ಲೇಖಕರು: ಮುಹಮ್ಮದ್ ಅಬ್ದುಲ್ಲಾ ಜಾವೀದ್

ಪ್ರಾಥಮಿಕ ಹಂತವನ್ನು ದಾಟಿ ಕಾಲೇಜು ಮೆಟ್ಟಲೇರುವುದು ಜೀವನದ ಪ್ರಮುಖ ಬದಲಾವಣೆಯಾಗಿದೆ. ಹತ್ತನೇ ತರಗತಿಯ ಫಲಿತಾಂಶದೊಂದಿಗೆ ಶಾಲಾ ಜೀವನವು ಕೊನೆಗೊಳ್ಳುತ್ತದೆ. ಆ ದಿನಗಳು ಕೊನೆಗೊಳ್ಳುವುದರೊಂದಿಗೆ ಹೊಸ ಜಗತ್ತು ಹಲವಾರು ಅವಕಾಶ ಸವಾಲುಗಳೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ.

ಅವಕಾಶಗಳು ಮತ್ತು ಸವಾಲುಗಳು:

ಕಾಲೇಜು ಜೀವನದಲ್ಲಿ ತನಗೆ ಲಭಿಸಿರುವ ಅವಕಾಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಧೃಡನಿಶ್ಚಯದೊಂದಿಗೆ ಅದನ್ನು ಸಾಕ್ಷಾತ್ಕರಿಸಲು ಪ್ರಯತ್ನಿಸುವವರೇ ನಿಜವಾದ ಮಾದರಿ ವಿದ್ಯಾರ್ಥಿಗಳು. ಕಲಿಕೆಯ ಹಂತದಲ್ಲಿ ಎದುರಾಗುವ ಸವಾಲುಗಳ ಕುರಿತು ಚಿಂತಿತರಾಗುವ ತಲೆಕೆಡಿಸುವ ಅಗತ್ಯವಿಲ್ಲ. ಅದು ಕೂಡ ನಮ್ಮ ಏಳಿಗೆಗೆ, ಬೆಳವಣಿಗೆಗೆ ಅಗತ್ಯವಾಗಿದೆ. ನಮ್ಮ ಕನಸಿನ ಹಾದಿಗೆ ಅನಿವಾರ್ಯವು ಆಗಿದೆ. ನಿಮ್ಮ ಕಠಿಣ ಪರಿಶ್ರಮದಿಂದ ಆ ಸವಾಲುಗಳನ್ನು ಎದುರಿಸಬಹುದು. ಕಠಿಣ ಪರಿಶ್ರಮವೇ ಸವಾಲನ್ನು ತಡೆಯುವ ಶಕ್ತಿ. ಆದ್ದರಿಂದ ಸಮಸ್ಯೆಗಳು ಹೊರಗಿನಿಂದ ಬಂದದ್ದಲ್ಲ, ಅದು ನಮ್ಮ ದೌರ್ಬಲ್ಯದಿಂದ ಎಂದು ನಾವು ಅರಿಯಬೇಕು. ಪರಿಶ್ರಮದ ಬದಲಾಗಿ ಅನಾಸ್ಥೆಯಿಂದಿದ್ದರೆ ಅಥವಾ ಆತ್ಮವಿಶ್ವಾಸದ ಬದಲಾಗಿ ಭರವಸೆ ಕಳೆದುಕೊಂಡರೆ ನಾವೇ ನಮಗೆ ಸಮಸ್ಯೆಯಾಗಿ ಪರಿಣಮಿಸುತ್ತೇವೆ. ಆದ್ದರಿಂದ ಅವಕಾಶಗಳ ಹಾಗೂ ಸವಾಲುಗಳ ಕುರಿತು ಜಾಗರೂಕರಾಗಿರಬೇಕು.

