ಎಂ . ಅಶೀರುದ್ದೀನ್ ಮಂಜನಾಡಿ

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ನಾವೆಲ್ಲರೂ ತಿಳಿದಿರುವ ಹಾಗೆ ಯಾವುದೇ ಅಹಿತಕರ ಘಟನೆ ನಡೆಯದೆ ಕೇವಲ ಪ್ರತಿಭಟನೆ ನಡೆಯುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಅನಗತ್ಯವಾಗಿ ಮಂಗಳೂರು ಪೊಲೀಸ್ ವ್ಯವಸ್ಥೆಯು ಸೆಕ್ಷನ್ ೧೪೪ ಹಾಕಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ದ್ವನಿಯೆತ್ತುವವರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿತು. ಇದನ್ನು ಪ್ರಶ್ನಿಸಿ ಬೀದಿಗಿಳಿದ ಕೆಲವು ಇನ್ನೂರರಿಂದ ಮುನ್ನೂರಷ್ಟು ಯುವಕರ ಗುಂಪನ್ನು ಅನಗತ್ಯ ಲಾಠಿ ಚಾರ್ಜ್ ಮುಖಾಂತರ ಚದುರಿಸಿ ಇನ್ನಷ್ಟು ಉದ್ರಿಕ್ತ ಪ್ರತಿಭಟನೆಗೆ ಅವಕಾಶ ಮಾಡಿದಲ್ಲದೆ ಪ್ರತಿಭಟನೆ ಮಾಡದವರ, ದಾರಿಹೋಕರ, ವೃದ್ದರ, ಮಹಿಳೆಯರ, ಮಕ್ಕಳ, ವಿದ್ಯಾರ್ಥಿಗಳ ಮತ್ತು ಮನೆ ಮಸೀದಿ ಎಂದು ಲೆಕ್ಕಿಸದೆ ಅಟ್ಟಾಡಿಸಿ ಗೋಲಿಬಾರ್ ನಡೆಸಿದರು. ಯಾರ ಆಜ್ಞೆಗೂ ಕಾಯದೆ ಕೈಯಲ್ಲಿದ್ದ  ಕೋವಿಯನ್ನು ಮನ ಬಂದಂತೆ ಪ್ರಯೋಗಿಸಿ ಹಲವರ ಬದುಕನ್ನು ಅಪಾಯಕ್ಕೀಡು ಮಾಡಿ ಎರಡು ಅಮಾಯಕ ಜೀವಗಳನ್ನು ಬಳಿ ತೆಗೆದರು. ಈ ಅನ್ಯಾಯವನ್ನು ಮತ್ತು ಅಮಾಯಕರ ಹತ್ಯೆಯನ್ನು ಮುಚ್ಚಿಡಲು ಪೊಲೀಸರು ಮತ್ತು ಅಧಿಕಾರಿ ಬಳಗ ಮಾಡಿದ ಸಾಹಸ  ಅಷ್ಟಿಷ್ಟಲ್ಲ. ಅಕ್ರಮಕ್ಕೊಳಗಾದ ಅಮಾಯಕರನ್ನೇ ಆರೋಪ ಸ್ಥಾನದಲ್ಲಿರಿಸಿ ಬಲಿಯಾದವರ ಮೇಲು FIR ದಾಖಲಿಸಿ ವಿಕೃತಿ ಮೆರೆದಿದ್ದರು. ಜನರ ನೋವಿನೊಂದಿಗೆ ಸ್ಪಂದಿಸ ಬೇಕಿದ್ದ ಕೆಲವು ರಾಜಕಾರಣಿಗಳು,ಮಾಧ್ಯಮ ಮಿತ್ರರು  ಸೊ ಕಾಲ್ಡ್  ಸೆಕ್ಯುಲರಿಸ್ಟ್ ಗಳು  ನ್ಯಾಯಕ್ಕೆ ಬೆನ್ನು ತೋರಿಸಿ ಅಧಿಕಾರಿ ವರ್ಗಗಳ ಎಂಜಲಿಗೆ ಕೃತಜ್ಞತೆ ಸಲ್ಲಿಸುವಂತೆ ಮಾತನಾಡಿ ವಾದಮಾಡಿ ವರದಿ ಮಾಡಿದ್ದವು. ಆದರೆ ಈ ನೋವು ಈ ನಾಡಿನ ಪ್ರಜ್ಞಾವಂತ ಪ್ರಜೆಗಳ ಮನಸ್ಸಿನಿಂದ ಮಾಸಿ ಹೋಗಿರಲಿಲ್ಲ ಜನರು ತಮ್ಮ ನೋವನ್ನು ತೋಡಿಕೊಳ್ಳುವ ಯಾವ ಸಂದರ್ಭಕ್ಕೂ ಅವಕಾಶ  ನೀಡದೆ ಅನಾಮತಿಯನ್ನು ನಿರಾಕರಿಸಲಾಯಿತು.  ಪ್ರತಿಭಟನಾ ದಿನಾಂಕವನ್ನು ಒಂದರ ಹಿಂದೆ ಒಂದರಂತೆ ಮುಂದೂಡಲಾಯಿತು. ಮಂಗಳೂರು ನಗರದೊಳಗೆ ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಕೊನೆಗೂ ಹಲವಾರು ಕಂಡೀಷನ್ ಮೇರೆಗೆ ನಗರದ ಹೊರವಲಯದ ಅಡಿಯಾರ್ ನ ಷಾ ಗಾರ್ಡನ್ ಮೈದಾನದಲ್ಲಿ  ಪ್ರತಿಭಟನಗೆ ಅನುಮತಿ ನೀಡಲಾಯಿತು ಮತ್ತೆ ನಡೆದೆದೆಲ್ಲವು ಇತಿಹಾಸ.

ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ ಮತ್ತು ಎನ್‍ಆರ್‌ಸಿ, ಎನ್‍ಪಿಆರ್ ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯಲ್ಲಿ  ಹಲವು ಮುಸ್ಲಿಂ ಸಂಘಟನೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗಿದ್ದರೂ ಸಹ  ಸಂಘಟನಾ ಬಲ ಮತ್ತು ಭಿನ್ನತೆ ಬಿಟ್ಟು  ಭಾರತದ ಸಂವಿಧಾನದ ರಕ್ಷಣೆಯ ಹೋರಾಟವಾದರಿಂದ ತ್ರಿವರ್ಣ ದ್ವಜವನ್ನು ಹಿಡಿದು ಎಲ್ಲರು ಆಗಮಿಸಿದ್ದರು.

ನಿಜವಾಗಿಯೂ ಮಂಗಳೂರಿನ ಇತಿಹಾಸದಲ್ಲಿ ಇಷ್ಟೊಂದು ಜನಸ್ತೋಮದ  ಒಂದು ಸಂಗ್ರಾಮ ನಡೆದಿರಲಿಕ್ಕಿಲ್ಲಾ. ಸುಮಾರು ನಾಲ್ಕು ಲಕ್ಷಕ್ಕೂ ಮಿಕ್ಕಿ ಜನ ಸೇರಿದ್ದ ಈ ಸಭೆ ಇತಿಹಾಸದ ಸ್ವರ್ಣ ಪುಟದಲ್ಲಿ ದಾಖಲಾಗಿದೆ. ಅಡ್ಯಾರ್ ಗೆ ಹರಿದು ಬಂಡ ಜನ ಸಾಗರ ಕೇವಲ ಅತಿಥಿಗಳ ಭಾಷಣ ಕೇಳುವ ಉದ್ದೇಶದಿಂದಲೋ ನಾಯಕರ ಆಜ್ಞೆಯಿಂದಲೋ ಬಂದದ್ದಲ್ಲ ಬದಲಾಗಿ ಅನ್ಯಾಯವಾಗಿ ಕೊಂದ ಎರಡು ಅಮಾಯಕ ಜೀವಗಳ ತ್ಯಾಗಕ್ಕೆ ಪ್ರತೀಕಾರವಾಯಾಗಿ ಸೇರಿದ್ದರು ಎಂಬುವುದರಲ್ಲಿ ಸಂಶಯವಿಲ್ಲ.

ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಲಾಠಿಚಾರ್ಜ್, ಪೊಲೀಸ್ ಗೋಲಿಬಾರಿಗೆ ಇಬ್ಬರ ಬಲಿ, ಅನಂತರ ಸರಕಾರ ಮತ್ತು ಪೊಲೀಸ್ ಇಲಾಖೆಯ ವರ್ತನೆಗಳು, ಪೊಲೀಸರು ಹರಿಯಬಿಟ್ಟ ವಿಡಿಯೊ, ಜನರ ನಡುವೆ ಹರಿದಾಡುತ್ತಿದ್ದ ಮನ ಕರಗಿಸುವ ವಿಡಿಯೋ,  ಸತ್ತವರ ಕುಟುಂಬಕ್ಕೆ ಪರಿಹಾರ ನಿರಾಕರಣೆ ಇತ್ಯಾದಿ ನೋವುಗಳ ಕಾರಣವೂ ಜನವರಿ 15ರಂದು ಮಂಗಳೂರಿನ ನೇತ್ರಾವತಿ ನದಿ ತೀರದಲ್ಲಿ ಅಭೂತಪೂರ್ವ ಜನಸಂದಣಿ ಸೇರಲು ಕಾರಣವಾಯ್ತು.

ಶಾಹೀದ್ ಜಲೀಲ್ ಕಂದಕ್ ಮತ್ತು ನೌಶೀನ್ ಕುದ್ರೋಳಿ ವೇದಿಕೆಯೇರಿ ನಿವೃತ್ತ ಐಎಎಸ್ ಅಧಿಕಾರಿ ಹರ್ಷ್ ಮಂದರ್ ಮಾತನಾಡಿ, “ಧರ್ಮದ ಹೆಸರಿನಲ್ಲಿ ನಮ್ಮನ್ನು ವಿಭಜಿಸುವ ಪ್ರಯತ್ನ ಬಂದಾಗಲೆಲ್ಲಾ ನಾವು ಭಾರತೀಯರು ಒಂದಾಗುತ್ತೇವೆ. ನಮಗೆ ದ್ವೇಷ ಮತ್ತು ವಿಭಜನಾ ರಾಜಕೀಯ ಬೇಡ. ಸಿಎಎ, ಎನ್ಆರ್ಸಿ ಮತ್ತು ಎನ್ಪಿಎ ಈ ದೇಶದ ಜನರನ್ನು ವಿಭಜಿಸುತ್ತದೆ ಮತ್ತು ನಾನು ಇದನ್ನು ಬೆಂಬಲಿಸುವುದಿಲ್ಲ. ಸಂವಿಧಾನದ ಮುನ್ನುಡಿಯು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಜನರಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಭದ್ರಪಡಿಸಲು ಮತ್ತು ಭ್ರಾತೃತ್ವವನ್ನು ಉತ್ತೇಜಿಸಲು ಬದ್ಧವಾಗಿರುವ ಕಲ್ಯಾಣ ರಾಜ್ಯವೆಂದು ಘೋಷಿಸುತ್ತದೆ, ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು. ಆದರೆ ಆರ್ಎಸ್ಎಸ್ ಮತ್ತು ಬಿಜೆಪಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತವೆ ”.

