ಲೇಖಕರು : ರುಖಿಯಾ ಎ ರಜಾಕ್, ಉಡುಪಿ.

ಈಚೆಗೆ ಎಲ್ಲಾ ಮಾಧ್ಯಮಗಳಲ್ಲೂ ಚರ್ಚೆಯಾಗಿ ಭಾರೀ ಸದ್ದು ಮಾಡಿದ ಸಂಗತಿಯೇ ಈ ಸ್ಕಾರ್ಫ್ ವಿವಾದ.

ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿದ ಕಾರಣಕ್ಕಾಗಿ ತರಗತಿಗೆ ಪ್ರವೇಶ ನಿರಾಕರಣೆ ಮಾಡಿದ ಅಲ್ಲಿನ ಕಾಲೇಜು ಆಡಳಿತ ಮಂಡಳಿಯ ನಿರ್ಧಾರದಿಂದ ವಿದ್ಯಾರ್ಥಿನಿಯರು ಬೋಧನಾ ತರಗತಿಯಿಂದ ಬಹಿಷ್ಕಾರಕ್ಕೆ ಒಳಗಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ಕಾಲೇಜಿಗೆ ಬರುತ್ತಿರುವ ಮುಸ್ಲಿಮ್ ಹೆಣ್ಣು ಮಕ್ಕಳು ತಲೆಗೆ ಶಿರವಸ್ತ್ರ (scarf) ತೊಡುವುದನ್ನು ವಿರೋಧಿಸಿ ಶಾಲಾ ಆಡಳಿತ ಮಂಡಳಿ ಆ ಮಕ್ಕಳನ್ನು ತರಗತಿಯಿಂದ ಹೊರಹಾಕಿತು. ಮಕ್ಕಳು ವಿರೋಧಿಸಿದರು. ಪೋಷಕರು ಮದ್ಯಪ್ರವೇಶವೂ ವಿಫಲವಾಯಿತು. ಇದೀಗ ಹೊರಗಿನಿಂದಲೂ ಮಕ್ಕಳಿಗೆ ಬೆಂಬಲವಾಗಿ ನಿಲ್ಲುವ ಶಿಕ್ಷಕರ ವಿರುದ್ಧ ಪ್ರತಿಭಟಿಸುವ ಪ್ರಹಸನಗಳೆಲ್ಲ ನಡೆಯುತ್ತಲೇ ಇದೆ. ಪ್ರಕರಣವೀಗಲೂ ಸುಖಾಂತ್ಯಗೊಂಡಿಲ್ಲ. ಇದೇ ರೀತಿ ಮುಂದುವರಿದರೆ ಈ ಪ್ರಕರಣವು ಯಾವ ರಾಜಕೀಯ ಪಕ್ಷದ ಯಾವ ತೆವಲಿಗೆ ಆಹಾರವಾಗುವುದೋ ಎಂಬ ಭಯಕಾಡುತ್ತಿದೆ.

