ಸಂಪಾದಕೀಯ – ಸಂಪಾದಕರು “ಇಂಕ್ ಡಬ್ಬಿ”.

ಕನ್ನಡ ನಾಡು, ನುಡಿಗಾಗಿ ಹಲವು ಮಹನೀಯರು ತಮ್ಮ ಬದುಕಿನ ಅಮೂಲ್ಯ ಸಮಯವನ್ನು ವಿನಿಯೋಗಿಸಿದ್ದಾರೆ, ಆದರೆ ಕನ್ನಡ ನಾಡಿನ ನೆಲಕ್ಕಾಗಿ ಪ್ರಾಣತೆತ್ತ ವ್ಯಕ್ತಿ ಸಿಗುವುದು ವಿರಳ.

ಕರುನಾಡಿನ ಹೆಮ್ಮೆಯ ರಾಜ ಪರಂಪರೆ ವಿಜಯನಗರ ಸಾಮ್ರಾಜ್ಯವು ಬಳ್ಳಾರಿ ಜಿಲ್ಲೆಯಲ್ಲಿರುವ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು, ಇಂತಹ ಐತಿಹಾಸಿಕ ಕನ್ನಡದ ಪ್ರಾತಿನಿಧ್ಯ ವಹಿಸುತ್ತಿದ್ದ ಬಳ್ಳಾರಿ ಜಿಲ್ಲೆಯು ಆಂಧ್ರಕ್ಕೆ ಸೇರಬೇಕು ಎಂದು ತೆಲುಗು ಭಾಷಿಕರು ಒತ್ತಡ ಹೇರುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಪ್ರಾಂತ್ಯವಾರು ಪ್ರದೇಶಗಳನ್ನು ಭಾಷಾ ಆಧಾರದಲ್ಲಿ ರಾಜ್ಯಗಳನ್ನಾಗಿ ಸ್ಥಾಪಿಸಲಾಗುತ್ತಿತ್ತು, ಈ ಸಂದರ್ಭದಲ್ಲಿ ನಾಡಿನಾದ್ಯಂತ ಕರ್ನಾಟಕ ಏಕೀಕರಣ ಹೋರಾಟ ಜೋರಾಗಿತ್ತು, ಹರಿದು ಹಂಚಿ ಹೋಗಿದ್ದ ಕನ್ನಡಿಗರೆಲ್ಲರನ್ನೂ ಒಗ್ಗೂಡಿಸುವ ಕೈಂಕರ್ಯ ನಡೆಯುತ್ತಿತ್ತು, ಆಗ ಕನ್ನಡದ ಕಟ್ಟಾಳುಗಳಿಂದ ಜನರನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಿತ್ತು.

ಕರ್ನಾಟಕದಲ್ಲೆಲ್ಲ ನಡೆಯುತ್ತಿದ್ದ ಏಕೀಕರಣ ಹೋರಾಟಕ್ಕೆ ಮೊದಲ ವಿಜಯ ಪತಾಕೆ ಹಾರಿದ್ದು ಬಳ್ಳಾರಿಯಲ್ಲಿ, ಅಂದಿನ ಕೇಂದ್ರ ಸರ್ಕಾರ ಮದ್ರಾಸ್ ಪ್ರಾಂತ್ಯದಲ್ಲಿದ್ದ ಬಳ್ಳಾರಿಯನ್ನು ಮೈಸೂರು ರಾಜ್ಯಕ್ಕೆ ವಿಲೀನಗೊಳಿಸಿತು, 1953ರ ಅಕ್ಟೋಬರ್ 1 ನೇ ತಾರೀಖಿನಂದು ಬಳ್ಳಾರಿ ಜಿಲ್ಲೆಯು ಅಧಿಕೃತವಾಗಿ ಮೈಸೂರು ಸಂಸ್ಥಾನಕ್ಕೆ ಸೇರಿತು, ಅದು ಏಕೀಕರಣ ಹೋರಾಟದ ಮೊದಲ ಜಯ.

