ಲೇಖಕರು : ಅಬ್ದುಲ್ ಅಜೀಜ್ ಉದ್ಯಾವರ್.
ಹಜ್ಜ್ ಮತ್ತು ಬಕ್ರೀದ್ ಇವೆರಡರಲ್ಲೂ ಪ್ರವಾದಿ ಅಬ್ರಹಾಮರ(ಇಬ್ರಾಹಿಂ) ಜೀವನ ಮತ್ತು ಸಂದೇಶವಿದೆ. ಕುರಾನ್ ನಲ್ಲಿ ಹಲವೆಡೆ ಇವರ ವೃತ್ತಾಂತವಿದೆ. ಆದಿಮಾನವ ಮತ್ತು ಪ್ರವಾದಿಯೂ ಆಗಿದ್ದ ಆದಮರ ನಂತರ ನೋಹ(ಮನು) ಮತ್ತು ಅಬ್ರಹಾಮರಂತಹ ಲಕ್ಷಾಂತರ ದೇವ ಸಂದೇಶವಾಹಕರು ಅಖಂಡ ಬೃಹ್ಮಾಂಡ ಹಾಗೂ ನಮ್ಮೆಲ್ಲರ ಸೃಷ್ಟಿಕರ್ತನಿಂದಲೇ ನೀಡಲ್ಪಟ್ಟ ಯಶಸ್ವೀ ಜೀವನ ಪದ್ಧತಿಯನ್ನು ಅನುಸರಿಸುವಂತೆ ಕರೆ ನೀಡುತ್ತಿದ್ದರು. ಆ ಮಾರ್ಗದಲ್ಲಿ ಅನಿವಾರ್ಯವಾಗಿ ಬರುವ ಸಂಕಷ್ಟಗಳನ್ನು ಸಹಿಸುತ್ತಲೇ ಮತ್ತು ಪರೀಕ್ಷೆಗಳನ್ನು ಎದುರಿಸುತ್ತಲೇ ತ್ಯಾಗಗಳನ್ನು ನೀಡಿ ಕರ್ತವ್ಯ ನಿರತರಾಗಿ ನಿರ್ಗಮಿಸಿದ ಮಹಾ ನಾಯಕರಲ್ಲಿ ಒಬ್ಬರು ಅಬ್ರಾಹಂ.
ತಾವೇ ಅತಿದೊಡ್ಡ ದೇವರೆಂಬಂತೆ ವರ್ತಿಸುತ್ತಿದ್ದ ತಮ್ಮ ತಮ್ಮ ಕಾಲದ ಪುರೋಹಿತರು ಮತ್ತು ಸರ್ವಾಧಿಕಾರಿಗಳ ಶೋಷಣೆಗಳ ಕಪಿ ಮುಷ್ಠಿಗಳಿಂದ ಮರ್ದಿತ ಜನಸಾಮಾನ್ಯರನ್ನು ವಿಮೋಚಿಸಿ ನೈಜ ಸೃಷ್ಟಿಕರ್ತ ನೀಡಿರುವ ಜೀವನ ಕ್ರಮದ ಅಧೀನಕ್ಕೆ ತರುವುದು ಸಾಮಾನ್ಯವಾಗಿ ಪ್ರವಾದಿಗಳ ದೌತ್ಯವಾಗಿತ್ತು.
ಬೃಹ್ಮಾಂಡವನ್ನು ಸೃಷ್ಟಿಸಿ, ಮಾನವರಿಗಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಿರುವ ಒಡೆಯನೊಂದಿಗೆ ದೇವೇತರರನ್ನು ಭಾಗಿಗೊಳಿಸುವುದು ಅಕ್ಷಮ್ಯ ಅಪರಾಧವೆಂಬ ಘೋಷಣೆ ಆ ಏಕೈಕ ದೇವನದ್ದಾಗಿದೆ. ಈ ಕರೆಯನ್ನು ಘಂಟಾಘೋಷವಾಗಿ, ಹೆಚ್ಚಿನ ಬಲದೊಂದಿಗೆ ಘೋಷಿಸುವುದೇ ಇಬ್ರಾಹಿಮರ ವಿಶೇಷತೆಯಾಗಿತ್ತು.
