ಲೇಖಕರು: ಎಲ್ದೋ ಹೊನ್ನೇಕುಡಿಗೆ. ಚಿಕ್ಕಮಗಳೂರು

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನುಮದಿನವಿಂದು.

“ಧರ್ಮವನ್ನು ರಾಜಕೀಯದಿಂದ ಸಂಪೂರ್ಣವಾಗಿ ಹೊರಗಿಡಬೇಕು. ಮಾನವನಾಗಿ ಯಾವ ವ್ಯಕ್ತಿಗೂ ತನ್ನಿಚ್ಛೆಯ ಯಾವುದೇ ಧರ್ಮವನ್ನು ಅನುಸರಿಸಲು ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಆದರೆ ರಾಜಕೀಯವು ಧರ್ಮ ಅಥವಾ ಯಾವುದೇ ಅಲೌಕಿಕ ಪರಿಕಲ್ಪನೆಗಳಿಂದ ನಿರ್ದೇಶಿತವಾಗ ಕೂಡದು. ಆರ್ಥಿಕ, ರಾಜಕೀಯ ಮತ್ತು ವೈಜ್ಞಾನಿಕ ವಿವೇಚನೆಗಳೇ ರಾಜಕೀಯವನ್ನು ನಿರ್ದೇಶಿಸತಕ್ಕದ್ದು”

1939ರಲ್ಲಿ ಬಾಂಬೆಯಲ್ಲಿ ನಡೆದ ತಮ್ಮ ಫಾರ್ವರ್ಡ್ ಬ್ಲಾಕ್ ಪಕ್ಷದ ಸಮ್ಮೇಳನದ ಭಾಷಣದಲ್ಲಿ ಹೀಗೆಂದು ನುಡಿದಿದ್ದ ಸುಭಾಷ್ ರು ತಮ್ಮ ತಂದೆಯ ನಿರ್ದೇಶನದಂತೆ ಐ.ಸಿ.ಎಸ್. ಪರೀಕ್ಷೆ ಬರೆಯಲು ಇಂಗ್ಲೇಡ್ ಗೆ ತೆರಳಿದರು. ಅಂದಿನ ಕಾಲದಲ್ಲಿ ಬ್ರಿಟೀಷರಷ್ಟೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದ ಈ ಪರೀಕ್ಷೆಯಲ್ಲಿ ಸುಭಾಷ್ ರವರು ಕೆಲವೇ ತಿಂಗಳು ಅಭ್ಯಸಿಸಿ ನಾಲ್ಕನೆಯ ರ್ಯಾಂಕ್ ಪಡೆದು ಉತ್ತೀರ್ಣರಾದರು. ಸುಭಾಷ್ ರವರಿಗೆ ಉನ್ನತ ಹುದ್ದೆ ನೀಡಲು ಬ್ರಿಟಿಷ್ ಸರ್ಕಾರ ಸಿದ್ಧವಾಗಿತ್ತು. ಆದರೆ ತನ್ನ ಜನರ ಸ್ವಾತಂತ್ರ್ಯಹರಣ ಗೊಳಿಸುವ ಸರಕಾರದ ಸೇವೆಗೈಯಲು ಸುಭಾಷ್ ರ ಮನಸಾಕ್ಷಿ ಒಪ್ಪಲಿಲ್ಲ. ಐಸಿಎಸ್ ನೀಡುವ ಅಧಿಕಾರ-ಅಂತಸ್ತು, ಸುಖಭೋಗಗಳನ್ನು ಕಾಲಡಿಯ ಕಸಕ್ಕಿಂತಲೂ ಕೀಳು ಎಂಬಂತೆ ಧಿಕ್ಕರಿಸಿದರು. “ತನ್ನ ಉಪಯುಕ್ತತೆಯನ್ನು ಕಳೆದುಕೊಂಡಿರುವ ಹಾಗೂ ಸ್ವಾರ್ಥಾಧಿಕಾರ, ಹೃದಯ ಹೀನತೆ, ಸಂಕುಚಿತತೆ, ಬಾಲ ಬಡುಕತನಗಳೊಂದಿಗೆ ಬೆಸೆದುಕೊಂಡಿರುವ ಆಡಳಿತಯಂತ್ರದ ಭಾಗವಾಗಲು ನನಗಿಷ್ಟವಿಲ್ಲ” ಎಂದು ತಮ್ಮ ಅಣ್ಣನಿಗೆ ಅವರು ಪತ್ರ ಬರೆದರು.

