ಲೇಖಕರು: ರುಖಿಯ್ಯಾ. ಏ. ರಝಾಕ್, ಉಡುಪಿ.

ಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರತೀ ಪಕ್ಷವೂ ದೇಶದ ಅಧಿಕಾರ ತನಗೊಲಿಯಬೇಕು ಎಂದು ಬಯಸುತ್ತಿದೆ. ಕಾಂಗ್ರೆಸ್, ಜನತಾದಳಗಳು ತಾವು ಈಗಾಗಲೇ ಜನಮಾನಸದಿಂದ ಕಳೆದುಕೊಂಡಿರುವ ವಿಶ್ವಾಸವನ್ನು ವಾಪಾಸು ಗಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೆ, ಸದ್ಯ ಅಧಿಕಾರದಲ್ಲಿರುವ ಭಾಜಪ, ತನ್ನ (ಅಂದರೆ, ತನ್ನ ಮಾತೃ ಸಂಘಟನೆಯಾದ ಆರೆಸ್ಸೆಸ್ ನ) ಅಪೂರ್ಣವಾಗಿ ಉಳಿದು ಹೋಗಿರುವ ಅಜೆಂಡಾಗಳನ್ನು ಪೂರ್ಣಗೊಳಿಸಲು ಮತ್ತೆ ತಾನೇ ಅಧಿಕಾರಕ್ಕೇರಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿದೆ.

ನಲವತ್ತೇಳರ ಸ್ವಾತಂತ್ರ್ಯದ ಬಳಿಕ ಭಾರತೀಯ ಪ್ರಜೆಗಳಿಗೆ ಗಾಂಧೀಜಿಯವರೊಂದಿಗೆ ಅಥವಾ ಅವರ ಸಿದ್ಧಾಂತದೊಂದಿಗೆಯೋ ಇದ್ದ ಭಾವನಾತ್ಮಕವಾದ ಸಂಬಂಧದಿಂದಾಗಿ, ಜನತೆ ಕಾಂಗ್ರೆಸ್ ಕಡೆಗೇ ಹೆಚ್ಚು ಒಲವು ತೋರಿತ್ತು. ಈ ನಡುವೆ ಅಂದರೆ 1920-25 ರ ಆಸುಪಾಸಿನಲ್ಲಿ ಹುಟ್ಟಿದ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೆಲ್ಲಮೆಲ್ಲನೇ ಬೆಳೆಯುತ್ತಿತ್ತು. ಸಮಯ ಸಂದರ್ಭ ದೊರೆತಾಗಲೆಲ್ಲಾ ತನ್ನ ವಿಷಪೂರಿತ ಚಿಂತನೆಗಳನ್ನು ಜನರಲ್ಲಿ ಬಿತ್ತುವ ಪ್ರಯತ್ನದಲ್ಲಿತ್ತು. ಅದರ ಬುನಾದಿಯೇ “ಹಿಂದುತ್ವ” ಎಂಬ ಹೆಸರಿನಲ್ಲಿ “ಮುಸ್ಲಿಮ್ ದ್ವೇಷ” ವನ್ನು ಸಮಾಜದಲ್ಲಿ ಪಸರಿಸುವುದು. ಎಲ್ಲೆಲ್ಲಿ ಅವಕಾಶ ದೊರೆಯುತ್ತದೋ, ಅಲ್ಲಲ್ಲಿ ಜನಮಾನಸಕ್ಕೆ ಅಲ್ಪ-ಸ್ವಲ್ಪ ವಿಷವನ್ನು ಈ ಸುದೀರ್ಘ ವರುಷಗಳಲ್ಲಿ ಉಣಿಸುತ್ತಾ ಬಂದಿದೆ.

