ಲೇಖಕರು: ಎಲ್ದೋ ಹೊನ್ನೇಕುಡಿಗೆ, ಚಿಕ್ಕಮಗಳೂರು

“ಭಾರತ ಸ್ವಾತಂತ್ರ್ಯವನ್ನು ಗಳಿಸಿದ ನಂತರ ಬಿಳಿಯರ ಆಡಳಿತದ ಜಾಗದಲ್ಲಿ, ಬಡವ-ಶ್ರೀಮಂತ ಜಮಿನ್ದಾರ-ಕೂಲಿಕಾರ ಎಂಬ ಭೇದಗಳನ್ನು ಜೀವಂತವಾಗಿಟ್ಟುಕೊಂಡು ಸ್ವದೇಶಿ ಶೋಷಕರು ಅಧಿಕಾರವನ್ನು ಕೈವಶಮಾಡಿಕೊಂಡರೆ, ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ – ದೇವರೇ ನಮ್ಮ ಮಾತೃಭೂಮಿಯಲ್ಲಿ ಸಮಾನತೆ ಬರುವವರೆಗೂ ನಮಗೆ ಅಂತಹ ಸ್ವಾತಂತ್ರ ಕೊಡಬೇಡ. ಈ ವಿಷಯದಲ್ಲಿ ಯಾರಾದರೂ ಸಮಾಜವಾದವನ್ನು ಬೋದಿಸುತ್ತಿದ್ದೇನೆ ಎಂದು ನನ್ನನ್ನು ದೂಷಿಸಿದರೆ ನಾನವರಿಗೆ ಹೇಳುತ್ತೇನೆ ನನ್ನನ್ನು ಒಬ್ಬ ಸಮಾಜವಾದಿ ಎಂದು ಕರೆದುಕೊಳ್ಳಲು ನನಗೆ ಹೆದರಿಕೆಯಿಲ್ಲ “
ಹೀಗೆಂದು ತಾನು ಗಲ್ಲುಗಂಬವೇರುವ ಕೆಲವೇ ದಿನಗಳ ಹಿಂದೆ ದೇಶವಾಸಿಗಳಿಗೆ ಸಂದೇಶ ನೀಡಿದ ಅಶ್ಫಕುಲ್ಲಾ ಖಾನ್ ವಿದ್ಯಾರ್ಥಿಯಾಗಿದ್ದಾಗಲೇ ಸ್ವತಂತ್ರ ಸಂಗ್ರಾಮದ ಕಡೆಗೆ ಆಕರ್ಷಿತರಾಗಿದ್ದವರು. ಉರ್ದು ಕಾವ್ಯವೆಂದರೆ ಖಾನ್ ಗೆ ಅಚ್ಚುಮೆಚ್ಚು. ವಾರಸಿ ಇಲ್ಲವೇ ಹಜರತ್ ಕಾವ್ಯನಾಮದೊಂದಿಗೆ ಬರೆಯುತ್ತಿದ್ದರು.

