ಆತ್ಮಹತ್ಯೆ – 02

ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ)

ಇಷ್ಟು ಅರ್ಥ ಮಾಡಿಕೊಳ್ಳೋಣ. ಆತ್ಮಹತ್ಯೆಗೆ ವ್ಯಕ್ತಿಯ ಪರಿಸರದಲ್ಲಿ ಸೃಷ್ಟಿಯಾಗುವ ಪರಿಸ್ಥಿತಿಗಳು ಕಾರಣಕ್ಕಿಂತ ನೆಪವಾಗುತ್ತವೆ. ಈ ವಿಷಯದಲ್ಲಿ ವ್ಯಕ್ತಿಯ ಮನಸ್ಥಿತಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಪರಿಸ್ಥಿತಿಯು ಪ್ರಚೋದನೆಯಾದರೆ ಪ್ರೇರಣೆ ವ್ಯಕ್ತಿಯ ಮನಸ್ಥಿತಿಯಾಗಿರುವುದರಿಂದ ಅದನ್ನೇ ಕಾರಣ ಎನ್ನಬಹುದು.
ವ್ಯಕ್ತಿಯ ಮನಸ್ಸು ಸದಾ ಆತ್ಮ ಕೇಂದ್ರಿತವಾಗಿಯೇ ಇರುವುದು. ದರ್ಪ ಮಾಡುವುದು, ಕೀಳರಿಮೆ ಅನುಭವಿಸುವುದು, ಸಹಾನುಭೂತಿ ತೋರುವುದು, ಕ್ರೌರ್ಯ ಪ್ರದರ್ಶನ ಮಾಡುವುದು, ಸಿಟ್ಟಾಗುವುದು, ಕ್ಷಮಿಸುವುದು; ಯಾವುದೇ ವರ್ತನೆ, ಚಿಂತನೆ, ನಡವಳಿಕೆಗಳನ್ನು ತೆಗೆದುಕೊಳ್ಳಿ, ಅವೆಲ್ಲಾ ತನ್ನ ಮನಸ್ಸಿನ ಆದೇಶದಂತೆ, ತನ್ನ ಮನಸ್ಸಿನ ತೃಪ್ತಿಗಾಗೇ, ಅಥವಾ ತನ್ನದೇ ಮನಸ್ಸಿನ ಅನಿಯಂತ್ರಿತ ಚಟುವಟಿಕೆಯಿಂದಲೇ ನಡೆಯುವುದು. ಹಾಗೆಯೇ ಆತ್ಮಹತ್ಯೆಯೂ ಕೂಡಾ ವ್ಯಕ್ತಿಯ ಅವನದೇ ಮನಸ್ಸಿನ ಪ್ರೇರಣೆ. ಈ ಪ್ರೇರಣೆ ನಾನಾ ಕಾರಣಗಳಿಂದ ಆಗಬಹುದು. ಅವುಗಳೂ ಕೂಡಾ ಹೊರಗಿನದಲ್ಲ. ವ್ಯಕ್ತಿಯ ಮನಸ್ಸಿನ ಸಮಸ್ಯೆಗಳದ್ದು.

ಒಂದು ಸಾಧಾರಣ ಉದಾಹರಣೆಯನ್ನು ಗಮನಿಸಿ.
ಯಾರೋ ಒಬ್ಬ ವ್ಯಕ್ತಿಯ ನಡವಳಿಕೆ ನಮಗೆ ಕಿರಿಕಿರಿಯುಂಟು ಮಾಡುತ್ತಿದೆ. ಅವನು ಉದ್ದೇಶಪೂರ್ವಕವಾಗಿ ನಮಗೆ ಗೋಳು ಹುಯ್ದುಕೊಳ್ಳುತ್ತಿರಬಹುದು ಅಥವಾ ಅವನ ಸ್ವಭಾವವೇ ಹಾಗಿದ್ದು ನಮಗೆ ಅದು ಹಿಡಿಸದೇ ಹೋಗುತ್ತಿರಬಹುದು. ಏನಾದರಾಗಲಿ, ಒಟ್ಟಿನಲ್ಲಿ “ನಾವು ಅವನಿಗೆ ರೇಗಿಸಬೇಡ. ನನಗೆ ಹುಚ್ಚು ಹಿಡಿಸಬೇಡ. ಕೆರಳಿಸಬೇಡ” ಎಂದೇನೋ ಹೇಳುತ್ತೇವೆ. ನಮ್ಮನ್ನು ರೇಗಿಸಬೇಕೆಂಬುದೇ ಅವನ ಉದ್ದೇಶವಾಗಿದ್ದರೆ, ನಾವು ಕೆರಳಿದರೆ ಅವನು ಯಶಸ್ವಿಯಾದನೆಂದು ಅರ್ಥ. ನಾವು ಅವನ ಅಧೀನರಾದೆವೆಂದು ಅರ್ಥ. ನಾವು ನಮ್ಮ ಸಹನೆಯ ಅಥವಾ ಸಮತೋಲನಗೊಳಗಾಗುವ ಸಾಮರ್ಥ್ಯವನ್ನು ಅವನ ನಿಯಂತ್ರಣದಲ್ಲಿ ಕೊಡುವಷ್ಟು ದುರ್ಬಲರಾಗಿದ್ದೇವೆ ಎಂದು ಅರ್ಥ. ಅವನನ್ನು ಸೋಲಿಸಬೇಕೆಂದರೆ ನಾವು ಕೆರಳಬಾರದು, ಅವನ ಕೆರಳಿಸುವಿಕೆಯನ್ನು ಪ್ರತಿಭಟಿಸುವ ನಮ್ಮ ವಿಧಾನ ನಮ್ಮ ಆಯ್ಕೆಯದ್ದಾಗಿರಬೇಕು. ಅದು ಅವನ ವಿಫಲತೆಯನ್ನು ಸಾಧಿಸುವಂತದ್ದಾಗಿರಬೇಕು. ವಾಸ್ತವವಾಗಿ ಸೋಲು ಗೆಲುವಿನ ಕುರಿತಾದ ವಿಷಯವಲ್ಲದಿದ್ದರೂ, ಆತನನ್ನು ಇಲ್ಲಿ ನಾವು ಗೆಲ್ಲುತ್ತೇವೆ. ಈ ಗೆಲ್ಲುವಿಕೆ ನಾವೇ ನಮಗೆ ಕೊಟ್ಟುಕೊಂಡಿರುವ ತರಬೇತಿಯ ಮೇಲಿರುತ್ತದೆ. ಈ ಬಗೆಯ ತಾಳ್ಮೆ, ಸಹಿಷ್ಣುತೆಗಳಂತಹ ಗುಣಗಳು ಯಾರಲ್ಲೂ ಇರುವಂತಹ ವಿಶೇಷ ಶಕ್ತಿಗಳಲ್ಲ. ಬದಲಾಗಿ ರೂಢಿಗಳು, ಮಾಡಿಕೊಂಡಿರುವ ಅಭ್ಯಾಸಗಳು, ಅಂದರೆ ತೆಗೆದುಕೊಂಡಿರುವ ತರಬೇತಿಗಳು. ಯಾವುದರ ಸತತ ಅಭ್ಯಾಸಗಳು ಮತ್ತು ತರಬೇತಿಗಳು ಮುಂದೆ ಶಕ್ತಿಗಳಾಗಿ ರೂಪಾಂತರ ಹೊಂದುತ್ತವೆ ಮತ್ತು ಆ ಹೆಸರಿನಲ್ಲಿ ಕರೆಯಲ್ಪಡುತ್ತವೆ. ಅಷ್ಟೆಲ್ಲಾ ಯಾಕೆ; ಮಾನವತೆ, ಪ್ರೀತಿ, ಸಮುದಾಯ ಕಾಳಜಿ, ಕರುಣೆಗಳಂತಹ ಮೌಲ್ಯಗಳೂ ಕೂಡಾ ವಿಶೇಷವಾದ ಗುಣಗಳೇನಲ್ಲ. ಅವನಿಗೆ ಅವೆಲ್ಲದರ ಪರಿಚಯವಿರುತ್ತದೆ. ಹಂತ ಹಂತವಾಗಿ ಮಾಡಿಕೊಂಡು ಬಂದಿರುವ ರೂಢಿ ಮತ್ತು ತರಬೇತಿಗಳೇ ಆಗಿರುತ್ತವೆ. ಹಾಗೆ ಅಭ್ಯಾಸ ಮಾಡಲು ಹಿರಿಯರು ಮಕ್ಕಳಿಗೆ ಅವಕಾಶ ಒದಗಿಸಬೇಕು. ತಾವು ಮಾದರಿಗಳಾಗಿರಬೇಕು. ಹಾಗೂ ಒಂದುವೇಳೆ ಒಬ್ಬ ವ್ಯಕ್ತಿಯ ವಾತಾವರಣ ಇದಕ್ಕೆ ಪೂರಕವಾಗಿಲ್ಲದಿದ್ದ ಪಕ್ಷದಲ್ಲಿ ಉದ್ದೇಶಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ತನ್ನನ್ನು ತಾನು ತರಬೇತಿಗೊಳಿಸಿಕೊಳ್ಳಬೇಕು. ಭಾಷೆ, ಈಜು, ಸಂಗೀತ, ನೃತ್ಯಗಳನ್ನು ಅಭ್ಯಾಸ ಮಾಡಿದಂತೆ ಈ ಗುಣಗಳನ್ನೂ ಅಭ್ಯಾಸ ಮಾಡಬೇಕು.

