• ಆಶಿಕ್ ಮುಲ್ಕಿ

ಸಂತ !
ಸಂತನೊಬ್ಬನ ಬಳಿ ಇಬ್ಬರು ಬಂದು ನೀವೇಗೆ ಸಂತರಾದಿರಿ ಎಂದು ಕೇಳಿದರು.
ಅದಕ್ಕೆ ಸಂತ, ದೊಡ್ಡದೇನು ಮಾಡಿಲ್ಲ. ನಾನು ನನ್ನ ಬಗ್ಗೆಯಷ್ಟೇ ಮಾತಾಡಿದೆ ಎಂದು ಹೇಳಿ ಸುಮ್ಮನಾದ.

ಕದ್ದ ಮಾಲು !
ಶ್ರೀಮಂತನ ಮನೆಯೊಂದರಿಂದ ಕಳ್ಳನೊಬ್ಬ ಒಂದು ಮೂಟೆ ದಿನಸಿ ಕದ್ದು ಪರಾರಿಯಾದ. ಬೂಟುಗಳ ಕಣ್ತಪ್ಪಿಸಿ ಗೂಡು ಸೇರುವ ಅರ್ಧ ದಾರಿಯಲ್ಲಿ ಕಂಡ ಗುಡಿಸಲಿನ ಮುಂದೆ ಹರಿದ ಬಟ್ಟೆ ಮೈಗೆಳೆದು ಕೂತಿದ್ದ ಹೆಂಗಸಿನ ಕೈಗೆ ದಿನಸಿ ಇಟ್ಟು ಮುಂದಕ್ಕೆ ನಡೆದ. ಆ ಕ್ಷಣದಲ್ಲೇ ಕದ್ದ ಮಾಲು ಪ್ರಸಾದವಾಯ್ತು. ಕಳ್ಳ ದೇವನಾದ.

ಬೆಂಕಿ !
ನನ್ನ ಮನೆಗೆ ಬೆಂಕಿ ಹಚ್ಚಲು ಬಂದ ಕಿಡಿಗೇಡಿಗಳು ಬೆಂಕಿ ಪೊಟ್ಟಣ ಮರೆತು ಬಂದಿದ್ದರು. ನಾ ಹೇಳಿದೆ; ಅಗೋ ಅಲ್ಲಿ ಅಡುಗೆ ಮನೆಯ ಕಿಟಕಿಯ ಮೇಲೆ ಬೆಂಕಿ ಪೊಟ್ಟಣ್ಣ ಇದೆ. ಎತ್ತಿ ಬೆಂಕಿ ಹಚ್ಚಿ ಬಿಡಿ. ಸಾಧ್ಯವಾದರೆ ತುಪ್ಪವೂ ಸುರಿದು ಬಿಡಿ.

ಬೊಂಬಾಟ್ ಭೋಜನ !
ಇಡೀ ಊರು ಮದುವೆಯೊಂದನ್ನ ಸೇರಿ, ಬೊಂಬಾಟ್ ಭೋಜನವನ್ನ ಪುಷ್ಕಳವಾಗಿ ಉಂಡು ಕೈತೊಳೆದು ಹರಸಿ ಮನೆಯ ದಾರಿ ಹಿಡಿದರು. ದಾರಿಯಲ್ಲಿ ಸಾಗುತ್ತಾ ಊಟದ ಬಗ್ಗೆಯ ಚರ್ಚೆ ಆರಂಭವಾಯ್ತು. ಒಬ್ಬ “ಊಟದ ಜೊತೆಗೆ ಕೊಟ್ಟ ಸಾರಿಗೆ ಉಪ್ಪು ಜಾಸ್ತಿಯಾಗಿತ್ತಲ್ಲವೇ” ಎಂದ. ಇದನ್ನ ಕೇಳುತ್ತಿದ್ದಂತೆ ಪಕ್ಕದಲ್ಲಿದ್ದವ, “ಹೌದು, ಸಾರಿಗೆ ಉಪ್ಪು ಜಾಸ್ತಿಯಾಗಿತ್ತು. ಬೆಳಿಗ್ಗೆ ವಧುವಿನ ತಂದೆ ಸಾರಿಟ್ಟ ಪಾತ್ರೆಯ ಬಳಿ ಕೂತು ವರದಕ್ಷಿಣೆ ವಿಚಾರವಾಗಿ ಅಳುತ್ತಿದ್ದರು. ಅವರ ಕಣ್ಣೀರು ಬಿದ್ದಿರಬೇಕು.” ಎಂದ.