1921ರ ಅಸಹಕಾರ ಚಳುವಳಿಯ ಮೂಲಕ ಸ್ವಾತಂತ್ರ್ಯಹೋರಾಟಕ್ಕಿಳಿದರು. ಮುಂದಿನ ಐದು ವರ್ಷಗಳಲ್ಲಿ ನೇತಾಜಿ ಪ್ರಬಲ ಸಂಘಟನಾಕಾರರಾಗಿ ಇಡಿಯ ರಾಷ್ಟ್ರದ ಗಮನ ಸೆಳೆದ ಯುವ ನಾಯಕರಾಗಿ ಹೊರಹೊಮ್ಮಿದರು. ಹಲವಾರು ಬಾರಿ ಅವರು ಬಂಧನಕ್ಕೊಳಗಾದರು. ಕುಖ್ಯಾತ ಮಾಂಡಲೇ ಜೈಲಿನಲ್ಲಿಯೂ ಸೇರಿದಂತೆ ವಿವಿಧ ಜೈಲುಗಳಲ್ಲಿ ವರ್ಷಗಟ್ಟಲೆ ಬಂಧನವನ್ನು ಅನುಭವಿಸಿದರು. ಆರೋಗ್ಯ ಕ್ಷೀಣವಾಯಿತು. 1927 ರಲ್ಲಿ ಅವರು ಬಿಡುಗಡೆಯಾದೊಡನೆ ಬಂಗಾಳದ ಕಾಂಗ್ರೆಸ್ ನ ಅಧ್ಯಕ್ಷರಾಗಿ ಚುನಾಯಿತರಾದರು. 1931ರ ಫೆಬ್ರವರಿ 11 ರಂದು ಗುಜರಾತ್ ರಾಜ್ಯದ ಚಿಕ್ಕಗ್ರಾಮ ಹರಿಹರಪುರದಲ್ಲಿ 51ನೇ ಕಾಂಗ್ರೆಸ್ ಅಧಿವೇಶನ ನಡೆಯಲಿತ್ತು. ಸುಭಾಷ್ ಅದರ ಅಧ್ಯಕ್ಷರಾಗಿದ್ದರು. ದೇಶದಾದ್ಯಂತ ಯುವಜನರು ಉತ್ಸಾಹ ಮೇರೆಮೀರಿತ್ತು. ಅಧಿವೇಶನದಲ್ಲಿ ಪಾಲ್ಗೊಳ್ಳಲು ಸುಭಾಷ್ ಕಲ್ಕತ್ತೆಯಿಂದ ಬಾಂಬೆಗೆ ಪ್ರಯಾಣ ಬೆಳೆಸಿದರು. ಮಾರ್ಗದುದ್ದಕ್ಕೂ ಪ್ರತಿ ನಿಲ್ದಾಣದಲ್ಲಿ ಭಾರಿ ಜನಸಮೂಹ ಅವರನ್ನು ಅಭಿನಂದಿಸಿತು. ಪ್ರಯಾಣದುದ್ದಕ್ಕೂ ನಿದ್ರಿಸಲಾಗಲೇ ಇಲ್ಲ ಹರಿಹರಪುರದಲ್ಲಿ ಅವರಿಗೆ ಭಾರೀ ಸ್ವಾಗತ ದೊರೆಯಿತು. ಈ ಐತಿಹಾಸಿಕ ಅಧಿವೇಶನದ ತಮ್ಮ ಭಾಷಣದಲ್ಲಿ ಸುಭಾಷ್ ಪ್ರಸ್ತುತ ಅಂತರಾಷ್ಟ್ರೀಯ ಬೆಳವಣಿಗೆಗಳನ್ನು ಅತ್ಯಂತ ವಸ್ತುನಿಷ್ಟ ರೀತಿಯಲ್ಲಿ ವಿಶ್ಲೇಷಿಸಿದರು. ಮುಂಬರುವ ದಿನಗಳಲ್ಲಿ ಯುದ್ಧದ ಸಾಧ್ಯತೆಗಳನ್ನು ಗುರುತಿಸಿದರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಅನುಕೂಲವಾಗುವಂತೆ ಜನತೆಯನ್ನು ರಾಷ್ಟ್ರೀಯ ಹೋರಾಟಕ್ಕೆ ಸಜ್ಜು ಗೊಳಿಸಲು ಕರೆ ನೀಡಿದರು ಹಾಗೂ ರಾಜಿರಹಿತ ಹೋರಾಟವನ್ನು ಮುಂದುವರಿಸಬೇಕೆಂದು ಕರೆ ನೀಡಿದರು.

ಕ್ರಾಂತಿಕಾರಿ ಹೆಜ್ಜೆಗಳನ್ನಿಡತೊಡಗಿದ ನೇತಾಜಿಯವರು ಮತ್ತು ರಾಜಿ ಸಂಧಾನಕ್ಕೇ ಹವಣಿಸುತ್ತಿದ್ದ ಗಾಂಧೀಜಿ ನೇತೃತ್ವದ ಮಂದಗಾಮಿ ಗುಂಪಿನ ನಡುವೆ ಬಿರುಕು ದೊಡ್ಡದಾಗತೊಡಗಿತು. ನೇತಾಜಿಯ ಅಧ್ಯಕ್ಷೀಯ ಅವಧಿ ಮುಗಿಯುವುದನ್ನೇ ಮಂದಗಾಮಿಗಳು ಕಾಯತೊಡಗಿದರು. ಆದರೆ ಅದಾಗಲೇ ದೇಶದ ಪುರೋಗಾಮಿ ಜನತೆಯ ಮನಸ್ಸನ್ನು ನೇತಾಜಿ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಮುಂದಿನ ಅಧಿವೇಶನ ತ್ರಿಪುರಿಯಲ್ಲಿ ಸಂಘಟಿತವಾಯಿತು. ನೇತಾಜಿ ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲಿ ಎಂಬುದು ರಾಷ್ಟ್ರವಾದಿ ಮುಸ್ಲೀಮ್ ನೇತಾರರು ಸೇರಿದಂತೆ ರವೀಂದ್ರನಾಥ ಠಾಗೋರ್, ವಿಜ್ಞಾನಿಗಳಾದ ಆಚಾರ್ಯ ಪ್ರಫುಲ್ಲಚಂದ್ರ ರೇ, ಢಾ||ಮೇಘನಾದ್ ಸಹಾ ಮುಂತಾದ ಪ್ರಮುಖರೆಲ್ಲರ ಅಭಿಪ್ರಾಯವಾಗಿತ್ತು. ಆದರೆ ಗಾಂಧೀಜಿ ನೇತೃತ್ವದ ಮಂದಗಾಮಿಗಳು ಪಟ್ಟಾಭಿ ಸೀತಾರಾಮಯ್ಯನವರನ್ನು ಅಧ್ಯಕ್ಷರನ್ನಾಗಿಸುವ ಯೋಜನೆ ರೂಪಿಸಿದರು. ಕೊನೆಗೆ ಚುನಾವಣೆ ನಡೆದು 200 ಮತಗಳ ಅಂತರದಿಂದ ನೇತಾಜಿಯವರು ಪಟ್ಟಾಭಿಯವರನ್ನು ಸೋಲಿಸಿದರು.

