• ಉಮ್ಮು ಯೂನುಸ್ ಉಡುಪಿ

ಜೂನ್ ಬಂದಿದೆ, ಮುಂಗಾರನ್ನು ಹೊತ್ತು ತಂದಿದೆ ಆದರೆ ಈ ಬಾರಿ ಜೂನ್ ನ ನೆನಪುಗಳಲ್ಲೊಂದಾದ ಶಾಲಾ ಪುನರಾರಂಭ ಮಾತ್ರವಾಗಿಲ್ಲ. ಮಕ್ಕಳ ಶಾಲಾ ದಿನಗಳನ್ನು ಮತ್ತೆ ಕೊರೋನಾ ನುಂಗಿಹಾಕಲಿದೆ.. ಆ ನಾಮ್ಕೆ ವಾಸ್ತೆ ಕೊಡೆಹಿಡಿದುಕೊಂಡು ಮಣಬಾರದ ಬ್ಯಾಗಿನೊಂದಿಗೆ ತಾನೂಪೂರ್ತಿ ಒದ್ದೆಯಾಗಿ ನಡೆಯುವ ಮಕ್ಕಳು ಈಬಾರಿಯೂ ಕಾಣಸಿಗರು. ಈ ಮಳೆಯದಿನಗಳು ಮಕ್ಕಳಪಾಲಿಗೆ ಬಾಲ್ಯದ ನೆನಪಿನ ಆಸ್ತಿಗಳಿದ್ದಂತೆಯೇ, ಹೇಗೂ ಶಾಲಾಬಸ್ಸುಗಳಲ್ಲಿ, ಖಾಸಗಿವಾಹನಗಳಲ್ಲಿ ಹೋಗುವ ಮಕ್ಕಳಿಗೆ  ಗದ್ದೆಯ ಬದುವಿನಲ್ಲಿ ಬಿದ್ದೆದ್ದು ನಡೆಯುವ ಮಕ್ಕಳ ಸಂಭ್ರಮ ಅಷ್ಟಾಗಿ ಅನುಭವಕ್ಕೆ ಬಂದಿರುವುದಿಲ್ಲವಾದರೂ… ಈ ಮಳೆಯದಿನಗಳನ್ನು ಅವರು ಅವರದೇ ಆದ ರೀತಿಯಲ್ಲಿಆನಂದಿಸುತ್ತಿದ್ದರು.

ಶಾಲೆ ಆರಂಭ ಎಂದಾಗ ಸಾಧಾರಣವಾಗಿ ನಮ್ಮ ಮನಸ್ಸಶಾಲಾದಿನಗಳತ್ತ ವಾಲುತ್ತದೆ ಅಲ್ಲವೇ… ನಮ್ಮಲ್ಲಿ ಸಾದಾರಣವಾಗಿ 1970 ರಿಂದೀಚೆಗಿನವರು ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡದ ಸರಕಾರೀ/ ಸರಕಾರೇತರ ಶಾಲೆಗಳಲ್ಲಿ ಕಲಿತವರಿದ್ದೇವಲ್ಲಾ, ನಮಗೆ ಈ ಕನ್ನಡವೆಂದರೆ ಪಂಚಪ್ರಾಣ. ಅದೇಕೆಂದರೆ “ಇಂಗ್ಲಿಷ್” ನಮಗೆ ಅರ್ಥವಾಗದ ಕಾಲ ಅದು. ಅಥವಾ ಕನ್ನಡ ನಮ್ಮ ವ್ಯವಹಾರಿಕ ಅಥವಾ ಶಾಲಾಡಳಿತ ಭಾಷೆ ಮಾತ್ರವಾಗಿತ್ತು. ಉಳಿದಂತೆ ನಮ್ಮ ಮಾತೃಭಾಷೆಯ ಜೊತೆಗೆ ತುಳು, ಕೊಂಕಣಿ, ಬ್ಯಾರಿ, ಉರ್ದು ಮಾತ್ರವೇ ಅರ್ಥವಾಗುತ್ತಿದ್ದುದು. ನನಗೆ ನೆನಪಿರುವ ಪ್ರಕಾರ, ನಮ್ಮ ಸರಕಾರಿ ಶಾಲೆಯಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು ಮಾತ್ರವೇ ಇರುತ್ತಿದ್ದುದು. ವರ್ಷಕ್ಕೊಮ್ಮೆ ಎಲ್ಲಾ ತರಗತಿಯ ಯಾವುದಾದರೂ ವಿದ್ಯಾರ್ಥಿ ಬೇರೆ ಶಾಲೆಗಳಿಗೆ ವಲಸೆ ಹೋಗುತ್ತಿದ್ದರು. ಹಾಗೆಲ್ಲಾ ವರ್ಗಾವಣೆಯಾಗುವ ಮಕ್ಕಳ ಟಿ. ಸಿ ಕೇಳಲು ಬಂದ ಪೋಷಕರೊಂದಿಗೆ ಪಾಪ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತ ಟೀಚರ್, “ದಯವಿಟ್ಟು ಏಳನೇ ತರಗತಿಯಾದರೂ ಈ ಶಾಲೆಯಲ್ಲಿ ಮುಗಿಸಲಿ..” ಎಂದು ಅತ್ತೇಬಿಡುತ್ತಿದ್ದರು. ಆ ಸಮಯದಲ್ಲಿ ಅವರ ಅಳು, ಮನಸ್ಸಿನ ದುಃಖ ನನಗೆ ಅರ್ಥವಾಗಿರಲಿಲ್ಲ. ಇದೀಗ ಸರಕಾರಿ ಶಾಲೆಗಳನ್ನು ಮುಚ್ಚುವ ‘ಲಾಬಿ’ ನಡೆಯುವುದನ್ನು ನೋಡುವಾಗ ಆ ಶಾಲೆ ಉಳಿಸಲು ಆಕೆ ಹರಸಾಹಸ ಪಡುತ್ತಿದ್ದುದು ನೆನಪಾಗಿ ಖೇದವಾಗುತ್ತದೆ. ಆದರೆ ಕೊನೆಗೂ ಆ ಶಾಲೆಗೆ ಬೀಗಜಡಿಯಲಾಗಿದ್ದು. ಇದೀಗ ಅದು ಪಾಳುಬಿದ್ದಿದೆ.