ವಿಷಯದ ಆಯ್ಕೆ:

ಇನ್ನು ನೀವು ಅರಿಯಬೇಕಾದ ವಿಷಯ ಪಠ್ಯವಿಷಯ. (Syllabus) ಈಗಾಗಲೇ ನಿಮ್ಮ ವಿಷಯವನ್ನು ಆರಿಸಿರಬಹುದು. ಆದರೂ ಸಂಕ್ಷಿಪ್ತವಾಗಿ ನೆನಪಿಸ ಬಯಸುತ್ತೇನೆ.

ತಾಂತ್ರಿಕ ವಿಭಾಗ (Technical Streams) ವನ್ನು ಹೊರತು ಪಡಿಸಿ, ಬೇರೆಲ್ಲಾ ವಿಭಾಗಗಳ ಪ್ರಾಥಮಿಕ ಜ್ಞಾನ ಶಾಲಾ ಶಿಕ್ಷಣದಲ್ಲೇ ದೊರೆತಿರುತ್ತದೆ. ಮುಖ್ಯವಾಗಿ ಪದವಿ ಪೂರ್ವ ಶಿಕ್ಷಣದಲ್ಲಿರುವ ವಿಭಾಗಗಳು ಯಾವುದೆಂದರೆ ಕಲಾ ವಿಭಾಗ, ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ. ನಿಮ್ಮ ಆಸಕ್ತಿ, ಇಚ್ಛೆ, ಗುರಿಗೆ ಅನುಗುಣವಾಗಿ ವಿಷಯವನ್ನು ಆಯ್ದುಕೊಳ್ಳಬೇಕು.

ಹೊಸತನ ತುಂಬಿರಲಿ:

ನೀವು ಪ್ರಾಥಮಿಕ ತರಗತಿಯಿಂದ ಹಿಡಿದು ಎಸ್.ಎಸ್.ಎಲ್.ಸಿ ವರೆಗೆ ವಿಭಿನ್ನ ಅಂಕಗಳನ್ನು ಗಳಿಸಿರಬಹುದು. ಉತ್ತಮ ಅಂಕಗಳು, ಕೆಲ ಹಂತದವರೆಗೆ ನಮ್ಮ ಅರ್ಥೈಸುವ ಸಾಮಥ್ರ್ಯವನ್ನು ತಿಳಿಯಪಡಿಸುತ್ತದೆ. ಅದೇ ವೇಳೆ ಕಡಿಮೆ ‘ಗ್ರೇಡ್’ ಅಥವಾ ಕಡಿಮೆ ಅಂಕಗಳಿಸಿರುವಿರೆಂದಾದರೆ ನಿಮ್ಮ ಅರ್ಥೈಸುವ ಶಕ್ತಿ ಕಡಿಮೆಯಿದೆ ಎಂದರ್ಥವಲ್ಲ. ಆದ್ದರಿಂದ ಹಿಂದೆ ನಡೆದ ವಿಷಯಗಳಿಗೆ ತಲೆಕೆಡಿಸದೆ ಹೊಸ ಹುರುಪಿನೊಂದಿಗೆ ಮುನ್ನುಗ್ಗಬೇಕು.

ಕಾಲೇಜು ಜೀವನದಲ್ಲಿ ಉತ್ತಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಂಬಲ ಇತರರಿಗೆ ಕಡಿಮೆ ಪ್ರೋತ್ಸಾಹ ಎಂಬುವುದಿಲ್ಲ. ಎಲ್ಲರಿಗೂ ಸಮಾನವಾದ ಬೆಂಬಲವನ್ನು ನೀಡಲಾಗುತ್ತದೆ. ಆದ್ದರಿಂದ ಎಲ್ಲರಿಗಿಂತಲೂ ಭಿನ್ನರಾಗಿ ತುಂಬು ಉತ್ಸಾಹದೊಂದಿಗೆ ಎಲ್ಲಾ ಸೆಮಿಸ್ಟರ್‍ಗಳಲ್ಲೂ ಪ್ರತೀ ವರ್ಷವೂ ಹೆಚ್ಚಿನ ಸಾಧನೆ ಮಾಡಬೇಕು. ಹಿಂದಿನ ಉತ್ತಮ ಸಾಧನೆಯ ಕುರಿತು ಅತಿಯಾದ ವಿಶ್ವಾಸದಿಂದ ಇದ್ದರೆ ಸಾಲದು. ಅದೇ ರೀತಿ ಹಿಂದಿನ ತರಗತಿಯಲ್ಲಿ ನಿರೀಕ್ಷಿತ ಅಂಕಗಳಿಸದಿರುವುದರ ಕುರಿತು ತಲೆಕೆಡಿಸಲೂಬಾರದು. ಏಕೆಂದರೆ ಎಲ್ಲಾ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿದ್ದು ಸಮಾನವಾದ ಕಲಿಕಾ ವಿಧಾನವನ್ನು ಹೊಂದಿರುತ್ತಾರೆ. ಸಾಮರ್ಥ್ಯದ ಮೇಲೆ ಭರವಸೆಯನ್ನಿರಿಸಿ ಉತ್ಸಾಹದೊಂದಿಗೆ ಕಲಿತರೆ ಎಲ್ಲವೂ ಸರಿಹೋಗುತ್ತದೆ.