1925ರಲ್ಲಿ ಬಳ್ಳಾರಿಯಲ್ಲಿ ಪ್ರಥಮ ನಾಡಹಬ್ಬ ನಡೆಯಿತು, ನಾಡಹಬ್ಬವು ಏಕೀಕರಣ ಹೋರಾಟಕ್ಕೆ ಸ್ಪೂರ್ತಿ ತುಂಬಿತು, ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ಚಳುವಳಿಯಲ್ಲಿ ಸಂಘರ್ಷದಲ್ಲಿ 1400 ಜನರು ಜೈಲಿಗೆ ಹೋದರು, ಅವರಲ್ಲಿ ಕೋ.ಚೆನ್ನಬಸಪ್ಪ ಜೊತೆಗೆ ರಂಜಾನಸಾಬ ಕೂಡ ಇದ್ದರು. 1952 ರಲ್ಲಿ ‘ಬಳ್ಳಾರಿ ಜಿಲ್ಲಾ ಕ್ರಿಯಾ ಸಮಿತಿ’ ಹುಟ್ಟಿತು, ಜಂತಕಲ್ ಗಾದಿ ಲಿಂಗಪ್ಪನವರು ಅಧ್ಯಕ್ಷರು, ಕೋ.ಚೆನ್ನಬಸಪ್ಪ ಕಾರ್ಯದರ್ಶಿ, ಅಬ್ದುಲ್ ರಜಾಕ್ ಖಜಾಂಚಿ, ರಂಜಾನಸಾಬ ಪ್ರಧಾನ ಸಂಘಟಕ.

ರಂಜಾನಸಾಬರು ಏಕೀಕರಣ ಹೋರಾಟಕ್ಕೆ ಹಮಾಲರನ್ನು, ಜಟಕಾ ಹೊಡೆಯುವವರನ್ನು ಹಾಗೂ ಎಲ್ಲ ದುಡಿಯುವ ವರ್ಗಗಳನ್ನು ಒಗ್ಗೂಡಿಸಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದರು, ರಂಜಾನಸಾಬರ ಮೇಲೆ ತೆಲುಗು ಭಾಷಿಕರು ಕತ್ತಿ ಮಸೆಯುತ್ತಿದ್ದರು, ಒಂದು ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ ಮಾಡಿಸಿ ಮನವಿ ಜೊತೆಗೆ ಸಂಸದರಾದ ಅಳವಂಡಿ ಶಿವಮೂರ್ತಿ ಸ್ವಾಮೀಜಿ ಅವರ ಮೂಲಕ ಸಂಸತ್ತಿಗೆ ರವಾನಿಸಲಾಯಿತು, ಆಂದ್ರದ ಸ್ಥಾಪನೆ ಬಳಿಕ 1953ರ ಅಕ್ಟೋಬರ್ 1 ರಂದು ಏಳು ತಾಲೂಕುಗಳೊಟ್ಟಿಗೆ ಬಳ್ಳಾರಿ ಮೈಸೂರು ರಾಜ್ಯಕ್ಕೆ ಸೇರಿತು. ಮರುದಿನವೇ ಸಂಭ್ರಮಾಚರಣೆ ಆಚರಿಸಲು ಭರದ ಸಿದ್ಧತೆ ನಡೆದಿತ್ತು, ಸಭಾಮಂಟಪದ ಜವಾಬ್ದಾರಿ ರಂಜಾನಸಾಬರಿಗೆ ವಹಿಸಲಾಗಿತ್ತು.

ಗರಡಿ ಮನೆಯಲ್ಲಿ ಹಲವು ಪೈಲ್ವಾನರನ್ನ ಮಣ್ಣು ಮುಕ್ಕಿಸಿದ ರಂಜಾನ್ ಸಾಬ್ ಮೈದಾನದ ಹೊರಗೂ ಕನ್ನಡ ವಿರೋಧಿಗಳಿಗೆ ಸಿಂಹ ಸ್ವಪ್ನವಾಗಿದ್ದರೂ.

