• ಶಿವಸುಂದರ್

ಇದು ಚಿತ್ರ ವಿಮರ್ಶೆಯಲ್ಲ , ಗಂಡಸೊಬ್ಬನ ಸ್ವವಿಮರ್ಶೆ

ನಿನ್ನೆ ಗೆಳೆಯ ರಾಜಾರಾಮ್ ತಲ್ಲೂರ್ ಅವರ ಫೇಸ್ಬುಕ್ ಪೋಸ್ಟಿನ ಮೂಲಕ The Great Indian Kitchen ಚಿತ್ರವೂ ಪ್ರೈಮ್ ನಲ್ಲಿರುವುದು ಗೊತ್ತಾಯಿತು. ಗೆಳೆಯರೊಬ್ಬರ ಅಕೌಂಟಿನ ಸಹಾಯದಿಂದ ನಿನ್ನೆ ನೋಡಿದೆ . ಇನ್ನು ಅದರ ಹ್ಯಾಂಗ್ ಓವರ್ ಇಂದ ಪೂರ್ತಿಯಾಗಿ ಹೊರಬರಲಾಗಿಲ್ಲ. ಚಿತ್ರವನ್ನು ನೋಡುತ್ತಿರುವಾಗಲೇ ಇದು ಭಾರತದ ಎಲ್ಲಾ ಬ್ರಾಹ್ಮಿನಿಕಲ್ ಮಧ್ಯಮ ವರ್ಗದ ಕುಟುಂಬಗಳಿಗೆ ಹಿಡಿದ ಕನ್ನಡಿಯಂತಿದೆ ಅನಿಸುತ್ತಿತ್ತು… ಚಿತ್ರವೂ ಕೂಡಾ ಯಾವುದೇ ಮೇಲೊಡ್ರಾಮ, ಹಾಡು, ಫೈಟು, ಹೀರೊ, ವಿಲನ್ ಗಳಿಲ್ಲದೆ ಒಂದು ಚಲಿಸುವ ಫೋಟೋ ಪ್ರೇಮಿನಂತಿದೆ .. ಆ ಅರ್ಥದಲ್ಲೂ ಕನ್ನಡಿಯಂತಿದೆ.

(ಈ ಬ್ರಾಹ್ಮಣೀಕಲ್ ಕುಟುಂಬಗಳಲ್ಲಿ ಬಹುಪಾಲು ಬ್ರಾಹ್ಮಣ ಕುಟುಂಬಗಳ ಜೊತೆಗೆ ಎಲ್ಲಾ ಧರ್ಮ, ಜಾತಿ, ಹಾಗು ಸಮುದಾಯಗಳಲ್ಲಿ ಬೆಳೆಯುತ್ತಿರುವ ಒಂದು ಬ್ರಾಹ್ಮಿನಿಕಲ್ ಮಧ್ಯಮವರ್ಗದ ಕುಟುಂಬಗಳ ಅಡುಗೆ ಮನೆಗಳು ಸೇರಿಕೊಳ್ಳುತ್ತವೆ ಎಂಬುದು ನನ್ನ ಅಭಿಪ್ರಾಯ. ಪೇಟ್ರಿಯಾರ್ಕಿ ಎಂಬುದು ಸೆಕ್ಯುಲಾರ್ )

ಅಡುಗೆ ಮನೆಯ ನೆಪದಲ್ಲಿ ಮನೆಯ ಹೆಣ್ಣು ಜೀವಗಳು ಮಾಡುವ ಡೊಮೆಸ್ಟಿಕ್ ಕೆಲಸಗಳ ರಿಪಿಟಿಟಿವ್, ರೆಸ್ಟ್ ಲೆಸ್, ಮತ್ತು ಥ್ಯಾಂಕ್ ಲೆಸ್ ಕೆಲಸಗಳ ವಿವರಗಳನ್ನು ಮತ್ತು ಮತ್ತು ಆ ಮೂಲಕ ಒಟ್ಟಾರೆ ಹೆಂಗಸಿನ ವ್ಯಕ್ತಿತ್ವ-ಅಸ್ಥಿತ್ವದ ಬಗ್ಗೆ ಬ್ರಾಹ್ಮಿನಿಕಲ್ ಮಧ್ಯಮವರ್ಗದ ಗಂಡಸರಿಗೆ ಇರುವ , ಬಚ್ಚಿಡಲಾಗದ ತಾತ್ಸಾರ, ಅಸಡ್ಡೆ, ಗಂಡು ದುರಭಿಮಾನವನ್ನೂ ಯಾವ ಈ ಚಿತ್ರ ನಮ್ಮನ್ನು ಅರಿವಿನಲ್ಲಿಟ್ಟುಕೊಂಡೇ ಬೆತ್ತಲಾಗಿಸುತ್ತ ಹೋಗುತ್ತದೆ.