ಸದ್ಯಕ್ಕೀಗ ಈ ಎಲ್ಲಾ ಪ್ರಕ್ರಿಯೆಯಲ್ಲಿ ನೋವು, ಹಿಂಸೆ ಅನುಭವಿಸುತ್ತಿರುವವರು ಮಾತ್ರ ಆ ಸಂತ್ರಸ್ತ ಹೆಣ್ಣು ಮಕ್ಕಳು. ಅವರಿಗೆ ತರಗತಿಗೆ ಪ್ರವೇಶವಿಲ್ಲ. ಪಾಠಗಳನ್ನಾಲಿಸಲು ಅವಕಾಶವಿಲ್ಲ. ಮಕ್ಕಳು ಹೊರಗಡೆ ಮೆಟ್ಟಿಲುಗಳಲ್ಲಿ ಅಸಹಾಯಕರಾಗಿ ಕುಳಿತಿರುವ ದೃಶ್ಯ ಯಾವ ರೀತಿಯಿಂದಲೂ ಸ್ವೀಕಾರಾರ್ಹವಲ್ಲ. ಏಕೆಂದರೆ ಮಕ್ಕಳು ಯಾಚಿಸುತ್ತಿರುವುದು ಕೇವಲ ತಮ್ಮ ಶಿರವಸ್ತ್ರಧಾರಣೆಯ ಅಧಿಕಾರವನ್ನು. ಅವರನ್ನು ತರಗತಿಯಿಂದ ಹೊರಗೆ ಹಾಕಿ ಅದನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯವಾಗಿಸಿರುವ ಶಾಲಾಡಳಿತ, ಅವರಿಗೆ ಸಾಂವಿಧಾನದತ್ತ ಹಕ್ಕನ್ನು ನಿರಾಕರಿಸುವ ಮೂಲಕ ಸಮಾಜಕ್ಕೆ ಮತ್ತು ತನ್ನದೇ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶವನ್ನು ನೀಡುತ್ತಿಲ್ಲವೇ? ಒಂದಂತೂ ಸ್ಪಷ್ಠ ಏನೆಂದರೆ, ಈ ನಿರಾಕರಣೆಯು ಆಡಳಿತವರ್ಗದ್ದಲ್ಲ; ಬದಲಾಗಿ ಅದರ ಹಿಂದಿರುವ ಮನು ಸಂಸ್ಕೃತಿಯದ್ದು. ಮನುವಾದಿಗಳು, ಮುಸ್ಲಿಂ ಮಹಿಳೆಯ ಶಿರವಸ್ತ್ರ ಧಾರಣೆಯನ್ನು ದೊಡ್ಡ ಶೋಷಣೆ ಎಂದು ಬಿಂಬಿಸಲು ಪ್ರಯತ್ನಿಸಿದರೂ ಅದೇನೂ ಶೋಷಣೆ ಅನಿಸಿಕೊಳ್ಳುವುದಿಲ್ಲ. ಏಕೆಂದರೆ ಮುಸ್ಲಿಮರ ಶಿರವಸ್ತ್ರವು, ಹಿಂದೂ ಸಹೋದರಿಯರ ಬಿಂದಿ, ಬಳೆ, ಕುಂಕುಮ ತಾಳಿಗಳಂತೆ ತೀರಾ ಸಣ್ಣ ಆದರೆ ಅಷ್ಟೇ ಗಂಭೀರ ಮತ್ತು ಭಾವುಕ ವಿಷಯ. ಏಕೆಂದರೆ ಇವೆಲ್ಲವೂ ಆಯಾ ಧರ್ಮದ ಮಹಿಳೆಯರ ಹಕ್ಕಾಗಿದೆ. ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ.

ಇಸ್ಲಾಮ್ ನಲ್ಲಿ “ಅನಗತ್ಯ” ಅಥವಾ “ಅತಿರೇಕ” ಅನಿಸುವಂತಹ ಯಾವುದೇ ರೀತಿಯ ಹೆಚ್ಚುವರಿ ನಿಯಮ ಮತ್ತು ಕಟ್ಟುಪಾಡುಗಳಿಲ್ಲ ಎಂಬುವುದನ್ನು ಅದನ್ನು ವಿರೋಧಿಸುವವರು ಮೊದಲು ತಿಳಿದುಕೊಳ್ಳಬೇಕಿದೆ. ಆದರೆ ಗಂಡು ಮತ್ತು ಹೆಣ್ಣು ಸಮೂಹಕ್ಕೆ ಅದರದೇ ಆದ ವಸ್ತ್ರಸಂಹಿತೆ ಖಂಡಿತವಾಗಿಯೂ ಇದೆ. ಅದು ಗಂಡು, ಹೆಣ್ಣಿನ ಸಂರಕ್ಷಣೆ ಮತ್ತು ಘನತೆಗಾಗಿಯೇ ಹೊರತು ಕಟ್ಟುಪಾಡು, ಬಂಧನ ಅಥವಾ ಶೋಷಣೆಯಲ್ಲ. ಸಾಧಾರಣವಾಗಿ ಅತ್ಯಾಚಾರವಾದಾಗ, ಅತ್ಯಾಚಾರಿಯನ್ನು ಶಿಕ್ಷಿಸುವುದಕ್ಕಿಂತಲೂ ಹೆಚ್ಚಾಗಿ ಮಹಿಳೆಯ ಉಡುಪಿನ ಕುರಿತೇ ಚರ್ಚೆ ಮಾಡುವ ಮತ್ತು ಚುಚ್ಚು ಮಾತನಾಡಲ್ಪಡುವ ದೇಶ ನಮ್ಮದು. ಆಕೆ ಸಂಪೂರ್ಣ ವಸ್ತ್ರ ಧರಿಸಿದ್ದರೆ. ಅತ್ಯಾಚಾರವಾಗುತ್ತಿರಲಿಲ್ಲ ಎಂಬ ಕೊಂಕು ಕೂಡಾ ಸಂಸ್ಕೃತಿ ರಕ್ಷಕರೆನಿಸಿಕೊಂಡವರಿಂದಲೇ ಕೇಳಿಬರುತ್ತದೆ. ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕುವುದಕ್ಕಿಂತಲೂ ಲೂಟಿಯಾಗದಂತೆ ತಡೆಯುವುದು ಉತ್ತಮವಲ್ಲವೇ? ಮಹಿಳೆಗೆ ಗೌರವ ಕೊಡುವಂತಹಾ, ಅವಳನ್ನು ಸಂರಕ್ಷಿಸುವಂತಹಾ ಮುಸ್ಲಿಮರ ಪರ್ದಾ ಪದ್ಧತಿಯನ್ನು ಯಾಕೆ ವಿರೋಧಿಸುತ್ತೇವೆ ಎಂಬುವುದನ್ನೇಕೆ ಇವರು ಚಿಂತಿಸುವುದಿಲ್ಲ?. ಇನ್ನು ಹೆಣ್ಣು ಅರೆಬರೆಯಾಗಿ ಬಟ್ಟೆ ತೊಡುವಾಗ ಅವಳು ಮಾಡರ್ನ್ ಎಂದು ಅಟ್ಟಕ್ಕೇರಿಸುವವರು, ಆ ಒಳ ಉಡುಪಿನಂತಹಾ ತೀರಾ ಖಾಸಗಿ ಬಟ್ಟೆ ಅವಳ ಚಾಯ್ಸ್ ಎಂದು ಬೀಗುವವರು, ಅದರ ಎದುರಿಗೆ ಈ “ಪರ್ದಾ” ಮುಸ್ಲಿಮ್ ಹೆಣ್ಣುಮಕ್ಕಳ ಘನತೆವೆತ್ತ “ಚಾಯ್ಸ್” ಆಗಿದೆ ಎಂದು ಯಾಕೆ ಭಾವಿಸುವುದಿಲ್ಲ?

