ಸಂದರ್ಶನ

  • ಶಾರೂಕ್ ತೀರ್ಥಹಳ್ಳಿ

ರೈತ ಅಂದಾಕ್ಷಣ ನಮ್ಮ ತಲೆಯಲ್ಲಿ ಹೊಳೆಯುವುದು ಗದ್ದೆಯಲ್ಲಿ ಕೆಲಸ ಮಾಡುವವರು, ತೋಟಗಳಲ್ಲಿ ಕೆಲಸ ಮಾಡುವವರು ಅಥವಾ ಕೃಷಿ ಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಂತಹ ವ್ಯಕ್ತಿಗಳು ಅಥವಾ ಇನ್ನು ಹಲವು ರೀತಿಯ ಭಾವನೆಗಳು ನಮ್ಮ ಕಣ್ಣ ಮುಂದೆ ಕಾಣಿಸುತ್ತದೆ. ಅದರಲ್ಲೂ ಮಲೆನಾಡು ಎಂದಾಗ ಅಡಿಕೆಯೇ ಪ್ರಮುಖ ಬೆಳೆ ಎಂಬ ಭಾವನೆ ಹಲವರಲ್ಲಿ ಮೂಡುವುದುಂಟು. ಹಲವು ಕೃಷಿ ಗದ್ದೆಗಳನ್ನು ಮುಚ್ಚಿ ಕಾಡುಗಳನ್ನು ಕಡಿದು ಕೇವಲ ತೋಟಗಳಿಗೆ ಮಾತ್ರ ಹೆಚ್ಚು ಗಮನವನ್ನು ಕೊಡುತ್ತಿರುವ ಇಂತಹ ಕಾಲಘಟ್ಟದಲ್ಲಿ ತೀರ್ಥಹಳ್ಳಿಯ ಮಂಡಗದ್ದೆ ಹೋಬಳಿಯ ಜಂಬವಳ್ಳಿ ಗ್ರಾಮದ ತಿಮ್ಮಪ್ಪನವರು ಮೀನು ಕೃಷಿಯನ್ನು ಮಾಡುತ್ತಾ ಕೃಷಿ ಕ್ಷೇತ್ರದಲ್ಲೆ ಬಾರಿ ಪ್ರಶಂಸೆಗೆ ಪಾತ್ರರಾಗುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಜಂಬವಳ್ಳಿಯ ಪುಟೋಡ್ಲು ಎಂಬ ಸಣ್ಣ ಗ್ರಾಮದಲ್ಲಿ ಗೋವಿಂದ ಗೌಡ ಮತ್ತು ಡಾಕಮ್ಮ ದಂಪತಿಯ ಪುತ್ರನಾಗಿ ಜನಿಸಿದವರೇ ಈ ತಿಮ್ಮಪ್ಪನವರು. ತಮಗಿರುವ ಅಲ್ಪ ಸಲ್ಪ ಜಮೀನಿನಲ್ಲಿ ಕೃಷಿ ಹೊಂಡ ಮಾಡಿ ಮೀನು ಸಾಕಾಣಿಕೆಯನ್ನು ಆರಂಭಿಸಲು ತೀರ್ಮಾನಿಸಿ ಅದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಡಿಯಲ್ಲಿ ಯೋಜನೆಯ ಕಾರ್ಯಕರ್ತರ
ಮಾರ್ಗದರ್ಶನದಂತೆ ಭಧ್ರಾವತಿಯ ಮೀನುಗಾರಿಕಾ ತರಭೇತಿ ಕೇಂದ್ರದಲ್ಲಿ ಮೀನುಗಾರಿಕಾ ತರಭೇತಿ ಪಡೆದು ಸುಮಾರು 80,000ರೂ ವೆಚ್ಚದಲ್ಲಿ 100 ಅಡಿ ಅಗಲ 6 ಅಡಿ ಆಳದ 6 ಮೀನಿನ ಕೊಳಗಳನ್ನು ರಚನೆ ಮಾಡಿದರು. ಇದಕ್ಕಾಗಿ ಧರ್ಮಸ್ಥಳ ಯೋಜನೆಯಿಂದ
ರೂ 90,000 ಪ್ರಗತಿ ನಿಧಿ ಸಾಲ ಪಡೆದರು. ಕಾಟ್ಲ, ಗೌರಿ, ರೋಹು, ಹುಲ್ಲುಗಂಡೆ ಮುಂತಾದ ತಳಿಗಳ ಮೀನು ಮರಿಗಳನ್ನು ತಂದು ಸಾಕಲು ಆರಂಭಿಸಿದರು.