ಆತ್ಮಹತ್ಯೆಯೂ ಕೂಡ ಹೊರಗಿನ ನೆಪಗಳನ್ನು ಆಧರಿಸಿಕೊಂಡು ಮಾಡಿಕೊಳ್ಳುವ ಆತ್ಮಘಾತುಕತನವಾಗಿದೆ. ತನ್ನನ್ನು ತಾನು ಹಾನಿಗೊಳಿಸಿಕೊಳ್ಳುವ ಆಲೋಚನೆಗಳು, ಯಾವ ರೀತಿಯಲ್ಲಿ ಘಾಸಿಗೊಳಿಸಿಕೊಳ್ಳಬೇಕೆಂಬ ಯೋಚನೆಗಳು, ಘಾಸಿಗೊಳಿಸಿಕೊಳ್ಳುವುದಕ್ಕೆ ಪೂರಕವಾಗಿರುವ ವರ್ತನೆಗಳು, ನಾನು ನೇಣು ಹಾಕಿಕೊಂಡು ಸಾಯ್ತೀನಿ, ವಿಷ ಕುಡಿತೀನಿ, ಬಾವಿಗೆ ಧುಮುಕುತ್ತೀನಿ, ನದಿಗೆ ಹಾರ್ತೀನಿ; ಈ ಬಗೆಯ ಪುನರಾವರ್ತಿತ ಮಾತುಗಳು, ತನ್ನ ತಾನು ಕೊಂದುಕೊಳ್ಳುವಂತಹ ಘಾತಕ ಶಕ್ತಿಯನ್ನು ತೋರುವಂತಹ ಮಾರಕ ವರ್ತನೆಗಳು, ಹಾಗೂ ತಮ್ಮ ಘಾತುಕತನದ ಶಕ್ತಿಯು ಯಾವ ರೀತಿಯಲ್ಲಿ ಪ್ರದರ್ಶನವಾಗಬಹುದೆಂಬ ಅವರದೇ ನಿರೀಕ್ಷಣೆಗಳು; ಇವೆಲ್ಲವೂ ವ್ಯಕ್ತಿಯ ಆತ್ಮಹತ್ಯೆಗೆ ಒಲವು ತೋರುವ ಮನೋರೋಗಿಯ ಹೊರಗಿನ ಲಕ್ಷಣಗಳು.

ಹಠಾತ್ ಪ್ರವೃತ್ತಿಯ (ಇಂಪಲ್ಸಿವ್) ಸಮಸ್ಯೆ ಅಂದರೆ ಕೋಪ, ತಾಪ, ರೋಷ, ಕಾಮವೇ ಮೊದಲಾದ ನಿಯಂತ್ರಣದಲ್ಲಿ ಇಟ್ಟುಕೊಳ್ಳಲೇ ಬೇಕಾಗಿರುವಂತಹುದನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲದಿರುವಂತದ್ದು, ಅಸಂತುಷ್ಟಿಯ ಸಮಸ್ಯೆ (ಅನ್ಹೆಡೋನಿಯಾ) ಅಂದರೆ ಸಾಮಾನ್ಯವಾಗಿ ಸಂತೋಷಪಡಬಹುದಾಗಿರುವಂತಹ ವಿಷಯಗಳಲ್ಲಿ ಸಂತೋಷವನ್ನು ಮತ್ತು ತೃಪ್ತಿಯನ್ನು ಕಾಣದೇ ಇರುವುದು, ದಾಳಿಗೊಳ್ಳುವ ಭೀತಿ, ಜೀವಿಸಲು ಮತ್ತು ಭವಿಷ್ಯಕ್ಕಾಗಿ ಏನನ್ನೂ ಯೋಜನೆಗಳನ್ನು ಹಾಕಿಕೊಳ್ಳದೇ ಇರುವುದು, ಭ್ರಾಮಕ ಜಗತ್ತಿನ ಅಥವಾ ಅತಿಭೌತಿಕತೆಯ ಗಾಢ ವ್ಯಾಮೋಹದಲ್ಲಿ ಭ್ರಮಾಧೀನವಾಗಿರುವುದು, ವಿಪರೀತ ಮದ್ಯ ಸೇವನೆ, ಇತರರ ಬಗ್ಗೆ ಕ್ರೂರವಾಗಿ ಆಲೋಚನೆಗಳನ್ನು ಮಾಡುತ್ತಿರುವುದು, ಖಿನ್ನತೆ, ಮೂಡ್ ಸಮಸ್ಯೆ ಅಥವಾ ಬೈ ಪೋಲಾರ್ ಸಮಸ್ಯೆ ಅಂದರೆ ಸಂತೋಷವಾಗಿರುವ ವ್ಯಕ್ತಿ ಇದ್ದಕ್ಕಿದ್ದಂತೆ ಕೋಪಗೊಂಡು ಬಿಡುವುದು, ಚಟುವಟಿಕೆಯಿಂದ ಇರುವ ವ್ಯಕ್ತಿ ಸಣ್ಣ ಕಾರಣಕ್ಕೆ ಅಥವಾ ವಿನಾಕಾರಣ ದಿಢೀರನೇ ಮಂಕಾಗಿ ಬಿಡುವಂತಹ ಸಮಸ್ಯೆಗಳು, ಸ್ಕಿಜೋಫ್ರೇನಿಯಾ ಅಥವಾ ಛಿದ್ರ ಮನಸ್ಥಿತಿ ಅಂದರೆ ವಿಚಾರ, ಭಾವನೆ, ನಡವಳಿಕೆಗಳಿಗೆ ಏನೇನೂ ಸಂಬಂಧವೇ ಇಲ್ಲದಂತೆ ವಿಷಯಗಳನ್ನು ವಿಲಕ್ಷಣವಾಗಿ ಅಥವಾ ವಿಚಿತ್ರವಾಗಿ ಗ್ರಹಿಸುವುದು, ಭಾವಿಸುವುದು, ಭ್ರಮಿಸುವುದು, ತಮ್ಮದೇ ಭ್ರಾಮಕ ಲೋಕವನ್ನು ನಿಜವೆಂದು ಅನುಭವಿಸುವುದು, ಆತಂಕದ ಸಮಸ್ಯೆ, ವ್ಯಕ್ತಿತ್ವ ಅಥವಾ ಅರಿಮೆಯಲ್ಲಿ ಸಮಸ್ಯೆಗಳು, ಸಮಾಜಘಾತುಕತನ ಮನಸ್ಥಿತಿ; ಹೀಗೆ ಅನೇಕ ವಿಧವಾದ ಸಮಸ್ಯೆಯುಳ್ಳವರೂ ಕೂಡಾ ಆತ್ಮಹತ್ಯೆಯ ಕಡೆಗೆ ಹೊರಳಬಹುದು. ಹಾಗಾಗಿ ವ್ಯಕ್ತಿಗಳು ತಮ್ಮ ಬಗ್ಗೆಯೂ ಅಥವಾ ತಮ್ಮ ಸಂಪರ್ಕದಲ್ಲಿರುವ ಇತರರ ಬಗ್ಗೆಯೂ ಲಕ್ಷಣಗಳನ್ನು ಗುರುತಿಸಬೇಕು ಮತ್ತು ಆತ್ಮಹತ್ಯೆಯ ಒಲವಿನಿಂದ ಹೊರಗೆ ಬರುವಂತಹ ದಿಕ್ಕಿನಲ್ಲಿ ಸಮಾಲೋಚನೆ ಮತ್ತು ಚಿಕಿತ್ಸೆಗಳನ್ನು ಪಡೆಯಬೇಕು.

ಮಕ್ಕಳಲ್ಲಿ ಆತ್ಮಹತ್ಯೆಯ ಲಕ್ಷಣಗಳು
ಮಕ್ಕಳ ಜೊತೆ ಅಥವಾ ಅವರ ಎದುರಿನಲ್ಲಿ ಸಾವು, ನರಳುವಿಕೆ ಮತ್ತು ಆತ್ಮಹತ್ಯೆಯಂತಹ ಮಾತುಗಳನ್ನು ಆಡಬಾರದು, ಅದರಿಂದ ಅವರ ಮನಸ್ಸಿನ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರುವುದೆಂದು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ಅದೊಂದು ತಪ್ಪು ಕಲ್ಪನೆ. ಮಕ್ಕಳು ತಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರದಲ್ಲಿ ನೋಡುವಂತಹ, ಗ್ರಹಿಸುವಂತಹ ಯಾವುದೇ ವಿಷಯವಾದರೂ ಮುಕ್ತ ಮಾತುಕತೆಯ ಮೂಲಕ ತಿಳುವಳಿಕೆಯನ್ನು ಪಡೆಯುವಂತಿರಬೇಕು. ಹೋಲಿಸಿದರೆ, ಅವಿದ್ಯಾವಂತರಿಗಿಂತ ವಿದ್ಯಾವಂತರಲ್ಲಿ ಅಥವಾ ಅಕ್ಷರಸ್ಥರಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚೆಂದು ವರದಿಗಳು ಹೇಳುತ್ತವೆ. ಅಂದರೆ ನಾವು ಪಡೆಯುತ್ತಿರುವ ಶಿಕ್ಷಣದಲ್ಲಿ ಮನಸ್ಥಿತಿಯನ್ನು ಸಬಲಗೊಳಿಸುವ ದಿಕ್ಕಿನಲ್ಲಿ ಕೆಲಸಗಳು ಸಾಕಾಗುತ್ತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು ಲಿಂಗಾಧಾರಿತವಾಗಿ ಆತ್ಮಹತ್ಯೆಗಳನ್ನು ಗಮನಿಸಿದರೆ ಭಾರತದ ಮಟ್ಟಿಗೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಕೆಲವು ಕಡೆ ಗಂಡಸರು ಮತ್ತೆ ಕೆಲವು ಕಡೆ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿರುತ್ತಾರೆ. ಈ ಅನುಪಾತದಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ವಿಕಿಪೀಡಿಯಾದ ಅಂಕಿ ಅಂಶಗಳ ಪ್ರಕಾರ, ವಿಶ್ವದಲ್ಲಿ ಹೆಂಗಸರ ಆತ್ಮಹತ್ಯೆಯು ಭಾರತ ನಾಲ್ಕನೆ ಸ್ಥಾನದಲ್ಲಿ ಮತ್ತು ಗಂಡಸರ ಆತ್ಮಹತ್ಯೆಯಲ್ಲಿ ನಲವತ್ತಾರನೆಯ ಸ್ಥಾನದಲ್ಲಿದೆಯಂತೆ.