ಅಪ್ರತಿಮ ಕ್ರಾಂತಿಕಾರಿ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಕೂಡ ಉರ್ದು ಕವಿತೆಗೆ ಹೆಸರಾಗಿದ್ದವರು ಹೀಗಾಗಿ ರಾಮ್ ಪ್ರಸಾದರ ವಿಚಾರಧಾರೆ ಕಡೆಗೆ ಆಕರ್ಷಿತರಾದ ಖಾನ್ ರಾಮಪ್ರಸಾದ್ ರನ್ನು ಭೇಟಿ ಮಾಡಲು ಪ್ರಯತ್ನಿಸಿ ಸಫಲರಾದರು. ದಿನಕಳೆದಂತೆ ಅವರ ಬಾಂಧವ್ಯ ಬಲಗೊಳ್ಳುತ್ತಾ ಸಾಗಿತು.
ಈ ನಡುವೆ ಚೌರಿ ಚೌರ ಹಿಂಸಾತ್ಮಕ ಘಟನೆಯ ಕಾರಣ ನೀಡಿ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯನ್ನು ವಾಪಸ್ಸು ತೆಗೆದುಕೊಂಡರು. ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಖಾನ್ ನಿರಾಶರಾದರು. ಮುಂದೆ ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡಲು ಕ್ರಾಂತಿಕಾರಿ ಮಾರ್ಗವೇ ಸರಿ ಎಂದು ತೀರ್ಮಾನಿಸಿ ರಾಮ್ ಪ್ರಸಾದ್ ರವರು ತಲೆಯಾಳಗಿದ್ದ ಹಿಂದುಸ್ತಾನ್ ರಿಪಬ್ಲಿಕನ್ ಅಸೋಶಿಯೇಶನ್ (H R A) ಸೇರಲು ತವಕಿಸಿದರು. ದಿನಕಳೆದಂತೆ ಖಾನ್ ರವರ ಸ್ವಾತಂತ್ರ್ಯಕ್ಕಾಗಿನ ಹಂಬಲ ಪೊಳ್ಳಲ್ಲವೆಂದು ರಾಮ್ ಪ್ರಸಾದರಿಗೆ ಮನವರಿಕೆಯಾಗಿ ಸಂಘಟನೆಗೆ ಸೇರಿಸಿಕೊಂಡರು ನಂತರ ಖಾನ್ ರಾಮ್ ಪ್ರಸಾದ್ ರ ನಂಬಿಕೆಯ ಬಂಟನಾದ ಮತ್ತು ಸ್ನೇಹಿತನಾದ.

ಒಮ್ಮೆ ಖಾನ್ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದರು ಅವರು ಆಗಾಗ ರಾಮ್ ರಾಮ್ ಎಂದು ಕನವರಿಸುತ್ತಿದ್ದದನ್ನು ಆತನ ತಂದೆ-ತಾಯಿ ಕಂಡು ಮರುಗಿ ರಾಮ್ ಪ್ರಸಾದರನ್ನು ಕರೆಸಿದರು. ಅವರನ್ನು ಹಾಸಿಗೆಯ ಮೇಲೆ ಕಂಡು ರಾಮ್ ಪ್ರಸಾದ್ ತಬ್ಬಿಕೊಂಡುಬಿಟ್ಟರು. ಆಮೇಲೆ ಕನವರಿಸುವುದನ್ನು ಖಾನ್ ನಿಲ್ಲಿಸಿದರು. ಬ್ರಿಟಿಷ್ ಸರ್ಕಾರದ ಒಡೆದು ಆಳುವ ನೀತಿಯ ಆ ಕಾಲದಲ್ಲಿ ಒಬ್ಬ ಬ್ರಾಹ್ಮಣ ಮತ್ತು ಮುಸ್ಲಿಂ ಹುಡುಗನ ಮಧ್ಯದ ಸ್ನೇಹ ಅದ್ವಿತೀಯವಾದುದು.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಸಶಸ್ತ್ರ ಹೋರಾಟಕ್ಕಿಳಿದಿದ್ದ HRA ಗೆ ಹಣಕಾಸಿನ ಮುಗ್ಗಟ್ಟು ಎದುರಾಯಿತು ಹೀಗಾಗಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ರಾಮಪ್ರಸಾದ್ರು HRA ನ ಕೇಂದ್ರ ಸಮಿತಿಯ ತುರ್ತು ಸಭೆ ಕರೆದರು ಮುಂದಿನ ಯೋಜನೆ ಸಿದ್ಧವಾಯಿತು. ಲಕ್ನೋದಿಂದ ಲಾಹೋರಿಗೆ ಹೋಗುತ್ತಿದ್ದ ರೈಲಿನಲ್ಲಿ ಬ್ರಿಟಿಷರು ದುಡ್ಡು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ಆ ರೈಲನ್ನು ಲೂಟಿ ಮಾಡಬೇಕೆಂದು ತೀರ್ಮಾನಿಸಿದರು. ಆದರೆ ಧರ್ಮನಿಷ್ಠ ಕುಟುಂಬದ ಹಿನ್ನೆಲೆಯವರಾದ ಖಾನ್ ರಿಗೆ ಈ ವಿಚಾರ ಒಪ್ಪಿಗೆಯಾಗಲಿಲ್ಲ.
ಆ ಬಳಿಕ ತನ್ನ ಪ್ರಾಣಸ್ನೇಹಿತ ರಾಮಪ್ರಸಾದ್ ಖಾನ್ ರವರಿಗೆ ಮನವರಿಕೆ ಮಾಡುತ್ತಾರೆ. “ಅಶ್ಫಾಕ್…ನಾವು ಲೂಟಿ ಬಯಸಿರುವುದು ಬ್ರಿಟಿಷರ ವಶದಲ್ಲಿರುವ ನಮ್ಮದೇ ನೆಲದ ಸ್ವತ್ತನ್ನು. ಅವರು ನಮ್ಮಿಂದ ಕೊಳ್ಳೆಹೊಡೆದ ಅತಿಸಣ್ಣ ಅಂಶವನ್ನು ಮಾತ್ರ. ಅದೂ ಯಾಕಾಗಿ? ನಮ್ಮ ಸ್ವಂತ ಲಾಭಕ್ಕಾಗಿಯೆ? ಮಾತೃಭೂಮಿಯನ್ನು ಅವರ ಕೈಯಿಂದ ವಿಮೋಚನೆಗೊಳಿಸುವ ಏಕೈಕ ಉದ್ದೇಶಕ್ಕಾಗಿ. ಇದರಲ್ಲಿ ಪುಣ್ಯವಲ್ಲದೆ ಅಪರಾಧವೇನಿದೆ?” ಇದನ್ನು ಆಳವಾಗಿ ಚಿಂತಿಸಿದ ನಂತರ ಕೇಂದ್ರ ಸಮಿತಿಯ ಸಾಮೂಹಿಕ ನಿರ್ಧಾರವನ್ನು ಖಾನ್ ಮನಸ್ಸಾರೆ ಒಪ್ಪಿಕೊಂಡದ್ದು ಮಾತ್ರವಲ್ಲ “ಈ ದೇಶಕ್ಕಾಗಿ ನಮ್ಮ ಸಂಘಟನೆಯ ಮೊದಲ ಹುತಾತ್ಮ ನಾನೇ ಆಗಲಿದ್ದೇನೆ ಎಂದು ಶಪಥಗೈದರು.

