶಾಸ್ತ್ರವೂ ಇದೆ. ನೋಡಿ, ಮನಸ್ಥಿತಿಯ ಬಗ್ಗೆ ಅರಿಯಲು ನೀವು ಮನೋವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ, ಮನೋಭಾವದ ಬಗ್ಗೆ ತಿಳಿಯಲು ಮನೋತಾತ್ವಿಕಶಾಸ್ತ್ರವನ್ನು ಗಮನಿಸಬೇಕು.
ವಿಜ್ಞಾನ ಮತ್ತು ತತ್ವಶಾಸ್ತ್ರಗಳೆರಡೂ ಒಂದೇ ಅಲ್ಲ. ಆದರೆ ಈವೆರೆಡೂ ಮನಸ್ಸಿನ ವಿಷಯದಲ್ಲಿ ಪೂರಕವಾಗಿ ಕೆಲಸ ಮಾಡುತ್ತವೆ.
ವಿಜ್ಞಾನ ಮತ್ತು ತಾತ್ವಿಕತೆಯನ್ನು ಹೀಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ವೈಜ್ಞಾನಿಕವಾಗಿ ತೊಡಗುವುದಕ್ಕೆ ಮೊದಲು ಬೇಕಾಗಿರುವುದೇ ಒಂದು ಕ್ರಮಬದ್ಧತೆ. ಶಿಸ್ತು. ಅದು ಹಿಂದಿನ ಶಿಸ್ತಿನ ವಿಸ್ತರಣೆಯೋ ಅಥವಾ ತಮ್ಮದೇ ಆದ ಹೊಸ ಶಿಸ್ತಿನ ಕ್ರಮವೋ, ಒಟ್ಟಿನಲ್ಲಿ ಒಂದು ಕ್ರಮಗೊಳಿಸಿಕೊಳ್ಳುವ ಶಿಸ್ತಿನ ಗಮನಿಸುವಿಕೆ, ಪ್ರಯೋಗ ಮಾಡುವುದು, ಗಮನಿಸುವಿಕೆ ಮತ್ತು ಪ್ರಯೋಗಗಳನ್ನು ಪುನರಾವರ್ತನೆ ಮಾಡುವುದು, ಪರಿಣಾಮಗಳನ್ನು ಗಮನಿಸಿ ಅದನ್ನು ದಾಖಲು ಮಾಡುವುದು ಇತ್ಯಾದಿಗಳನ್ನೆಲ್ಲಾ ಮಾಡುತ್ತೀರಿ. ಇದು ವೈಜ್ಞಾನಿಕ ಕ್ರಮ. ಆದರೆ ಅದನ್ನು ಮಾಡಲು ತಾತ್ವಿಕವಾಗಿ ಒಪ್ಪಬೇಕು ಅಥವಾ ತೆರೆದುಕೊಳ್ಳಬೇಕು. ಈ ತಾತ್ವಿಕ ಬದ್ಧತೆ ಇಲ್ಲದಿದ್ದರೆ ಆ ವೈಜ್ಞಾನಿಕ ಕ್ರಮಕ್ಕೆ ಒಳಪಡಲೇ ಸಿದ್ಧವಾಗುವುದಿಲ್ಲ. ವಿಜ್ಞಾನವು ಎಷ್ಟೇ ಭೌತಿಕ ಚಟುವಟಿಕೆಗಳ ಆಧಾರ ಮೇಲೆ ಆದರೂ, ವಿಜ್ಞಾನಿಯ ತಾತ್ವಿಕ ತಳಹದಿ, ಒಲವು ನಿಲುವುಗಳು ಅದಕ್ಕೆ ಪೂರಕವಾಗಿರಬೇಕು.