ಸಮಾಜದ ಹೊಲಸನ್ನೆಲ್ಲಾ ತೆಗೆದು ಚಂದವಾಗಿಸುವ ಪೌರಕಾರ್ಮಿಕರ ಬದುಕಿನ ಬಗ್ಗೆ ಕುಲೀನ ಸಮಾಜಕ್ಕೆ ಇರುವ ಮನೋಭಾವಕ್ಕೂ ಇದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಆದ್ದರಿಂದಲೇ ಭಾರತ ಸಮಾಜದಲ್ಲಿ ಜಾತಿ ಮತ್ತು ಪೇಟ್ರಿಯಾಕ್ರಿಯ ನಡುವೆ ಅವಿನಾಭಾವಾ ಸಂಬಂಧವಿದೆ ಎನ್ನುವುದು ಕೂಡಾ ಈ ಚಿತ್ರ ಮನವರಿಕೆ ಮಾಡಿಕೊಡುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಆಧುನಿಕ, ಪ್ರಗತಿಪರ ಎಂಬುದು ಒಂದು ಸ್ವವಂಚಕ ಸೋಗು ಆದಾಗ ಹೇಗೆ ಅದರೊಳಗೆ ಗಂಡು ದುರಭಿಮಾನ ಅಡಗಿ ಕೂತಿರುತ್ತದೆ ಎಂಬುದನ್ನು ಈ ಚಿತ್ರ ರೇಜಿಗೆಯಾಗುವಷ್ಟು ರಾಚುವಂತೆ ತೋರಿಸುತ್ತದೆ.

ಹೀಗಾಗಿ ಪ್ರತಿಯೊಬ್ಬ ಗಂಡು ವೀಕ್ಷಕನು ತಾನು ನಿಜಕ್ಕೂ ಹೆಣ್ಣು ಬದುಕಿನ ಬಗ್ಗೆ ಸಂವೇದನಾಶೀಲನೇ ಎಂದು ಪರೀಕ್ಷಿಸಿಕೊಳ್ಳಬೇಕೆಂದರೆ ಚಿತ್ರದಲ್ಲಿ ಸೆರೆ ಹಿಡಿದಿರುವ ಅಡುಗೆ ಮನೆಯ ರೇಜಿಗೆಯ ಕೆಲಸಗಳ ವಿವರವನ್ನು ಕಿಂಚಿತ್ತೂ ಪಾರ್ವರ್ಡ್ ಮಾಡದೆ ನೋಡಬೇಕು..

ನಿಮ್ಮ ಹೆಂಡತಿ ಏನು ಮಾಡುತ್ತಾರೆ ಎಂದು ಕೇಳಿದರೆ , ಏನು ಇಲ್ಲ ಅವರು ಸುಮ್ಮನೆ ಮನೇಲಿರ್ತಾರೆ ಎಂದು ಸಿದ್ಧ ಉತ್ತರ ಕೊಡುವ ಗಂಡಂದಿರಂತೂ ಒಮ್ಮೆ ಕಡ್ಡಾಯವಾಗಿ ಈ ಸಿನಿಮಾವನ್ನು ನೋಡಲೇ ಬೇಕು. ಬೆಳಗಾಗೆದ್ದು, ರಾತ್ರಿ ಮಲಗುವ ತನಕ ಮುಗಿಯದ ಮನೆ ಚಾಕರಿಯನ್ನು ಚಿತ್ರಿಸಿರುವ ರೀತಿ ವೀಕ್ಷಕರನ್ನೇ ಸುಸ್ತು ಮಾಡುತ್ತದೆ. ತಮ್ಮ ಮನೆಯ ಅಡುಗೆಮನೆಗೆ ತಾವೇ ಅಪರಿಚಿತರಾಗಿ ಅಥವಾ ತಮ್ಮ ಮನೆಯಲ್ಲಿ ತಾವೇ ಶಾಶ್ವತ ಗೆಸ್ಟುಗಳಾಗಿ ಅಥವಾ ಮಾಲೀಕರಾಗಿ ಮಾತ್ರ ಜೀವನ ಕಳೆಯುವ ಬಹುಪಾಲು ಗಂಡಸರು ಮಿಕ್ಕ ವಿಷಯಗಳಲ್ಲಿ ಸಜ್ಜನರೆ ಆಗಿರಬಹುದು.