ಬ್ರಿಟಿಷ್ ಸಾಮ್ರಾಜ್ಯಕ್ಕೆ ಭಾರತವನ್ನು ಒಡೆಯಲು ಅಸಾಧ್ಯವೆಂದು ಅರಿವಾದಾಗ, ಅದು ಅಖಂಡ ಭಾರತದ ಜನತೆಯನ್ನು “ಹಿಂದೂ-ಮುಸ್ಲಿಮ್” ಎಂಬ “ಒಡೆದು ಆಳುವ” ನೀತಿಯ ನೀಚತನವನ್ನು ತೋರಿತ್ತು, ಅದೇ ಇತಿಹಾಸವನ್ನು ಗಟ್ಟಿಯಾಗಿ ಹಿಡಿದುಕೊಂಡ ಆರೆಸ್ಸೆಸ್ ಅದನ್ನೇ ತನ್ನ ಅಜೆಂಡಾವನ್ನಾಗಿಸಿತು. ಅದರ ಪರಿಣಾಮವೇ, 92 ರ ಬಾಬರಿ ಮಸೀದಿ ಧ್ವಂಸ, 93 ರ ಮುಂಬೈ ಗಲಭೆ, ಮತ್ತು 2002 ರ ಗುಜರಾತ್ ಹತ್ಯಾಕಾಂಡ… ಈ ಹತ್ಯಾಕಾಂಡಗಳು ಅವರ ಅಜೆಂಡಾದ ಭಾಗವಾಗಿ ನಡೆದವು, ಇವುಗಳು ಭಾರತ ಕಂಡ ದೊಡ್ಡ ಗಲಭೆ-ಹತ್ಯಾಕಾಂಡಗಳು ಎಂದು ದೇಶದ ಜನತೆ ಭಾವಿಸಿದ್ದರು. ಆದರೆ, ಇವುಗಳು ಕೇವಲ ಪ್ರಾಂಭಿಕ ಹಂತವಾಗಿದ್ದವು, ಯಾವುದು ಅಜೆಂಡಾವಾಗಿತ್ತೋ, ಅದು ಈ ಹತ್ಯಾಕಾಂಡಗಳನ್ನು ಹಿಂಬಾಲಿಸುತ್ತಾ ಬರುತ್ತಲಿದ್ದವು. ಯಾವುದೇ ಆತುರ ತೋರದೇ ಸಂಘವು ಬಹಳವೇ ಸಾವಕಾಶವಾಗಿ ಇಲ್ಲಿಯವರೆಗೆ ಹೆಜ್ಜೆಯನ್ನಿಡುತ್ತಾ ಬಂದಿದೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದಾದ್ಯಂತ ಟೆಲಿವಿಷನ್ ಚಾನೆಲ್ ಗಳಲ್ಲಿ “ಅಚ್ಛೇದಿನ್…. ಆಯೇಂಗೆ..” ಎಂಬ ಸ್ಲೋಗನ್, ವಿಜ್ಞಾಪನೆಗಳು ಮೊಳಗುತ್ತಿದ್ದವು. ಬಿಜೆಪಿಯು ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ, ನರೇಂದ್ರ ದಾಮೋದರ್ ಮೋದಿಯವರ ಹೆಸರನ್ನು ಘೋಷಿಸಿತು. ಅಲ್ಲಿಯವರೆಗೂ ತೆರೆಮರೆಯಲ್ಲಿ ಕೇಳಿಬರುತ್ತಿದ್ದ ‘ಗುಜರಾತ್ ಮಾದರಿ’ ಅಂದಿನಿಂದ ಮುನ್ನೆಲೆಗೆ ಬರತೊಡಗಿತು. ಕೋಮುದ್ವೇಷದ ಪಿತ್ತ ನೆತ್ತಿಗೇರಿಸಿಕೊಂಡು ಅಂಧರಾಗಿದ್ದವರಿಗೆಲ್ಲಾ ಮೋದಿ ಒಬ್ಬ ಭಗವಂತನಾಗಿ, ಕಲಿಯುಗದ ರಾಮನ ಅವತಾರನಾಗಿ ಕಾಣತೊಡಗಿದರು. ‘ಯಾಕಾಗಿ’ ಎಂಬ ಪ್ರಶ್ನೆಗೆ ವಿವರಣೆ ಬೇಕಿಲ್ಲ.