ಈ ನಡುವೆ ನೇತಾಜಿ ತೀವ್ರ ಕಾಯಿಲೆಗೆ ಒಳಗಾದರು. ಬ್ರಾಂಕೋ ನ್ಯುಮೋನಿಯಾ ದಿಂದ ಹಾಸಿಗೆ ಹಿಡಿದರು. ಹೀಗಾಗಿ ತ್ರಿಪುರಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನ ನಡೆದಾಗ ನೇತಾಜಿ ಹಲವು ಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅವರ ಭಾವಚಿತ್ರದೊಂದಿಗೆ ಅಧಿವೇಶನಗಳು ಜರುಗಿದವು. ವ್ಯಾಧಿಗ್ರಸ್ತರಾಗಿದ್ದರೂ ನೇತಾಜಿ “ಆರು ತಿಂಗಳೊಳಗೆ ಪೂರ್ಣ ಸ್ವಾತಂತ್ರ್ಯ ಕೊಡಬೇಕು” ಎಂದು ಬ್ರಿಟೀಷರಿಗೆ ಅಂತಿಮ ಗಡುವು ನೀಡುವ ಗೊತ್ತುವಳಿಯನ್ನು ಮಂಡಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮಂದಗಾಮಿ ಗುಂಪಿನ ತೀವ್ರ ಅಸಹಕಾರದಿಂದ ನೇತಾಜಿ ಬೇಸತ್ತಿದ್ದರು. ಹೇಗಾದರೂ ಮಾಡಿ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬ ಅಧಿಕಾರದ ದಾಹ ಅವರಿಗಿರಲಿಲ್ಲ. 1939ರ ಏಪ್ರಿಲ್ 29ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಅಧ್ಯಕ್ಷತೆಗೆ ರಾಜೀನಾಮೆ ನೀಡಿದ ನಂತರ ಎಡ ಹಾಗೂ ಪುರೋಗಾಮಿ ಚಿಂತನೆಯುಳ್ಳ ಎಲ್ಲಾ ರಾಷ್ಟ್ರವಾದಿ ಗಳನ್ನು ಒಗ್ಗೂಡಿಸಲು ನೇತಾಜಿ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷವನ್ನು ಕಾಂಗ್ರೆಸ್ ಒಳಗಡೆ ಸ್ಥಾಪಿಸಿದರು. ಫಾರ್ವರ್ಡ್ ಬ್ಲಾಕ್ ಗೆ ಬೆಂಬಲ ಗಳಿಸಿಕೊಳ್ಳುವ ಉದ್ದೇಶದಿಂದ ದೇಶದಾದ್ಯಂತ ಹಲವಾರು ಪ್ರಾಂತ್ಯಗಳಲ್ಲಿ ಸಂಚರಿಸಿದರು. ಎಲ್ಲೆಡೆ ವ್ಯಾಪಕ ಬೆಂಬಲ ದೊರೆಯಿತು. ಬಂಗಾಳದ ಪ್ರಾಂತೀಯ ಕಾಂಗ್ರೆಸ್ ಸಮಿತಿ ಸಂಪೂರ್ಣ ಬೆಂಬಲವನ್ನು ಅರ್ಪಿಸಿತು. ನೋಡುನೋಡುತ್ತಿದ್ದಂತೆ ನೇತಾಜಿ ಕರ್ನಾಟಕಕ್ಕೂ ಬಂದಿಳಿದರು ಅಂದಿನ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ(KPCC) ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಹೊಸಮನಿಯವರು ಫಾರ್ವರ್ಡ್ ಬ್ಲಾಕ್ ಸೇರಿದರು. ನೇತಾಜಿ ಕರ್ನಾಟಕಕ್ಕೆ ಬಂದಾಗ ಧಾರವಾಡದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಇಂದಿನ ಹಾವೇರಿ ಜಿಲ್ಲೆಯ ಬ್ಯಾಡಗಿಗೆ ನೇತಾಜಿ ತೆರಳಿದರು. ಅನಿವಾರ್ಯ ಕಾರಣದಿಂದಾಗಿ ಬ್ಯಾಡಗಿ ತಲುಪಲು ಮಧ್ಯರಾತ್ರಿಯಾಯ್ತು. ನಡು ರಾತ್ರಿಯಲ್ಲೂ ನೂರಾರು ಜನ ನೇತಾಜಿಗೆ ಕಾಯುತ್ತಿದ್ದದು ಹಲವರಲ್ಲಿ ಅಚ್ಚರಿ ಮೂಡಿಸಿತು. ಬ್ಯಾಡಗಿಯಲ್ಲಿ ನೇತಾಜಿಯ ಈ ಅಪೂರ್ವ ಸಭೆಯ ಜ್ಞಾಪಕಾರ್ಥವಾಗಿ ಅವರು ಭಾಷಣ ಮಾಡಿದ ಸ್ಥಳದಲ್ಲಿ ನೇತಾಜಿ ಪುತ್ಥಳಿಯನ್ನು ಇರಿಸಲಾಗಿದೆ. ಈ ಘಟನೆಯನ್ನು ಇಂದಿಗೂ ಜನ ಸ್ಮರಿಸುತ್ತಾರೆ. ಹೀಗೆ ಅವರಿಗೆ ದೊರೆತ ಬೆಂಬಲ ಸಾರ್ವತ್ರಿಕವಾಗಿತ್ತು.

ನೇತಾಜಿಯವರ ಕಾರ್ಯಚಟುವಟಿಕೆಗಳನ್ನು ಹತ್ತಿಕ್ಕಲು ಸರ್ಕಾರ ಅವರನ್ನು ಕಲ್ಕತ್ತೆಯಲ್ಲಿ ಗೃಹಬಂಧನದಲ್ಲಿರಿಸಿತು. ವಿದೇಶಗಳ ಸಹಾಯ-ಸಹಕಾರ ಪಡೆದು ಬ್ರಿಟಿಷರನ್ನು ಭಾರತದಿಂದ ತೊಲಗಿಸಬೇಕೆಂದು ತೀರ್ಮಾನಿಸಿದ ನೇತಾಜಿ 1941 ರ ಜನವರಿ ತಿಂಗಳಿನ ಒಂದು ರಾತ್ರಿ 2 ಘಂಟೆಗೆ ಯಾರಿಗೂ ಸುಳಿವು ನೀಡದೆ ಮುಸ್ಲಿಂ ಮೌಲ್ವಿಯ ವೇಷದಲ್ಲಿ ನೇತಾಜಿ ಯುದ್ಧ ನಿರತ ಜರ್ಮನಿಯ ಕಡೆಗೆ ಪ್ರಯಾಣ ಬೆಳೆಸಿದರು. ಮನೆಯಿಂದ ಹೊರಟು ಕಲ್ಕತ್ತೆಯಿಂದ ಸುಮಾರು 200 ಕಿಲೋಮೀಟರ್ ದೂರದ ಗೋಮ ರೈಲ್ವೆ ಸ್ಟೇಷನ್ ಗೆ ತಲುಪಿ ಯಾರ ಗಮನಕ್ಕೂ ಬಾರದಂತೆ ಪೇಶಾವರದೆಡೆಗೆ ಸಾಗಿದರು. ಅಲ್ಲಿಂದ ಕಾಲ್ನಡಿಗೆಯಲ್ಲಿ ಹಿಮಚ್ಛಾದಿತ ಪರ್ವತಶ್ರೇಣಿಯಲ್ಲಿ ಕಡಿದಾದ ಬೆಟ್ಟಗುಡ್ಡಗಳನ್ನು ಹತ್ತಿಳಿದು ದುರ್ಬಲ ದೈಹಿಕ ಆರೋಗ್ಯದ ನೇತಾಜಿ ಕಾಬೂಲಿನೆಡೆಗೆ ನಡೆದರು. ಅಲ್ಲಿಂದ ಜರ್ಮನಿಯ ಬರ್ಲಿನ್ ತಲುಪಿದರು. ಜರ್ಮನಿಯ ಹಿಟ್ಲರ್ ನಿಂದ ನಿರೀಕ್ಷಿತ ಸಹಾಯ ದೊರೆಯಲಿಲ್ಲ. ಈ ನಡುವೆ ಮಹಾನ್ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ರು ಜಪಾನಿನಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ(INA) ನೇತೃತ್ವ ವಹಿಸಲು ನೇತಾಜಿಯವರನ್ನು ಆಹ್ವಾನಿಸಿದರು ಇದರಲ್ಲಿನ ಉಪಯುಕ್ತತೆಯನ್ನು ಅರಿತ ನೇತಾಜಿ ಅದನ್ನು ಒಪ್ಪಿಕೊಂಡರು. ತಮ್ಮ ಯಾತ್ರೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮುಗಿಸಿಕೊಂಡು ಸ್ವಲ್ಪ ಸಮಯದ ಹಿಂದೆ ತಾವು ಮದುವೆಯಾಗಿದ್ದ ಜರ್ಮನಿಯ ಎಮಿಲಿ ಪಾವೆಲಿನ್ ಶೆಂಕೆಲ್ ಹಾಗೂ ತಮ್ಮ ಮಗುವನ್ನು ಹಿಂದೆ ಬಿಟ್ಟು ನೇತಾಜಿ ಹೊರಟರು. ಜಲಾಂತರ್ಗಾಮಿ ನೌಕೆಯೊಂದರ ಮೂಲಕ ಜೀವಕ್ಕೆ ಆಪತ್ತು ತಂದಂತಹ ಸಾಹಸಿ ಯಾತ್ರೆಯನ್ನು ನಡೆಸಿ ಜಪಾನನ್ನು ತಲುಪಿ ಅಲ್ಲಿ ಐಎನ್ಎ (ಇಂಡಿಯನ್ ನ್ಯಾಷನಲ್ ಆರ್ಮಿ) ಯ ಜವಾಬ್ದಾರಿ ವಹಿಸಿಕೊಂಡರು.