ಅಪ್ಪ ಮೂರ್ತಿ ತಯಾರಕ, ಮಗ ಭಂಜಕ, ಅಬ್ರಹಾಮರು ಇರಾಕ್ ನ ಉರ್ ಪಟ್ಟಣದಲ್ಲಿ ಹುಟ್ಟಿದರು. ಅವರ ತಂದೆ ಮೂರ್ತಿಗಳನ್ನು ತಯಾರಿಸಿ ಮಾರುವ ಪ್ರಖ್ಯಾತ ಉದ್ಯೋಗಿಯಾಗಿದ್ದರು. ನಮ್ರೂದ್ ರಾಜನ ಆಸ್ಥಾನದಲ್ಲಿ ಪ್ರತಿಷ್ಟಿತ ಸ್ಥಾನ ಪಡೆದಿದ್ದರು. ತನ್ನ ಮುಂದೆಯೇ ತಯಾರಾಗುತ್ತಿದ್ದ ವಿವಿಧ ಮೂರ್ತಿಗಳನ್ನು ಕಂಡು ಅಬ್ರಹಾಮರು ತಮ್ಮ ತಂದೆಯವರನ್ನು ಕೇಳಿದುದು ಕುರಾನ್ ನಲ್ಲಿ ಈ ರೀತಿಯಿದೆ
‘ಇಬ್ರಾಹೀಮ್ ತನ್ನ ತಂದೆ ಆಝರನೊಡನೆ, “ನೀವು ವಿಗ್ರಹಗಳನ್ನು ದೇವರನ್ನಾಗಿ ಮಾಡುತ್ತೀರಾ? ನಾನು ನಿಮ್ಮನ್ನೂ ನಿಮ್ಮ ಜನಾಂಗವನ್ನೂ ವ್ಯಕ್ತವಾದ ಪಥಭ್ರಷ್ಟತೆಯಲ್ಲಿ ಕಾಣುತ್ತಿರುವೆನು”
(ಅಧ್ಯಾಯ 6: ಸೂಕ್ತ 74).
ಆಗ ತಂದೆಯು ನೀನು ನನ್ನ ನಂತರ ನನ್ನ ಈ ಸ್ವತ್ತು ಸಂಪತ್ತು, ಐಶ್ವರ್ಯಗಳ ಒಡೆಯನಾಗಲಾರೆಯೋ ಎಂದು ಪ್ರಲೋಭಿಸುತ್ತಾರೆ. ಪರೀಕ್ಷೆ ಮತ್ತು ತ್ಯಾಗಗಳು ಇಲ್ಲಿಂದ ಆರಂಭ ಆಗುತ್ತದೆ. ಸಿದ್ದಾಂತದೊಂದಿಗಿನ ರಾಜಿಮಾಡದೆ ಆಡಂಬರ ವಿಲಾಸದ ಜೀವನವನ್ನು ತ್ಯಜಿಸುತ್ತಾರೆ. ಎಲ್ಲಾ ಪರಿಣಾಮಗಳ ಅಪಾಯವನ್ನರಿತೂ, ಲೆಕ್ಕಿಸದೆ ಅಬ್ರಹಾಮರು ದೇವೇತರರ ಆರಾಧನೆಯ ಅನುಸರಣೆಯ ವಿರುದ್ಧ ಏಕೈಕ ದೇವನ ಆರಾಧನೆಯ ಕರೆಯನ್ನೂ ಮೊಳಗಿಸಿದರು, ಕೂಡಲೇ ಇದರ ಪ್ರತಿಕ್ರಿಯೆ ಮನೆ, ಸಮಾಜ ಮತ್ತು ಸರ್ವಾಧಿಕಾರಿ ನಮ್ರೂದನಿಂದ ಆಯ್ತು.
ಒಮ್ಮೆ ಹಲವಾರು ಮೂರ್ತಿಗಳಿರುವ ಆರಾಧನಾಲಯದೊಳೊಕ್ಕೆ ಯಾರೂ ಇಲ್ಲದಾಗ ಬಾಲಕ ಅಬ್ರಹಾಮ ಹೊಕ್ಕಿ, ಮೂರ್ತಿಗಳೆಲ್ಲವನ್ನು ತುಂಡು ತುಂಡಾಗಿಸಿ, ಕೊಡಲಿಯನ್ನು ದೊಡ್ಡ ಮೂರ್ತಿಯ ಕೈಯಲ್ಲಿರುಸುತ್ತಾನೆ. ಈ ಕೆಲಸವು ಅಬ್ರಹಾಮ ಅಲ್ಲದೆ ಯಾರದೂ ಅಲ್ಲವೆಂದರಿತ ಗ್ರಾಮಸ್ಥರು ಆತನನ್ನು ಹಿಡಿದು ತರುತ್ತಾರೆ. ಇದು ಯಾರು ಮಾಡಿದ್ದೆಂದು ಆತನಲ್ಲಿ ಕೇಳಿದಾಗ, ಕೊಡಲಿ ಹಿಡಿದು ಕೊಂಡಿರುವ ದೊಡ್ಡ ಮೂರ್ತಿಯನ್ನೇ ಕೇಳಿರಿ ಎನ್ನುತ್ತಾರೆ. ಅದು ಮಾತನಾಡುವುದಿಲ್ಲವೆಂದಾಗ ಹಾಗಾದರೆ ತನ್ನ ಮೇಲೆ ಕುಳಿತ ನೊಣವನ್ನೂ ಓಡಿಸಲಾಗದ, ನಿಮ್ಮ ಕೈಗಳಿಂದಲೇ ರಚಿಸಿದವುಗಳನ್ನೇಕೆ ಪೂಜಿಸುತ್ತೀರೆಂದು ಮರು ಪ್ರಶ್ನೆ ಹಾಕುತ್ತಾರೆ. ಅಲ್ಲಿದ್ದವರಿಗೆ ತನ್ನ ವಿಚಾರವನ್ನು ಮನವರಿಕೆ ಮಾಡುವುದು ಇದೆಲ್ಲದರ ಉದ್ದೇಶವಾಗಿತ್ತು.