ಈ “ಗುಜರಾತ್” ಮಾದರಿಯ ಹಸಿಹಸಿ ಝಲಕ್ ಒಂದನ್ನು ನಾವು ‘ಅಮೃತ ಮಹೋತ್ಸವ’ ದಂದು ನೋಡಿದೆವು. ಗುಜರಾತ್ ನಲ್ಲಿ ಮೋದಿ ಮಾದರಿಯನ್ನು ಕಂಡ ಜಾಗತಿಕ ಸಮುದಾಯವು, ಇದು, “ಹಿಟ್ಲರನ ಮಾದರಿ” ಎಂದು ಜರೆಯಿತು. ಈ ಮಾದರಿಯನ್ನು ನಮ್ಮ ಕರ್ನಾಟಕದಲ್ಲಿ ಅಪ್ಲೈ ಮಾಡಬೇಕು ಎಂದು ಆರೆಸ್ಸೆಸ್ ಬೆಂಬಲಿತ ರಾಜಕಾರಣಿಗಳು ಯತ್ನಿಸಿದರು. ಆದರೆ ಇಲ್ಲಿಯ
ಬುದ್ಧಿವಂತ ಜನತೆ ಅದಕ್ಕೆ ಮಣೆಹಾಕಲಿಲ್ಲ. ಇಲ್ಲಿ ಆ ಬೆಂಕಿಯು ಕಿಡಿಯಾಗಿರುವಾಗಲೇ ನಂದಿಸಲ್ಪಟ್ಟಿತು.

ಇನ್ನು ಹೇಳಬೇಕೆಂದರೆ, 2014ರಲ್ಲಿ ಮೋದಿ ಪ್ರಧಾನಿಯಾದುದರ ಸಂಪೂರ್ಣ ಕ್ರೆಡಿಟ್ ಆ ಸಂದರ್ಭದ ಕಾಂಗ್ರೆಸ್ ಗೇ ಸಲ್ಲಬೇಕು. ನಿರಂತರ ಭ್ರಷ್ಟಾಚಾರ, ಆಂತರಿಕ ಕಲಹ-ಕಚ್ಚಾಟ ಗಳಿಂದ ದೇಶಕ್ಕೆ ಬಹಳವೇ ಕೆಟ್ಟ ಕಾಲವನ್ನು ಕಾಂಗ್ರೆಸ್ ತಂದೊಡ್ಡಿತ್ತು. ಆ ಸಂದರ್ಭದ ಸದಾವಕಾಶವನ್ನು ಪಡೆದುಕೊಂಡ ಮೋದಿ‌ ಬಳಗ, ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗುವ ರೀತಿಯಲ್ಲಿ ಅಧಿಕಾರ ಗಿಟ್ಟಿಸಿಕೊಂಡಿತು.
ಅಲ್ಲಿಂದ ಶುರುವಾಯಿತು, ಭಾರತಕ್ಕೆ ದುರ್ದೆಶೆ, ದೇಶದ ಅಭಿವೃದ್ಧಿ, ಯುವ ಜನತೆಯ
ಅಭಿವೃದ್ಧಿ, ಆಂತರಿಕ ಕೈಗಾರಿಕೆಗಳ ಅಭಿವೃದ್ಧಿಯ ಬದಲಾಗಿ ಮೋದಿ ಮುಖ ಮಾಡಿದ್ದು, ಖಾಸಗೀಕರಣದ ಕಡೆಗೆ. ವಿದ್ಯೆ, ಉದ್ಯೋಗ, ಅಭಿವೃದ್ಧಿಯಾದಿಯಾಗಿ, ದೇಶದ ಅರ್ಥ ವ್ಯವಸ್ಥೆಯನ್ನು ದೊಡ್ಡ ದೊಡ್ಡ ಬಂಡವಾಳಶಾಹಿಗಳ ಕೈಗೆ ದೇಶವನ್ನು ಅಡವಿಟ್ಟು ಆರೆಸ್ಸೆಸ್ ನ ಆದೇಶದಂತೆ ದೇಶ ನಡೆಸತೊಡಗಿದರು.. “ರೂಪಾಯಿ ಅಪಮೌಲ್ಯ, ಬೆಲೆಯೇರಿಕೆ, ಭೃಷ್ಟಾಚಾರ, ಕೌಟುಂಬಿಕ ರಾಜಕಾರಣ..” ಇಂತಹ ವಿಷಯಗಳಿಂದ ಕಾಂಗ್ರೆಸ್ ಅನ್ನು ಕಿತ್ತೊಗೆದು, ಬಿಜೆಪಿಯು ದೇಶದಲ್ಲಿ ಶಾಂತಿ ಸ್ಥಾಪಿಸಲಿದೆ…” ಎಂಬ ಭ್ರಮೆಯನ್ನು ಜನರಲ್ಲಿ ಹಬ್ಬಿಸಿತು.

