ಲೇಖಕರು: ಝೀಶಾನ್ ಅಖಿಲ್ ಮಾನ್ವಿ
(ಪತ್ರಿಕೋದ್ಯಮ ವಿದ್ಯಾರ್ಥಿ, ಶಿಕ್ಷಣ ಕಾರ್ಯಕರ್ತರು ರಾಯಚೂರು)

ಆನ್‌ಲೈನ್‌ ಕ್ಲಾಸ್‌ ಮಿಸ್‌ ಮಾಡಿಕೊಂಡದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿನಿ ದೇವಿಕಾ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಈ ಸಾವು ನಮ್ಮಲ್ಲಿ ಹಲವಾರು ಪ್ರಶ್ನೆಗಳಿಗೆ ಎಡೆಮಾಡಿದೆ.
ಲಾಕ್‌ಡೌನ್ ಉಂಟು ಮಾಡಿದ ಸಂದಿಗ್ಧ ಪರಿಸ್ಥಿತಿಗಳಲ್ಲಿ ಇದೂ ಒಂದು. ಈ ಪರಿಸ್ಥಿತಿಗೆ ಹೊಂದುಕೊಳ್ಳುವಲ್ಲಿ ಅನೇಕ ಖಾಸಗಿ ಶಾಲೆಗಳು ಯಶಸ್ವಿಯಾಗಿವೆ. ಸರಳವಾಗಿ ಆನ್ ಲೈನ್ ವಿಧಾನವನ್ನು ಬಳಸುವ ಮೂಲಕ ತರಗತಿಗಳನ್ನು ನಡೆಸುತ್ತಿವೆ. ಶಿಶುವಿಹಾರ ಶಾಲೆಗಳು ತಮ್ಮ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡಿದ ಸುಮಾರು ವರದಿಗಳನ್ನು ನಾವು ನೋಡಿದ್ದೇವೆ.

ಇದರ ಜೊತೆಯಲ್ಲೇ ಈ ಸವಲತ್ತುಗಳನ್ನು ಪಡೆಯುತ್ತಿರುವ ಶ್ರೀಮಂತ ಕುಟುಂಬಗಳ ಮಕ್ಕಳು ಟ್ಯಾಬ್ಲೆಟ್, ಸ್ಮಾರ್ಟ್ ಫೋನ್, ಲ್ಯಾಪ್ಟಾಪ್, ಸ್ಮಾರ್ಟ್ ಟಿವಿ ಮತ್ತು ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ. ಇ-ಲರ್ನಿಂಗ್ ಅಪ್ಲಿಕೇಶನ್‌ಗಳು ಮತ್ತು ವಿವಿಧ ವೆಬ್‌ಸೈಟ್‌ಗಳ ಪ್ರಸರಣದೊಂದಿಗೆ ಅವರು ಎಲ್ಲಾ ರೀತಿಯ ಸಂಪನ್ಮೂಲಗಳ ಜೊತೆ ಕಲಿಕೆಯನ್ನು ಮುಂದುವರಿಸಿದ್ದಾರೆ. ಅವರ ಪೋಷಕರು 15 ರಿಂದ 16 ವರ್ಷಗಳ ಶಿಕ್ಷಣವನ್ನು ಪಡೆದಿರುತ್ತಾರೆ. ಇನ್ನು ಸುಮಾರು ಪೋಷಕರು ಮನೆಯಿಂದ ಕೆಲಸ ಮಾಡ್ತಾ ಇದ್ದಾರೆ. ಅವರು ತಮ್ಮ ಮಕ್ಕಳೊಟ್ಟಿಗೆ ಹೆಚ್ಚಿನ ಸಮಯ ಮತ್ತು ವಿಶೇಷ ಆರೈಕೆ ಮಾಡಲು ಲಾಕ್‌ಡೌನ್ ಫಲಕಾರಿಯಾಗಿದೆ. ಇಂತಹ ‘ಪ್ರಿವಿಲೇಜ್’ ಹೊಂದಿರುವ ಮಕ್ಕಳು ಲಾಕ್‌ಡೌನ್ ಅವಧಿಯಿಂದ ಹೆಚ್ಚು ಶೈಕ್ಷಣಿಕ ನಷ್ಟ ಅನುಭವಿಸಿರುವುದಿಲ್ಲ. ಶಾಲಾ ವ್ಯವಸ್ಥೆಯ ಕೆಲವು ಸಂಕೋಲೆಗಳಿಂದ ಹೊರಗುಳಿದು ಅವರು ಇನ್ನಷ್ಟು ಕಲಿಯಲು ಸಹಾಯವಾಗಬಹುದು.

