ಲೇಖಕಿ: ಸುಹಾನ ಸಫರ್

ಎಲ್ಲಾ ಸಮಾಜದಲ್ಲೂ, ಕುಟುಂಬದಲ್ಲೂ ಜ್ಞಾನವೆಂಬುವುದು ಶಕ್ತಿಯಾಗಿದೆ. ಮಾಹಿತಿಯು ವಿಮೋಚನೆಗೊಳ್ಳುತ್ತಿವೆ. ಶಿಕ್ಷಣವು ಪ್ರಗತಿಯ ವಠಾರವಾಗಿದೆ. (ಕೋಫಿ ಅನ್ನಾನ್)ಆರ್.ಟಿ.ಐ. ಎಂಬ ಪದ ಜನಪ್ರಿಯಗೊಳಿಸಿದ್ದರೂ, ಆರ್ಟಿಐ ಕಾಯಿದೆಯ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ. ಮಾಹಿತಿ ಹಕ್ಕು ಕಾಯಿದೆ-2005ರ ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಮೂಲಭೂತ ಹಕ್ಕಾಗಿದೆ.

ಆದರೆ ವಿಪರ್ಯಾಸ ವೇನೆಂದರೆ ಸಮಾಜದ ಕೆಡುಕಿನ ವಿರುದ್ಧ ಹೋರಾಟ ನಡೆಸಿದವರನ್ನು ಶಕ್ತಿಶಾಲಿಗಳು ಹೂತುಬಿಡುತ್ತಾರೆ. ಮಾನವ ಹಕ್ಕುಗಳ ರಕ್ಷಕರು ಆರ್‍ಟಿಐ ಕಾರ್ಯಕರ್ತರು ಆಗಿದ್ದು, ಭ್ರಷ್ಟಾಚಾರ ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳನ್ನು ಪ್ರತಿರೋಧಿಸುತ್ತಾರೆ. ತಮ್ಮ ಮುಖವಾಡ ಕಳಚಿ ಬೀಳುವುದನ್ನು ಸಹಿಸಲಾಗದೆ ಅಧಿಕಾರಿಗಳು ಇಂತಹ ಕಾರ್ಯಕರ್ತರ ಮೇಲೆ ಕೊಲೆ, ಹಲ್ಲೆ ಎಸಗುತ್ತಾರೆ ಮತ್ತು ಆತ್ಮಹತ್ಯೆ ಎಂಬ ಕೀಳು ಹಾದಿಗೆ ಇಳಿಯುವಂತೆ ಮಾಡುತ್ತಾರೆ.
ಮಾಧ್ಯಮದಲ್ಲಿ ವರದಿಯಾದ ಪ್ರಕಾರ 300ಕ್ಕೂ ಹೆಚ್ಚು ಕಿರುಕುಳಗಳು, ಅದರಲ್ಲಿ 51 ಕೊಲೆಗಳು ಮತ್ತು ಆತ್ಮಹತ್ಯೆಗಳನ್ನೂ ಕಾಣಬಹುದು. ಅತ್ಯಂತ ಹೆಚ್ಚು ದಾಳಿ ನಡೆದ ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಉದಾಹರಣೆಯಾಗಿ ನಾವು ಸಂಜಯ್ ಡೂಬೆಯವರನ್ನು ತೆಗೆದುಕೊಳ್ಳಬಹುದು. ಇಷ್ಟೇ ಅಲ್ಲದೆ ಹಲವಾರು ಕಾರ್ಯಕರ್ತರ ಜೀವನ ಇಂತಹ ಭ್ರಷ್ಟ ಅಧಿಕಾರಿಗಳ ಕೈಯಲ್ಲೇ ಮಣ್ಣಾಗಿದೆ. ಆದ್ದರಿಂದ ಈ ಕಾಯಿದೆ ಧೈರ್ಯವಂತರಿಗೆ ಸಮರ್ಪಕವಾದ ರಕ್ಷಣೆಯನ್ನು ಒದಗಿಸದಿರುವುದು ಖಚಿತ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಅದಕ್ಕಾಗಿ ಆರ್‍ಟಿಐ ಕಾಯಿದೆಯನ್ನು 2005ರ ಅಕ್ಟೋಬರ್ 12ರಂದು ಜಾರಿಗೆ ತರಲಾಯಿತು. ಸಾರ್ವಜನಿಕ ಅಧಿಕಾರಿಗಳ ಕಾರ್ಯಗಳಲ್ಲಿ ಜವಾಬ್ಧಾರಿ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವುದು. ಈ ಕಾಯಿದೆಯ ಪ್ರಮುಖ ಉದ್ದೇಶವಾಗಿದೆ. ದೇಶದ ಗೌಪ್ಯತೆಗೆ ಧಕ್ಕೆ ಉಂಟುಮಾಡುವ ವಿಷಯಗಳನ್ನು ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಈ ಕಾಯ್ದೆಯಡಿ ಪಡೆಯಬಹುದಾಗಿದೆ. ಈ ಮಾಹಿತಿಗಳನ್ನು ಒದಗಿಸಲು ಪ್ರತಿಯೊಂದು ಸರಕಾರಿ ಇಲಾಖೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸಲಾಗಿರುತ್ತದೆ.