ಜನರು ಮೋದಿಯ “ಭಾಯಿಯೋಂ…. ಬೆಹೆನೋಂ… ಮಿತ್ರೋಂ….” ಎಂಬ ಕರೆಗೆ ಓಗೊಟ್ಟು ಅಂಧಾಭಿಮಾನಿಗಳಂತೆ ಸಮೂಹಸನ್ನಿಗೆ ಒಳಗಾಗಿ ಮೋದಿಯನ್ನು ಜಪಿಸತೊಡಗಿದರು.

ಕೆಲವು ಜನರು ಎಷ್ಟು ಮೋದಿ ಭಕ್ತರಾದರೆಂದರೆ, 500₹ ಮತ್ತು 1000₹ ನೋಟು ಬದಲಾವಣೆಯಾದಾಗ ಗಂಟೆಗಟ್ಟಲೆ ಕಾಲ ಎಟಿಎಮ್ ಗಳ ಮುಂದೆ ಸರತಿ ಸಾಲಿನಲ್ಲಿ ನಿಂತದ್ದನ್ನು ದೇಶಭಕ್ತಿ ಎಂದರು. ಪೆಟ್ರೋಲ್ ದರ ನೂರು ದಾಟಿದಾಗ ಪ್ರತಿಭಟಿಸಬೇಕಿದ್ದವರು, ಪರವಾಗಿಲ್ಲ, ಲೀಟರ್ ಗೆ ಇನ್ನೂರಾದರೂ ಚಕಾರವೆತ್ತದೇ ಪೆಟ್ರೋಲ್ ಹಾಕಿಸುತ್ತೇವೆಂದು ಭಕ್ತಿ ಮೆರೆದರು!! ಅದೆಲ್ಲಕ್ಕಿಂತಲೂ ಹೆಚ್ಚಾಗಿ ಕೊರೋನಾ ಬಾಧಿತರಾದಾಗ ಆಕ್ಸೀಜನ್, ಔಷದಿ ಕೊರತೆಯಿಂದ ದೇಶದಲ್ಲಿ ಹಾದಿ-ಬೀದಿಯಲ್ಲಿ ಜನ ಸಾಯಲಾರಂಭಿಸಿದಾಗ, ಗಂಗೆಯಲ್ಲಿ ಶವಗಳು ತೇಲುತ್ತಿದ್ದಾಗ, ಒಬ್ಬ ಪ್ರಬುದ್ಧ ನಾಯಕನಂತೆ ಔಷದಿಗಳನ್ನು ಜನರ ಕೈಗೆಟುಕುವಂತೆ ಉಚಿತವಾಗಿ ಒದಗಿಸಬೇಕಿದ್ದ ಮೋದಿಯವರು ತೀರಾ ಅಜ್ಞಾನಿಯಂತೆ, ತಟ್ಟೆ ಬಾರಿಸಲು, ದೀಪ ಬೆಳಗಿಸಲು, ಚಪ್ಪಾಳೆ ಹೊಡಿಯಲು ಹೇಳಿದಾಗಲೂ ಈ ಅಂಧರು ಶುದ್ಧ ಅವಿವೇಕಿಗಳಂತೆ ಸಿಕ್ಕಿದ್ದನ್ನೆಲ್ಲಾ ಬಾರಿಸಿ ಮೂರ್ಖತನದ ಎಲ್ಲೆ ಮೀರಿದರು…

ದೇಶದ ಸಮಸ್ತ ನಾಗರಿಕರ ಪ್ರಧಾನಿಯಾಗಬೇಕಿದ್ದ ಮೋದಿಯವರು, ಮೇಲ್ವರ್ಗದ, ಶ್ರೀಮಂತರ ಮತ್ತು ಆರೆಸ್ಸೆಸ್ ಮತ್ತದರ ಸಹ ಸಂಘ-ಸಂಸ್ಥೆಗಳ ಮನಮೆಚ್ಚಿದ ನಾಯಕರಾದರು ಮತ್ತು ರೈತರು, ಬಡವರು, ಯುವಕರನ್ನು, ಸಾಮಾನ್ಯ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸಾಮಾನ್ಯರ ಮಟ್ಟಿಗೆ ಶಾಪವಾಗಿ ಮಾರ್ಪಟ್ಟರು.