ಈ ನಂತರದ ವೃತ್ತಾಂತವನ್ನು ಕುರ್ ಆನ್ ನಲ್ಲಿ ಈ ರೀತಿ ಹೇಳಲಾಗಿದೆ.
(ಅಧ್ಯಾಯ – 6 : ಅಲ್ ಅನ್‌ಆಮ್, ಸೂಕ್ತ 77-80)
ಅನಂತರ ಪ್ರಕಾಶಿಸುತ್ತಿರುವ ಚಂದ್ರನನ್ನು ಕಂಡಾಗ, “ಇದು ನನ್ನ ಪ್ರಭು” ಎಂದರು. ಆದರೆ ಅದೂ ಮುಳುಗಿದಾಗ, “ನನ್ನ ಪ್ರಭು ನನಗೆ ಮಾರ್ಗದರ್ಶನವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ” ಎಂದರು.
(ಸೂಕ್ತ : 77)
ಅನಂತರ ಪ್ರಕಾಶಮಯವಾದ ಸೂರ್ಯನನ್ನು ಕಂಡು, “ಇದೇ ನನ್ನ ಪ್ರಭು; ಇದು ಎಲ್ಲಕ್ಕಿಂತಲೂ ದೊಡ್ಡದಾಗಿದೆ” ಎಂದರು. ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರು ಉದ್ಗರಿಸಿದರು:- “ಓ ನನ್ನ ಜನಾಂಗಬಾಂಧವರೇ, ನೀವು ದೇವನ ಸಹಭಾಗಿಯಾಗಿಸುವವುಗಳಿಂದೆಲ್ಲ ನಾನು ವಿರಕ್ತನು.
(ಸೂಕ್ತ : 78)
ನಾನು ಏಕನಿಷ್ಠೆಯಿಂದ ನನ್ನ ಮುಖವನ್ನು ಭೂಮಿ-ಆಕಾಶಗಳನ್ನು ಸೃಷ್ಟಿಸಿದವನ ಕಡೆಗೆ ತಿರುಗಿಸಿದೆನು. ನಾನು ಎಷ್ಟು ಮಾತ್ರಕ್ಕೂ ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ.”
(ಸೂಕ್ತ : 79)
ಅವರ ಜನಾಂಗವು ಅವರೊಂದಿಗೆ ಜಗಳಾಡತೊಡಗಿದಾಗ ಅವರು ಆ ಜನಾಂಗದೊಡನೆ, “ನೀವು ಅಲ್ಲಾಹನ ವಿಷಯದಲ್ಲಿ ನನ್ನೊಡನೆ ಜಗಳಾಡುತ್ತೀರಾ? ವಸ್ತುತಃ ಅಲ್ಲಾಹನು ನನಗೆ ಸನ್ಮಾರ್ಗದರ್ಶನ ಮಾಡಿರುತ್ತಾನೆ ಮತ್ತು ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನಾಗಿರಿಸಿಕೊಂಡವರನ್ನು ನಾನು ಭಯಪಡುವುದಿಲ್ಲ. ನನ್ನ ಪ್ರಭು ಇಚ್ಛಿಸಿದುದು ಮಾತ್ರ ಆಗಲು ಸಾಧ್ಯವಿದೆ. ನನ್ನ ಪ್ರಭುವಿನ ಜ್ಞಾನವು ಪ್ರತಿಯೊಂದು ವಸ್ತುವನ್ನಾವರಿಸಿಕೊಂಡಿದೆ. ಇನ್ನೇನು ನೀವು ಎಚ್ಚರಗೊಳ್ಳಲಾರಿರಾ?
(ಸೂಕ್ತ : 80)
ಪ್ರವಾದಿ ಇಬ್ರಾಹೀಮರನ್ನು ಧಗಧಗಿಸುವ ಅಗ್ನಿಕುಂಡಕ್ಕೆ ಎಸೆಯಲಾಗುತ್ತದೆ. ಅವರು ತನ್ನ ಕಾರ್ಯದಲ್ಲಿ ಮುಂದುವರಿಯುತ್ತಲೇ ಹೋದರು. ಅದೇ ಪ್ರಮಾಣದಲ್ಲಿ ಪರೀಕ್ಷೆಗಳೂ ಹೆಚ್ಚುತ್ತಲೇ ಬಂದುವು. ಅದ್ಭುತವಾದ ಪರೀಕ್ಷೆಗಳ ಮತ್ತು ತ್ಯಾಗಗಳ ಒಂದು ಸರಣಿಯೇ ಪ್ರವಾದಿ ಇಬ್ರಾಹೀಮರ ಜೀವನದಲ್ಲಿ ಸಿಗುವ ಅದ್ವಿತೀಯ ಉದಾಹರಣೆ.