ಆದರೆ ಬಡ ಮತ್ತು ‘ಮಾರ್ಜಿನಲೈಸ್ಡ್’ ಕುಟುಂಬಗಳ ಮಕ್ಕಳ ಪರಿಸ್ಥಿತಿ ಏನು? ಈ ಸಂಪನ್ಮೂಲಗಳನ್ನು ಹೊಂದದೆ, ಈ ಮಕ್ಕಳು ಯಾವ ರೀತಿಯಲ್ಲಿ ಕಲಿಯಲು ಸಾಧ್ಯವಾಗುತ್ತೆ? ಕಲಿಕೆಯ ನಷ್ಟದ ವಿದ್ಯಮಾನದ ಸುತ್ತ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಇಷ್ಟು ದಿನ ಕಲಿಕೆಯ ಪ್ರಕ್ರಿಯೆಯಿಂದ ದೂರವಿರುವುದರಿಂದ ಬೇಸಿಗೆಯ ರಜೆಯ ನಂತರ ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಕುಸಿತವನ್ನು ಈ ಸಂಶೋಧನೆಗಳು ಸೂಚಿಸುತ್ತಿವೆ. ಇದನ್ನು ಗಮನಿಸಿದಾಗ ಬಡ ಮತ್ತು ಮಾರ್ಜಿನಲೈಸ್ಡ್ ವರ್ಗದ ಮಕ್ಕಳು ಈ ವಿದ್ಯಮಾನದಿಂದ ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿಯುತ್ತದೆ.

ಕೊರೋನ ವೈರಸ್ ಸಾಂಕ್ರಾಮಿಕವು ಈಗಾಗಲೇ ಎರಡು ತಿಂಗಳಿಗಿಂತ ಹೆಚ್ಚು ಕಾಲ ಶಾಲೆಗಳನ್ನು ಮುಚ್ಚಿದೆ. ಶೀಘ್ರದಲ್ಲೇ ಸರಕಾರಿ ಶಾಲೆಗಳು ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸರಿಯೇ ? ಎಂದು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.
ಬಡ ಮತ್ತು ಅಂಚಿನಲ್ಲಿರುವ ಮಕ್ಕಳು ಎಲ್ಲಾ ರೀತಿಯ ಡಿಜಿಟಲ್ ಸೌಲಭ್ಯಗಳನ್ನು ಹೊಂದಲು ಸಾಧ್ಯವೇ?
ಮಲಪ್ಪುರಂ ಜಿಲ್ಲೆಯ ದಿನಗೂಲಿ ಕಾರ್ಮಿಕಳ ಮಗಳಾದ ದೇವಿಕಾ ಆತ್ಮಹತ್ಯೆಗೆ ಕಾರಣ ಮನೆಯಲ್ಲಿ ಸ್ಮಾರ್ಟ್ ಫೋನ್ ಮತ್ತು ಟಿವಿ ಇಲ್ಲದಿರುವುದು ಎಂದು ಗೊತ್ತಾಗಿದೆ. ಮಗಳು ಟಿವಿ ರಿಪೇರಿ ಮಾಡಿಸಿ ಅಂತ ಕೇಳುತ್ತಿದ್ದಳು ನಮ್ಮ ಬಳಿ ಹಣ ವಿರಲಿಲ್ಲ, ಎಂದು ತಂದೆ ಬಾಲಕೃಷ್ಣನ್ ಅಳಲು ತೋಡಿಕೊಂಡಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಹೊರಗುಳಿಸದ ರೀತಿಯ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ನಡೆಸಲು ನಾವು ಸರ್ಕಾರಕ್ಕೆ ಒತ್ತಾಯಿಸಬೇಕಲ್ಲವೇ? ಇಂತಹ ಯಾವುದೇ ಕ್ರಮವನ್ನು ಸರಕಾರ ತೆಗೆದುಕೊಳ್ಳದೆ ಇದ್ದರೆ ಅದು ಹೊರಗುಳಿಸುವಿಕೆ (exclusion) ಅಲ್ಲವೇ? ನಾವು ಹೊರಗುಳಿಸುವಿಕೆಯ ಪ್ರತಿಯೊಂದು ಕ್ರಿಯೆಯನ್ನು ಪ್ರಶ್ನಿಸಬೇಕು.

LEAVE A REPLY

Please enter your comment!
Please enter your name here