ನಂತರ ವಿವಿಧ ದೇಶಗಳಲ್ಲಿ INAಗೆ ಸಂಪೂರ್ಣ ಬೆಂಬಲವನ್ನು ಗಳಿಸಲು ಚಟುವಟಿಕೆಗಳನ್ನು ಪ್ರಾರಂಭಿಸಿದರು ಸಿಂಗಾಪುರ, ಮಲೇಶಿಯಾ, ಸುಮಾತ್ರ, ಜಪಾನ್ ಗಳನ್ನೊಳಗೊಂಡ ಅನೇಕ ರಾಷ್ಟ್ರಗಳಲ್ಲಿ ಸಂಚರಿಸಿ ಮೈ ನವಿರೇಳಿಸುವ ಮಾತುಗಳನ್ನಾಡಿ ಸಾಧ್ಯವಾದಲ್ಲೆಲ್ಲ ಜನಬೆಂಬಲ ಗಳಿಸಲಾರಂಭಿಸಿದರು. ಬ್ರಿಟಿಷರ ವಿರುದ್ಧದ ಯುದ್ಧಕ್ಕೆ ಹಣದ ಅವಶ್ಯಕತೆಯಿದ್ದು ತಾಯಿನಾಡಿನ ವಿಮೋಚನೆಗೆ ಉದಾರವಾಗಿ ದೇಣಿಗೆ ನೀಡಿ ಎಂಬ ನೇತಾಜಿಯ ಕರೆಗೆ ಅನಿವಾಸಿ ಭಾರತೀಯರು ಕಷ್ಟಕಾಲಕ್ಕೆಂದು ಕೂಡಿಟ್ಟಿದ್ದ ಒಡವೆ, ನಗ-ನಾಣ್ಯಗಳನ್ನು ತಮ್ಮ ನಾಯಕನಿಗೆ ಅರ್ಪಿಸಿದರು. ನೇತಾಜಿಯ ಮಾತುಗಳು ಎಷ್ಟು ಭಾವನಾತ್ಮಕವಾಗಿ ಜನಮಾನಸವನ್ನು ಸೆಳೆಯುತ್ತಿದೆಂದರೆ ಅದೆಷ್ಟೋ ಮಹಿಳೆಯರು ತಮ್ಮ ತಾಳಿಯನ್ನೂ ಬಿಚ್ಚಿ ತಾಯಿನಾಡಿನ ವಿಮೋಚನೆಗಾಗಿ ನೀಡಿದರು.

ನೇತಾಜಿ ಸಂಘಟಿಸಿದ್ದ ಐ. ಎನ್.ಎ. ನಿಜವಾದ ಜನಗಳ ಸೈನ್ಯವಾಗಿತ್ತು. ಐ.ಎನ್ .ಎ. ಸಮಸಮಾಜದ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲು ಹೊರಟ ಪ್ರಾಥಮಿಕ ಶಾಲೆಯಂತಿತ್ತು. ವಿವಿಧ ಜಾತಿ, ಮತ, ಪಂಥಗಳಿಗೆ ಸೇರಿದ ಅಲ್ಲಿನ ಸೈನಿಕರಿಗೆಲ್ಲ ಒಂದೇ ಸ್ಥಳದಲ್ಲಿ ಒಂದೇ ಬಗೆಯ ಅಡುಗೆ ತಯಾರಿಸಿ ನೀಡಲಾಗುತ್ತಿತ್ತು. ಸಶಸ್ತ್ರ ಹೋರಾಟದಲ್ಲಿ ಮಹಿಳೆಯರು ವಹಿಸಬಹುದಾದ ಪಾತ್ರವನ್ನು ಸರಿಯಾದ ರೀತಿಯಲ್ಲಿ ಗುರುತಿಸಿದ ನೇತಾಜಿ ಐ.ಎನ್.ಎ.ಯೊಳಗಡೆ 1943 ಅಕ್ಟೋಬರ್ 22ರಂದು ಮಹಿಳಾ ಯೋಧೆಯರ ಪಡೆಯೊಂದನ್ನು ಸ್ಥಾಪಿಸಿದರು. ಅದೇ ಸುಪ್ರಸಿದ್ಧ ಝಾನ್ಸಿರಾಣಿ ರೆಜಿಮೆಂಟ್. ರಜಿಮೆಂಟಿನ ಬಹುತೇಕ ಸದಸ್ಯರು ಕೂಲಿಗಾರರ, ಸಣ್ಣ ವ್ಯಾಪಾರಿಗಳ ಕುಟುಂಬಗಳಿಗೆ ಸೇರಿದ ಮಕ್ಕಳೂ, ಸೊಸೆಯಿಂದರೂ ಆಗಿದ್ದರು. ಇವರಲ್ಲಿ ಬಹುತೇಕ ಎಲ್ಲರೂ ಸಹ ತಮ್ಮ ಮನೆಗಳಲ್ಲಿ ವಿರೋಧವನ್ನು ಎದುರಿಸಿ ದೇಶದ ಸ್ವಾತಂತ್ರ್ಯದ ಉನ್ನತ ಉದ್ದೇಶಕ್ಕೋಸ್ಕರ ಈ ಹೋರಾಟದಲ್ಲಿ ಭಾಗವಹಿಸಿದ್ದರು. ಅತ್ಯಂತ ಘೋರ ಕಷ್ಟಗಳನ್ನು ತೊಂದರೆಗಳನ್ನು ಎದುರಿಸಬೇಕಾಗುತ್ತದೆಂದು ಗೊತ್ತಿದ್ದರೂ ಸಹ ಇಂತಹ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದುದು ಐ.ಎನ್.ಎ. ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ. ಮಹಿಳೆಯರು ಮನೆಯಿಂದ ಹೊರಬರುವುದೇ ಕಷ್ಟವಾಗಿದ್ದ ಕಾಲದಲ್ಲಿ ನೇತಾಜಿ ಮಹಿಳಾ ಯೋಧರ ಪಡೆಯೊಂದನ್ನು ಸೃಷ್ಟಿಸಿದ್ದು ಅದ್ವಿತೀಯವಾದದ್ದು.