ತಾತ್ವಿಕತೆ ಅಂದರೇನು? ಇದೂ ಕೂಡಾ ಗಮನಿಸುವಿಕೆಯೇ. ಆದರೆ ಭೌತಿಕವಾಗಿ ಕಾರಣ ಮತ್ತು ಪರಿಣಾಮಗಳು ಸ್ಥೂಲವಾಗಿ ಸಿಗದೇ ಇದ್ದರೂ, ಸೂಕ್ಷ್ಮವಾಗಿ ಗಮನಿಸುವ ನಿರ್ಧಿಷ್ಟ ವಿಷಯದ ಸ್ವರೂಪ, ಅದು ಇರುವ ಬಗೆ, ಅದರ ಅಸ್ತಿತ್ವ, ಅದು ಕೆಲಸ ಮಾಡುವ ರೀತಿ ನೀತಿಗಳನ್ನೆಲ್ಲಾ ಅರಿಯುವುದು. ಈ ಅರಿಯುವ ಪ್ರಕ್ರಿಯೆಯು ತಾರ್ಕಿಕವಾಗಿರಬಹುದು, ವೈಚಾರಿಕವಾಗಿರಬಹುದು ಮತ್ತು ಕೆಲವೊಮ್ಮೆ ಊಹಾತ್ಮಕವೂ ಆಗಿರಬಹುದು. ಒಟ್ಟಾರೆ ತಾತ್ವಿಕತೆ ಎಂದರೆ ಅರಿಯುವಿಕೆಯಲ್ಲಿನ ಒಂದು ಕ್ರಮಬದ್ಧ ಶಿಸ್ತು ಎಂದೇ ಸಧ್ಯಕ್ಕೆ ತಿಳಿದುಕೊಳ್ಳೋಣ.
ವೈಜ್ಞಾನಿಕ ಕ್ರಮದಲ್ಲಿ ಭೌತಿಕ ಕಾರಣ ಮತ್ತು ಪರಿಣಾಮಗಳನ್ನು ನೇರ ಗಮನಿಸಿದಂತೆ ತಾತ್ವಿಕತೆಯ ಕ್ರಮದಲ್ಲಿ ಇಲ್ಲದ ಕಾರಣ ಕೆಲವೊಮ್ಮೆ ತತ್ವಜ್ಞಾನಿಗಳು ಪಕ್ಷಪಾತಿಗಳಾಗಬಹುದು. ತಾವು ನಂಬಿರುವ ವಿಷಯಗಳನ್ನೇ ಗಟ್ಟಿಗೊಳಿಸಲು ತಮ್ಮ ವಿಚಾರ ಲಹರಿಯನ್ನು ತಿರುಗಿಸಬಹುದು. ತಾವು ಸರಿ ಎಂದು ನಿರ್ಧರಿಸಿರುವ ವಿಷಯಕ್ಕೆ ಎಲ್ಲವೂ ಬರುವಂತೆ ತರ್ಕವನ್ನು ತಾಂತ್ರಿಕವಾಗಿ ತಿರುಗಿಸಬಹುದು. ಆದರೆ ವಸ್ತುನಿಷ್ಟತೆ ಎಂಬುದರ ಬಗ್ಗೆ ಬದ್ಧತೆ ಇದ್ದರೆ ತಾನು ಪಕ್ಷಪಾತಿಯಾಗದಿರುವಂತೆ ಅಥವಾ ಏಕಪಕ್ಷೀಯನಾಗದಿರುವಂತೆ ನೋಡಿಕೊಳ್ಳಬಹುದು. ತನ್ನನ್ನು ತಾನು ಗಮನಿಸಿಕೊಳ್ಳುವಿಕೆಯಂತಹ ಪ್ರಕ್ರಿಯೆಯಲ್ಲಿ ತಾತ್ವಿಕತೆಯು ವಿಕಾಸವಾಗುತ್ತದೆ. ಹೆಚ್ಚು ಪ್ರಾಮಾಣಿಕವಾಗಿರುತ್ತದೆ.
ವೈಜ್ಞಾನಿಕತೆಯಲ್ಲಿ ಪಟ್ಟುಬಿಡದೇ ಮುಂದುವರಿಯುವಂತಹ ಭೌತಿಕ ಪ್ರಯತ್ನಗಳು ಕಂಡರೆ, ತಾತ್ವಿಕತೆಯಲ್ಲಿ ಪಟ್ಟುಬಿಡದೇ ಹಟಮಾರಿತನಗಳು ವಿಜೃಂಭಿಸಿಬಿಡುತ್ತವೆ. ವಿಜ್ಞಾನದಲ್ಲಿ ಕಾರಣ ಪರಿಣಾಮಗಳು ನಿರೂಪಿತವಾಗುತ್ತವೆ. ಆದರೆ ತಾತ್ವಿಕತೆಯು ವಿಷಯಗಳು ನಿರೂಪಿತವಾಗಿರಲಿ ಇಲ್ಲದಿರಲಿ ನಂಬುಗೆಯ ಮೇಲೂ ತನ್ನ ಬುನಾದಿಯನ್ನು ನಿರ್ಮಿಸಿಕೊಳ್ಳುವಂತಹ ಹಟಮಾರಿತನವನ್ನು ತೋರುತ್ತದೆ.