ಆಡಳಿತ ಪಕ್ಷದ ಕುಟಿಲ ನೀತಿಯನ್ನು ಜನ ಅರಿಯತೊಡಗಿದ ಕೂಡಲೇ, ಏನಾದರೊಂದು ದುರ್ಘಟನೆ ನಡೆಯುತ್ತದೆ. ಅದು ಎನ್, ಆರ್, ಸಿ ಯಂತಹ ಪ್ರಜಾವಿರೋಧಿ ಕರಾಳ ಕಾನೂನುಗಳಾಗಿರಬಹುದು, ಕೋಮುಗಲಭೆ ಯಾಗಿರಬಹುದು, ಅಥವಾ ಪುಲ್ವಾಮಾ ದಾಳಿಯಂತಹ ಬಹಳ ದೊಡ್ಡ ವಿಧ್ವಂಸಕ ಕೃತ್ಯವಾಗಿರಬಹುದು, ಇವುಗಳೆಲ್ಲವೂ ಯಾವುದಾದರೂ ಒಂದು ರೀತಿಯಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟಿವೆ. ಹಾಗಾಗಿ ಎರಡನೇ ಅವಧಿಗೂ ಅಂದರೆ 2019ರಲ್ಲಿ ಬಿಜೆಪಿಯೇ ಗದ್ದುಗೆಯೇರಿತು! ಈ ಬಾರಿಯ ಚುನಾವಣೆಯ ಫಲಿತಾಂಶದ ಕುರಿತು ಜನರಿಗೆ ಸಂಶಯವೆದ್ದಿತು.. ಏಕೆಂದರೆ ಇದು ಜನರ “ಜನಾದೇಶವಾಗಿರಲ್ಲ!!”

ಅದೇನೇ ಇರಲಿ, ಎರಡನೇ ಅವಧಿಯಲ್ಲಿ ಬಿಜೆಪಿಯ ಅತ್ಯಂತ ದೊಡ್ಡ ಸಾಧನೆಯೆಂದರೆ, ತನ್ನ ತೀವ್ರಗಾಮಿತನವನ್ನು ಮತ್ತಷ್ಟು ತೀವ್ರವಾಗಿಸಿದ್ದು. ಇದರ ಏಕಮಾತ್ರ ಉದ್ದೇಶವು ತನ್ನ ಬಂಡವಾಳಶಾಹಿ ಮಿತ್ರರ ಓಲೈಕೆ ಮತ್ತು ತನ್ನ ತೀವ್ರತರದ ಅಧಿಕಾರದಾಹದ ಈಡೇರಿಕೆ ಮಾತ್ರವಾಗಿದೆ. ಮೋದಿಯವರು ತನ್ನ ಆಪ್ತ ಮಿತ್ರರ ಸಾವಿರಾರು ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಿದ್ದಲ್ಲದೇ, ದೇಶದ, ಮತ್ತಷ್ಟು ಆಸ್ತಿಗಳನ್ನು ಅವರಿಗೆ ಹಸ್ತಾಂತರಿಸಿ ದೇಶವನ್ನು ದಿವಾಳಿಯೆಬ್ಬಿಸಿತು. ಮತ್ತು ಈ ಕುರಿತು ಜನರು ಜಾಗೃತರಾಗಬಾರದು ಎಂದು ಕಟ್ಟರ್ ಹಿಂದೂ ಬಲಪಂಥೀಯರ ಮುಂದೆ ಹಿಂದುತ್ವ ಮತ್ತು ದೇವರುಗಳ ಹೆಸರನ್ನು ಹೇಳುತ್ತಾ ಅವರನ್ನೂ ಅದರಲ್ಲೇ ಮುಳುಗಿಸಿತು.