ಇಡೀ ಕಾರ್ಯಾಚರಣೆಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡ ಖಾನ್ ಆ ರೈಲು ಕಾಕೋರಿ ನಿಲ್ದಾಣ ತಲುಪಿದಾಗ ಪ್ರಯಾಣಿಕರ್ಯಾರಿಗೂ ತೊಂದರೆಯಾಗದಂತೆ ಅಂದುಕೊಂಡ ಕಾರ್ಯವನ್ನು ಇತರೆ ಕ್ರಾಂತಿಕಾರಿಗಳೊಂದಿಗೆ ಸೇರಿ ಮುಗಿಸಿದರು. ಕಾರ್ಯಾಚರಣೆಯ ನಂತರ ಖಾನ್ ಹಾಗೂ ಸಂಗಡಿಗರು ತಪ್ಪಿಸಿಕೊಂಡರು. ಘಟನೆಯ ನಂತರ ಹಲವಾರು ತಿಂಗಳುಗಳ ಕಾಲ ಮಾರುವೇಷದಲ್ಲಿ ತಲೆಮರೆಸಿಕೊಂಡಿದ್ದರು. ಮುಂದೆ ವಿದೇಶಕ್ಕೆ ಹೋಗಿ ಇಂಜಿನಿಯರಿಂಗ್ ಕಲಿತು ಬ್ರಿಟಿಷರ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ಕಲಿಯಬೇಕೆಂದು ಕೊಂಡಿದ್ದರು ಆದರೆ ಸ್ನೇಹಿತನೊಬ್ಬನ ನಂಬಿಕೆದ್ರೋಹದಿಂದ ಬ್ರಿಟಿಷ್ ಪೊಲೀಸರ ಮೋಸ್ಟ್ ವಾಂಟೆಡ್ ಆಗಿದ್ದ ಖಾನ್ ಸೆರೆಯಾಗಬೇಕಾಯಿತು. ಪೊಲೀಸರ ವಶದಲ್ಲಿದ್ದ ಖಾನ್ ರನ್ನು ಜೈಲಿಗೆ ಕರೆದೊಯ್ಯುತ್ತಿದ್ದಾಗ ಅವರನ್ನು ನೋಡಲೆಂದೇ ಸಾವಿರಾರು ಜನ ನೆರೆದಿದ್ದರು!