ಕಲಿಕಾ ವಿಧಾನ:

ಇನ್ನೊಂದು ವಿಚಾರ ನೀವು ತಿಳಿಯಬೇಕಾದದ್ದು ಕಲಿಕೆಯ ವಿಧಾನ ಮತ್ತು ಶೈಲಿ. ಕಾಲೇಜಿನಲ್ಲಿ ಶಾಲೆಯಂತೆ ನಿರ್ದಿಷ್ಟ ವಿಷಯಗಳಿಗೆಯೇ ಸೀಮಿತಗೊಳಿಸದೆ ಇತರ ಪಠ್ಯೇತರ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ. ಶಿಕ್ಷಕರು ವಿವರವಾಗಿ ಕಲಿಸುತ್ತಾರಾದರೂ, ಅರ್ಥವಾಗದ ವಿಷಯದ ಕುರಿತು ಅವರೊಂದಿಗೆ ಧೈರ್ಯದಿಂದ ಪ್ರಶ್ನಿಸಬೇಕು. ಇಲ್ಲವಾದಲ್ಲಿ ಕಲಿಕೆಯು ಅಷ್ಟು ಫಲಪ್ರದವಾಗುವುದಿಲ್ಲ. ಶಾಲೆಯಲ್ಲಿ ಶಿಕ್ಷಕರು ನಮಗೆ ಹತ್ತಿರವಾಗಿರುತ್ತಾರೆ. ಆದರೆ ಕಾಲೇಜಿನಲ್ಲಿ ನಾವು ಅವರ ಹತ್ತಿರ ಬರುವಂತೆ ಮಾಡುತ್ತಾರೆ.

ಅಧ್ಯಯನ:

ಶಿಕ್ಷಣದ ಯಶಸ್ಸು ಕಲಿಕೆಯನ್ನು ಅವಲಂಬಿಸಿದೆ .ಹೆಚ್ಚೆಚ್ಚು ಕಲಿತಂತೆ ನಮ್ಮ ಜ್ಞಾನ ವೃದ್ಧಿಸುತ್ತದೆ. ಕಾಲೇಜಿನಲ್ಲಿ ನಾವಾಗಿಯೇ ಕಲಿಯಬೇಕು. ನಾವೇ ನಮ್ಮ ಗುರುಗಳಾಗಿರುತ್ತೇವೆ. ಇಲ್ಲಿ ಯಾರೂ ನಾವು ಅರ್ಥೈಸಿರುವುದರ ಕುರಿತು ಪ್ರಶ್ನಿಸುವುದಿಲ್ಲ ಅಥವಾ ನಮ್ಮ ನೋಟ್ಸನ್ನು ಪರೀಕ್ಷಿಸುವುದಿಲ್ಲ. ಆದ್ದರಿಂದ ಕಲಿಯುವಾಗ ಶಿಸ್ತಿನಿಂದ ಆಳವಾಗಿ ಅಭ್ಯಸಿಸಲು ಪ್ರಯತ್ನಿಸಬೇಕು.