ಅದರ ಮುಂದುವರೆದ ಭಾಗವಾಗಿ ತನ್ನ ತೀವ್ರಗಾಮಿ ಹಿಂಬಾಲಕರ, ಕಾರ್ಯಕರ್ತರ, ಸ್ವಯಂ ಸೇವಕರ “ಎನರ್ಜಿ”ಯ ಕಾವು ಆರದಂತೆ ನೋಡಿಕೊಳ್ಳಲು, ಅಲ್ಲಲ್ಲಿ ತನ್ನ ತೀವ್ರಗಾಮಿ ವಕ್ತಾರರಿಗೆ ಕೀಲಿ ಹಾಕುತ್ತಿರುತ್ತಾರೆ. (ಏಕೆಂದರೆ ಬಹಳ ವರುಷಗಳಿಂದ ಮುಸಲ್ಮಾನನೇ ಹಿಂದೂಗಳ ಪ್ರತ್ಯಕ್ಷ ಶತ್ರು ಎಂದು ಪದೇ ಪದೇ ಸುಳ್ಳು ಹೇಳಿ ಅವರನ್ನು ನಿಜವಾಗಿಯೂ ಪರಸ್ಪರ ಶತ್ರುಗಳಾಗಿಸಿದೆ) ಅದು, ಘರ್ ವಾಪಸಿ, ಲವ್ ಜಿಹಾದ್ ರೂಪದಲ್ಲಿ, ಯೋಗಿಯ ಬುಲ್ಡೋಝರ್ ರೂಪದಲ್ಲಿ, ರೈತರನ್ನು ಮಟ್ಟಹಾಕುವ ರೂಪದಲ್ಲಿ, ಕರ್ನಾಟಕದ ಹಿಜಾಬ್, ಹಲಾಲ್, ಆಝಾನ್, ವಿರುದ್ಧದ ನಿಲುವುಗಳ ರೂಪದಲ್ಲಿ, ಈಗ ಸದ್ಯಕ್ಕೆ ಹೊಸ ಟ್ರೆಂಡಿಂಗ್ ಆಗಿ ಮುಸಲ್ಮಾನರ ಎದೆಗೆ ಕಿಚ್ಚು ಹಚ್ಚುವ ಹೊಸ ತಂತ್ರಕ್ಕೆ ಶುರುವಿಟ್ಟುಕೊಂಡಿದೆ, ಅದೇನೆಂದರೆ, ಮುಸ್ಲಿಮರ ಸರ್ವೋಚ್ಛ ನಾಯಕರಾದ ಮುಹಮ್ಮದ್(ಸ.ಅ) ರ ವ್ಯಕ್ತಿತ್ವದ ಮೇಲೆ ಮಸಿ ಬಳಿಯುವಂತಹ ಹೇಳಿಕೆಗಳನ್ನು ನೀಡಿ ಉದ್ವಿಗ್ನತೆ ಸೃಷ್ಟಿಸುವುದು. ಈ‌ ರೀತಿಯ ಹೇಳಿಕೆಗಳಿಂದಾಗುವ ಗಲಭೆಗಳಿಂದ ಪ್ರವಾದಿ ಮುಹಮ್ಮದ್(ಸ.ಅ) ರ ಅತ್ಯುನ್ನತ ಪಾವನ ವ್ಯಕ್ತಿತ್ವಕ್ಕೆ ಯಾವುದೇ ಚ್ಯುತಿ ಬಾರದು. ಅದು ವಾಸ್ತವ. ಆದರೂ ಹಿಂದುತ್ವದ ಸ್ವಯಂ ಘೋಷಿತ ಗುತ್ತಿಗೆದಾರರಿಗೆ, ಮುಸಲ್ಮಾನರು, ಮುಹಮ್ಮದ್ ಪೈಗಂಬರರನ್ನು, ಅವರ ಪ್ರಾಣ, ಸಂತತಿ, ಆಸ್ತಿಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ ಎಂಬುವುದರ ಅರಿವಿದೆ. ಹಾಗಾಗಿ ಶಾಂತಿಪ್ರಿಯ ಸಮುದಾಯವನ್ನು ಉದ್ರೇಕಿಸಲು ಮುಸಲ್ಮಾನರ “ಸೂಕ್ಷ್ಮನರ” ಕ್ಕೆ ಕೈಹಾಕುವ ಕೀಳುಮಟ್ಟದ ಪ್ರಯತ್ನ ನಡೆಸುತ್ತಾ ತುಚ್ಛ ರಾಜಕಾರಣದ ಆಟವಾಡುತ್ತಿದೆ. ಮತ್ತು ದುರದೃಷ್ಟವೆಂದರೆ, ಇಂತಹ ಸಂದರ್ಭಗಳಲ್ಲಿ ಮತ್ತೆ ಮತ್ತೆ ನಡೆಯುವ ಗಲಭೆಗಳು, “ಹಿಂದೂ-ಮುಸ್ಲಿಂ” ಅಥವಾ “ಕೋಮುಗಲಭೆ” ಗಳಲ್ಲ, ಬದಲಾಗಿ “ರಾಜಕೀಯ ಗಲಭೆಗಳು” ಎಂಬುವುದನ್ನು ಅರ್ಥಮಾಡಿಕೊಳ್ಳದೇ, ಪ್ರಜೆಗಳು ಅಂಧರೂ ಕಿವುಡರೂ ಆಗಿ ಬೀದಿಗಿಳಿದು ತಮ್ಮದೇ ನೆರೆಯವರ, ಬಂಧುಗಳ, ತಮ್ಮದೇ ಜನರ ಆಸ್ತಿ-ಪಾಸ್ತಿ-ಪ್ರಾಣಗಳನ್ನು ನಷ್ಟಮಾಡಿಕೊಂಡು, ರಾಜಕಾರಣಿಗಳಿಗೆ ಅವರು ಅಪೇಕ್ಷಿಸುವಂತಹ ಲಾಭ ಕೊಡಿಸುತ್ತಾರೆ.

