• ರವಿ ನವಲಹಳ್ಳಿ

ವಿಶೇಷ ಲೇಖನ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಾ ಮೇಧಾವಿ ಎಂತಲೂ, ಮಹಾನ್ ರಾಷ್ಟ್ರೀಯ ನಾಯಕರೆಂತಲೂ, ನಮ್ಮೆಲ್ಲರ ಏಳಿಗೆಗೆ ತಮ್ಮ ಜೀವನವನ್ನೇ ತ್ಯಾಗ ಮಾಡಿದರೆಂತಲು ನಿಧಾನವಾಗಿಯಾದರು ನಮ್ಮೆಲ್ಲರಿಗೂ ಗೊತ್ತಾಗುತ್ತದೆ. ಅವರ ಜೀವನದ ಎಲ್ಲಾ ಸಾಹಸಗಾಥೆಯನ್ನು ಭಾರತದ ಮೂಲನಿವಾಸಿ ಬಹುಜನರು ಈಗೀಗ ಒದತೊಡಗಿದ್ದಾರೆ. ಬಾಬಾಸಾಹೇಬರ ಪ್ರವಾದಿ ಮಾತುಗಳು ನಮ್ಮ ಅಂತರಂಗದ ಕಣ್ಣುಗಳನ್ನು ತೆರೆಸುತ್ತವೆ. ಇಲ್ಲಿ ನಾವು ಮುಖ್ಯವಾಗಿ ಚರ್ಚಿಸಬೇಕಾದ ಪ್ರಶ್ನೆಯೆಂದರೆ ಡಾ.ಅಂಬೇಡ್ಕರ್ ಅವರು ಈ ಮಟ್ಟದ ರಾಷ್ಟ್ರ ಮೇಧಾವಿಯಾಗಿ ರಾಷ್ಟ್ರ ನಾಯಲರಾಗುವುದರ ಹಿಂದೆ ಯಾರ್ಯಾರು? ಸಹಾಯವಿದೆ 2000 ವರ್ಷಗಳಿಂದ ಮೂಕರಾಗಿದ್ದ ಜನಾಂಗದಿಂದ ಎದ್ದು ಬಂದ ಬಾಬಾ ಸಾಹೇಬರು ಮನುವಾದಿ ಅವ್ಯವಸ್ಥೆಯ ವಿರುದ್ಧ ಪ್ರಬಲ ಸಮರ ಕೊಡಲು ಶಕ್ತಿ ಕೊಟ್ಟವರು ಯಾರು..? ಈ ಪ್ರಶ್ನೆಗಳ ಬಗ್ಗೆ ನಾವು ಅತ್ಯಂತ ಗಂಭೀರವಾಗಿ ಚಿಂತಿಸಬೇಕಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರ ಶಾಹು ಮಹಾರಾಜ್ ಕೊಲ್ಲಾಪುರ ಸಂಸ್ಥಾನದಲ್ಲಿ ಬ್ರಾಹ್ಮಣೇತರರಿಗೆ ಶೇಕಡ 50ರಷ್ಟು ಮೀಸಲಾತಿಯನ್ನು 1902, ಜುಲೈ 26ರಂದು ನೀಡಿದಾಗ ಬಾಬಾಸಾಹೇಬರಿಗೆ 12 ವರ್ಷವಾಗಿತ್ತು. ಸ್ವಪ್ರತಿಭೆಯಿಂದ ಕಲಿತು ಮೇಲೆ ಬಂದ ಬಾಬಾಸಾಹೇಬರು ಮಹಾರಾಜರ ಗಮನ ಸೆಳೆದದ್ದು 1916ರಲ್ಲಿ. 1916ರಲ್ಲಿ. ಬಾಬಾಸಾಹೇಬರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಮಾನವಶಾಸ್ತ್ರ ಕುರಿತು ವಿಚಾರ ಸಂಕಿರಣವೊಂದರಲ್ಲಿ “ಭಾರತದಲ್ಲಿ ಜಾತಿಗಳು” ಕುರಿತಂತೆ ಪ್ರಬಂಧ ಮಂಡಿಸಿ “ಜಾತಿ ಸಮಸ್ಯೆ ಒಂದು ರಾಷ್ಟ್ರೀಯ ಸಮಸ್ಯೆ” ಎಂದು ವಾದಿಸಿದ್ದರು. ಅವರು ಮಂಡಿಸಿದ ಪ್ರಬಂಧ, ಅವರ ಮಾತಿನ ಶೈಲಿ ಎಷ್ಟೊಂದು ವಿದ್ವತ್ ಪೂರ್ಣವಾಗಿತ್ತೆಂದರೆ, ಆ ವಿಶ್ವವಿದ್ಯಾಲಯದ ಮೇಧಾವಿಗಳೆಲ್ಲ ತಲೆದೂಗಿ ಬಹಳ ಪ್ರಶಂಸೆ ಮಾಡಿದರು. ಈ ವಿಚಾರವು ಶಾಹು ಮಹಾರಾಜರಿಗೆ ಗೊತ್ತಾಗಿ ಬಾಬಾಸಾಹೇಬರನ್ನು ಪರಿಚಯ ಮಾಡಿಕೊಳ್ಳಲು ಹಂಬಲಿಸಿದರು. ಬಾಬಾಸಾಹೇಬರನ್ನು ಶಾಹು ಮಹಾರಾಜರ ಅನುಯಾಯಿಯಾದ, ಚಮ್ಮಾರ ಜಾತಿಗೆ ಸೇರಿದ ‘ದತ್ತೋಬ ಪವಾರ’ ಎಂಬುವವರು ಅಧಿಕೃತವಾಗಿ ಶಾಹು ಮಹಾರಾಜರಿಗೆ ಪರಿಚಯಿಸಿದರು.

