• ಬಷೀರ್ ಅಹ್ಮದ್ ಕಿನ್ಯ

1934ರಲ್ಲಿ ಅಂದಿನ ತುರ್ಕಿ ಅಧ್ಯಕ್ಷ ಕಮಾಲ್ ಅತಾತುರ್ಕ್ ಎಂಬವರು ಶತಮಾನಗಳ ಕಾಲ ಮಸೀದಿಯಾಗಿದ್ದ ಹಯಾ ಸೋಫಿಯಾ ಮಸೀದಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಆದೇಶ ಹೊರಡಿಸಿದ್ದರು. ಆದರೆ, ಸುಧೀರ್ಘ ಎಂಬತ್ತನಾಲ್ಕು ವರ್ಷಗಳ ಬಳಿಕ ಇದೀಗ ಅದೇ ಮ್ಯೂಸಿಯಮನ್ನು ಮಸೀದಿಯಾಗಿ ಪರಿವರ್ತಿಸಿ ಎಂದು ಅಲ್ಲಿನ ಸರಕಾರ ಆದೇಶ ಹೊರಡಿಸಿದೆ.

2020ರ ಜುಲೈ 11ಕ್ಕೆ ತುರ್ಕಿ ಕೌನ್ಸಿಲ್ ಆಫ್ ಸ್ಟೇಟ್ (ಅಲ್ಲಿನ ಪರಮೋನ್ನತ ನ್ಯಾಯ ಪೀಠ) ಈ ಮಹತ್ವಪೂರ್ಣ ಆದೇಶವನ್ನು ಹೊರಡಿಸಿದ್ದು, ನ್ಯಾಯಾಲಯದ ತೀರ್ಪಿನ ಅನುಸಾರ ಇಂದಿನ ಅಧ್ಯಕ್ಷ ಉರ್ದುಗಾನ್ ಅವರು ಪಾರ್ಲಿಮೆಂಟ್‌ನಲ್ಲಿ ನಿಯಮ ಕರಡು ರೂಪಿಸಿ, ಜುಲೈ 24ರ ಶುಕ್ರವಾರ ಜುಮಾ ನಮಾಝಿಗಾಗಿ ತೆರೆಯುವುದಾಗಿ ತಿಳಿಸಿದ್ದಾರೆ. ಯೂರೋಪಿ‌ನಾದ್ಯಂತ ಕೇಳಿ ಬಂದ ಅಪಸ್ವರವನ್ನು ಗಮನಿಸದೆ ಮತ್ತೊಮ್ಮೆ ಮಸೀದಿಯಾಗಿ ಪರಿವರ್ತನೆಗೊಳ್ಳಲಿರುವ ಹಯಾ ಸೋಫಿಯಾದ ಇತಿಹಾಸ ಹೇಳಿ ಮುಗಿಸುವಂತದ್ದಲ್ಲ. ಕಾರಣ ಬರೊಬ್ಬರಿ 1500 ವರ್ಷಗಳ ಇತಿಹಾಸವಿದೆ ಆ ಪ್ರಸಿದ್ಧ ಕಟ್ಟಡಕ್ಕೆ. ಅದೆಷ್ಟೋ ರಾಜಕೀಯ ಏರುಪೇರುಗಳ ಅನುಸಾರ ಆಚಾರ, ವಿಚಾರಗಳ ಜೊತೆಗೆ ನಂಬಿಕೆಯನ್ನೂ ಬದಲಿಸುತ್ತಾ ಬಂದಿದೆ.

ಅದ್ಬುತ ರಚನೆಯ ಮೂಲಕ ನೋಡುಗರ ಕಣ್ಮನ ಸೆಳೆಯುವ ಆ ಕಟ್ಟಡವು ಜಗತ್ತಿನ ಅತ್ಯಂತ ಪುರಾತನ ಕಟ್ಟಡಗಳಲ್ಲಿ ಒಂದು.

