ಲೇಖಕರು: ಎಂ ಅಶೀರುದ್ದೀನ್ ಆಲಿಯಾ ಸಾರ್ತಬೈಲ್

ಓದುಗರೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರವಾಗಿ ರೂಪಿಸಿದ ಸಂವಿಧಾನವೂ ಇಲ್ಲಿರುವ ಪ್ರತಿಯೊಬ್ಬನಿಗೆ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸುವ ಭರವಸೆಯನ್ನು ಹಾಗೂ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಸ್ವಾಭಿಮಾನವನ್ನು ನೀಡಿ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಪ್ರತಿಯೊಬ್ಬ ಭಾರತೀಯ ಸಂವಿಧಾನಕ್ಕೆ ಸದಾ ಬದ್ಧವಾಗಿ ಬದುಕುವ ಸಂಕಲ್ಪವನ್ನು ಮಾಡಬೇಕಾಗಿರುವುದು ಅವನ ರಾಷ್ಟ್ರ ಧರ್ಮದ ಪಾಲನೆಯಾಗಿದೆ. ಈ ಸದಾಶಯವನ್ನು ಮತ್ತು ಸಂವಿಧಾನದ ಶ್ರೇಷ್ಠತೆ, ಮಹತ್ವ, ಹಕ್ಕು, ಕಾನೂನಿನ ಸ್ಥಾನಮಾನ, ಸಾರ್ವಜನಿಕ ಸದಾಚಾರದ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ, ಭಕ್ತಿ, ಆರಾಧನೆ, ಉದ್ಯೋಗ, ಸಂಗ-ಸಹವಾಸ, ಮೂಲಭೂತ ಹಕ್ಕುಗಳ ಹಾಗೂ ಕರ್ತವ್ಯಗಳ ಬಗ್ಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ, ಆದಿವಾಸಿಗಳಿಗೆ, ದೀನ ದಲಿತರಿಗೆ, ಕೆಲವರ್ಗದವರಿಗೆ, ಬಡವರಿಗೆ, ಜನ ಸಾಮಾನ್ಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸಂಪೂರ್ಣ ಸಂರಕ್ಷಣೆ ಒದಗಿಸುತ್ತಿರುವ ಭಾರತದ ಸಂವಿಧಾನದ ಬಗ್ಗೆ ಮುಂದಿನ ಪೀಳಿಗೆಗೆ ಅದರ ಬಗೆಗಿನ ಗೌರವ ಮತ್ತು ಅರಿವು ಮೂಡಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ ಹಾಗೂ ಇಂದಿನ ಅಗತ್ಯತೆಯಾಗಿದೆ.

ಭಾರತದ ಸಂವಿಧಾನ ಲೋಕದಲ್ಲಿ ಶಾಂತಿ ಸ್ಥಾಪನೆಗೆ ಮತ್ತು ಮನುಕುಲದ ಬೆಳವಣಿಗೆಗೆ ಸಂಪೂರ್ಣವಾದ ಪ್ರಯತ್ನವನ್ನು ಪಡುವ ಮೂಲ ಉದ್ದೇಶವನ್ನು ಹೊಂದಿದೆ. ಅದು ಸರ್ಕಾರದ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಕಾರ್ಯವ್ಯವಸ್ಥೆಯನ್ನು ಅದರ ವ್ಯಾಪ್ತಿಯನ್ನು ಖಚಿತ ಪಡಿಸುತ್ತದೆ ಆದ್ದರಿಂದ ಭಾರತಕ್ಕೆ ಮತ್ತು ಭಾರತೀಯರಿಗೆ ಸಂವಿಧಾನವೇ ಬಲ ಮತ್ತು ಭರವಸೆ.

