
ಭಾರತ ದೇಶವು ಈ ಬಾರಿ ಅಗಸ್ಟ್ 15 ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ, ಈ ಶುಭ ಘಳಿಗೆಯಲ್ಲಿ ದೇಶಾದ್ಯಂತ ನಾವೆಲ್ಲರೂ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ನಮ್ಮ ಎಲ್ಲ ಕೆಚ್ಚೆದೆಯ ಪೂರ್ವಜರನ್ನು ನೆನೆದು ಅವರಿಗೆ ಗೌರವ ಸಲ್ಲಿಸಲಾಗುತ್ತದೆ.
ಆದರೆ ಈ ಸಂದರ್ಭದಲ್ಲಿ ಅತೀ ಮುಖ್ಯವಾಗಿ ಮಾಡಬೇಕಾಗಿದ್ದ ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಆಶಯವನ್ನು ನಾವ್ಯಾರು ನೆನಪಿಸಿಕೊಳ್ಳುವುದಿಲ್ಲ, ಹಾಗೂ ನಮ್ಮ ಹುತಾತ್ಮರು ಬಯಸಿದ್ದ ಕಲ್ಪನೆಯ ಭಾರತದ ಕುರಿತು ಮಾತನಾಡುವುದಿಲ್ಲ, ಭಾರತದ ಹೆಮ್ಮೆಯ ಸಂಕೇತವಾದ ತ್ರಿವರ್ಣ ಧ್ವಜವನ್ನು ಮಾತ್ರ ಹಾರಿಸಿ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತೇವೆ. ಈ ಮೂಲಕ ನಾವು ದೇಶಕ್ಕೆ ಮತ್ತು ಹುತಾತ್ಮರಿಗೆ ಗೌರವ ಸಲ್ಲಿಸಿದ್ದೇವೆ ಎಂದು ಭಾವಿಸಿಕೊಳ್ಳುತ್ತಾ ಇದಿಷ್ಟೇ ಒಬ್ಬ ಪ್ರಜೆಯಾಗಿ ನಾವು ಮಾಡಬೇಕಿದೆ ಎಂದು ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತಿದ್ದೇವೆ.
ಇದೆಲ್ಲದರ ನಡುವೆ ದೇಶದ ನಿಜ ಅರ್ಥವನ್ನು ವ್ಯಾಖ್ಯಾನಿಸಬೇಕಾಗಿದೆ, ದೇಶವೆಂದರೆ ಬಾವುಟ ಮತ್ತು ಗೀತೆ ಮಾತ್ರವಲ್ಲ ಅದರೊಳಗಿನ ಎಲ್ಲ ಜನರು ಎಂಬುದೇ ನಿಜವಾದ ದೇಶವೆನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ, ದೇಶದ ಎಲ್ಲ ಪ್ರಜೆಗಳು ಪರಸ್ಪರರನ್ನು ಪ್ರೀತಿಸುವುದು ಮತ್ತು ಪ್ರತಿಯೊಬ್ಬರ ಏಳಿಗೆ ಬಯಸುವುದೇ ನಿಜಾರ್ಥದಲ್ಲಿ ದೇಶಪ್ರೇಮವಾಗಿದೆ.
ಬ್ರಿಟಿಷರಿಂದ ನಮಗೆ ದೊರೆತಿದ್ದು ಕೇವಲ ರಾಜಕೀಯ ಅಥವಾ ಆಡಳಿತಾತ್ಮಕ ಸ್ವಾತಂತ್ರ್ಯ ಎಂಬುದನ್ನು ನಾವು ಮನಗಾಣಬೇಕಾಗಿದೆ ಯಾಕೆಂದರೆ ಮೊನ್ನೆಯಷ್ಟೇ ರಾಜಸ್ಥಾನದಲ್ಲಿ ವರದಿಯಾದ ಘಟನೆಯಲ್ಲಿ ಖಾಸಗಿ ಶಾಲೆಯೊಂದರ ಕೆಳವರ್ಗದ ವಿದ್ಯಾರ್ಥಿ ಕುಡಿಯುವ ನೀರಿನ ಮಡಿಕೆಯನ್ನು ಮುಟ್ಟಿದ ಕಾರಣಕ್ಕಾಗಿ ಅಲ್ಲಿನ ಮೇಲ್ವರ್ಗದ ಶಿಕ್ಷಕ ಮಗುವಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದ ಸಂಗತಿಯೂ ಇಡೀ ದೇಶ ತಲೆತಗ್ಗಿಸುವ ಸಂಗತಿ, ಆ ಒಂದು ಘಟನೆಯು ಈ ದೇಶದ ಪ್ರಸ್ತುತ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಭಾರತದ ಇತಿಹಾಸದುದ್ದಕ್ಕೂ ಈ ನೆಲದ ಮೂಲ ನಿವಾಸಿಗಳ ಮೇಲಾಗುತ್ತಿದ್ದ ಸಾಮಾಜಿಕ ಅಸಮಾನತೆಯ ಕ್ರೌರ್ಯದ ಪರಂಪರೆ ಸ್ವತಂತ್ರ ಭಾರತದಲ್ಲೂ ಮುಂದುವರೆಯುತ್ತಿದೆ ಎಂದರೆ ನಾವು ಹೇಗೆ ತಾನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಬೇಕು ಎಂಬುದನ್ನು ನಮ್ಮಲ್ಲಿ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.