ಕೌಟುಂಬಿಕ ಕಲಹಗಳಿಂದ, ರಾಜಕೀಯ ಕಾರಣಗಳಿಂದ, ಮಾನಸಿಕ ಅಸ್ವಸ್ಥತೆಗಳಿಂದ ಆತ್ಮಹತ್ಯೆಗಳಾಗುವಂತೆ, ಸಾಲಬಾಧೆಗಳಿಂದ, ರೈತರ ಆತ್ಮಹತ್ಯೆಗಳೂ ಕೂಡಾ ಅಂಕಿ ಅಂಶವನ್ನು ಏರಿಸಿವೆ. ಜೊತೆಗೆ ವಿದ್ಯಾರ್ಥಿಗಳ ಆತ್ಮಹತ್ಯೆಯೂ ಕೂಡಾ ಆತಂಕ ತರುವಷ್ಟು ಹೆಚ್ಚಿವೆ. ಇತ್ತೀಚೆಗೆ ಕರ್ನಾಟಕವೂ ಸೇರಿದಂತೆ ಭಾರತದ ಇತರ ರಾಜ್ಯಗಳಲ್ಲಿ ಸ್ಥೂಲ ನೋಟಕ್ಕೇ ಒದಗುವಂತೆ ಹತ್ತರಿಂದ ಇಪ್ಪತ್ತನಾಲ್ಕು ವರ್ಷದವರ ಆತ್ಮಹತ್ಯೆಯ ಸಂಖ್ಯೆ ಬಹಳ ಹೆಚ್ಚಿದೆ. ಇನ್ನು ಅವರ ಕಾರಣಗಳು ಹೆತ್ತವರ ಭಯ ಹುಟ್ಟಿಸುವಷ್ಟು ಸಾಧಾರಣವಾಗಿರುತ್ತವೆ. ಅಮ್ಮ ಓದಿಕೊಳ್ಳಲು ಬೈದರೆಂದು, ಟಿ ವಿ ನೋಡಲು ಬಿಡಲಿಲ್ಲವೆಂದು, ಆನ್ಲೈನ್ ತರಗತಿಗೆ ಹೋಗಲಾಗಲಿಲ್ಲವೆಂದು, ಕಡಿಮೆ ಅಂಕ ಬಂತೆಂದು, ಬೈಕ್ ಕೊಡಿಸಲಿಲ್ಲವೆಂದು; ಹೀಗೆ ನಾವು ಯಾವುದನ್ನು ಸಿಲ್ಲಿ ಎಂದು ಲಘುವಾಗಿ ಪರಿಗಣಿಸಬಹುದೋ ಅಂತವನ್ನೆಲ್ಲಾ ತಮ್ಮನ್ನು ಕೊಂದುಕೊಳ್ಳಲು ನೆಪವಾಗಿಸಿಕೊಳ್ಳುತ್ತಾರೆ. ಇಂತಹ ಪ್ರಕರಣಗಳ ವರದಿಗಳನ್ನು ಗಮನಿಸಿದಾಗ ಹೆತ್ತವರಿಗೂ ಮತ್ತು ಶಿಕ್ಷಕರಿಗೂ ಮಕ್ಕಳ ಜೊತೆಗೆ ಹೇಗೆ ವರ್ತಿಸುವುದು ಎಂದು ತಿಳಿಯದೇ ಗೊಂದಲಕ್ಕೊಳಗಾಗುವುದೂ ಉಂಟು. ಮಕ್ಕಳೂ ಕೂಡಾ ಯಾವುದಕ್ಕೆ ಸೂಕ್ಷ್ಮವಾಗಿ ಸಂವೇದಿಸಬೇಕು, ಯಾವುದನ್ನು ನಿರ್ಲಕ್ಷಿಸಬೇಕು ಅಥವಾ ಗಟ್ಟಿತನದಿಂದ ಎದುರಿಸಬೇಕು ಎಂಬ ಶಿಕ್ಷಣವನ್ನು ಪಡೆಯುವುದರ ವೈಫಲ್ಯ ನಮ್ಮ ಕೌಟುಂಬಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗಳೆರಡರಲ್ಲೂ ಇದೆ. ಮಕ್ಕಳಿಂದ ಆತ್ಮಹತ್ಯೆಯಂತಹ ವಿಷಯವನ್ನು ಮರೆಮಾಚುವುದು ಅವರಿಗೆ ಯಾವ ರೀತಿಯಲ್ಲಿಯೂ ಸಹಾಯವಾಗುವುದಿಲ್ಲ. ಇದೂ ಕೂಡಾ ಲೈಂಗಿಕತೆಯ ಅರಿವನ್ನು ಹೊಂದಿರುವ ಮತ್ತು ಅದರಿಂದ ಶಾರೀರಿಕ ಬದಲಾವಣೆಗಳು ಮತ್ತು ಮನೋಭಾವಗಳು ಉಂಟಾಗುತ್ತಿರುವ ಮಕ್ಕಳಿಂದ ಲೈಂಗಿಕ ಶಿಕ್ಷಣವನ್ನು ಮರೆಮಾಚಿದಂತೆ. ಆತ್ಮಹತ್ಯೆಯ ವಿಷಯಗಳನ್ನು ಮತ್ತು ಅದರ ಬಗ್ಗೆ ಮಾತುಕತೆಯನ್ನು ಮಕ್ಕಳಿಂದ ಮತ್ತು ಹದಿಹರೆಯದವರಿಂದ ಮುಚ್ಚುಮರೆ ಮಾಡುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಒಳನೋಟಗಳು ಸಿಗದೇ ಮಾನಸಿಕವಾಗಿ ಸಮಸ್ಯೆಗಳಿಗೆ ಒಳಗಾಗುತ್ತಾರೆ ಮತ್ತು ಏಕಾಂಗಿಯಾಗಿ ಎದುರಿಸದೇ ಅಪಾಯಗಳನ್ನು ಒಡ್ಡಿಕೊಳ್ಳುತ್ತಾರೆ.

ಅತಿದೊಡ್ಡ ಮಿಥ್ ಎಂದರೆ, ಆತ್ಮಹತ್ಯೆಯ ಕುರಿತಾಗಿ ಮಾತಾಡುವುದರಿಂದ ಮಕ್ಕಳಿಗೆ ಅಥವ ಹದಿಹರೆಯದವರಿಗೆ ಅದರ ಬಗ್ಗೆ ಪರಿಚಯ ನೀಡಿದಂತೆ ಅಥವಾ ಅದರ ಐಡಿಯಾ ಕೊಟ್ಟಂತಾಗುತ್ತದೆ ಅಥವಾ ಮಾಡಿಕೊಳ್ಳುವುದರ ಬಗ್ಗೆ ಆಲೋಚನೆ ಕೊಟ್ಟಂತೆ ಎಂದು ಹಿರಿಯರು ಭಾವಿಸುವುದು. ಮಗುವೊಂದಕ್ಕೆ ಯಾವಾಗ ಆತ್ಮಹತ್ಯೆಯ ಆಲೋಚನೆ ಬರುತ್ತದೆ ಅಥವಾ ಬರುವುದಿಲ್ಲ ಎಂದು ಯೋಚಿಸಲು ಪೋಷಕರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ವಿಷಯಗಳನ್ನು ಗ್ರಹಿಸುವ ಮತ್ತು ಸಂಗತಿಗಳನ್ನು ಅವಲೋಕಿಸುವ ವಿಷಯದಲ್ಲಿ ಪೋಷಕರು ಮತ್ತು ಮಕ್ಕಳು ಒಂದೇ ರೀತಿಯಾಗಿರುವುದಿಲ್ಲ.

