• ಆಮಿನಾ ಹೈಫ

ಕೋವಿಡ್- 19 ರೋಗವನ್ನು ತಮ್ಮ ದೇಶದಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲು ಪ್ರಯತ್ನಿಸಿದ ಮಹಿಳಾ ಮಣಿಗಳನ್ನು ಪರಿ ಚಯಿಸಬೇಕೆನಿಸುತ್ತದೆ. ಡೊನಾಲ್ಡ್ ಟ್ರಂಪ್ ರಂತಹ ಮಹಾನ್ ನಾಯಕರು ಆರಂಭದಲ್ಲಿ ಈ ಮಹಾಮಾರಿಯ ಕುರಿತು ಕೇವಲವಾಗಿ ಮಾತನಾಡುತ್ತಿದ್ದಾಗ, ಈ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಹಲವು ಮಹಿಳಾ ನಾಯಕಿಯರು ಪ್ರಯತ್ನಿಸಿದ್ದಾರೆ. ಇದರಿಂದ ತಮ್ಮ ದೇಶಗಳ ಜನತೆಯನ್ನು ರಕ್ಷಿಸಲು ಸಾಧ್ಯವಾಯಿತು ಎಂಬುದು ಹೆಮ್ಮೆಯ ಸಂಗತಿ.

ಜೆಸಿಂತಾ ಆರ್ಡನ್, ಮೇಟೆ ಫ್ರೆಡರಿಕ್ ಸನ್, ಸನ್ನ ಮೆರಿನ್, ಸಿಲ್ವೇರಿಯ ಜೇಕಬ್, ಇರ್ನಾ ಸೋಲ್‍ಬರ್ಗ್, ಏಂಜಲಾ ಮೆರ್ಕಲ್, ಸಾಯ್ ಇಂಗ್‍ವೆನ್ ಇವರು ಇದರಲ್ಲಿ ಪ್ರಮುಖರು.

ಎಪ್ರಿಲ್ ಒಂದರಂದು ಸಿಂಟ್ ಮಾರ್ಟಿನ್‍ನ ಪ್ರಧಾನ ಮಂತ್ರಿ ಸಿಲ್ವೇರಿಯಾ ಜೇಕಬ್ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಅಲ್ಲಿ ಕೋವಿಡ್ ರೋಗವು ವರದಿಯಾಗಿತ್ತು. ರೋಗವು ವ್ಯಾಪಕವಾದರೆ ಸಣ್ಣ ದ್ವೀಪವಾದ ಸಿಂಟ್ ಮಾರ್ಟಿನ್‍ನ ವಿಷಯವು ಗಂಭೀರವಾಗಬಹುದೆಂದು ಅವರು ಅರ್ಥ ಮಾಡಿಕೊಂಡರು. ಇಲ್ಲಿಗೆ ಪ್ರತಿವರ್ಷ ಐದು ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಅಲ್ಲಿರುವುದು ಕೇವಲ ಎರಡು ಐ.ಸಿ.ಯು. ಹಾಸಿಗೆಗಳು ಮಾತ್ರ.
ದೇಶದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡಲು ಸಿಲ್ವೇರಿಯ ಮುಂದಾಗಲಿಲ್ಲ. ಆದರೆ ಎಲ್ಲರೂ ಸಂಪರ್ಕ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆದೇಶಿಸಿದರು. ಮನೆಯನ್ನು ಬಿಟ್ಟು ಯಾತ್ರೆ ಮಾಡಬಾರದೆಂದೂ, ತಮಗೆ ಅತ್ಯವಶ್ಯಕ ವಸ್ತುಗಳನ್ನು ಮನೆಯಲ್ಲೇ ಇರಿಸಿಕೊಳ್ಳಬೇಕೆಂದು ಸೂಚಿಸಿದರು. ಜನರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಕೋವಿಡ್ ನಿಯಂತ್ರಣಕ್ಕೆ ಬಂತು. 51 ವರ್ಷದ ಸಿಲ್ವೇರಿಯಾ ಅವರು ನ್ಯೂಝಿ ಲೆಂಡ್‍ನ ಪ್ರಧಾನ ಮಂತ್ರಿ ಜೆಸಿಂತ ಆರ್ಡೆನ್, ಜರ್ಮನ್ ಚಾನ್ಸಲರ್ ಏಂಜಲಾ ಮೆರ್ಕಲ್‍ರಂತೆ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದವರಲ್ಲ.