ಮಾನವ ಹಕ್ಕುಗಳ ಕಾರ್ಯಕರ್ತ ಶಿವಸುಂದರ್, “ನಾನು ಬಿಜೆಪಿಯ ಐದು ಸುಳ್ಳುಗಳನ್ನು ಹಂಚಿಕೊಳ್ಳಲು ಇಲ್ಲಿದ್ದೇನೆ. 2014 ರಲ್ಲಿ, ನಾನು ಕಾವಲುಗಾರನನ್ನು ನೇಮಿಸಿದ್ದೆ ಮತ್ತು ಈಗ 2019 ರಲ್ಲಿ, ನಾನು ಮನೆಯ ಮಾಲೀಕನೇ ಎಂದು ನೋಡಲು ಕಾವಲುಗಾರನು ದಾಖಲೆಗಳನ್ನು ಕೇಳುತ್ತಿದ್ದಾನೆ. ನಾವು ಈ ದೇಶದ ಜನರು ಸ್ನಾತಕೋತ್ತರರು, ರಾಜ್ಯಪಾಲರು, ಡಿಸಿ, ಎಸ್ಪಿ, ರಾಜಕಾರಣಿಗಳು ನಮ್ಮ ಸೇವಕರು. ಈಗ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಏಕೆ ಹಿಂಸಾಚಾರ ನಡೆಯುತ್ತಿದೆ ಎಂಬ ಗೊಂದಲದಲ್ಲಿದ್ದಾರೆ? ನಾನು 27 ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸಿದ್ದೇನೆ, ಅಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು ಆದರೆ ಬಹಳ ಕಡಿಮೆ ಪೊಲೀಸರು ಇದ್ದರು. ಮಂಗಳೂರಿನಲ್ಲಿ ಪೊಲೀಸರು ಸೆಕ್ಷನ್ 144 ಅನ್ನು ವಿಧಿಸಿದ್ದು, ಅದು ಎರಡು ಜೀವಗಳನ್ನು ಬಲಿ ತೆಗೆದುಕೊಂಡ ಹಿಂಸಾಚಾರಕ್ಕೆ ಕಾರಣವಾಯಿತು. ಬಿಜೆಪಿ ಸರ್ಕಾರದೊಂದಿಗೆ ಪೊಲೀಸರು ಕಾನೂನು ಉಲ್ಲಂಘಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಾರ್ವಜನಿಕರಿಂದ ಏಕೆ ಸಂಗ್ರಹಿಸಿದರು? ನಾಗ್ಪುರ ಗಣರಾಜ್ಯ ಅಥವಾ ಕಲ್ಲಡ್ಕಾ ಗಣರಾಜ್ಯದ ಆದೇಶವನ್ನು ಪೊಲೀಸರು ಅನುಸರಿಸುತ್ತಿದ್ದಾರೆ. ಕಲ್ಲಡ್ಕಾ ಗಣರಾಜ್ಯ ಮತ್ತು ನಾಗ್ಪುರ ಗಣರಾಜ್ಯ ನಿಯಮಗಳಿದ್ದಾಗ ಅಲ್ಲಿ ಕೊಲೆಗಳು ನಡೆಯುತ್ತವೆ. ಜನರನ್ನು ಪ್ರಚೋದಿಸುವವರು ಯಾರು? ಎಂದು ಪ್ರಶ್ನಿಸಿದರು

ವಿಶ್ರಾಂತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲು ತರಾತುರಿಯಲ್ಲಿ ಮುಂದಾಗಿದ್ದರೂ ಕೂಡ ದೇಶದ ಯುವ ಜನತೆ ಅದರಲ್ಲೂ ವಿದ್ಯಾರ್ಥಿ ಸಮೂಹ ಈ ಕರಾಳ ಕಾಯ್ದೆಯ ವಿರುದ್ಧ ಸೆಟೆದು ನಿಂತಿದೆ. ದೇಶಾದ್ಯಂತ ಚಳುವಳಿ ರೂಪದಲ್ಲೇ ಇದು ಮುನ್ನಡೆಯುತ್ತಿದೆ. ಕೇಂದ್ರ ಸರಕಾರ ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೆ ಚಳುವಳಿ ನಿರಂತರವಾಗಿರಬೇಕು ಎಂದು ಹೇಳಿದರು.