1943ರ ಅಕ್ಟೋಬರ್ ನಲ್ಲಿ ನೇತಾಜಿ ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದರು. ಅಕ್ಟೋಬರ್ 24ರಂದು ಬೆಳಗಿನ ಜಾವ ಆಜಾದ್ ಹಿಂದ್ ಸರ್ಕಾರ ಬ್ರಿಟಿಷರ ಮೇಲೆ ಯುದ್ಧ ಘೋಷಣೆ ಮಾಡಿತು. ಯುದ್ಧದ ಕಣಕ್ಕೆ ಇಳಿದ INA ಅತ್ಯಂತ ಸಾಹಸದಿಂದ ಹೊರಾಡಲಾರಂಭಿಸಿತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ನೇತಾಜಿ ತಮ್ಮ ಅಧೀನಕ್ಕೆ ತೆಗೆದುಕೊಂಡರು. ಭಾರತದ ರಾಷ್ಟ್ರಧ್ವಜವನ್ನು ಅಲ್ಲಿ ಹಾರಿಸಿದರು. 1944ರ ಫೆಬ್ರವರಿ 4, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ದಿನ. ಅರೆಕಾನ್ ನಲ್ಲಿ ನಡೆದ ಯುದ್ಧದಲ್ಲಿ ನೇತಾಜಿಯವರ ನೇತೃತ್ವದಲ್ಲಿ ಐ.ಎನ್.ಎ. ಬ್ರಿಟಿಷ್ ಸೇನೆಯನ್ನು ಸೋಲಿಸಿತು. 18-3-1944 ರಂದು ಐ.ಎನ್.ಎ. ಭಾರತದ ಗಡಿಯನ್ನು ದಾಟಿತು. ವಿಶಾಲ ತಾಯಿನಾಡಿನ ನೆಲವನ್ನು ಸೈನಿಕರು ಅಪ್ಪಿಕೊಂಡರು. ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ನೇತಾಜಿ ಅತಿಮಾನುಷವಾದದನ್ನು ಸಾಧಿಸಿದ್ದರು. ಐ.ಎನ್.ಎ. ಯನ್ನು ಪುನರ್ರಚನೆ ಮಾಡಿ ಮಲಯದಿಂದ ಥೈಲ್ಯಾಂಡ್ ಮತ್ತು ಬರ್ಮಾಗಳನ್ನು ಹಾದು ಭಾರತದ ನೆಲಕ್ಕೆ ಅದನ್ನು ಕೊಂಡೊಯ್ದಿದ್ದರು. ನಂಬಲಸಾಧ್ಯವೆನಿಸುವಂತಹ ಅಸದೃಶ ಸಾಹಸಮಯ ಕಾರ್ಯವನ್ನು ನಿರ್ವಹಿಸಿದರು!

ನಂತರ ಇಂಪಾಲ ಕೊಹಿಮಾವನ್ನು ವಶಪಡಿಸಿಕೊಳ್ಳಲು INA ವೀರಾವೇಶದಿಂದ ಮುನ್ನುಗ್ಗತೊಡಗಿತು. ಆದರೆ ಆಕಾಶವೇ ಬಾಯ್ಬಿರಿದಂತೆ ರೊಯ್ಯನೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ, ಕೆಸರು ತುಂಬಿದ ರಸ್ತೆಗಳು, ಇವುಗಳಿಂದಾಗಿ ಬೆಟ್ಟ ಪ್ರದೇಶಗಳಲ್ಲಿ ಸೈನ್ಯದ ಸಂಚಾರ ಅಸಾಧ್ಯವಾಯಿತು. ಈ ನೈಸರ್ಗಿಕ ವಿಕೋಪವಿಲ್ಲದಿದ್ದರೆ ಐ.ಎನ್.ಎ. ಯ ವಿಜಯೀ ಮುನ್ನಡೆಯನ್ನು ಹಿಮ್ಮೆಟ್ಟಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ವಾಸ್ತವವಾಗಿ ಇಡೀ ಬಂಗಾಳ ನೇತಾಜಿಯ ಬರವಿಗಾಗಿ ಕಾದಿತ್ತು. ಅದು ಸ್ಫೋಟದ ಅಂಚಿನಲ್ಲಿತ್ತು. ಅದಾದ ಪಕ್ಷದಲ್ಲಿ ಇಡೀ ದೇಶದ ಜನತೆ ಒಬ್ಬ ಮನುಷ್ಯನಂತೆ ನೇತಾಜಿಗೆ ಬೆಂಬಲವಾಗಿ ನಿಲ್ಲುತ್ತಿತ್ತು. ಇಂಫಾಲವನ್ನು ವಶಪಡಿಸಿಕೊಂಡಿದ್ದರೆ ಬ್ರಿಟನ್ನಿನ ಮರಣ ಘೋಷಣೆಯಾಗುತ್ತಿತ್ತು.

