ಚರಣ್ ಐವರ್ನಾಡು

ಕರ್ನಾಟಕದ ಕರಾವಳಿಯ ಭಾಗವಾದ ಅವಿಭಜಿತ ದಕ್ಷಿಣ ಕನ್ನಡ ಅರ್ಥಾತ್ ತುಳುನಾಡು ಅನನ್ಯವಾದ ಸಂಸ್ಕೃತಿ, ಚರಿತ್ರೆಯನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಇಲ್ಲಿರುವಷ್ಟು ಭಾಷಾ ವೈವಿಧ್ಯ, ಜನಾಂಗ ವೈವಿಧ್ಯ, ಆಚಾರ – ವಿಚಾರಗಳು, ಸಂಪ್ರದಾಯಗಳು ಇತರೆಡೆಗಿಂತ ತೀರಾ ಭಿನ್ನ. ನಾನಾಧರ್ಮ ಹಾಗೂ ಜಾತಿಗಳು, ಅವುಗಳಲ್ಲಿನ ಉಪಜಾತಿಗಳು – ಇವೆಲ್ಲವಕ್ಕೂ ಸೇರಿದ ಜನ ಸೌಹಾರ್ದಯುತವಾಗಿ ಬಾಳುತ್ತಿರುವುದು ಕಾಣುತ್ತಿವೆ.

ಬಹಳಷ್ಟು ಹಿಂದೆಯೇ ಬ್ರಾಹ್ಮಣ, ಜೈನರು, ಬೌದ್ಧರು ಹಾಗೂ ಇತರರು ಈ ಮಣ್ಣಿಗೆ ಬಂದಾಗ ಇಲ್ಲಿನ ಮೂಲ ನಿವಾಸಿಗಳು ತೆರೆದ ಮನಸ್ಸಿನಿಂದ ಸ್ವಾಗತಿಸಿದರು. ಕ್ರೈಸ್ತರು ಹಾಗೂ ಮುಸಲ್ಮಾನರು ಬಂದಾಗಲೂ ಉದಾರವಾಗಿ ಸ್ವಾಗತಿಸಿದರು. ಪ್ರಸ್ತುತ ಲೇಖನದಲ್ಲಿ ಅನ್ಯಧರ್ಮವೊಂದು ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆತುಹೋದ ಉದಾಹರಣೆಗಳನ್ನು ನೀಡಿದ್ದೇನೆ.

ಭಾರತದ ಇತರ ಭಾಗಗಳಿಗಿಂತ ತುಳುನಾಡಿನ ಮುಸಲ್ಮಾನರು ತೀರಾ ಭಿನ್ನ. ಅವರಿಗೆ ಪ್ರತ್ಯೇಕ ಭಾಷೆ ಇದೆ! ಸಂಸ್ಕೃತಿ ಇದೆ! ಇವರಿಗೆ ಬ್ಯಾರಿಗಳು ಎಂಬ ಅನ್ವರ್ಥನಾಮವಿದೆ. ಪ್ರಪಂಚದ ಇತರ ಭಾಗಗಳಿಗೆ ಅತಿಕ್ರಮಣ ಪ್ರವೃತ್ತಿಯೊಂದಿಗೆ ಇಸ್ಲಾಂ ಹೊಕ್ಕಿದ್ದು ಇತಿಹಾಸದಿಂದ ವೇದ್ಯವಾದ ಸಂಗತಿ. ಆದರೆ ತುಳುನಾಡಿಗೆ ಕ್ರಿಸ್ತಪೂರ್ವದಿಂದಲೇ ವ್ಯಾಪಾರದ ಉದ್ದೇಶದಿಂದ ಬಂದಿದ್ದರು. ಇಲ್ಲಿಯ ಜನರೊಂದಿಗೆ ಬೆರೆತು ಹೋದರು. ಇದರ ಛಾಯೆ ತುಳುವರ ಸಂಸ್ಕೃತಿಯಲಿ ಗೋಚರಿಸುತ್ತದೆ.

14ನೇ ಶತಮಾನದಲ್ಲಿ ದಕ್ಷಿಣ ಭಾರತಕ್ಕೆ ಬಂದ ಇಬನ್ ಬತೂತ ಎಂಬ ಮುಸ್ಲಿಂ ಪ್ರವಾಸಿ ಈ ದೇಶದ ಹಿಂದುಗಳು ಮುಸಲ್ಮಾನರನ್ನು ಗೌರವಿಸುತ್ತಾರೆ ಎಂದು ಬರೆದಿದ್ದಾನೆ. ಮಸೂದಿ ಎಂಬ ಇನ್ನೋರ್ವ ಪ್ರವಾಸಿ ಹಿಂದುಗಳು ಮುಸಲ್ಮಾನರನ್ನು ಸೋದರಂತೆ ನೋಡುತ್ತಾರೆ ಎಂದಿದ್ದಾನೆ.

