• ಇಸ್ಮತ್ ಪಜೀರ್

ಸಾಮಾನ್ಯವಾಗಿ ನಮ್ಮ ಸಮಾಜದಲ್ಲೊಂದು ತಪ್ಪು ಕಲ್ಪನೆಯಿದೆ. “ಮುಸ್ಲಿಮರು ಅವರ ವ್ಯವಸ್ಥೆಯನ್ನು ಪ್ರಶ್ನೆ ಮಾಡುವುದಿಲ್ಲ….” ವಾಸ್ತವವೇನೆಂದರೆ ಮುಸ್ಲಿಮರು ಸಮುದಾಯದ ಧರ್ಮಗುರುಗಳು ಮತ್ತು ಸಮುದಾಯದ ಸಾಮಾಜಿಕ ನಾಯಕರನ್ನು ಪ್ರಶ್ನೆ ಮಾಡುವಷ್ಟು ಜೋರಾಗಿ ಬೇರ್ಯಾವ ಸಮುದಾಯದ ಮಂದಿಯೂ ಅವರ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ನಾಯಕರನ್ನು ಪ್ರಶ್ನೆ ಮಾಡಲಾರರು. ವ್ಯತ್ಯಾಸವಿಷ್ಟೆ… ಮುಸ್ಲಿಮರು ತಮ್ಮ ಧಾರ್ಮಿಕ ನಾಯಕರನ್ನು ಸಮುದಾಯದ ಒಳಗಿದ್ದುಕೊಂಡೇ ಪ್ರಶ್ನೆ ಮಾಡುತ್ತಾರೆ, ಮುಸ್ಲಿಮೇತರರು ಧಾರ್ಮಿಕ ಚೌಕಟ್ಟು ಮೀರಿ ಪ್ರಶ್ನೆ ಮಾಡುತ್ತಾರೆ. ಅವರನ್ನು ಸಮಾಜ ಹೊರಗಿನವರೆಂದು ಪರಿಗಣಿಸುತ್ತದೆ. ಕಳೆದ ವರ್ಷ ನಮ್ಮನ್ನಗಲಿದ ಅಲ್ ಮದೀನಾ ಸಮೂಹ ಸಂಸ್ಥೆಯ ರೂವಾರಿ ಅಬ್ಬಾಸ್ ಉಸ್ತಾದ್ ಎಂಬ ಹಿರಿಯ ಗುರುವರ್ಯರನ್ನು ಅವರ ಶಿಷ್ಯ ವೃಂದದ ಹೊರತಾಗಿ ಅನೇಕ ಮುಸ್ಲಿಮರು ಹೆಜ್ಜೆ ಹೆಜ್ಜೆಗೂ ಟೀಕಿಸುತ್ತಲೇ ಇದ್ದರು. ಆದರೆ ಅವರು ಅವು ಯಾವುದಕ್ಕೂ ಕಿವಿಗೊಡದೇ ತಾನು ಕೈಗೊಂಡ ಮಿಷನನ್ನು ಮುಂದುವರಿಸಿಕೊಂಡೇ ಹೋದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಸ್ಲಾಮೀ ವಿದ್ವಾಂಸರೆಂದರೆ ಕೇರಳಿಗರು ಮಾತ್ರ ಎಂಬಂತಿದ್ದ ಕಾಲದಲ್ಲಿ ಇಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗೈಯಲಾರಂಭಿಸಿದ ಮೊದಲ ಹಂತದ ಕನ್ನಡಿಗ ಧಾರ್ಮಿಕ ವಿದ್ವಾಂಸರಲ್ಲಿ ಅಬ್ಬಾಸ್ ಉಸ್ತಾದ್ ಕೂಡಾ ಒಬ್ಬರು. ಮಲಯಾಳಂ ಮನೆ ಭಾಷೆಯವರಾದರೂ ಅವರ ಹುಟ್ಟೂರು ಮಡಿಕೇರಿ.
ಧಾರ್ಮಿಕ ವಿದ್ವಾಂಸರು ಮಸೀದಿಗೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ ಸಮುದಾಯದ ನೋವಿಗೆ ಧ್ವನಿಯಾಗಲು ರಂಗಕ್ಕಿಳಿದ ಕನ್ನಡ ನಾಡಿನ ಮೊದಲ ಪಂಕ್ತಿಯ ಧಾರ್ಮಿಕ ವಿದ್ವಾಂಸರಲ್ಲಿ ಅಬ್ಬಾಸ್ ಉಸ್ತಾದ್ ಪ್ರಮುಖರು.