ಬಳ್ಳಾರಿಯಾದ್ಯಂತ ಜನಾಭಿಪ್ರಾಯ ಮೂಡಿಸುವ ಕೆಲಸದ ಮುಂದಾಳತ್ವ ವಹಿಸಿದ್ದ ಪ್ರಧಾನ ಸಂಘಟಕರಾಗಿದ್ದ ರಂಜಾನಸಾಬರು ಅನ್ಯ ಭಾಷಿಕರ ದ್ವೇಷ, ಸಿಟ್ಟಿಗೆ ಗುರಿಯಾಗಿದ್ದರು, ಬಳ್ಳಾರಿಯ ಬಿಡಿಎಎ ಮೈದಾನದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ರಾಜ್ಯದ ಪ್ರಮುಖ ಗಣ್ಯರು ಈ ಸಂಭ್ರಮವನ್ನು ಆಚರಿಸಲು ಬಳ್ಳಾರಿಗೆ ಆಗಮಿಸುತ್ತಿದ್ದರು, ಈ ಸಂಭ್ರಮದ ಘಳಿಗೆಯನ್ನು ಏನಾದರೂ ಮಾಡಿ ವಿಕೃತಿ ಮೆರೆಯಬೇಕೆಂದು ಕೆಲವು ಅನ್ಯಭಾಷಿಕ ಪುಂಡರು ಹೊಂಚು ಹಾಕಿದ್ದರು, ಈ ವಿಷಯ ತಿಳಿದಿದ್ದ ರಂಜಾನ್ ಸಾಬರು ಸಮಾವೇಶದ ಸಭಾಮಂಟಪ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ರಾತ್ರಿಯಿಡೀ ಅಲ್ಲಿಯೇ ಉಳಿದುಕೊಂಡರು, ಮಧ್ಯರಾತ್ರಿ ಹೊಂಚು ಹಾಕಿ ಕಾದಿದ್ದ ದುಷ್ಕರ್ಮಿಗಳು ದಿಢೀರನೆ ಸಭಾಮಂಟಪವನ್ನು ಕೆಡಿಸಲು ಪ್ರಯತ್ನಿಸಿದಾಗ ಅಲ್ಲಿಯೇ ಇದ್ದ ಪೈಲ್ವಾನ್ ರಂಜಾನಸಾಬರು ಅವರ ಮೇಲೆ ಎರಗಿ ಬಿದ್ದರು, ದುಷ್ಕರ್ಮಿಗಳು ಬಲ್ಬಿನಲ್ಲಿ ತುಂಬಿಕೊಂಡಿದ್ದ ಆಸಿಡ್ ಅನ್ನು ಅವರ ಮೇಲೆ ದಾಳಿ ನಡೆಸಿದರು ಗಾಯಗೊಂಡರು ಛಲಬೀಡದೆ ಅವರೊಂದಿಗೆ ಹೋರಾಡಿದರು, ಅರ್ಧ ದೇಹ ಸುಟ್ಟು ಹೋಗಿದ್ದರಿಂದ ಪ್ರಜ್ಞೆ ತಪ್ಪಿ ನೆಲಕ್ಕುರುಳಿದರು ನಂತರ ಆಸ್ಪತ್ರೆಗೆ ದಾಖಲಿಸಿದರು ಆದರೆ ಸೂಕ್ತ ಚಿಕಿತ್ಸೆ ಸಿಗದೆ ಹುತಾತ್ಮರಾದರು.

ಪೈಲ್ವಾನ್ ರಂಜಾನ್ ಸಾಬ್ ಪಿಂಜಾರರು ತನ್ನ ನಾಡಿನ ನೆಲದ ಅಸ್ಮಿತೆಗಾಗಿ ಮಡಿದು ಕನ್ನಡತನಕ್ಕೆ ಹೆಮ್ಮೆಯ ಕಿರೀಟವಾದರು. ರಂಜಾನ್ ಸಾಬ್ ಅವರ ಕನ್ನಡ ಪ್ರೇಮ, ನಾಡಿನ ಬಗೆಗಿದ್ದ ಅಭಿಮಾನ ಇಡೀ ನಾಡಿನ ಜನತೆಗೆ ಸ್ಪೂರ್ತಿಯ ಚಿಲುಮೆಯಾಗಿದೆ.