ನಮ್ಮ ಶಾಲೆ, ಮತ್ತದರ ಪರಿಸರವನ್ನೇ ಹೋಲುವ “ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ” ಚಲನಚಿತ್ರ ಕಂಡಾಗಿನಿಂದ ಅದೊಂತರಹಾ ಸುಂದರ ಬಾಲ್ಯದ ನೆನಪುಗಳು ಒಂದೊಂದಾಗಿ ಮನಃಪಟಲದಲ್ಲಿ ಮೂಡತೊಡಗಿತು. ಆ ಚಿತ್ರದಲ್ಲಿನ ಆಡುಭಾಷೆಯಂತೆಯೇ “ಬಾರಾ” “ಹೋಗುವನಾ” “ಎಂತದಾ” ಎಂಬ ಅದ್ಭುತ ಕನ್ನಡ ನಮ್ಮದಾಗಿತ್ತು. ಅದೇ ಹಳೆಯ ಸೈಕಲ್ ಗಳು, ಎಷ್ಟೋ ಮಕ್ಕಳು ಮೈಲುಗಳಾಚೆಗಿನ ಶಾಲೆಗೆ ಸರಸರನೇ ನಡೆದೇ ಹೋಗುತ್ತಿದ್ದರು. ಆ ಶಾಲಾ ಸಮಯಕ್ಕೆ ಆ ದಾರಿಯಾಗಿ ಸಾಗುತ್ತಿದ್ದುದು ಒಂದೇ ಬಸ್ಸು. ಅದೂಕೂಡಾ ಜನರಿಂದ ತುಂಬಿ ತುಳುಕುತ್ತಾ ನಿಧಾನವಾಗಿ ಹೋಗುತ್ತಿತ್ತು. ಕಂಡಕ್ಟರ್ ಆ ಬಸ್ಸನ್ನು ಅದೆಷ್ಟು ತುಂಬಿಸುತ್ತಿದ್ದನೆಂದರೆ, ಇನ್ನೇನು ಒಂದೈದು ಮಂದಿ ಹೆಚ್ಚಿಗೆ ಹತ್ತಿದರೆ, ಬಸ್ಸು ಉರುಳಿಬಿಡುತ್ತದೇನೋ ಅನಿಸುತ್ತಿತ್ತು. ನಾವಂತೂ ಅದು ಹೇಗೋ ಜನರ ನಡುವೆ ನುಸುಳಿ ನುಸುಳಿ ಡ್ರೈವರ್ ಬದಿಯಲ್ಲಿ ಜಾಗಮಾಡಿಕೊಂಡು ನಿಲ್ಲುತ್ತಿದ್ದೆವು. ಅದೆಷ್ಟೋ ಬಾರಿ ಟಿಕೆಟ್ ನ ಮೂವತ್ತು ಪೈಸೆ ಉಳಿಸಲು ಕಂಡಕ್ಟರ್ ಕಣ್ಣುತಪ್ಪಿಸಿ ಇಳಿಯಲು ನೋಡುತ್ತಿದ್ದೆವು. ಆದರೆ ಆತನೇನೂ ಕಡಿಮೆ ಚಾಲಾಕಿ ಇರಲಿಲ್ಲ. ಆಯಾ ಶಾಲೆಗಳ ಸ್ಟಾಪು ಬರುವ ಸಮಯಕ್ಕೆ ಸರಿಯಾಗಿ ಬಸ್ಸಿನ ಬಾಗಿಲಲ್ಲೇ ನಿಂತು ಎಲ್ಲರ ಕೈಯಿಂದಲೂ ಟಿಕೆಟ್ ವಸೂಲಿ ಮಾಡಿಕೊಳ್ಳುತ್ತಿದ್ದರು. ಅಲ್ಲಿಗೆ ಆ ದುಡ್ಡು ಉಳಿಸಿ ಸಂಜೆ ಚಾಕಲೇಟು ತಿನ್ನುವ ಯೋಜನೆಗೆ ನೀರುಬೀಳುತ್ತಿತ್ತು.