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಜಾರಿಮಾಡಲ್ಪಟ್ಟಿದ್ದ ವಸಹಾತುಶಾಹಿ ಅಧಿಕೃತ ರಹಸ್ಯ ಕಾಯ್ದೆಯಿಂದ ಬಂದ ಅಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ನಾಗರಿಕರು ಮಾಹಿತಿಯ ಹಕ್ಕನ್ನು ಕೋರುವುದಕ್ಕೆ ಪರಿವರ್ತಿಸಲು ಭಾರತಕ್ಕೆ ಸುಮಾರು 82 ವರ್ಷಗಳೇ ಬೇಕಾಯಿತು. ಆದರೆ 2005ರ ಮಾಹಿತಿ ಹಕ್ಕು ಕಾಯಿದೆಯು ಭಾರತದ ಪ್ರಜಾಪ್ರಭುತ್ವದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿತು.

ಭಾರತದಲ್ಲಿ ಭ್ರಷ್ಟಾಚಾರವು ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ನಿಧಿಗಳು ಯಾವ ರೀತಿಯಲ್ಲಿ ವಿನಿಯೋಗವಾಗುತ್ತಿದೆ ಎಂಬುವುದು ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಆದರೆ ಕಾಯಿದೆಯ ಮೂಲಕ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಸಾಮಾನ್ಯ ಪ್ರಜೆಯು ಕೂಡ ಮಾಹಿತಿಯನ್ನು ಪಡೆಯುವ ಉಪಯೋಗ ಉಂಟಾಯಿತು. ಮಾಹಿತಿಯನ್ನು ಪಡೆಯುವುದಕ್ಕಾಗಿ ಸರಕಾರ ಚಟುವಟಿಕೆಗಳಲ್ಲಿ ಪ್ರಜೆಗಳ ಒಳಗೊಳ್ಳುವಿಕೆಯು ಅಧಿಕಾರಿಗಳು ತಮ್ಮ ಕೆಲಸಗಳಲ್ಲಿ ಹೆಚ್ಚು ಜವಾಬ್ಧಾರಿಯುತರಾಗಲು ಸಹಾಯಕವಾಯಿತು. ಇದರಿಂದಾಗಿ ಪ್ರಜೆಗಳು ತಮ್ಮ ಹಕ್ಕುಗಳನ್ನು ಸಮರ್ಪಕವಾಗಿ ಚಲಾಯಿಸಲು ಮತ್ತು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಸಾಧ್ಯವಾಯಿತು. ಸಂವಿಧಾನದ ವಿಧಿ 19 ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತದೆ. ಆದ್ದರಿಂದ ಈ ಹಕ್ಕು ಮೂಲಭೂತವಾಗಿದೆ ಹಾಗು ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಚಟುವಟಿಕೆಗೆ ಪ್ರಮುಖ ಅಂಶ ಎಂದು ಹೇಳಿದರೆ ತಪ್ಪಾಗಲಾರದು.

ಪ್ರಾಯೋಗಿಕ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ ಮಾಹಿತಿ ಸ್ವಾತಂತ್ರ್ಯ ಕಾಯಿದೆಯನ್ನು ತಡೆದು ಕಮ್ಯೂನಿಷ್ಟ್ ಪಕ್ಷಗಳ ಬಾಹ್ಯ ಬೆಂಬಲ ಪಡೆದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರಕಾರ, 2005ರಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನು ರೂಪಿಸಿ ಜಾರಿಗೆ ತಂದಿತು. ಈ ಕಾಯಿದೆಯು ಸಾರ್ವಜನಿಕರಿಗೆ ಸರಕಾರದ, ಸರಕಾರಿ ಇಲಾಖೆಗಳ, ಸಾರ್ವಜನಿಕ ಅನುದಾನ ಪಡೆದ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ಅಧಿಕೃತವಾಗಿ ತಿಳುವಳಿಕೆ ಪಡೆಯಲು ಅನುಕೂಲ ಮಾಡಿಕೊಟ್ಟಿತು. ಇದರಿಂದಾಗಿ ಭ್ರಷ್ಟಾಚಾರವನ್ನು, ಭ್ರಷ್ಟರನ್ನು ಪ್ರಶ್ನಿಸಲು ಸಾಧ್ಯವಾಯಿತು. ಈ ಕಾಯಿದೆಯನ್ನು ಬಳಸಿಕೊಳ್ಳುವುದರ ಮೂಲಕವೇ ಹಲವು ಹಗರಣವು ಬಹಿರಂಗಗೊಂಡವು. ದುರಾದೃಷ್ಟವಷಾತ್ ಅವುಗಳನ್ನು ಪ್ರಶ್ನಿಸಿದ ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರು ದೇಶಾದ್ಯಂತ ಕೊಲೆಗೀಡಾಗಿದ್ದಾರೆ. ಒಂದು ವರದಿಯ ಪ್ರಕಾರ ದೇಶಾದ್ಯಂತ ಪ್ರತೀ ವರ್ಷ ಮಾಹಿತಿ ಹಕ್ಕು ಕಾಯಿದೆಯನ್ನು ವಿವಿಧ ಕಾರಣಗಳಿಗಾಗಿ 6 ದಶಲಕ್ಷ ನಾಗರಿಕರು ಬಳಕೆ ಮಾಡುತ್ತಿದ್ದಾರೆ. ಈ ಕಾಯಿದೆ ಜನಚಳುವಳಿಗೆ ಸಂದ ಜಯವೆಂದೇ ಹೇಳಬಹುದು.