ಮಕ್ಕಳು ಆತ್ಮಹತ್ಯೆಗೆ ವಾಲುವ ಧೋರಣೆಯನ್ನು ವಿಶ್ಲೇಷಿಸುವುದು ಕೊಂಚ ಸಂಕೀರ್ಣಮಯವೇ. ಅದು ಸಾಮಾನ್ಯವಾಗಿ ಹಠಾತ್ ಪ್ರವೃತ್ತಿಯ (ಇಂಪಲ್ಸಿವ್) ಜೊತೆಗೆ ಗೊಂದಲ, ಹಟ, ದುಃಖ ಮತ್ತು ಕೋಪಗಳು ಸೇರಿಕೊಂಡಿರುತ್ತವೆ. ಮಕ್ಕಳಲ್ಲಿ ಹಠಾತ್ ಪ್ರವೃತ್ತಿ ಮತ್ತು ಅದರೊಂದಿಗಿನ ಹಟಮಾರಿತನದ ಧೋರಣೆಗಳು ಕಂಡು ಬಂದಲ್ಲಿ ಅಲರ್ಟ್ ಆಗಬೇಕು. ಕೆಲವು ಸಲ ಮಕ್ಕಳು, “ನಾನು ಹೊರಟು ಹೋದರೆ ನಿನಗೆ ಖುಷಿ, ನಾನು ಹೋಗುವುದಕ್ಕೇ ನೀವು ಕಾಯ್ತಿದ್ದೀರಿ” ಎಂದೋ ಅಥವಾ “ನನ್ನ ಕಂಡರೆ ಯಾರಿಗೂ ಆಗೋದೇ ಇಲ್ಲ, ನನ್ನ ಕಂಡರೆ ಯಾರಿಗೂ ಇಷ್ಟವೇ ಇಲ್ಲ” ಎಂಬಂತಹ ಮಾತುಗಳನ್ನು, ಇನ್ನೂ ಕೆಲವೊಮ್ಮೆ, “ನಾನಿದ್ದೀನಿ ಅಂತ ಯಾರೂ ಕೇರ್ ಮಾಡೊಲ್ಲ” ಎಂಬುವ ಮಾತುಗಳೂ ಎಚ್ಚೆತ್ತುಕೊಳ್ಳಬೇಕಾದ ಸಂಕೇತಗಳೇ.

5 ರಿಂದ 11 ವರ್ಷದ ಮಕ್ಕಳಿಗಿಂತ 12 ರಿಂದ 14 ವರ್ಷದ ಮಕ್ಕಳಲ್ಲಿ ಆತ್ಮಹತ್ಯೆಯ ಕಡೆಗೆ ವಾಲುವ ನಿದರ್ಶನಗಳು ಕೊಂಚ ಹೆಚ್ಚೇ ಇವೆ. ಇದು ಸಾಮಾನ್ಯವಾಗಿ 16 ರಿಂದ 22ರವರೆಗಿನವರಲ್ಲಿ ಪ್ರೀತಿ, ಪ್ರೇಮದ ವಿಷಯವಾಗಿ ಮಾಡಿಕೊಳ್ಳುವ ಆತ್ಮಹತ್ಯೆಗಳ ರೀತಿಯದಲ್ಲ. ಮನೆಯವರೊಂದಿಗೆ ಇರುವ ಸಂಘರ್ಷ ಮತ್ತು ತೊಡಕುಗಳೇ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಆದರೆ 5 ರಿಂದ 14 ವರ್ಷದ ಮಕ್ಕಳಲ್ಲಿ ಹೆಚ್ಚಿನ ಮಾನಸಿಕ ಸಮಸ್ಯೆಗಳಿಗೆ ಕಾರಣ ಅವರವರ ಕುಟುಂಬದ ಒಡಕುಗಳು, ಬಿಕ್ಕಟ್ಟುಗಳು, ತಂದೆ, ತಾಯಿ ಮತ್ತು ಕುಟುಂಬದ ಇತರ ಸದಸ್ಯರ ಸಂಬಂಧಗಳಲ್ಲಿನ ಬಿರುಕುಗಳು, ಸಂಘರ್ಷಗಳು ಕಾರಣವಾಗಿರುತ್ತವೆ. ಅಥವಾ ಮಕ್ಕಳಲ್ಲಿ ಬೇರೆ ಇನ್ನಾವುದೇ ಕಾರಣದಿಂದ ಇದ್ದಿರಬಹುದಾದ ಮಾನಸಿಕ ಸಮಸ್ಯೆಯನ್ನು ತೀವ್ರವಾಗಿ ಹೆಚ್ಚಿಸುತ್ತದೆ.
ಕುಟುಂಬದಲ್ಲಿ ಸದಾ ಕಾಣುತ್ತಿರುವ ಅಹಿತಕರವಾದ ಚಟುವಟಿಕೆಗಳು ಮತ್ತು ಸದಸ್ಯರ ನಡವಳಿಕೆಗಳು ಮಕ್ಕಳನ್ನು ಮಂಕಾಗಿಸುವುದಲ್ಲದೇ ದೀರ್ಘ ಕಾಲದ ಲಘುಖಿನ್ನತೆಯಲ್ಲಿ (dysthymia) ಇಟ್ಟಿರುತ್ತದೆ. ಇದು ಕೆಲವು ಸಲ ಹೈಪರ್ ಆ್ಯಕ್ಟಿವಿಟಿಯ ಜೊತೆಗೆ ಅಥವಾ ಅದು ಇಲ್ಲದೆಯೂ ಗಮನ ಕೊರತೆಯ (attention deficit disorder) ಸಮಸ್ಯೆಯನ್ನು ಎದುರಿಸುತ್ತದೆ.

ಗಂಭೀರವಾದ ಎಚ್ಚರಿಕೆಗಳು
ಮಕ್ಕಳಲ್ಲಿ ಕಾಣುವಂತಹ ಕೆಲವು ಸುಳುಹುಗಳನ್ನು ಯಾವ ರೀತಿಯಲ್ಲಿಯೂ ನಿರ್ಲಕ್ಷಿಸಬಾರದು. ಅವು ಜೀವ ಹಾನಿಯ ರೀತಿಯಲ್ಲಿ ಶಾಶ್ವತವಾದಂತಹ ಗಂಭೀರ ಪರಿಣಾಮಗಳನ್ನು ಬೀರಬಹುದು.
ನಮ್ಮ ಮಗುವಿನಲ್ಲೇನೋ ನಕಾರಾತ್ಮಕವಾದ ಅಥವಾ ಖಿನ್ನತೆಗೆ ಜಾರಿರುವಂತಹ ಚಿಕ್ಕ ಸುಳುಹು ಸಿಕ್ಕಿದರೂ ಎಚ್ಚೆತ್ತುಕೊಳ್ಳಬೇಕು. ನಮ್ಮ ಒಳ ಮನಸ್ಸಿನ ಮಾತನ್ನು ವಿಶ್ವಾಸಿಸಬೇಕು. ಕಣ್ಣರಿಯದಿದ್ದರೂ ಕರುಳರಿಯುತ್ತದೆ ಎಂಬುದು ಎಷ್ಟೋ ಸಮಯದಲ್ಲಿ ನಿಜವಾಗುತ್ತದೆ. ಕೆಲವು ಸಲ ಕಾಣುವುದಕ್ಕಿಂತ, ಕೇಳುವುದಕ್ಕಿಂತ, ಯಾರೋ ಹೇಳುವುದಕ್ಕಿಂತ ನಮಗೇನೋ ಅನ್ನಿಸುತ್ತದೆ. ಆಗ ಮಗುವಿನ ಕಡೆಗೆ ವಿಶೇಷ ಗಮನ ಕೊಡಬೇಕು. ಕೆಲವೊಮ್ಮೆ ಅವರ ಸಾಮಾನ್ಯ ವರ್ತನೆ ಮತ್ತು ದೈನಂದಿನ ರೂಢಿಗಳಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ.
1.ನಿದ್ರೆಯಲ್ಲಿ ಬದಲಾವಣೆ. ಅತಿ ಹೆಚ್ಚು, ಅತಿ ಕಡಿಮೆ, ನಿದ್ರಾಹೀನತೆ ಅಥವಾ ರಾತ್ರಿಯ ಹೊತ್ತು ವಿನಾಕಾರಣ ಎದ್ದು ಓಡಾಡುತ್ತಿರುವುದು.
2.ಆಹಾರ ಸೇವನೆಯಲ್ಲಿ ಬದಲಾವಣೆ. ಸಾಮಾನ್ಯವಾಗಿ ತೆಗೆದುಕೊಳ್ಳುವ ಆಹಾರದ ಪ್ರಮಾಣಕ್ಕಿಂತ ಅತಿ ಹೆಚ್ಚು ತಿನ್ನುತ್ತಿರುವುದು ಅಥವಾ ತೀರಾ ಕಡಿಮೆ ಮಾಡುವುದು.
3.ಮನೆಯವರಿಂದ ಮತ್ತು ಸ್ನೇಹಿತರಿಂದ ಅಂತರವನ್ನು ಕಾಯ್ದುಕೊಳ್ಳುವುದು. ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ನಿರಾಸಕ್ತಿ ತೋರುವುದು. ಬರದೇ ಇರುವುದು.
4.ಕೆಲವೊಮ್ಮೆ ಮನೋದೈಹಿಕ (Psychosomatic symptoms) ಲಕ್ಷಣಗಳನ್ನೂ ತೋರಬಹುದು. ತಲೆ ನೋವು, ಹೊಟ್ಟೆ ನೋವು ಮತ್ತು ವಿವರಿಸಲಾಗದಂತಹ ಅನೇಕ ನೋವುಗಳಿವೆ ಅಂತ ಹೇಳಬಹುದು. ನೀವು ಗಮನಿಸಿರಬಹುದು. ಕೆಲವರು ಹೊಟ್ಟೆ ನೋವು ತಡೆಯಲಾರದೇ, ತಲೆ ನೋವು ತಡೆಯಲಾರದೇ ಆತ್ಮಹತ್ಯೆ ಮಾಡಿಕೊಂಡರು ಎಂದು ವರದಿಗಳು ಬರುತ್ತಿರುತ್ತವೆ. ಸಾಮಾನ್ಯವಾಗಿ ಅವು ನಿಜವಾದ ಕ್ಲಿನಿಕಲ್ ಸಮಸ್ಯೆಯಾಗಿರುವುದಿಲ್ಲ. ಸೈಕೋಸೊಮ್ಯಾಟಿಕ್ ಅಥವಾ ಮನೋದೈಹಿಕ ಸಮಸ್ಯೆಗಳಾಗಿರುತ್ತವೆ.