ಮುಂದಿನ ದಿನಗಳಲ್ಲಿ ಬ್ರಿಟಿಷರು ಐ.ಎನ್.ಎ. ಸೇನೆಯ ಹಿರಿಯ ಅಧಿಕಾರಿಗಳು, ಸೈನಿಕರನ್ನು ಹಿಡಿದು ಕಠಿಣ ಶಿಕ್ಷೆ, ತೀವ್ರ ಹಿಂಸೆಗೆ ಗುರಿಪಡಿಸಿದರು. ತತ್ಪರಿಣಾಮವಾಗಿ ಜನತೆ ಬ್ರಿಟಿಷರ ವಿರುದ್ಧ ಬಂಡೆದ್ದರು. ಅಲ್ಲದೆ ವಾಯುಸೇನೆ ನೌಕಾಸೇನೆ ಗಳಲ್ಲಿದ್ದ ಭಾರತೀಯ ಸೈನಿಕರು ಕೆರಳಿ, ಬಂದೂಕು ಹಿಡಿದು ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಇಲ್ಲಿಯವರೆಗೂ ಭಾರತೀಯ ಸೇನೆಯ ನೆರವಿನಿಂದ ಅಧಿಕಾರವನ್ನು ನಡೆಸಿಕೊಂಡು ಬಂದಿದ್ದ ಬ್ರಿಟಿಷರಿಗೆ ಈ ವಿದ್ಯಮಾನಗಳು ತಲ್ಲಣವನ್ನುಂಟು ಮಾಡಿದವು .ಇನ್ನು ಮುಂದೆ ಭಾರತದಲ್ಲಿ ಆಡಳಿತ ನಡೆಸುವುದು ಅಸಾಧ್ಯ ಎಂಬುದನ್ನು ಅವರು ಅರಿತರು. ಕಲ್ಕತ್ತಾ ಬಳಿಯ ಡಂ ಡಂ ವಿಮಾನ ನಿಲ್ದಾಣದ ಗ್ರೌಂಡ್ ಅಂಡ್ ಮೈಂಟನೇನ್ಸ್ ವಿಭಾಗದಲ್ಲಿ ಮತ್ತು ಭಾರತ ಹಾಗೂ ಮಧ್ಯ ಪ್ರಾಚ್ಯ ಏಷಿಯಾದ ರಾಯಲ್ ಏರ್ ಪೋರ್ಸ್ ಸ್ಟೇಷನ್ ಗಳಲ್ಲಿ ಬಹಿರಂಗ ದಂಗೆಗಳು ಉಂಟಾದವು. ರಾಯಲ್ ಭಾರತೀಯ ನೌಕಾದಳವು ಸರ್ಕಾರಕ್ಕೆ ಅವಿಧೇಯತೆ ತೋರಿಸಿದಷ್ಟೆ ಅಲ್ಲದೆ ಐ.ಎನ್.ಎ.ಕುರಿತು ತನ್ನ ಸಹಾನುಭೂತಿಯನ್ನು ಘೋಷಿಸಿತು. ಮಾತ್ರವಲ್ಲದೆ ಕಲ್ಕತ್ತಾ, ಮದ್ರಾಸ್ ಗಳಲ್ಲಿ ಇನ್ನೂ ಮುಖ್ಯವಾಗಿ ಕರಾಚಿಯಲ್ಲಿ ನೌಕಾಸೇನೆ ಬಂಡಾಯವೆದ್ದಿತು.

ಗಣ್ಯ ಇತಿಹಾಸಕಾರರಾದ ಆರ್. ಸಿ. ಮಜುಂದಾರ್ ರವರು ಭಾರತ “ಸ್ವತಂತ್ರ ಗಳಿಸುವಲ್ಲಿ ಐ.ಎನ್.ಎ. ನಿರ್ಣಾಯಕ ಪಾತ್ರ ವಹಿಸಿತೆಂದು ಅಭಿಪ್ರಾಯಪಟ್ಟರು.1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ ಬ್ರಿಟಿಷ್ ಪ್ರಧಾನಿಯಾಗಿದ್ದದ್ದು ಕ್ಲೆಮೆಂಟ್ ಅಟ್ಲೆ. ಈತ 1976ರಲ್ಲಿ ಒಮ್ಮೆ ಕಲ್ಕತ್ತಾಕ್ಕೆ ಭೇಟಿ ನೀಡಿದರು. ಆಗ ಕಲ್ಕತ್ತಾ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದ ಪಿ.ಬಿ. ಚಕ್ರವರ್ತಿಯವರು ಅವರನ್ನು ಕೇಳಿದರು 1947 ರಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಲು ಕಾರಣವೇನು? ಅಟ್ಲೆಯವರ ಉತ್ತರ ಹೀಗಿತ್ತು “ಸುಭಾಷ್ ಚಂದ್ರ ಬೋಸ್ ಅವರ ಐ ಎನ್ ಎ ಯ ಚಟುವಟಿಕೆಗಳು ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯದ ಬುಡವನ್ನೇ ದುರ್ಬಲಗೊಳಿಸಿದವು ಹಾಗೂ ರಾಯಲ್ ಇಂಡಿಯನ್ ನೌಕಾದಳದ ದಂಗೆಯ ಕಾರಣದಿಂದ ಬ್ರಿಟಿಷರಿಗೆ ನೆರವಾಗಲು ಭಾರತೀಯ ಸಶಸ್ತ್ರ ಪಡೆಗಳನ್ನು ಇನ್ನು ಮುಂದೆ ನೆಚ್ಚಿಕೊಳ್ಳಲಾಗುವುದಿಲ್ಲ ಎಂದು ನಮಗೆ ಮನವರಿಕೆಯಾಯಿತು”

