ಸಂಪಾದಕೀಯ: ಸಂಪಾದಕರು ‘ಇಂಕ್ ಡಬ್ಬಿ’

ಇತ್ತೀಚೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಅಕ್ಟೋಬರ್ 2 ರಂದು, ಬಿಹಾರ ಸರ್ಕಾರವು ‘ಬಿಹಾರ ಜಾತಿ ಆಧಾರಿತ ಸಮೀಕ್ಷೆ 2022’ ಅನ್ನು ಪ್ರಕಟಿಸಿತು, ಇದು ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿಗಳು) ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿಗಳು) ಒಟ್ಟಾರೆ ರಾಜ್ಯದ 13 ಕೋಟಿ ಜನಸಂಖ್ಯೆಯಲ್ಲಿ ಸುಮಾರು 63% ರಷ್ಟಿದೆ ಎಂಬ ಅಂಶ ಬೆಳಕಿಗೆ ಬಂದಿದೆ, ಬಿಡುಗಡೆಗೊಂಡ “ಜಾತಿ ಗಣತಿ” ಯೂ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಮತ್ತು ಹಲವು ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಿದೆ, ಜಾತಿ/ವರ್ಗ ಆಧಾರಿತ ಅಭಿವೃದ್ಧಿಯ ಹೊಸ ಆಯಾಮವೂ ಮುನ್ನೆಲೆಗೆ ಬಂದಿದೆ, ಮುಂಬರುವ ಚುನಾವಣಾ ದೃಷ್ಠಿಯಿಂದ ಈ ವರದಿ ಬಹಳ ಮಹತ್ವದ್ದಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದೀಗ ಮತ್ತೆ “ಜಾತಿ ಗಣತಿ” ವರದಿಯ ಚರ್ಚೆ ಮತ್ತಷ್ಟು ಚುರುಕು ಪಡೆದಿದೆ, ಇದಕ್ಕೆ ಕಾರಣ ಈ ಹಿಂದೆ 2015ರಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿದ್ದ “ಜಾತಿ ಗಣತಿ” ಸಮೀಕ್ಷೆಯ ವರದಿಯನ್ನು ಬಿಡುಗಡೆಗೊಳಿಸದೆ ವಿಳಂಬವಾಗಿರುವ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿ, ಶೀಘ್ರವೇ ವರದಿಯನ್ನು ಬಹಿರಂಗಗೊಳಿಸಲು ಒತ್ತಡ ಬರುತ್ತಿದೆ.

ಕಾಂತರಾಜು ಆಯೋಗದ ವರದಿಯ ಮೂಲ ಪ್ರತಿ ಲಭ್ಯವಿಲ್ಲವೆಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ, ಆದರೆ ಇದರಿಂದ ವರದಿ ಸಿದ್ಧಪಡಿಸಲು ಸಮಸ್ಯೆ ಆಗುವುದಿಲ್ಲ, ಸಮೀಕ್ಷೆಯ ದತ್ತಾಂಶ ಆಧರಿಸಿ ಹೊಸ ವರದಿ ಸಿದ್ಧಪಡಿಸಲು ಕಾಲಾವಧಿಯನ್ನು ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿರುವುದರಿಂದ ವಿಸ್ತ್ರತ ವರದಿ ಸಿದ್ಧಪಡಿಸಿ ಶೀಘ್ರವೇ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.

ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒದಗಿಸಲು ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸುಧಾರಣೆಗೆ ನಿರ್ಧಿಷ್ಟ ಕಾರ್ಯಕ್ರಮ ಅಥವಾ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುವ ‘ಜಾತಿ ಗಣತಿ’ಯ ಬಗ್ಗೆ ಹಲವು ಸುಳ್ಳು ಸುದ್ದಿ ಬಿತ್ತಲಾಗುತ್ತಿದೆ, ಇದು ಜಾತಿ ವಿಭಜನೆಯನ್ನು ಬಲಪಡಿಸುತ್ತದೆ ಮತ್ತು ಜಾತಿ ವ್ಯವಸ್ಥೆಯನ್ನು ಶಾಶ್ವತಗೊಳಿಸುತ್ತದೆ ಎಂಬ ಆಧಾರರಹಿತ ತರ್ಕವನ್ನು ಮುಂದಿಡಲಾಗುತ್ತಿರುವುದು ಒಳಗೊಳಗೆ ಜಾತಿ ಅಸ್ಮಿತೆ ಆಧಾರದ ಪ್ರಗತಿಯ ಅಸಹನೆಯಾಗಿದೆ, ಇದನ್ನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡಬೇಕಾಗಿದೆ.

‘ಜಾತಿ ಗಣತಿ’ ಎಂಬ ಜನಗಣತಿಯೂ ಭಾರತಕ್ಕೆ ಹೊಸತಲ್ಲ ಈ ಹಿಂದೆ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ 1881 ರಿಂದ 1931 ವರೆಗೂ ಜಾತಿ ಗಣತಿಯನ್ನು ನಡೆಸಲಾಗಿತ್ತು.

ಕಳೆದ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಜಾತಿಗಣತಿಯೂ 2018ರ ವೇಳೆಗೆ ಮುಕ್ತಾಯಗೊಂಡು ವರದಿ ಸಲ್ಲಿಕೆ ಆಗದೆ ಕೇವಲ ಚರ್ಚೆಗೆ ಸೀಮಿತವಾಯಿತು, ಇದೀಗ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಅಸ್ತಿತ್ವದಲ್ಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಮತ್ತೆ “ಜಾತಿ ಗಣತಿ”ಯನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ, ಕರ್ನಾಟಕದ ವಿವಿಧ ಜನಸಮುದಾಯಗಳ/ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅರಿಯಲು ಕಾಂತರಾಜು ಆಯೋಗ ನಡೆಸಿದ “ಜಾತಿ ಗಣತಿ” ಯ ವರದಿಯನ್ನು ಜಾರಿಗೊಳಿಸದಂತೆ ಈಗಾಗಲೇ ರಾಜ್ಯದ ಎರಡು ರಾಜಕೀಯ ಪ್ರಾಬಲ್ಯ ಹೊಂದಿರುವ ಜಾತಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.

ಸ್ವಾತಂತ್ರ್ಯದ 75 ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿಯೂ ರಾಜ್ಯದ ವಿವಿಧ ಜಾತಿ/ಸಮುದಾಯಗಳು ಬಹುತೇಕ ತಳ/ಹಿಂದುಳಿದ ಜನಸಮುದಾಯಗಳು ಆಗಬೇಕಾದಷ್ಟು ಏಳಿಗೆಯನ್ನು ಸಾಧಿಸಿಲ್ಲ, ಜನಸಂಖ್ಯೆಯಲ್ಲಿ ಇತರರಿಗಿಂತಲೂ ಹೆಚ್ಚಿದ್ದರೂ ಸಹ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಂದುಕೊಳ್ಳುವಷ್ಟು ಪ್ರಗತಿಯನ್ನು ಸಾಧಿಸಿಲ್ಲ, ಈ ನಡುವೆ ನ್ಯಾಯಮೂರ್ತಿ ಕಾಂತರಾಜ್ 2018 ರಲ್ಲಿ ಪೂರ್ಣಗೊಳಿಸಿದ್ದ “ಜಾತಿ ಗಣತಿ” ಸಮೀಕ್ಷೆಯು ರಾಜ್ಯ ರಾಜಕಾರಣದಲ್ಲಿ ಚುನಾವಣಾ ಲೆಕ್ಕಾಚಾರದ ಮಹತ್ವವನ್ನು ಹೆಚ್ಚಿಸಿದೆ.

