ಆಸ್ತಿಕತೆ ಮತ್ತು ನಾಸ್ತಿಕತೆಯ ಕುರಿತು ಖಲೀಲ್ ಗಿಬ್ರಾನ್

ಅನುವಾದ : ಪುನೀತ್ ಅಪ್ಪು.

ವಿಚಾರ ಮತ್ತು ಭಾವನೆಯ ಬಗ್ಗೆ ಹೇಳು,
ಸಂನ್ಯಾಸಿನಿಯೊಬ್ಬಳು ಕೇಳುತ್ತಿದ್ದಳು.

ಅಲ್- ಮುಸ್ತಾಫ ಹೀಗೆ ಉತ್ತರಿಸಿದ,

ನಿನ್ನ ಆ ಮನಸ್ಸೊಂದು
ರಣರಂಗವಾಗಿಹುದು
ಅಲ್ಲಿ ನಡೆಯುತ್ತಿದೆ ಯುದ್ಧ
ನಿನ್ನ ವಿಚಾರಗಳು ಮತ್ತು ತೀರ್ಮಾನಗಳಿಗೆ
ಭಾವನೆಗಳು ಮತ್ತು ಆಸೆಗಳೊಡನೆ

ನಾನೊಂದು ವೇಳೆ
ನಿನ್ನಾತ್ಮಗಳ ಶಾಂತಿದೂತನಾಗುತ್ತಿದ್ದರೆ
ನಿನ್ನೊಳಗಿನ ವೈರಿಗಳೊಡನಿರುವ
ಸಂಬಂಧಗಳ ಬೇರ್ಪಡಿಸುತ್ತಿದ್ದೆ
ಹಲವನ್ನು ಒಂದುಗೂಡಿಸಿ
ಏಕತಾರಿಯ ಮಧುರಧ್ವನಿ
ಹೊರಡಿಸುತ್ತಿದ್ದೆ.

ಆದರೆ ನಿಮಗೆ ನೀವೇ ಶಾಂತಿದೂತರಾಗದೆ
ನಿಮ್ಮ ತತ್ತ್ವಗಳನೇ ಪ್ರೀತಿಸ ಹೊರಟರೆ ?

ವಿಚಾರ ಮತ್ತು ಭಾವನೆಗಳನ್ನೆ
ಹಾಯ್ಗಂಭ ಪಟವನಾಗಿಸಿ
ಸಮುದ್ರಮುಖಿಯಾಗಿಹುದು ನಿಮ್ಮ ಆತ್ಮದೋಣಿ !

ಹಾಯಿಪಟಗಳೆ ಹರಿದೊಮ್ಮೆ
ಹಾಯಿಕಂಭಗಳು ನಡುಮುರಿದು
ಅಲೆಗಳೊಳು ಏಳುಬೀಳುತ್ತಾ
ನಡುಸಾಗರದಿ ಸ್ತಬ್ಧಗೊಂಡರೇ ?

ವಿಚಾರದ ಕೈಯ್ಯಲ್ಲೇ ಅಧಿಕಾರ ಸಿಗಲು
ನಲುಗುವವು ಅಲ್ಲೇ ಚಿಂತನೆಗಳೂ,
ಭಾವನೆಯನೊಂದೊಮ್ಮೆ ಹರಿಯಬಿಡಲು
ತನ್ನನ್ನೇ ಸುಟ್ಟುಬಿಡೊ ಜ್ವಾಲೆಯಹುದು !

ಆತ್ಮ ಹಾಡಲಿ ವಿಚಾರಗಳನು
ಭಾವನೆಗಳೆತ್ತರಕೆ ಏರಿಸುತ್ತ;
ವಿಚಾರದೊಡನೆ ಸಾಗಿಸಲಿ ಭಾವನೆಗಳನು,
ನಿತ್ಯ ನೆಲೆಸಲಿ ಭಾವಗಳ ಪುನರುತ್ಥಾನವಲ್ಲಿ !
ಮೇಲೆದ್ದು ಬರಲಿ ಫೀನಿಕ್ಸ್ ಹಕ್ಕಿಯಂತೆ
ತಾ ಸುಟ್ಟ ತನ್ನದೇ ಬೂದಿಯಲ್ಲಿ !

ಮನೆಯೊಳಗೆ ಬಂದ ಅತಿಥಿಗಳಿಬ್ಬರಲ್ಲಿ
ಒಬ್ಬನನ್ನುಳಿದು ಇನ್ನೊಬ್ಬನನ್ನೇ
ಹೇಗೆ ಉಪಚರಿಸುವೆ?
ಒಬ್ಬನ ಪ್ರೀತಿ ವಿಶ್ವಾಸಗಳ ಗಳಿಸಿ
ಇನ್ನೊಬ್ಬನಲ್ಲಿ ಎಲ್ಲವನ್ನೂ
ಕಳೆದುಕೊಳ್ಳುವಂತೆ !

ಆ ಬೆಟ್ಟದೆತ್ತರದಲ್ಲಿ ಹಿಮಾಚ್ಛಾದಿತ
ಮರದ ನೆರಳಲ್ಲಿ ಕುಳಿತಿರುವಾಗ,
ದೂರದ ಹೊಲಗದ್ದೆಗಳ ಮೇಲೆ
ಇಬ್ಬನಿಗಳ ಪ್ರಶಾಂತ ಮೌನವನ್ನು
ಸವಿಯುವಾಗ —
ನಿನ್ನ ಹೃದಯವನ್ನು ಹರಿಯಗೊಡು
“ದೇವರು ವಿರಮಿಸಿಹನು ವಿಚಾರದಲ್ಲಿ”.

ಹಾಗೆಯೇ
ಬಿರುಗಾಳಿ ಬೀಸುವಾಗ,
ಬಲಾಡ್ಯ ಮಾರುತಗಳು
ಅರಣ್ಯಗಳನ್ನು ನಡುಗಿಸುವಾಗ,
ಗುಡುಗು ಮಿಂಚುಗಳು
ಆಗಸದಬ್ಬರವನ್ನು ಸಾರುತ್ತಿರುವಾಗ —
ನಿನ್ನ ಹೃದಯವು ಹೀಗೆ ಹೇಳಲಿ,
” ದೇವರು ಭಾವನೆಯಲ್ಲಿ ಪ್ರವಹಿಸುತ್ತಿಹನು”

ನೀನೊಂದು ಅನಂತಾಕಾಶದ ಉಸಿರಾಗಿರುವೆ,
ಅರಣ್ಯಗಳಲ್ಲಿನ ಒಂದು ಎಲೆಯಾಗಿರುವೆ,
ನೀನು ಕೂಡಾ ವಿಚಾರದಲ್ಲಿ ವಿರಮಿಸುತ್ತಾ ಭಾವನೆಗಳಲ್ಲಿ ಪ್ರವಹಿಸು !!

ಖಲೀಲ್ ಗಿಬ್ರಾನ್ ‘ದ ಪ್ರಾಫೆಟ್’

LEAVE A REPLY

Please enter your comment!
Please enter your name here