ಕಲಿಯುವಾಗ ಗಂಭೀರವಾಗಿ ತಾಳ್ಮೆಯಿಂದ ಆಲಿಸಿ ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಆಲಿಸುವುದಕ್ಕೂ ಅರ್ಥೈಸುವುದಕ್ಕೂ ಗಂಭೀರತೆಯಿರಬೇಕು. ಉತ್ತಮ ಕಲಿಕೆಯೆಂದರೆ ಅರ್ಥವರಿಯದೇ ಕೇವಲ ಬಾಯಿಪಾಠ ಮಾಡುವುದಲ್ಲ. ಕಲಿಕೆಯ ನೈಜ ಉದ್ದೇಶ ಕೇವಲ ಅಂಕಗಳಿಸುವುದೂ ಅಲ್ಲ. ಬದಲಾಗಿ, ಎಲ್ಲಾ ವಿಷಯಗಳನ್ನು ಮನಪೂರ್ವಕ ಅರ್ಥೈಸುವುದಾಗಿದೆ. ಇದು ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸಲು ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಲೂ ವೈಜ್ಞಾನಿಕ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಹಾಯಕವಾಗಬೇಕು.

ಗೆಳೆತನ:

ಹತ್ತಕ್ಕಿಂತಲೂ ಅಧಿಕ ವರ್ಷದ ಶಾಲಾ ಜೀವನವು ಸಹಪಾಠಿಗಳೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಲು ಸಹಾಯಕವಾಗುತ್ತದೆ. ಆದರೆ ಕಾಲೇಜಿನಲ್ಲಿ ಕೆಲವೇ ವರ್ಷಗಳಲ್ಲಿ ಸಹಪಾಠಿಗಳೊಂದಿಗೆ ಉತ್ತಮ ಗೆಳೆತನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಬೇಕು. ಕಾಲೇಜಿನಲ್ಲಿ ವಿಭಿನ್ನ ರೀತಿಯ ವಿದ್ಯಾರ್ಥಿಗಳು ವಿಭಿನ್ನ ಹಿನ್ನೆಲೆಯಿರುವ, ವಿಭಿನ್ನ ಶಾಲೆಗಳಿಂದ ಬಂದು ಬೇರೆಯೇ ಆಸೆ ಆಕಾಂಕ್ಷೆ ಹೊಂದಿರುವವರನ್ನು ಕಾಣಬಹುದು. ನಾವಾಗಿಯೇ ಅವರ ಬಳಿ ಹೋಗಿ ಹಸ್ತಲಾಘವ ಮಾಡಿ ನಮ್ಮನ್ನು ಪರಿಚಯಿಸುವುದರಿಂದ ನಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಇತರರೊಂದಿಗೆ ಬೆರೆಯಲು ಸಹಾಯವಾಗುತ್ತದೆ.

ವೈಯಕ್ತಿಕ ಪರಿಶ್ರಮ:

ಇನ್ನು ನಾವು ಕೆಲವು ವೈಯಕ್ತಿಕ ಉಪಾದಿಗಳನ್ನು ನಮ್ಮ ಯಶಸ್ಸಿಗಾಗಿ ಕಂಡುಕೊಳ್ಳಬೇಕು. ಈ ವೈಯಕ್ತಿಕ ಪರಿಶ್ರಮಗಳು ಯಾವುದೆಂದರೆ.

ಗುರಿ ಹೊಂದುವುದು:

ನಿಮ್ಮ ಗುರಿಯನ್ನು ನಿರ್ಣಯಿಸಬೇಕು. ಈ ಗುರಿ ನೀವು ಜೀವನದಲ್ಲಿ ಏನನ್ನು ಸಾಧಿಸುತ್ತೀರೆಂಬುದನ್ನು ಸ್ಪಷ್ಟಪಡಿಸುವಂತಿರಬೇಕು. ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನೂ ಅನೇಕ ಕ್ಷೇತ್ರಗಳಲ್ಲೂ ಯಶಸ್ಸನ್ನು ಪಡೆಯಬಹುದು. ವಿಜ್ಞಾನಿಯಾಗಬಹುದು ಅಥವಾ ನಾಗರಿಕ ಸೇವೆ ಸೇರಬಹುದು. ಸಮಾಜ ವಿಜ್ಞಾನದಲ್ಲಿ ಹೊಸ ಕ್ಷೇತ್ರವನ್ನು ಆವಿಷ್ಕರಿಸಬಹುದು. ಅದೇ ರೀತಿ ರಾಜಕೀಯದಲ್ಲೂ ಬುದ್ಧಿಜೀವಿಗಳ ಅಗತ್ಯತೆ ಇದೆ. ಆ ಮೂಲಕ ರಾಜಕೀಯವನ್ನು ಸಮಾಜದ ಕಲ್ಯಾಣದೆಡೆಗೆ ಕೊಂಡೊಯ್ಯಬಹುದು. ನಿಮ್ಮ ಗುರಿಯು ನಿಮ್ಮ ಜೀವನದ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ಗುರಿಯಿಲ್ಲದೇ ಯಶಸ್ಸು ಕಾಣಲು ಸಾಧ್ಯವಿಲ್ಲ. ಯಾವ ರೀತಿ ಗುರಿಯಿಲ್ಲದೆ ಬಾಣವನ್ನು ಬಿಟ್ಟರೆ ಅದು ಗುರಿ ತಲುಪುದಿಲ್ಲವೋ ಅದೇ ರೀತಿ ಗುರಿಯಿಲ್ಲದೇ ಯಶಸ್ಸನ್ನು ಬಯಸುವುದು ನಿರರ್ಥಕ. ಗುರಿಯು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಧೃಡಚಿತ್ತತೆಯೊಂದಿಗೆ ಆ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು.

ಗುರಿಯನ್ನು ಹೊಂದಲು ಹಾಗೂ ಸದಾ ಅದನ್ನು ನೆನಪಿಸಲು ಯಾವುದು ನಿಮ್ಮನ್ನು ಪ್ರೇರೇಪಿಸುತ್ತದೆಂದು ನಿಮಗೆ ತಿಳಿದಿದೆಯೇ?

3 ಪ್ರಮುಖ ವಿಷಯಗಳು:

1) ನಿಮ್ಮ ಪೋಷಕರು ಹಾಗೂ ಶಿಕ್ಷಕರ ಆಕಾಂಕ್ಷೆ.

2) ಸಾಧಿಸಬೇಕೆಂಬ ನಿಮ್ಮ ಛಲ.

3) ದೇಶಕ್ಕಾಗಿ ಹಾಗೂ ಜನರಿಗಾಗಿ ಕೆಲಸ ಮಾಡಬೇಕೆಂಬ ಉತ್ಸಾಹ.

ಮುಕ್ತತೆ:

ಹೊಸ ಮನೋಭಾವಗಳನ್ನು ಹೊಸ ರೀತಿ, ನೀತಿಗಳನ್ನು ಶಿಸ್ತನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಇತರರ ವಿಷಯವನ್ನು ಆಲಿಸಬೇಕು ಹಾಗೂ ನಿಮ್ಮ ವಿಷಯವನ್ನು ಕೇಳುವಂತೆ ಮಾಡಬೇಕು.

ಕಠಿಣ ಶ್ರಮ:

ಕಠಿಣ ಶ್ರಮವನ್ನು ಯಾವತ್ತೂ ಕೈಬಿಡಬಾರದು. ಎಲ್ಲಾ ಸಾಧನೆಗಳು ನಮ್ಮ ಕಠಿಣ ಪರಿಶ್ರಮದಿಂದಾಗಿ ಮಾತ್ರ ಲಭಿಸುತ್ತದೆ. ನೀವು ಕಲಿಕೆಯಲ್ಲಿ ಹೆಚ್ಚು ಶ್ರಮ ಪಡುತ್ತೀರೆಂದಾದರೆ, ನೀವು ಗಂಭೀರತೆಯಿಂದಿದ್ದೀರಿ, ಅರ್ಥೈಸಿಕೊಳ್ಳುತ್ತಿದ್ದೀರಿ ಹಾಗೂ ನಿಮ್ಮ ಸಾಧನೆಯ ಹಾದಿಯಲ್ಲಿ ದೃಢವಾಗಿದ್ದೀರೆಂದರ್ಥ. ನಿಮ್ಮ ಕಠಿಣ ಶ್ರಮ ನೀವು ಗುರಿ ತಲುಪಲು ಎಷ್ಟು ಉತ್ಸುಕರಾದ್ದೀರೆಂದು ನೋಡುವ ಮಾಪನವಾಗಿದೆ.