ಅವರ ಪ್ರಾಣವು ನಿರರ್ಥಕವಾಗದೆ ಸಾರ್ಥಕವಾಗಬೇಕಾದರೆ ಕನ್ನಡಿಗರೆಲ್ಲ, ಈ ಮಣ್ಣಿನ ಗುಣಗಳಾದ ಶೌರ್ಯ, ತ್ಯಾಗ ಮತ್ತು ಬಹುತ್ವ ಪರಂಪರೆಯನ್ನು ಜೀವಂತವಾಗಿಡಲು ಶ್ರಮಿಸುವ ಮೂಲಕ ಕನ್ನಡತನವನ್ನು ಮತ್ತೆ ನಮ್ಮಲ್ಲಿ ಜಾಗೃತಗೊಳಿಸಿಕೊಳ್ಳಬೇಕಾಗಿದೆ.

ಏಕೀಕರಣಕ್ಕಾಗಿ ಹುತಾತ್ಮರಾದ ಏಕೈಕ ವ್ಯಕ್ತಿ ರಂಜಾನ್ ಸಾಬರ ಬಗ್ಗೆ ಕನ್ನಡಿಗರಿಗೆ ಅಷ್ಟೇನೂ ಪರಿಚಯವಿಲ್ಲ, ಬಹುತೇಕ ಕನ್ನಡಿಗರಿಗೆ ಇವರ ತ್ಯಾಗದ ಬಗ್ಗೆ ಅರಿವೇಯೇ ಇಲ್ಲ, ಎನ್ನುವುದು ಬಹಳ ವಿಪರ್ಯಾಸದ ಸಂಗತಿ, ಅವರ ಕೆಚ್ಚೆದೆಯ ಕನ್ನಡ ಪ್ರೇಮವನ್ನು ವಿದ್ಯಾರ್ಥಿ-ಯುವಜನತೆಗೆ ಹೆಚ್ಚು ಪರಿಚಯಿಸುವ ಕೆಲಸ ಆಗಬೇಕಾಗಿದೆ ಈ ನಿಟ್ಟಿನಲ್ಲಿ ಕನ್ನಡಿಗರಿಂದ ಆಯ್ಕೆಯಾದ ರಾಜ್ಯ ಸರ್ಕಾರ ತನ್ನ ಕನ್ನಡತನದ ಕರ್ತವ್ಯವನ್ನು ನಿಭಾಯಿಸಬೇಕಿದೆ.

ನಮ್ಮನ್ನಾಳುವ ರಾಜಕೀಯ ಪಕ್ಷಗಳು ಒಡೆದಾಳುವ ನೀತಿಯಿಂದ ಕನ್ನಡ ನಾಡನ್ನು ತನ್ನ ಮೂಲ ಒಳಗೊಳ್ಳುವಿಕೆಯಿಂದ ದೂರ ಸುರಿಯುವಂತೆ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ನಾಡನ್ನು ಕಟ್ಟಲು ಶ್ರಮಿಸಿದ ಮಹನೀಯರಿಗೆ ನಿಜವಾದ ಗೌರವ ಸಲ್ಲಬೇಕು.

ವಿವಿಧ ಸಣ್ಣ ಪುಟ್ಟ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕರುನಾಡು ಏಕೀಕರಣಗೊಂಡು ಅಖಂಡ ಕರ್ನಾಟಕವಾಗಿದ್ದರ ಹಿಂದೆ ರಂಜಾನ್ ಸಾಬ್ ಅವರಂತಹ ಅಪ್ಪಟ ಕನ್ನಡಿಗರ ತ್ಯಾಗ, ಬಲಿದಾನದ ಶ್ರಮವಿದೆ. ಕರ್ನಾಟಕ ನಾಮಕರಣವಾಗಿ ಐವತ್ತು ವರ್ಷಗಳು ಸಂದಿರುವ ಶುಭ ಘಳಿಗೆಯಲ್ಲಿ ಇವರನ್ನು ನೆನೆಯದಿದ್ದರೆ ಕನ್ನಡಿಗರ ಸಂಭ್ರಮ ಅರ್ಥಪೂರ್ಣವಾಗುವುದಿಲ್ಲ.

LEAVE A REPLY

Please enter your comment!
Please enter your name here