ವ್ಯಾಪಾರದ ಉದ್ದೇಶದಿಂದ ತುಳುನಾಡಿಗೆ ಬಂದ ಮುಸಲ್ಮಾನರು ಇಲ್ಲಿಯೇ ನೆಲೆಯೂರಿ ತಮ್ಮದೇ ಭಾಷೆಯನ್ನು ಹುಟ್ಟು ಹಾಕಿದ್ದಾರೆ. ಬ್ಯಾರಿಭಾಷೆ! ಒಂದು ಭಾಷೆಯ ಜನನದ ಪ್ರಕ್ರಿಯೆಗೆ ಕಾಲ ಬಹಳ ಹಿಡಿಯಬೇಕಾದರೆ ಮಸಲ್ಮಾನರ ಪ್ರವೇಶ ತುಳುನಾಡಿಗೆ ಇಂದು ನಿನ್ನೆಯದಲ್ಲ! ಬ್ಯಾರಿ ಭಾಷೆಯು ಯಾವುದಾದರೊಂದು ಭಾಷೆಯ ಉಪಭಾಷೆಯಾಗಿರಬೇಕು. ಇದು ತುಳು ಭಾಷೆಯೇ ಎಂದು ಭಾಷಾ ಶಾಸ್ತ್ರಜ್ಞೆ ಡಾ. ಸುಶೀಲಾ ಉಪಧ್ಯಾಯರು ಸಮರ್ಥಿಸುತ್ತಾರೆ. ಈ ಭಾಷೆಯ ಜನಾಂಗಿಕ ಪ್ರಾಧಾನ್ಯತೆಯನ್ನು ಉಪಾಧ್ಯಾಯರು ಕಾಣದಿದ್ದರೂ ಇದನ್ನು ಮಾಪ್ಲಾ ಭಾಷೆ ಎಂದಿದ್ದಾರೆ, ತುಳುವೇ ಇದರ ತಾಯಿ ಎಂದಿದ್ದಾರೆ! ಸಾಹಿತ್ಯಿಕವಾಗಿ ಅಷ್ಟೊಂದು ಬೆಳೆಯದಿದ್ದರೂ ಪಾಡ್ದನ ಹಾಗೂ ಯಕ್ಷಗಾನ ಕೃತಿಗಳಲ್ಲಿ ಬ್ಯಾರಿಗಳ ಹಾಗೂ ಬ್ಯಾರಿ ಸಂಸ್ಕೃತಿಯ ಉಲ್ಲೇಖಗಳು ಬಹಳಷ್ಟಿವೆ. ಬ್ಯಾರಿ ಎಂದರೆ ವ್ಯಾಪಾರಿಯಷ್ಟೇ!

ಪ್ರಸ್ತುತ ಬ್ಯಾರಿಗಳ ಹಾಗೂ ದೈವಾರಾಧನೆಯ ನಂಟನ್ನು ಗಮನಿಸೋಣ. ದೈವಾರಾಧನೆಯಲ್ಲಿ ಬ್ಯಾರಿಗಳೂ ಪಾಲನ್ನು ಪಡೆದಿದ್ದಾರೆ. ಕೆಲವು ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಇವರಿಗೆ ನಿರ್ಧಿಷ್ಟ ಕರ್ತವ್ಯ ಗಳಿರುತ್ತವೆ. ಬಸರೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಿಡಿಮದ್ದಿನ ಸೇವೆ ಇವರೇ ಮಾಡಬೇಕು. ಕೆಲವೆಡೆ ಪ್ರಭಾವಳಿ ಹಾಗೂ ದೇವರ ಅಲಂಕಾರಾದಿಗಳನ್ನು ಈ ಸಮಾಜದ ಕಲಾವಿದರೇ ಮಾಡುವುದನ್ನು ಕೇಳಿದ್ದೇನೆ.

ಮಂಜೇಶ್ವರದ ಉದ್ಯಾವರ ಎಂಬಲ್ಲಿ ಅರಸು ದೈವಗಳ ನೇಮೋತ್ಸವದಲ್ಲಿ ಇವರ ಪಾತ್ರವೂ ಇದೆ. ಅಲ್ಲಿ ಜಾತ್ರೆಗೆ ಪೂರ್ವಭಾವಿಯಾಗಿ ಕೋರಿಗೂಂಟ ಎಂಬ ಸಂಪ್ರದಾಯ ನಡೆಯುತ್ತದೆ. ಈ ವೇಳೆ ನಿಗದಿತ ಮುಸ್ಲಿಂ ಕುಟುಂಬ ತಾತ್ಕಾಲಿಕ ಅಂಗಡಿ ಇಡಬೇಕು. ದೈವಸ್ಥಾನದ ಗುರಿಕಾರರು ಇಲ್ಲಿಂದಲೇ ಎಲೆ ಅಡಿಕೆ ಖರೀದಿಸಬೇಕು. ಒಂದು ಶುಕ್ರವಾರದಂದು ಅರಸು ದೈವಗಳು ಪಾತ್ರಿಗಳ ಮೇಲೆ ಆವೇಶ ಬಂದು ಮಸೀದಿಗೆ ಭಂಡಾರ ಸಮೇತ ತೆರಳಿ ಅಲ್ಲಿನ ಸೇಕಮಾರನನ್ನು ಭೇಟಿಯಾಗುತ್ತಾರೆ. ದೈವಗಳ ನೇಮ ನೋಡಲು ಈ ಜನಾಂಗದವರಿಗೆ ಪ್ರತ್ಯೇಕ ಕಟ್ಟೆಯ ವ್ಯವಸ್ಥೆ ಇದೆ.

ಪಡ್ಡಂಬೈಲಿನ ಮಾಪುಳ್ತಿಭೂತ : ಸುಳ್ಯದ ಪಡ್ಡಂಬೈಲಿನಲ್ಲಿ ಮಾಪುಳ್ತಿ ಭೂತ ಎಂಬ ಮುಸ್ಲಿಂ ಸ್ತ್ರೀ ದೈವಕ್ಕೆ ಕೋಲ ನೀಡುತ್ತಾರೆ. ಇದು ಇಲ್ಲಿನ ಪ್ರಧಾನ ದೈವ ಜಮಾದಿ (ಧೂಮಾವತಿ)ಯ ಅವಗಾಹನೆಗೆ ತುತ್ತಾಗಿ ಬ್ಯಾರಿ ಮಹಿಳೆಯೋರ್ವಳು ದೈವವಾಗಿದ್ದಾಳೆ. ಪಡ್ಡಂಬೈಲಿಗೆ ಜುಮಾದಿ ಭಾಗಮಂಡಲದಿಂದ ಬಂದದ್ದು. ಇಲ್ಲಿ ಧೂಮಾವತಿ ಎದ್ದು ನಿಲ್ಲುವ ಸಮಯದಲ್ಲಿ ಪೇರಡ್ಕದಲ್ಲಿ ಓರ್ವ ಮುಸ್ಲಿಂ ಮಹಿಳೆ ಪೈರು ಹೊಡೆಯುತ್ತಿದ್ದಳಂತೆ. ತನ್ನನ್ನು ಗೌರವಿಸಲಿಲ್ಲ ಎಂಬ ಕೋಪಕ್ಕೆ ಆ ಬ್ಯಾರಿಯನ್ನು ತನ್ನ ಸೇರಿಗೆಗೆ ಸೇರಿಸಿಕೊಂಡಳು ಜುಮಾದಿ. ಹಾಗಾಗಿ ಪಡ್ಡಂಬೈಲಿನಲ್ಲಿ ಜುಮಾದಿಗಿಂತ ಮುನ್ನ ಮಾಪುಳ್ತಿಭೂತಕ್ಕೆ ಕೋಲ ನೀಡುತ್ತಾರೆ.