ಹೆಣ್ಣಿನ ಸುರಕ್ಷತೆಯಲ್ಲಿ ಅತಿ ಕನಿಷ್ಠ ಸಂವೇದನಾಶೀಲವಾಗಿರುವ ದೇಶ ನಮ್ಮದು. ಇಲ್ಲಿ ಅರ್ಧನಿಮಿಷಕ್ಕೊಂದು ಅತ್ಯಾಚಾರವಾಗುತ್ತಿದೆ. ಮನೆ-ವಠಾರ, ಶಾಲಾ ಕಾಲೇಜುಗಳಲ್ಲಿ, ವೃತ್ತಿ ಪ್ರದೇಶಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಆಸ್ಪತ್ರೆ, ಕಚೇರಿಗಳಲ್ಲಿ, ಹೆಣ್ಣುಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುತ್ತಾರೆ. ಮತ್ತು ಈ ಎಲ್ಲಾ ರೀತಿಯ ಅನಿಷ್ಠಗಳಿಂದ ಅವಳನ್ನು ರಕ್ಷಿಸಲು ಯಾವುದೇ ರಾಜಕೀಯ ಪಕ್ಷಗಳಿಗೂ ಅಷ್ಟೇ ಏಕೆ ಸ್ವಯಂ ಸಂಸ್ಕೃತಿ ರಕ್ಷಕರೆನಿಸಿಕೊಂಡವರಿಗೂ ಸಾಧ್ಯವಾಗಿಲ್ಲ. ಆ ಕೆಟ್ಟ ಘಟನೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಈ “ಪರ್ದಾ” ಸಹಕಾರಿಯಾಗುವಂತಿದ್ದರೆ, ಅದರ ಧಾರಣೆಯಲ್ಲಿ ತಪ್ಪೇನಿದೆ? ಅದಕ್ಕೆ ಅಡ್ಡಿಯನ್ನುಂಟು ಮಾಡಿ ಹೆಣ್ಣುಮಕ್ಕಳ ಅಸುರಕ್ಷತೆಗೆ ಕಾರಣರಾಗುವುದೇಕೆ? ಅಷ್ಟುಮಾತ್ರವಲ್ಲದೇ ಅದನ್ನೇ ನೆಪವಾಗಿಟ್ಟುಕೊಂಡು ಮುಸಲ್ಮಾನ ಹೆಣ್ಮಕ್ಕಳ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುವಂತೆ ಮಾಡುವುದು ಎಲ್ಲಿಯ ನ್ಯಾಯ?