ಶಾಲೆಯಲ್ಲಿ ತೋರುವ ಸೂಚನೆಗಳು

ಶಾಲೆಯಲ್ಲಿಯೂ ಮಗು ತನ್ನ ವರ್ತನೆಗಳಲ್ಲಿ ಬದಲಾವಣೆಗಳನ್ನು ತೋರುತ್ತವೆ.
1.ಕಲಿಕೆಯಲ್ಲಿ ವಿಪರೀತವಾದಂತಹ ಏರಿಳಿತಗಳು ಕಾಣುತ್ತವೆ. ಚೆನ್ನಾಗಿ ಓದುತ್ತಿರುವ ಮತ್ತು ಉತ್ತಮ ಅಂಕಗಳನ್ನು ಗಳಿಸುತ್ತಿರುವ ಮಗು ಇದ್ದಕ್ಕಿದ್ದಂತೆ ತನ್ನ ವ್ಯಾಸಂಗದಲ್ಲಿ ಹಿಂದುಳಿಯುತ್ತದೆ.
2.ಶಾಲೆಗೆ ಹೋಗುವ ಆಸಕ್ತಿಯನ್ನೇ ತೋರುವುದಿಲ್ಲ.
3.ಶಿಕ್ಷಕರೊಡನೆ ಮತ್ತು ತನ್ನ ಸಹಪಾಠಿಗಳೊಡನೆ ಎಂದಿನ ಉತ್ಸಾಹ ತೋರುವುದಿಲ್ಲ ಮತ್ತು ಅವರಿಂದ ಅಂತರವನ್ನು ಕಾಯ್ದುಕೊಳ್ಳಲು ನೋಡುವುದು.
4.ಖಿನ್ನತೆಯ ಫಲವಾಗಿ ಶಾಲೆಯೇ ಬೇಡ ಎನ್ನುವುದು.
5.ಮೊದಲು ಭಾಗವಹಿಸುತ್ತಿದ್ದಂತಹ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉದಾಸೀನ ತೋರುವುದು.

ತನ್ನ ಸಾವಿನ ಬಗ್ಗೆ ಮಗುವು ಮಾತಾಡುವಾಗಲೂ ಮನೆಯವರು ಎಚ್ಚೆತ್ತುಕೊಳ್ಳಬೇಕು. ಇದ್ದಕ್ಕಿದ್ದಂತೆ ನಾನು ಸತ್ತಾಗ ಹೀಗೆ ಮಾಡಿ ಎಂದೋ, ಅವರನ್ನು ಕರೆಯಿರಿ ಎಂದೋ ಏನಾದರೂ ಹೇಳಿದರೆ ಇದು ನೇರ ಎಚ್ಚರಿಕೆ ಎಂದೇ ತಿಳಿಯಿರಿ. ಅವರ ಮನಸ್ಸು ಸಾಯುವ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸುತ್ತಿದ್ದಂತೆ ಸಾಯುವ ವಿಧಾನಗಳ ಬಗ್ಗೆಯೂ ಕೂಡಾ ಯೋಚಿಸತೊಡಗುತ್ತದೆ. ಆಗಲೂ ಕೂಡ ಇಂತಹ ವಿಧಾನಗಳನ್ನು ಅರಿಯುವ ಬಗ್ಗೆ ಕುತೂಹಲ ಮತ್ತು ಆಸಕ್ತಿಯನ್ನು ತೋರುತ್ತಿರುತ್ತದೆ.
“ನಾನು ಸತ್ತು ಹೋದರೆ ಯಾರಿಗೂ ಏನೂ ನಷ್ಟವಿಲ್ಲ” ಆತ್ಮಹತ್ಯೆಗೆ ವಾಲುವ ಮಕ್ಕಳ ಸಾಮಾನ್ಯ ಮಾತು. ಮಗುವಿನ ಮಾತಿಗೆ ಏನೂ ಕಿಮ್ಮತ್ತು ಕೊಡುವಷ್ಟಿಲ್ಲ. ಅದು ಏನೋ ತಿಳಿಯದೇ ಮಾತಾಡುತ್ತದೆ ಎಂದು ಖಂಡಿತ ತಿಳಿಯಬೇಡಿ. ಆತ್ಮಹತ್ಯೆಯನ್ನು ಕೂಡಾ ತಿಳಿಯದೇ ಮಾಡಿಕೊಳ್ಳುವುದು.

ನಿರಾಶೆ ಮತ್ತು ಹತಾಶೆಯ ಭಾವಗಳು
ಆತ್ಮಹತ್ಯೆಯ ಆಲೋಚನೆಗಳು ಇರುವಂತಹ ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಹತಾಶೆಯ ಭಾವವನ್ನು ಹೊಂದಿರುತ್ತಾರೆ. ಉತ್ತಮ ಭರವಸೆಯ ದಿನಗಳನ್ನು ಅಥವಾ ಸಂಗತಿಗಳನ್ನು ಮುಂಗಾಣುವುದಿಲ್ಲ. ಅಸಹಾಯಕತೆಯ ಮಾತುಗಳನ್ನು ಆಡುತ್ತಿರುತ್ತಾರೆ. ತಮ್ಮಿಂದ ಏನೂ ಆಗುವುದಿಲ್ಲ, ತಮಗೆ ಏನೂ ಮಾಡಲಾಗುವುದಿಲ್ಲ ಎಂಬಂತಹ ಮಾತುಗಳನ್ನು ಆಡುತ್ತಿರುತ್ತಾರೆ. “ಏನು ಮಾಡಿದರೇನು, ಏನೂ ಪ್ರಯೋಜನವಿಲ್ಲ” ಎನ್ನುವ ಧೋರಣೆಯ ಮಾತುಗಳವು.
ಇನ್ನೂ ಕೆಲವು ಸಂಕೇತಗಳೆಂದರೆ, “ಇದನ್ನು ನೀನೇ ಇಟ್ಟುಕೋ” ಎಂದೋ ಅಥವಾ “ಇನ್ನು ಮುಂದೆ ಇದನ್ನು ನೀನು ಉಪಯೋಗಿಸು” ಎಂದು ತಮ್ಮ ತುಂಬಾ ಬಳಕೆಯ ಅಥವಾ ಪ್ರೀತಿಯ ವಸ್ತುಗಳನ್ನೋ ಅಥವಾ ಗೊಂಬೆಗಳನ್ನೋ ತನ್ನ ಪೋಷಕರಿಗೆ ಅಥವಾ ತನ್ನ ಒಡಹುಟ್ಟುಗಳಿಗೆ ಕೊಡಬಹುದು. ಇನ್ನೂ ಕೆಲವು ಸಲ ತಮ್ಮ ಮುದ್ದಿನ ಪ್ರಾಣಿಗಳಿದ್ದರೆ, “ನಾನು ಹೋದ ಮೇಲೆ ನಿನ್ನ ಯಾರು ನೋಡಿಕೊಳ್ತಾರೆ” ಎನ್ನುವುದೋ, “ಇದನ್ನು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳಿ” ಎಂದು ತಮ್ಮ ಉಯಿಲನ್ನು ಪ್ರಕಟಿಸುತ್ತಿರುತ್ತಾರೆ. ಮಕ್ಕಳ ಉಯಿಲು ಆಟಕ್ಕೆಂದುಕೊಳ್ಳದೇ ಎಚ್ಚೆತ್ತುಕೊಳ್ಳುವುದು ಒಳಿತು.