ಎ.ಡಿ. 532, 537ರ ಸುಮಾರಿಗೆ ಇಂದಿನ ಇಸ್ತಾಂಬುಲ್ ನಲ್ಲಿ ನಿರ್ಮಾಣಗೊಂಡ ಈ ಸುಂದರ ಕಟ್ಟಡ ಇದ್ದ ಜಾಗದಲ್ಲಿ ಆ ಹಿಂದೆ ಕ್ರೈಸ್ತ ದೇವಾಲಯ ಒಂದಿತ್ತು ಎನ್ನಲಾಗಿದೆ. ರೋಮಾ ಸಾಮ್ರಾಜ್ಯದ ನಿತ್ಯ ಕಾದಾಟ, ಯುದ್ದಗಳಿಂದಾಗಿ ಆ ದೇವಾಲಯ ನೆಲಸಮಗೊಂಡಿತ್ತು ಎಂಬುವುದಾಗಿ ಇತಿಹಾದಲ್ಲಿ ದಾಖಲಾಗಿದೆ. ಆ ದೇವಾಲಯದ ಸವಿ ನೆನಪಿಗಾಗಿ ಬೈಸಾನ್ಟಿಯನ್ ಸಾಮ್ರಾಜ್ಯದ ರಾಜ ಒಂದನೇ ಜಸ್ಟೀನಿಯನ್ ಹಯಾ ಸೋಫಿಯಾವನ್ನು ನಿರ್ಮಿಸಿದ್ದರು. ರಾಜ ಮನೆತನದ ಎಲ್ಲ ಹಾಗು ಹೋಗುಗಳು ಇದೇ ಅಯ ಸೋಫಿಯಾದಲ್ಲಿ ನಡೆಯುತ್ತಿತ್ತು ಎಂದು ಇತಿಹಾಗಾರರು ಅಂದಾಜಿಸಿದ್ದಾರೆ. ಯುರೋಪ್ ಮತ್ತು ಏಷ್ಯಾದ ಖಂಡದ ಗಡಿ ಭಾಗವಾದ ಬೋಸ್ಪರಸ್ ತೀರದಲ್ಲಿ ತಲೆ ಎತ್ತಿ ನಿಂತಿದೆ ಹಯಾ ಸೋಫಿಯಾ.

ರೋಮಾ ಸಾಮ್ರಾಜ್ಯವನ್ನು ಸೋಲಿಸಿದ, ಸುಲ್ತಾನ್ ಮುಹಮ್ಮದ್ ಅಲ್ ಫತ್ತಾಹ್ ಅವರ ಸಾರಥ್ಯದ ಸೈನ್ಯವು ಇಸ್ತಾಂಬುಲ್ ಅನ್ನು ಉಸ್ಮಾನಿಯಾ ಖಿಲಾಫತ್‌ನ ವ್ಯಾಪ್ತಿಗೆ ಸೇರಿಸಿದ್ದರು. ಹಾಗೆ ಹಯಾ ಸೋಫಿಯಾವನ್ನು ಕೂಡ ತನ್ನ ಸುಪರ್ದಿಗೆ ಪಡೆಕೊಂಡು, 1453ರಲ್ಲಿ ಮಸೀದಿಯಾಗಿ ಘೋಷಿಸಿದ್ದರು. ಹಾಗೆ ಘೋಷಿಸುವ ಮೊದಲು ಕ್ರೈಸ್ತ ಪಾದಿರಿಗಳೊಂದಿಗೆ ಚರ್ಚಿಸಿ, ಅರ್ಧಭಾಗ ಮುಸ್ಲಿಮರ ನಮಾಝಿಗಾಗಿಯೂ ಉಳಿದ ಅರ್ಧ ಕ್ರೈಸ್ತರ ಪ್ರಾರ್ಥನೆಗಾಗಿಯೂ ಭಾಗಿಸಿ ನೀಡಿದ್ದರು. ಕ್ರೈಸ್ತ ಸಭೆಯ ಅಧಿಕಾರಕ್ಕೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದಾಗಿ ಸುಲ್ತಾನರು ಬರವಸೆ ನೀಡಿರುವುದಾಗಿ ಇತಿಹಾಸದಲ್ಲಿ ಉಲ್ಲೇಖವಿದೆ. ಆರ್ಥೊಡಾಕ್ಸ್ ಸಭೆಯು ಅದರ ರಾಜಧಾನಿಯನ್ನು ಬದಲಾಯಿಸುವವರೆಗೆ ಅಂದರೆ, ಎ.ಡಿ.1600ರ ವರೆಗೆ ಮುಸ್ಲಿಮರು ಮತ್ತು ಕ್ರೈಸ್ತರು ಅನ್ಯೋನ್ಯವಾಗಿ ಹಯಾ ಸೋಫಿಯಾದಲ್ಲಿ ಪ್ರಾರ್ಥಿಸುತ್ತಿದ್ದರು ಎಂಬುದಕ್ಕೆ ಪುರಾವೆ ಇದೆ. ಸಭೆಯು ಆಸ್ಥಾನವನ್ನು ಬದಲಾಯಿಸಿದ ಬಳಿಕ ಹಯಾ ಸೋಫಿಯಾ ಪೂರ್ಣ ಪ್ರಮಾಣದ ಮಸೀದಿಯಾಗಿ ಪರಿವರ್ತನೆಗೊಂಡವು.