ಬೊಬ್ಬರ್ಯ ದೈವ : ಸುಲಿಕಲ್ಲಿನ ಮಾದವ (ಮಹಮ್ಮದ್ – ಮಾದವ – ಡಾ. ಅಮೃತ ಸೋಮೇಶ್ವರ) ಬ್ಯಾರಿಗೆ ಕಡಲ ತಡಿಯಲಿ ಮಾಡವಿನ ಅಂಗಡಿ ಅಲ್ಲಿ ಉಪ್ಪು ಮೆಣಸು ಮಾರುತ್ತಿದ್ದವನ ಅಂಗಡಿ ನೀರು ಉಕ್ಕಿ ಬಂದು ಸಮುದ್ರಪಾಲಾಗುತ್ತದೆ. ಇವನು ಸುಮ್ಮನೆ ಕೂರದೆ ದಿನಸಿ ಸಾಮಾನು ತಲೆಯಲ್ಲಿ ಹೊತ್ತು ನಡೆದೇ ಮಕ್ಕ ದೇಶಕ್ಕೆ ಹೋಗಿ ವ್ಯಾಪಾರ ಮಾಡುತ್ತಾನೆ. ಅಲ್ಲಿಂದ ನಡೆದೇ ಬಂದು ಮಲಯಾದೇಶಕ್ಕೆ ಬರುತ್ತಾನೆ. ಅಲ್ಲಿ ಮುತ್ತು ಸೆಟ್ಟಿ, ರತ್ನ ಸೆಟ್ಟಿ, ವಜ್ರಸೆಟ್ಟಿ ಹೀಗೆ ಏಳು ಮಂದಿ ಸಹೋದರರು ವ್ಯಾಪಾರ ವೃತ್ತಿಯಲಿ ಇರುತ್ತಾರೆ. ಅವರಿಗೊಬ್ಬಳು ಮುದ್ದಿನ ತಂಗಿ ಮುತ್ತು ಸೆಟ್ಟೆದಿ.

ಇಲ್ಲೊಂದು ಸಮಸ್ಯೆ ಇದೆ. ಈ ಮುತ್ತು ಸೆಟೆದಿಗೆ ಮದುವೆ ಮಾಡಿದರೆ ಮದುಮಗ ಉಳಿಯುವುದಿಲ್ಲ. ಮೊದಲ ರಾತ್ರಿಯಲ್ಲೇ ಸಾಯುತ್ತಾನೆ. ಅವಳಿಗೆ ಇಪ್ಪತ್ತೊಂಬತ್ತು ಮದುವೆ ಮಾಡಿ ಸೋತು ಹೋಗಿದ್ದರು. ಈ ಮುರುವ (ಮಾದವ) ಬ್ಯಾರಿ ಈ ಮನೆಗೆ ಬಂದಾಗ ಚಿಂತೆಯಿಂದ ಮುಳುಗಿದ್ದ ಸಹೋದರರಲ್ಲಿ ಕಾರಣ ಕೇಳುತ್ತಾನೆ. ಆಗ ಅವರು ತಮ್ಮ ತಂಗಿಯ ಪಾಡನ್ನು ವಿವರಿಸುತ್ತಾರೆ. ಆಗ ಮುರುವ ಬ್ಯಾರಿ ನಾನು ನಿಮ್ಮ ಸಮಸ್ಯೆ ಪರಿಹರಿಸುತ್ತೇನೆ. ಆದರೆ ಅವಳನ್ನು ನನಗೆ ಮದುವೆ ಮಾಡಿ ಕೊಡಬೇಕು ಎಂದು ಶರತ್ತು ಹಾಕಿದಾಗ ಅವರು ಒಪ್ಪುತ್ತಾರೆ.

ಶರತ್ತಿನಂತೆ ಮದುವೆ ಮಾಡಿಕೊಟ್ಟರು. ಅವಳಿಗೆ ಬೊಲ್ಯಫಾತುಮ್ಮ ಎಂದು ಮರು ನಾಮಕರಣ ಮಾಡಿದರು. ಮೊದಲ ರಾತ್ರಿಯಲಿಲ ಬ್ಯಾರಿ ತನ್ನ ಪ್ರತಿರೂಪವನ್ನು ಅಕ್ಕಿಯ ಹಿಟ್ಟಿನಲ್ಲಿ ಮಾಡಿ ಅವಳ ಪಕ್ಕ ಮಲಗಿಸಿ ತಾನು ಅಡಗಿ ಕುಳಿತ. ನಡುರಾತ್ರಿ ಅವಳ ಬಲ ಮೂಗಿನ ಹೊಳ್ಳೆಯಿಂದ ಬಿಳಿಯ ಸಂಕಪಾಲ ಸರ್ಪ ಹೊರಗೆ ಬಂದು ಏಳು ಹೆಡೆಯಿಂದ ಆ ಪ್ರತಿಕೃತಿಯನ್ನು ಕಚ್ಚಲರಂಭಿಸಿತು. ಅಡಗಿ ಕುಳಿತಿದ್ದ ಈ ಬ್ಯಾರಿ ಕತ್ತಿಯನ್ನು ತೆಗೆದು ಸರ್ಪವನ್ನು ಕಡಿದು ಹಾಕಿದ. ಸಮಸ್ಯೆ ಶಮನವಾಗಲು ಸಹೋದರರು ಒಂದು ಶರತ್ತಿನೊಂದಿಗೆ ತಂಗಿಯನ್ನು ಕಳುಹಿಸುತ್ತಾರೆ. ಅದೇನೆಂದರೆ ಒಂದು ವರ್ಷ ಆರು ತಿಂಗಳು ಅವಳ ಮೈ ಮುಟ್ಟಬಾರದು ಎಂದು