ಇನ್ನು ನನ್ನ ಶಾಲೆ. ನಗರದ ಹೃದಯಭಾಗದಲ್ಲಿತ್ತು. ಹೆಂಚಿನ ಛಾವಣಿಯ ಶಾಲೆ. ಅದರಲ್ಲಿ ಕಿರಿದಾದ ಉದ್ದ ವರಾಂಡವಿದ್ದು, ಒಂದು ಉದ್ದದ ಹಾಲ್ ಇತ್ತು ಅದರಲ್ಲಿ ಸ್ಕ್ರೀನ್ ಗಳನ್ನು ಅಡ್ಡಡ್ಡಲಾಗಿ ಇಟ್ಟು, ಒಂದರಿಂದ 4 ನೇ ತರಗತಿಯನ್ನು ಮಾಡಲಾಗಿತ್ತು ಪ್ರತಿಯೊಂದು ತರಗತಿಯ ಪಾಠ ಮತ್ತೊಂದು ತರಗತಿಗೆ ಕೇಳವಂತಿತ್ತು. ಕೆಲವೊಮ್ಮೆ ಒಂದು ಕ್ಲಾಸ್ ಟೀಚರ್, ಮತ್ತೊಂದು ಕ್ಲಾಸ್ ಟೀಚರ್ ಗೆ ಸ್ವಲ್ಪ ಮೆಲ್ಲ ಹೇಳಿ ಟೀಚರ್, ನನ್ನ ಮಕ್ಕಳಿಗೆ ಕೇಳಿಸುತ್ತಿಲ್ಲ ಎಂದು ಕಂಪ್ಲೇಟ್ ಮಾಡುತ್ತಿದ್ದುದೂ ಇದೆ. ಹಾಗೆ ಏನೂ ತರಗತಿ ತುಂಬುವಂತಹಾ ಮಕ್ಕಳಿರಲಿಲ್ಲ. ನಮ್ಮ ತರಗತಿಯಲ್ಲಿ ಇದ್ದುದು ಬರೇ ೧೨ ಮಂದಿ. ಅದರಲ್ಲೂ ಏಳನೇ ತರಗತಿಯಾಗುವಾಗ ಅದು ೬ಕ್ಕೆ ಇಳಿದಿತ್ತು. ಇನ್ನು ಮಕ್ಕಳಲ್ಲಿ ಬಹುತೇಕರು ಮನೆಗೆ ತಂದ ಶಾಲಾ ಕೈಚೀಲವನ್ನು ಮತ್ತೆ ತೆರೆಯುತ್ತಿದ್ದುದು ಮರುದಿನ ಶಾಲೆಯಲ್ಲಿಯೇ‌‌.. ಮನೆಕೆಲಸಗಳು ಮತ್ತು ನೋಟ್ ಪುಸ್ತಕಗಳು ಖಾಲಿ ಹಾಳೆಗಳಾಗಿಯೇ ಇದ್ದು, ಅವು ಯಾವತ್ತೂ ತುಂಬುತ್ತಲೇ ಇರಲಿಲ್ಲ. ನಮ್ಮ ತಂದೆಯವರು ಹೆಚ್ಚು ವಿದ್ಯಾವಂತರಲ್ಲದಿದ್ದರೂ ನಮ್ಮ ಪುಸ್ತಕಗಳ ನಡುನಡುವೆ ಖಾಲಿ ಹಾಳೆಗಳ ಕಂಡೊಡನೇ, “ಇದೇನು ನಿನಗೆ ಮಲಗಲಿಕ್ಕಾ” ಎಂದು ಕೋಪಗೊಳ್ಳುತ್ತಿದ್ದರು. ತಿಂಗಳಿಗೊಮ್ಮೆ ಅಚಾನಕ್ಕಾಗಿ ನಮ್ಮ ಚೀಲಗಳ (bag) ತಪಾಸಣೆ ನಡೆಯುತ್ತಿತ್ತು. ಆದಿನ ನಮ್ಮ ಕೈಯೂ ಬೆನ್ನೂ ಬಿಸಿಯಾಗುತ್ತಿದ್ದವು.

ನಮ್ಮ ಶಾಲೆಯ ವಾರದ ಅಸೆಂಬ್ಲಿಗಾಗಿ ಮತ್ತು ಇತರೆ ಸಣ್ಣಪುಟ್ಟ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಅದೇ ಹಾಲ್ ನಲ್ಲಿ ಒಂದು ಸಣ್ಣದಾದ ಸ್ಟೇಜ್ ಇತ್ತು. ಅದರ ನೆಲದಲ್ಲಿ ಅ, ಆ ಇ, ಈ, ಉ ಊ ಅಂತ ಕೆತ್ತಲಾಗಿತ್ತು. ವಾರಕ್ಕೊಂದೆರೆಡು ಬಾರಿ ನಮ್ಮ ಕೈಯಲ್ಲಿ ಕೆಲವು ಕೆಂಪು ದೊಡ್ಡ ಅವಡೆಗಳನ್ನು (ರಾಜ್ಮಾ) ಕೊಟ್ಟು ಆ ಅಕ್ಷರಗಳ ಮೇಲೆ ಇಡುವಂತೆ ಹೇಳುತ್ತಿದ್ದರು. ಅದು ಮಕ್ಕಳಿಗೆ ಖುಷಿಕೊಡುವ ಆಟವೂ ಪಾಠವೂ ಆಗಿತ್ತು. ಶಾಲೆಯ ಆವರಣದಲ್ಲೇ ಬೆಳೆಯುವ ಪಪ್ಪಾಯಿ ಹಣ್ಣಾದಾಗ ವಾರಕ್ಕೊಮ್ಮೆ ಇಡೀ ಶಾಲಾಮಕ್ಕಳಲ್ಲಿ ಹಂಚಲಾಗುತ್ತಿತ್ತು. ಶಾಲೆಯ ವಾರ್ಷಿಕೋತ್ಸವಕ್ಕೆ ಬಣ್ಣಕಾಗದದ ಪತಾಕೆಗಳನ್ನು ಮಕ್ಕಳೇ ತಯಾರಿಸುತ್ತಿದ್ದೆವು. ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿನ ನೃತ್ಯಗಳಿಗೆ, ರೆಕಾರ್ಡಿಂಗ್ಸ್ ಗಳ ಬದಲಾಗಿ ಉತ್ತಮ ಹಾಡುಗಾರ್ತಿಯಿಂದಲೇ ಹಾಡು ಹೇಳಿಸುತ್ತಿದ್ದರು. ನಮ್ಮ ನೃತ್ಯಗಳಿಗೆ ಸಬಿತಕ್ಕ ಎಂಬವರು ಹಾಡುತ್ತಿದ್ದುರು. ಮತ್ತು ಎಲ್ಲಾ ವರ್ಷವೂ ಕಡ್ಡಾಯವಾಗಿ ಹಳೆವಿದ್ಯಾರ್ಥಿ ಸಂಘದ ವತಿಯಿಂದ ನಾಟಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅವು ದೀರ್ಘವಾಗಿರುತ್ತಿದ್ದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಿದ್ದವು (ಆದರೆ ನಾವು ಸಣ್ಣವರಾಗಿದ್ದರಿಂದ, ಅರ್ಧದಲ್ಲೇ ಮಲಗಿಬಿಡುತ್ತಿದ್ದೆವು). ಅವುಗಳಲ್ಲಿ ಶಿಕ್ಷಕರಿಗೆ ನೀಡಲ್ಪಡುತ್ತಿದ್ದ ಗೌರವ ಕಂಡು ಶಿಕ್ಷಕವೃಂದ ಗದ್ಗದಿತವಾಗುತ್ತಿದ್ದವು. ಈ ಎಲ್ಲಾ ಕಾರ್ಯಕ್ರಮಗಳ ಮೇಲ್ವಿಚಾರಕಿಯಾಗಿ ಬಾಲವಾಡಿ ಟೀಚರ್ ಇರುತ್ತಿದ್ದರು.