“ಅಸ್ಪೃಶ್ಯರು ದೂರದೃಷ್ಟಿಯುಳ್ಳ ತಮ್ಮ ಸ್ವಂತ ಜಾತಿಯ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು. ಮೇಲ್ಜಾತಿ ಹಿಂದೂಗಳ ನಾಯಕತ್ವವನ್ನು ಹೊಂಡಬಾರದೆಂದು” ಪ್ರತಿಪಾದಿಸುತ್ತಿದ್ದ ಶಾಹು ಮಹಾರಾಜರು ಮಹಾರ್ ಜಾತಿಯ ಮೊದಲ ಪದವೀಧರರಾದ ಅಂಬೇಡ್ಕರ್ ರನ್ನು ಅಸ್ಪೃಶ್ಯರ ನಾಯಕರೆಂದು ಗುರುತಿಸಿ 1918ರಲ್ಲಿ ಮಾಂಟೆಗೋ ಸುಧಾರಬೇಗಳ ಪೂರ್ವಾಭಾವಿ ಮಾತುಕತೆಯನ್ನು ಅಂಬೇಡ್ಕರ್ ರ ಜೊತೆಗೆ ನೆಡೆಸಿದರು. ಸೌತ್ ಬರೋ ಆಯೋಗದ ಮುಂದೆ ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾಯಕರನ್ನು ಕೇಳಿದ ಡಾ. ಅಂಬೇಡ್ಕರರಿಗೆ ಬೆಂಬಲ ಸೂಚಿಸಿದರು. ಅಷ್ಟೇ ಅಲ್ಲದೆ ಮತ್ತು ವಿಶೇಷವಾಗಿ ಅಸ್ಪೃಶ್ಯರಿಗೆ ರಾಜಕೀಯವಾಗಿ ಜಾತಿ ವಾರು ಪ್ರಾತಿನಿಧ್ಯವನ್ನು ನೀಡಬೇಕೆಂದು” ಆಗ್ರಹಿಸಿದರು.
ಛತ್ರಪತಿ ಶಾಹು ಮಹಾರಾಜರು ಡಾ.ಅಂಬೇಡ್ಕರ್ ಅವರು “ಮುಖನಾಯಕ” ಎಂಬ ಪತ್ರಿಕೆಯನ್ನು ಹೊರತರಲು ಪ್ರತಿ ತಿಂಗಳು rs.2,500 ಧನಸಹಾಯ ಮಾಡಿದರು. ಅಷ್ಟೇ ಅಲ್ಲದೆ, ಪತ್ರಿಕೆಗಳಲ್ಲಿನ ವಿಚಾರಗಳನ್ನು ಹಳ್ಳಿಗಳ ಅನಕ್ಷರಸ್ಥ ಜನರಿಗೆ ಓದಿ ಹೇಳಲು ಓದು ಬರಹಬಲ್ಲ ಹುಡುಗರನ್ನು ಸಹ ನೇಮಿಸಿದರು. ಅಂಬೇಡ್ಕರರ ಈ “ಮುಖನಾಯಕ” ಪತ್ರಿಕೆಯು ಅಸ್ಪೃಶ್ಯರ ಮೊದಲ ಪತ್ರಿಕೆಯಾಗಿದೆ.
ಕೊಲ್ಲಾಪುರ ರಾಜ್ಯದ ಕಾಗಲ್ ಜಹಾಗಿರ್ ಜಿಲ್ಲೆಯ ಮನಗಾಂವ್ ಎಂಬ ಊರಿನಲ್ಲಿ 1920,ಮಾರ್ಚ 21,22ರಲ್ಲಿ ಎರಡು ದಿನಗಳ ಬೃಹತ್ ಮಟ್ಟದ ಮಹರ್ ಸಮ್ಮೇಳನವನ್ನು ಶಾಹು ಮಹಾರಾಜರು ಏರ್ಪಡಿಸಿದ್ದರು. ಈ ಬೃಹತ್ ಸಮಾವೇಶದ ಅಧ್ಯಕ್ಷತೆಯನ್ನು ಡಾ. ಅಂಬೇಡ್ಕರ್ ವಹಿಸಿದ್ದರು. ಈ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು ಶಾಹು