ಹೊಂದಿಕೊಳ್ಳುವಿಕೆ:

ಕ್ಯಾಂಪಸ್‍ನ ಒಳಗೂ ಹೊರಗೂ ನಿಮ್ಮ ಸಹನೆಯನ್ನು ಪರೀಕ್ಷಿಸುವಂತಹ, ನಿಮ್ಮ ಹೊಂದಿಕೊಳ್ಳುವಿಕೆಯನ್ನು ತಿಳಿಯುವ ಸನ್ನಿವೇಶಗಳು ಬರಬಹುದು. ಅಂತಹ ಸಂದರ್ಭಗಳಲ್ಲಿ ಸಹಪಾಠಿಗಳು, ಗೆಳೆಯರೊಂದಿಗೆ ಕಾಲೇಜಿನ ಸಮಯ ,ವೇಳಾಪಟ್ಟಿ ….ಹೀಗೆ ಎಲ್ಲದಕ್ಕೂ ಇಷ್ಟವಾದರೂ ಇಲ್ಲದಿದ್ದರೂ ಹೊಂದಿಕೊಂಡು ನಡೆಯಲು ಪ್ರಯತ್ನಿಸಬೇಕು.

ಉತ್ತಮ ಅಭ್ಯಾಸವನ್ನು ರೂಢಿಸಿಕೊಳ್ಳಿ:

ಶಾಲಾ ದಿನಗಳಲ್ಲಿ ಸಹಜವಾಗಿರುವಂತಹ ತುಂಟತನ ಅಥವಾ ಇತರ ದುರಭ್ಯಾಸದಿಂದ ದೂರವಿರಿ. ನೀವು ಸಣ್ಣವರೆಂದು ಭಾವಿಸದೆ, ದೊಡ್ಡವರಾಗಿದ್ದೀರೆಂದು ಅರಿತು ಶಾಲಾದಿನಗಳಲ್ಲಿ ನಿಮ್ಮಲ್ಲಿದ್ದ ಮಕ್ಕಳಾಟಿಕೆಯನ್ನು ಬಿಟ್ಟುಬಿಡಿ. ಉದಾಸೀನತೆ, ಕ್ಲಾಸ್ ಬಂಕ್, ನೋಟ್ಸ್ ಬರೆಯುವುದರ ಕುರಿತು ನಿರ್ಲಕ್ಷ್ಯತನ, ಹೆತ್ತವರೊಂದಿಗೆ ದುರ್ವರ್ತನೆ, ತರಗತಿ ನಡೆಯುತ್ತಿರುವಾಗ ಗೆಳೆಯರೊಂದಿಗೆ ಮಾತು, ನಿರ್ಲಕ್ಷ್ಯದ ವರ್ತನೆ, ಶಿಕ್ಷಕರಿಗೆ ಅಗೌರವ ಇತ್ಯಾದಿ ಸ್ವಭಾವಗಳನ್ನಿಟ್ಟುಕೊಂಡು ಕಾಲೇಜಿಗೆ ಕಾಲಿರಿಸಿದರೆ ನಿಮ್ಮ ಕಾಲೇಜಿನ ಫಲಿತಾಂಶಕ್ಕೆ ಅಡ್ಡಿ ಉಂಟಾಗುತ್ತದೆ.

