• ನಿರಂಜನಾರಾಧ್ಯ.ವಿ.ಪಿ
    ಅಭಿವೃದ್ಧಿ ಶಿಕ್ಷಣ ತಜ್ಞ

ಶಾಲೆಯನ್ನು ಪುನಾರಾರಂಭಿಸುವ ವಿಚಾರದಲ್ಲಿ ಮೂಲ ವಾರಸುದಾರರಾದ ಪಾಲಕರ/ಪೋಷಕರ ಜೊತೆ ಸಮಾಲೋಚನೆಗೆ ಮಾನ್ಯ ಸಚಿವರು ಮತ್ತು ಸರ್ಕಾರದ ಶಿಕ್ಷಣ ಇಲಾಖೆ ಮುಂದಾಗಿರುವುದು ಸ್ವಾಗತದ ಸಂಗತಿ.
ಇಲ್ಲಿ ಪಾಲಕರ ಅಭಿಪ್ರಾಯ ಅತಿಮುಖ್ಯ ಮತ್ತು ಅಂತಿಮವಾಗಿ ಸರ್ಕಾರ ಈ ಬಗ್ಗೆ ತೀರ್ಮಾನಿಸುವಾಗ ನಿರ್ಣಾಯಕ ಅಂಶವಾಗಿರುತ್ತದೆ. ಶಿಕ್ಷಣ ಇಲಾಖೆಯ ಆಯುಕ್ತರು ಸರ್ಕಾರಿ ಹಾಗು ಅನುದಾನರಹಿತ ಶಾಲೆಗಳಿಗೆ ಎರಡು ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿ ತಿಳಿಸಿರುವಂತೆ ಪಾಲಕರ ಜೊತೆ ಮುಕ್ತ ಹಾಗು ಪ್ರಜಾಸತ್ತಾತ್ಮಕ ಚರ್ಚೆಗಳು ನಡೆಯುವುದು ಅತೀ ಮುಖ್ಯ. ಕಾರಣ, ಇಲ್ಲಿ ಶಾಲೆಯ ಆಡಳಿತ ಮಂಡಳಿ , ಮಾಲೀಕರು ಹಾಗು ಶಿಕ್ಷಕರು ಪರೋಕ್ಷವಾಗಿ ಮೂಲ ವಾರಸುದಾರರಾಗಿದ್ದರೂ, ಅವರ ಹಿತಾಸಕ್ತಿಗಳು ಬೇರೇಯೇ ಆಗಿರುತ್ತವೆ ಎಂಬುದು ಗಮನಾರ್ಹ. ಹೀಗಾಗಿ, ಹಿತಾಸಕ್ತಿಯ ಸಂಘರ್ಷ (conflict of interest) ವಸ್ತುನಿಷ್ಠವಾದ ತೀರ್ಮಾನದ ಮೇಲೆ ಪ್ರಭಾವ ಬೀರುವಂತಾಗಬಾರದು. ಆದ್ದರಿಂದ, ಈ ಸಮಾಲೋಚನೆಗಳು ಮುಕ್ತವಾಗಿ ಹಾಗು ಪ್ರಜಾಸತ್ತಾತ್ಮವಾಗಿರುವುದನ್ನು ಇಲಾಖೆ ಖಾತರಿಪಡಿಸಿಕೊಳ್ಳಬೇಕು.