ಪ್ರವಾದಿ (ಸ)ರು ಒಮ್ಮೆ ತನ್ನ ತೋರುಬೆರಳು ಮತ್ತು‌‌ ಮಧ್ಯ ಬೆರಳನ್ನು ಎತ್ತಿ ತೋರಿಸಿ ಹೀಗಂದರು. ” ಅನಾಥ ಸಂರಕ್ಷಕ ಮತ್ತು ನಾನು ಸ್ವರ್ಗದಲ್ಲಿ ಈ ಬೆರಳುಗಳಿಗೆಷ್ಟು ಅಂತರವಿದೆಯೋ ಅಷ್ಟೇ ಅಂತರದಲ್ಲಿರುತ್ತೇವೆ”

1994ರ ಕಾಲ. ಆಗ ಕರ್ನಾಟಕ ರಾಜ್ಯದಲ್ಲಿದ್ದದ್ದು ಕೇವಲ ಐದು ಮುಸ್ಲಿಂ ಯತೀಂ ಖಾನಾಗಳು. ಅವುಗಳಲ್ಲಿ‌ ಐದನೆಯದ್ದು ಮಂಗಳೂರಿನ ಝೀನತ್ ಬಕ್ಷ್ ಯತೀಂ ಖಾನಾ.
ಆ ಕಾಲದಲ್ಲಿ ಮಂಗಳೂರು ತಾಲೂಕು ಮತ್ತು ಬಂಟ್ವಾಳ ತಾಲೂಕಿನ ಗಡಿಭಾಗದಲ್ಲಿರುವ ಮಂಜನಾಡಿ ಎಂಬ ಕುಗ್ರಾಮದ ಕಪ್ಪು ಕಲ್ಲುಗಳೇ ತುಂಬಿದ್ದ ಬೋರಲು ಗುಡ್ಡದಲ್ಲಿ ಹನ್ನೊಂದು ಮಕ್ಕಳಿಂದ ಅಬ್ಬಾಸ್ ಉಸ್ತಾದ್ ಯತೀಂ ಖಾನಾ ಸ್ಥಾಪಿಸಿದರು. ಈ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಅವರು ಸಾಕಿ ಸಲಹಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಿದ ಅನಾಥ ಮಕ್ಕಳ ಸಂಖ್ಯೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು. ಸಾಮಾನ್ಯವಾಗಿ ನಮ್ಮ ಸಮಾಜ ಒಂದು‌ ಉಡಾಫೆಯ ಮಾತಾಡುವುದಿದೆ.. “ಅವರೇನೂ ‌ಅವರ ಜೇಬಿನಿಂದ ದುಡ್ಡು ಹಾಕಿ ಯತೀಂ ಖಾನಾ ನಡೆಸಲಿಲ್ಲವಲ್ಲಾ….?” ಹೌದು ಅವರು ಅವರ ಜೇಬಿಂದ ದುಡ್ಡು ಹಾಕಿ ನಡೆಸದಿರಬಹುದು. ಸಮಾಜದ ಉಳ್ಳವರಿಂದಲೂ,ಬಡವರಿಂದಲೂ ಚಂದಾ ಎತ್ತಿಯೇ ಅವರು ಯತೀಂ ಖಾನಾ ಸ್ಥಾಪಿಸಿ ನಡೆಸಿರಬಹುದು. ಹಾಗೆ ಉಳ್ಳವರ ಮನೆ ಬಾಗಿಲು ತಟ್ಟಿ ಅವರಿಂದ ದಾನ ಪಡೆದು ಯತೀಂ ಖಾನಾಗಳನ್ನು ನಡೆಸಲು ಟೀಕಾಕಾರರಿಗೆ ಸಾಧ್ಯವೇ..? ಯಾವುದೇ ಸಮಾಜವಿರಲಿ ಯಾರಾದರೂ ಬಂದು ಒಳ್ಳೆಯ ಕೆಲಸಕ್ಕೆಂದು ಕೇಳಿದ ತಕ್ಷಣ ಎತ್ತಿ ಕೊಡುವುದಿಲ್ಲ. ಹತ್ತಾರು ಬಾರಿ ಅಲ್ಲಿ ಬನ್ನಿ, ಇಲ್ಲಿ ಬನ್ನಿ ಎಂದು ಕರೆಸಿ ಕಾಯಿಸಿದ ಬಳಿಕವೇ ದುಡ್ಡು ಬಿಚ್ಚುವುದು. ಇಸ್ಲಾಮಿನ ರೀತಿ ರಿವಾಜಿನ ಪ್ರಕಾರ ಉಳ್ಳವನ ಸಂಪತ್ತಿನಲ್ಲಿ ಸಮಾಜದ ಪಾಲಿದೆ.‌ ಅಬ್ಬಾಸ್ ಉಸ್ತಾದ್ ಉಳ್ಳವರ ಸಂಪತ್ತಿನ ಬಡವರ ಪಾಲನ್ನು ಕೇಳಿ ಪಡೆದು ಸಮಾಜದ ಅನಾಥರ,ನಿರ್ಗತಿಕ ಕಣ್ಣೀರೊರೆಸುವ ಕೆಲಸ ಮಾಡಿದರು.
ಅಬ್ಬಾಸ್ ಉಸ್ತಾದರಂತಹವರು ಒಂದು ಕಾಲಕ್ಕೆ ಸಮಾಜದ ಉಳ್ಳವರ ಕಿರಿ ಕಿರಿ , ಅಸಡ್ಡೆ ಇವುಗಳನ್ನೆಲ್ಲಾ ಸಹಿಸಿಯೇ ಇಷ್ಟು ದೊಡ್ಡ ಅನಾಥಾಲಯ ಸ್ಥಾಪಿಸಿ ಮುನ್ನಡೆಸಿದ್ದು.
ಧಾರ್ಮಿಕ ಪ್ರವಚನಗಳಿಗೆ ಹೋಗಿ ಅಲ್ಲಿ ಜನಸಾಮಾನ್ಯರಿಂದ ಎರಡು ರೂಪಾಯಿ, ಐದು ರೂಪಾಯಿ, ಹತ್ತು ರೂಪಾಯಿಯೆಂದು ದುಡ್ಡು ಸಂಗ್ರಹಿಸಿ ತಂದು ಸಂಸ್ಥೆಯನ್ನು ಕಟ್ಟಿದರು.
ಹಂತ ಹಂತವಾಗಿ ಮದ್ರಸಾದ ಜೊತೆ ಜೊತೆಗೆ ಶಾಲೆ ಕಾಲೇಜು, ಶರೀಅತ್ ಕಾಲೇಜು ಸ್ಥಾಪಿಸಿದರು. ತನ್ನ ಸಂಸ್ಥೆಯಾದ ಅಲ್-ಮದೀನಾದ ಕ್ಯಾಂಪಸನ್ನು ಇಪ್ಪತ್ತು ಸೆಂಟ್ಸ್ ನಿಂದ ಇಪ್ಪತ್ತೈದು ಎಕರೆಯವರೆಗೆ ವಿಸ್ತರಿಸಿದರು. ಅದರ ಆದಾಯಕ್ಕಾಗಿ ಕಮ್ಯೂನಿಟಿ ಹಾಲ್ ಒಂದನ್ನು ಕಟ್ಟಿದಾಗ ಇವರು ವ್ಯಾಪಾರ ಮಾಡುತ್ತಿದ್ದಾರೆಂದು ಸಮಾಜ ಅವರ ಮೇಲೆ ಟೀಕೆಯ ಸುರಿಮಳೆಯನ್ನೇ ಸುರಿಸಿತ್ತು. ಉಸ್ತಾದ್ ಯಾವುದಕ್ಕೂ ತಲೆ ಕೆಡಿಸಲಿಲ್ಲ. ಹೌದು ಎಷ್ಟು ಕಾಲವೆಂದು ಉಳ್ಳವರ ಬಾಗಿಲು ತಟ್ಟಬಹುದು, ಅವರಿಂದ ಸಿಕ್ಕ ದುಡ್ಡಲ್ಲಿ ಎಷ್ಟೆಂದು ಈ ಬೃಹತ್ ಸಂಸ್ಥೆ ದಿನ ದೂಡಬಹುದು…?ಅದಕ್ಕೆ ಅದರದ್ದೇ ಆದ ಒಂದು ಶಾಶ್ವತ ಆದಾಯ ಮೂಲಕ್ಕೆಂದು ಅವರು ಅಲ್-ಮದೀನಾ ಕಮ್ಯೂನಿಟಿ ಹಾಲ್ ಕಟ್ಟಿದರು. ಅಲ್-ಮದೀನಾ ಸಮೂಹ ಸಂಸ್ಥೆಯು ಇಂದು ಅಬ್ಬಾಸ್ ಉಸ್ತಾದರದ್ದೇ ಹೆಸರಲ್ಲಿರಬಹುದು, ನಾಳೆ ಅದು ಅವರ ಮಕ್ಕಳ ಹೆಸರಿಗೆ ವರ್ಗಾವಣೆಯಾಗಬಹುದು. ಆದರೆ ಅವರು ಎಂದೂ ಅಲ್ಲಿನ ಸಮಾಜ ಸೇವಾ ಕೆಲಸವನ್ನು ನಿಲ್ಲಿಸುವುದಿಲ್ಲ, ಯತೀಂ ಖಾನಾವನ್ನು ಬಂದ್ ಮಾಡುವುದಿಲ್ಲ.‌ಅದು ಸದಾ ಕಾಲ ಅನಾಥ ಮಕ್ಕಳ ಪಾಲಿಗೆ ಆಶ್ರಯತಾಣವಾಗಿಯೇ ಉಳಿಯುತ್ತದೆ.

ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳಕೊಂಡು ಉಡಲು, ಉಣ್ಣಲು ಗತಿಯಿಲ್ಲದೇ ಶಿಕ್ಷಣ ವಂಚಿತರಾಗುವ ಮಕ್ಕಳನ್ನು ಗುರುತಿಸಿ ತಂದು ಅವರಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿಸುವ ಕೆಲಸವನ್ನು ಅಬ್ಬಾಸ್ ಉಸ್ತಾದ್ ಕಳೆದ ಇಪ್ಪತ್ತೈದು ವರ್ಷಗಳಿಂದ ಮಾಡಿದರು.‌ಅವರ ಸಂಸ್ಥೆಯಲ್ಲಿ ಕಲಿತ ಮಕ್ಕಳು ಇಂದು ಅದೆಷ್ಟೋ ಉನ್ನತ ಹುದ್ದೆಗಳಲ್ಲಿದ್ದಾರೆ. ಎಳೆಯ ಪ್ರಾಯದಲ್ಲಿ ಸಂಸಾರದ ನೊಗ ಹೊರಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಯತೀಂ ಮಕ್ಕಳನ್ನು ಕರೆತಂದು ಸಾಕಿ ಸಲಹಿ ಉಚಿತವಾಗಿ ಊಟ, ಬಟ್ಟೆ, ವಾಸ್ತವ್ಯ ಧಾರ್ಮಿಕ. ಮತ್ತು ಲೌಕಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣ ನೀಡಿ ಅವರನ್ನು ಉನ್ನತ ಹುದ್ದೆಗಳಿಗೆ ಏರಿಸಿ ಅವರ ಬದುಕನ್ನು ಹಸನುಗೊಳಿಸುವ ಕೆಲಸವನ್ನು ಉಸ್ತಾದ್ ಮಾಡಿದರು.

ವರದಕ್ಷಿಣೆಯ ಉಪಟಳದಿಂದ ವಯಸ್ಸು ಮೀರಿಯೂ ಮದುವೆಯೆಂಬುವುದು ಕನಸೇ ಆಗಿದ್ದ ಐನೂರಕ್ಕೂ ಮಿಕ್ಕಿದ ಬಡ ಮತ್ತು ಅನಾಥ ಹೆಣ್ಮಕ್ಕಳಿಗೆ ವಿವಾಹ ಮಾಡಿಸಿ ಕೊಟ್ಟು ಅವರ ಕಣ್ಣೀರೊರೆಸುತ್ತಾ ಬಂದರು. ಪ್ರತೀ ವರ್ಷವೂ ಇಪ್ಪತ್ತೈದು ಬಡ ಹೆಣ್ಮಕ್ಕಳ ಮದುವೆ ಮಾಡಿಸುವುದನ್ನು ತನ್ನ ಕರ್ತವ್ಯ ಎಂಬಂತೆ ಮಾಡುತ್ತಾ ಬಂದರು.ಚಿನ್ನದ ಬೆಲೆ ಗಗನಕ್ಕೇರಿದ ಈ ಕಾಲದಲ್ಲೂ ಪ್ರತೀ ಹೆಣ್ಣಿಗೂ ಐದು ಪವನ್ ಚಿನ್ನ , ಬಟ್ಟೆ ಬರೆ , ಮದುವೆ ಗಂಡಿಗೆ ಒಳ್ಳೆಯ ಕ್ರಯದ ಕೈಗಡಿಯಾರ ಮತ್ತು ಆತನ ಬಟ್ಟೆ ಬರೆ ಮತ್ತಿತ್ಯಾದಿ ಖರ್ಚಿಗೆಂದು ದುಡ್ಡು ಇವೆಲ್ಲವವನ್ನೂ ನೀಡಿ ಮದುವೆ ಮಾಡಿಸುವುದೆಂದರೆ ಅದೇನೂ ಸುಲಭದ ಕೆಲಸವಲ್ಲ.

