ವಿಶೇಷ ಲೇಖನ

  • ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

ಅದು ಸಾಗರದ ನಡುವೆ ಮೈ ಚೆಲ್ಲಿ ಮಲಗಿರುವ ಅಂಗೈ ಅಗಲದ ಪುಟ್ಟ ಭೂಮಿ. ಮೇಲೆ‌ನೀಲಾಕಾಶ. ಸುತ್ತಲೂ ಅದರದೇ‌ ಪ್ರತಿಬಿಂಬವನ್ನು ಹೊತ್ತಿರುವ ಜಲಧಿ. ಇಂತಹ ಸೊಬಗಿನ ನೆಲ ಕಳೆದ ಎರಡು ವಾರಗಳಿಂದ ದೇಶದಾದ್ಯಂತ ಸುದ್ದಿಯಲ್ಲಿದೆ. ದೇಶದ ಆಳ-ಅಗಲಕ್ಕೆ ವ್ಯಾಪಿಸಿರುವ ರಾಜಕೀಯ ಅರಾಜಕತೆ ಕಡಲ ನಡುವಿನ ಈ ತುಂಡು ಭೂಮಿಗೂ ವಕ್ಕರಿಸಿದೆ. ಸರಕಾರದ ಉಡಾಳ ನೀತಿಗೆ ದ್ವೀಪದ ಮಡಿಲು, ಅಲ್ಲಿನ ಜನರ ಒಡಲು ಎರಡೂ ಉಡುಗಿ ಹೋಗುತ್ತಿದೆ. ಅಲ್ಲಿ ಅಭಧ್ರತೆ ಮನೆಮಾಡಿದೆ. ಸ್ವಾಸ್ಥ್ಯ, ನೆಮ್ಮದಿ ಕದಡಿ ಹೋಗಿದೆ. ಜನ ಜೀವನ ಸಂತುಲಿತತೆ ಕಳೆದುಕೊಂಡಿದೆ. ಅಲ್ಲಿನ ವಿದ್ಯಮಾನ ಗಮನಿಸಿದರೆ ನೀರಮೇಲಿನ ಸ್ವರ್ಗ ಸದ್ಯದಲ್ಲೇ ನರಕ ಯಾತನೆ ಅನುಭವಿಸಲಿದೆಯೋ ಎಂಬ ಆತಂಕ ಮೂಡುತ್ತಿದೆ.

ಹಾಗೆ ನೋಡಿದರೆ ಈ ಪುಟ್ಟ ಧರೆಗೆ ಗಂಡಾಂತರ ಅನ್ನೋದು ಅಪರಿಚಿತವಲ್ಲ. ಶತಮಾನಗಳಿಂದ ಅದು ದಬ್ಬಾಳಿಕೆಯ ಯಾತನೆ, ದಾಳಿಯ ನೋವು, ಪರಾಧೀನತೆಯ ಸಂಕಟವನ್ನು ಅನುಭವಿಸಿದೆ. ಅಲೆಗಳ ಹೊಡೆತ ಬಿದ್ದಂತೆ ವಿನ್ಯಾಸಗೊಳ್ಳುತ್ತಾ ಹೋದ ದ್ವೀಪ ಪ್ರಭುತ್ವದ ಹೊಡೆತ ತಿಂದು ಅನೇಕ ಬಾರಿ ವಿರೂಪಗೊಂಡಿದೆ. ಹೆದ್ದೆರೆಗೆ ಎದೆ ಸೆಟೆದು ನಿಂತ ಈ ನೆಲ ಆಳ್ವಿಕೆಯ ಅಟ್ಟಹಾಸದ ಮುಂದೆ ಅಪ್ಪಟ ಅಸಹಾಯಕ. ಅದಕ್ಕೆ ಕಾರಣ ಇಲ್ಲಿನ ಆಳ್ವಿಕೆಯ ಚುಕ್ಕಾಣಿ ಈ ನೆಲ ಮೂಲದವರಲ್ಲಿ ಇಲ್ಲದೇ ಹೋದದ್ದು.

ಕ್ರಿ.ಪೂ 10ರ ಪೂರ್ವದಲ್ಲೇ ಇಂದಿನ ಸ್ವರೂಪದಲ್ಲಿ ದ್ವೀಪಗಳು ಮೈದಾಳಿ ನಿಂತಿರುವುದಾಗಿ ಹೇಳಲಾಗುತ್ತದೆ. ಕ್ರಿ.ಪೂ 2500-500ರ ನಡುವೆ ಫಿನೀಶ್ಯನ್ನರು, ಸವಾಯಿಯ್ಯನ್ನರು, ಅರಬರು ಲಕ್ಷದ್ವೀಪವನ್ನು ದಾಟುವ ಮೂಲಕ ಮೆಸರಿಸ್‌ಗೆ ಸಮುದ್ರ ಯಾನ ನಡೆಸುತ್ತಿದ್ದರು. ಇವರು ಬಳಸಲ್ಪಟ್ಟ ಮಣ್ಣಿನ ಪಾತ್ರೆಗಳು ಕಲ್ಪೇನಿ ದ್ವೀಪದಿಂದ ಪತ್ತೆಯಾಗಿದ್ದು ಇದು ಆಜುಬಾಜು ಕ್ರಿ.ಪೂ 500ರದ್ದೆಂದು ಊಹಿಸಲಾಗಿದೆ. ಕ್ರಿ.ಪೂ 200 ರಿಂದ 50ರ ತನಕ ಮಲಬಾರ್ ಜತೆ ವಾಣಿಜ್ಯ ಸಂಬಂಧ ಹೊಂದಿದ್ದ ರೋಮನ್ನರು ಈ ದ್ವೀಪವನ್ನು ಪ್ರವೇಶಿಸಿಯೇ ಯಾನ ಕೈಗೊಳ್ಳುತ್ತಿದ್ದರು. 1948ರಲ್ಲಿ ಕಡವತ್ತಿ ದ್ವೀಪದಲ್ಲಿ ದೊರೆತ ಕ್ರಿ.ಶ ಒಂದನೇ ಶತಮಾನದ ರೋಮನ್ ನಾಣ್ಯಗಳು ಇದಕ್ಕೆ ಸ್ಪಷ್ಟ ಪುರಾವೆಯಾಗಿತ್ತು.

