• ಹಕೀಮ್ ತೀರ್ಥಹಳ್ಳಿ (ಸಂಶೋಧನಾ ವಿದ್ಯಾರ್ಥಿ)

ಎಲ್ಲರಿಗೂ ತಿಳಿದ ಹಾಗೆ ಕೊರೊನಾ ಕಾರಣಕ್ಕೆ 2020 ಎನ್ನುವುದು ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ ವರ್ಷ. ಇದೇ ಕಾರಣಕ್ಕೆ ಭಾರತದಾದ್ಯಂತ 24-03-2020 ರ ಸಂಜೆಯಿಂದ 21 ದಿನಗಳ‌ ಕಾಲ ಲಾಕ್ಡೌನ್ ಘೋಷಿಸಲಾಯಿತು. ನಂತರ ಇದನ್ನು ವಿಸ್ತರಿಸಲಾಯಿತು. ಅಲ್ಲಿಂದ ಪ್ರಾರಂಭವಾದ ಕರಾಳ ದಿನ‌ ಇಲ್ಲಿಯವರೆಗೆ ವಿಸ್ತರಿಸಿಕೊಂಡೇ ಬಂದಿದೆ. ಕರೋನಕ್ಕೆ ಬೇಕಾದ ಪರಿಹಾರ ಮಾರ್ಗವನ್ನು ಕಂಡುಹಿಡಿದು ಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಇದೇ ಸಮಯದಲ್ಲಿ ತಮ್ಮ ಹಳ್ಳಿಯನ್ನು ಬಿಟ್ಟು ಉದ್ಯೋಗವನ್ನು ಅರಸಿ ಪೇಟೆಯನ್ನು ಸೇರಿದ್ದ ಜನರು ತಮ್ಮ ಉದ್ಯೋಗ ಕಳೆದುಕೊಂಡು ಇನ್ನೂ ಕೆಲವರು ಉದ್ಯಮ ನಷ್ಟಗೊಂಡು ಮತ್ತಷ್ಟು ಯುವಜನತೆ ವರ್ಕ್ ಫ್ರಮ್ ಹೋಮ್ ಎಂದು ತಮ್ಮ ತಮ್ಮ ಮನೆಕಡೆ ಮುಖ ಮಾಡಿದರು. ಈ ಸಮಯದಲ್ಲಿ ಅನೇಕರಿಗೆ ಮರುಹುಟ್ಟು ನೀಡಿದ್ದು ಕೃಷಿ.
ಹೇಳಿ ಕೇಳಿ ನಮ್ಮ ದೇಶವು ಕೃಷಿ ಪ್ರಧಾನವಾದ ದೇಶ. ನಮ್ಮ ಇತಿಹಾಸ ಹೇಳುವಂತೆ ಭಾರತದಲ್ಲಿ ಕೃಷಿಯ ಇತಿಹಾಸ ಋಗ್ವೇದ ಕಾಲದಷ್ಟು ಹಳೆಯದು. ಹಾಗೆಯೇ ಇಂದು ಭಾರತ ಕೃಷಿ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಕೃಷಿಗೆ ಭಾರತದ ಅರ್ಥ ವ್ಯವಸ್ಥೆಯಲ್ಲಿ ಬಹಳ ಮಹತ್ವದ ಸ್ಥಾನವಿದೆ. ಬಹಳಷ್ಟು ಭಾರತೀಯರು ಕೃಷಿಯನ್ನು ತಮ್ಮ ಜೀವನದ ಉಸಿರನ್ನಾಗಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಸರ್ಕಾರ ರಾಷ್ಟ್ರಕವಿ ಕುವೆಂಪು ಅವರ ನೇಗಿಲಯೋಗಿ ಹಾಡನ್ನು ನಾಡಗೀತೆಯ ಮಟ್ಟಕ್ಕೆ ಏರಿಸಿದೆ.