ಭದ್ರಾವತಿಯಿಂದ 5ದಿನ ಪ್ರಾಯದ ಮೀನು ಮರಿಗಳನ್ನು ತಂದು ತಮ್ಮ ಮೀನಿನ ಕೊಳದಲ್ಲಿ ಸಾಕಿ, ಮೀನು ಮರಿಗಳಿಗೆ 20 ದಿನವಾದ ನಂತರ ಇತರ ಕೃಷಿಕರಿಗೆ ಮಾರಾಟ ಮಾಡಲು ಪ್ರಾರಂಭಿಸಿದರು.
ಮೂಡಗೆರಿ ವಿಜ್ಞಾನ ಕೃಷಿ ಕಾಲೇಜು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರ ಹೀಗೆ ಹಲವು ಕೃಷಿ ವಿಜ್ಞಾನ ಕೇಂದ್ರದಿಂದ ನೂರಾರು ಜನರು ಬಂದು ತಿಮ್ಮಪ್ಪನವರಿಂದ ಮೀನಿನ ಮರಿಗಳನ್ನು ಖರೀದಿಸಿದ್ದಾರೆ ಅಷ್ಟೇ ಅಲ್ಲದೆ ಮನೆನಾಡಿನ ಸುತ್ತಮುತ್ತಲಿನ ಪ್ರದೇಶಗಳಾದ ಕೊಪ್ಪ, ಸಾಗರ,
ರಾಣಿಬೆನ್ನೂರು, ಕೊಡಗು, ಶಿಕಾರಿಪುರ, ಹೊಸನಗರ ಇನ್ನೀತರ ಪ್ರದೇಶಗಳಿಂದ ರೈತರು ಆಗಮಿಸಿ ಕೋಟಿಗೂ ಹೆಚ್ಚು ಮೀನು ಮರಿಗಳನ್ನು ಖರೀಧಿಸಿ ತಮ್ಮ ಕೆರೆ ನಾಲೆಗಳಲ್ಲಿ ಸಾಕುತ್ತಿದ್ದಾರೆ.
ತಿಮ್ಮಪ್ಪನವರು ಎಸ್ ಎಸ್ ಎಲ್ ಸಿ ಓದಿದವರಾಗಿದ್ದರೂ
ಹೈದರಾಬಾದ್ ಫಿಶಿಂಗ್ ಅಧ್ಯಯನ ಶಿಭಿರಗಳಲ್ಲಿ
ಭಾಗವಹಿಸಿದ್ದಾರೆ, ಹಲವು ಕಡೆಗಳಲ್ಲಿ ನಡೆದಂತಹ ರೈತರ ಸಭೆಗಳಲ್ಲಿ ಭಾಗವಹಿಸಿದ್ದಾರೆ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಂಪರ್ನೂಲ ವ್ಯಕ್ತಿಯಾಗಿ ಭಾಗವಹಿಸಿ ಮೀನು ಕೃಷಿಯ ಬಗ್ಗೆ ಉಪನ್ಯಾಸಗಳನ್ನು ಸಹ
ನೀಡಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ವೈಜ್ಞಾನಿಕವಾಗಿ
ಮೀನು ಕೃಷಿ ಮಾಡುವಲ್ಲಿ ತಿಮ್ಮಪ್ಪನವರು ಏಕೈಕ
ವ್ಯಕ್ತಿಯೆಂದೆ ಹೇಳಬಹುದು. 2019-20ನೇ ಸಾಲಿನ ಕೃಷಿ
ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣೆ ಸಂಸ್ಥೆ
(ಎಟಿಎಮ್‍ಎ) ಅಡಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೀನು ಕೃಷಿಯಲ್ಲಿ ಸ್ವ
ಉದ್ಯೋಗ ಮಾಡುತ್ತಿರುವ ಇವರು ಇತರ ಸಣ್ಣ ರೈತರಿಗೆ ಮಾದರಿ ಕೃಷಿಕರಾಗಿದ್ದಾರೆ. ತಿಮ್ಮಪ್ಪನವರು ಬಡತನದಿಂದ ಬೆಳೆದು ಬಂದರೂ ಕಾಯಕವೇ ಕೈಲಾಸ ಎಂದು ನಂಬಿದವರು, ಕೃಷಿಯಲ್ಲೇ ತನ್ನ ಜೀವನವನ್ನು ಕೊನೆಯವರೆಗೆ ಸವೆಸಬೇಕು ಎಂಬ ಆಸೆಯನ್ನು ಕೂಡ ಹೊಂದಿದ್ದಾರೆ. ಯಾವುದೇ ವ್ಯಕ್ತಿಯು ಕೂಡ ಕೃಷಿಯನ್ನು ಮಾಡಬಹುದು.