ನಮ್ರೂದ್ ಸ್ವೇಚ್ಛಾಧಿಪತಿಯು ಬೃಹತ್ತಾದ ಅಗ್ನಿಕುಂಡವನ್ನು ಹೊತ್ತಿಸುವಂತೆ ತನ್ನ ಜನರಿಗೆ ಆಜ್ಞೆ ನೀಡುತ್ತಾನೆ. ಏಕ ದೇವತ್ವದ ಕರೆಯಿಂದ ಇಬ್ರಾಹಿಮರನ್ನು ಬೆದರಿಸುವ ತಂತ್ರಗಳ ಮೂಲಕ ತಡೆಯುವ ಪ್ರಯತ್ನ ಮಾಡಲಾಗುತ್ತದೆ. ತನ್ನ ಪ್ರಾಣಕ್ಕಿಂತಲೂ ಏಕೈಕ ದೇವನ ಸಂಪ್ರೀತಿಯೇ ಮುಖ್ಯವೆಂಬುದು ಇಬ್ರಾಹಿಮರ ನಂಬಿಕೆಯಾಗಿತ್ತು. ತನ್ನ ಕರ್ತವ್ಯವನ್ನು ಮುಂದುವರಿಸುತ್ತಿರುತ್ತಾರೆ. ಇಬ್ರಾಹಿಮರನ್ನು ಧಗಿಸುತ್ತಿರುವ ಅಗ್ನಿಕುಂಡಕ್ಕೆ ಎಸೆಯಲಾಗುತ್ತದೆ. ದೇವಾಜ್ಞೆಯಂತೆ ಬೆಂಕಿ ಆಶ್ಚರ್ಯಕರವಾಗಿ ತಣ್ಣಗಾಗುತ್ತದೆ. ಇಬ್ರಾಹಿಮರು ರಕ್ಷಿಸಲ್ಪಡುತ್ತಾರೆ. ಒಂದು ಅಗ್ನಿ ಪರೀಕ್ಷೆಯಿಂದ ಯಶಸ್ವಿಯಾಗಿ ಹೊರಬರುತ್ತಾರೆ.
ಗಡೀಪಾರು ಈಗ ಎರಡನೇ ಪರೀಕ್ಷೆ; ಮನೆ, ಸಮಾಜ ಮತ್ತು ನಾಡಿನಿಂದಲೇ ಹೊರಹಾಕಲಾಗುತ್ತದೆ. ಅಸಾಮಾನ್ಯ ಸಹನಾ ಶಕ್ತಿಯ ಮೂಲಕ ದೇಶ ಪ್ರದೇಶವನ್ನು ಅಲೆಯುತ್ತಾರೆ. ಕಲ್ಲು ಮುಳ್ಳು ಬೆಟ್ಟ, ಮರುಭೂಮಿಗಳ ದುರ್ಗಮ ಹಾದಿ, ಭಯಾನಕ ಪ್ರಾಣಿಗಳ ಅಪಾಯಕಾರಿ ಕಾಡುಗಳು, ಹಿಡಿದುಕೊಂಡು ಹೋಗಿ ಗುಲಾಮರಾಗಿಸ ಬಹುದಾದವರ ಭಯ, ಇನ್ನೊಂದೆಡೆ ಏಕೈಕ ದೇವನು ನೀಡಿರುವ ಸತ್ಯ ಮಾರ್ಗದ ದೌತ್ಯದ ಪ್ರಜ್ಞ, ಒಂದೇ ಛಲದ ಅಸಾಮಾನ್ಯ ಗುಣದ ಪ್ರವಾದಿ ಏನು ಸಹಿಸಲೂ ಸಿದ್ಧವಿದ್ದವರಾಗಿದ್ದರು. ಈ ಮಧ್ಯೆ ಹಾಜಿರಾರನ್ನು ಮದುವೆ ಆಗುತ್ತಾರೆ. ತನ್ನ ಮಿಷನಿನಲ್ಲಿ ತಲ್ಲೀನನಾಗುತ್ತಲೇ ವಯಸ್ಸಾಗುತ್ತದೆ. ಮಕ್ಕಳಿಲ್ಲದ ಕೊರಗು, ನಿರಂತರ ವಿವಿಧ ರೀತಿಯ ಪರೀಕ್ಷೆಗಳು, ತನ್ನ ಕಾರ್ಯದಲ್ಲಿ ಸಹಕಾರಕ್ಕಾಗಿ ಮತ್ತು ಮುಂದುವರಿಸಲಿಕ್ಕಾಗಿ ಓರ್ವ ಮಗನ ಕೊರತೆಯೆಂದು ಮನಗಾಣುತ್ತಾರೆ. ಪ್ರಾರ್ಥನೆಯನ್ನು ಆಲಿಸಿದ ದೇವನು ಅವರ ಮುದಿ ವಯಸ್ಸಿನಲ್ಲಿ ಓರ್ವ ಮಗನನ್ನು ದಯಪಾಲಿಸುತ್ತಾನೆ.
ಮಡದಿ ಮತ್ತು ಹಸುಳೆಯನ್ನು ಮರುಭೂಮಿಯಲ್ಲಿ ಬಿಡಬೇಕೆಂಬ ಆಜ್ಞೆ ಅದೇ ಇನ್ನೊಂದು ಪರೀಕ್ಷೆಗೆ ಕಾರಣವಾಗುತ್ತದೆ. ಎಳೆಕೂಸು ಮತ್ತು ಮಡದಿಯನ್ನು ಮರುಭೂಮಿಯಲ್ಲಿ ಬಿಟ್ಟು ಬರುವಂತೆ ದೇವಾಜ್ಞೆಯಾಗುತ್ತದೆ.