2005 ಕಾಯಿದೆಯ ಪ್ರಕಾರ ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ಮತ್ತು ಕೇಂದ್ರ ಮತ್ತು ರಾಜ್ಯ ಮಟ್ಟದ ಮಾಹಿತಿ ಆಯುಕ್ತರು 5 ವರ್ಷದ ಅಧಿಕಾರವಧಿ ಹೊಂದಿರುತ್ತಾರೆ. ಮೂಲ ಕಾಯಿದೆಯಲ್ಲಿ ಮುಖ್ಯ ಮಾಹಿತಿ ಆಯುಕ್ತರ ಮತ್ತು ಇತರ ಮಾಹಿತಿ ಆಯುಕ್ತರ ವೇತನವು ಕ್ರಮವಾಗಿ ಮುಖ್ಯ ಚುನಾವಣಾ ಆಯುಕ್ತರ ಮತ್ತು ಚುನಾವಣಾ ಆಯುಕ್ತರ ವೇತನದಷ್ಟಿರುತ್ತದೆ. ಅದೇ ರೀತಿ ರಾಜ್ಯ ಮಟ್ಟದಲ್ಲೂ ಚುನಾವಣಾ ಆಯುಕ್ತರು ಮತ್ತು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯವರ ವೇತನಕ್ಕೆ ಸರಿ ಸಮವಾಗಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತಿತರ ಮಾಹಿತಿ ಆಯುಕ್ತರ ವೇತನ ನಿಗದಿಯಾಗಿರುತ್ತದೆ.