ತಾಯಿ !
ಹೀಗೇ ಒಂದು ದಿನ ಕೋಗಿಲೆ ಕಾಗೆಯ ಬಳಿ ಕೇಳಿತು “ಎನೋ ಕಾಗೆ. ನಿನ್ನ ಧ್ವನಿಯೇಕೆ ಈ ರೀತಿ ಕರ್ಕಶವಾಗಿದೆ. ಕೇಳೋಕೆ ಎಂಥ ಕಿರಿಕಿರಿ ಗೊತ್ತಾ ಅದು..?” ನಾನು “ನನ್ನ ತಾಯಿಯನ್ನು ಕರೆದಿದ್ದು” ಎಂದಿತು ಕಾಗೆ.

ಮನೆ !
ಮುದುಕನೊಬ್ಬ ಒಂದು ಗುಡಿಸಲಿನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ. ಇದ್ದಕ್ಕಿದ್ದ ಹಾಗೆ ಒಂದು ದಿನ ತನ್ನ ಗಂಟು ಮೂಟೆ ಕಟ್ಟಿಕೊಂಡು ಹೊರಟು ಬಿಟ್ಟ. ಇಡೀ ಊರಿನವರು ಅದನ್ನ ಆಶ್ಚರ್ಯಕಂಗಳಿಂದ ನೋಡುತ್ತಾ ಕೇಳಿದರು
“ನೀವು ಈ ಇಳಿ ವಯಸ್ಸಿಗೆ ಎಲ್ಲಿಗೆ ಹೊರಡುತ್ತಿದ್ದೀರಿ. ಇನ್ನೇನು ಅಲ್ಪಸ್ವಲ್ಪ ಅಲ್ಲವೇ. ಇಲ್ಲೇ ಇದ್ದು ಬಿಡಿ. ನಾವೆಲ್ಲ ಇದ್ದೀವಲ್ಲವಾ..!?”
ನಗುತ್ತಾ “ಹೌದು ನೀವೆಲ್ಲಾ ಇದ್ದೀರಿ. ಆದರೀಗ ನಾನು ಹೊರಟಿರೋದು ನನ್ನ ಮನೆಗೆ” ಎಂದ.
“ಹಾಗಾದರೆ ಎಲ್ಲಿರೋದು ಮನೆ..?” ಕೇಳಿತು ಊರು.
ಮುಗುಳು ನಗೆ ಬೀರುತ್ತಾ ಮುದುಕ ಹೀಗೆ ಉತ್ತರಿಸಿ, ಹೊರಟೇ ಬಿಟ್ಟ.
“ಅದನ್ನೇ ಹುಡುಕಿಕೊಂಡು ಈಗ ಹೊರಟಿದ್ದೇನೆ”.

ಶಿಕ್ಷಣ !
ಮಗಳು ಅಪ್ಪನ ಬಳಿ ಕೇಳಿದಳು, “ಅಪ್ಪ ಯಾಕೆ ಈ ಜನರು ಜಾತಿ ಧರ್ಮ ಅಂತೆಲ್ಲಾ ಕಿತ್ತಾಡಿ ಕೊಳ್ಳುತ್ತಿದ್ದಾರೆ..?”
“ಅವರೆಲ್ಲಾ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಯಲ್ಲಿ ಓದಿದವರು. ವಿದ್ಯಾವಂತರು. ಅದಕ್ಕೆ ಆ ರೀತಿ ದೊಡ್ಡ ದೊಡ್ಡ ವಿಚಾರದ ಮೇಲೆ ಮಾತನಾಡುತ್ತಾರೆ”. ಅಪ್ಪ ಉತ್ತರಿಸಿದ. ಅಪ್ಪನ ಮಾತು ಕೇಳಿದ ಅಲ್ಪ ಸಮಯದ ಬಳಿಕ ಮಗಳು ಹೀಗಂದಳು. “ಹಾಗಾದರೆ ನಾನು ಶಾಲೆಗೆ ಹೋಗುವುದಿಲ್ಲ ಅಪ್ಪ.”