ನಾವು ಐದನೇ ತರಗತಿ ತಲುಪಿದಾಗ ನಮ್ಮ ಶಾಲೆಯಲ್ಲಿ ವಾರಕ್ಕೊಮ್ಮೆ ಯೂನಿಫಾರಮ್ ಹಾಕಿಕೊಂಡು ಬರಬೇಕು ಎಂದು ಫರಮಾನು ಹೊರಡಿಸಲಾದಾಗ ವಿದ್ಯಾರ್ಥಿಗಳ ಮನೆಯಲ್ಲಿ ರಾದ್ಧಾಂತವೇ ಆಗಿತ್ತು. “ಹೋ… ಇನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳ ಹಾಗೆ ಇಲ್ಲೂ ಯೂನಿಫಾರಮ್ ನಾಟಕ ಶುರುವಾಯಿತು…” ಅಂತ. ಮಕ್ಕಳು ಮನೆಯಲ್ಲಿ ಕಾಡಿ ಬೇಡಿ ಅದುಹೇಗೋ ಯೂನಿಫಾರಮ್ ದಕ್ಕಿಸಿಕೊಂಡದ್ದೂ ಆಯಿತು. ವಾರಇಡೀ ಬಣ್ಣದ ಬಟ್ಟೆಯಲ್ಲಿರುವ ಮಕ್ಕಳು, ಬುಧವಾರ ನೀಲಿ ಬಿಳಿ ಯೂನಿಫಾರಮ್ ನಲ್ಲಿ ಶಿಸ್ತಿನ ಸಿಪಾಯಿಗಳಂತೆ ಕಾಣುತ್ತಿದ್ದರು.. ನಮಗೆಲ್ಲರಿಗೂ ಬಣ್ಣದ ಉಡುಪಿನಲ್ಲಿ ಹೋಮ್ ಲೀ ಫೀಲಿಂಗ್ ಕೊಡುತ್ತಿದ್ದು, ಈ ಯೂನಿಫಾರಮ್ ನಿಂದಾಗಿ ಬಹಳಾ ಇರಿಸು-ಮುರಿಸಾಗಿತ್ತು. ಆಮೇಲೆ ಸರಕಾರೀ ಆದೇಶದಂತೆ ಯೂನಿಫಾರಮ್ ಅನ್ನು ವಾರಕ್ಕೆರಡು ಬಾರಿ ಕಡ್ಡಾಯ ಗೊಳಿಸಲಾದಾಗ ಅನಿವಾರ್ಯವಾಗಿ ಒಗ್ಗಿಕೊಳ್ಳಲೇಬೇಕಾಗಿ ಬಂದಿತ್ತು.

ಸರಕಾರಿ ಶಾಲೆಗಳಲ್ಲಿ ಒಂದು ಎಡ್ವಾಂಟೇಜ್ ಏನೆಂದರೆ, ಶಾಲಾವತಿಯಿಂದಲೇ ನೋಟ್ ಪುಸ್ತಕಗಳು ದೊರೆಯುತ್ತಿದ್ದವು. ಪ್ರೈವೇಟ್ ಶಾಲೆಗಳಂತೆ ಇಲ್ಲಿ ಸುಲಿಗೆಗೆ ಅವಕಾಶವಿರಲಿಲ್ಲ. ಯೂನಿಫಾರಮ್ ವ್ಯವಸ್ಥೆ ಖಾಸಗಿಶಾಲೆಯಲ್ಲಿದ್ದರೂ ನಿಜವಾದ ಸಮಾನತೆ ಸರಕಾರಿ ಶಾಲೆಗಳಲ್ಲಿದ್ದವು. ಪುಸ್ತಕಗಳು ದೊರೆತದಿನ ಅದರ ಪರಿಮಳ ಆಘ್ರಾಣಿಸುವುದೇ ಒಂದು ಖುಷಿ. ಅದೊಂದು ವಾರ ಪುಸ್ತಕಗಳ ಜಾಗರೂಕತೆ ಕಂಡರೆ ಅದೇನು ಚೆಂದ, ಅದೇನು ಬರಹ. ಆಮೇಲೆ ತಿಂಗಳುರುಳಿದಾಗ ಅವು ಬಣ್ಣಕಳೆದು, ತುದಿಯಲ್ಲಿ ಕಿವಿಮೂಡಿಸಿಕೊಂಡು, ವಿಕಾರವಾಗಿರುತ್ತಿದ್ದವು. ಈಗಿನಂತೆ ಆಗ ಶಾಲೆಯಲ್ಲಿ ಚೆಂದದ ಖಾಕಿ ಬೈಂಡುಗಳನ್ನು ಕೊಡುತ್ತಿರಲಿಲ್ಲ. ಮನೆಗೆ ಬರುವ ಉದಯವಾಣಿಯೋ ಇನ್ಯಾವುದೋ ದಿನಪತ್ರಿಕೆಗಳನ್ನು ಕೊಂಡುಹೋಗಿ ಅಣ್ಣನ ಬಳಿಯೋ ಅಕ್ಕನ ಬಳಿಯೋ ನಿಂತು ಬೈಂಡು ಹಾಕಿಕೊಡು ಎಂದು ಕೈಕಾಲು ಹಿಡಿದು ಗೋಗರೆಯಬೇಕಿತ್ತು. ಆದರೆ, ಪಾಠ ಪುಸ್ತಕಗಳಿಗೆ ಅಪ್ಪ “ಪ್ರೆಸ್”ಗೆ ಕೊಂಡುಹೋಗಿ ರಟ್ಟಿನ ಗಟ್ಟಿ ಬೈಂಡಿಂಗ್ ಮಾಡಿಸುತ್ತಿದ್ದರು. ಅದು ವರ್ಷ ಉರುಳಿದರೂ ಮಿಸುಕಾಡುತ್ತಿರಲಿಲ್ಲ.