1949ರ ನವೆಂಬರ್ 26 ರಂದು ಭಾರತದ ಕಾನ್ಸ್​ಟಿಟ್ಯೂಯೆಂಟ್ ಅಸೆಂಬ್ಲಿಯಲ್ಲಿ ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಲಾಯಿತು. ಡಾ. ಬಿ ಆರ್ ಅಂಬೇಡ್ಕರ್ ರವರು ಇದರ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. 1950, ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. ಅಧಿಕೃತವಾಗಿ ಭಾರತವನ್ನು ಸ್ವತಂತ್ರ, ಸಾರ್ವಭೌಮ ಗಣರಾಜ್ಯವಾಗಿ ಘೋಷಣೆ ಮಾಡಲಾಯಿತು. ಪೀಠಿಕೆಯ ಮೂಲ ಪ್ರತಿಯಲ್ಲಿ “ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯ” ಎಂದಿತ್ತು. ಎರಡು ಹೆಚ್ಚಿನ ಪದಗಳಾದ “ಸಮಾಜವಾದಿ” ಮತ್ತು “ಜಾತ್ಯಾತೀತ” ಪದಗಳನ್ನು 1976ರಲ್ಲಿ ಸಂವಿಧಾನದ 42ನೆ ತಿದ್ದುಪಡಿಯ ಮೂಲಕ ಇಂದಿರಾ ಗಾಂಧಿ ಆಡಳಿತದ ಸಮಯದಲ್ಲಿ ಸೇರಿಸಲಾಯಿತು.

ಜನತೆಯ ಅಧೀನದಲ್ಲಿ ಇರುವ ಆಡಳಿತವನ್ನು ಡೆಮೊಕ್ರಾಟಿಕ್ ಎನ್ನುತ್ತೇವೆ. ಸರ್ಕಾರ ಇಲ್ಲಿ ಜನರ ಪರವಾಗಿ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಜನರಿಂದ ಜನರಿಗಾಗಿ ಇರುವುದೇ ಪ್ರಜಾಪ್ರಭುತ್ವ. ಈ ವ್ಯವಸ್ಥೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶ ವಿರುವುದರಿಂದ ಜನರೇ ಕಟ್ಟಿದ ಸರ್ಕಾರವನ್ನು ಬೆಂಬಲಿಸುವ, ವಿರೋಧಿಸುವ, ವಿಮರ್ಶಿಸುವ, ಪ್ರತಿಭಟಿಸುವ ಮತ್ತು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಇದೆಯೆಂದು ಅರಿಯಬೇಕು.

ಭಾರತವೂ ಅನೇಕ ಗಣ ರಾಜ್ಯಗಳ ಹಾಗೂ ರಾಜ ಮಹಾರಾಜರ ಅಧೀನದಲ್ಲಿದ್ದ ಭೂ ಪ್ರದೇಶವನ್ನು ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಬಲ ಪಡಿಸಲಾಗಿದೆ. ಭಾರತ ಸಂಪೂರ್ಣವಾಗಿ ಯಾವ ಧರ್ಮದ ಯಾವ ಜಾತಿಯ ಅಧಿಕೃತ ಆಸ್ತಿ ಅಲ್ಲ ಎಂಬ ವಾಸ್ತವ ಮತ್ತು ಇತಿಹಾಸವನ್ನು ಬಲ್ಲ ಒಂದು ಪೀಳಿಗೆ ಬೆಳೆದು ಬರುತ್ತಿಲ್ಲ ಎಂಬುವುದು ಕೂಡ ಪ್ರಜಾಪ್ರಭುತ್ವ ದೇಶದ ಇಂದಿನ ದೊಡ್ಡ ಕೊರತೆಯಲ್ಲೊಂದಾಗಿದೆ. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರದ ಒಳ್ಳೆಯ ಯೋಜನೆಯ ಪ್ರಯೋಜನ ಪಡೆಯದಿರುವುದು ಮತ್ತು ಕೆಟ್ಟ ಯೋಜನೆಯನ್ನು ಪ್ರಶ್ನಿಸದಿರುವುದು ಪ್ರಜಾಪ್ರಭುತ್ವದ ಸೋಲಿಗೆ ಕಾರಣವಾಗುತ್ತದೆ ಮತ್ತು ಇದು ಸರ್ವಾಧಿಕಾರಿ ನಡೆಗೆ ಪ್ರೋತ್ಸಾಹಿಸುತ್ತದೆ. ಪ್ರಜಾಪ್ರಭುತ್ವ ದೇಶದೊಳಗಿನ ಸಮಾಜದ ಆಯಾಮವನ್ನು ರೂಪಿಸುವ ಸಂವಿಧಾನದ ಮೂಲಭೂತ ಅಂಶಗಳನ್ನು ಇಂದಿನ ನ್ಯೂ ಜನರೇಷನ್ ವಿದ್ಯಾರ್ಥಿ ಯುವಕರಲ್ಲಿ ತಿಳಿಸುವ ಸಮರ್ಪಕವಾದ ಯಾವ ಪ್ರಯತ್ನಗಳು ಕಾರ್ಯರೂಪಕ್ಕೆ ಬಂದಿದೆ ಎಂದು ನಾವು ಅವಲೋಕನ ಮಾಡಬೇಕಾದ ಅಗತ್ಯವಿದೆ.