ಬ್ಯಾರಿ ಮಸೀದಿಗೆ ಕರೆತಂದು ಬೊಲ್ಯಫಾತುಮ್ಮ ಎಂದು ಹೆಸರಿಟ್ಟು ಸಾವಿರ ಮಂದಿಗೆ ಗೌಜಿಯ ತುಪ್ಪ ಅನ್ನದ ಊಟ ಬಡಿಸಿದ. ಅಲ್ಲಿಂದ ತನ್ನ ಮನೆಗೆ ಕರೆತಂದ. ಅವಳಿಗೆ ಏಳು ತಿಂಗಳು ತುಂಬಿತು. ಇನ್ನೇನು ಒಂಬತ್ತು ತಿಂಗಳಿಗೆ ಒಂದೇ ದಿನ ಬಾಕಿ ಇತ್ತು. ಅಷ್ಟರಲ್ಲಿ ಅವಳಿಗೆ ನೋವು ಕಾಣಿಸಿಕೊಂಡು ಹೊಟ್ಟೆಯೊಳಗಿದ್ದ ಮಗು ಬ್ಯಾರಿ ನಾನು ಯಾವ ದಾರಿಯಲ್ಲಿ ಬರಲಿ? ಎಂದು ಕೇಳಿತು. ಆಗ ಬ್ಯಾರಿ ದೇವರು ಕೊಟ್ಟ ದಾರಿಯಲ್ಲಿ ಬಾ ಎಂದಾಗ ಮಗ ಹೊಟ್ಟೆ ಸೀಳಿ ಬಂದರೆ ತಾಯಿಯನ್ನು ಕೊಂದೆ ಎಂದಾರು. ಬೆನ್ನು ಸೀಲಿ ಬಂದರೆ ತಂದೆಯನ್ನು ಕೊಂದೆ ಎಂದಾರು ಎಂದು ಬಂಗಾರದ ದುಂಬಿಯಗಿ ತಾಯಿಯ ಬಲ ಸಿರಿ ಮೊಲೆಯನ್ನು ಸೀಳಿ ಬರುತ್ತಾನೆ. ಈ ಮಗುವಿನ ಹಣೆಯಲ್ಲಿ ಸುರಿಯ ಹಾಗೂ ಬೆನ್ನಿನಲ್ಲಿ ಬೆರ್ಮೆರ ಚಿಹ್ನೆ, ಹೊಟ್ಟೆಯಲ್ಲಿ ಬಾಸುಲಿಂಗ ದೇವರ ಚಿಹ್ನೆ, ಮುಡಿಯಲಿ ಕೂಚುಲಿಂಗ ದೇವರ ರೂಪ, ಕಾಲಗಂಟಲ್ಲಿ ಅಂಗಾಕಾರ ಇರುತ್ತದೆ. ಇವನಿಗೆ ಮಕ್ಕ ಮಕಯದ ಮಸೀದಿಗೆ ಕರೆದೊಯ್ದ ಬಪ್ಪ ಎಂದು ಹೆಸರಿಡುತ್ತಾರೆ. ಒಂದೇ ವರ್ಷದಲ್ಲಿ ನಾಲ್ಕು ವರುಷದ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ಊರಿನ ಮಕ್ಕಳನ್ನು ಇವನು ಜುಬಿಲಿಯಾಟದಲಿಲ ಸೋಲಿಸುತ್ತಾನೆ. ಆಗ ಆ ಮಕ್ಕಳು ಹಾದರಕ್ಕೆ ಹುಟ್ಟಿದ ಮಗು ಒಳ್ಳೆಯದು ತುಳುವ ಹಲಸಿನ ಬೀಜ ಒಳ್ಳೆಯದು ಎಂದು ಗೇಲಿ ಮಾಡಿದಾಗ ಅ ಮಗು ತಾಯಿಯ ಬಳಿ ಬಂದು ಹೇಳಿದಾಗ ತಾಯಿ ನೀನು ನನ್ನ ಬಲ ಸಿರಿ ಮೊಲೆಯನ್ನು ಸೀಳಿ ಬಂದ ಮಾಯದ ಶಿಶು ಎಂದಳು.

ತಾಯಿಯ ಮಾತನ್ನು ಕೇಳಿದ ಬಾಲಕ ಬಪ್ಪ ಮಕ್ಕ ಮಕಯಕ್ಕೆ ಹೋಗಿ ಅಲ್ಲಿ ಕೋಟೆ ಕಟ್ಟಿದ. ಅದರೊಳಗೆ ಸುತ್ತಾಡಿ ಮಾಯ ಮಾಡಿದ. ಮಲಯಕ್ಕೆ ಬಂದಾಗ ಒಳಿಯ ಸಾಂತಿ ಮರ ಕಂಡಿತು. ಆ ಮರದಿಂದ ಬಡಗಿಗಳನ್ನು ಕರೆಸಿ ಹಡಗು ಮಾಡಿದ. ಎಲ್ಲವೂ ಸಿದ್ಧವಾಯಿತು.