ಇನ್ನು ಶಾಲೆಯಲ್ಲಿ ಅದೇನು ಪಾಠಮಾಡುತ್ತಿದ್ದಾರೆ ಎನ್ನುವುದಕ್ಕಿಂತಲೂ ಕಿಟಕಿಯ ಆಚೆಗಿನ ಮೈದಾನದಲ್ಲಿ ತಿರುಗುವ ಹಸುಗಳನ್ನು ಹೆಚ್ಚಾಗಿ ನೋಡುತ್ತಿದ್ದೆವು‌. ಆ ಬುಗರಿ ಮರ, ಮತ್ತು ಹೊರಗಡೆಯ ಗ್ರೌಂಡಿನಲ್ಲಿ ಆಡುತ್ತಿದ್ದ ಮಕ್ಕಳನ್ನು ನೋಡುತ್ತಿದ್ದುದೇ ಹೆಚ್ಚು. ಈಗಿನಂತೆ ಶಾಲಾ ಕೆಲಸಗಳನ್ನು ಮಾಡಲು (ಪ್ಯೂನ್) ಕೆಲಸಗಾರರಿರಲಿಲ್ಲ, ಕಿಟಕಿ, ಬೆಂಚು, ಡೆಸ್ಕು ಗಳನ್ನು . ಟೀಚರ್ ರ ಕುರ್ಚಿ, ಮೇಜುಗಳನ್ನು ನಾವೇ ಸ್ವಚ್ಛಮಾಡುತ್ತಿದ್ದೆವು. ಅದರಲ್ಲಿ ತಕರಾರಿರಲಿಲ್ಲ. ನಾನೇ ಮಾಡಬೇಕೇನು? ಎನ್ನುವ ಪ್ರಶ್ನೆ ಇರಲಿಲ್ಲ. ಎಲ್ಲರಿಗಿಂತ ಬೇಗ ಬಂದವರು ಮೇಜು ಕುರ್ಚಿಗಳನ್ನು ವ್ಯವಸ್ಥಿತವಾಗಿ ಜೋಡಿಸುತ್ತಿದ್ದರೆ, ಹುಡುಗರು ಕಿಟಕಿ, ಗಾಜುಗಳನ್ನು ಶುಚಿಗೊಳಿಸುತ್ತಿದ್ದರು. ಪ್ರತೀ ತರಗತಿಯ ಬಳಿಕ, ಮತ್ತು ಶಾಲೆಯ ಕೊನೇಯ ಬೆಲ್ಲು ಬಾರಿಸಲು ಯಾವುದಾದರೂ ತರಗತಿಯ ಹುಡುಗನನ್ನು ಕಳುಹಿಸುತ್ತಿದ್ದರು. ಯಾವುದೇರೀತಿಯ ನಿರ್ಲಕ್ಷ್ಯದಿಂದಿದ್ದರೂ ಶಾಲೆಯ ಕೊನೆಯ ಘಳಿಗೆಯ ಘಂಟೆ ಬಾರಿಸಲಾದಾಗ ಮಾತ್ರ ಎಲ್ಲರೂ “ಜನಗಣಮನ..” ಒಕ್ಕರಲಲ್ಲಿ ಜೋರಾಗಿ ಹಾಡುತ್ತಿದ್ದೆವು. ಅದೆಷ್ಟು ಭಕ್ತಿ ಬಂದುಬಿಡುತ್ತಿತ್ತೆಂದರೆ, ಎಲ್ಲಿ ನಿಂತಿದ್ದೇವೋ ಅಲ್ಲಿ ಕೊರಡಿನಂತೆ ನಿಂತು ಹಾಡುತ್ತಿದ್ದೆವು. ತುಟಿಯ ಹೊರತಾಗಿ ದೇಹದ ಬೇರಾವಭಾಗವೂ ಅಲುಗಾಡುತ್ತಿರಲಿಲ್ಲ. ಹಾಗೇನಾದರೂ ಅಲ್ಲಾಡಿದರೆ, ಏನೋ ದೊಡ್ಡ ತಪ್ಪು ಮಾಡಿದಂತೆ ನೋಡಲಾಗುತ್ತಿತ್ತು. ಹಾಗಾಗಿ ಕಿಟಕಿ ಸ್ವಚ್ಛ ಮಾಡುತ್ತಿದ್ದವರು, ಕಂಪೌಂಡು ಹತ್ತಿದವರು, ಆಟದ ಮೈದಾನದಲ್ಲಿದ್ದವರು, ಶೌಚಾಲಯಕ್ಕೆ ಹೋದವರು, ಚೀಲವನ್ನು ಅರ್ಧ ಕೈಗೆ ಏರುಸಿಕೊಂಡವರು, “ಜಯಹೇ…” ಎಂದು ಕೊನೆಯಾಗುವವರೆಗೂ ಅಲ್ಲಲ್ಲಿಯೇ ಪ್ರತಿಮೆಗಳಾಗಿ ನಿಂತು ಬಿಡುತ್ತುದ್ದೆವು. ಇನ್ನು ಸ್ವಾತಂತ್ರ್ಯ ದಿನ, ಗಣರಾಜ್ಯಗಳಂತಹಾ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಸಾಲುಗಟ್ಟಿ ಅಜ್ಜರಕಾಡು ಮೈದಾನದ ಕಡೆ ನಮ್ಮ ಪರೇಡ್ ನಡೆಯುತ್ತಿತ್ತು. ಶಾಲೆಯಿಂದ ಮೈದಾನ ತಲುಪುವ ವರೆಗೂ ಭಾರತ್ ಮಾತಾಕೀ ಜೈ, ವಂದೇ ಮಾತರಂ, ಜೈಜವಾನ್- ಜೈಕಿಸಾನ್, ಅಂತ ಕೂಗೀ, ಕೂಗೀ ಧ್ವನಿ ಬಿದ್ದುಹೋಗುತ್ತಿದ್ದವು. ಆದರೂ ಮೈದಾನದಲ್ಲಿ ಸಿಗುವ ಹಳದಿ ಲಡ್ಡು ಯಾವುದೇ ನೋವನ್ನಾದರೂ ಮರೆಯುವ ಶಕ್ತಿ ಕೊಡುತ್ತಿತ್ತು. ಇನ್ನು