ಹಿಂದುಳಿದ ವರ್ಗಗಳ ಆಯೋಗದಿಂದ ಕಾಂತರಾಜು ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಆಯಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಅಂಕಿ-ಅಂಶಗಳು ಈಗಾಗಲೇ ಸೋರಿಕೆ ಆಗಿದ್ದು ಅವುಗಳಲ್ಲಿ ಅನೇಕ ವರ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಗದೆ ಅನ್ಯಾಯಕ್ಕೆ ಒಳಗಾದ ಜಾತಿ/ಸಮುದಾಯಗಳ ಕಣ್ಣು ತೆರೆಸಿದೆ, ಸೋರಿಕೆಯಾದ ಅಂಕಿ ಅಂಶಗಳ ಪ್ರಕಾರ ದಲಿತರು ಅತೀ ದೊಡ್ಡ ಸಮುದಾಯವಾಗಿ, ಮುಸ್ಲಿಮರು ಎರಡನೇ ದೊಡ್ಡ ಸಮುದಾಯವಾಗಿ ಕ್ರಮೇಣವಾಗಿ ಲಿಂಗಾಯತರು ಮತ್ತು ಒಕ್ಕಲಿಗರು ಸ್ಥಾನ ಪಡೆದರೆ ತದನಂತರದಲ್ಲಿ ಹಿಂದುಳಿದ ಜಾತಿಗಳಲ್ಲಿ ಕುರುಬ ಸಮುದಾಯವಿದೆ, ಈ ಅಂಕಿ-ಸಂಖ್ಯೆಗಳು ರಾಜಕೀಯ ವಲಯದಲ್ಲಿ ಅನೇಕ ವೈರುಧ್ಯಗಳ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ, ಪ್ರಭುತ್ವವು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಆಡಳಿತ ನಡೆಸದೆ ಪ್ರಬಲ ಜಾತಿಗಳ ಓಲೈಕೆಯಲ್ಲಿಯೇ ಕಾಲ ಕಳೆದಿರುವುದು ಬೆಳಕಿಗೆ ಬಂದಿದೆ, ಈ ಸಂದರ್ಭದಲ್ಲಿ ಅನ್ಯಾಯಕ್ಕೆ ಒಳಗಾದ ತಳ ಸಮುದಾಯಗಳು ತಮ್ಮ ಹಕ್ಕಿಗಾಗಿ ಸರ್ಕಾರದ ಮೇಲೆ ಯಾವುದೇ ಒತ್ತಡ ಹೇರುತ್ತಿಲ್ಲ ಎಂಬುದು ವಿಪರ್ಯಾಸ, ಇನ್ನೊಂದೆಡೆ, ಎರಡು ಪ್ರಬಲ ಜಾತಿಗಳು, ಸಮೀಕ್ಷೆಯು ಕೆಲವು ಲೋಪದೋಷಗಳಿಂದ ಕೂಡಿದೆ ಮತ್ತು ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿಲ್ಲ ಎಂಬ ಆರೋಪವನ್ನು ನೀಡಿ ‘ಜಾತಿ ಗಣತಿ’ಯನ್ನು ಬಿಡುಗಡೆಗೊಳಿಸದಂತೆ ಒತ್ತಡ ತರುತ್ತಿವೆ.

ಸುಮಾರು ಒಂದು ದಶಕದ ಹಿಂದೆ ನಡೆದ ‘ಜಾತಿ ಗಣತಿ’ಯ ಫಲಿತಾಂಶಗಳನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ, 2015 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯೋಜಿಸಿದ ಸಮೀಕ್ಷೆಯು ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಯೋಜನಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ, ಆದರೆ ರಾಜಕೀಯ ಶಕ್ತಿ ಕಳೆದುಕೊಳ್ಳುವ ಭೀತಿಯಲ್ಲಿರುವ ಕೆಲವು ಪ್ರಬಲ ಸಮುದಾಯಗಳು ಈ ವರದಿಯನ್ನು ಜಾರಿಗೊಳಿಸದಂತೆ ರಾಜಕೀಯ ವಿರೋಧ ವ್ಯಕ್ತವಾದ ಕಾರಣಗಳಿಂದ ವರದಿಯ ಬಿಡುಗಡೆ ವಿಳಂಬವಾಗಿದೆ ಎಂಬುದು ವಿಪರ್ಯಾಸ, ಸೋರಿಕೆಯಾದ ವರದಿಯ ಅಂಕಿ-ಅಂಶಗಳು ರಾಜ್ಯದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಸಂಖ್ಯಾತ್ಮಕವಾಗಿ ಪ್ರಬಲ ಜಾತಿಗಳು ಎಂಬ ಜನಪ್ರಿಯ ನಿರೂಪಣೆಯನ್ನು ಪ್ರಶ್ನಿಸಿವೆ, ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸರ್ಕಾರ ವಾಗ್ದಾನ ಮಾಡಿದ್ದು, ಅದು ಆದಷ್ಟು ಬೇಗ ಸಾಕಾರಗೊಳ್ಳಬೇಕಿದೆ.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆದಿರುವ ಜಾತಿಗಳ ಧಾರ್ಮಿಕ ಮುಖಂಡರು ಮತ್ತು ರಾಜಕೀಯ ನಾಯಕರು ಪ್ರಸ್ತುತ ‘ಜಾತಿ ಗಣತಿ’ಯನ್ನು ಒಪ್ಪದೇ ಇಲ್ಲಸಲ್ಲದ ಆರೋಪಗಳನ್ನು ಮುಂದಿಟ್ಟು ಸಾಮಾಜಿಕ ನ್ಯಾಯವನ್ನು ತಿರಸ್ಕರಿಸುತ್ತಿದ್ದಾರೆ, ಈ ನಡೆಯು ಬಲಿತ ಜಾತಿಗಳೇ ಇನ್ನಷ್ಟೂ ಬೆಳೆಯಬೇಕು ಹಿಂದುಳಿದ ಜಾತಿ/ವರ್ಗಗಳು ಹಿಂದುಳಿಯುವಿಕೆಯನ್ನು ಮುಂದುವರೆಸಲು ಪರೋಕ್ಷವಾಗಿ ಬಯಸಿದಂತಿದೆ.