ಪ್ರತಿಯೊಂದು ಸರ್ಕಾರವೂ ಸಂವಿಧಾನ ದಿನಾಚರಣೆಯನ್ನು ಮತ್ತು ಗಣರಾಜ್ಯೋತ್ಸವವನ್ನು ಕೇವಲ ಸಂಭ್ರಮ ಮತ್ತು ಪ್ರಚಾರಕ್ಕೆ ಮಾತ್ರ ಸೀಮಿತಗೊಳಿಸಿದೆ ಎಂದರೆ ತಪ್ಪಾಗಲ್ಲ. ಸರ್ಕಾರಿ ಕಚೇರಿಯಲ್ಲಿಯಾಗಲಿ, ಶಾಲಾ ಕಾಲೇಜಿನ ಗೊಡೆ-ಆವರಣದಲ್ಲಾಗಲಿ, ಸಂವಿಧಾನದ ಪೀಠಿಕೆ ಪ್ರತಿಯನ್ನು ಕಡ್ಡಾಯವಾಗಿ ಹಾಕಿರುವುದನ್ನು ಕಾಣಲು ಸಾಧ್ಯವಿಲ್ಲ(ಕೆಲವರು ಸ್ವ-ಇಚ್ಛೆಯಿಂದ ಹಾಕಿದ್ದಾರೆ). ಅದರ ಬದಲು ಧಾರ್ಮಿಕ ಗುರುತುಗಳು, ನಂಬಿಕೆಯ ಚಿನ್ಹೆಗಳನ್ನು ನೇತು ಹಾಕಿರುವುದನ್ನು ಕಾಣುತ್ತೇವೆ. ದೇಶ ಮೊದಲು ಎಂದರೆ ಸಂವಿಧಾನ ಮೊದಲು ಆಗಿರುತ್ತದೆ. ಸಂವಿಧಾನದ ಆಶಯಗಳ ಬಗ್ಗೆ ಹೆಚ್ಚಿನ ಗೌರವ ಮತ್ತು ಕಾಳಜಿ ಪ್ರತಿಯೊಬ್ಬ ಪ್ರಜೆಗಳಿಗೆ ಇರಬೇಕಾಗಿರುವುದು ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾಗಿರುತ್ತದೆ.