ಶಾಲೆಯಲ್ಲಿ ಧ್ವಜಸ್ತಂಭಕ್ಕೆ ಹತ್ತಿ ಧ್ವಜಕ್ಕೆ ಹೂ ಕಟ್ಟುವ “ಸಾಹಸ”ದ ಕೆಲಸ ಮಾಡುತ್ತಿದ್ದುದು ಸಣಕಲು ದೇಹದ ನನ್ನ ಅಣ್ಣ. ಅದು ನನಗೆ ಹೆಮ್ಮೆಯ ವಿಷಯವಾಗಿತ್ತು. ಹಾಗೆ ಅಣ್ಣ ಸ್ತಂಭಕ್ಕೆ ಹತ್ತಿದಾಗಲೆಲ್ಲಾ ಅವನೇನೋ “ಹೀರೋ” ಎಂಬಂತೆ ಗೆಳತಿಯರ ಮುಂದೆ ನಾನು ಎದೆಯುಬ್ಬಿಸಿ ನಡೆಯುತ್ತಿದ್ದೆ. ಈಗ ಅದನ್ನು ನೆನೆದರೇ ನಗು ಉಕ್ಕಿಬರುತ್ತದೆ.

ಕೊನೆಗೆ ಆರನೇ ತರಗತಿ ಉತ್ತೀರ್ಣಳಾದಾಗ ಮನೆ ಬದಲಾವಣೆಯಾಯಿತು. ಈಗ ಶಾಲಾ ಬದಲಾವಣೆ ಅನಿವಾರ್ಯವಾಯಿತು. ತಂದೆಯವರು ಶಾಲೆಯಿಂದ ನಮ್ಮಮೂರುಜನರ ಟಿ.ಸಿ. ಕೇಳಲು ಹೋದಾಗ ಶಾಂತಾ ಟೀಚರ್, ಅತ್ತುಕರೆದು ಪರಿಪರಿಯಾಗಿ, ಶಾಲೆಬದಲಾಯಿಸದಂತೆ ಕೇಳಿಕೊಂಡಿದ್ದರಂತೆ. ಅಂತೂ ಇಂತೂ ನನಗೆ ಏಳನೇ ತರಗತಿಗೆ “ಶಿಸ್ತಿನ ಶಾಲೆ”ಗೆ ದಾಖಲಿಸಲಾಯಿತು. ಅಲ್ಲಿ ದಿನವೂ ಯೂನಿಫಾರಮ್ ಹಾಕಬೇಕಾಗಿತ್ತು. ಪ್ರತಿದಿನ ತಪ್ಪದೇ ಮನೆಕೆಲಸ ಮಾಡಬೇಕಿತ್ತು. ಅಲ್ಲದೇ ಮಾತು ಮಾತಿಗೂ ಇಂಗ್ಲಿಷ್ ಮಾತನಾಡುವ ಟೀಚರ್ ಗಳು ಮತ್ತು ಸಹಪಾಠಿಗಳು. ನನಗೋ ಯಾವುದೂ ಅರ್ಥವಾಗುತ್ತಿರಲಿಲ್ಲ. ಮಹಾತ್ಮಾಗಾಂಧಿ ಶಾಲೆಯಲ್ಲಿ ವಾಚಾಳಿಯಾಗಿದ್ದ ನಾನು ಈ ಶಾಲೆಯಲ್ಲಿ ಮೌನಬೊಂಬೆಯಾಗಿದ್ದೆ. ಇಂಗ್ಲೀಷ್ ಮೊದಲೇ ಅರ್ಥವಾಗದ ವಿಷಯ. ಅದರೊಂದಿಗೆ ಗಣಿತ ಹೋಗಿ “ಮ್ಯಾತ್ಸ್” “ಮ್ಯಾತಮ್ಯಾಟಿಕ್ಸ್” ಆಗಿತ್ತು, ಸಮಾಜ “ಸೋಷಿಯಲ್‌”, ವಿಜ್ಞಾನ “ಸಾಯನ್ಸ್” ನೀತಿಪಾಠ “ಮೋರಲ್ ಸಾಯನ್ಸ್” ಮತ್ತು ನನ್ನ ಪ್ರೀತಿಯ ಆಟದ ಸಮಯ “ಗೇಮ್ಸ್ ಪೀರಿಯಡ್” ಆಗಿತ್ತು!!! ಇವೆಲ್ಲಾ ಅರ್ಥವಾಗಲು ಬರೋಬ್ಬರಿ ಒಂದು ವರ್ಷವಾಗಿತ್ತು. ಅದರ ಬಳಿಕ ಹೈಸ್ಕೂಲ್ ಮೆಟ್ಟಿಲು ತುಳಿದು, ಖೋಖೋ, ವಾಲೀಬಾಲ್, ಶಟಲ್, ರಿಲೇ, ಹೀಗೇ ಎಲ್ಲಾ ಆಟೋಟಗಳಲ್ಲೂ ಕೈಚಳಕ ಕಾಲುಚಳಕ ತೋರಿಸಿ ಹೌಸ್ ಚಾಂಪಿಯನ್ ಅನಿಸಿದ್ದೂ ಆಯಿತು, ಆಂಗ್ಲ ಮಾಧ್ಯಮದ ಬ್ರಿಲಿಯಂಟ್ ಗಳಿಗೆ ಸಡ್ಡುಹೊಡೆಯುವಂತೆ ಸ್ಟೇಜ್ ಗಳಲ್ಲಿ, ಶಾಲಾ ಪಾರ್ಲಿಮೆಂಟ್ ಸೆಶನ್ ಗಳಲ್ಲಿ ಡಿಬೇಟ್ ನಡೆಸಿದ್ದೂ, ಮತ್ತೊಂದು ವರ್ಷ ಗೇಮ್ಸ್ ಮಿನಿಸ್ಟರ್ ಆದದ್ದೂ ಆಯಿತು. ಹಾಗೂ ಹೀಗೂ ಎಸ್.ಎಸ್.ಎಲ್.ಸಿ ಗೆ ಬರುವ ಹೊತ್ತಿಗೆ. ಒಂದಷ್ಟು ಪ್ರಬುದ್ಧತೆಯೂ, ಇಂಗ್ಲಿಷ್ ನ ಮೇಲೆ ಹಿಡಿತವೂ ಬಂದಿತ್ತು. ಇವೆಲ್ಲಾ ಆಗಿ ಒಂದೆರಡುದಶಕಗಳೇ ಕಳೆದಿವೆ. ಆದರೆ ನೆನಪುಗಳಿನ್ನೂ ತಾಜಾ ಆಗಿವೆ. ಆ ಚಿನ್ನದಂತಹಾ ದಿನಗಳಿನ್ನು ಎಂದಿಗೂ ಮರಳಿಬಾರದು.