ಮತ್ತೊಂದು ಪ್ರಮುಖ ಅಂಶವೆಂದರೆ ಮಕ್ಕಳ ಅಭಿಪ್ರಾಯ. ಈ ವಿಷಯದಲ್ಲಿ ಮಕ್ಕಳ ಅಭಿಪ್ರಾಯ ಕೇಳುವುದೂ ಸಹ ಒಂದು ಮುಖ್ಯವಾದ ಭಾಗ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಂದು ಪ್ರಧಾನ ತತ್ವದ ಅನ್ವಯ (principle of participation) ಮಕ್ಕಳ ಬದುಕು, ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಂಬಂಧಿಸಿದ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವಾಗ ಮಕ್ಕಳ ಅಭಿಪ್ರಾಯ ಮುಖ್ಯವಾಗುತ್ತದೆ. ಮಕ್ಕಳು ಅವರ ಪ್ರಬುಧ್ದತೆ ಅನುಗುಣವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಮತ್ತು ಹಕ್ಕನ್ನು ಹೊಂದಿದ್ದಾರೆ . ಲಾಕ್ದೌನ್ ಪರಿಣಾಮದಿಂದ ಮಕ್ಕಳ ಬದುಕು ಮತ್ತು ಜೀವನ ಕ್ರಮದಲ್ಲಿ ಆಗಿರುವ ಏರು-ಪೇರು ಹಾಗು ಅದನ್ನು ಬಗೆ ಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸರ್ಕಾರ ಸೂಕ್ತ ರೀತಿಯಲ್ಲಿ ಯೋಚಿಸಬಹುದು . ಹೀಗಾಗಿ, ಅವರ ಅಭಿಪ್ರಾಯ ಸಂಗ್ರಹಿಸುವುದು ಕೂಡ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಇದಕ್ಕೆ ಪೂರಕವಾದ ಸಹಾಯವನ್ನು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪಡೆಯಬಹುದು.
ಈ ಸಂದರ್ಭದಲ್ಲಿ ನಮ್ಮ ಬಹುತೇಕ ಚರ್ಚೆಗಳು ಮೇಲ್ವರ್ಗ ಮತ್ತು ನಗರ ಕೇಂದ್ರಿತ ನೆಲೆಯಲ್ಲಿ ಜರುಗುತ್ತಿವೆ. ಈ ಚರ್ಚೆಗಳನ್ನು ಅವಕಾಶವಂಚಿತ, ಕೂಲಿಕಾರ್ಮಿಕರ, ವಲಸೆ ಕಾರ್ಮಿಕರ, ಅಪಾರ ಸಂಘಟಿತ ಕಾರ್ಮಿಕರ ಸಂಕಷ್ಟ ಮತ್ತು ಜೀವನಾಧರದ ನೆಲೆಗಳಲ್ಲಿಯೂ ನೋಡಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮತ್ತು ನಗರದ ಆಯ್ದ ಪ್ರದೇಶಗಳಲ್ಲಿ ಶಾಲೆಯನ್ನು ದೀರ್ಘಕಾಲ ಮುಚ್ಚಿದರೆ ಹೆಚ್ಚಿನ ಮಕ್ಕಳ ಶಾಲೆ ತೊರೆಯುವ, ಬಾಲ ಕಾರ್ಮಿಕರಾಗುವ ಹಾಗು ಬಾಲ್ಯ ವಿವಾಹಗಳು ಹೆಚ್ಚಾಗುವ ಸಾಧ್ಯತೆ ಇವೆ. ಶಾಲೆಯು ಮುಚ್ಚಿರುವ ಸಂದರ್ಭದಲ್ಲಿ , ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಮನೆಯಲ್ಲಿಯೇ ಇರುತ್ತಾರೆಂದು ತಿಳಿದರೆ ತಪ್ಪಾಗುತ್ತದೆ. ಅವರು ತಮ್ಮ ಪಾಲಕರ ಜೊತೆ ಹೊಲ-ಗದ್ದೆ, ಕೂಲಿ ಕೆಲಸ , ಇತರೆ ಕುಟುಂಬ ಆಧಾರಿತ ಕೆಲಸಗಳಲ್ಲಿ ದುಡಿಯುವ ಎಲ್ಲಾ ಸಾಧ್ಯತೆಗಳಿವೆ. ಈ ಮಹಾಮಾರಿಯಿಂದ ಆರ್ಥಿಕ ದಿವಾಳಿಯಾಗಿರುವ ಕುಟುಂಬಗಳು ಮನೆಯಲ್ಲಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಅವರು ಕೂಲಿನಾಲಿ ಮಾಡಿ ಜೀವನ ನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ ಮಕ್ಕಳಿಗೆ ಸೂಕ್ತ ರಕ್ಷಣೆ ಆರೈಕೆ ಪೋಷಣೆ ಸರ್ಕಾರದ ಜವಾಬ್ದಾರಿಯಾಗುತ್ತದೆ. ಈ ಎಲ್ಲಾ ಅಂಶಗಳನ್ನು ಸಮಗ್ರವಾಗಿ ನೋಡಬೇಕಾದ ಅವಶ್ಯಕತೆಯಿದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಶಾಲೆಯ ಪುನರಾರಂಭದ ಚರ್ಚೆಗಳು ಕೇವಲ ಶಾಲೆಯ ಅರಂಭವಾಗ ಬೇಕೋ-ಬೇಡವೋ ಎಂಬುದನ್ನು ಕೇವಲ ಕಲಿಕೆಯ ದೃಷ್ಟಿಯಿಂದ ಮಾತ್ರವಲ್ಲದೆ ಮಕ್ಕಳ ಆರೈಕೆ , ರಕ್ಷಣೆ, ಪೋಷಣೆ ಹಾಗು ಕೆಳಸ್ಥರದ ಕುಟುಂಬಗಳು ಜೀವನಾಧಾರ ಕೆಲಸಗಳನ್ನು ಒತ್ತಡ –ಆತಂಕವಿಲ್ಲದೆ ನಿರ್ವಹಿಸಲು ಪೂರಕ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಚರ್ಚಿಸಬೇಕಿದೆ. ಈ ವಿಷಯದಲ್ಲಿ ಪಾಲಕರ ಜೊತೆ ಜೊತೆಗೆ ವೈದ್ಯಕೀಯ ಕ್ಷೇತ್ರದ ಹಾಗು ಶಿಕ್ಷಣ ಕ್ಷೇತ್ರದ ಪರಿಣಿತರನ್ನು ಒಳಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಈ ವಿಷಯದಲ್ಲಿ ಪ್ರಂಪಚದ ಬೇರೆ ದೇಶದ ಅನುಭವಗಳು ಕೂಡ ನಮ್ಮ ಈ ತೀರ್ಮಾನಕ್ಕೆ ವಸ್ತುನಿಷ್ಠ ಸಂಶೋಧನಾಧಾರಿತ ಒಳಹುಗಳನ್ನು ನೀಡಬಹುದಾಗಿರುವುದರಿಂದ ಅವುಗಳನ್ನೂ ಸಹ ಅವಲೋಕಿಸಬಹುದಿದೆ.
ಒಟ್ಟಾರೆ, ಶಾಲೆಯ ಪುನಾರರಂಭ ಕೇವಲ ಪುನಾರಾರಂಭದ ತೀರ್ಮಾನ ಮಾತ್ರವಲ್ಲದೆ ಕುಟುಂಬದ ಹಿನ್ನೆಲೆ, ಕುಟುಂಬಕ್ಕಿರುವ ಬೆಂಬಲ ವ್ಯವಸ್ಥೆ, ಶಾಲೆಗಳ ಸಿದ್ಧತೆ, ಲಭ್ಯವಿರುವ ಮೂಲ ಸೌಕರ್ಯ ಹಾಗು ಎಲ್ಲಕ್ಕಿಂತ ಮಿಗಿಲಾಗಿ ಈ ಸಂಕಷ್ಟದ ಸಂದರ್ಭದಲ್ಲಿನ ಶಾಲೆ ಮಕ್ಕಳ ಜೀವ ರಕ್ಷಣೆಯ , ಸುರಕ್ಷತೆಯ , ಭಯ ಆತಂಕವನ್ನು ಹೋಗಲಾಡಿಸಬಹುದಾದ ಮತ್ತು ಸಮಾಜದಲ್ಲಿ ದುರ್ಭಲ ಹಾಗು ಅವಕಾಶ ವಂಚಿತ ಸಮುದಾಯದ –ಕುಟುಂಬದ ಮಕ್ಕಳಿಗೆ ಮಕ್ಕಳ ಸ್ನೇಹೀ ವಿಸ್ತೃತ ಕೌಟುಂಬಿಕ ತಾಣವಾಬಲ್ಲದೇ ಎಂಬುದನ್ನೂ ತ್ತುವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ, ನಾವೆಲ್ಲರೂ ಈ ವಿಷಯದಲ್ಲಿ ಸಚಿವರ ಮತ್ತು ಇಲಾಖೆಯ ಜೊತೆ ಸೂಕ್ತ ತೀರ್ಮಾನಕ್ಕಾಗಿ ಕೈ ಜೋಡಿಸಬೇಕಿದೆ.

LEAVE A REPLY

Please enter your comment!
Please enter your name here