ಪಠ್ಯೇತರ ಚಟುವಟಿಕೆ:

ಕ್ರೀಡೆ ಮತ್ತು ಇತರ ಪಠ್ಯೇತರ ಚಟುವಟಿಕೆಗಳು ಹೊಸ ಹುರುಪನ್ನು ಮೂಡಿಸುತ್ತದೆ. ಅರಿವಿನ ಕೌಶಲ್ಯವನ್ನು ವೃದ್ಧಿಸುತ್ತದೆ. ಮನಸ್ಸಿನ ಉಲ್ಲಾಸಕ್ಕೆ ಸಹಾಯಕವಾಗುತ್ತದೆ. ಆದ್ದರಿಂದ ನಾವು ನಮ್ಮ ಗಮನವನ್ನು ಕೇವಲ ಕಲಿಕೆಗೆ ಸೀಮಿತಗೊಳಿಸದೆ ಇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಅದೇ ರೀತಿ ನಾವು ನಮ್ಮ ಸಮಯವನ್ನು ಮೊಬೈಲ್ ಫೋನಿನಲ್ಲಿ ಕಳೆಯಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯವನ್ನು ವ್ಯರ್ಥಗೊಳಿಸಬಾರದು. ಟೈಮ್ಸ್ ಆಫ್ ಇಂಡಿಯಾದ ವರದಿಯಂತೆ ಭಾರತೀಯರು ಸರಾಸರಿ ದಿನಕ್ಕೆ 200 ನಿಮಿಷವನ್ನು ಮೊಬೈಲ್‍ನಲ್ಲಿ ಕಳೆಯುತ್ತಾರೆ.

ಹೆತ್ತವರ ಹಿತ:

ಕಾಲೇಜು ಜೀವನ ನೀವು ಶಾಲೆಗೆ ಹೋಗುವ ವಿದ್ಯಾರ್ಥಿಯಲ್ಲವೆಂಬ ಭಾವನೆ ಮೂಡಿಸುತ್ತದೆ. ನಿಮ್ಮ ಪುಸ್ತಕಗಳು ಭಿನ್ನವಾಗಿರುತ್ತದೆ. ನಿಮ್ಮ ದಾರಿ, ನಿಮ್ಮ ಗೆಳೆಯರು ಕಲಿಕೆ ಹೀಗೆ ಎಲ್ಲವೂ ವಿಭಿನ್ನವಾಗಿರುತ್ತದೆ. ಆದ್ದರಿಂದ ನೀವು ಜಾಗರೂಕರಾಗಿರಬೇಕು. ಹೆತ್ತವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು, ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕು. ಬೆಳಗ್ಗೆ ಬೇಗನೇ ಏಳುತ್ತಾ ಕಾಲೇಜಿಗೆ ತಪ್ಪದೇ ಹೋಗುವುದರೊಂದಿಗೆ ಅವರ ವಿಶ್ವಾಸವನ್ನು ಗಳಿಸಿ ಅವರ ಚಿಂತೆಯನ್ನು ದೂರೀಕರಿಸಬೇಕು. ನೀವು ಕಾಲೇಜಿನಲ್ಲಿ ಕಲಿತ ವಿಷಯಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಿ. ಶಿಕ್ಷಕರನ್ನು ಗೆಳೆಯರನ್ನು ಪರಿಚಯಿಸಿ ಹಾಗೂ ಸದಾ ಕಾಲೇಜಿನಲ್ಲಿ ನಡೆಯುತ್ತಿರುವುದರ ಕುರಿತು ಅವರಿಗೆ ಮಾಹಿತಿ ನೀಡುತ್ತಲಿರಿ.