ಆದರೆ, ಈಗಲೂ ಆಂಗ್ಲ ಭಾಷೆಯ ಕುರಿತಾದ ಕನ್ ಫ್ಯೂಷನ್ ಇದ್ದೇಇದೆ.. ಅದೇನೆಂದರೆ, ನಾವು ಕಲಿಯುತ್ತಿದ್ದಾಗಿನ ಇಂಗ್ಲಿಷ್ ಬಹುತೇಕ ಶಬ್ಧಗಳು ತಮ್ಮ ಮೂಲರೂಪವನ್ನು ಕಳಕೊಂಡಿವೆ. ನಾವು ಪ್ರತಿಯೊಂದು ವಿಷಯದಲ್ಲೂ ಪಾಶ್ಚಾತ್ಯರ ಅನುಕರಣೆ ಮಾಡಲು ಹಾತೊರೆಯುತ್ತೇವೆ. ಇಲ್ಲೂ ಹಾಗೇ ಅವರಂತಹಾ ಸ್ಪೀಡ್ ಆಗಿರುವ ಇಂಗ್ಲೀಷ್ ಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುತ್ತಿದ್ದೇವೆ. ಉದಾಹರಣೆಗೆ, “ಯೂ” ಈ U ನಲ್ಲಿ “ನೀನು”, “ನೀವು” ಎಲ್ಲಾ ಸೇರಿಕೊಂಡಿದೆ. ಇಂಗ್ಲೀಷ್ನಲ್ಲಿ ಗೌರವಸೂಚಕ ಪದಗಳಿಲ್ಲ ಎಂದೇ ಹೇಳಬೇಕು ಏಕೆಂದರೆ, ನೂರರ ವಯಸ್ಸಿನ ವೃದ್ಧರಿಗೂ U ಎನ್ನಲಾಗುತ್ತದೆ. ಒಂದು ದಿನದ ಮಗುವಿಗೂ U ಎಂದೇ ಸಂಬೋಧಿಸಲಾಗುತ್ತದೆ. ನಾವು ಹಿಂದೆ “ಹಲೋ, ಹೌ ಆರ್ ಯೂ..” ಎಂದು ಕೇಳುತ್ತಿದ್ದೆವು, ಅದೀಗ “ಹೇ, ಗಯ್ಸ್ ವಾಟ್ಸಪ್..” ಎಂದು ಬದಲಾಗಿದೆ?! ಈಗಿನ ಮಕ್ಕಳಮುಂದೆ ಹೌ ಆರ್ ಯೂ ಎಂದೇನಾದರೂ ನೀವು ಕೇಳಿದರೆ, ಇವನ್ಯಾರಪ್ಪಾ ಹಳಿಗುಗ್ಗು ಎಂಬಂತೆ ನೋಡುವರು.!! ಇನ್ನು “ಫೋಟೋ” ಬದಲಾಗಿ ‘ಸ್ನ್ಯಾಪ್’ “ಪಿಕ್ಚರ್”, “ಪಿಕ್” “ಸೆಲ್ಫೀ” ಆಗಿ, ಆಮೇಲೆ ಈಗ ಮೊಬೈಲ್ ಗಳಲ್ಲಿ ಇನ್ನೂ ಅದೆಷ್ಟು ಭಡ್ತಿ ಹೊಂದುವುದೋ ಅರಿಯದು. ಪ್ರೊಫೆಶನ್, ಪ್ರೋ ಆಗಿದೆ, ಇನ್ಫಾರ್ಮೇಶನ್ ಇನ್ಫೋ ಆಗಿದೆ, ಇಂಟ್ರಡಕ್ಷನ್, ಇಂಟ್ರೋ ಆಗಿದೆ? ಟೀಚರ್, ಮ್ಯಾಡಮ್ ನಿಂದ ಭಡ್ತಿಯಾಗಿ “ಮ್ಯಾಮ್”ಆದರೆ, ಬ್ರದರ್ ಬ್ರೋ, ಸಿಸ್ಟರ್, ಸಿಸ್, ಮದರ್ ಮಮ್ಮಿ ಆಗಿ ಮಾಮ್ ಆದರೆ, ಫಾದರ್ ಡ್ಯಾಡಿ, ಡ್ಯಾಡ್, ಆಗಿ ಮತ್ತಿನ್ನೇನಾಗುತ್ತಾರೋ ಗೊತ್ತಿಲ್ಲ!! ಇನ್ನು ನನ್ನನ್ನು ಮತ್ತಷ್ಟು ತಲೆಕೆರೆದುಕೊಳ್ಳುವಂತೆ ಮಾಡುವ ಮಾತೆಂದರೆ, “X”. ಈ X ನ್ನು ನಾವು ಶಾಲೆಯಲ್ಲಿ ಓದುವಾಗ “ಎಕ್ಸ್ ಮಸ್ ಟ್ರೀ” ಎಂದು ಉಚ್ಚರಿಸುತ್ತಿದ್ದೆವು. ಆಗ ಟೀಚರ್, x’mas tree, ಯನ್ನು ಕ್ರಿಸ್ಮಸ್ ಟ್ರೀ ಎಂದು ಓದಿಸಿದರು, ಆದರೆ, Xylophone ಅನ್ನು