ವಿಚಾರಣೆ ಎಂಬ ನಾಟಕ ನಡೆದು ಖಾನ್ ರಿಗೆ ಗಲ್ಲು ಶಿಕ್ಷೆ ಘೋಷಿಸಲಾಯಿತು. ಅದಾಗಲೇ ಬ್ರಿಟಿಷರಿಗೆ ಸೆರೆಸಿಕ್ಕಿದ್ದ ರಾಮ್ ಪ್ರಸಾದರಿಗೂ ಗಲ್ಲು ಶಿಕ್ಷೆ ವಿಧಿಸಲಾಯಿತು. 1927ರ ಡಿಸೆಂಬರ್ 19ರಂದು ಫೈಜಾಬಾದ್ ಜೈಲಿನಲ್ಲಿ ತಮ್ಮ ಮುಖಕ್ಕೆ ಮುಸುಕನ್ನು ತಾವೇ ಧರಿಸಿಕೊಂಡು ಕೇವಲ 27 ವರ್ಷದ ಖಾನ್ ನಗುನಗುತ್ತಾ ಗಲ್ಲಿಗೇರಿದರು. ಅದೇ ದಿನ ರಾಮ್ ಪ್ರಸಾದರನ್ನೂ ಗಲ್ಲಿಗೇರಿಸಲಾಯಿತು ಹೀಗೆ ಪ್ರಾಣ ಸ್ನೇಹಿತರಿಬ್ಬರೂ ಸಾವಿನಲ್ಲೂ ಜೊತೆಯಾದರು. ಇತರೆ ಕ್ರಾಂತಿಕಾರಿಗಳಾದ ರೋಷನ್ ಸಿಂಗ್, ರಾಜೇಂದ್ರ ಲಾಹಿರಿಯನ್ನೂ ಗಲ್ಲಿಗೇರಿಸಲಾಯಿತು. ಉಳಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಯಿತು.

ತಾವು ಜೈಲಿನಲ್ಲಿದ್ದಾಗ ಖಾನ್ ದೇಶವಾಸಿಗಳನ್ನು ಉದ್ದೇಶಿಸಿ ಹೀಗೆಂದಿದ್ದರು “ಹಿಂದೂಸ್ಥಾನದ ಸಹೋದರರೇ ನೀವು ಯಾವುದೇ ಧರ್ಮದವರಾಗಿರಲಿ ದೇಶದ ಕೆಲಸದಲ್ಲಿ ಭಾಗಿಗಳಾಗಿ, ವ್ಯರ್ಥವಾಗಿ ನಿಮ್ಮಳೊಗೆ ಜಗಳವಾಡಬೇಡಿ ದಾರಿ ಬೇರೆಬೇರೆಯದ್ದಾಗಿರಬಹುದು ಆದರೆ ಎಲ್ಲರ ಉದ್ದೇಶವೂ ಒಂದೇ. ನಾವು ಒಂದೇ ಉದ್ದೇಶವನ್ನು ಪೂರೈಸಲು ಎಲ್ಲಾ ಕಾರ್ಯಗಳನ್ನು ಮಾಡುತ್ತಿರುವಾಗ ನಮ್ಮಲ್ಲೇ ಈ ಒಳ ಜಗಳವೇಕೆ ನೀವೆಲ್ಲರೂ ಒಂದಾಗಿ ದೇಶವನ್ನು ಸ್ವತಂತ್ರಗೊಳಿಸಿ. ಏಳುಕೋಟಿ ಮುಸಲ್ಮಾನರಲ್ಲಿ ದೇಶಕ್ಕಾಗಿ ಗಲ್ಲಿಗೆರುವವರಲ್ಲಿ ನಾನು ಮೊದಲನೆಯವನು ಎಂಬುದನ್ನು ನೆನೆಸಿಕೊಂಡರೆ ನನಗೆ ಬಹಳಷ್ಟು ಹೆಮ್ಮೆಯೆನಿಸುತ್ತದೆ”
ಒಂದೊಮ್ಮೆ ಯುವಕ ಖಾನ್ ಸೋವಿಯತ್ ರಷ್ಯಾದ ಮಹಾನ್ ಕ್ರಾಂತಿಕಾರಿ ಕಾರ್ಮಿಕ ನಾಯಕ ಕಾಮ್ರೇಡ್ ಲೆನಿನ್ ಗೆ ಪತ್ರ ಬಯಸಿದ್ದರು. ಅವರನ್ನು ಗಲ್ಲಿಗೇರಿಸುವ ದಿನ ಅವರ ಸಂದೇಶವನ್ನು ಬ್ರಿಟಿಷರು ಜೈಲಿನಿಂದ ಹೊರಸಾಗಿಸಿ ಬಿಟ್ಟಿದ್ದರು. ಭಾರತೀಯ ಸಮ ಸಮಾಜವನ್ನು ಕಟ್ಟಲು ಸದಾ ಹಾತೊರೆಯುತ್ತಿದ್ದ ಖಾನ್ ಹೀಗೆನ್ನುತ್ತಿದ್ದರು “ಬಡವರು ಸಂತಸದಿಂದ ಸಲೀಸಾಗಿ ಬಾಳುವೆ ಮಾಡಲು ಸಾಧ್ಯವಿರುವಂತಹ ಸ್ವಾತಂತ್ರ್ಯ ಹಿಂದೂಸ್ಥಾನಕ್ಕೆ ಬೇಕಿದೆ.

