• ನಿಹಾಲ್ ಮುಹಮ್ಮದ್ ಕುದ್ರೋಳಿ.

ಹಲವಾರು ಹೃದಯವಿದ್ರಾವಕ ಸುದ್ದಿಗಳ ನಡುವೆ ಒಂದು ಆಶಾದಾಯಕ ಘಟನೆಗೆ ಇಂದು ಕೇರಳವು ಸಾಕ್ಷಿಯಾಯಿತು. ಕೇರಳದ ಕಣ್ಣೂರಿನ ಮಾಟೂಲ್ ಎಂಬಲ್ಲಿ ಎಸ್.ಎಂ.ಎ ಎಂಬ ಅಪರೂಪದ ಖಾಯಿಲೆಗೆ ತುತ್ತಾದ ಮೊಹಮ್ಮದ್ ಎಂಬ ಒಂದುವರೆ ವರ್ಷದ ಮಗುವಿನ ಚಿಕಿತ್ಸೆಗೆ ಬೇಕಾದದ್ದು ಬರೋಬ್ಬರಿ 18 ಕೋಟಿ ರೂಪಾಯಿ. ಕೇವಲ ಒಂದು ವಾರದ ಅವಧಿಯಲ್ಲಿ ಅಷ್ಟೊಂದು ದೊಡ್ಡ ಮೊತ್ತವನ್ನು ಶೇಖರಿಸಲಾಗಿದೆ. ವಿಶ್ವದೆಲ್ಲೆಡೆಯಿಂದ ಸಹೃದಯಿ ದಾನಿಗಳು ಹಣವನ್ನು ಕಳುಹಿಸಿ ಈ ಕುಟುಂಬಕ್ಕೆ ನೆರವಾಗಿದ್ದಾರೆ.

ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಒಂದುವರೆ ವರ್ಷದ ಆ ಪುಟ್ಟ ಮಗು ಬಳಲುತ್ತಿದೆ. ಸ್ನಾಯುವಿನ ಚಲನೆಯನ್ನು ನಿಯಂತ್ರಿಸುವ ಮೋಟಾರ್ ನ್ಯೂರಾನ್ಗಳು ಎಂದು ಕರೆಯಲ್ಪಡುವ ವಿಶೇಷ ನರ ಕೋಶಗಳ ವೈಫಲ್ಯದಿಂದ ಇದು ಸಂಭವಿಸುತ್ತದೆ. ಈ ಕಾಯಿಲೆಯ ಚಿಕಿತ್ಸೆಗಾಗಿ ನೀಡುವ ಒಂದು ಡೋಸ್ ಝೋಲ್ಗೆಂಸ್ಮ ಎಂಬ ಔಷಧಿಯ ಬೆಲೆ 18 ಕೋಟಿ!. ಇದು ವಿಶ್ವದ ಅತ್ಯಂತ ದುಬಾರಿ ಔಷಧಿಯೆಂದು ಹೇಳಲಾಗುತ್ತದೆ.

ಮೊಹಮ್ಮದ್ ನ ಹಿರಿಯ ಸಹೋದರಿ 15 ವರ್ಷದ ಅಫ್ರಾ ಕೂಡ ಇದೇ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಮಗುವಿನ ಸಹೋದರಿ ಅಫ್ರಾ ತನ್ನ ಪುಟ್ಟ ತಮ್ಮನಿಗಾಗಿ ಧನ ಸಹಾಯ ಮಾಡುವಂತೆ ಮನವಿ ಮಾಡಿದ ವಿಡಿಯೋ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು. ಅದಲ್ಲದೆ ದೊಡ್ಡ ಮಟ್ಟದಲ್ಲಿ ಆ ಮೊತ್ತವನ್ನು ಸಂಗ್ರಹಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆದಿತ್ತು.

18 ಕೋಟಿ ರೂಪಾಯಿ ಜಮೆಯಾಗಿದೆ, ಇನ್ನು ಹಣ ಕಳುಹಿಸುವ ಅವಶ್ಯಕತೆಯಿಲ್ಲ ಎಂಬ ಸಂಭ್ರಮಭರಿತ ವಾರ್ತೆಯನ್ನು ಈ ಪುಟ್ಟ ಮಗುವಿನ ಕುಟುಂಬಸ್ಥರು ಹಂಚಿಕೊಂಡಿದ್ದಾರೆ. ಮನುಷ್ಯತ್ವ ಎಂಬ ಪದದ ಸೌಂದರ್ಯಕ್ಕೆ ಇಂತಹ ಘಟನೆಗಳು ಇನ್ನಷ್ಟು ಮೆರುಗು ನೀಡುತ್ತವೆ.
ಇದನ್ನು ಪ್ರಪ್ರಥಮವಾಗಿ ವಿಶ್ವದ ಮುಂದಿಟ್ಟದ್ದು ಮಲಯಾಳಂ ನ್ಯೂಸ್ ಚಾನೆಲ್ ಮೀಡಿಯಾ ಒನ್ ವರದಿಗಾರ ಸುನಿಲ್ ಎಂಬವರು.
ಮಾಧ್ಯಮಗಳ ಜೊತೆ ಮಾತನಾಡಿದ ಈ ಪುಟ್ಟ ಮಗುವಿನ ಸಹೋದರಿ ಅಫ್ರಾ “ತುಂಬಾ ಸಂತೋಷವಿದೆ” ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಈ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಹೃದಯವಿದ್ರಾವಕ ಘಟನೆಗಳು ಬೆಳಕಿಗೆ ಬರುತ್ತಿದೆ, ಅದರ ಮಧ್ಯದಲ್ಲಿ ಜಾತಿ-ಧರ್ಮ ಮರೆತು, ವಿಶ್ವದೆಲ್ಲೆಡೆಯಿಂದ ಈ ಪುಟ್ಟ ಮಗುವಿಗೆ ಮರುಜೀವನ ನೀಡುವುದಕ್ಕಾಗಿ ಧನ ಸಹಾಯ, ಪ್ರಾರ್ಥನೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟ್ಗಳನ್ನು ಶೇರ್ ಮಾಡಿ ಮನುಷ್ಯತ್ವವು ಇನ್ನೂ ಜೀವಂತವಿದೆ ಎಂದು ತೋರಿಸಿಕೊಟ್ಟರು. ಏನಾದರೂ ಸಂಕಷ್ಟ ಬಂದರೆ ಮಿಡಿಯುವ ಮಾನವೀಯತೆ ಜನತೆಯಲ್ಲಿದೆ ಎಂಬ ಭರವಸೆ ಇಂತಹ ಮಾನವೀಯ ಘಟನೆಗಳಿಂದ ಇನ್ನಷ್ಟು ಬಲಿಷ್ಠಗೊಳ್ಳುತ್ತದೆ. ಇದೀಗ ವಿದೇಶದಿಂದ ಲಸಿಕೆ ತರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಶೀಘ್ರವೇ ಕೇರಳಕ್ಕೆ ಬಂದು ಸೇರುವ ನಿರೀಕ್ಷೆಯಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಮಗುವು ಶೀಘ್ರವಾಗಿ ಗುಣಮುಖವಾಗಲಿ ಎಂದು ಪ್ರಾರ್ಥಿಸುವ. ದೇವನು ಸ್ವೀಕರಿಸಲಿ.

LEAVE A REPLY

Please enter your comment!
Please enter your name here