ಪ್ರವಾದಿಯವರು ಮರು ಯೋಚಿಸದೆ ಶಿರಸಾ ಪಾಲಿಸುತ್ತಾರೆ. ಏಕಾಏಕಿ ಈ ವರ್ತನೆಯನ್ನು ಕಂಡು ಮಡದಿ ಇದೇನು ದೇವಾಜ್ಞೆಯೇ ಎಂದು ಕೇಳುತ್ತಾರೆ. ಹೌದೆಂದು ತಲೆಯಾಡಿಸಿದಾಗ ಸುಮ್ಮನಾಗುತ್ತಾರೆ. ಪ್ರಾರ್ಥಿಸಿ ಮುದಿ ವಯಸ್ಸಿನಲ್ಲಿ ಪಡೆದ ತನ್ನ ಪ್ರೀತಿಪಾತ್ರ ಮಗು, ತನಗೆ ಶಕ್ತಿ, ಆಸರೆ ಆಯಿತೆಂದುಕೊಂಡು ಹಲವು ಆಕಾಂಕ್ಷೆಗಳಿಂದ ಪುಳಕಿತರಾಗುವಾಗಲೇ ಈ ಪರೀಕ್ಷೆಯೂ ಕಠಿಣವೇ ಆಗಿತ್ತು.
ಆ ನಿರ್ಜನ ಪ್ರದೇಶದಲ್ಲಿ ಹಾಜಿರಾರಲ್ಲಿದ್ದ ಖರ್ಜೂರ ಮತ್ತು ನೀರು ಕೆಲವೇ ದಿನಗಳಲ್ಲಿ ಮುಗಿಯುತ್ತದೆ. ಮಗುವಿಗೆ ಬಾಯಾರಿಕೆಯಾಗಿರುತ್ತದೆ. ತಾಯಿ ಹೃದಯ ತಲ್ಲಣಗೊಳ್ಳುತ್ತದೆ. ಆಚೀಚೆ ಓಡಾಡುತ್ತಿರುತ್ತಾರೆ. ಒಮ್ಮೆ ಸಫಾ ಇನ್ನೊಮ್ಮೆ ಮರ್ವಾವೆಂಬ ಬೆಟ್ಟಗಳ ಮಧ್ಯೆ ಓಡಾಡುತ್ತಾ, ಏರುತ್ತಾ ಯಾವುದಾದರೂ ವ್ಯಾಪಾರ ತಂಡ ಕಾಣುವುದೋ ನೋಡುತ್ತಾರೆ. ನಿರಾಶರಾಗಿ ಮಗುವಿನ ಕಡೆಗೆ ಮರಳಿದಾಗ ಒಂದು ಅದ್ಭುತ ಕಾದಿರುತ್ತದೆ. ಮಗು ಕಾಲುಗಳ ಅಪ್ಪಳಿಸಿದ ಸ್ಥಳದಲ್ಲೇ ನೀರಿನ ಚಿಲುಮೆಯೊಂದನ್ನು ಕಂಡು ಸಂತೋಷದೊಂದಿಗೆ ಅಶ್ಚರ್ಯಗೊಳ್ಳುತ್ತಾರೆ. ಬೇಕಾದಷ್ಟು ನೀರನ್ನು ಸಂಗ್ರಹಿಸಿ ‘ಝಮ್ ಝಮ್’ (ನಿಲ್ಲಿಸು) ಎಂದು ಬಿಡುತ್ತಾರೆ.
ಮುಂದೆ ಇದಕ್ಕಿಂತ ಭಯಾನಕ ಪರೀಕ್ಷೆ ಎದುರಾಗುತ್ತದೆ. ಬೆಳೆದ ಮಗ ಇಸ್ಮಾಯಿಲರನ್ನು ಬಲಿ ಕೊಡಬೇಕೆಂಬ ಆಜ್ಞೆ ಆಗುತ್ತದೆ. ದೇವಾಜ್ಞೆಯಿಂದ ಎಂದೂ ಹಿಂಜರಿಯದ ಇಬ್ರಾಹಿಮರು ವಿಷಯವನ್ನು ಕೂಡಲೇ ಮಗನಿಗೆ ತಿಳಿಸುತ್ತಾರೆ. ತಾಯಿ ಹಾಜಿರಾ ಅವರ ತರಬೇತಿಯಲ್ಲಿ ಬೆಳೆದ ಇಸ್ಮಾಯೀಲರು ದೇವ ಭಯ ಮತ್ತು ದೇವಾಜ್ಞೆಮನ್ನು ಪಾಲಿಸುವವರಾಗಿದ್ದರು. ತಂದೆಯ ಮಾತಿಗೆ ಪ್ರತ್ಯುತ್ತರವಾಗಿ ದೇವಾಜ್ಞೆಯಾಗಿದ್ದರೆ ಸದಾ ಸಿದ್ಧನೆನ್ನುತ್ತಾರೆ.