ಹಾಗೆ ನೋಡಿದರೆ ಬಹಳಷ್ಟು ಬ್ರಾಹ್ಮಿನಿಕಲ್ ಗಂಡಂದಿರು ಸಮಾಜದಲ್ಲಿ ಬಹಿರಂಗವಾಗಿ ಕಂಡು ಬರುವ ಯಾವುದೇ ಹಿಂಸೆಯನ್ನು ಪ್ರಜ್ಞಾಪೂರ್ವಕವಾಗಿ ಖಂಡಿ ಸಬಲ್ಲರು .

ಆದರೆ ತಾವು ಬೆಳೆದ ಪರಿಸರದಿಂದ ಮೈಗೂಡಿಸಿಕೊಂಡ ಗಂಡು ಮೇಲರಿಮೆಯ ಸ್ವಭಾವದಿಂದ ತಮ್ಮಿಂದಲೇ ನಡೆಯುವ ಹಿಂಸೆಯನ್ನು ಮಾತ್ರ ಕಾಣಲಾರರು.

ಇಂಥಾ ಮನೆ ಮನೆಕಥೆಗೆ ಈ ಚಿತ್ರ ಕನ್ನಡಿಯಾಗುತ್ತದೆ.

ಅದೇ ರೀತಿ ಮೇಲ್ತೊರಿಕೆಯ ಆಧುನಿಕತೆಯು ಹೇಗೆ ಈ ಸಂಪ್ರದಾಯವಾದಿ ಹಿಂಸೆಯನ್ನು ನಿವಾರಿಸಲು ವಿಫಲವಾಗಿದೆ ಎಂಬುದನ್ನು ಕೂಡಾ ಈ ಚಿತ್ರ ಬೆತ್ತಲು ಮಾಡುತ್ತದೆ. ಚಿತ್ರದಲ್ಲಿ, ಸಂಪ್ರದಾಯಶೀಲತೆಯನ್ನು ದೊಡ್ಡ ಆದರ್ಶವೆಂದು ಪ್ರತಿಪಾದಿಸುವ ಮನೆಯ ಹಿರಿತಲೆಮಾರಿನ ಗಂಡಸು, ತನ್ನ ಅನ್ನವನ್ನು ಕುಕ್ಕರ್ರಿನಲ್ಲಿಡದೆ ಸೌದೆ ಒಲೆಯ ಮೇಲೆ ಮಾಡಬೇಕೆಂದೂ, ತನ್ನ ಬಟ್ಟೆಗಳನ್ನು ವಾಷಿಂಗ್ ಮೆಷೀನಲ್ಲಿ ಒಗೆಯದೇ ಕೈಯಿಂದಲೇ ಒಗೆಯಬೇಕೆಂದೂ ಮೃದುಮಾತಿನಿಂದಲೇ ಕಡ್ಡಾಯಗೊಳಿಸುತ್ತಾನೆ.

ಆದರೆ ಮೇಲ್ನೋಟಕ್ಕೆ ನಿರುಪದ್ರವಿಯಂತೆ ಕಾಣುವ ಆ ಹಿರಿ ಗಂಡುಜೀವಕ್ಕೆ ಇದು ಮೂರು ಹೊತ್ತು ಗಾಣದೆತ್ತಿನಂತೆ ಮನೆ ಚಾಕರಿ ಮಾಡುತ್ತಿರುವ ಹೆಂಡತಿಯ/ ಸೊಸೆಯ ಕೆಲಸವನ್ನು ವಿನಾಕಾರಣ ಹೆಚ್ಚಿಸುತ್ತದೆ ಎಂಬುದು ಒಂದು ಕ್ಷಣಕ್ಕೂ ತಟ್ಟುವುದೇ ಇಲ್ಲ!

ಈ ಸಂವೇದನಾ ಶೂನ್ಯತೆಯನ್ನು ಸಾಧ್ಯಗೊಳಿಸಿದ್ದೇನು?