ವರ್ಕ್ ಶಾಪಿನಲ್ಲಿ ಕೆಲಸ ಮಾಡುವ ಮೆಕಾನಿಕ್ ಅಬ್ದುಲ್ಲಾ, ಚಪ್ಪಲಿ ಹೊಲೆಯುವ ಧನಿಯಾ ಹಾಗೂ ಸಾಧಾರಣ ರೈತರು ಲಕ್ನೋದ ನವಾಬರ ಮನೆಯಲ್ಲಿ ಗಣ್ಯರ ಮುಂದಿನ ಸಾಲುಗಳ ಕುರ್ಚಿಗಳಲ್ಲಿ ಎದಿರುಬದಿರಾಗಿ ಕುಳಿತುಕೊಳ್ಳುವ ದಿನಗಳು ಬರಬೇಕೆಂದು ಆಶಿಸುವೆ. ಕಮ್ಯುನಿಸ್ಟರೊಂದಿಗೆ ನನ್ನ ಸಹಮತವಿದೆ ಬಡ ರೈತರು ಮತ್ತು ಅಸಹಾಯಕ ಕಾರ್ಮಿಕರಿಗಾಗಿ ನನ್ನ ಹೃದಯ ಸದಾ ಅಳುತ್ತಿರುತ್ತದೆ”

ಕಾಕೋರಿ ದರೋಡೆ ಪ್ರಕರಣದ ನಂತರ ತಲೆಮರೆಸಿಕೊಂಡು ತಿರುಗುತ್ತಿದ್ದಾಗ ಇಂತಹ ಕುಟುಂಬಗಳೊಂದಿಗೆ ವಾಸವಿದ್ದೆ ಅವರ ಭವಣೆ ನನ್ನ ಕಣ್ಣುಗಳನ್ನು ತೇವವಾಗಿಸಿತು. ನಮ್ಮ ಪೇಟೆ-ಪಟ್ಟಣಗಳು, ನಗರಗಳು ಥಳಗುಟ್ಟುವುದು ಇವರಿಂದಾಗಿಯೇ. ನಮ್ಮ ಗಿರಣಿಗಳು ಕಾರ್ಖಾನೆಗಳು ನಡೆಯುವ ಹಿಂದಿನ ಶ್ರಮ ಇವರದ್ದೆ. ಪ್ರಪಂಚದ ಪ್ರತಿ ಕಾಮಗಾರಿಯ ಹಿಂದೆ ಇರುವುದು ಇವರದ್ದೇ ಬೆವರು. ಬೆಳೆಯುವ-ಉತ್ಪಾದಿಸುವ ಈ ಶ್ರಮಿಕರನ್ನು ದುಃಖ-ದುಸ್ಥಿತಿ ಗಳು ಬಿಡದೆ ಬೆಂಬತ್ತಿವೆ. ಅವರ ಈ ಕಷ್ಟ ಕಣ್ಣೀರಿನ ಮೂಲ ಕಾರಣ ಬಿಳಿ ತೊಗಲಿನ ಒಡೆಯರು ಮತ್ತು ಅವರ ಏಜೆಂಟರು. ಹಳ್ಳಿಹಳ್ಳಿಗೆ ಹೋಗಿ ಗಿರಣಿ ಕಾರ್ಖಾನೆಗಳಿಗೆ ತೆರಳಿ ಅವರನ್ನು ಅಧ್ಯಯನ ಮಾಡಬೇಕು ಮತ್ತು ಅವರಲ್ಲಿ ರಾಜಕೀಯ ಎಚ್ಚರವನ್ನು ಮೂಡಿಸಬೇಕು.