ನೇತಾಜಿ ಹೀಗೆ ಅದ್ವಿತೀಯ ವಾದುದನ್ನು ಸಾಧಿಸಲು ಅವರ ವಿಚಾರಧಾರೆ ಪ್ರಮುಖ ಕಾರಣ ಎಂಬುದನ್ನು ನಾವು ಮರೆಯಬಾರದು. ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿದ ನಂತರ ಸ್ವಾತಂತ್ರ್ಯೋತ್ತರ ಭಾರತೀಯ ಸಮಾಜದ ಸ್ಥಾಪನೆಯ ಕಡೆಗೆ ಅವರ ದೃಷ್ಟಿ ನೆಟ್ಟಿತ್ತು. ಕ್ರಾಂತಿಕಾರಿ ಬರೀನ್ ಘೋಷ್ ರವರಿಗೆ 1930ರಲ್ಲಿ ಅವರು ಪತ್ರ ಬರೆದರು: “ಇಲ್ಲಿಯವರೆಗೆ ಸ್ವತಂತ್ರ ಎಂದರೆ ರಾಜಕೀಯ ಸ್ವತಂತ್ರ ಎಂದು ಮಾತ್ರ ತಿಳಿದಿದ್ದೆವು. ಆದರೆ ಈಗ ನಾವು ಜನರನ್ನು ಬರಿಯ ರಾಜಕೀಯ ಕಬಂಧ ಬಾಹುಗಳಿಂದ ಸ್ವತಂತ್ರಗೊಳಿಸುತ್ತೇವೆ ಮಾತ್ರವಲ್ಲ ಎಲ್ಲ ತರಹದ ಕಬಂಧ ಬಾಹುಗಳಿಂದ ಬಿಡಿಸುತ್ತೇವೆ ಎಂದು ಘೋಷಿಸಲೇಬೇಕು. ಸ್ವತಂತ್ರಹೋರಾಟದ ಗುರಿ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ದಬ್ಬಾಳಿಕೆ ಗಳಿಂದ ಮುಕ್ತಿ ಪಡೆಯುವುದೇ ಆಗಿದೆ. ಎಲ್ಲಾ ಕಬಂಧ ಬಾಹುಗಳನ್ನು ಮುರಿದಾಗ ಕಮ್ಯುನಿಸಂ ಆಧಾರಿತ ಹೊಸ ಸಮಾಜ ಸ್ಥಾಪನೆಯಾಗುತ್ತದೆ. ನಮ್ಮ ಸ್ವಾತಂತ್ರ ಹೋರಾಟದ ಉದ್ದೇಶವೇ ಒಂದು ವರ್ಗ ರಹಿತ ಸ್ವತಂತ್ರ ಸಮಾಜದ ಸ್ಥಾಪನೆ”.

ಧರ್ಮ ನಿರಪೇಕ್ಷತೆ ಮತ್ತು ಕಲ್ಯಾಣರಾಜ್ಯದ ಸ್ಥಾಪನೆಯ ಕುರಿತು ಅವರ ದೃಷ್ಟಿಕೋನವನ್ನು ಅವರ ಮಾತುಗಳಿಂದಲೇ ಅಳೆಯಬಹುದು “ಸ್ವಾತಂತ್ರ್ಯದ ಅರ್ಥ ಕೇವಲ ರಾಜಕೀಯ ದಾಸ್ಯದಿಂದ ವಿಮೋಚನೆಯನ್ನು ಪಡೆಯುವುದಷ್ಟೇ ಅಲ್ಲ ಅದರ ಜೊತೆಗೆ ಸಂಪತ್ತಿನ ಸಮಾನ ಹಂಚಿಕೆ, ಜಾತಿ ಮತ್ತು ಸಾಮಾಜಿಕ ತಾರತಮ್ಯದ ನಿವಾರಣೆ ಕೋಮುವಾದದ ನಾಶವೇ ಆಗಿದೆ. ಉದ್ಯೋಗವನ್ನು ನೀಡುವುದು ಪ್ರಭುತ್ವದ ಕರ್ತವ್ಯ ಮತ್ತು ಪ್ರಭುತ್ವ ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕು. ಅಂದರೆ ಕಾರ್ಮಿಕ ಪ್ರಜೆಗಳು ಉದ್ಯೋಗದಾತನ ಕೃಪೆಯಲ್ಲಿರುವಂತೆ ಇದ್ದರೂ ಕಾರ್ಮಿಕರನ್ನು ಕೆಲಸದಿಂದ ಕಿತ್ತು ಹಾಕಿ ಅವರು ಉಪವಾಸದಿಂದ ನರಳುವಂತೆ ಆಗಬಾರದು. ಭಾರತದಲ್ಲಿ ಹಲವಾರು ಮತಧರ್ಮಗಳಿವೆ ಹಾಗಾಗಿ ಸ್ವತಂತ್ರ ಭಾರತದ ಸರ್ಕಾರವು ಎಲ್ಲಾ ಧರ್ಮಗಳ ಬಗ್ಗೆ ಸಂಪೂರ್ಣವಾದ ತಟಸ್ಥ ಮತ್ತು ನಿಷ್ಪಕ್ಷಪಾತಿ ಧೋರಣೆಯನ್ನು ತಳೆಯಬೇಕು ಯಾವುದೇ ನಿರ್ದಿಷ್ಟ ಧರ್ಮದ ನಂಬಿಕೆಯನ್ನು ಪ್ರಚಾರಮಾಡುವುದು, ಅನುಸರಿಸುವುದನ್ನು ಪ್ರತಿ ವ್ಯಕ್ತಿಯ ವೈಯಕ್ತಿಕ ಆಯ್ಕೆಗೆ ಬಿಡಬೇಕು.

ಸಮಾಜವಾದ ಮಾರ್ಕ್ಸ್ ವಾದದ ಕುರಿತು: “ನಾವಿಲ್ಲಿ ಒಂದೇ ಒಂದು ದೇಶದ ಉದಾಹರಣೆಯನ್ನು ನೀಡಬಯಸುತ್ತೇನೆ ಮೊದಲ ಮಹಾಯುದ್ಧ ನಡೆಯುವುದಕ್ಕೂ ಮುಂಚೆ ರಷ್ಯಾವು ಭಾರತಕ್ಕಿಂತ ಉತ್ತಮವಾಗಿರಲಿಲ್ಲ ಅದೊಂದು ಕೃಷಿ ಪ್ರಧಾನ ದೇಶವಾಗಿದ್ದು ಜನಸಂಖ್ಯೆಯ ಶೇಕಡ 70ರಷ್ಟು ಮಂದಿ ರೈತರಾಗಿದ್ದು ನಮ್ಮ ದೇಶದ ರೈತರಂತೆ ದಾರಿದ್ರ್ಯದ, ಶೋಚನೀಯ ಪರಿಸ್ಥಿತಿ ಎದುರಿಸುತ್ತಿದ್ದರು. ಕೈಗಾರಿಕೆಗಳು ಹಿಂದುಳಿದಿದ್ದವು. ವಿದ್ಯುಚ್ಛಕ್ತಿ ಒಂದು ಐಶಾರಾಮ ವಿಷಯವಾಗಿತ್ತು. ತನ್ನ ಶಕ್ತಿ ಸಂಪನ್ಮೂಲಗಳ ಬಗ್ಗೆ ತಿಳುವಳಿಕೆ ಇಲ್ಲದವರು, ತಜ್ಞರು ಮತ್ತು ತಂತ್ರಜ್ಞನರು ಇಲ್ಲದ ಪರಿಸ್ಥಿತಿ ಇತ್ತು ಆದರೆ ಕೇವಲ 16 ವರ್ಷಗಳಲ್ಲಿ ಅರೆಹೊಟ್ಟೆಯ ರೈತ ಸಮುದಾಯದಿಂದ ಹೊಟ್ಟೆಬಟ್ಟೆಗೆ ಬೇಕಾದಷ್ಟು ಇರುವ ಕೈಗಾರಿಕಾ ಕಾರ್ಮಿಕ ಸಮುದಾಯವಾಗಿ ಈ ದೇಶವು ಬೆಳೆದಿದೆ. (1930ರಲ್ಲಿ ಭಾರತದ ಕೈಗಾರಿಕಾ ಸಮಸ್ಯೆಗಳ ಕುರಿತು ಮಾಡಿದ ಭಾಷಣದಿಂದ)