ಅರಬಿ ನಾವಿಕರು ಈ ದ್ವೀಪವನ್ನು ದಿವೀಸ್ ಅಥವಾ ದಿವಜಾಅ ಎಂದೂ ಡಚ್ಚನ್ನರು ಲಕ್ಕರ್ ದಿವಾ ಎಂದೂ ಕರೆದರು. ಆದ್ದರಿಂದ ಆ ಪೈಕಿ ಒಂದು ದ್ವೀಪಕ್ಕೆ ಲಕಡೀವ್ ಎಂಬ ಹೆಸರು ಬಂದಿತ್ತು. ಮೊಟ್ಟ ಮೊದಲ ಬಾರಿಗೆ ದ್ವೀಪ ಸೇರಿದ ಜನರು ಇಲ್ಲಿದ್ದ ಅನೇಕ ದ್ವೀಪಗಳನ್ನು ಕಂಡು ಇಲ್ಲಿ ‘ಲಕ್ಷ’ದ್ವೀಪಗಳಿವೆಯೆಂದು ಭಾವಿಸಿದ್ದರಿಂದ ಆ ಹೆಸರು ಬರಲು ಕಾರಣವೆಂದು ಹೇಳಲಾಗುತ್ತದೆ. ಲಕ್ಷ್ಯವಿಟ್ಟು(ಗುರಿ) ಸಾಗುವ ಮಧ್ಯೆ ಈ ದ್ವೀಪ ಕಂಡದ್ದರಿಂದ ಲಕ್ಷದ್ವೀಪವೆಂಬ ಹೆಸರು ಬಂತೆಂಬ ಪ್ರತೀತಿಯೂ ಇದೆ.

ಕ್ರಿ.ಶ 90ರಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ರಚಿಸಿದ, ಭೌಗೋಳಿಕತೆಯನ್ನು ಮತ್ತು ನಾವಿಕರ ಅನುಭವವನ್ನು ವಿವರಿಸುವ ಕೃತಿಯಾಗಿತ್ತು ಮೊಟ್ಟ ಮೊದಲ‌ಬಾರಿಗೆ ಲಕ್ಷದ್ವೀಪದ ಬಗ್ಗೆ ಬೆಳಕು ಚೆಲ್ಲಿದ್ದು. ಟೋಳಮಿ ತನ್ನ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಯಲ್ಲೂ ಲಕ್ಷದ್ವೀಪದ ಬಗ್ಗೆ ಉಲ್ಲೇಖಿಸಿದ್ದ. ಆಮ್ಯಾನಸ್, ಫಾಹಿಮಾನ್, ಕೋಸ್ಮೋಸ್, ಇಬ್ನು ಬತೂತ ಮುಂತಾದ ವಿಶ್ವವಿಖ್ಯಾತ ಸಂಚಾರಿಗಳು ಮತ್ತು ಇತಿಹಾಸಕಾರರು ಈ ದ್ವೀಪದ ಬಗ್ಗೆ ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಕ್ರಿ.ಪೂರ್ವದಲ್ಲೇ ಹಲವು ಸಾಮ್ರಾಜ್ಯ ಶಕ್ತಿಗಳು ದ್ವೀಪ ಪ್ರವೇಶಿಸುತ್ತಿದ್ದರೂ ಇದನ್ನು ಒಂದು ನೆಲೆಯನ್ನಾಗಿ ಮಾಡುವ ಉಮೇದು ಅವರಿಗಿರಲಿಲ್ಲ. ಆದ್ದರಿಂದ ಇಲ್ಲಿ ಯಾವಾಗ ಜನವಾಸ ಆರಂಭವಾಯಿತೆಂಬುದರಲ್ಲಿ ಹಲವು ಗೊಂದಲಗಳಿವೆ. ಅದರಲ್ಲೂ ಪ್ರಬಲವಾದ ಎರಡು ಅಭಿಪ್ರಾಯಗಳು ಹೀಗಿವೆ;
1)ಚೇರಮಾನ್ ರಾಜರ ಕಾಲದಲ್ಲಿ.
ಕಾರಣ: ಪೆರುಮಾಳ್ ರಾಜರೊಂದಿಗೆ ಮದೀನಾಗೆ ಹೋದ ತಂಡ ದ್ವೀಪದಲ್ಲಿ ಜನರು ವಾಸಿಸಿರುವುದಾಗಿ ಕಂಡಿದ್ದರೆಂದು ಹೇಳಲಾಗುತ್ತದೆ.
2)ಎರಡು ಪೆರುಮಾಳ್ ರಾಜರ ಮರಣದ ಬಳಿಕ.
ಕಾರಣ: ನೆಬಿ(ಸ)ಮರ ಭೇಟಿಗಾಗಿ ಅರೇಬ್ಯಾಗೆ ತೆರಳಿದ್ದ ಪೆರುಮಾಳ್ ಚಕ್ರವರ್ತಿ ಮರುಳುವ ವೇಳೆ ಇಹಲೋಕ ತ್ಯಜಿಸಿದ್ದರು. ಚಕ್ರವರ್ತಿ ಮರಳದ್ದನ್ನು ಕಾಣದೆ ವಿಹ್ವಲಗೊಂಡ ರಾಜಭವನದ ಪ್ರಮುಖರು ತಲಾಶೆ ನಡೆಸುತ್ತಾ ಸಮುದ್ರ ಯಾನ ನಡೆಸಿದ್ದರು. ಯಾತ್ರೆ ವೇಳೆ ಅಲೆಗಳ ಹೊಡೆತಕ್ಕೆ ಹಡಗು ಧ್ವಂಸವಾದ್ದರಿಂದ ಗತ್ಯಂತರವಿಲ್ಲದೆ ಅವರು ಈ ದ್ವೀಪ ಸೇರಿ ನೆಲೆಸಿದರೆಂದು ಹೇಳಲಾಗುತ್ತದೆ.