ನಿಜ ಅರ್ಥದಲ್ಲಿ ನಾವ್ಯಾರು ಸ್ವಾತಂತ್ರ್ಯವನ್ನು ಪೂರ್ಣಪ್ರಮಾಣದಲ್ಲಿ ಗಳಿಸಿಲ್ಲ ಎಂಬುದಂತೂ ಸತ್ಯ.
ಸಾಮಾಜಿಕ ಸಮಾನತೆ ಸ್ವತಂತ್ರ ಬದುಕಿಗಿಂತಲೂ ಅಗತ್ಯವಾದುದು, ಸಮಾನತೆ ಮತ್ತು ಭ್ರಾತೃತ್ವವಿಲ್ಲದ ಸ್ವಾತಂತ್ರ್ಯ ಸ್ವತಂತ್ರವೇ ಅಲ್ಲ.
ಎಲ್ಲರನ್ನೂ ಒಳಗೊಂಡ ಭಾರತದ ಕಲ್ಪನೆಯೇ ಸ್ವಾತಂತ್ರ್ಯ ಸಂಗ್ರಾಮದ ಸ್ಪೂರ್ತಿಯಾಗಿತ್ತು, ಸ್ವಂತಂತ್ರ ಭಾರತದಲ್ಲಿ ನಾವು ರಚಿಸಿಕೊಂಡ ಸಂವಿಧಾನ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಸ್ವಾತಂತ್ರ್ಯ ಹೋರಾಟದ ಉತ್ಪನ್ನವಾಗಿದೆ, ಅದರ ಅಳಿವು-ಉಳಿವು ಈ ನೆಲದ ಅಸ್ತಿತ್ವದ ಪ್ರಶ್ನೆಯಾಗಿದೆ.
ಈ ನೆಲದ ಮೂಲ ಸಂಸ್ಕೃತಿಯಾದ ಬಹುತ್ವತೆ (ಒಳಗೊಳ್ಳುವಿಕೆ) ಮತ್ತು ಸೌಹಾರ್ದ ಪರಂಪರೆ ಶಿಥಿಲಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಕೂಡಿ ಬಾಳುವ ಸಂಸ್ಕೃತಿಯನ್ನು ಹಾಗೂ ಸಾಮರಸ್ಯದ ಬದುಕನ್ನು ಗಟ್ಟಿಗೊಳಿಸಲು ಹೋರಾಡುತ್ತೇನೆ ಎಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಘಳಿಗೆಯಲ್ಲಿ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕಾಗಿದೆ.
ಸ್ವಾತಂತ್ರ್ಯದ ಹೋರಾಟದ ಪ್ರತಿಫಲವಾಗಿ ನಾವೇ ರೂಪಿಸಿದ ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾಗೂ ಒಕ್ಕೂಟದ ವ್ಯವಸ್ಥೆಯಲ್ಲಿ ನಮ್ಮ ನಾಡಿನ ಅಸ್ಮಿತೆಗಾಗಿ ಶ್ರಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಸಂಕಲ್ಪ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಬಹುತ್ವವೇ ಭಾರತದ ಜೀವಾಳ, ವಿವಿಧತೆಯಲ್ಲಿ ಏಕತೆಯೇ ನನ್ನ ದೇಶದ ಗುರುತು, ಕೂಡಿ ಬಾಳುವುದರಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಹೇಳಬೇಕಿದೆ.
ಭಾರತ ದೇಶವು ಸಂಭ್ರಮದಿಂದ ಆಚರಿಕೊಳ್ಳುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಓದುಗರೆಲ್ಲರಿಗೂ ಶುಭಾಶಯಗಳು.
#75thIndependenceDay #AazadikaAmruthMahotsav #HarGharTiranga #IdeaOfIndia