ಇವುಗಳಿಗೆಲ್ಲಾ ಮೀರುತ್ತಿರುವ ವಯಸ್ಸು ಮತ್ತು ಕೈ ಕೊಡುತ್ತಿರುವ ಆರೋಗ್ಯವನ್ನೂ ಲೆಕ್ಕಿಸದೇ ಕಾಲಿಗೆ ಚಕ್ರ ಕಟ್ಟಿ ಕೊಂಡವರಂತೆ ದೇಶ ವಿದೇಶಗಳಲ್ಲಿ ತಿರುಗಾಡಿ ಚಂದಾ ಸಂಗ್ರಹಿಸಿದರು, ದಣಿವರಿಯದೇ ದುಡಿದರು.
ಉಳ್ಳವರು ಕೊಡುತ್ತಾರಾದರೂ ಅದಕ್ಕಾಗಿ ಊರೂರು ಅಲೆದಾಡಿ ಸಂಗ್ರಹಿಸಿ ಅದನ್ನು ಸಾಕಾರಗೊಳಿಸುವುದರ ಹಿಂದಿನ ಶ್ರಮ ಅದನ್ನು ಮಾಡಿದವರಿಗೇ ಗೊತ್ತು. ಅಂದ ಮಾತ್ರಕ್ಕೆ ಅವರು ಎಲ್ಲಕ್ಕೂ ಉಳ್ಳವರ ಕಡೆ ನೋಡಲಿಲ್ಲ. ಕಮ್ಯೂನಿಟಿ ಹಾಲ್ ನಿಂದ ಬಂದ ಬಾಡಿಗೆ ದುಡ್ಡನ್ನು ಧಾರಾಳವಾಗಿ ವ್ಯಯಿಸಿದರು. ಸಮಾಜದ ನೊಂದವರ ಕಣ್ಣೀರೊರೆಸಲು ಆರ್ಥಿಕ ಚೈತನ್ಯವಿಲ್ಲದವರಿಗೂ ಆಶೆಯಿರುತ್ತದೆ. ಅಂತವರ ಮನೆಗಳಿಗೆ ಸಂಸ್ಥೆಯ ಡಬ್ಬಿ ಕೊಟ್ಟರು. ಅವರು ಅವರ ಶಕ್ತ್ಯಾನುಸಾರ ಚಿಲ್ಲರೆ ದುಡ್ಡನ್ನು ಪ್ರತೀದಿನ ಹಾಕಿ ವರ್ಷಕ್ಕೆ ಒಂದು ಒಳ್ಳೆಯ ಮೊತ್ತ ಕೂಡಿ ಕೊಡುತ್ತಾರೆ.
ಸಾಮಾನ್ಯವಾಗಿ ಮುಸ್ಲಿಂ ಧಾರ್ಮಿಕ ಸಂಸ್ಥೆಗಳು ಕ್ಯಾಲೆಂಡರ್ ಅಚ್ಚು ಹಾಕಿಸಿ ಮಾರುತ್ತವೆ. ಅವನ್ನು ಅನೇಕರು ಟೀಕಿಸುವುದಿದೆ. ಅಲ್-ಮದೀನಾ ಅಚ್ಚು ಹಾಕಿಸಿದ ಕ್ಯಾಲೆಂಡರ್ ಗಳನ್ನು ಅಲ್ಲಿನ ಯತೀಂ ಖಾನಾದ ಮಕ್ಕಳು ಮಾರಾಟ ಮಾಡುತ್ತಾರೆ. ಅದರಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಆ ಮಕ್ಕಳಿಗೆ ಪಾಕೆಟ್ ಮನಿಯಾಗಿಯೂ ಉಸ್ತಾದ್ ನೀಡುತ್ತಿದ್ದರು.