ಇಲ್ಲಿಗೆ ಇಸ್ಲಾಂ ಧರ್ಮದ ಆಗಮನವಾದದ್ದು ಏಳನೇ ಶತಮಾನದಲ್ಲಾಗಿತ್ತು. ಕ್ರಿ.ಶ 662ರಲ್ಲಿ ಅಮಿನಿ ಧ್ವೀಪಕ್ಕೆ ಬಂದ ಹಝ್ರತ್ ಉಬೈದುಲ್ಲಾ ಇಬ್ನು ಮುಹಮ್ಮದ್ ಇಸ್ಲಾಮೀ ಧಾರ್ಮಿಕ ಚಳುವಳಿಗೆ ನಾಂದಿ ಹಾಡಿದರು. ಜನರನ್ನು ಇಸ್ಲಾಮಿನೆಡೆಗೆ ಆಹ್ವಾನಿಸಿದ ಉಬೈದುಲ್ಲಾ, ಅಮಿನಿ, ಆಂದ್ರೋತ್, ಕರುವತ್ತಿ, ಕಲ್ಪೇನಿ ಮುಂತಾದೆಡೆ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಹಾಗೆ ಇಸ್ಲಾಂ ಲಕ್ಷದ್ವೀಪದ ಪ್ರಥಮ ಹಾಗೂ ಅಧಿಕೃತ ಧರ್ಮವಾಗಿ ಮಾರ್ಪಟ್ಟಿತು. ರೋಮನ್ನರು, ಪರ್ಶಿಯನ್ನರು, ಅರಬರು ಸಮೇತ ಅನೇಕ ವಿದೇಶಿಗರು ಇಲ್ಲಿಗೆ ಪ್ರವೇಶಿಸಿದ್ದರೂ, ಅವರ ಆಗಮನಕ್ಕೆ ಆಧಿಪತ್ಯದ ಇರಾದೆಯಿರಲಿಲ್ಲ. ಆದರೆ ಕ್ರಿ.ಶ 985ರಲ್ಲಿ ರಾಜಾರಾಜ ಚೋಳ ಎಂಬ ಚೋಳ ದೊರೆ ತನ್ನ ಬೃಹತ್ ಸೇನೆಯೊಂದನ್ನು ಕಳುಹಿಸಿ ದ್ವೀಪಗಳನ್ನು ತನ್ನ ಸುಪರ್ಧಿಗೆ ತೆಗೆದುಕೊಂಡ. ನೀರ‌ಮೇಲೆ ಸ್ವತಂತ್ರವಾಗಿ ಮೈಚೆಲ್ಲಿದ್ದ ದ್ವೀಪಕ್ಕೆ ಆ ಬಳಿಕ ಎದುರಾದದ್ದು‌ ಪರಾಧೀನತೆಯ ಸಂಕಟ. ಕ್ರಿ.ಶ 1050ರಲ್ಲಿ ಚಿರಕ್ಕಲ್ ದೊರೆ ಕೊಲೆತ್ತಿರಿ ರಾಜ, ಮುಹಮ್ಮದ್ ಅಲಿ ಎಂಬ ವ್ಯಕ್ತಿಗೆ ಕಣ್ಣೂರು ಹಾಗೂ ಲಕ್ಷದ್ವೀಪದ ಆಳ್ವಿಕೆಯ ಜವಾಬ್ದಾರಿಯನ್ನು ಕೊಟ್ಟ. 1183ರಲ್ಲಿ ಅರಕ್ಕಲ್ ದೊರೆ ಅಲಿ ಮೂಸಾ(ಐದನೇ ಅಲಿರಾಜ) ಕೊಲೆತ್ತರಿಗಳ ಅಧೀನದಲ್ಲಿದ್ದ ದ್ವೀಪಗಳನ್ನು ಸ್ವಾಯತ್ತ ಪಡಿಸಿ ಅರಕ್ಕಲ್ ಆಳ್ವಿಕೆಯ ಅಧೀನಕ್ಕೆ ತಂದರು. ಆ ಬಳಿಕ ಈ ದ್ವೀಪದ ಮೇಲೆ ಏರಿ ಹೋದ ಚಿರಕ್ಕಲ್‌ ದೊರೆಗಳು ಮತ್ತೆ ತಮ್ಮ ಸುಪರ್ಧಿಗೆ ತೆಗೆದುಕೊಂಡರು.

15 ನೇ ಶತಮಾನದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸರ ಕೆಟ್ಟ ಕಣ್ಣೂ ಈ ಪುಟ್ಟ ದ್ವೀಪದ ಮೇಲೆ ಬೀಳದೆ ಇರಲಿಲ್ಲ. ಪೋರ್ಚುಗೀಸ್ ಪಡೆಯ ವೈಸ್‌ರಾಯ್ ಆಗಿದ್ದ ಅಲ್ ಬುಕರ್ಕ್ ಇಲ್ಲಿನ ನಾನಾದ್ವೀಪಗಳಿಗೆ ಸೈನಿಕರನ್ನು ಕಳುಹಿಸಿದ. ಮಿನಿಕೋಯ್‌ನಲ್ಲಿ ಒಂದು ಬೃಹತ್ ಕೋಟೆಯನ್ನು ನಿರ್ಮಿಸಿದ ಪರಂಗಿಗಳು ಮೆಲ್ಲನೆ ಪ್ರಾಬಲ್ಯವನ್ನು ಸ್ಥಾಪಿಸತೊಡಗಿದರು. ಅಲ್ಲಿನ ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳನ್ನು ದೋಚಲಾರಂಭಿಸಿದರು. ದ್ವೀಪ ನಿವಾಸಿಗಳ ಸೊತ್ತು, ಸಂಪತ್ತನ್ನು ಲೂಟಿಗೈಯ್ಯ ತೊಡಗಿದರು. ಎದುರಿಸಿದವರ ಮೇಲೆ ಕತ್ತಿ ಮಸೆದು ಹತ್ತಿಕ್ಕತೊಡಗಿದರು. ಲಕ್ಷದ್ವೀಪ‌‌ ನಿವಾಸಿಗಳ ಹಡಗು, ದೋಣಿಗಳನ್ನು ಬೆಂಕಿಗಾಹುತಿಗೊಳಿಸಿದರು. ಕೆಂಗೆಟ್ಟ ಜನತೆ ಚಿರತ್ತಿಲ್ ರಾಜನಲ್ಲಿ ನೆರವು ಯಾಚಿಸಿದ್ದರಿಂದ ಕಾದಲ್ ತಂಜಗನ್ ಎಂಬ ವ್ಯಕ್ತಿಯನ್ನು ಲಕ್ಷದ್ವೀಪಕ್ಕೆ ಕಳುಹಿಸಲಾಯಿತು. ಆತ ಹೆಣೆದದ್ದು‌ ಅಮಾತ್ಯ ರಾಕ್ಷಸ ತಂತ್ರ. ಅತ್ಯಂತ ಚಾಣಾಕ್ಷತನದಿಂದ ಪರಂಗಿಗಳೊಂದಿಗೆ ಬಾಂಧವ್ಯ ಸಂಪಾದಿಸಿದ ಆತ ಒಂದು ಆತಿಥ್ಯಕ್ಕೆ ಆಹ್ವಾನಿಸಿ ವಿಷ ಬೆರೆಸಿ ಅಲ್ಲಿದ್ದ ಅಷ್ಟೂ ಪರಂಗಿಗಳನ್ನು ಕೊಂದು ಬಿಟ್ಟ. ಇದರಿಂದ ಒಂದಷ್ಟು ಸಮಯಕ್ಕೆ ನಿಟ್ಟುಸಿರು ಬಿಡುವಂತಾದರೂ 1524ರಲ್ಲಿ ಉಗ್ರ ಶಕ್ತಿಯೊಂದಿಗೆ ಮತ್ತೆ ಮರಳಿದ ಪೋರ್ಚುಗೀಸರು ರಣ ಭೀಕರ ಆಕ್ರಮಣನ್ನೇ ಎಸಗಿದರು. ಪ್ರತಿರೋಧ ಒಡ್ಡಿದ ಊರ ಪ್ರಮುಖರಾದ ಆಟಕ್ಕೋಯ ತಂಙ್ಙಳ್ ಈ ಸಂಘರ್ಷದಲ್ಲಿ ರಕ್ತ ಸಾಕ್ಷಿಯಾದರು. ಇದರಿಂದಾಗಿ ಲಕ್ಷದ್ವೀಪದಲ್ಲಿ ಮತ್ತೆ ಬಿಕ್ಕಟ್ಟು ತಲೆದೋರಿತು. ಅಲ್ಲಿನ ಜನತೆ ಅಭದ್ರತೆಯಿಂದ ತತ್ತರಿಸಿ ಹೋದರು. ತಕ್ಷಣಕ್ಕೆ ಎಚ್ಚೆತ್ತುಕೊಂಡ ಕೊಲತ್ತಿರಿ‌ ರಾಜ 1567ರ ಫೆಬ್ರವರಿ 04ರಂದು ಅಲ್‌ಬುಕರ್ಕ್‌ನೊಂದಿಗೆ ಒಪ್ಪಂದವೊಂದು ನಡೆಸಿದರು. ಒಪ್ಪಂದದಲ್ಲಿ ಅಲ್ ಬುಕರ್ಕ್, ಆಕ್ರಮಣ ನಿಲ್ಲಿಸಬೇಕಿದ್ದರೆ ಪ್ರತಿವರ್ಷ 1000ಕಿಲೋ ಹಗ್ಗವನ್ನು ಕಪ್ಪಕಾಣಿಕೆ‌ ನೀಡಬೇಕೆಂದೂ, ಅದು ದ್ವೀಪ ನಿವಾಸಿಗಳ‌ ಖರ್ಚಿನಲ್ಲೇ ಕೊಚ್ಚಿಗೆ ತಲುಪಿಸಬೇಕೆಂದೂ ಬೇಡಿಕೆ ಮುಂದಿಟ್ಟ. ಅಲ್ಲದೆ ಪೋರ್ಚುಗೀಸರೊಂದಿಗೆ ಯುದ್ದ ನಡೆಸುವವರ ಜತೆ ದ್ವೀಪ ನಿವಾಸಿಗಳು ಕ್ರಯ-ವಿಕ್ರಯ ನಡೆಸಬಾರದೆಂಬ, ತಮ್ಮ ಅನುಮತಿಯಿಲ್ಲದೆ ದ್ವೀಪದ ಜನರ ಹಡಗುಗಳು ಸಂಚರಿಸಬಾರದೆಂಬ ಷರತ್ತನ್ನೊಳಗೊಂಡ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆದರೆ ಒಪ್ಪಂದವನ್ನು‌ ಉಲ್ಲಂಘಿಸಿದ ಪೋರ್ಚಗೀಸರು 1588ರಲ್ಲಿ ಅಮಿನಿ ಹಾಗೂ ಚೆತ್ಲಾತ್ ದ್ವೀಪದ ಮೇಲೆ ಆಕ್ರಮಣ ನಡೆಸಿದರು. ಈ ತಿಕ್ಕಾಟದಲ್ಲಿ ಅನೇಕ ಮುಸ್ಲಿಮರು ಪ್ರಾಣಕಳೆದುಕೊಂಡರು. ಉಳಿದವರನ್ನು ಬಂಧನದಲ್ಲಿರಿಸಿ ಚಿತ್ರ ಹಿಂಸೆ ನೀಡಲಾಯಿತು. ಅದೇ ವರ್ಷದಲ್ಲಿ ಚೆತ್‌ಲಾತ್ ದ್ವೀಪದಲ್ಲಿ ಪೋರ್ಚುಗೀಸ್ ಗೂಢಾಚಾರನೊಬ್ಬನನ್ನು ಕೊಂದಿದ್ದ ಆಸ್‌ ಅಲಿ ಎಂಬ ವಿಧ್ವಾಂಸರೊಬ್ಬರನ್ನು ವಧಿಸಿದರು. 1568ರಲ್ಲಿ ಕಣ್ಣೂರು, ಮಂಗಳೂರು ಮುಂತಾದ ಕರಾವಳಿ ಭಾಗದಲ್ಲಿ ಕುಞಾಲಿ ಮರಕ್ಕಾರ್ ಸಾರಥ್ಯದ ಸೇನೆಯಿಂದ ತೀವ್ರಥರದ ಪ್ರತಿರೋಧ ಎದುರಿಸಿದ ಪೋರ್ಚುಗೀಸರಿಗೆ ಬಲಭಂಗವುಂಟಾಯಿತು. ಇದೇ ಸಮಯಕ್ಕೆ ಕೊಲತ್ತಿರಿ ರಾಜನ ನಿರ್ದೇಶನದಂತೆ ಕುಟ್ಟಿ ಪೋಕರ್ ಸಾರಥ್ಯದ ಶಸ್ತ್ರ ಸಜ್ಜಿತ ಸೇನಾಪಡೆ ಆರು ಹಡಗುಗಳಲ್ಲಿ ಕಣ್ಣೂರಿನಿಂದ ಹೊರಟಿತು. ಇದರಿಂದ ವಿಚಲಿತರಾದ ಪೋರ್ಚುಗೀಸರು ಲಕ್ಷದ್ವೀಪದಿಂದ ಕಾಲ್ಕಿತ್ತರು.