ಎಲ್ಲಾ ಬಗೆಯ ಪರಕೀಯ ಆಳ್ವಿಕೆ ನ್ಯಾಯಬಾಹಿರ. ಅಂಚಿನಲ್ಲಿ ಜೋತು ಬಿದ್ದು ಜೀವ ಹಿಡಿದ ದೀನ-ದರಿದ್ರರ ಹಕ್ಕುಗಳನ್ನು ಮಾನ್ಯ ಮಾಡದಿರುವ, ಬಂಡವಾಳಶಾಹಿಗಳು ಮತ್ತು ಜಮೀನುದಾರರ ಹಿತವನ್ನು ಕಾಪಾಡುವ, ಕಾರ್ಮಿಕರು ಮತ್ತು ರೈತರ ಸಮಾನ ಭಾಗವಹಿಸುವಿಕೆ ಇಲ್ಲದಿರುವ ಯಥಾಸ್ಥಿತಿವಾದಿ ತಾರತಮ್ಯಗಳು ಮತ್ತು ವಿಶೇಷಾಧಿಕಾರಗಳನ್ನು ಕಾಪಾಡಲು ಕಾಯ್ದೆ ಕಾನೂನು ಮಾಡುವ ಯಾವುದೇ ಸರಕಾರ ಕೂಡ ನ್ಯಾಯಬಾಹಿರ. ಎಂಬ ಖಾನ್ ಮಾತುಗಳಲ್ಲಿ ಅಪ್ಪಟ ಮಾನವೀಯ ಮೌಲ್ಯಗಳು ಹುದುಗಿವೆ. ಹಿಂದು-ಮುಸ್ಲಿಮರನ್ನು ಒಡೆವ ಪಿತೂರಿಯ ಕುರಿತು ಅವರು ಮಾತನಾಡಿದ್ದರು. ಅಂತಹವರೇ ದೇಶದ ನಿಜ ಶತ್ರುಗಳು ಎಂದು ಬಣ್ಣಿಸಿದ್ದರು. ಭಗತ್ ಸಿಂಗರಂತೂ ಖಾನ್ ಮತ್ತು ರಾಮ್ ಪ್ರಸಾದರ ಭಾಂಧವ್ಯವನ್ನು ಕಂಡು “ಈ ಐಕ್ಯತೆಯೇ ನಮ್ಮ ಸ್ವಾತಂತ್ರ್ಯಸಂಗ್ರಾಮದ ಸ್ಪೂರ್ತಿಯಾಗಬೇಕು” ಎಂದಿದ್ದರು.

ನಮ್ಮ ಸ್ವತಂತ್ರ್ಯ ಸಂಗ್ರಾಮದ ಮಿನುಗುತಾರೆಗಳೆನಿಸಿಕೊಂಡ ಕಾಕೋರಿ ಹುತಾತ್ಮರ ಮರಣ ದಿನವನ್ನು ನಾವು ಸ್ಮರಿಸುವಾಗ ಅವರೆಲ್ಲರ ನನಸಾಗದ ಕನಸಿನ ಭಾರತವನ್ನು ನನಸು ಮಾಡಲು ಮುಂದೊಡಗುವುದೇ ನಾವವರಿಗೆ ನೀಡಬಹುದಾದ ಗರಿಷ್ಠ ಗೌರವ.

LEAVE A REPLY

Please enter your comment!
Please enter your name here