ಒಂದನೇ ವಿಶ್ವಮಹಾ ಯುದ್ದದಲ್ಲಿ ಉಸ್ಮಾನಿಯಾ ಖಿಲಾಫತ್‌ಗೆ ಹಿನ್ನೆಡೆಯಾಗಿ ಅದು ಪತನಗೊಂಡಿತು. 1923ರಲ್ಲಿ ಅಧಿಕಾರಕ್ಕೆ ಬಂದ ಮುಸ್ತಫಾ ಅತಾ ತುರ್ಕ್ ಯುರೋಪ್ ಮತ್ತು ಬ್ರಿಟನ್‌ಗೆ ನೀಡಿದ ಮಾತಿನಂತೆ 1934ರಲ್ಲಿ ಹಯಾ ಸೋಫಿಯಾವನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಆದೇಶ ಹೊರಡಿಸಿದ್ದರು.

ಅತಾ ತುರ್ಕ್ ಅವರ ಈ ತೀರ್ಮಾನವನ್ನು ಬೆಂಬಲಿಸದ ಒಂದು ಸಮೂಹ ಅಂದೂ ಕೂಡ ತನ್ನ ಪ್ರತಿಭಟನೆಯ ಧ್ವನಿಯನ್ನು ಎತ್ತಿತು. 2005ರಲ್ಲಿ the association of foundations and service to historical artefacts and the environment ಎನ್ನುವ ಎನ್‌ಜಿಒ ಸಂಸ್ಥೆಯು ಕಾನೂನು ಹೋರಾಟಕ್ಕೆ ನಾಂದಿ ಹಾಡಿತು. 1934ರಲ್ಲಿ ಅಂದಿನ ಸರಕಾರ ಹೊರಡಿಸಿದ ಅನ್ಯಾಯದ ವಿಧಿಗೆ ತಡೆ ನೀಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಆದರೆ, 10th chamber of the council of state ಹಯಾ ಸೋಫಿಯಾ ಮ್ಯೂಸಿಯಂ ಆಗಿಯೇ ಮುಂದುವರಿಯಬೇಕು ಎಂದು ಪ್ರಕರಣವನ್ನು ಮುಚ್ಚಿಹಾಕಿತು. 2016ರಲ್ಲಿ ಅದೇ ಎನ್‌ಜಿಒ ತಂಡ ಮತ್ತೊಮ್ಮೆ ಹಯಾ ಸೋಫಿಯಾ ಪರ ನ್ಯಾಯಾಲಯದ ಮೆಟ್ಟಲು ಏರಿತು. ಅಂದು ಕೈಗೆತ್ತಿಕೊಂಡ ಅರ್ಜಿಗೆ ಮೂರು ವರ್ಷಗಳ ಬಳಿಕ ನ್ಯಾಯಾಲಯ ತೀರ್ಪನ್ನು ನೀಡಿತು. ಅತಾ ತುರ್ಕ್ ಅವರ ತೀರ್ಮಾನ ತಪ್ಪು ಎಂಬುದನ್ನು ಗ್ರಹಿಸಿಕೊಂಡ ನ್ಯಾಯಾಲಯವು, ಅದನ್ನು ಮಸೀದಿಯಾಗಿ ಪ್ರಖ್ಯಾಪಿಸಿತು. ಸುಲ್ತಾನ್ ಮುಹಮ್ಮದ್ ಅವರ ಖಾಸಗಿ ಸೊತ್ತಾದ ಹಯಾ ಸೋಫಿಯಾವನ್ನು ಅವರು ವಕ್ಫ್ ಮಾಡಿರುವ ಬಗೆಗಿನ ದಾಖಲೆಯ ಪ್ರಕಾರ ಅದು ಮಸೀದಿಯಾಗಿಯೇ ಉಳಿಯಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದವು.