ಆದರೆ ಆತನಿಗೆ ಕೃಷಿಯಲ್ಲಿ ಆಸಕ್ತಿ ಇರಬೇಕು ಆಗ ಮಾತ್ರ ಕೃಷಿ ಕ್ಷೇತ್ರವನ್ನು ಮುಂದುವರೆಸಲು ಸಾಧ್ಯವಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಜೀವನ ಉದ್ಯೋಗ ಆಧಾರಿತವಾಗಿದೆ. ಕೃಷಿಯಲ್ಲಿ ಯಾರು ಕೂಡ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ನಾನು ಕೃಷಿ ಹೊಂಡದಲ್ಲಿ ಮೀನು ಕೃಷಿ ಮಾಡುವಾಗ ನನ್ನ ಜಿತೆಗಿದ್ದ ಜನರು ನನ್ನನ್ನು ಹುಚ್ಚ ಎಂದು ಕರೆದರು, ಮೊದ ಮೊದಲು
ಯಾರು ಕೂಡ ನನಗೆ ನೆರವಿಗೆ ಬರುತ್ತಿರಲಿಲ್ಲ, ನನ್ನ ಪತ್ನಿ ಸವಿತ ಮತ್ತು ಮಕ್ಕಳಾದ ಸ್ವಾತಿ ಮತ್ತು
ಸಂಜಯ್ ಶಾಲೆಯ ಪಾಠದ ಜೊತೆಗೆ ನನ್ನ ಮೀನು ಕೃಷಿಯಲ್ಲಿ ಕೈ ಜೋಡಿಸುತ್ತಾರೆ. ಕೃಷಿ ಯಾವಾಗಲೂ ಉದ್ಯೋಗವಾಗಿ ಮಾಡಬಾರದು, ಕೃಷಿ ಮೌಢ್ಯತೆಯಿಂದ ದೂರವಿರಬೇಕು. ನಾನು ಮೀನು ಕೃಷಿಯನ್ನು
ಪ್ರಾರಂಭಿಸಿದ ಆರು ವರ್ಷಗಳ ಕಾಲ ನನಗೆ ಯಾವುದೇ ಲಾಭ ಸಿಕ್ಕಿರಲಿಲ್ಲ ಬದಲಾಗಿ ನಷ್ಟವೇ
ಅನುಭವಿಸಬೇಕಾಯಿತು ಎಂದು ತಿಮ್ಮಪ್ಪನವರು ತಮ್ಮ ಅನುಭವವನ್ನು ಹಂಚಿಕೊಂಡರು. ಮೀನು ಕೊಳಗಳಿಗೆ ಹೆಚ್ಚಾಗಿ ನೀರಿನ ಪೂರೈಕೆ ಮಾಡಬೇಕಾಗುತ್ತದೆ ಅದಕ್ಕಾಗಿ ಮೂರು ಕಿ. ಮೀ
ದೂರದ ಮುಡುಬ ಗ್ರಾಮದ ತುಂಗಾ ನದಿಯಿಂದ ಸುಮಾರು ಎರಡು ಲಕ್ಷ ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ಮೀನು ಕೃಷಿ ಹೊಂಡಗಳಿಗೆ ನೀರಾವರಿಯನ್ನು ಮಾಡಿದ್ದಾರೆ. ಖುಷಿಯಿಂದ ಮಾಡಿದರೆ ಮಾತ್ರ ಅದು ಕೃಷಿ ಎಂದು ಹೇಳುವ ತಿಮ್ಮಪ್ಪನವರು ನಾಟಿ ವೈದ್ಯ ಕೂಡ ಹೌದು ಈಗಾಗಲೇ ಸಾವಿರಾರು ಜನರಿಗೆ ಜಾಂಡಿಸ್ ಮತ್ತು ಮೂಳೆ ಮುರಿತಕ್ಕೆ ಆಯುರ್ವೇದ ಗಿಡ
ಮೂಲಕೆ ಔಷಧಗಳನ್ನು ನೀಡಿ ಹಲವಾರು ಜನರ ಪ್ರಾಣವನ್ನು ಸಹ ರಕ್ಷಿಸಿದ್ದಾರೆ. ಕೊರೋನಾದಂತಹ ಮಹಾಮಾರಿ ರೋಗ ಜಗತ್ತಿಗೆ
ಅಂಟಿಕೊಂಡಂತಹ ಸಂಧರ್ಭದಲ್ಲಿ ಹಲವು ಕಡೆಗಳಲ್ಲಿ ಲಾಕ್ ಡೌನ್ ಗಳನ್ನು ಮಾಡಲಾಯಿತು. ಲಕ್ಷಾಂತರ
ಜನರು ಈ ರೋಗಕ್ಕೆ ತುತ್ತಾದರು ಅಂತಹ ಸಂಧರ್ಭದಲ್ಲೂ ಹೆಚ್ಚಿನ ರೈತರಿಗೆ ಯಾವುದೇ