2024 ರ ಲೋಕಸಭಾ ಚುನಾವಣೆಯ ಸಂದರ್ಭವಿದು, ಆದರೆ ದೇಶದ ಹಿರಿಯ ಪಕ್ಷವಾದ ಕಾಂಗ್ರೆಸ್ ಮತ್ತೆ ತನ್ನ ಪಕ್ಷದ ಸದಸ್ಯರನ್ನು ಕಳೆದುಕೊಳ್ಳುತ್ತಲೇ ಇದೆ. ಅಧಿಕಾರಕ್ಕಾಗಿಯೋ, ಬಂಡಾಯವೆದ್ದೋ, ಇನ್ನೇನೇನೋ ಕಾರಣಗಳಿಂದಾಗಿಯೋ ಪಕ್ಷದ ಹಿರಿತಲೆಗಳೆಲ್ಲಾ ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯು ಕಾಂಗ್ರೆಸ್ ಪಾಲಿಗೆ ಕಠಿಣ ಕಾಲಘಟ್ಟವಾಗಿದೆ. ಬಿಜೆಪಿಗೆಯಾದರೋ, “ಹಿಂದುತ್ವ” ಎಂಬ ಟ್ರಂಪ್ ಕಾರ್ಡ್ ಇದೆ. ಬಾಕಿ ಅಳಿದುಳಿದ ಪಕ್ಷಗಳು ಅಷ್ಟಕ್ಕಷ್ಟೇ ಎಂಬಂತೆ ಇದೆ. ಈ ಬಾರಿ ದೇಶದ ಜನತೆಯ ಮನದಲ್ಲಿ “ಅರಿವು” ಎಂಬ ಚಮತ್ಕಾರವೇನಾದರೂ ಉಂಟಾದರೆ, ಅದು ಮಾತ್ರವೇ ಭಾರತವನ್ನು “ಕೋಮುರೋಗ ಹಿಡಿತ” ದಿಂದ ಪಾರುಮಾಡೀತು ಅಷ್ಟೇ….

LEAVE A REPLY

Please enter your comment!
Please enter your name here