ಹಾಗಾದರೆ ಹೆತ್ತವರು ಆ ಶಾಲೆಯ ಕುರಿತು ಸಂತೃಪ್ತರಾಗುತ್ತಾರೆ. ನಿಮ್ಮ ಶಿಸ್ತು ನಡವಳಿಕೆ ಅವರ ಚಿಂತೆಯನ್ನು ಹಾಗೂ ಜವಾಬ್ಧಾರಿಯನ್ನು ಕಡಿಮೆಗೊಳಿಸುತ್ತದೆ. ಹೀಗೆ ಅವರನ್ನು ಅರ್ಥ ಮಾಡಿಕೊಂಡು ಅವರ ಭಾರವನ್ನು ಕಡಿಮೆಗೊಳಿಸುವುದು ನೀವು ನಿಮ್ಮ ಹೆತ್ತವರಿಗೆ ನೀಡುವ ಅತ್ಯುತ್ತಮ ಉಡುಗೊರೆ. ಈ ರೀತಿ ಮುಂದುವರಿದರೆ ನಿಮ್ಮ ಯಶಸ್ಸು ಅವರಿಗೆ ಇನ್ನೂ ಹೆಚ್ಚು ಸಂತೋಷ ನೀಡುತ್ತದೆ.

ಮರೆಯಬೇಡಿ:

ನಿಮ್ಮ ಶಾಲಾ ಶಿಕ್ಷಕರೊಂದಿಗೆ ಹಾಗೂ ಸಹಪಾಠಿಗಳೊಂದಿಗೆ ಸದಾ ಸಂಪರ್ಕದಲ್ಲಿರಿ. ಅವರೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಂಡು ಇನ್ನಷ್ಟು ಅವರಿಂದ ಕಲಿಯಲು ಪ್ರಯತ್ನಿಸಿ.

ಸದಾ ಸಂಪರ್ಕದಲ್ಲಿರಿ:

ಕೊನೇಯದಾಗಿ ಸೃಷ್ಟಿಕರ್ತನೊಂದಿಗೆ ಸದಾ ಸಂಪರ್ಕದಲ್ಲಿರಿ. ಖಂಡಿತವಾಗಿಯೂ ಆತನ ಅನುಗ್ರಹಗಳು ಅಪಾರ. ನಾವು ಆತನಿಗೆ ವಿಧೇಯರಾಗಿರಬೇಕೆಂದು, ಆತನ ಎಲ್ಲಾ ಸೃಷ್ಟಿಯೊಂದಿಗೂ ಕರುಣೆ ತೋರಬೇಕೆಂದು ಆತನು ಬಯಸುತ್ತಾನೆ. ಶಿಕ್ಷಣ ಗಳಿಸುವುದರ ಮುಖ್ಯ ಉದ್ದೇಶ ಸೃಷ್ಟಿಕರ್ತನನ್ನು ಅರಿಯುವುದಾಗಿದೆ. ಅದೇ ರೀತಿ ದೇಶದ ಹಾಗೂ ಜನತೆಯ ಮೇಲೆ ತನಗಿರುವ ಜವಾಬ್ಧಾರಿಯನ್ನು ತಿಳಿಯುವುದಾಗಿದೆ.

ಶಾಲಾ ಶಿಕ್ಷಣ ಮುಗಿಯುವುದರೊಂದಿಗೆ ಎಲ್ಲಾ ವಿಷಯಗಳ ಪ್ರಾಥಮಿಕ ಜ್ಞಾನವನ್ನು ಗಳಿಸುತ್ತೇವೆ. ಇನ್ನೂ ಉನ್ನತ ಶಿಕ್ಷಣಕ್ಕೆ ಕಾಲೇಜು ಮೆಟ್ಟಿಲೇರುವುದರೊಂದಿಗೆ ಜ್ಞಾನದ ಮಟ್ಟ ಇನ್ನೂ ವೃದ್ಧಿಸುತ್ತದೆ. ಆಲ್ ದಿ ಬೆಸ್ಟ್, ದೇವನು ಅನುಗ್ರಹಿಸಲಿ.

1 COMMENT

  1. ಧೃಡಚಿತ್ತತೆ, ನಿರ್ಧಿಷ್ಟ ಗುರಿಯೊಂದಿಗೆ ಕಾಲೇಜು ಜೀವನವನ್ನು ಆಲಂಗಿಸಿ- Good advice by great message to the current generation students by Janab Abdullah Javed Sahab…

LEAVE A REPLY

Please enter your comment!
Please enter your name here