ಒಟ್ಟಾರೆ ತಾತ್ವಿಕತೆಯು ವೈಜ್ಞಾನಿಕತೆಗಿಂತ ಹೆಚ್ಚು ಅಪಾಯದ್ದು ಅಥವಾ ದಾರಿ ತಪ್ಪಿಸುವಂತದ್ದೇ ಆಗಿದ್ದರೂ ವಸ್ತುನಿಷ್ಟವಾಗಿ ವಿಷಯಕ್ಕೆ ಬದ್ಧವಾಗಿರುವಂತಹ ತಾತ್ವಿಕತೆಯು ಮನೋವಿಜ್ಞಾನದ ಅಧ್ಯಯನದಲ್ಲಿ ಬೇಕಿದೆ. ಹಾಗೂ ವಿಜ್ಞಾನಕ್ಕೆ ತತ್ವಶಾಸ್ತ್ರ ಬೇಕೋ ಬೇಡವೋ ವ್ಯಕ್ತಿಗತವಾಗಿ ಆಯಾ ವಿಜ್ಞಾನಿಯ ಮೇಲೆ ಅವಲಂಬಿಸಿರುತ್ತದೆ. ಆದರೆ, ತತ್ವಶಾಸ್ತ್ರಜ್ಞ ವಿಜ್ಞಾನವನ್ನು ಉಪೇಕ್ಷಿಸುವಂತಿಲ್ಲ.
ಇನ್ನು ಮನಶಾಸ್ತ್ರದ ವಿಷಯಕ್ಕೆ ಬಂದರೆ ವಿಜ್ಞಾನಕ್ಕೆ ಪೂರಕವಾಗಿ ತಾತ್ವಿಕತೆಯು ಬೇಕು. ಏಕೆಂದರೆ ಮನಸ್ಸು ಎಂಬುದು ಬರಿಯ ವೈಜ್ಞಾನಿಕವಾಗಿ ಕೆಲಸ ಮಾಡುವಂತಹ ಭೌತಿಕವಾದ ವಸ್ತುವಲ್ಲ. ಅದು ಗ್ರಹಿಸುತ್ತದೆ, ವಿಶ್ಲೇಷಿಸುತ್ತದೆ, ನಂಬುತ್ತದೆ, ಅನುಮಾನಿಸುತ್ತದೆ, ನಿರಾಕರಿಸುತ್ತದೆ, ಸಮ್ಮತಿಸುತ್ತದೆ, ಊಹಿಸುತ್ತದೆ, ಕಲ್ಪಿಸಿಕೊಳ್ಳುತ್ತದೆ; ಒಟ್ಟಾರೆ ಅಮೂರ್ತಗಳನ್ನು ಮೂರ್ತೀಕರಿಸುತ್ತದೆ, ಮೂರ್ತಿಗಳನ್ನು ಅಮೂರ್ತವಾಗಿಸುತ್ತದೆ. ಇಲ್ಲವನ್ನು ಇದೆಯೆನ್ನುತ್ತದೆ, ಇರುವುದನ್ನು ಇಲ್ಲವೆನ್ನುತ್ತದೆ. ಇಲ್ಲದಿರುವುದನ್ನು ಇಲ್ಲ ಎನ್ನಲೂ, ಇರುವುದನ್ನು ಇದೆ ಎನ್ನಲೂ ತಯಾರಾಗಿರುವುದಿಲ್ಲ. ಮನಸ್ಸು ಇಷ್ಟೆಲ್ಲಾ ಸಂಕೀರ್ಣಮಯ ಸರ್ಕಸ್ ಕೋತಿಯಾಗಿರುವ ಕಾರಣ ತಾತ್ವಿಕ ಚಿಕಿತ್ಸೆಯೂ ಅದಕ್ಕೆ ಅಗತ್ಯವಿದೆ.
ಹಾಗಾಗಿಯೇ ಮನಸ್ಸನ್ನು ಅರಿತುಕೊಳ್ಳುವ, ಅಧ್ಯಯನ ಮಾಡುವ ಮತ್ತು ಅದರ ಕುರಿತಾಗಿ ಕೆಲಸ ಮಾಡುವ ವಿಷಯದಲ್ಲಿ ವಿಜ್ಞಾನ ಮತ್ತು ತಾತ್ವಿಕತೆಗಳೆರಡೂ ಬೇರ್ಪಡಿಸಲಾಗದಷ್ಟು ಹೊಕ್ಕಿಕೊಂಡಿವೆ. ತಾತ್ವಿಕತೆ ಮತ್ತು ವೈಜ್ಞಾನಿಕತೆಗಳೆರಡೂ ಅಷ್ಟರ ಮಟ್ಟಿಗೆ ಮಿಳಿತಗೊಂಡಿದೆ.