ಕೆಲವೊಮ್ಮೆ ಮಕ್ಕಳಿಗೆ ತಮ್ಮ ಆತ್ಮಹತ್ಯೆಯ ಆಲೋಚನೆಗಳನ್ನು ತಮ್ಮ ಮಾತಿನಲ್ಲಿ ಪ್ರಕಟಿಸಲು ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ತಾವು ಬರೆಯುವ ಚಿತ್ರಗಳಲ್ಲಿ, ಕತೆಗಳನ್ನು ಹೆಣೆಯುವುದರಲ್ಲಿ, ಆ ಬಗೆಯ ಹಾಡುಗಳ ಬಗ್ಗೆ ಒಲವು ತೋರುವುದರಲ್ಲಿಯೂ ಕೂಡಾ ಆತ್ಮಹತ್ಯೆಯ ಆಲೋಚನೆಗಳಿರುವ ಲಕ್ಷಣಗಳನ್ನು ತೋರುತ್ತಾರೆ.
ಸಾಮಾನ್ಯವಾಗಿ ನಮ್ಮ ಮಕ್ಕಳ ಸಾಧಾರಣ ಮನೋಭಾವ ತಿಳಿದಿರುತ್ತದೆ. ಅವರಿಗೆ ಯಾವುದು ಇಷ್ಟ, ಯಾವುದರಲ್ಲಿ ಆಸಕ್ತಿ, ಯಾವುದರಿಂದ ಉತ್ಸಾಹಗೊಳ್ಳುತ್ತಾರೆಂದು. ಅವುಗಳ ಬಗ್ಗೆ ನಿರಾಸಕ್ತಿ ತಳೆದಾಗಲೇ ನಿಮಗೆ ಇಲ್ಲೇನೋ ಸಮಸ್ಯೆ ಇದೆ ಎಂದು ತಿಳಿಯಬೇಕು. ಎಷ್ಟೋ ಸಲ ಅಮ್ಮ ಅಥವಾ ಅಪ್ಪ ತಮ್ಮ ಕೆಲಸಗಳ ಒತ್ತಡದಲ್ಲಿ ತಮ್ಮ ಮಕ್ಕಳಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುವುದೇ ಇಲ್ಲ. ಪ್ರತಿದಿನವೂ ಮಕ್ಕಳೊಂದಿಗೆ ಆದಷ್ಟು ಒಬ್ಬೊಬ್ಬರು ಸಾಧ್ಯವಾದಷ್ಟು ಸಮಯ ಕೊಡಬೇಕು. ಎಷ್ಟು ಮಕ್ಕಳಿದ್ದರೂ ಒಟ್ಟಾಗಿಯೂ ಮತ್ತು ಪ್ರತ್ಯೇಕವಾಗಿಯೂ ಸಮಯ ಕೊಡಬೇಕು. ಸ್ವಲ್ಪ ಕಾಲ ಮಾತಾಡಬೇಕು. ತಮ್ಮ ಮಕ್ಕಳು ಉತ್ತಮವಾದ ಭವಿಷ್ಯವನ್ನು ಹೊಂದಲಿ ಎಂದು ಎಷ್ಟೋ ಜನ ತಂದೆ ತಾಯಿಗಳು ನಿರತವಾಗಿ ದುಡಿಯುತ್ತಿರುತ್ತಾರೆ. ಯೋಜನೆಗಳನ್ನು ರೂಪಿಸುತ್ತಿರುತ್ತಾರೆ. ಆದರೆ ಆ ಮಕ್ಕಳಿಗೆ ಅಗತ್ಯವಿರುವ ಸಣ್ಣ ಸಣ್ಣ ಸಮಯವನ್ನು ಕೊಟ್ಟಿರುವುದಿಲ್ಲ. ಅದು ಅವರೆಲ್ಲ ಭವಿಷ್ಯದ ಯೋಜನೆ ಮತ್ತು ಯೋಚನೆಗಳನ್ನು ಮಣ್ಣುಪಾಲು ಮಾಡಬಹುದು.

ಮಾರಕಕ್ಕೆ ಪೂರಕ
ಆತ್ಮಹತ್ಯೆಯ ಆಲೋಚನೆಗಳಿರುವಂತಹ ಮಕ್ಕಳಿಗೆ ಮತ್ತೆ ಕೆಲವು ಸಂಗತಿಗಳು ಪೂರಕವಾಗಿ ಕೆಲಸ ಮಾಡುತ್ತವೆ.
1.ಇನ್ನೂ ಕೆಲವು ಸಲ ಮಕ್ಕಳ ಸಣ್ಣ ಪ್ರಮಾಣದಲ್ಲಾಗಲಿ, ಸಾಯುವ ಯತ್ನ ಮಾಡಿರಬಹುದು. ಉದಾಹರಣೆಗೆ ಉಸಿರುಗಟ್ಟಿ ಹಿಡಿದುಕೊಂಡು ಹೊದಿಕೆಯಲ್ಲಿ ಮಲಗುವುದು, ಕುತ್ತಿಗೆಗೆ ಏನನ್ನಾದರೂ ಬಿಗಿದುಕೊಳ್ಳುವುದು, ಮನೆಯಲ್ಲಿ ನೀರಿನ ಡ್ರಂ, ತೊಟ್ಟಿ ಅಥವಾ ಬಾತ್ ಟಬ್ಬಲ್ಲಿ ಮುಳುಗುವುದು; ಇತ್ಯಾದಿ. ಈ ಬಗೆ ಸಣ್ಣ ಪ್ರಮಾಣದ ಇತಿಹಾಸ ಇದ್ದು, ಮತ್ತೊಮ್ಮೆ ಅದು ಕಾಣಿಸಿಕೊಳ್ಳಬಹುದು.
2.ತಂದೆ, ತಾಯಿಯರ ವಿಚ್ಛೇದನ ಅಥವಾ ಮರಣವು ಮಕ್ಕಳಲ್ಲಿ ಅಂತಹ ಭಾವವನ್ನು ಮೂಡಿಸಬಹುದು.
3.ಶಾಲೆಯಲ್ಲಿ, ಹಾಸ್ಟೆಲ್ಲಿನಲ್ಲಿ ಅಥವಾ ಇನ್ನಿತರ ತರಬೇತಿ ಕೇಂದ್ರಗಳಲ್ಲಿ ಸತತವಾಗಿ ಚುಡಾಯಿಸುವಿಕೆಗೆ ಅಥವಾ ಅವಹೇಳನಕ್ಕೆ ಒಳಗಾಗಿರಬಹುದು.
4.ಕೆಲವರ ಕುಟುಂಬಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಇತಿಹಾಸ ಇರಬಹುದು.
5.ಕ್ರೌರ್ಯಕ್ಕೆ ಒಳಗಾಗಿರುವುದು ಅಥವಾ ಕ್ರೌರ್ಯಕ್ಕೆ ಸಾಕ್ಷಿಯಾಗಿರಬಹುದು.
6.ಯಾವಾಗಲೂ ಶಸ್ತ್ರಾಸ್ತ್ರಗಳು ಅವರ ಕೈಗೆಟಕುವಂತಿರುವುದು.
7.ಹಠಾತ್ ಪ್ರವೃತ್ತಿ ಅಥವಾ ಇಂಪಲ್ಸಿವ್ ಸಮಸ್ಯೆ ಇರುವುದು.
8.ತೀವ್ರವಾದ ನಿರಾಕರಣೆ. ಅಂದರೆ, ಕೌಟುಂಬಿಕ ಕಲಹಗಳಲ್ಲಿ ಈ ಮಗು ನನಗೆ ಬೇಡ, ನನಗೆ ಬೇಡ, ನಿನ್ನ ಜೊತೆ ಇಟ್ಟಿಕೋ ಎನ್ನುವುದು ಅಥವಾ ಈ ಮಗುವನ್ನು ನಮ್ಮ ಜೊತೆ ಇಟ್ಟುಕೊಳ್ಳಲಾಗುವುದಿಲ್ಲ. ಎಲ್ಲಿ ಬಿಡುವುದು? ಇತ್ಯಾದಿ ಯೋಚನೆಗಳನ್ನು ಮಾಡುವುದು.
9.ಹೊರೆಯೆಂದೆನಿಸುವುದು. ತಾವು ಇತರರಿಗೆ ಹೊರೆಯಾಗಿದ್ದೇವೆ ಎನ್ನಿಸುವುದು ಅಥವಾ ಇತರರು ತನ್ನ ಜೊತೆಯಲ್ಲಿರುವುದರಿಂದ ಹೊರೆ ಎನ್ನಿಸುವುದು.
ಈ ಬಗೆಯ ಆತ್ಮಹತ್ಯೆಯ ಸುಳುಹುಗಳನ್ನು ಗಮನಿಸಿದರೆ ಗಂಭೀರವಾದ ಕ್ರಮ ಕೈಗೊಳ್ಳಬೇಕು.