ಇಂದು ಕಡು ಬಡವರೂ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲೇ ಶಿಕ್ಷಣ ನೀಡಲು ಕನಸು ಕಾಣುತ್ತಾರೆ.‌ಆದರೆ ಇಂದಿನ ವಾಣಿಜ್ಯೀಕೃತ ಶಿಕ್ಷಣ ವ್ಯವಸ್ಥೆಯಲ್ಲಿ ಅವರಿಗದು ಕೈ ಗೆಟಕದ್ದನ್ನು ಮನಗಂಡು ಅಬ್ಬಾಸ್ ಉಸ್ತಾದ್ ತನ್ನ ಅಲ್-ಮದೀನಾ ಕ್ಯಾಂಪಸನಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನೂ ಪ್ರಾರಂಭಿಸಿ ಕನಿಷ್ಠ ಶುಲ್ಕದಲ್ಲಿ ಬಡವರ ಮಕ್ಕಳ ಆಂಗ್ಲ ಶಿಕ್ಷಣದ ಕನಸನ್ನೂ ಸಾಕಾರಗೊಳಿಸುತ್ತಾ ಬಂದರು.

ಧಾರ್ಮಿಕ ವಿದ್ವಾಂಸರು ಏನೇ ಮಾಡಿದರೂ ವ್ಯಾಪಾರ ಮಾಡುತ್ತಿದ್ದಾರೆ ಎಂದು ಅನೇಕರು ಟೀಕಿಸುತ್ತಿರುತ್ತಾರೆ.. ಹಾಗೆ ಟೀಕಿಸುತ್ತಿದ್ದವರಲ್ಲಿ ನಾನೂ ಒಬ್ಬ..
ಟೀಕಾಕಾರರಲ್ಲಿ ನನ್ನದೊಂದು ಪ್ರಶ್ನೆ “ಯಾವ ವ್ಯಾಪಾರಿ ಈ ವರೆಗೆ ಸ್ವಯಂ ಆಗಿ ಒಂದು ಯತೀಂ ಖಾನಾ ನಡೆಸಿದ್ದಾನೆ…? ಯಾವ ವ್ಯಾಪಾರಿ ಈ ವರೆಗೆ ಐನೂರು ಬಡ ಹೆಣ್ಮಕ್ಕಳ ಮದುವೆ ಮಾಡಿದ್ದಾನೆ…?
ಯಾರೂ‌ ಟೀಕೆಗೆ ಅತೀತರಲ್ಲ ಎಂಬುವುದನ್ನು ಒಪ್ಪುತ್ತೇನೆ. ಅಬ್ಬಾಸ್ ಉಸ್ತಾದರಂತಹ ವಿದ್ವಾಂಸರಿಗೆ ಸಹಸ್ರಾರು ಯತೀಂ ಗಳ ಪ್ರಾರ್ಥನೆಯಿದೆ… ಸಾವಿರಾರು ಬಡ ಹೆಣ್ಣು ಮಕ್ಕಳ, ಹೆಣ್ಣು ಹೆತ್ತವರ ಪ್ರಾರ್ಥನೆಯಿದೆ…. ಟೀಕಿಸುವ ನಮಗೆ ನೊಂದವರ ಪ್ರಾರ್ಥನೆಯಿದೆಯೇ….?

ಹೀಗೆ ತನ್ನ ಬದುಕಿನುದ್ದಕ್ಕೂ ಟೀಕೆ, ವಿಮರ್ಶೆ ಇತ್ಯಾದಿಗಳನ್ನೆದುರಿಸುತ್ತಲೇ ಸಮಾಜದ ಶ್ರೇಯೋಭಿವೃದ್ಧಿಗಾಗಿ ದುಡಿದ ಅಬ್ಬಾಸ್ ಉಸ್ತಾದರು ಕರ್ನಾಟಕದಲ್ಲಿ ಒಂದು ವಿಧದ ಶೈಕ್ಷಣಿಕ ಕ್ರಾಂತಿಯನ್ನೇ ಹುಟ್ಟು ಹಾಕಿದರು. ಸಮಾಜ ಸೇವೆಗೆ ಒಂದು ಉನ್ನತ ಮೇಲ್ಪಂಕ್ತಿಯನ್ನು ಮುಸ್ಲಿಂ ಸಮಾಜಕ್ಕೆ ತೋರಿಸಿ ಬದುಕಿಗೆ ವಿದಾಯ ಹೇಳಿದ ಉಸ್ತಾದರ ಹೆಸರು ಸೂರ್ಯ ಚಂದ್ರರಿರುವರೆಗೆ ಅಜರಾಮರವಾಗಿರುತ್ತದೆ

LEAVE A REPLY

Please enter your comment!
Please enter your name here