ಮಂಗಳವಾರ ಸಿಂಗದ ರಾಸಿಯಲಿ ಹಡಗಿಗೆ ಕುತ್ತಿಪೂಜೆ ಮಾಡಿದ. ಮರಕಾಲರನ್ನು ಕರೆಸಿ ಹಡಗನ್ನು ನೀರಿಗೆ ತಳ್ಳುವ ಮುನ್ನ ತಂದೆ – ತಾಯಿಯನ್ನು ನೆನೆದ, ಜೋಗ ಬಿಟ್ಟು ಮಾಯ ಸೇರುತ್ತೇನೆ ಎಂದು ಒಬ್ಬನನ್ನು ಕರೆದು ದೋಣಿ ಒತ್ತುವ ಕೋಲು ಹಿಡಿಸಿ ಸಮುದ್ರ ಪ್ರಯಾಣ ಬೆಳೆಸಿದ. ಏಳು ಕಡಲು ದಾಟಿ ಬಂದ. ತಾಯಿ ಗಂಗಮ್ಮನಿಗೆ ಇವನ ಸಾಮರ್ಥ್ಯ ಕಂಡು ಅಸೂಯೆಯಾಗಿ ಕತ್ತರಿಗಾಳಿ ಬೀಸಿದಳು. ಹಡಗಿನ ಕೊಂಬಿ ಮರ ಮುರಿದು, ಕುಂಕುಮದ ಮಳೆಗೆ ಪಡು ದಿಕ್ಕಿನ ಹಾಯಿ ಹರಿಯಿತು. ಲಂಗರು ಹಾಕಿದರೂ ಹಡಗು ನಿಲ್ಲಲಿಲ್ಲ. ಬಬ್ಬಯ್ಯ (ಬಪ್ಪ) ಹಡಗಿನ ಕಲಾಸಿಗಳನ್ನು ಮಾಯಮಾಡಿ ಹಡಗಿನ ಚುಕ್ಕಾಣಿ ಹಿಡಿದ. ಹಡಗು ದಡ ಸೇರಿತು. ಮೂಲೂಲಿನ ದೆಂಬಲ್ಲ್ ಪಾದೆ ಬಳಿ ನಿಂತಿತು. ಸುತ್ತಲಿನ ಜನರು ತಮ್ಮ ಹಿರಿಯರ ಹಡಗೆಂದು ತಿಳಿದು ಎಳೆದು ದಡಕ್ಕೆ ಸೇರಿಸಲು ಮೂಲೂರಿನ ಮುನ್ನೂರಾಳು, ಕಾಪಿನ ಸಾವಿರ ಆಳುಗಳನ್ನು ಕರೆದರು. ಆದರೆ ಹಡಗು ಕಾಪಿನ ಕರ್ಗಲ್ಲಿನ ಕೋಟೆಯ ಬಳಿ ನಿಂತು ಬಿಟ್ಟಿತು. ಬಬ್ಬರ್ಯ ಹಡಗಿನೊಂದಿಗೆ ತಾನೂ ಮಾಯವಾಗಿ ದೈವವಾದ.

ಮಲೂರಿನ ಅಯ್ಯಂಗಲ್ಲ ಕಟ್ಟೆಯಲ್ಲಿ ಬಬ್ಬರ್ಯ ಓಲಗ ನಡೆಸಿದ, ಓರ್ವ ಬೈದ್ಯ ಆ ದಾರಿಯಲ್ಲಿ ಮೂರ್ತೆ ಮಾಡಲು ಹೋಗುವಾಗ ದೈವವನ್ನು ಕಂಡು ವಂದಿಸಿದರು. ದೈವವು ಅವನನ್ನು ಅನುಗ್ರಹಿಸಿ ನಾನು ಅಯ್ಯಂಗಲ್ಲಾಯ ದೈವ ಅಲ್ಲ, ಬಬ್ಬರ್ಯನನ್ನು ನೋಡಿದೆ ಎಂದು ಹೆಂಡತಿಗೂ ಹೇಳ ಬೇಡ ಎಂದಿತು. ಬೈದ್ಯನ ಜೀವನ ಮತ್ತಷ್ಟು ಸುಧಾರಿಸಿತು. ದಿನೇ ದಿನೇ ಕಳ್ಳು (ನೀರಾ)ದ ಪ್ರಮಾಣ ಹೆಚ್ಚಿತು. ಶೇಂದಿ ಹೆಂಡದ ಹೆಚ್ಚಳಕ್ಕೆ ಕಾರಣವನ್ನು ಹೆಂಡತಿ ಕೇಳಿದಾಗ ಬೈದ್ಯ ದೈವದ ಬಗೆಗೆ ಹೇಳಿ ಅದರ ಅನುಗ್ರಹದ ಫಲ ಇದು ಎಂದನು.

ಮರುದಿನ ಮೂರ್ತೆಗೆ ಬಂದಾಗ ಒಂದು ಹನಿ ಶೇಂದಿಯೂ ಸಿಗಲಿಲ್ಲ. ಇದು ದೈವದ ಕೋಪದ ಫಲ. ಬೇಜಾರಿನಿಂದ ಖಾಲಿ ಕುಜಿಲನ್ನು ಕೆರೆಯ ಬಳಿ ತೊಳೆಯಲು ಹೋದಾಗ ದೈವ ಬೈದ್ಯನನ್ನು ಮುಳುಗಿಸಿ ಮಾಯ ಮಾಡುತ್ತದೆ. ಸಂಜೆಯಾದರೂ ಗಂಡ ಬಾರದಿದ್ದಾಗ ಬೈದ್ಯದಿ ಹುಡುಕುತ್ತಾ ತಾವರೆಯ ಕೆರೆಯ ಬಳಿ ಬಂದಾಗ ಗಂಡನ ಹೆಜ್ಜೆ ಗುರುತು ನೋಡುತ್ತಾಳೆ. ಮರ ಕಾಲರನ್ನು ಕರೆಗೆ ಬಲೆ ಹಾಕಿದಾಗ ಗಂಡನ ಅಡಿಕೆ ಹಾಳೆಯ ಟೊಪ್ಪಿ (ಮುಟ್ಟಾಲೆ) ದೊರೆಯುತ್ತದೆ. ಗಂಡ ಬದುಕಿ ಬರಲಿ ಎಂದು ಹರಕೆ ಹೇಳುತ್ತಾಳೆ ಬೈದ್ಯೆಲೆ, ಬೆರ್ಮೆರಿಗೆ ಸ್ಥಾನ, ಭೂತಗಳಿಗೆ ಗುಂಡ ಕಟ್ಟಿ ನೇಮ ಕೊಡುತ್ತೇನೆ ಎಂದು ಹರಕೆ ಹೇಳಿದಾಗ ಗಂಡ ಬದುಕಿಬಂದ. ಮುಂದೆ ಪೊಂಗದರ ಬೈದ್ಯ ದೈವಗಳಿಗೆ ಗುಡಿಕಟ್ಟಿ, ಹೊಸದೈವ ಬೊಬ್ಬರ್ಯನಿಗೆ ಗುಡಿಕಟ್ಟಿ ನೇಮ ನೀಡುತ್ತಾನೆ. ಮೊಗವೀರ (ಮರಕಾಲ) ಜನಾಂಗ ಆರಾಧ್ಯ ದೈವವಾಗಿ ಬೊಬ್ಬರ್ಯ ಆರಾದಿಸಲ್ಪಡುತ್ತಾನೆ. ಇವನು ಮುಸ್ಲಿಂ ದೈವಕ್ಕೊಂದು ಪಕ್ಕಾ ಉದಾಹರಣೆ.