ಅದೊಂದು ಮಸೀದಿ ಎನ್ನುವ ಕಾರಣಕ್ಕಾಗಿ ಈ ರಾಜಕೀಯ ಮೇಲಾಟ ನಡೆಯುತ್ತಿದೆ ಅಂದುಕೊಂಡಿದ್ದರೆ ಅದು ತಪ್ಪು. ಹಯಾ ಸೋಫಿಯಾ ಎನ್ನುವುದು ತುರ್ಕಿಗಳಿಗೆ ಅದೊಂದು ಕಟ್ಟಡದ ಬದಲಾಗಿ ಅದು ಅವರ ಅಭಿಮಾನದ ಸಂಕೇತ. ಇಸ್ತಾಂಬುಲ್ ಅದೆಷ್ಟೋ ಬದಲಾವಣೆಗಳಿಗೆ ಸಾಕ್ಷಿಯಾದ ಊರು. ಆರನೇ ಶತಮಾನದಲ್ಲಿ ಬಾಕಿ ಉಳಿದ ಶಿಲುಬೆ ಯುದ್ದದ ಪಳೆಯುಳಿಕೆಯನ್ನು ಯಾವುದೇ ಕುಂದುಕೊರತೆ ಉಂಟಾಗದಂತೆ ಉಳಿಸಿಕೊಂಡು ಬಂದಿದೆ. ಬದಲಾದ ರಾಜಕೀಯದೊಂದಿಗೆ ಹಯಾ ಸೋಫಿಯಾ ಕೂಡ ಬದಲಾಗುತ್ತಾ ಬಂದಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಅದೊಂದು ಮಸೀದಿಯಾಗಿ ಉಳಿಯಬೇಕು ಎಂಬುದು ಬಹುಸಂಖ್ಯಾರ ಬೇಡಿಕೆಯಾದರೆ, ಕೆಲವರು ಅದು ಮ್ಯೂಸಿಯಂ ಆಗಿಯೇ ಉಳಿಯಬೇಕು ಎಂದು ಬಯಸುತ್ತಾರೆ. ಅಂದು ಮಸೀದಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದಾಗ” ಅದು ತುರ್ಕಿಯ ಆಂತರಿಕ ವಿಷಯ” ಎನ್ನುತ್ತಾ ಬದಿಗೆ ಸರಿದವರಿಗೆ ಇಂದು ಉರ್ದುಗಾನ್ ಅವರು ಕೂಡ ಅದನ್ನೇ ಹೇಳುತ್ತಾ ಇದ್ದಾರೆ “ಹೌದು ಇದು ತುರ್ಕಿಯ ಆಂತರಿಕ ವಿಚಾರ ಇದರಲ್ಲಿ ನೀವು ತಲೆ ಹಾಕ ಬೇಡಿ….”. ಎಲ್ಲ‌ ಸಮುದಾಯದ ಜನರಿಗೂ ಅಭಿಮಾನದ ಸಂಕೇತವಾಗಿ ಹಯಾ ಸೋಫಿಯಾ ನೆಲೆ ನಿಲ್ಲಬೇಕು ಎಂಬುದು ತುರ್ಕಿಯ ಇಚ್ಛೆಯಾಗಿದೆ. ಈ ವಿಷಯದಿಂದಾಗಿ ಅದೆಂತಹ ರಾಜಕೀಯ ಮೇಲಾಟಗಳು ನಡೆಯಲಿವೆಯೋ ಅಲ್ಲಾಹನೇ ಬಲ್ಲ

LEAVE A REPLY

Please enter your comment!
Please enter your name here