ಇಷ್ಟೆಲ್ಲಾ ಹೇಳಿದ್ದು ಏಕೆಂದರೆ, ಮನಸ್ಥಿತಿಯನ್ನು ಗಮನಿಸುವಾಗ ವೈಜ್ಞಾನಿಕವಾಗಿಯೂ, ಮನೋಭಾವವನ್ನು ಗಮನಿಸುವಾಗ ತಾತ್ವಿಕವಾಗಿಯೂ ಗ್ರಹಿಸುವ ಪ್ರಸಂಗಗಳು ಒದಗುವುದರಿಂದ ಒಂದು ಪೂರ್ವಭಾವಿ ಪರಿಚಯವಿರಲೀಂತ ಅಷ್ಟೇ. ಮನೋಭಾವ ಮತ್ತು ಮನಸ್ಥಿತಿಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ. ನಮ್ಮದೇ ಮನಸ್ಸನ್ನು ತಿಳಿದುಕೊಳ್ಳುವಾಗ ಅದನ್ನು ತಾತ್ವಿಕವಾಗಿಯೂ ಮತ್ತು ವೈಜ್ಞಾನಿಕವಾಗಿಯೂ ಗ್ರಹಿಸುವ ಅಗತ್ಯವಿರುತ್ತದೆ. ಮನಸ್ಸಿನ ದೋಷಗಳನ್ನು ಅರಿತಾಗ ಅದಕ್ಕೆ ಕೆಲವೊಮ್ಮೆ ವೈಜ್ಞಾನಿಕವಾಗಿ ಚಿಕಿತ್ಸೆ ನೀಡಬೇಕಾದಂತೆ ತಾತ್ವಿಕ ಚಿಕಿತ್ಸೆಯನ್ನೂ ನೀಡಬೇಕಾಗುತ್ತದೆ. ಚಿಕಿತ್ಸೆ ಎನ್ನುವುದು ವೈಜ್ಞಾನಿಕ ಕ್ರಮದಲ್ಲಿ ಮಾತ್ರವಲ್ಲ ತಾತ್ವಿಕ ಕ್ರಮದಲ್ಲಿಯೂ ಕೂಡಾ ಇದೆ. ಅದರಲ್ಲೂ ಮನೋಶಾಸ್ತ್ರದಲ್ಲಿ ತಾತ್ವಿಕ ಚಿಕಿತ್ಸೆಯು ಬಹಳ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ.
ನಮ್ಮನ್ನು ನಾವು ವೈಜ್ಞಾನಿಕವಾಗಿಯೂ ಮತ್ತು ತಾತ್ವಿಕವಾಗಿಯೂ ಅರಿಯಬೇಕಿದೆ. ಮನಸ್ಸಿಗೆ ತಾತ್ವಿಕ ತರಬೇತಿಯನ್ನು ವೈಜ್ಞಾನಿಕವಾಗಿ ನೀಡಬೇಕಾಗುತ್ತದೆ. ಇದೊಂದು ಮಜವಾದ ವಿಷಯ. ಮನಸ್ಸಿನ ಸ್ವರೂಪವೇ ಆಲೋಚನೆಗಳಿಂದ ರೂಪುಗೊಂಡಿರುತ್ತದೆ. ಅದೇ ಮನಸ್ಸಿನ ಸ್ವರೂಪವನ್ನು ಬದಲಿಸಬೇಕಾದರೂ ಅದೇ ಆಲೋಚನೆಗಳಿಗೇ ಮೊರೆ ಹೋಗಬೇಕು. ಅದಕ್ಕೇ ನಾನು ತಾತ್ವಿಕ ಚಿಕಿತ್ಸೆ ಬೇಕು ಎನ್ನುವುದು. ಏಕೆಂದರೆ ತತ್ವ ಎನ್ನುವುದೇ ಆಲೋಚನೆಗಳಿಂದ ಪಡೆಯುವ ಅರಿವು.
(ಮುಂದುವರಿಯುತ್ತದೆ.)

LEAVE A REPLY

Please enter your comment!
Please enter your name here