ಕುಂಬಳೆಯ ಆಲಿಭೂತ : ಆಲಿ ಭೂತ ಕುಂಬಳೆಯ ಪಾದೆ ಸ್ಥಾನದಲ್ಲಿ ಆರಾಧಿಸಲ್ಪಡುವ ದೈವ, ಕುಂಬಳೆ ಅರಿಕ್ಕಾಡಿನಲ್ಲಿ ಆಲಿ ಎಂಬ ಬ್ಯಾರಿ ಮಂತ್ರವಾದಿ ಇದ್ದ. ಊರೂರು ತಿರುಗುವ ಇವನಿಗೆ ಬಿಲ್ಲವರ ಕುಟುಂಬ ಒಂದು ಮನೆಯನ್ನು ನೀಡಿತ್ತು. ಸಜ್ಜನನಂತೆ ತೋರುತ್ತಿದ್ದ ಆಲಿ ಬೇಗನೇ ಊರವರನ್ನು ಆಕರ್ಷಿಸಿದ. ಊರವರೂ ಅವನನ್ನು ನಂಬಿದರು. ಆಲಿಗೆ ದೇಯಿ ಎಂಬ ಹೆಣ್ಣಿನ ಮೇಲೆ ಕಣ್ಣು ಬಿತ್ತು. ಆಕೆಯನ್ನು ವಶೀಕರಣ ಮಾಡಿ ಕೆಡಿಸಿದ, ಇದು ಗುಡ್ಡೆ ಮನೆಯ ಬಿಲ್ಲವರಿಗೂ, ಊರವರಿಗೂ ಗೊತ್ತಾಗಿ ಇವನನ್ನು ಮಟ್ಟ ಹಾಕಲು ಮಂತ್ರಮೂರ್ತಿ ಲೆಕ್ಕೆ ಸಿರಿಯ ಮೊರೆ ಹೋದರು.

ಆದರೆ ದೈವಕ್ಕೆ ಅಷ್ಟು ಸುಲಭದಲ್ಲಿ ಆಲಿಯನ್ನು ಏನೂ ಮಾಡಲು ಸಾಧ್ಯವಿಲ್ಲ, ಏಕೆಂದರೆ ಅವನ ಸೊಂಟದಲಿ ಒಂದು ರಕ್ಷಣಾ ತಾಯತ ಇತ್ತು. ಹಾಗಾಗಿ ದೈವ ಅವನ ಹತ್ತಿರಕ್ಕೂ ಸುಳಿಯಲು ಅಸಾಧ್ಯವಾಯ್ತು. ಒಂದು ದಿನ ಕೆಲಸ ಬಿಟ್ಟು ಬರುತ್ತಿದ್ದ ಆಲಿಗೆ ಅರಿಕ್ಕಾಡಿನ ಪದವಿನ ಕೆರೆಯಲ್ಲಿ ಚೆಲುವೆಯೊಬ್ಬಳು ಬೆತ್ತಲಾಗಿ ಮೀಯುವುದನ್ನು ಕಂಡ ಇವಳನ್ನು ಬಯಸಿ ಆಲಿ ಅವಳ ಹತ್ತಿರ ಬಂದಾಗ ಆ ಹೆಣ್ಣು ನೀನೂ ಬೆತ್ತಲಾಗಿ ನೀರಿಗಿಳಿ ಎಂದು ಹೇಳಿದಾಗ ಹಿಂದೂ ಮುಂದೂ ನೋಡದೆ ಆಲೆ ಬೆತ್ತಲಾದ. ಆಗ ಚೆಲುವೆ ನಿನ್ನ ಸೊಂಟದಲ್ಲಿ ಇರುವ ತಾಯತವನ್ನೂ ಕಳಚು ಎಂದಾಗ ಕಾಮೋನ್ಮತ್ತನಾಗಿದ್ದ ಆಲಿ ಅದನ್ನು ಕಳಚಿ ಕಲ್ಲಿನ ಮೇಲಿಟ್ಟು ಲಗುಬಗೆಯಿಂದ ನೀರಿಗಿಳಿದ. ಹೆಣ್ಣಿನ ರೂಪದಲ್ಲಿದ್ದ ಮಂತ್ರಮೂರ್ತಿ ಲೆಕ್ಕೆಸಿರಿ ಅವನನ್ನು ನೀರಿನಲ್ಲಿ ಮುಳುಗಿಸಿ ಅವನ ಪ್ರೇತದೊಂದಿಗೆ ಕೆರೆಯಿಂದ ಮೇಲೆ ಬಂತು. ಅದೇ ವೇಳೆ ಅಂಬಲಡ್ಕದಲ್ಲಿ ಉಳ್ಳಾಕುಲುಗಳ ನೇಮ ನಡೆಯುತ್ತಿತ್ತು. ಪೂಮಾಣಿಯ ನೇಮಕ್ಕೆ ಮುನ್ನ ಪಾದೆಸ್ಥಾನದ ಐವೆರ್ ದೈಯೊಂಕುಳು ಅಂಬಲಡ್ಕದ ಒಡೆಯರೆ ಬೇಟಿ ಮಾಡಲು ಬರುತ್ತವೆ. ಬೇಟಿಯಾಗಿ ಹಿಂತಿರುಗಿ ಬರುವಾಗ ಪ್ರೇತ ಸಹಿತ ಲೆಕ್ಕಿಸಿರಿಯನ್ನು ನೋಡುತ್ತಾರೆ. ಆಗ ಲೆಕ್ಕೆಸಿರಿ ನನ್ನನ್ನೂ ನನ್ನ ಸೇವಕ ಆಲಿಯನ್ನೂ ನಿಮ್ಮ ಜೊತೆಗೆ ನಿಲ್ಲಲು ಜಾಗಕೊಡಿ ಎಂದ ಐವೆರ್ ದೈಯೊಂಕುಳನ್ನು ಬೇಡುತ್ತದೆ. ಮುಂದೆ ಆಲಿಯು ಆಲಿಚಾಮುಂಡಿಯಾಗಿ ಅರೆಕ್ಕಾಡುವಿನಲ್ಲಿ ಆರಾದಿಸಲ್ಪಡುತ್ತಾನೆ.