ಮತೀಯವಾದದ ಕುರಿತು ನೇತಾಜಿ ಅವರ ನಿಲುವು ಹೀಗಿತ್ತು “ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಂ ಕೋಮುಗಳ ಮಧ್ಯದ ಸಂಘರ್ಷಗಳಿಗೆ ಯಾವುದೇ ಚಿರಂತನವಾದ ಕಾರಣ ಇಲ್ಲ. ಇರಲು ಸಹ ಸಾಧ್ಯವಿಲ್ಲ. ಪಟ್ಟಭದ್ರ ಹಿತಾಸಕ್ತಿಯ ಒಂದು ವಿಭಾಗ ತಮ್ಮ ಸಂಕುಚಿತ ವಿಭಾಗೀಯ ಧೋರಣೆಯಿಂದ ಈ ಎರಡು ಕೋಮುಗಳ ಮಧ್ಯೆ ಜಗಳ ಮತ್ತು ಮನಸ್ತಾಪವನ್ನು ತಂದಿಡುತ್ತಿದೆ. ……..ಸ್ವತಂತ್ರ ಹೋರಾಟದಲ್ಲಿ ಇಂಥವರನ್ನೂ ಕೂಡ ವೈರಿಗಳೆಂದು ಪರಿಗಣಿಸತಕ್ಕದ್ದು….” (1928ರ ರಾಜ್ ಸಹಿ ಜನಸಭೆಯಲ್ಲಿ ಭಾಷಣದಲ್ಲಿ). ನೇತಾಜಿ ಧರ್ಮವನ್ನು ಕೇವಲ ವೈಯಕ್ತಿಕ ಆಸಕ್ತಿಯನ್ನಾಗಿಸಿದರು. ತಮ್ಮ ರಾಜಕೀಯ ಹೋರಾಟದಲ್ಲಿ ಅವರು ಧರ್ಮವನ್ನು ಬೆರಸಲಿಲ್ಲ. ಹೀಗಾಗಿ ಅಸಂಖ್ಯಾತ ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಮುಂತಾದ ಧಾರ್ಮಿಕ ಅಲ್ಪಸಂಖ್ಯಾತರು ಐ.ಎನ್.ಎ. ಯಲ್ಲಿದ್ದರು. ನೇತಾಜಿಯವರ ಬಲಗೈಯೆಂದೇ ಪ್ರಸಿದ್ಧರಾಗಿದ್ದ ಷಾನವಾಜ್ ಖಾನ್ ರವರು ಐ.ಎನ್.ಎ ನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ನೇತಾಜಿಯವರೊಂದಿಗೆ ಕೊನೆಯ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ ಹಬೀಬುಲ್ ರೆಹಮಾನ್ ರವರು ಅಜಾದ್ ಹಿಂದ್ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಅಲ್ಲದೆ ನೇತಾಜಿ ಜರ್ಮನಿಯಿಂದ ಪೂರ್ವ ಏಷ್ಯಾಗೆ ಜಲಾಂತರ್ಗಾಮಿ ನೌಕೆಯಲ್ಲಿ ಶತ್ರು ಆಕ್ರಮಿತ ಜಲ ಪ್ರದೇಶದಲ್ಲಿ ಅತ್ಯಂತ ಅಪಾಯಕಾರಿ ಪ್ರಯಾಣ ಮಾಡಿದಾಗ ಅವರ ಜೊತೆಯಿದ್ದ ಸಂಗಾತಿ ಅಬೀದ್ ಹುಸೇನ್ ರವರು.

ತಮ್ಮ ವೈಯಕ್ತಿಕ ಜೀವನದಲ್ಲಿಯೂ ಅವರು ಎಲ್ಲಾ ಸಂಕುಚಿತ ಭಾವನೆಗಳನ್ನು ಮೀರಿದ್ದರು. ಆದ್ದರಿಂದ ನಿಸ್ಸಂಕೋಚವಾಗಿ ಯಾವ ಪೂರ್ವಗ್ರಹಗಳಿಲ್ಲದೆ ಓರ್ವ ಪರಧರ್ಮೀಯ ಜರ್ಮನ್ ಮಹಿಳೆಯನ್ನು ವಿವಾಹವಾಗುವುದು ಅವರಿಂದ ಸಾಧ್ಯವಾಯಿತು. ವಿವಾಹದಂತಹ ಸೂಕ್ಷ್ಮ ವಿಚಾರದಲ್ಲಿ ಅವರು ಸ್ಪಷ್ಟ, ಜನತಾಂತ್ರಿಕ ಮಾನವತಾವಾದಿ ಧೋರಣೆಯನ್ನು ಹೊಂದಿದ್ದರು.

ನೇತಾಜಿಯವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸುವ ಈ ದಿನಮಾನಗಳಲ್ಲಿ ನಾವು ಅವರ ಚಿಂತನೆಗಳು, ತತ್ವಗಳು ವಿಚಾರಧಾರೆಗಳನ್ನು ಎಲ್ಲೆಡೆ ಹರಡುತ್ತಾ ನೇತಾಜಿಯವರು ಕನಸು ಕಂಡಿದ್ದ ಭಾರತವನ್ನು ನಿರ್ಮಿಸಲು ಮುಂದಡಿ ಇಡಬೇಕಿದೆ.

LEAVE A REPLY

Please enter your comment!
Please enter your name here