ಆ ಬಳಿಕ ಲಕ್ಷದ್ವೀಪವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಅರಕ್ಕಲ್ ದೊರೆಗಳು ದ್ವೀಪದ ಉತ್ಪನ್ನ ಹಾಗೂ ಸರಕುಗಳನ್ನು ಅರಕ್ಕಲ್ ಪ್ರತಿನಿಧಿಗಳ ಮೂಲಕವಷ್ಟೇ ಮಾರಬೇಕೆಂಬ ನಿಬಂಧನೆಯನ್ನು ವಿಧಿಸಿದರು. ದ್ವೀಪೋತ್ಪನ್ನಗಳ ಕ್ರಯ-ವಿಕ್ರಯಗಳಿಂದಾಗಿ ಅರಕ್ಕಲ್ ಆಳ್ವಿಕೆಗೆ ಯಥೇಚ್ಛ ವಿದೇಶಿ ನಾಣ್ಯಗಳನ್ನು ಹರಿದು ಬಂದವು.
ಇದೇ ಸಮಯಕ್ಕೆ ಮಲಬಾರಾದ್ಯಂತ ವಿಜಯ ದುಂದುಬಿ ಹಾರಿಸಿದ ಟಿಪ್ಪು ಚಿರತ್ತಿಲ್ ದೊರೆಗಳನ್ನು ಮಟ್ಟ ಹಾಕಿ ಅರಕ್ಕಲ್ ಪ್ರಾಂತ್ಯಕ್ಕೆ ಬಂದಾಗ ಅರಕ್ಕಲ್‌ ರಾಣಿ ಯುದ್ಧದ ಸಿದ್ದತೆಯಲ್ಲಿರಲಿಲ್ಲ. ಆದ್ದರಿಂದ ಅವರು ಟಿಪ್ಪು ಜತೆ ಒಪ್ಪಂದ ಮಾಡಿಕೊಂಡು ಮೈತ್ರಿ ಸ್ಥಾಪಿಸಿಕೊಂಡರು. ಆ ಸಮಯಕ್ಕೆ ದೇಶದಾದ್ಯಂತ ಬ್ರಿಟಿಷರು ಪ್ರಾಬಲ್ಯ ಸಾಧಿಸಿಯಾಗಿತ್ತು.

1783ರಲ್ಲಿ ಕಣ್ಣೂರ್‌ಗೆ ತೆರಳುತ್ತಿದ್ದ ಸರಕುಗಳನ್ನೊಳಗೊಂಡ ನಾಲ್ಕು ವಾಣಿಜ್ಯ ನೌಕೆಗಳನ್ನು ಕಡಲ ನಡುವೆ ಬ್ರಿಟಿಷರು ತಡೆದರು. ಆ ಪೈಕಿ ಒಂದು ದೋಣಿಯನ್ನು ವಶಕ್ಕೆ ಪಡೆದುಕೊಂಡರು. ಅವರಿಂದ ತಪ್ಪಿಸಿಕೊಂಡ ಮೂರು ಹಡಗುಗಳ ಪೈಕಿ ಎರಡು ನೌಕೆ ಮಂಗಳೂರು ಕಡೆಗೂ, ಮತ್ತೊಂದು ಪುನಃ ದ್ವೀಪಕ್ಕೂ ಹೊರಟಿತು. ಬ್ರಿಟಿಷರು ಅರಕ್ಕಲ್ ದೊರೆಗಳನ್ನು ಸೋಲಿಸಿರಬೇಕೆಂದು ಅರ್ಥೈಸಿದ ಆ ಎರಡು ನೌಕೆಗಳು ಕಣ್ಣೂರಿಗೆ ತಲುಪಿಸಬೇಕಿದ್ದ ಸರಕುಗಳನ್ನು ಮಂಗಳೂರಿಗೆ ಕೊಂಡೊಯ್ದು ವಿಕ್ರಯ ಮಾಡಿದರು. ಆದರೆ ತಾವು ವಿಧಿಸಿದ್ದ ನಿಬಂಧನೆಯನ್ನು ಉಲ್ಲಂಘಿಸಿದರೆಂಬ ಮರ್ಜಿಗೆ ಬಿದ್ದ ಅರಕ್ಕಲ್ ದೊರೆಗಳು ಈ ಎರಡೂ ನೌಕಾ ಸಿಬ್ಬಂದಿಗಳ ಮೇಲೆ‌ ಕಟ್ಟುನಿಟ್ಟಿನ ಕ್ರಮಕೈಗೊಂಡಿತು. ಇದರಿಂದ ನೊಂದ ಅಮಿನಿ ನಿವಾಸಿಗಳು ಮಂಗಳೂರು ಪ್ರಾಂತ್ಯದ ಒಡೆಯನಾಗಿದ್ದ ಟಿಪ್ಪು ಬಳಿ ದೂರು‌ ನೀಡಿದರು. ಆದರೆ ಅರಕ್ಕಲ್ ಆಳ್ವಿಕೆಯೊಂದಿಗೆ ಒಪ್ಪಂದದಲ್ಲೇರ್ಪಟ್ಟಿದ್ದ ಟಿಪ್ಪು ಈ ಬಗ್ಗೆ ತಟಸ್ಥ ನಿಲುವನ್ನು ತೋರಿದರು. ಅವರಲ್ಲಿ ಅರಕ್ಕಲ್ ಆಳ್ವಿಕೆಯೊಂದಿಗೆ ರಾಜಿ ಸಂಧಾನ ನಡೆಸುವಂತೆ ಹೇಳಿದರು. ಅಮಿನಿ ನಿವಾಸಿಗಳು ಹಲವು ಬಾರಿ ರಾಜಿ ಸಂಧಾನಕ್ಕೆ ಮುಂದಾದರೂ ಅದು ವಿಫಲಗೊಳ್ಳುತ್ತಲೇ ಹೋದವು. ಕೊನೆಗೆ ಅಮಿನಿ ನಿವಾಸಿಗಳಲ್ಲಿ ಕನಿಕರ ಮೂಡಿದ ಟಿಪ್ಪು 1787ರಲ್ಲಿ ಚಿರಕ್ಕಲ್ ಪ್ರಾಂತ್ಯದ ಚೇಲಾತ್, ಕುನ್ನತ್ ಮುಂತಾದ ಪ್ರದೇಶಗಳನ್ನು ಅರಕ್ಕಲ್ ಆಳ್ವಿಕೆಗೆ ಒಪ್ಪಿಸಿ ಅಮಿನಿ ಹಾಗೂ ಸುತ್ತಲಿನ ಕೆಲವು ದ್ವೀಪಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡರು. ಅಂದಿನ ಮಂಗಳೂರು ಗವರ್ನರ್ ಆಗಿದ್ದ ಫಕೀರ್ ಅಬ್ಬ ಸಾಹಿಬರಿಗೆ ದ್ವೀಪದ ಉಸ್ತುವಾರಿಯನ್ನು ನೀಡಿದರು.