ಮೊದಲೇ ಹೇಳಿದಂತೆ ದೈವವಾಗುವ ಪ್ರಕ್ರಿಯೆಯಲ್ಲಿ ನಿಯಮಗಳಲ್ಲಿ ಅಕಾಲಿಕ ಮೃತ್ಯು ಹೊಂದಿದ ದುಷ್ಟ ಆಲಿಯ ಪ್ರೇತದ ಭಯದಿಂದ ಜನರು ದೈವಾಗಿ ನಂಬಿದರು.

ಬ್ಯಾರ್ದಿ ಭೂತ : ಕಾಸರಗೋಡಿನಲ್ಲಿ ಈ ದೈವಕ್ಕೆ ನೇಮವಿದೆ. ಬಬ್ಬರ್ಯನ ನೇಮವನ್ನು ಸ್ತ್ರೀಯರು ನೋಡಬಾರದು ಎಂಬ ನಿಯಮವಿದ್ದು ಓರ್ವ ಮುಸ್ಲಿಂ ಮಹಿಳೆ ಕದ್ದು ನೋಡುತ್ತಾಳೆ. ದೈವದ ಕೋಪಕ್ಕೆ ತುತ್ತಾಗಿ ಮಾಯವಾಗಿ ಬ್ಯಾರಿ ಭೂತವಾಗುತ್ತಾಳೆ. ಬಹುಶಃ ವಿಧಿ – ನಿಷೇಧವನ್ನು, ಸ್ತ್ರೀ ನಿರ್ಬಂಧವನ್ನು ಗಟ್ಟಿಗೊಳಿಸಲು ಈ ದೈವವನ್ನು ಉದಾಹರಿಸಿ ಆರಾಧಿಸುತ್ತಿರಬೇಕು. ಅಲ್ಲದೆ ಮನೋರಂಜನೆಯ ಅಭಿವ್ಯಕ್ತಿಯಾಗಿ ಈ ದೈವ ಕಾಣುತ್ತದೆ.

ಕುಂಬಳಚ್ಚೇರಿಯ ಮಾಪುಳ್ತಿ – ಮಾಪಿಳ್ಳೆ ಭೂತಗಳು : ಕುಂಬಳಚ್ಛೇರಿ (ಕೊಡಗಿನ ಉತ್ತರ ಭಾಗ)ಯಲ್ಲಿ ಎರಡು ಬ್ಯಾರಿದಂಪತಿ ದೈವಗಳಿವೆ. ಅಲ್ಲಿ ಶಿರಾಡಿ ದೈವ ವಾಲಸಿರಿ ಹೋಗುವಾಗ ಯಾರೂ ಅಡ್ಡ ಬರಬಾದರೆಂಬ ನಿಯಮವಿದೆ. ಅದನ್ನು ವಾಲಸರಿ ಹೋಗುವಾಗ ಯಾರೂ ಅಡ್ಡ ಬರಬಾರದೆಂಬ ನಿಯಮವಿದೆ. ಅದನ್ನು ತಿಳಿಯದೆ ಬ್ಯಾರಿ ದಂಪತಿಗಳು ತೊಟ್ಟಿಲ ಮಗುವಿನೊಂದಿಗೆ ಗದ್ದೆಯ ಬದುವಿನಲ್ಲಿ ದೈವಕ್ಕೆ ಎದುರಾಗುತ್ತಾರೆ. ದೈವವು ಕೋಪದಿಂದ ತೊಟ್ಟಿಲು ಸಮೇತ ಮಗುವನ್ನು ಮಾಯಮಾಡುತ್ತದೆ. ಆಗ ದಂಪತಿಗಳು ದೈವದ ಬಳಿ ಕ್ಷೆಮೆಯನ್ನು ಕೇಳಿದಾಗ ಅವರನ್ನೂ ಮಾಯಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಮುಂದೆ ಮಾಪುಳ್ತಿ – ಮಾಪಿಳ್ಳೆ ಭೂತಗಳಾಗಿ ಆರಾದಿಸಲ್ಪಡುತ್ತವೆ.