ಮಗನನ್ನು ಮಲಗಿಸುತ್ತಾರೆ. ಪುತೃವಾತ್ಸಲ್ಯ ತಡೆಯಾಗದಿರಲಿ ಎಂದು ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ. ಹರಿತವಾದ ಕತ್ತಿಯನ್ನು ಕರುಳ ಕುಡಿಯ ಕತ್ತಿನ ಮೇಲೆ ಚಲಿಸಿಯೇ ಬಿಡುತ್ತಾರೆ. ದೇವನು ತನ್ನ ದಾಸನ ನಿಷ್ಠೆ ಮತ್ತು ಆಜ್ಞಾ ಪಾಲನೆಯನ್ನು ಸ್ವೀಕರಿಸಿಯೇ ಬಿಡುತ್ತಾನೆ. ಮಗನ ಬದಲಿಗೆ ಕತ್ತು ಕೊಯ್ಯಲ್ಪಟ್ಟ ಟಗರು ಬಿದ್ದು ಕೊಂಡಿತ್ತು . ಇಸ್ಮಾಯಿಲರು ಜೀವಂತ ಎದ್ದು ಮುಗುಳ್ನಗುತ್ತಾ ನಿಂತಿದ್ದರು. ಇಲ್ಲೂ ಪರೀಕ್ಷೆಯಲ್ಲಿ ಇಬ್ರಾಹೀಮ ಮತ್ತು ಇಸ್ಮಾಯೀಲ ಇಬ್ಬರೂ ವಿಜಯಿಗಳಾದರು.
ಹಜ್ಜ್ ನ ಸಕಲ ವಿಧಿಗಳು ಇಬ್ರಾಹೀಮರ ಇದೇ ಚರಿತ್ರೆಯನ್ನು ನೆನಪಿಸುವುದು. ಸಂಪತ್ತು, ಆರೋಗ್ಯ ಮತ್ತು ಎಲ್ಲದರಲ್ಲೂ ಅರ್ಹನಾಗಿರುವ ವಯಸ್ಕರು ಜೀವನದಲ್ಲೊಮ್ಮೆ ಹಜ್ಜ್ ಯಾತ್ರೆ ಕೈಗೊಳ್ಳಬೇಕು. ವಿಶ್ವದೆಲ್ಲೆಡೆಯಿಂದ ಲಕ್ಷೋಪಲಕ್ಷ ಮುಸ್ಲಿಮರು ವರ್ಷಕ್ಕೊಮ್ಮೆ ಮಕ್ಕಾನಗರದಲ್ಲಿ ಹೇಗೆ ಒಟ್ಟುಗೂಡುತ್ತಾರೆಂದರೆ ಒಂದೇ ರೀತಿಯ ಎರಡು ತುಂಡು ಶ್ವೇತ ಬಟ್ಟೆಯನ್ನು ದೇಹಕ್ಕೆ ಸುತ್ತಿಕೊಂಡು ಆತ ಯಾವುದೇ ದೇಶದ ಆಡಳಿತಗಾರನೋ, ಸೇವಕನೋ ತಿಳಿಯಲಿಕ್ಕಾಗದು. ಎಲ್ಲರೂ ಒಂದೇ ರೀತಿಯ ವಿಧಿಗಳನ್ನು ಅಲ್ಲಿ ನೆರವೇರಿಸಬೇಕು.
ಸಮಾನತೆಗೆ ಇಸ್ಲಾಮ್ ಕೊಡುವ ಪ್ರಾಮುಖ್ಯತೆ ಇಲ್ಲಿ ಎದ್ದು ಕಾಣುತ್ತದೆ. ಕಾಬಾ ಬಳಿಯಲ್ಲೇ ಇರುವ ಎಂದೂ ಕಡಿಮೆಯಾಗದೆ ಸದಾ ಹರಿಯುತ್ತಲೇ ಇರುವ ಮರುಭೂಮಿಯ ಬುಗ್ಗೆಯೇ ಝಮಝಮ್ ನ ಬಾವಿ. ಅತ್ಯದ್ಭುತ ಔಷಧಿ ಗುಣಗಳುಳ್ಳ ಇದರ ನೀರನ್ನು ಲೋಕದ ಮೂಲೆ ಮೂಲೆಗೆ ಮಕ್ಕಾ ಯಾತ್ರಿಗಳು ಕೊಂಡೊಯ್ಯುತ್ತಾರೆ. ಇಬ್ರಾಹೀಮ ಮತ್ತು ಇಸ್ಮಾಯೀಲರು ಸೇರಿ ಅಲ್ಲಾಹನ ಆಜ್ಞೆಯಂತೆ ಭೂಮಂಡಲದ ಕೇಂದ್ರ ಭಾಗದಲ್ಲಿ ನಿರ್ಮಿಸಿದ್ದೆ ಕಾಬಾ ಭವನವಾಗಿದೆ. ಮುಸ್ಲಿಮರೆಲ್ಲರೂ ನಮಾಝಿಗೆ ಅಭಿಮುಖವಾಗಿಸುವ ಕಾಬಾ ಭವನಕ್ಕೆ ಪ್ರದಕ್ಷಿಣೆಯಿಂದ ಹಿಡಿದು, ಹಾಜಿರಾರು ನೀರಿಗಾಗಿ ಓಡಾಡಿದ ಸಫಾ-ಮರ್ವಾ ಬೆಟ್ಟಗಳಿಗೆ ಏರುವ ಎಲ್ಲಾ ವಿಧಿಗಳೂ ಹಜ್ಜ್ ನ ಭಾಗಗಳಾಗಿವೆ..