ಇಂದಿನ ಕಲುಷಿತ ರಾಜಕೀಯ ವಾತಾವರಣದಲ್ಲಿ ರಾಜಕೀಯ ಲಾಭಕ್ಕಾಗಿ ಸಂವಿಧಾನದ ಮೂಲಾಶಯಕ್ಕೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತರುವ ಹಲವಾರು ಘಟನೆಗಳು ನಿತ್ಯ ನಿರಂತರವಾಗಿ ಬಹಿರಂಗವಾಗಿ ನಡೆಯುತ್ತಿದೆ. ಮಹಿಳೆಯ ಹಕ್ಕು ಕಸಿಯಲಾಗುತ್ತಿದೆ, ಕೊಲೆಗಾರರು ನಿರ್ಭೀತಿಯಿಂದ ಸಂಚರಿಸುತ್ತಾರೆ ಕ್ಷುಲ್ಲಕ ವಿಷಯಗಳಿಗೆ ಗಲಭೆಗಳೇಲುತ್ತದೆ, ಧಾರ್ಮಿಕ ಸ್ವಾತಂತ್ರ್ಯ ಕಳೆದುಕೊಳ್ಳಲಾಗುತ್ತಿದೆ. ಕಾನೂನಿನ ಮೇಲಿರುವ ನಂಭಿಕೆ ಇಲ್ಲವಾಗುತ್ತಿದೆ. ಪುಂಡ ಪೋಕಿರಿಗಳು ಕಾನೂನು ಕೈಗತ್ತಿಕ್ಕೊಳ್ಳುವ ಪ್ರಕರಣ ನಿರಂತರ ನಡೆಯುತ್ತಿದೆ. ಹೆಚ್ಚಿನ ಅಹಿತಕರ ಕೃತ್ಯಗಳು ರಾಜಕೀಯ ಲಾಭದ ದೃಷ್ಟಿಯಿಂದ ನಡೆಯುತ್ತದೆ ಎನ್ನುವುದು ನಿಜವಾದರೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದೊಡ್ಡ ಅವಮಾನವಾಗಿದೆ. ಅನ್ಯಾಯದ ವಿರುದ್ಧ ಜನ ಸಾಮಾನ್ಯರಿಗೆ ಸಂವಿಧಾನದ ಅರಿವು ಮೂಡಿಸುವ ಮುಖಾಂತರ ಅವರಲ್ಲಿ ಜಾಗೃತಿ ಮೂಡಿಸಿ ಧೈರ್ಯ ತುಂಬಬಹುದು. ಜನಪ್ರತಿನಿಧಿಗಳು ಅವಧಿ ಪೂರ್ತಿ ಚುನಾವಣೆಯನ್ನೇ ತಲೆಯಲ್ಲಿಟ್ಟು ತಿರುಗುವವರಾದ್ದರಿಂದ ಅದಕ್ಕೆ ಪೂರಕವಾಗಿ ಮಾತ್ರ ಕೆಲಸ ಮಾಡುತ್ತಾರೆ. ಅವರಿಗೆ ಸಂವಿಧಾನದ ಬಗ್ಗೆ ಆಲೋಚಿಸಲು ಸಮಯ ಎಲ್ಲಿದೆ? ಗೆದ್ದಾಗ ಮಾತ್ರ ಸಂವಿಧಾನದ ಹೆಸರಿನಲ್ಲಿ ಬೂಟಾಟಿಕೆಯ ಪ್ರಮಾಣ ವಚನ ಮಾಡಿ ಆತ್ಮ ವಂಚನೆಗೆ ಇಳಿಯುವುದು ಹೆಚ್ಚಿನವರ ಚಾಳಿ.

ಸಂವಿಧಾನದ ಸದಾಶಯಗಳನ್ನು ಎತ್ತಿಹಿಡಿಯುತ್ತಿರುವ ಸಮಾಜ ಸೇವಕರು, ಚಿಂತಕರು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಹಲವು ಪ್ರಯತ್ನಗಳು ನಡೆಸುತ್ತಿರುವುದು ಶ್ಲಾಘನೀಯ. ಸಂವಿಧಾನದ ಪ್ರಸ್ತಾವನೆಯನ್ನು ಹಂಚುವ, ಕಾರ್ಯಕ್ರಮಗಳಲ್ಲಿ ಅದನ್ನು ಓದುವ, ಮನೆಗೆ ಹೋಗಿ ವಿತರಿಸಿ ಅದರ ಮಹತ್ವವನ್ನು ತಿಳಿಸುವ ಕಾರ್ಯಗಳು ಅಳಿಲು ಸೇವೆಯಂತೆ ನಡೆಯುತ್ತಿವೆಯಾದರೂ ಪೂರ್ಣ ಪ್ರಮಾಣದಲ್ಲಿ ಅದರ ಬಗ್ಗೆ ಅರಿವು ಮೂಡಿಸುವ ಕೆಲಸ ಸರ್ಕಾರ ಮುತುವರ್ಜಿಯಿಂದ ನಡೆಯಬೇಕಾಗಿದೆ. ಪ್ರತಿಯೊಂದು ಮನೆ ಬಾಗಿಲಿಗೆ ಸಂವಿಧಾನ ಆಶಯಗಳನ್ನು ತಲುಪಿಸುವ ಕಾರ್ಯವನ್ನು ಶುರುಮಾಡಬೇಕಾಗಿದೆ. ಒಡೆದು ಹೋಗಿರುವ ದೇಶವನ್ನು ಸಂವಿಧಾನದ ಸದಾಶಯದಿಂದ ಜೋಡಿಸುವುದು ಇಂದಿನ ಅಗತ್ಯ.

LEAVE A REPLY

Please enter your comment!
Please enter your name here