ಇನ್ನುಳಿದಂತೆ, ಅಪಾರ್ಟ್ಮೆಂಟುಗಳಲ್ಲಿ, ಮುಸಲ್ಮಾನರಿಗೆ ಮನೆ ನೀಡದಿರುವುದು, ಶಾಲೆಗಳಲ್ಲಿ ಶಿರವಸ್ತ್ರ ಧರಿಸಬಾರದು ಎಂಬ ನಿಯಮ ಮಾಡುವುದು ಮುಸ್ಲಿಮ್ ವ್ಯಾಪಾರಿಗಳಿಗೆ ವ್ಯಾಪಾರದ ಅನುಮತಿ ನೀಡದಿರುವುದು, ಆಹಾರದ ಹಕ್ಕನ್ನು ಕಸಿಯುವುದು, ಚರ್ಚುಗಳಲ್ಲಿ ಮತಾಂತರದ ಸುಳ್ಳುನೆಪವೊಡ್ಡಿ ಪ್ರಾರ್ಥನೆಗಳಿಗೆ ಅಡ್ಡಿಪಡಿಸುವುದು, ಹಿಂಸೆಯನ್ನು ವಿಜ್ರಂಭಿಸುವುದು, ಅಶಕ್ತರು ಮತ್ತು ವೃದ್ಧರನ್ನು ಹಿಂಸಿಸಿ “ಜೈಶ್ರೀರಾಮ್” ಹೇಳಿಸಿ ವಿಕೃತಿ ಮೆರೆಯುವುದರ ಹಿಂದಿರುವ ಮರ್ಮ ಏನೆಂದು ಅರ್ಥವಾಗದ ಕಾಲದಲ್ಲಿ ನಾವಿಲ್ಲ. ಇದು ಸಹಬಾಳ್ವೆಯಿಂದ ಬಾಳುತ್ತಿರುವ ಕೋಮುಗಳನ್ನು ಆಂತರಿಕ ಗಲಭೆಗಳಲ್ಲಿ ಮುಳುಗಿರುವಂತೆ ಮಾಡುವ ನೀಚ ಹುನ್ನಾರವಲ್ಲದೇ ಇನ್ನೇನೂ ಅಲ್ಲ.

ಈ ನೆಲದಲ್ಲಿ ವರುಷಗಳಿಂದ ನಡೆದುಕೊಂಡು ಬರುತ್ತಿರುವ ಹಿಂದೂ ಸಹೋದರರ ಸಂಪ್ರದಾಯವಾದ ನೇಮ, ಕೋಲ, ಪೂಜೆ ಭಜನೆಗಳು, ಗಣಪತಿ ವಿಸರ್ಜನೆಗಳು, ದೀಪಾವಳಿ ಪಠಾಕಿಗಳು, ಅದರಂತೆಯೇ, ಕುಂಕುಮ, ಬಳೆ, ಬಿಂದಿ, ಕಾಲುಂಗುರ, ಮಾಂಗಲ್ಯಗಳ್ಯಾವುದೂ ಮುಸಲ್ಮಾನನಿಗೆ ಕಿರಿಕಿರಿ ಉಂಟುಮಾಡಿದ ಒಂದೇ ಒಂದು ಘಟನೆ ನಾವು ಕಂಡಿಲ್ಲ ಕೇಳಿಲ್ಲ. ಬದಲಾಗಿ ಮುಸಲ್ಮಾನರು ಅದೊಂದು ನಾಡಹಬ್ಬ ಎಂಬಂತೆ ಸಂಭ್ರಮಿಸುವುದನ್ನೂ ನಾವು ಕಂಡಿದ್ದೇವೆ. ಹಾಗಾದರೆ ಮುಸಲ್ಮಾನರ ಆಚರಣೆಗಳು ವಸ್ತ್ರ ಸಂಹಿತೆಗಳು, ಆರಾಧನೆಗಳು, ಆಹಾರ ಕ್ರಮಗಳು ಯಾಕಾಗಿ ಇವರಿಗೆ ಅಸಹನೀಯವಾಗುತ್ತಿದೆ?