ಟಿಪ್ಪುವಿನ ಪುತ್ರ ಫಾರೂಖ್‌ಗೆ ಅರಕ್ಕಲ್ ರಾಣಿ ತನ್ನ ಪುತ್ರಿಯನ್ನು ವಿವಾಹ ಮಾಡಿ ಕೊಟ್ಟರು. ಈ ವೇಳೆ ವರದಕ್ಷಿಣೆಯಾಗಿ ಕೊಟ್ಟದ್ದು ತನ್ನ ಆಳ್ವಿಕೆಯಲ್ಲಿದ್ದ ಲಕ್ಷದ್ವೀಪ ಮತ್ತು ಮಾಲಿದ್ವೀಪವನ್ನಾಗಿತ್ತು.! 1787ರ ತನಕ ಅರಕ್ಕಲ್ ಆಳ್ವಿಕೆಯ ಅಧೀನದಲ್ಲಿದ್ದ ದ್ವೀಪ ಮೈಸೂರು ಸಂಸ್ಥಾನದ ಪಾಲಾಯಿತು. ಆದರೆ‌1799ರಲ್ಲಿ ಟಿಪ್ಪು ಹುತಾತ್ಮರಾದ ಮೇಲೆ ಲಕ್ಷದ್ವೀಪದ ಮೇಲೆ ಹಿಡಿತ ಸ್ಥಾಪಿಸಲು ಹವಣಿಸಿದರು. 1789ರಲ್ಲಿ ಅಮಿನಿ ಸಂಯುಕ್ತ ದ್ವೀಪಗಳಾದ ಅಮಿನಿ, ಬೆತ್ಲತ್, ಕಡಮತ್ ಈಸ್ಟ್ ಇಂಡಿಯಾ ಕಂಪೆನಿಯ ಒಡೆತನದಲ್ಲಿ ಮಂಗಳೂರು ಕಲೆಕ್ಟರ್ ಅಧೀನಕ್ಕೆ ಬಂತು. 1793ರ ಏಪ್ರಿಲ್ 13ರಲ್ಲಿ ಅರಕ್ಕಲ್ ಬೀವಿ ಹಾಗೂ ಈಸ್ಟ್ ಇಂಡಿಯಾ ಕಂಪನಿ ನಡುವೆ‌ ಒಂದು ಒಪ್ಪಂದ ನಡೆಯಿತು. ಒಪ್ಪಂದ ಪ್ರಕಾರ ಅರಕ್ಕಲ್ ಒಡೆತನದಲ್ಲಿದ್ದ ಲಕ್ಕದ್ವೀಪ್, ಮಿನಿಕ್ಕೋಯ್, ಆಂದ್ರೋತ್, ಕವರತ್ತಿ, ಕಲ್ಪೇನಿ, ಅಗತ್ತಿ ದ್ವೀಪಗಳಿಂದ ಬರುವ ವಾರ್ಷಿಕ ವರಮಾನದ ನೇರ ಅರ್ಧವನ್ನು ಅರಕ್ಕಲ್ ಖಜಾನೆಗೆ ಒಪ್ಪಿಸಬೇಕೆಂಬ ಷರತ್ತನ್ನು‌ ಮುಂದಿಡಲಾಯಿತು. 1793ರಿಂದ ದ್ವೀಪದಾದ್ಯಂತ ಆಹಾರ ಕ್ಷಾಮ ತಲೆದೋರಿದಾಗ ಅರಕ್ಕಲ್ ದೊರೆಗಳ ಅನುಮತಿಯಂತೆ ಈಸ್ಟ್ ಇಂಡಿಯಾ ಕಂಪೆನಿಯ ಮುಖ್ಯಸ್ಥರು ದ್ವೀಪವನ್ನು ಸಂದರ್ಶಿಸಿ ಅಲ್ಲಿಗೆ ಬೇಕಾದ ಅಗತ್ಯಗಳನ್ನು ಪೂರೈಸಿದರು‌. ಹೀಗೆ ನೀಡಿದ ನೆರವಿನ ಖರ್ಚನ್ನು ಅವರು ಅರಕ್ಕಲ್ ದೊರೆಗಳ ಹೆಸರಿಗೆ ಬಾಬ್ತಾಗಿ ಬರೆದರು. ವರ್ಷಗಳು ಕಳೆಯುತ್ತಿದ್ದಂತೆ ಅರಕ್ಕಲ್ ದೊರೆಗಳು ಬ್ರಿಟಿಷರಿಗೆ ಸಂದಾಯ ಮಾಡ ಬೇಕಾದ‌ ಹಣದ ಮೊತ್ತ 2,17,162ಕ್ಕೆ ತಲುಪಿತು. ಆದ್ದರಿಂದ 1808 ನವಂಬರ್ 15ಕ್ಕೆ ದ್ವೀಪ್ ಹಾಗೂ ಅರಕ್ಕಲ್ ಆಳ್ವಿಕೆ ಕೆಲವು ಪ್ರದೇಶಗಳನ್ನು ಬ್ರಿಟಿಷ್ ಸರಕಾರ ಸ್ವಾಧೀನಪಡಿಸಿಕೊಂಡು ಅರಕ್ಕಲ್ ಖಜಾನೆಗೆ ವರ್ಷಕ್ಕೆ 23000 ಪಿಂಚಣಿಯನ್ನು ನೀಡುತ್ತಾ ಬಂದರು.