ಹೆಂಡತಿ ಆ ಕಾಲದಲ್ಲೇ ಎಂ.ಎ ಮಾಡಿದ್ದರು ಕೆಲಸಕ್ಕೆ ಕಳಿಸದೇ ಮನೆಯ ಗ್ಲೋರಿಫೈಡ್ ಜೀತಕ್ಕೆ ಇಟ್ಟುಕೊಂಡದ್ದನ್ನು ಒಂದು ಆದರ್ಶ ಮೌಲ್ಯವೆಂದು ಆತ ಪ್ರತಿಪಾದಿಸಿದರೆ, ಈ ಕಾಲದ ಆಧುನಿಕ ಗಂಡು ಮಗ ಅದನ್ನೇ ಮೆದು ಮಾತಿನಲ್ಲಿ ತಾಕೀತು ಮಾಡುತ್ತಾನೆ. ಇನ್ನು ಮುಟ್ಟಿನ ವಿಷಯದಲ್ಲಂತೂ ಸಂಪ್ರದಾಯವಾದಿ ಅಪ್ಪ, ಆಧುನಿಕ ಮಗ ಇಬ್ಬರಲ್ಲೂ ಯಾವ ವ್ಯತ್ಯಾಸವು ಇಲ್ಲ.

ಹಾಗೆ ನೋಡಿದರೆ ಇದು ಕೇವಲ ಕಿಚನ್ ಕಥೆಯೂ ಅಲ್ಲ…

ಇದು, ಹೆಣ್ಣಿನ ಅಡುಗೆಮನೆಯ ಮೂಲಕ ಗಂಡಸಿನ ಆಷಾಢಭೂತಿ ಲೋಕವನ್ನು ತೆರೆದಿಡುವ ಚಿತ್ರ. ಹೆಣ್ಣು ಸ್ವಂತ ಅಭಿಪ್ರಾಯ, ವ್ಯಕ್ತಿತ್ವ, ಅಭಿರುಚಿಗಳಿಲ್ಲದೆ ಗಂಡಿನ ನೆರಳಿನಂತೆ ಗಂಡನ ಸುಖಕ್ಕಾಗಿಯೇ ಬಾಳಬೇಕೆಂಬ ಮೌಲ್ಯವು ತಥಾಕಥಿತ ಆಧುನಿಕ ಮೌಲ್ಯಗಳಲ್ಲೂ ನವಿರಾಗಿ ಬೆರೆತುಹೋಗಿದೆ ಎಂಬುದನ್ನೂ, ಹೆಣ್ಣು ತನ್ನ ಅಭಿರುಚಿ/ಅಭಿಪ್ರಾಯಗಳನ್ನೂ ಸ್ವತಂತ್ರವಾಗಿ ಪ್ರತಿಪಾದನೆ ಮಾಡಿದರೆ ಗಂಡಿನ ಮೇಲರಿಮೆ ಹೇಗೆ ಕೆರಳಿ ಕೆಂಡವಾಗುತ್ತದೆ ಎಂಬುದನ್ನ ಹಿನ್ನೆಲೆ ಸಂಗೀತವಿಲ್ಲದೆ ಸಹಜವಾಗಿ ಈ ಕಿಚನ್ ಅನಾವರಣ ಮಾಡುತ್ತದೆ.

ಉದಾಹರಣೆಗೆ:

ಪ್ರತಿದಿನ ಮನೆಯ ಊಟದ ಟೇಬಲ್ ಮೇಲೆಯೇ ತಿಂದುಳಿದ ತರಕಾರಿ, ಮಾಂಸದ ತುಣುಕುಗಳನ್ನು ಬಿಸಾಡುವ ಗಂಡ ಹೋಟೆಲ್ ಗೆ ಹೋದಾಗ ಮಾತ್ರ ಅವುಗಳನ್ನು ಪ್ರತ್ಯೇಕವಾದ ಪ್ಲೇಟೊಂದರಲ್ಲಿ ತೆಗೆದಿಡುವ ಮೂಲಕ ತೋರಿಸುವ ಟೇಬಲ್ ಮ್ಯಾನರ್ಸ್ ಅನ್ನು ಮನೆಯಲ್ಲೂ ಮಾಡಬಹುದಲ್ಲ ಎಂದು ಹೆಂಡತಿ ಹಗುರವಾಗಿ ಕೇಳಿದ್ದಕ್ಕೆ ಕೆಂಡಾಮಂಡಲವಾಗುವ ಗಂಡ ಅವಳ ಕೈಲಿ ಸಾರಿ ಹೇಳಿಸುವ ತನಕ ಹಠ ಸಾಧಿಸುತ್ತಾನೆ ಮತ್ತು ಅಲ್ಲಿಂದಾಚೆಗೆ ಮಾತುಮಾತಿಗೂ ಅವಳನ್ನು ಮ್ಯಾನರ್ ಲೇಡಿ ಎಂದು ಹಂಗಿಸುತ್ತಾನೆ.