ಮುಹಮ್ಮದ್ ಪೈಗಂಬರರು ನಿರ್ವಹಿಸಿದ ಹಜ್ಜ್ ಕ್ರಮದಂತೆ ಬಕ್ರೀದ್ ನ ಮುಂಚಿನ ದಿನ ಅರಫಾ ಎಂಬ ವಿಶಾಲ ಮೈದಾನದಲ್ಲಿ ಹಾಜಿಗಳೆಲ್ಲರೂ ಸೇರುವುದು ಹಜ್ಜ್ ನ ಪ್ರಮುಖ ಮತ್ತು ಕಡ್ಡಾಯ ವಿಧಿಗಳಲ್ಲೊಂದು. ಅರಫಾದಲ್ಲಿ ಎರಡು ಹೊತ್ತಿನ ಕಡ್ಡಾಯ ನಮಾಝ್ ಸಾಮೂಹಿಕವಾಗಿ ನಿರ್ವಹಿಸಿದ ಬಳಿಕ ಜನಸ್ತೋಮಕ್ಕೆ ಉದ್ಬೋದೆ ನಡೆಸಲಾಗುತ್ತದೆ. ಆ ನಂತರ ಪ್ರತಿಯೊಬ್ಬರೂ ವೈಕ್ತಿಕವಾಗಿ ಹೃದಯಾಂತರಾಳದಿಂದ ತಮ್ಮ ಗತ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ರೋದಿಸಿ ಕ್ಷಮೆಯಾಚಿಸಿ ಪ್ರಾರ್ಥಿಸಿದರೆ ದೇವನು ಪ್ರಾಥನೆಯನ್ನು ಸ್ವೀಕರಿಸಿ ಪರಿಶುದ್ಧ ಗೊಳಿಸುತ್ತಾನೆಯೆಂದು ಪ್ರವಾದಿ ನುಡಿದಿರುತ್ತಾರೆ. ವಿವಿಧ ವಿಧಿಗಳ ಮೂಲಕ ತನ್ನನ್ನು ಸಂಸ್ಕರಿಸಿ, ದೇವವಿಶ್ವಾಸ ಮತ್ತು ದೇವ ಭಯ ವೃದ್ಧಿಸಿ ಹೊಸ ಜೀವನ ಆರಂಭಿಸುವ ಬದ್ಧತೆಯೊಂದಿಗೆ ಹಾಜಿಗಳು ಮರಳುತ್ತಾರೆ.
ಬಕ್ರೀದ್ ದೇವನು ತನ್ನ ದಾಸರಲ್ಲಿ ಯಾರನ್ನು ಹೆಚ್ಚು ಇಷ್ಟಪಡುತ್ತಾನೋ ಅವರನ್ನು ಹೆಚ್ಚು ತನ್ನ ನಿಕಟಗೊಳಿಸುತ್ತಾನೆ ಮತ್ತು ಏಕೈಕ ಪ್ರಭು ನೀಡಿದ ಜೀವನ ಪದ್ಧತಿಯ ಸ್ಥಾಪನೆಯ ಕಾರ್ಯವನ್ನು ಅವರಿಂದ ತೆಗೆದುಕೊಳ್ಳುತ್ತಾನೆ. ಅದಕ್ಕಾಗಿ ವಿವಿಧ ರೀತಿಯ ಪರೀಕ್ಷೆಗಳ ಮೂಲಕ ಸಂಸ್ಕರಿಸುತ್ತಾನೆ. ಈ ರೀತಿ ಇಬ್ರಾಹಿಮರು ದೇವನ ಅತ್ಯಂತ ಪ್ರಿಯ ಪ್ರವಾದಿ ಎನಿಸಿಕೊಳ್ಳುತ್ತಾರೆ ಮತ್ತು ದೇವನು ಅವರ ಸ್ಥಾನವನ್ನು ಮೇಲಕ್ಕೇರಿಸುತ್ತಾನೆ.