ಆತ್ಮಹತ್ಯೆಗೆ ಪ್ರಥಮ ಚಿಕಿತ್ಸೆ
ನಮಗೆ ಸಾಮಾನ್ಯವಾಗಿ ಯಾವುದೇ ಮಾತಿನ ಅಥವಾ ಘಟನೆಯ ತೀವ್ರತೆಯು ಅರ್ಥವಾಗುವುದು ಏನಾದರೂ ಭಯಂಕರವಾದದ್ದು ಘಟಿಸಿದಾಗ. ಅದರವರೆಗೂ ಕಾಯುವುದು ಬೇಡ. ಏಕೆಂದರೆ ಮಕ್ಕಳು ಸೂಚನೆಗಳನ್ನು ತೋರುವಾಗ ಮತ್ತು ಅದಕ್ಕೆ ಎಚ್ಚೆತ್ತುಕೊಂಡು ಮನೆಯವರು ತಮ್ಮ ಮಗುವು ಅಂತಹ ಅಪಾಯದಿಂದ ಪಾರಾದಾಗ ಗಮನೀಯವಾದದ್ದು ಏನೂ ಆದಂತೆ ಅನ್ನಿಸುವುದಿಲ್ಲ. ಹಾಗಾಗಿ ಏನೂ ಆಗಲಿಲ್ಲ. ಏನೂ ಆಗುತ್ತಿರಲಿಲ್ಲ ಎಂದು ಸರಳವಾಗಿ ತಿಳಿದುಕೊಳ್ಳಬೇಡಿ. ಅಲ್ಲಿ ಮಗುವಿನ ಜೀವವೇ ಉಳಿದಿರುತ್ತದೆ. ಒಂದು ಬದುಕೇ ಅರಳಿರುತ್ತದೆ. ಆದರೆ ಅದು ನಕಾರಾತ್ಮಕವಾಗಿ ಘಟಿಸುವಂತಹ ತೀವ್ರತೆಯನ್ನು ತನ್ನ ಪ್ರಕ್ರಿಯೆಯಲ್ಲಿ ತೋರಿರುವುದಿಲ್ಲ.
ಸರಳ ಮತ್ತು ಸರಾಗವಾದ ಸನ್ನಿವೇಶಗಳನ್ನು ಬಹಳಷ್ಟು ಜನ ಸಂವೇದನೆಯಿಂದ ಗ್ರಹಿಸುವುದೇ ಇಲ್ಲ. ಎಲ್ಲವೂ ಸಿನಿಮಾ ಘಟನೆಗಳಂತೆ ಆಗುವುದನ್ನು ನಿರೀಕ್ಷಿಸುತ್ತಿರುತ್ತಾರೆ. ಆತ್ಮಹತ್ಯೆಯಿಂದ ರಕ್ಷಿಸುವುದೆಂದರೆ ಮಗುವು ನೇಣನ್ನು ಬಿಗಿದುಕೊಂಡು ಅಥವಾ ನೀರಿನಲ್ಲಿ ಬಿದ್ದಾಗ ನಾಯಕರಂತೆ ಓಡಿ ಹೋಗಿ ರಕ್ಷಿಸಿದರೇನೇ ರಕ್ಷಣೆ ಮಾಡಿದಂತಲ್ಲ. ಎಷ್ಟೋ ಸಲ ಸೂಕ್ಷ್ಮವಾಗಿ ಕಂಡಂತಹ ಸೂಚನೆಗಳನ್ನು, ಸುಳುಹುಗಳ ಜಾಡು ಹಿಡಿದು, ಅವರಿಗೆ “ನಿನಗೆ ಆತ್ಮಹತ್ಯೆಯ ಕಡೆಗೆ ಒಲವಿದೆ, ನೀನು ಅದರಿಂದ ಹೊರಗೆ ಬರಬೇಕು, ಜೀವನ ಎನ್ನುವುದು ಬಹಳ ದೊಡ್ಡದು, ಬದುಕಿದ್ದರೆ ಏನಾದರೂ ಸಾಧಿಸಬಹುದು” ಎಂತೆಲ್ಲಾ ಜೀವನ್ಮುಖಿಯ ಭಾಷಣಗಳನ್ನು ಗ್ರಾಂಥಿಕ ಪದಗಳಲ್ಲಿ ಹೇಳಬೇಕಾಗಿಲ್ಲ. ಅದು ಜಾಣರ ಲಕ್ಷಣವೂ ಅಲ್ಲ. ಅವರಿಗೆ ನೇರವಾಗಿ ಹೇಳದೆಯೇ, ನಮ್ಮ ವರ್ತನೆಗಳನ್ನೂ ಬದಲಿಸಿಕೊಂಡು, ಅವರಿಗೆ ಸಾಂತ್ವಾನ ಮತ್ತು ಸ್ಥೈರ್ಯ ನೀಡುವಂತೆ ನಡೆದುಕೊಂಡು, ಅಗತ್ಯವಿದ್ದಲ್ಲಿ ಸರಳವಾದ ಮಾತುಗಳಲ್ಲಿ ಜೀವನೋತ್ಸಾಹ ತುಂಬುವಂತೆ, ಸಿನಿಮಾ ಮತ್ತು ಕತೆಗಳ ಮೂಲಕ ಸಕಾರಾತ್ಮಕವಾಗಿ ಪ್ರೇರಣೆಗೊಳ್ಳುವಂತೆ ಮಾಡಬೇಕು. ಅಲ್ಲಿ ನಿಮಗೆ ನಾಟಕೀಯ ಸನ್ನಿವೇಶಗಳೇನೂ ನಿರ್ಮಾಣವಾಗಿ ನೀವು ರೋಮಾಂಚಿತರಾಗುವಂತೇನೂ ಆಗುವುದಿಲ್ಲ. ಆದರೆ ನಿಜವಾಗಿಯೂ ಜೀವನ್ಮುಖಿ ಕೆಲಸವಾಗಿರುತ್ತದೆ.

ಆತ್ಮಹತ್ಯೆಯ ಆಲೋಚನೆ ಇರುವ ಮಗುವಿನ ಜೊತೆ ಮಾತಾಡುವಾಗ ಆ ಮಗುವಿನ ಸಾಂಸ್ಕೃತಿಕ ಹಿನ್ನೆಲೆ, ಜೀವನ ಶೈಲಿ, ಸಾಮಾಜಿಕ ಸ್ಥಿತಿಗತಿ ಮತ್ತು ವೈಯಕ್ತಿಕ ಒಲವು ನಿಲುವಿನ ಮೇಲೆ ಮಾತಾಡುವವರ ರೀತಿ ಅವಲಂಬಿತವಾಗಿರುತ್ತದೆ. ಆದರೆ ಅಂತಹ ಸುಳಿವನ್ನು ಕಂಡಾಗ ಮಗುವಿನ ಜೊತೆಗೆ ಗಾಬರಿ ಹುಟ್ಟಿಸುವಂತೆ ವರ್ತಿಸದೇ ಅದರ ಜೊತೆಗೆ ಮಾತಾಡುವುದರಲ್ಲಿ ಏನೂ ಹಾನಿಯಿಲ್ಲ. “ನಿನಗೆ ಸಾಕಪ್ಪಾ ಸಾಕು ಅನ್ನಿಸುವಂತೆ ಆಗಿದೆಯೇ? ಸತ್ತು ಹೋದರೆ ಎಷ್ಟೋ ನೆಮ್ಮದಿ ಎಂಬ ಆಲೋಚನೆ ಇದೆಯೇ? ನಿನಗೆ ತುಂಬಾ ಬೇಸರವಾಗುತ್ತಿದೆಯೇ? ದುಃಖವಾಗುತ್ತಿದೆಯೇ? ಏನನಿಸುತ್ತಿದೆ?” ಈ ಬಗೆಯ ಪ್ರಶ್ನೆಗಳನ್ನು ಅವರ ಸಂಬಂಧದ ಅನುಸಾರ ಸರಳ ಮಾತುಗಳಲ್ಲಿ ನೇರವಾಗಿ ಕೇಳುವುದರಿಂದ ಮಕ್ಕಳಿಗೆ ತಮ್ಮ ಆಲೋಚನೆ ಈಗಾಗಲೇ ತಮ್ಮ ಮನೆಯವರಿಗೆ, ಅಥವಾ ಶಿಕ್ಷಕರಿಗೆ ತಿಳಿದಿದೆ ಎಂದು ಮತ್ತಷ್ಟು ಅನಾವರಣಗೊಳ್ಳಲು ಸಾಧ್ಯವಾಗಬಹುದು. ತಮ್ಮನ್ನು ಕಾಡುತ್ತಿರುವ ಆಲೋಚನೆಯ ಬಗ್ಗೆ ಮತ್ತಷ್ಟು ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಈ ಪ್ರಶ್ನೆಗಳಿಂದ ಮಗುವಿಗೆ ನಾವು ಆ ಮಗುವನ್ನು ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ಅದರ ಸುರಕ್ಷತೆಯ ಕಾಳಜಿ ನಮಗಿದೆ ಎಂದು ಅದಕ್ಕೆ ತಿಳಿಯುತ್ತಿದೆ. ಇದು ಬಹಳ ಮುಖ್ಯ. ಅದು ನಮ್ಮ ಪ್ರೀತಿಯನ್ನು ಮತ್ತು ಕಾಳಜಿಯನ್ನು ನೇರವಾಗಿ ಗ್ರಹಿಸುವಂತಹ ಅವಕಾಶವನ್ನು ನಾವು ಒದಗಿಸಬೇಕು. ಎಷ್ಟೋ ಸಲ ಕೆಲವು ಪೋಷಕರು ಹೇಳುತ್ತಿರುತ್ತಾರೆ, “ನನಗೆ ನನ್ನ ಮಗುವಿನ ಬಗ್ಗೆ ಮನಸ್ಸಿನಲ್ಲಿ ಅಪಾರವಾದ ಪ್ರೀತಿಯಿದೆ. ಅದಕ್ಕೆ ಹೇಳದೆಯೇ ಅದರ ಭವಿಷ್ಯಕ್ಕೆ ಬೇಕಾಗುವ ಸಿದ್ಧತೆಗಳನ್ನು ಮಾಡುತ್ತಿದ್ದೇನೆ” ಎಂದು. ಇದು ಸಾಲದು ಮಾತ್ರವಲ್ಲ, ಆಗದು. ನಮ್ಮ ಕಾಳಜಿ ಮತ್ತು ಪ್ರೀತಿ ಅವರ ದೃಷ್ಟಿಗೆ ಪ್ರಕಟವಾಗಬೇಕು. ಅದು ಅವರ ಮನಸ್ಥಿತಿ ಮತ್ತು ಆಲೋಚನೆಗಳ ಮೇಲೆ ಸಕಾರಾತ್ಮಕವಾಗಿ ಮತ್ತು ಭರವಸೆಯನ್ನು ಹೊಂದಿರುವಂತಹ ಭಾವನೆಯ ಪ್ರಭಾವ ಬೀರುತ್ತವೆ. ಮಕ್ಕಳ ಆಲೋಚನೆಯ ಪರಿಧಿ ಸೀಮಿತವಾಗಿರುತ್ತದೆ. ಅವರ ಕಲ್ಪನಾ ಸಾಮರ್ಥ್ಯ ಅಗಾಧವಾಗಿರುತ್ತದೆ. ಅವರು ತಮ್ಮ ಫ್ಯಾಂಟಿಸಿ ಪ್ರಪಂಚವನ್ನು ಕಲ್ಪಿಸಿಕೊಂಡಂತೆ ಆಳದಲ್ಲಿರುವ ನಮ್ಮ ಆಲೋಚನೆಯ ಭಾವವನ್ನು ಗ್ರಹಿಸಲಾರರು. ಅವು ಪ್ರಕಟವಾದರೆ ಅವರಿಗೆ ನೇರ ಸಂವಹನ ಮಾಡಿದಂತೆಯೇ ಸರಿ.