ತನ್ನ ಅಟ್ಟಹಾಸದಿಂದ ಜಗತ್ತನೇ ಲಾಕ್ ಮಾಡಿಸಿ ಸ್ತಬ್ಧವಾಗಿಸಿದ ಕೊರೋನ ಬಾಧಿತರಿಗೆ ಆಕ್ಸೀಜನ್ ನೀಡಿಯಾದರೂ ಬದುಕಿಸಬಹುದು. ಆದರೆ ಕೋಮುರೋಗ ಪೀಡಿತರ ಚಿಕಿತ್ಸೆ ಮಾತ್ರ ಸಾಧ್ಯವಿಲ್ಲ. ಮುಸಲ್ಮಾನರನ್ನು ಈ ನೆಲದವರಲ್ಲ, ಅವರು ನಮ್ಮವರಲ್ಲ ಪರಕೀಯರು ಎಂದು ಬಿಂಬಿಸಿ, “ಅವರ” ಕುರಿತ ಅಸಹನೀಯತೆಯ., ಅಸಹಿಷ್ಣುತೆಯ ವಿಷ ಹಬ್ಬಿಸಿದ ಸಂಘಪರಿವಾರ ಕೃಪಾಪೋಷಿತ ಬಿಜೆಪಿಯು ಕನಿಷ್ಠ ಸ್ವಜನ ಪಕ್ಷಪಾತವನ್ನಾದರೂ ಮಾಡುವ ನೈತಿಕತೆಯನ್ನಾದರೂ ತೋರಿತೇ? ಅದೂ ಇಲ್ಲ. ಅತ್ತ “ಅವರನ್ನು” ತೋರಿಸುತ್ತಲೇ, ಸಂಘಪರಿವಾರವು ಅಛ್ಛೇದಿನ್ ಹೆಸರಲ್ಲಿ ಇತ್ತ ತಮ್ಮನ್ನೇ ಅತಂತ್ರವಾಗಿಸಿದ್ದು ವಾನರ ಪಡೆಗೆ ಅರ್ಥವಾಗಲೇ ಇಲ್ಲ.

ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಸಮಾಜದ ದುರ್ಗತಿಯಿಂದ ನೊಂದ ಶಿಕ್ಷಿತ ವರ್ಗ ಮಾತ್ರ 2014 ರಲ್ಲಿ ತಮ್ಮಿಂದಾದ “ತಪ್ಪಿಗಾಗಿ” ಸಂಕಟ ಪಡುತ್ತಿರುವುದು ಸಮಾಜದಲ್ಲಿ ಮಾನವೀಯತೆ ಇನ್ನೂ ಜೀವಂತವಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ತಾವು ಬಾಳಿ ಬದುಕಿದ ಸುಂದರ ನಿಷ್ಕಲ್ಮಶ ಬಾಲ್ಯ, ಶಾಲಾಪರಿಸರ, ವಿಷಮುಕ್ತ ವಾತಾವರಣ, ನಮ್ಮ ಮಕ್ಕಳಿಗೂ ಸಿಗಬೇಕೆಂಬ ಬಯಕೆಯಿದ್ದರೆ ಪ್ರಜೆಗಳಾದ ನಾವು ಕೋಮು ಸೌಹಾರ್ದತೆಯೊಂದಿಗೆ ಬದುಕಬೇಕಾಗಿದೆ. ಪ್ರಜೆಗಳು ಅರ್ಥ ಮಾಡಿಕೊಂಡು ಎಚ್ಚೆತ್ತುಕೊಳ್ಳಬೇಕಿದೆ. ದೇಶ ಒಡೆಯಲು ಎಲ್ಲಾ ಪಕ್ಷಗಳೂ ಕೈಯಲ್ಲಿ ತಮ್ಮ ತಮ್ಮ ಪಕ್ಷದ ಚಿಹ್ನೆಯ ಆಯುಧಹಿಡಿದು ಕಾಯುತ್ತಲೇ ಇದೆ. ಗಣೇಶನ ಹಬ್ಬಕ್ಕೆ ಶರಬತ್ತು ಹಂಚುವ ಮೌಲ್ವಿಯೂ ರಮಝಾನ್ ಗೆ ಖರ್ಜೂರ ಹಂಚುವ ಪಂಡಿತನೂ ಭಾರತದ ಅಖಂಡತೆಯ ರೂವಾರಿಗಳಾಗಬೇಕಿದೆ ಅಷ್ಟೇ….

LEAVE A REPLY

Please enter your comment!
Please enter your name here