ಜನವರಿ 15ರ ಬಂದೋಬಸ್ತಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪೊಲೀಸರನ್ನು ಮಂಗಳೂರಿಗೆ ಕರೆಯಿಸಿಕೊಂಡಿದ್ದರು. ಒಂದರ್ಥದಲ್ಲಿ ಅದೊಂದು ನಿರುಪಯುಕ್ತ ಕೆಲಸವಾಗಿತ್ತು. ಪೊಲೀಸರು ಮೂಖಪ್ರೇಕ್ಷಕರಾಗಿ ನಿಂತುಕೊಳ್ಳಬೇಕಾಯಿತು. ಸಮಾವೇಶದ ಸಂಘಟಕರೇ 1500ಕ್ಕೂ ಹೆಚ್ಚು ಸ್ವಯಂಸೇವಕರನ್ನು ವಾಹನ ಸಂಚಾರ ಸೇರಿದಂತೆ ಎಲ್ಲೆಡೆ ನಿಯೋಜಿಸಿದ್ದರು. ಬೃಹತ್ ಪ್ರಮಾಣದಲ್ಲಿ ಜನಸಾಗರವಾಗಿದ್ದ ಸಮಾವೇಶ ಶಾಂತ ಯುತವಾಗಿ ಅಚ್ಚುಕಟ್ಟಾಗಿ ನಡೆಸುವುದರಲ್ಲಿ ಪೊಲೀಸರ ಪಾತ್ರವೇನು ಇರಲಿಲ್ಲ. ಅದೂ ಅಲ್ಲದೆ ಸ್ವಯಂ ಸೇವಕರು ಜನ ಮೆಚ್ಚುವ ಹಲವಾರು ಸೇವಾ ಕಾರ್ಯಗಳನ್ನು ಸಹ ಮಾಡಿ ಮಾದರಿಯಾಗಿದ್ದರು.  ಹೆಣ್ಣುಮಕ್ಕಳನ್ನು ಶಾಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸುವುದು ಹೆರಿಗೆಗೆಂದು ಹೋಗುತಿದ್ದ ಗರ್ಭಿಣಿ ಇದ್ದ ವಾಹನವನ್ನು ಸ್ಥಳಾಂತರಿಸಿ ಯಾವುದೇ ತೊಂದರೆ ಆಗದಂತೆ ಅದಕ್ಕೆ ಸ್ಥಳಾವಕಾಶ ಮಾಡಿ ಕೊಡುವುದು.  ಕಸ ಕಡ್ಡಿ ಗಳನ್ನೂ ಹೆಕ್ಕಿ ಸ್ವಚ್ಛವಾಗಿ ಇಡುವುದು ಯಾವುದೇ ಅಹಿತಕರ ಘಟನೆಗೂ ಆಸ್ಪದ ಕೊಡದಂತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸುವುದರಲ್ಲಿ ಸ್ವಯಂ ಸೇವಕರ ಪಾತ್ರ ಮುಖ್ಯವಾಗಿದೆ ಮುಸ್ಲಿಮರಂತೆ  ಹಿಂದೂಗಳು ಕ್ರೈಸ್ತರು ಭಾಗವಹಿಸಿ ಸಹಮತ ತೋರಿಸಿದ್ದರು. ಇದು ಮಂಗಳೂರಿನ ಇತಿಹಾಸ ಪುಟದಲ್ಲಿ ಸೇರಿದ ಪ್ರತಿಭಟನೆ.

ಮಂಗಳೂರಿನ ಪ್ರತಿಭಟನೆಯ ಯಶಸ್ವಿಯ ನಂತರ ಜಿಲ್ಲೆಯ ಉದ್ದಗಲಕ್ಕೂ ನಿರಂತರ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುತ್ತಿದೆ. ಇದೀಗಾಗಲೇ ಉಳ್ಳಾಲ, ಕೆ.ಸಿ ರೋಡ್, ಬಜ್ಪೆ, ಮೂಡಬಿದ್ರೆ , ಪುತ್ತೂರು, ಮಂಜನಾಡಿ, ಮುಡಿಪು, ಸುರತ್ಕಲ್  ಇತ್ಯಾದಿ ಕಡೆಗಳಲ್ಲಿ ನಡೆದಿದೆ ಇನ್ನು ಹಲವು ಕಡೆ ನಡೆಯಲು ಬಾಕಿಯಿದೆ ಮಂಗಳೂರು ಗೋಲಿಬಾರ್ ನ ನಂತರ ಪೊಲೀಸರು ಸ್ವಲ್ಪ ಮೌನವಾಗಿದ್ದಾರೆ. ಪ್ರತಿಭಟನೆಗೆ ಉತ್ತಮ ಸಹಕಾರವನ್ನು ನೀಡುತ್ತಾರೆ. ಪೌರತ್ವ ತಿದ್ದು ಪಡಿ ಯಾ ಜಾಗೃತಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗೂ ತಲ್ಪುತಿದೆ. ಗ್ರಾಮೀಣ ಭಾಗದಲ್ಲಿ ಜಾತಿ ಭೇದ ಮರೆತು ಪ್ರತಿಭಟನೆ ಮುನ್ನಡೆಯುತ್ತಿದೆ ಎಲ್ಲ ಪ್ರತಿಭಟನೆಯು ನಾವು ಭಾರತೀಯರು ಎಂಬ ಘೋಷಣೆಯನ್ನೇ ಕೂಗುತ್ತಿದೆ

LEAVE A REPLY

Please enter your comment!
Please enter your name here