ಮಕ್ಕಳಿಗೆ ನಾವು ಅವರ ಜೀವದ ಬಗ್ಗೆ ಎಚ್ಚರವಹಿಸುತ್ತೇವೆ, ಅವರ ಸುರಕ್ಷತೆಯ ಬಗ್ಗೆ ಕಾಳಜಿ ಇದೆ, ಅವರ ಬದುಕು ಮತ್ತು ಭವಿಷ್ಯಕ್ಕೆ ಉತ್ತಮವಾಗಿ ಸಹಕರಿಸುವ ಯೋಜನೆಗಳಿವೆ, ನಾವು ಅವರನ್ನು ಪ್ರೀತಿಸುತ್ತೇವೆ, ಅವರನ್ನು ಕಳೆದುಕೊಳ್ಳುವ ಆಲೋಚನೆಯನ್ನೂ ಕೂಡಾ ನಾವು ಸಹಿಸಲಾರೆವು, ಅದೆಷ್ಟು ತೀವ್ರವಾದ ದುಃಖವನ್ನು ನಮಗೆ ತರುತ್ತದೆ; ಈ ಎಲ್ಲಾ ತಿಳುವಳಿಕೆ ಅವರಿಗೆ ಬೇಕು.

ಇನ್ನೂ ಕೆಲವು ಸಲ ನಾವೇ ಅವರ ನಕಾರಾತ್ಮಕವಾದ ಚಿಂತನೆ ಕಾರಣವಾಗಿದ್ದೇವೆಂದರೆ ಅದನ್ನು ಒಪ್ಪಿಕೊಳ್ಳಬೇಕು. ನಮ್ಮ ದೌರ್ಬಲ್ಯವನ್ನು ಒಪ್ಪಿಕೊಂಡು, ಅದಕ್ಕಾಗಿ ಪಶ್ಚಾತ್ತಾಪವನ್ನು ಪಡುತ್ತಾ, ಮಗುವಿನ ನೆರವನ್ನೇ ಕೇಳಬೇಕು. ನಾನು ಸರಿಯಾಗಿ ವರ್ತಿಸಲು ಸಹಕರಿಸು ಎಂದು ಮಗುವಿನ ಸಹಾಯವನ್ನು ಅಥವಾ ಸಹಕಾರವನ್ನು ಅಪೇಕ್ಷಿಸುವುದರಲ್ಲಿ ಯಾವ ತಪ್ಪೂ ಇಲ್ಲ. ನಮ್ಮ ಪರಸ್ಪರ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುತ್ತಾ, ಸಾಮರ್ಥ್ಯಗಳನ್ನು ಗುರುತಿಸಿಕೊಳ್ಳುತ್ತಾ ಒಬ್ಬರಿಗೊಬ್ಬರು ಆಸರೆಯಾಗಿ ಈ ಬದುಕನ್ನು ನಡೆಸುವ ಬಗ್ಗೆ ಮುಕ್ತವಾಗಿ ಸಮಾಲೋಚನೆ ಮಾಡಬೇಕು. ಮಗುವಿನ ಜೊತೆ ಹಿರಿಯರು ತಮ್ಮತನವನ್ನು ನಿವೇದಿಸಿಕೊಂಡು ಮಾತಾಡುವಷ್ಟು ಮುಕ್ತತೆಯನ್ನು ನಮ್ಮ ಸಮಾಜದಲ್ಲಿ ಅಷ್ಟಾಗಿ ನಾನು ನೋಡೇ ಇಲ್ಲ. ನನಗೆ ಇಷ್ಟು ಕಷ್ಟ ಇದೆ, ನೀನು ಸಹಕರಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಅಥವಾ ತಾವೇ ನಿರಾಶಾಭಾವದಲ್ಲಿ ಮಾತಾಡುತ್ತಿರುತ್ತಾರೆ. ಇದರಿಂದ ಮಗುವಿಗೆ ತಾನು ಮುಕ್ತವಾಗಿ ತನ್ನ ಮನಸ್ಥಿತಿಯನ್ನು ನಿವೇದಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ?

ನಮ್ಮ ಮಗುವು ನಮ್ಮ ಪ್ರಶ್ನೆಗಳಿಗೆ ಎಷ್ಟರಮಟ್ಟಿಗೆ ಉತ್ತರಿಸುತ್ತದೆಯೋ ಅಥವಾ ನಮ್ಮ ನಿವೇದನೆಗೆ ಎಷ್ಟರಮಟ್ಟಿಗೆ ಸ್ಪಂದಿಸುತ್ತದೆಯೋ ಅದು ಮುಖ್ಯವಲ್ಲ. ಹಿರಿಯರು ಕಿರಿಯರ ಮುಂದೆ ವಿನೀತವಾಗುವುದು ನಿಜಕ್ಕೂ ಮುಖ್ಯ. ಅದು ಮಕ್ಕಳ ಮನಸ್ಥಿತಿಯ ಮೇಲೆ ಒಂದು ಹಂತದ ಭಾವುಕ ಪರಿಣಾಮವನ್ನಂತೂ ಬೀರುವುದು. ನಂತರ ವೃತ್ತಿಪರ ಮನಶಾಸ್ತ್ರಜ್ಞರ ಬಳಿ ಸಮಾಲೋಚನೆಗೆ ಒಯ್ಯಬೇಕು. ಅಗತ್ಯವಿರುವ ಚಿಕಿತ್ಸೆಗಳನ್ನು ಕೊಡಿಸಬೇಕು. ಆದರೆ ಮನೆಯಲ್ಲಿ ಪ್ರಥಮ ಚಿಕಿತ್ಸೆ ಬೇಕು. ಹಿರಿಯರು ತಮ್ಮ ಮಾತುಕತೆಯಲ್ಲಿ, ನಡವಳಿಕೆಯಲ್ಲಿ ಮತ್ತು ನಮ್ಮ ಪ್ರೀತಿ ಹಾಗೂ ಕಾಳಜಿಗಳನ್ನು ತೋರುವಂತಹ ಸಂಕೇತಗಳನ್ನು ನಾವು ಪ್ರಕಟಿಸುವ ಮೂಲಕ ಒಂದಷ್ಟು ಪ್ರಾಥಮಿಕ ಚಿಕಿತ್ಸೆಯನ್ನು ಮಾಡಿರಬೇಕು. ಮಕ್ಕಳಿರುವಂತಹ ಮನೆಯಾಗಲಿ, ಶಾಲೆಯಾಗಲಿ, ತರಬೇತಿ ಕೇಂದ್ರಗಳಾಗಲಿ, ಆಶ್ರಮ, ವಿದ್ಯಾರ್ಥಿನಿಲಯದಂತಹ ವಸತಿ ನಿಲಯಗಳಾಗಲಿ; ಅಲ್ಲಿನ ಹಿರಿಯರಿಗೆ ಮಕ್ಕಳಲ್ಲಿ ಇಂತಹ ಸಂಕೇತಗಳನ್ನು ಗುರುತಿಸುವಂತಹ ತರಬೇತಿ ಮತ್ತು ಕಾಳಜಿ ಇರಬೇಕು. ಇದರಿಂದ ಮಕ್ಕಳ ಜೀವನದಲ್ಲಿ ಆಗಬಹುದಾದಂತಹ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿದೆ ಮತ್ತು ಅವರ ಬದುಕು ಹಾಗೂ ಭವಿಷ್ಯವನ್ನು ಅಚ್ಚುಕಟ್ಟಾಗಿ ರೂಪಿಸುವ ಸಾಧ್ಯತೆಗಳಿರುತ್ತವೆ.

ಜೀವನ ಶೈಲಿ ಮತ್ತು ಬದುಕಿನ ಕ್ರಮಗಳೆರಡೂ ಉತ್ತಮಗೊಂಡರೆ ಮಗುವಿನ ಆಲೋಚನಾ ಕ್ರಮವೂ ಕೂಡಾ ಉತ್ತಮಗೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಘನತೆಯ ಜೀವನ ಶೈಲಿ, ಸ್ವಯಂಶಿಸ್ತಿನ ಬದುಕಿನ ಕ್ರಮಗಳು ರೂಢಿಯಾಗಬೇಕು. ಇದರಿಂದ ಮಗುವು ತನಗೆ ತಾನು ಹಿತವನ್ನು, ಆನಂದವನ್ನು ಕಂಡುಕೊಂಡರೆ ಈ ಸುಂದರ ಲೋಕವನ್ನು ನಿರಾಕರಿಸುವ ಯೋಚನೆ ಏಕಾದರೂ ಮಾಡುತ್ತದೆ!


(ಮುಂದುವರಿಯುತ್ತದೆ)

LEAVE A REPLY

Please enter your comment!
Please enter your name here