ವಿದೇಶಿಗರು ತಮ್ಮ ಮೇಲೆ ಅಧಿಕಾರ ಚಲಾಯಿಸುವುದನ್ನು ಕಠಿಣವಾಗಿ ವಿರೋಧಿಸಿದ್ದ ಮಿನಿಕೋಯ್ ನಿವಾಸಿಗಳು ನಿರಂತರ ಹೋರಾಟ, ಪ್ರತಿರೋಧ ನಡೆಸಿದರು. ಆದರೆ ಈ ಹೋರಾಟಗಳನ್ನೆಲ್ಲಾ ನಿಷ್ಕ್ರಿಯಗೊಳಿಸಿದ ಬ್ರಿಟಿಷರು 1858ರಲ್ಲಿ ಕೊನೆಗೂ ಈ ದ್ವೀಪವನ್ನು ವಶಪಡಿಸಿ ಕೊಂಡರು. 1875ರಲ್ಲಿ ಮಲಬಾರ್ ಕಲೆಕ್ಟರ್ ಲಕ್ಷದ್ವೀಪದಲ್ಲಿ ಎಕ್ಸಿಕ್ಯೂಟಿವ್ ಆಡಳಿತವನ್ನು ಚಾಲ್ತಿಗೆ ತಂದ. 1905ರ ಜುಲೈ 1ರಲ್ಲಿ ದ್ವೀಪಗಳು ಬ್ರಿಟಿಷ್ ಸಾಮ್ರಾಜ್ಯದ ಒಡೆತನದಲ್ಲಿರುವ ಪ್ರದೇಶವಾಗಿ ಘೋಷಿಸಲಾಯಿತು. 1912ರಲ್ಲಿ ದ್ವೀಪದಲ್ಲಿ ರೆಗ್ಯುಲೇಶನ್ ನಿಯಮವನ್ನು ಜಾರಿಗೆ ತಂದು ಮದ್ರಾಸ್ ಸಂಸ್ಥಾನದ ಭಾಗವನ್ನಾಗಿ ಮಾಡಲಾಯಿತು. ಭಾರತ ಸ್ವತಂತ್ರಗೊಂಡ ಬಳಿಕವೂ ಲಕ್ಷದ್ವೀಪ ಮದ್ರಾಸ್ ಸಂಸ್ಥಾನದ ಅಧೀನದಲ್ಲೇ ಮುಂದುವರೆಯಿತು. ಶತಮಾನಗಳ‌ ಕಾಲ ಮಲಬಾರ್ ದೊರೆಗಳ ಆಳ್ವಿಕೆಯಲ್ಲಿದ್ದ ದ್ವೀಪ ಭಾಷಿಕವಾಗಿ, ಭೌಗೋಳಿಕವಾಗಿ, ಹಾಗೂ ವಂಶೀಯವಾಗಿ ಮಲಬಾರ್‌ನೊಂದಿಗೆ ಅಭೇಧ್ಯ ನಂಟನ್ನು ಹೊಂದಿಕೊಂಡಿದೆ. ಆದ್ದರಿಂದ ಅದು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕೇರಳದ ಭಾಗವಾಗಬೇಕಿತ್ತು. ಆದರೆ ಒಪ್ಪಂದದ ಮೇರೆಗೆ ಮೈಸೂರು ಪ್ರಾಂತ್ಯದ ಭಾಗವಾಗಿದ್ದ ದ್ವೀಪವನ್ನು ಬ್ರಿಟಿಷರು ಅಕ್ರಮವಾಗಿ ವಶಪಡಿಸಿಕೊಂಡಿದ್ದರಿಂದ ಇದು ಕರ್ನಾಟಕಕ್ಕೆ ಸೇರಬೇಕೆಂದು ಕರ್ನಾಟಕ ಸರಕಾರ ಕ್ಯಾತೆ ತೆಗೆಯಿತು. ಈ ಎರಡೂ ವಾದಗಳಿಗೂ ಹುರುಳಿತ್ತು. ಭಾಷಿಕವಾಗಿ ಅದು ಕೇರಳದ ಪಾಲಾಗಬೇಕಿದ್ದರೆ ಚಾರಿತ್ರಿಕವಾಗಿ ಕರ್ನಾಟಕದ ಪಾಲಾಗಬೇಕಿತ್ತು‌. ಇದರಿಂದ ಇಕ್ಕಟ್ಟಿಗೆ ಸಿಲುಕಿದ ನೆಹರೂ 1956ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದರು. 1967ರಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಲೋಕಸಭಾ ಚುಣಾವಣೆಯಲ್ಲಿ ಆರಿಸಿ ಬಂದ ಪಿ.ಎಂ ಸ‌ಈದ್ ಲೋಕಸಭಾ ಸದಸ್ಯರಾದರು. 1973ರಲ್ಲಿ ಲಕಡೀವ್, ಮಿನಿಕೋಯ್, ಅಮಿನಿ ಮುಂತಾದ ದ್ವೀಪದ ಹೆಸರನ್ನು ಬದಲಿಸಿ ಸಂಯುಕ್ತವಾಗಿ ಲಕ್ಷದ್ವೀಪ ಎಂದು ಮರುನಾಮಕರಣ ಮಾಡಲಾಯಿತು. 1980ರ ಜನವರಿ 26ರಂದು ಅಂದರೆ ಗಣರಾಜ್ಯೋತ್ಸವದಂದು ಮಧ್ಯ, ಹಾಗೂ ಇತರ ಅಮಲು ಪದಾರ್ಥಗಳನ್ನು ನಿಶೇಧಿಸಿ ಮಹತ್ತರವಾದ ನಿರ್ಣಯವೊಂದನ್ನು ಕೈಗೊಳ್ಳಲಾಯಿತು.