ಸಮಸ್ಯೆ ಉಂಟಾಗಲಿಲ್ಲ, ರೈತರೆಲ್ಲ ತಮ್ಮ ಕೃಷಿ ಭೂಮಿಯಲ್ಲಿ ಭಿತ್ತನೆ ಕಾರ್ಯಗಳಲ್ಲೆ ಮಗ್ನರಾಗಿದ್ದರು. ಮಳೆಗಾಲ ಎಂದರೆ ರೈತರಿಗೆ
ಆದಾಯದ ಸಮಸ್ಯೆ ಉಂಟಾಗುತ್ತದೆ ಆದರೆ ನನಗೆ
ಮಳೆಗಾಲದಲ್ಲೂ ಕೃಷಿ ಮೀನಿನಿಂದ ಆದಾಯ ಬಂದಿದೆ ಎಂದು ಹೇಳುತ್ತಾರೆ ತಿಮ್ಮಪ್ಪನವರು. ರೈತರಿಗೆ ಕೇಂದ್ರ ಸರ್ಕಾರ 2000ರೂ ಅನುಧಾನವಾಗಿ ನೀಡಿದರು ಇದರಿಂದ ಸಣ್ಣ ರೈತರಿಗೆ ಯಾವುದೇ ಪ್ರಯೋಜನ ಸಿಗಲಿಲ್ಲ, ಕೇವಲ ಭತ್ತ ಬೆಳೆಯುವ ರೈತರಿಗೆ ಆ ಅನುಧಾನ ನೀಡಬೇಕಾಗಿತ್ತು ಎಂಬುದು ತಿಮ್ಮಪ್ಪನವರ ಸಲಹೆ. ಅದರ ಜೊತೆಗೆ ಸರ್ಕಾರ ರೈತರಿಗೆ ಸಿಗಬೇಕಾದ ಸಬ್ಸಿಡಿ, ಸಹಾಯ ಧನ ಬಹುಬೇಗ ಸಿಗಬೇಕು, ರೈತರ ತಕ್ಷಣ
ನೆರವನ್ನು ಪಡೆಯಬೇಕು ಸಕಾಲದಲ್ಲಿ ನೆರವು ಸಿಕ್ಕರೆ
ಅದುವೇ ಉಪಯೋಗವಾಗುತ್ತದೆ ಎಂಬುದು ತಿಮ್ಮಪ್ಪನವರ ಆಶಯ. ತಿಮ್ಮಪ್ಪನವರು ಮೀನು ಕೃಷಿಯ ಜೊತೆಯಲ್ಲೆ
ಮಕ್ಕಳಿಗೆ ಈಜು ಕೊಳವನ್ನು ಮಾಡಿ ಊರಿನ ಮಕ್ಕಳಿಗೆ
ಈಜನ್ನು ಕಲಿಸಬೇಕೆಂಬ ಹಂಬಲ ಬಹಳ ವರ್ಷಗಳಿಂದ
ಇಟ್ಟುಕೊಂಡಿದ್ದಾರೆ. ಸಾಧರಣ ಬಡವರ ಮಕ್ಕಳು ಈಜು
ಕಲಿಯಬೇಕು, ಮಕ್ಕಳಿಗೆ ಉಚಿತ ಈಜು ಕಲಿಸಬೇಕು ಎಂಬ ಹಂಬಲವನ್ನು ಸಹ ವ್ಯಕ್ತಪಡಿಸಿದ್ದಾರೆ. ಮುಂದಿನ
ದಿನಗಳಲ್ಲಿ ಊರಿನಲ್ಲಿ ಈಜು ಕೊಳವನ್ನು ಮಾಡುವ
ಕನಸನ್ನು ಇಟ್ಟುಕೊಂಡು ಅದಕ್ಕಾಗಿ ಶ್ರಮಿಸುತ್ತಿದ್ದಾರೆ.
ಅಷ್ಟೆ ಅಲ್ಲದೆ ಶಿವಮೊಗ್ಗ ವರಿಷ್ಠಾಧಿಕಾರಿ ಶಾಂತರಾಜು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶಿವಕುಮಾರ್ ಮಾಗಡ್ ರವರ ಜೊತೆ ಉತ್ತಮ
ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಇಂತಹ ಮಾದರಿ ರೈತ ನಮ್ಮ ಜೊತೆಯಲ್ಲಿರುವುದು ಅದರಲ್ಲೂ ಮಲೆನಾಡಿನಲ್ಲಿ ಮಾದರಿ ಕೃಷಿಕನಾಗಿ ಹೊರಹೊಮ್ಮಿರುವುದು ನಾಡಿಗೆ ಹೆಮ್ಮೆ ಎಂದೆ ಹೇಳಬಹುದು.

LEAVE A REPLY

Please enter your comment!
Please enter your name here