ವೇಶ್ಯೆ !
ಅದೊಂದು ವೇಶ್ಯೆಯ ಮನೆ. ಆ ಮನೆಗೆ ಕಿಟಕಿಗಳು ಇರಲಿಲ್ಲ. ಅಲ್ಲಿಗೆ ಯಾರ್ಯಾರೋ ಬಂದು ಹೋಗುತ್ತಿದ್ದರು. ಒಂದು ದಿನ ವೇಶ್ಯೆಯ ಸುಖ ಬಯಸಿ ಬಂದವ ಕೇಳಿದ, “ನಿನ್ನ ಮನೆಗೇಕೆ ಕಿಟಿಕಿಗಳಿಲ್ಲ..
ಬಹಳ ಸೆಖೆ”. ಅವನ ಮಾತು ಆಲಿಸಿದ ವೇಶ್ಯೆ, “ನನ್ನ ಮನೆಗೆ ಕಿಟಕಿಗಳಿಲ್ಲ. ಅದು ಸರಿ. ನೀನು ಇಲ್ಲಿಗೆ ಬಂದ ಬಳಿಕ ನಿನ್ನ ಮನೆಗೆ ಗೋಡೆಗಳೇ ಇಲ್ಲ. ಅದಕ್ಕೇನು ಹೇಳುತ್ತಿ” ಎಂದಳು.

ಸ್ವರ್ಗ !
ಸ್ವರ್ಗದ ಆಸೆಯಿಂದ ಮಸೀದಿಗೆ ಹೊರಟವ ಆತ. ದಾರಿ ಮಧ್ಯೆ ತಾಯಿಯ ನೆನಪಾಗಿ, ವಾಪಾಸು ಓಡೋಡಿ ಬಂದು ಆಕೆಯ ಕಾಲಿನ ಪಕ್ಕ ಸುಮ್ಮನೆ ಕೂತ.

ದೂರು !
ಐದೊತ್ತು ಅಜಾನ್ ಕೂಗುವುದು ಶ್ರೇಷ್ಠತೆಯಲ್ಲೇ ಶ್ರೇಷ್ಠ ಕೆಲಸ ಎಂಬುದು ಇಲ್ಲಿಯ ನಂಬಿಕೆ. ಆ ಮುಕ್ರಿಯೂ ಅದನ್ನೇ ಮಾಡುತ್ತಿದ್ದರು. ಇಂಪಾದ ದನಿಯಿಂದ ‘ದೊರೆಯ ಭೇಟಿ ಮಾಡಿ ಬನ್ನಿ’ ಎಂದು ಕರೆಯುತ್ತಿದ್ದರು. ಅಚಾನಕ್ ಒಂದು ದಿನ ಮುಕ್ರಿಯ ಉಸಿರು ನಿಂತುಹೋಯ್ತು. ದೇವರು ಮುಕ್ರಿಯನ್ನು ಪಕ್ಕಕ್ಕೆ ಕರೆದರು. ಎಲ್ಲವೂ ಸರಿ, ನೀನು ನಿನ್ನ ಇಂಪಾದ ದನಿಯಿಂದ ಜನರನ್ನು ನನ್ನಲ್ಲಿಗೆ ಕರೆಯುತ್ತಿದ್ದೆ. ಆದರೆ ನಿನ್ನ ಇಂಪಾದ ದನಿ ಹೊರಚಿಮ್ಮುವ ಕೊಳಲಿನ ಕೆಳಗೆ ಗೂಡು ಕಟ್ಟಿ ಕೂತಿದ್ದ ಹಕ್ಕಿಯೊಂದು ನಿನ್ನ ಮೇಲೆ ದೂರು ಹೇಳುತ್ತಾ ಬಂದಿದೆ.

LEAVE A REPLY

Please enter your comment!
Please enter your name here