ಕೇಂದ್ರಾಡಳಿತ ಪ್ರದೇಶಗಳಿಗೆ ಸಾಮಾನ್ಯವಾಗಿ ಐಪಿಎಸ್ ಅಥವಾ ಐಎಎಸ್ ಅಧಿಕಾರಿಗಳನ್ನೇ ಆಡಳಿತ ಅಧಿಕಾರಿಗಳನ್ನಾಗಿ ನೇಮಕ ಮಾಡುವುದು ಸಂಪ್ರದಾಯ. ಭಾರತದ ಇಂಟಲಿಜೆನ್ಸ್ ಬ್ಯೂರೋಗೆ ಮುಖ್ಯಸ್ಥರಾಗಿ ಹೆಸರು ಮಾಡಿದ್ದ, ಪ್ರಖ್ಯಾತ ಐಪಿಎಸ್ ಅಧಿಕಾರಿ ದಿನೇಶ್ವರ್ ಶರ್ಮಾ ಅವರನ್ನು ನಿವೃತ್ತಿಯ ನಂತರ ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಹೃಸ್ವ ಕಾಲಾವಧಿಯಲ್ಲೇ ಜನಪರ‌ ಕೆಲಸಗಳನ್ನು ನಿರ್ವಹಿಸಿದ ಶರ್ಮಾ ಜನರ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ, ಅವರ ಅಕಾಲಿಕ ಮರಣದ ನಂತರ ಕಳೆದ ಡಿಸೆಂಬರ್ ನಲ್ಲಿ ಈ ದ್ವೀಪಕ್ಕೆ ಅಧಿಕಾರಿಯಾಗಿ ನೇಮಕವಾದವರೇ ಪ್ರಫುಲ್ ಖೋಡಾ ಪಟೇಲ್. ಸಮಸ್ಯೆ ಹುಟ್ಟಿಕೊಂಡದ್ದೇ ಅಲ್ಲಿ. ಅಷ್ಟರವರೆಗೆ ಎಲ್ಲವೂ ಸರಿಯಾಗೇ ಇದ್ದ ಲಕ್ಷದ್ವೀಪದಲ್ಲಿ ಅರಾಜಕತೆ ತಲೆದೋರಿದವು. ತಾವು ಎಚ್ಚೆತ್ತುಕೊಳ್ಳದೇ ಇದ್ದರೆ ತಮ್ಮ ನೆಲವನ್ನು ಕಳೆದುಕೊಳ್ಳಬೇಕಾಗಬಹುದು ಎನ್ನುವಷ್ಟರ ಮಟ್ಟಿಗೆ ಅಲ್ಲಿ ಆತಂಕ‌ ಮನೆ‌ ಮಾಡಿದವು. ಸಹಜವಾಗಿಯೇ ವ್ಯಾಪಾರ ಮನೋಭಾವದ ಗುಜರಾತಿಗಳು ಮಾರುವುದರಲ್ಲಿ ನಿಸ್ಸೀಮರು. ಅದಕ್ಕೆ ದೇಶದ ಆಡಳಿತರೂಢವೇ ನಗ್ನ ಉದಾಹರಣೆ. ಯಾವುದನ್ನು ಅವರು ಅಭಿವೃದ್ಧಿ ಮಾಡುತ್ತೇವೆನ್ನುತ್ತಾರೋ‌ ಅದು ಖಾಸಗಿ ಕಂಪೆನಿಗಳ ಪಾಲಾಗಲಿದೆ ಎಂದರ್ಥ.‌ ಖೋಡೋ ಪಟೇಲ್‌ ಕೂಡಾ ಅಲ್ಲಿ ಅಭಿವೃದ್ಧಿಯ ಹೆಸರಲ್ಲಿ ಹೊಸ ಕಾನೂನು, ಕಾಯ್ದೆಗಳನ್ನು ಜಾರಿಗೆ ತರುವ ತರಾತುರಿಯಲ್ಲಿದ್ದಾರೆ. ಆ ಕಾರಣಕ್ಕೆ ದ್ವೀಪ ಯಾರ ಕೈ ಪಾಲಾಗಲಿದೆಯೋ ಎಂಬ ಭೀತಿ ಅಲ್ಲಿನ ನಿವಾಸಿಗಳಲ್ಲಿದೆ. ದ್ವೀಪವನ್ನು ಉಳಿಸಿ ಎಂದು ಅಂಗಲಾಚುತ್ತಿದ್ದಾರೆ. ಇದು ನಾವು ಅವರೊಂದಿಗೆ ನಿಲ್ಲಬೇಕಾದ ಸಮಯ. ಚರಿತ್ರೆಯ ಭಾರವನ್ನೆಲ್ಲಾ ಇಳಿಸಿ ನಿರಾಳವಾಗಬೇಕಿದ್ದ ಸಮಯಕ್ಕೆ ತಾಳಲಾರದ ಇನ್ನೊಂದು ಸಂಕಷ್ಟ ಈ ಸಾಗರದ ನೆಲಕ್ಕೆ ಬಾರದೇ ಇರಲಿ ಎಂದು ಆಶಿಸೋಣ

LEAVE A REPLY

Please enter your comment!
Please enter your name here