ಹೀಗೆ ಲಾಕ್ಡೌನ್ ಕಾರಣಕ್ಕೆ ಮನೆಯನ್ನು ಸೇರಿಕೊಂಡವರ ಸಾಲಿನಲ್ಲಿ ನಾನು ಸೇರುತ್ತೇನೆ. ಇದಕ್ಕೆ ಹಿಂದೆ ನಾನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರವಾದ ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿಯಲ್ಲಿ ವಿದ್ಯಾಭ್ಯಾಸ ಮಾಡಿತ್ತಿದ್ದೆ. ಲಾಕ್ಡೌನ್ ಕಾರಣಕ್ಕೆ ಅಧ್ಯಯನ ಕೇಂದ್ರ ಮುಚ್ಚಿದ್ದರಿಂದ ನಾನು ಮನೆಯನ್ನು ಸೇರಿಕೊಂಡೆ. ದಿನವಿಡೀ ಮನೆಯಲ್ಲಿ ಕಾಲ ಕಳೆಯಲು ಕಷ್ಟವಾಗುತ್ತಿತ್ತು. ಸ್ವಲ್ಪ ಓದು, ಒಂದಷ್ಟು ಹೊತ್ತು ಗೆಳೆಯರೊಂದಿಗೆ ಆಟ, ಹೆಚ್ಚೆಂದರೆ ವಾರಕ್ಕೊಂದು ಸಿನಿಮಾ ಇಷ್ಟವಿಲ್ಲದಿದ್ದರೂ ಕಾಲ ಕಳೆಯಲು ನೋಡುತ್ತಿದ್ದೆ. ಆಗ ನನ್ನ ಗೆಳೆಯರೆಲ್ಲಾ ಹೊಲದಲ್ಲಿ ಕೆಲಸ ಮಾಡುವ ಪಟವನ್ನು ಹಂಚಿಕೊಳ್ಳುತ್ತಿದ್ದರು. ಆಗ ಏನಾದರೂ ಕೃಷಿ ಮಾಡುವ ಆಸೆ ನನಗೂ ಹುಟ್ಟಿತು. ಇದನ್ನು ನನ್ನ ತಮ್ಮ (ಸೊಹೈಲ್) ನ‌ ಬಳಿ ಹಂಚಿಕೊಂಡೆ. ಅವನು ಇಂತಹ ವಿಷಯದಲ್ಲಿ ನನಗಿಂತಲೂ ಉತ್ಸಾಹಿ. ಆದರೆ ನಮಗೆ ಮನೆಕಟ್ಟಿಕೊಳ್ಳಲು ಇರುವ ಜಾಗಬಿಟ್ಟು ಬೇರೆಲ್ಲೂ ಒಂದಿಂಚೂ ಜಾಗವಿಲ್ಲ. ಹಿಂದೊಮ್ಮೆ ನನ್ನ ಅಜ್ಜ ಕೆಲವಷ್ಟು ಜಾಗಕ್ಕೆ ಬೇಲಿ ಹಾಕಿದ್ದರಂತೆ. ಆ ಕಾರಣಕ್ಕೆ ಅವರನ್ನು ಬಂಧಿಸಿ ಒಂದು ದಿನ ಜೈಲಿನಲ್ಲಿಟ್ಟದ್ದರಂತೆ. ಮುಂದೆಯೂ ಆಗ ಹಾಕಿದ ಬೇಲಿಯ ಜಾಗ ನಮಗೆ ದೊರೆಯಲಿಲ್ಲ. ನಂತರ ಆ ಭೂಮಿ‌ ಉಳ್ಳವರ ಪಾಲಾಯಿತು. ಈಗ ಆ ಜಾಗದಲ್ಲಿ ಸಮೃದ್ಧವಾದ ಅಡಿಕೆ ಮರ ಬೆಳೆದು ನಿಂತಿದೆ. ನಾನು ತಿಳಿದು ಕೊಂಡಂತೆ ಕಾಗೋಡು ಚಳುವಳಿ ಒಂದು ಸೈದ್ದಾಂತಿಕ ಹೋರಾಟ. ಅದು ಮುಂದೆ ಉಳುವವನೆ ಹೊಲದೊಡೆಯ ಎಂಬ ಕಾನೂನು ಜಾರಿಯಾಗಲು ಪ್ರೇರಣೆಯಾಯಿತು. ಈ‌ ಕಾಲದಲ್ಲೂ ಭೂಮಿಯ ಹಕ್ಕು ಪಡೆಯಲು ನಮ್ಮ ಕುಟುಂಬಕ್ಕೆ ‌ಸಾಧ್ಯವಾಗಿಲ್ಲ. ಹೆಚ್ಚೆಂದರೆ ಹಕ್ಕು ಪತ್ರ ಪಡೆಯಲೂ ಸಾಧ್ಯವಾಗಿಲ್ಲ. ಇನ್ನೂ ನನಗೆ ನೆನಪಿರುವಂತೆ ನಮ್ಮ‌ ಕುಟುಂಬ ಬೇರೆಯವರ ಹೊಲದಲ್ಲಿ ಕೃಷಿ ಮಾಡಿ ಅದಕ್ಕೆ ಪ್ರತಿಯಾಗಿ ಭೂಮಿ ಕೊಟ್ಟವರಿಗೆ ಬಂದ ಬೆಳೆಯಲ್ಲಿ ಸ್ವಲ್ಪ ಪಾಲನ್ನು ಕೊಡುತ್ತಿದ್ದರು. ಆದರೆ ಅಂದಿನಿಂದ ಇಂದಿನವರೆಗೆ ನಮಗೆ ಕೃಷಿ ಮಾಡಲು ಭೂಮಿ ಮಾಡಿಕೊಳ್ಳಲಾಗಲಿ, ಖರೀದಿಸಲಾಗಲಿ ಸಾಧ್ಯವಾಗಿಲ್ಲ.
ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ.
ಈ ಲಾಕ್ಡೌನ್ ಸಮಯದಲ್ಲಿ ಕೃಷಿ ಮಾಡಬೇಕೆಂಬ ಆಸೆ ಹುಟ್ಟಿತ್ತಲ್ಲಾ ಅದಕ್ಕೆ ಒಂದಷ್ಟು ಭೂಮಿ ಹುಡುಕಲು ಪ್ರಾರಂಭಿಸಿದೆ. ಅದರಂತೆ ನಮ್ಮ ಸಂಬಂಧಿಕರ ತೋಟದಲ್ಲಿ ಅಡಿಕೆ ಸಸಿ ನೆಟ್ಟಿರುವ ಜಾಗದ ಮಧ್ಯದಲ್ಲಿ ಒಂದಷ್ಟು ಖಾಲಿ ಜಾಗವಿರುವುದು ತಿಳಿಯಿತು. ಅಲ್ಲಿ ಏನನ್ನು ನೆಡುವುದು ಎಂಬ ಚಿಂತೆಯೂ ಹುಟ್ಟಿತು. ನಮಗೆ ಎರಡು ಆಯ್ಕೆ ಇತ್ತು. ಒಂದೋ ಬಾಳೆ ಗಿಡ ನೆಡುವುದು ಇನ್ನೊಂದು ಶುಂಠಿ ಹಾಕುವುದು. ನನ್ನ ಅಪ್ಪನ ಬಳಿ ವಿಚಾರಿಸಿದಾಗ ನೀವು ಬಾಳೆ ಗಿಡ ನೆಡಿ ಎಂದರು. ಅಲ್ಲಿಂದ ಶುರುವಾಯಿತು ನೋಡಿ ನಮ್ಮ ಬಾಳೆ ಕೃಷಿ. ಈ ಬೆಳೆಯನ್ನು ವರ್ಷವಿಡೀ ಯಾವಾಗ ಬೇಕಾದರೂ ಬೆಳೆಯ ಬಹುದೆಂದು ತಿಳಿದಿತ್ತು. ಹಾಗೆಯೇ ಇದು ಇಳುವರಿ ನೀಡಲು 13 ತಿಂಗಳು ತೆಗೆದು ಕೊಳ್ಳುತ್ತದೆ ಎಂಬುದನ್ನು ಅರಿತಿದ್ದೆ‌. ಮೊದಲೇ ನಮ್ಮ ತೀರ್ಮಾನದಂತೆ ನಾವಿಬ್ಬರೇ ಈ ಕೃಷಿ ಮಾಡಬೇಕೆಂದು ಆಲೋಚನೆ ಮಾಡಿದ್ದೆವು. ಅದರಂತೆ ಬಾಳೆಯಲ್ಲಿ‌ ಹಲವಾರು ವಿಧ ಇರುವುದರಿಂದ ನಾವು ಏಲಕ್ಕಿ ಬಾಳೆ (ಪುಟ್ಟಬಾಳೆ) ನೆಡಲು ಆರಿಸಿಕೊಂಡವೆ. ಹಾಗೆಯೇ ತೋಟದಲ್ಲಿ ಅಡಿಕೆ ಸಸಿಯ ನಡುವೆ ಸುಮಾರು ಎರಡುವರೆ ಅಡಿ ಆಳದಷ್ಟು 180 ಗುಂಡಿಗಳನ್ನು ತೋಡಿದೆವು. ಇದಕ್ಕೆ ಬೇಕಾದ ಬಾಳೆ ಕಂದುಗಳನ್ನು ಬೇರೆಯವರ ತೋಟದಿಂದ ತರಬೇಕಿತ್ತು. ಅವರ ಗಿಡಗಳಿಗೆ ತೊಂದರೆ ಆಗದಂತೆ ಕಂದುಗಳನ್ನು ಕೀಳಬೇಕಿತ್ತು. ಇದಕ್ಕೆ ನನ್ನ ತಂದೆಯ ಸಹಾಯ ಪಡೆದೆ. ನಂತರ ಅದನ್ನು ತೋಟಕ್ಕೆ ತಂದು ಅದರಲ್ಲಿದ್ದ ಬೇರುಗಳನ್ನು ಕತ್ತರಿಸಿ ಕೆಲವನ್ನು ಎಲ್ಲಾ ಗಿಡಗಳನ್ನು ನೆಡುವಂತೆ ನೆಟ್ಟೆವು. ಇನ್ನೂ ಕೆಲವು ಬಾಳೆ ಕಂದನ್ನು ಗುಂಡಿಯ ಒಳಗೆ ಹಾಕಿ ಮುಚ್ಚಿದೆವು. ಎರಡೂ ರೀತಿಯ ಪ್ರಯೋಗವು ಯಶಸ್ವಿಯಾಯಿತು. ಸ್ವಲ್ಪ ಗಿಡ ಚಿಗುರಿದ ಮೇಲೆ ಒಂದು ಬಾರಿ ಗೊಬ್ಬರ ಕೊಟ್ಟೆವು. ನಂತರ ಗಿಡ ಅಳೆತ್ತರಕ್ಕೆ ಬಂದಾಗ ಮತ್ತೊಮ್ಮೆ ಗೊಬ್ಬರ ಕೊಟ್ಟು ಬುಡಕ್ಕೆ ಮಣ್ಣು ಏರಿಸಿದೆವು. ಬಾಳೆ ಗಿಡ ನೆಟ್ಟ ಸುಮಾರು 11 ತಿಂಗಳ ನಂತರ ಬಾಳೆ ಗೊನೆಹಾಕಲು ಪ್ರಾರಂಭಿಸಿತು. ಈಗ ಗಾಳಿಯಲ್ಲಿ ಬಾಳೆಗಿಡ ಬೀಳದಂತೆ ಮರದಿಂದ ಮರಕ್ಕೆ ಗಟ್ಟಿಯಾದ ಹಗ್ಗದಲ್ಲಿ ಬಿಗಿದು ಕಟ್ಟಿದ್ದೇವೆ. ಇದುವರೆಗೂ ಒಂದೇ ಒಂದು ಗಿಡಕ್ಕೆ ಏನು ತೊಂದರೆ ಆಗಿಲ್ಲ. ಅದರಂತೆ ನಮ್ಮ ಕನಸಿನಂತೆ ಈಗ ಬಾಳೆಗೊನೆ ಕಟಾವಿಗೂ ಬಂದಿದೆ. ನಮ್ಮ‌ ಮನಸ್ಸಿನಲ್ಲಿ ಅದೇನೋ ಸಾಧಿಸಿದ ಹಾಗೆ ಸಂತಸ ಉಂಟಾಗಿದೆ. ಜೊತೆಯಲ್ಲಿ ಮನಸ್ಸಿಗೂ ನೆಮ್ಮದಿ. ಆದರೆ ಈಗಲೂ ಲಾಕ್ಡೌನ್ ಮುಂದುವರೆದಿದೆ. ಬೆಲೆ ಸಿಗದಿದ್ದರೆ ಅದನ್ನು ಉಚಿತವಾಗಿ ಹಂಚುವ ತೀರ್ಮಾನ ನಮ್ಮದು. ಖುಷಿಗಾಗಿ ಮಾಡಿದ ಕೃಷಿಯಾದ್ದರಿಂದ ಈ ತೀರ್ಮಾನವಷ್ಟೇ. ಆದರೆ ನಮ್ಮ ದೇಶದ ರೈತರ ಕೃಷಿಗೆ ಸೂಕ್ತ ಬೆಂಬಲ ಬೆಲೆ ಸಿಗಲೇ ಬೇಕು ಎನ್ನುವುದು ನನ್ನ ಅತ್ಯಂತ ಗಟ್ಟಿಯಾದ ಕೂಗು.

LEAVE A REPLY

Please enter your comment!
Please enter your name here