ಆದರೆ 2019ರ ತಿದ್ದುಪಡಿ ವಿಧೇಯಕದಲ್ಲಿ ಈ ಷರತುಗಳನ್ನು ತೆಗೆದು ಹಾಕಲಾಗಿರುತ್ತದೆ. ಅಂದರೆ 2005ರ ಮಾಹಿತಿ ಕಾಯಿದೆಯ ಸೆಕ್ಷನ್ 13, 16 ಮತ್ತು 27ನ್ನು ತಿದ್ದುಪಡಿ ಮಾಡಲಾಗಿದೆ. ಕೇಂದ್ರ ಸರಕಾರವೇ ಸಿಐಸಿ ಮತ್ತು ಮಾಹಿತಿ ಆಯುಕ್ತರ ಅಧಿಕಾರವಧಿಯನ್ನು ನಿಗದಿಪಡಿಸಿ ಆದೇಶ ಹೊರಡಿಸುತ್ತದೆ. ಇದಕ್ಕೆ ನಿರ್ಧಿಷ್ಟ ಅವಧಿ ಎಂದಿರುವುದಿಲ್ಲ. ಅಂದರೆ ಭ್ರಷ್ಟಾಚಾರವನ್ನು ಪ್ರಮಾಣಿಕವಾಗಿ ಹೊರಹಾಕುವ ಆಯುಕ್ತರಿಗೆ ದೀರ್ಘಕಾಲ ಅಧಿಕಾರ ಲಭ್ಯವಿಲ್ಲ ಎಂಬುವುದೇ ಇದರ ಸಾರಾಂಶ! ಅದಲ್ಲದೇ ವೇತನಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರದ ಎಲ್ಲಾ ಚುನಾವಣಾ ಆಯುಕ್ತರ ವೇತನವನ್ನು ಕೇಂದ್ರ ಸರಕಾರವೇ ನಿರ್ಧರಿಸುವಂತೆ ಪ್ರಸ್ತುತ ಕಾನೂನನ್ನು ಮಾರ್ಪಾಡು ಮಾಡಲು ಹೊರಟಿದೆ. ಅಧಿಕಾರಿಗಳನ್ನು ತನ್ನ ಗುಲಾಮರನ್ನಾಗಿಸುವುದೇ ಈ ಸರಕಾರದ ಮೂಲ ಆಶಯ ಅದಲ್ಲದೇ ಹಿಂದಿನ ಕಾಯಿದೆಯಲ್ಲಿ ಕೇವಲ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಮಾತ್ರ ಇದರ ಮುಖ್ಯಸ್ಥರಾಗಲು ಸಾಧ್ಯವಾಗಿತ್ತು. ಆದರೆ ಈ ತಿದ್ದುಪಡಿಯ ನಂತರ ಸುಪ್ರೀಂ ಕೋರ್ಟಿನ ಯಾವುದೇ ನಿವೃತ ನ್ಯಾಯಾಧೀಶರೂ ಇದರ ಮುಖ್ಯಸ್ಥರಾಗಬಹುದು. ಇದೇ ರಾಜ್ಯಕ್ಕೂ ಅನ್ವಯಿಸುತ್ತದೆ. ಮುಖ್ಯ ನ್ಯಾಯಾಧೀಶರು ಒಬ್ಬರೇ ಆಗಿದ್ದು, ಈ ತಿದ್ದುಪಡಿಯಿಂದ ಯಾವುದೇ ನ್ಯಾಯಾಧೀಶರಾಗಿರುವುದರಿಂದ ಕೇಂದ್ರವು ತಮಗೆ ಬೇಕಾದ ಬೆಂಬಲವಿರುವ ನ್ಯಾಯಾಧೀಶರನ್ನು ಆಯ್ಕೆಮಾಡುವ ಸಾಧ್ಯತೆ ಇರುತ್ತದೆ. ಈ ಹಿಂದೆ ಆಯುಕ್ತರೇ ಅದರಲ್ಲಿನ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈ ತಿದ್ದುಪಡಿಯು ಈ ಕೆಲಸವನ್ನು ಕೇಂದ್ರಕ್ಕೆ ನೀಡಿರುತ್ತದೆ. ಇದರಿಂದ ಭ್ರಷ್ಟಾಚಾರದ ಹೊಳೆ ಹರಿಯುವುದರಲ್ಲಿ ಸಂಶಯವಿಲ್ಲ.

ಈಗ ಮಾಹಿತಿ ಹಕ್ಕು ಕಾಯಿದೆಯು ಹಲ್ಲುಕಿತ್ತ ಹಾವಿನಂತಾಗಿದೆ. ಭಾರತೀಯ ಪ್ರಜಾತಂತ್ರ ಎತ್ತ ಸಾಗುತ್ತಿದೆ ಎಂದರೆ ಸರ್ವಾಧಿಕಾರದತ್ತ ಎಂಬ ಉತ್ತರವು ಕೇಳಿಬರುತ್ತಿದೆ. ಮಾಹಿತಿ ಹಕ್ಕು ಕಾಯಿದೆ ತಿದ್ದುಪಡಿಗೆ ಅನೇಕ ವಿರೋಧ ವ್ಯಕ್ತವಾಗಿದೆ. ಮಾಹಿತಿ ಆಯುಕ್ತರ ಅಧಿಕಾರವಧಿ ಹಾಗೂ ಸಂಬಳಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ಕೇಂದ್ರ ಸರಕಾರ ತನ್ನ ಸುಪರ್ಧಿಗೆ ತೆಗೆದುಕೊಂಡು ಮಾಹಿತಿ ಆಯುಕ್ತರನ್ನು ನಿಯಂತ್ರಿಸಲು ಹೊರಟಿದೆ. ವಿರೋಧ ಪಕ್ಷಗಳ ಕರ್ತವ್ಯದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವ ಸಾಧ್ಯತೆ ಇರುತ್ತದೆ. ಇದು ಮಾಹಿತಿ ಹಕ್ಕು ಆಯೋಗದ ಅಸ್ತಿತ್ವ ಮತ್ತು ಸ್ವಾತಂತ್ರ್ಯವನ್ನು ಹರಣ ಮಾಡುತ್ತದೆ. ಇದು ದೇಶದ ಒಂದು ಯಶಸ್ವಿ ಕಾಯಿದೆಯಾಗಿ ಪರಿವರ್ತನೆಯಾಗಿತ್ತು. ಆದರೆ ಇಂದು ಭ್ರಷ್ಟರ ಪರ ವಹಿಸಲು ಸಾಗುತ್ತದೆ ಎಂಬುದೇ ಬೇಸರದ ಸಂಗತಿ.

LEAVE A REPLY

Please enter your comment!
Please enter your name here