ಝೈಲೋಫೋನ್ ಅಂದರು?!! ಆಗ ಏನಪ್ಪಾ X ಅಣ್ಣ, ನೀನು “ಕ” ವೋ, “ಝ” ವೋ ಎಂದು ಕೇಳಬೇಕು ಅನ್ನಿಸುತ್ತಿತ್ತು. ಮೊನ್ನೆ ಮೊಬೈಲ್ ಅಂಗಡಿಯೊಂದರಲ್ಲಿ “Xiaomi” ಅಂತ ಬರೆದಿದ್ದನ್ನು ಓದಲು ಹರಸಾಹಸ ಪಟ್ಟೆ, ಆದರೆ ಅದು ಯಾವ ರೀತಿಯ ಉಚ್ಚಾರಣೆಯೋ ನನಗರ್ಥವಾಗಲಿಲ್ಲ. ಕೊನೆಗೆ ಮಕ್ಕಳಿಂದ ಓದಿಸಿದ್ರೆ, “ಶಾವೋಮಿ” ಅನ್ನಬೇಕೇ!!??? ಇದರಲ್ಲಿ S ಎಲ್ಲಿದೆ ಅಂದ್ರೆ, ಇಲ್ಲಮ್ಮಾ, ಈ X ಅನ್ನು “ಶ” ಅಂತ ಉಚ್ಚರಿಸ್ತಾರೆ ಅಂತೆ!!? ಅದೇ ರೀತಿ Volkswagen. ಇದನ್ನು ಬರೆಯುವುದು V ಇಂದ ಆದರೂ ಉಚ್ಚರಣೆ F ನಿಂದ!! “ಫೋಕ್ಸ್ ವೇಗನ್” ಅಂತೆ. ಏನು ಕರ್ಮವೋ ಏನೋ ಒಟ್ಟಾರೆ, ಈ ಇಂಗ್ಲಿಷ್ ಭಾಷೆ ಬಾಲ್ಯದಿಂದಲೂ ನನ್ನ ಫಜೀತಿಗೊಳಗಾಗಿಸಿದ್ದಂತೂ ಸತ್ಯ.. ಇದು ಓದುತ್ತಿದ್ದಂತೆಯೇ ನಿಮ್ಮ ಮನದಲ್ಲೂ ಕೆಲವು ಪರಿವರ್ತಿತ ಶಬ್ಧಗಳು ಸುಳಿದು ಹೋಗಿಬಹುದು ಅಲ್ಲವೇ?

ಕನ್ನಡ ಹಾಗಲ್ಲ ತೀರಾ ಸರಳ ಸುಂದರ ಭಾಷೆ. ಏಕೆಂದರೆ ಕನ್ನಡದಲ್ಲಿ ನಾವು ಉಚ್ಛರಿಸಿದ್ದನ್ನೇ ಬರೆಯುತ್ತೇವೆ. ಮತ್ತು ಬರೆದಿದ್ದನ್ನೇ ಉಚ್ಛರಿಸುತ್ತೇವೆ. ಯಾರಿಗೂ ಯಾವುದೇಗೊಂದಲವಿಲ್ಲ. ಆದರೂ ಕನ್ನಡವನ್ನು ಗೂಗಲ್ ಅಣ್ಣ ಯಾಕೋ “ugliest language” ಅಂದಿದೆ. ಇದು ಒಂದುರೀತಿಯ ಭಾಷಾದ್ವೇಷವಾಗಿದೆ. ತಾನು ಉತ್ತಮ ಇತರರು ಕನಿಷ್ಟ ಎನ್ನುವಂತಹಾ ಮಾನವ ಮನೋಸ್ಥಿತಿ ಗೂಗಲ್ ಅಣ್ಣನಿಗೂ ಇರಬಹುದೋ ಹೇಗೆ?

ಏನೇ ಆಗಲಿ, ಸದ್ಯ, ಇಂದಿಗೂ ನನ್ನ ಕನ್ನಡ ಇಂದಿಗೂ, ಯಥಾಸ್ಥಿತಿ ಯಲ್ಲಿ ಉಳಿದಿರುವುದು ನಮ್ಮಂತಹವರ ಪುಣ್ಯ. ಏನೇ ಆಗಲಿ, ಈ ಮೇಲಿನದೆಲ್ಲವೂ ವೈಯಕ್ತಿಕ ಅಭಿಪ್ರಾಯವಷ್ಟೇ ಆಗಿದೆ, ಬದಲಾವಣೆಯು ಲೋಕೋನಿಯಮವಾಗಿದೆ. ಸಮಯ ಸಂದರ್ಭಕ್ಕೆ ತಕ್ಕಂತಹಾ ಬದಲಾವಣೆ ಸರ್ವೇ ಸಾಮಾನ್ಯ. ಬದಲಾವಣೆಗೆ ಹೊಂದಿಕೊಳ್ಳದೇ ಇದ್ದರೆ ಸಮಾಜದ ಜೊತೆಜೊತೆಗೆ ಸಾಗುವುದು ಅಸಾಧ್ಯವಾದೀತು ಅಲ್ಲವೇ?

LEAVE A REPLY

Please enter your comment!
Please enter your name here