ಮಂಗಳೂರಿನ ಉರ್ವ ಚಿಲಿಂಬಿಯ ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಅರಬ್ಭಿ ಭೂತವೊಂದಿಗೆ. ಆಶ್ಚರ್ಯವೆಂದರೆ ಉಡುಪಿ ಬಸರೂರಿನ ಗರೋಡಿಯಲ್ಲಿ ಐದು ಚೀನೀ ಭೂತಗಳಿರುವುದು! ವ್ಯಾಪಾರಕ್ಕಾಗಿ ಚೀನಾದಿಂದ ಬಂದವರು ಇಲ್ಲಿನ ಪಂಜುರ್ಲಿಯನ್ನು ಅಪಹಾಸ್ಯ ಮಾಡಿದಾಗ ದೈವ ಅವರನ್ನು ಮಾಯಮಾಡಿ ಸೇರಿಗೆಗೆ ಸೇರಿಸಿಕೊಂಡಿದೆ. ಬಹುಶಃ ಸಂಘರ್ಷದಿಂದ ಸಾವನ್ನಪ್ಪಿದ ಚೀನೀ ವ್ಯಾಪಾರಿಗಳನ್ನು ದೈವಗಳಾಗಿ ಆರಾಧಿಸಿರಬೇಕು.

ಬ್ಯಾರಿ ಭೂತಗಳ ಆರಾಧನೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲೀಮರೂ ಭಾಗವಹಿಸುತ್ತಾರೆ. ಇದು ಧರ್ಮಸಾಮರಸ್ಯಕ್ಕೆ ಹಿಡಿದು ಕೈಗನ್ನಡಿ. ಕೋಟಿ ಚೆನ್ನಯರ ಆರಾಧನಾ ಸ್ಥಳ ಗರೋಡಿಗಳಲ್ಲಿ ಮುಸ್ಲೀಂ ಮಕ್ಕಳು ಎಂಬ ಮರದ ಉರು (ವಿಗ್ರಹ)ಗಳಿರುವ ಬಗ್ಗೆ ಕೇಳಿದ್ದೇನೆ.

ಹಿಂದೆ ಮೊಹರಂ ಉತ್ಸವದ ಸಂದರ್ಭದಲ್ಲೂ ಮಾರ್ನೆಮಿಯ ಹುಲಿವೇಷ ಕುಣಿಯುತ್ತಿತ್ತಂತೆ! ಪರಸ್ಪರ ಸಹಬಾಳ್ವೆಯಿಂದ ಈ ಮಣ್ಣಿನ ಅನನ್ಯ ಸಂಸ್ಕೃತಿಯನ್ನು ಬಹು ಎತ್ತರಕ್ಕೆ ನಮ್ಮ ಹಿರಿಯರ ಏರಿಸಿದ್ದಾರೆ.

ಜೀವಿಯ ಬದುಕಿನ ಸರ್ವ ಅನುಕೂಲಕ್ಕಾಗಿ ಧರ್ಮ ಹುಟ್ಟಿದೆ. ದುರ್ಬಲರನ್ನು ಮೇಲೆತ್ತುವುದು ಧರ್ಮ. ಇದನ್ನೇ ಧಾರಯತಿ ಇತೀ ಧರ್ಮಃ ಎಂದದ್ದು. ಪರಸ್ಪರ ಅರಿತು ಆತ್ಮೋನ್ನತಿಯ ಬಾಳ್ವೆ ಆದರೆ ಮೂಲ ಒಂದೇ, ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಒಂದೇ ಸತ್ಯದ ಭಿನ್ನರೂಪಗಳು, ಅವನ್ನು ನಮ್ಮೊಳಗೂ ಇದ್ದಾನೆ. ಸಕಾಲ ಜೀವರಾಶಿಗಳಲ್ಲೂ ಇದ್ದಾನೆ, ನಾವು ಅವನನ್ನು ನಮ್ಮೊಳಗೂ ಇದ್ದಾನೆ. ಸಕಲ ಬಾಳ್ವೆ ನಡೆಸಬೇಕು. ಸಂಸ್ಕೃತಿಗಳನ್ನು ಗೌರವಿಸಬೇಕು. ಇತರರನ್ನು ಗೌರವಿಸಿ ಮೇಲೆತ್ತುವ ಮೂಲಕ ತನ್ನನ್ನು ತಾನು ಉನ್ನತಿಯತ್ತ ಕೊಂಡೊಯ್ಯವುದು ಧರ್ಮ.

ಈ ಸೌಹಾರ್ದತೆಯ ಪಾಠ ತುಳುವರ ಜಾನಪದದಲ್ಲದೆ. ಪರಸ್ಪರ ಸಂಸ್ಕೃತಿಗಳ ಸಂಘರ್ಷವಾಗದೆ ಕೊಡು -ಕೊಳ್ಳುವಿಕೆ ನಡೆದಿದೆ. ಮೂರ್ಖರಂತೆ ಮತಾಂತರ, ಉಗ್ರವಾದದಂತ ಅಮಾನವೀಯ ಕಲ್ಪನೆಗಳಿಂದ ನಮ್ಮ ಧರ್ಮವನ್ನೂ ರಕ್ಷಿಸಿದರೆ ಮುಂದೇ ಅದೇ ನಮ್ಮ ರಕ್ಷಣೆಗೆ ನಿಲ್ಲುತ್ತದೆ. ಒಂದು ಕಡೆ ಇಸ್ಲಾಂ ಮೂಲಭೂತವಾದದಿಂದ ಜಗತ್ತು ತತ್ತರಿಸಿದರೆ ಭಾರತೀಯ ಮುಸಲ್ಮಾನ ಬಂಧುಗಳು ಈ ಮಣ್ಣಿನ ಸತ್ವವನ್ನು ಎತ್ತಿ ಹಿಡಿಯುತ್ತಾರೆ.

ಪರಾಮರ್ಶೆ: ತುಳು ಪಾಡ್ದನ: ಬಂಧ ಮತ್ತು ವಿನ್ಯಾಸ- ಡಾ.ಎ.ವಿ.ನಾವಡ ಭೂತಗಳ ಅದ್ಭುತ ಜಗತ್ತು-ಲಕ್ಷೀ ಪ್ರಸಾದ್ Photo of Ali Bhoota: http://www.newindianexpress.com/states/karnataka/2016/nov/13/of-lust-and-redemption-1538043.html*Photo of Bibbarya: http://kalmadys.blogspot.com/2012/09/pade-bobbarya.html

LEAVE A REPLY

Please enter your comment!
Please enter your name here