ಅಯ್ಯಪ್ಪ ಮಾಲೆ ತೊಡುವ ಮುನ್ನ ಸೆಕ್ಸ್ ಗಾಗಿ ಪೀಡಿಸುವ ಗಂಡನಿಗೆ ಹೆಂಡತಿಯು ದಿನಾ ರಾತ್ರಿ ಈ ಯಾಂತ್ರಿಕ ಸೆಕ್ಸು ನೋವು ಕೊಡುತ್ತಿದೆಯಾದ್ದರಿಂದ ಇಂಟರ್ ಕೋರ್ಸ್ ಗೆ ಮುನ್ನ ಒಂದಷ್ಟು ಫೋರ್ ಪ್ಲೆ ಆದರೆ ಸಲೀಸಾಗುತ್ತದೆ ಎಂದು ಸಲಹೆ ಮಾಡುತ್ತಾಳೆ. ಇದನ್ನು ಕೇಳಿದ ಆಧುನಿಕ ಗಂಡ ಅವಾಕ್ಕಾಗುತ್ತಾನೆ. ಅಫೆಂಡ್ ಆಗುತ್ತಾನೆ. ಶಂಕಿಸುತ್ತಾನೆ …!

ಇನ್ನು ದಿನನಿತ್ಯದ ಅಡುಗೆ ಚಾಕರಿ ಮಾಡುವ ಹೆಂಗಸರಿಗಿಂತ ಪಾಕಜ್ಞಾನ ಚೆನ್ನಾಗಿ ಬಲ್ಲ ಗಂಡಸರು ಅಪರೂಪಕ್ಕೊಮ್ಮೆ ಅಡುಗೆ ಮಾಡಿ ಹಾಕುವ “ಔದಾರ್ಯ” ಹೇಗೆ ಹೆಂಗಸಿಗೆ ಡಬ್ಬಲ್ ಚಾಕರಿಯನ್ನು ಮಾಡಿಸುತ್ತದೆ ಎಂಬುದನ್ನು, ಪರಿಣಿತಿಯ ಪೇಟ್ರಿಯಾರ್ಕಿಯನ್ನು ಗ್ರಹಿಸಲು ಈ ಚಿತ್ರವನ್ನು ಒಮ್ಮೆಯಾದರೂ ನೋಡಲೇ ಬೇಕು.

ಈ ಮೂರೂ ದೃಶ್ಯಗಳು ಪ್ರತಿ ಗಂಡಸು ತನ್ನ ಡ್ರಾಯಿಂಗ್ ರೂಮು, ಕಿಚನ್ ಮತ್ತು ಬೆಡ್ ರೂಮುಗಳಲ್ಲಿ ಶಾಶ್ವತವಾಗಿ ತೂಗಿಹಾಕಿಕೊಳ್ಳಬೇಕಾದ ಈ ಚಿತ್ರದ ಫೋಟೋ ಪ್ರೇಮುಗಳು … ಎಂದು ನನಗನಿಸುತ್ತದೆ.

ಹಾಗೆ ನೋಡಿದರೆ ಇಲ್ಲಿ ಯಾರು ವಿಲನ್ ಗಳಿಲ್ಲ. ನಮ್ಮ ಪರಿಸರ, ಮೌಲ್ಯಗಳೇ ಇಲ್ಲಿಯ ವಿಲನ್ಗಳು.

ಆದ್ದರಿಂದ ಪ್ರತಿಯೊಬ್ಬರೂ, ಅದರಲ್ಲೂ ಗಂಡಸರು The Great Indian Kitchen ಎಂಬ ಕನ್ನಡಿಯ ಮುಂದೆ ಹಾದುಹೋಗಬೇಕೆಂದು ಶಿಪಾರಸ್ಸು ಮಾಡುತ್ತೇನೆ.

ಕನ್ನಡಿಯಲ್ಲಿ ಮೂಡಿದ ನನ್ನ ಚಿತ್ರವು ಕೂಡಾ ಚೆನ್ನಾಗಿರಲಿಲ್ಲ. .

ಹೀಗಾಗಿ ಇದು ಚಿತ್ರ ವಿಮರ್ಶೆಯಲ್ಲ.

ಗಂಡಸೊಬ್ಬನ ಸ್ವ ವಿಮರ್ಶೆ

LEAVE A REPLY

Please enter your comment!
Please enter your name here