ಮಹಾರಾಜರು ಪ್ರವಾದಿಯ ಧ್ವನಿಯಿಂದ “ನೀವು ನಿಮ್ಮ ರಕ್ಷಕನನ್ನು ಅಂಬೇಡ್ಕರ್ ಅವರಲ್ಲಿ ಕಂಡುಕೊಳ್ಳಿರಿ. ನಿಮ್ಮ ಗುಲಾಮಗಿರಿಯ ಸಂಕೋಲೆಯನ್ನು ಅವರು ಬಿಡಿಸುತ್ತಾರೆ ದೃಢ ವಿಶ್ವಾಸ ನನಗಿದೆ. ಆ ಕಾಲ ಬಹಳ ಬೇಗ ಬರುವುದೆಂದು ನನ್ನ ಮನಸ್ಸು ಹೇಳುತ್ತಿದೆ. ಇಡೀ ಭಾರತದಾದ್ಯಂತ ಅಂಬೇಡ್ಕರ್ ಇನ್ನು ಮುಂದೆ ಸುಪ್ರಸಿದ್ಧ ಮೊದಲ ಶ್ರೇಣಿಯ ನಾಯಕರಾಗಿ ಮಿನುಗಲಿದ್ದಾರೆ” ಎಂದು ಭಾವಪರವಶನಾಗಿ ಘೋಷಿಸಿದರು.
ಡಾ. ಅಂಬೇಡ್ಕರರ ಎಲ್ಲಾ ಕೆಲಸ ಕಾರ್ಯಗಳಿಗೂ ಅಪಾರ ಧನ ಸಹಾಯ ಮಾಡಿ, ಅವರ ಬೆನ್ನುತಟ್ಟಿ ಬೆಳೆಸಿದ ಶಾಹು ಮಹಾರಾಜರು ಮಹಾತ್ಮ ಜ್ಯೋತಿ ಬಾಪುಲೆ ಯವರಿಂದ ಆರಂಭವಾಗಿದ್ದ ಸಾಮಾಜಿಕ ಪರಿವರ್ತನೆ ಚಳುವಳಿಯನ್ನು ತಾವು ಮುನ್ನಡೆಸಿ ತಮ್ಮ ನಂತರ ಡಾ. ಅಂಬೇಡ್ಕರರ ಹೆಗಲ ಮೇಲೆ ಹಾಕಿದರು. ಈ ಚಳುವಳಿಯನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಡಾ. ಅಂಬೇಡ್ಕರ್ ಅವರಲ್ಲಿ ಕಂಡುಕೊಂಡಿದ್ದ ಶಾಹು ಮಹಾರಾಜರು ಸತ್ಯ ಶೋಧಕ ಸಮಾಜ ಸಂಘಟನೆಯಲ್ಲಿದ್ದ ಎಲ್ಲ ಹಿಂದುಳಿದ ಜಾತಿಗಳ ನಾಯಕರು ಮತ್ತು ಕಾರ್ಯಕರ್ತರಿಗೆ ಡಾ. ಅಂಬೇಡ್ಕರರನ್ನು ಹಿಂಬಾಲಿಸಲು ಕರೆಕೊಟ್ಟರು.
ಶಾಹು ಮಹಾರಾಜರು ಡಾ. ಅಂಬೇಡ್ಕರರಿಗೆ ಇಷ್ಟೆಲ್ಲಾ ಪ್ರೋತ್ಸಾಹ ನೀಡಿ ಮನಗಾಂವ್ ಸಮ್ಮೇಳನದಲ್ಲಿ ಅವರನ್ನು ಜಗತ್ತಿಗೆ ಪರಿಚಯಿಸದಿದ್ದರೆ ಬಹುಶಃ ಡಾ. ಅಂಬೇಡ್ಕರ್ ಕೇವಲ ಒಬ್ಬ ಅಜ್ಞಾತ ವಿದ್ವಾಂಸರಾಗಿ ಮಾತ್ರ ಉಳಿದುಬಿಡುತ್ತಿದ್ದರೋ ಏನೋ. ಶಾಹು ಮಹಾರಾಜರ ಈ ಸಾಧನೆ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ತಿಳಿಯಲಿದೆ.

ಜೈ ಭೀಮ್

LEAVE A REPLY

Please enter your comment!
Please enter your name here