ಹಜ್ಜ್ ನ ಪ್ರಮುಖ ಕರ್ಮವಾಗಿ ಅಲ್ಲಿ ಒಂದೇ ಹೊತ್ತು ಎಲ್ಲ ಹಜ್ಜ್ ಯಾತ್ರಿಗಳೂ ಅರಫಾ ಮೈದಾನದಲ್ಲಿ ಸೇರುವ ದಿನದಂದು ಹಾಜಿಗಳ ಜೊತೆಗೆ ಸಾಮರಸ್ಯ ತೋರುವ ಸಲುವಾಗಿ ಲೋಕದೆಲ್ಲೆಡೆ ಇತರ ಮುಸ್ಲಿಮರು ಆ ಒಂದು ದಿನದ ಉಪವಾಸ ಆಚರಿಸುತ್ತಾರೆ. ಮರುದಿನ ಬಕ್ರೀದ್ ನಂದು ನಡೆಯುವ ವಿಶೇಷ ನಮಾಝ್ ನಂತರದ ಉದ್ಭೋಧನೆಯಲ್ಲಿ ಇಬ್ರಾಹೀಮರ ದೇವಾರ್ಪಣೆಯ ಮಾದರಿ ನೆನಪಿಸಲಾಗುತ್ತದೆ. ಅಂದಿನಿಂದ ಮೂರು ದಿನಗಳಲ್ಲಿ ಲೋಕದೆಲ್ಲೆಡೆಯ ಮುಸ್ಲಿಮರು ಆಹಾರದ ಪ್ರಾಣಿಗಳ ಬಲಿಕೊಡುವುದು ಈ ಅವಿಸ್ಮರಣೀಯ ಪರೀಕ್ಷೆ ಮತ್ತು ತ್ಯಾಗದ ಸ್ಮರಣಾರ್ಥ ಹಾಗೂ ಅನುಕರಣೀಯ ದೈವ ಸಮರ್ಪಣಾಭಾವವಾಗಿದೆ.
ಇಬ್ರಾಹಿಂ ರವರಿಗೆ ಪ್ರವಾದಿಗಳ ಪಿತನೆಂಬ ಸ್ಥಾನ ಪ್ರಾಪ್ತಿಯಾಗುತ್ತದೆ, ತನ್ನ ಸಂತತಿಯನ್ನು ಸಜ್ಜನರನ್ನಾಗಿ ಮಾಡೆಂದು ಒಮ್ಮೆ ಇಬ್ರಾಹೀಮರು ದೇವನಲ್ಲಿ ಪ್ರಾರ್ಥಿಸಿರುತ್ತಾರೆ.
ತನ್ನ ಅತ್ಯಂತ ಪ್ರಿಯಪಾತ್ರ ದಾಸನ ಪ್ರಾರ್ಥನೆಯನ್ನು ಆಲಿಸಿ, ಇಸ್ಮಾಯೀಲರ ನಂತರ ಐಸಾಕ, ಜೇಕಬ, ಜೋಸೆಫರಂತಹ ಅನೇಕ ಪ್ರವಾದಿಗಳನ್ನು ಕೊಡುಗೆಯಾಗಿ ಮಾತ್ರವಲ್ಲ ಅಂತಿಮ ಪ್ರವಾದಿ ಮುಹಮ್ಮದರೂ ಇಬ್ರಾಹೀಮರ ಸಂತತಿಯಲ್ಲೇ ಆಗಿದ್ದರು.
ನಮಾಝ್, ಉಪವಾಸ, ಝಕಾತ್ ಗಳಂತೇ ಹಜ್ಜ್ ಕೂಡಾ ಪ್ರಭುವಿನ ಸಾಮೀಪ್ಯಗಳಿಸಿ, ದೇವವಿಶ್ವಾಸ ವೃದ್ಧಿಸಿಕೊಂಡು ಅದರ ಪರಿಣಾಮವಾಗಿ ಸಮಾಜದ ನಿರ್ಮಾಣದಲ್ಲಿ ಭಾಗಿಗಳಾಗಿ ದೇವ ಸಂಪ್ರೀತಿಗಳಿಸಲಿಕ್ಕಿರುವ ಕಡ್ಡಾಯ ಕರ್ಮಗಳಲ್ಲೊಂದಾಗಿದೆ.
ಈ ಶಿಕ್ಷಣಗಳೇ ಎಲ್ಲಾ ಪ್ರವಾದಿಗಳ ಜೀವನಗಳ ಮಾದರಿ. ಪ್ರವಾದಿ ಮುಹಮ್ಮದರು ಅಲ್ಪ ಕಾಲದಲ್ಲೇ ಸ್ಥಾಪಿಸಿದ ಸಾಮಾಜಿಕ ಕ್ರಾಂತಿ ಚರಿತ್ರೆಯಲ್ಲೇ ಬೇರಿಲ್ಲ. ಇದುವೇ ಎಲ್ಲಾ ಮಹಾಪುರುಷರ ಜೀವನದಲ್ಲಿ ಸಿಗುವ ಪಾಠ.
ಪರಿಶ್ರಮ ಮತ್ತು ತ್ಯಾಗಗಳಿಲ್ಲದೆ ಸಾಧನೆ ಅಸಾಧ್ಯ. ಮನುಷ್ಯನ ವಿಜಯಾಪಜಯವು ಅಖಂಡ ಭೂಮಂಡಲದ ಏಕೈಕ ಒಡೆಯನು ನೀಡಿದ ಶಿಕ್ಷಣದಂತೆ ಮಾನವೀಯತೆಯ ಸಮಾಜ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಆತ ವಹಿಸಿದ ಪಾತ್ರಕ್ಕೆ ಅನುಗುಣವಾಗಿರುತ್ತದೆ. ಇದೇ ಕುರಾನ್ ನ ಸಾರ!
ಇದುವೇ ದೇವ ಸಂದೇಶಕವಾಹಕರ ಜೀವನದಲ್ಲಿನ ಮಾದರಿ!!