ಜನಪ್ರತಿನಿಧಿಯಾಗಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯುತ್ತೇನೆ ಎಂಬ ಪ್ರಮಾಣ ವಚನ ಮಾಡಿದ ಶಾಸಕ, ಸಚಿವರು ಸಂವಿಧಾನದ ಆಶಯವಾದ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎನ್ನುವ ಸಾಮಾಜಿಕ ನ್ಯಾಯದ ಮೌಲ್ಯವನ್ನು ಜಾರಿಗೊಳಿಸುವ ಬದ್ಧತೆ ಹೊಂದಿರಬೇಕಾದ ಜನಪ್ರತಿನಿಧಿಗಳು ತಮ್ಮ-ತಮ್ಮ ಜಾತಿಗಳ ಹಿತವನ್ನು ಕಾಪಾಡಲು ಮಾತ್ರ ಬದ್ದ ಎಂಬ ಸ್ವಜನಪಕ್ಷಪಾತದ ಸಂದೇಶವನ್ನು ಸಾರಿದ್ದಾರೆ.

ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಿಲುವಷ್ಟೇ ಅಲ್ಲ, ಇತರ ಅನ್ಯಾಯಕ್ಕೆ ಒಳಗಾದ ಸಮುದಾಯಗಳು ಶಾಶ್ವತವಾಗಿ ಹಿಂದುಳಿಯಬೇಕೆನ್ನುವ ಯಜಮಾನಿಕೆಯ ಸಂಕೇತವಾಗಿದೆ.

ಅಖಿಲ ಭಾರತ ವೀರಶೈವ ಮಹಾಸಭಾವು ಜಾತಿ ಗಣತಿಯನ್ನು ಬಿಡುಗಡೆಗೊಳಿಸಬಾರದು ಎಂಬ ನಿರ್ಧಾರವನ್ನು ಕೈಗೊಂಡಿದೆ ಎಂದು ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಸರ್ಕಾರಕ್ಕೆ ತಮ್ಮ ಆಗ್ರಹವನ್ನು ಸಲ್ಲಿಸುವುದಾಗಿ ತಿಳಿಸಿರುವುದು ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರ ಆಶಯಗಳಿಗೆ ವಿರುದ್ಧವಾದ ತಿರ್ಮಾನವಾಗಿದೆ.

ಇನ್ನೊಂದೆಡೆ ರಾಜ್ಯ ಒಕ್ಕಲಿಗರ ಸಂಘವು ನಡೆಸಿದ ಸಭೆಯಲ್ಲಿ ಸಮುದಾಯದ ಸ್ವಾಮಿಗಳು ಮತ್ತು ಶಾಸಕರು ಹಾಗೂ ರಾಜಕೀಯ ಮುಖಂಡರು “ಜಾತಿ ಗಣತಿ”ಯ ವರದಿಯನ್ನು ಸರ್ಕಾರ ಒಪ್ಪಕೂಡದು ಎಂಬ ಆಗ್ರಹವನ್ನು ವ್ಯಕ್ತಪಡಿಸಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಿರಾಕರಿಸಿದಂತಾಗಿದೆ‌.

ಅನೇಕ ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಜಾತಿಗಳು ತಮ್ಮ ರಾಜಕೀಯ ಹಿಡಿತವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಸಾಮಾಜಿಕ ನ್ಯಾಯದ ಆಶಯವನ್ನು ಸಾಕಾರಗೊಳಿಸುವ ‘ಜಾತಿ ಗಣತಿ’ ಸಮೀಕ್ಷೆ ವರದಿಯನ್ನು ನಿರಾಕರಿಸುವುದು ಕರ್ನಾಟಕದ ಸಾಮಾಜಿಕ ನ್ಯಾಯದ ಪರಂಪರೆಗೆ ವಿರುದ್ಧವಾದುದಾಗಿದೆ.

LEAVE A REPLY

Please enter your comment!
Please enter your name here