ನ್ಯೂಝಿಲೆಂಡ್‍ನಲ್ಲಿ ಜೆಸಿಂತಾ ಅವರು ಲಾಕ್‍ಡೌನ್ ಜಾರಿಗೊಳಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂದಾದರು. ಮನೆಯಲ್ಲೇ ಇರಿ. ಪ್ರಾಣವನ್ನು ರಕ್ಷಿಸಿಕೊಳ್ಳಿ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಸಂದೇಶ ನೀಡಿದರು. ಮಾರ್ಚ್ 14 ರಿಂದ ದೇಶಕ್ಕೆ ಪ್ರವೇಶಿಸಿದವರಿಗೆ 14 ದಿನದ ಕ್ವಾರೆಂಟೈನ್ ವಿಧಿಸಿದರು. ರೋಗಲಕ್ಷಣ ಗಳು ಹೆಚ್ಚಳವಾಗಲು ಆರಂಭಿಸಿದಾಗ ಲಾಕ್‍ಡೌನ್ ತೀವ್ರಗೊಳಿಸಿದರು. ಸರ್ಕಾರದ ಆದೇಶವನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಿದುದರ ಪರಿಣಾಮ ಕೋವಿಡ್ ನಿಯಂತ್ರಣಕ್ಕೆ ಬಂತು.
ಕೋವಿಡ್- 19 ವರದಿಯಾಗಲು ಆರಂಭಿಸಿದಂದಿನಿಂದ ಮಾಧ್ಯಮಗಳಲ್ಲಿ ತುಂಬಿ ನಿಂತ ಹೆಸರೇ ಜರ್ಮನ್ ಚಾನ್ಸಲರ್ ಏಂಜೆಲಾ ಮೆರ್ಕಲ್‍ರದ್ದು. ದೇಶದಲ್ಲಿ ಎರಡನೇ ಮಹಾಯುದ್ಧ ಪರಿಸ್ಥಿತಿಗೆ ಸಮಾನವಾದ ವಾತಾವರಣವಿದೆಯೆಂದೂ ಜಾಗೃತರಾಗದಿದ್ದರೆ ಜರ್ಮನಿಯ 70 ಶೇಕಡಾ ಜನರನ್ನು ಕೋವಿಡ್ ಮಹಾಮಾರಿಯು ಹಿಡಿತಕ್ಕೊಳಗಾಗುತ್ತಾರೆಂದೂ ಆರಂಭದಲ್ಲೇ ಎಚ್ಚರಿಸಿದರು. ಬಳಿಕ ರೋಗ ಪರೀಕ್ಷೆಗಳನ್ನು, ಮುನ್ನೆಚ್ಚರಿಕೆಗಳನ್ನು ತೀವ್ರಗೊಳಿಸಿದರು. ಇತರ ಯುರೋಪಿಯನ್ ದೇಶಗಳಿಗಿಂತ ಭಿನ್ನವಾಗಿ ಮರಣ ಸಂಖ್ಯೆ ಕಡಿಮೆಗೊಳಿಸಲು ಅವರಿಗೆ ಸಾಧ್ಯವಾಯಿತು.
ಡಾಕ್ಟರೇಟ್ ಪಡೆದಿರುವ ಅವರಿಗೆ ವೈರಸ್‍ನ ಕುರಿತು ತಿಳುವಳಿಕೆಯಿದೆ. ಆದ್ದರಿಂದ ಇತರ ಕೆಲವು ದೇಶಗಳ ಆಡಳಿತಗಾರರಂತೆ ವೈರಸ್ ನಮ್ಮನ್ನು ಕಾಡುವುದಿಲ್ಲವೆಂಬ ಉಡಾಫೆಯನ್ನು ಅವರು ತೋರಿಸಲಿಲ್ಲ.
ಡೆನ್ಮಾರ್ಕ್‍ನಲ್ಲೂ ಮಾರ್ಚ್ 13ರಿಂದ ಗಡಿಯನ್ನು ಬಂದ್ ಮಾಡಲಾಯಿತು. ಬಳಿಕ ಅಲ್ಲಿನ ಕಿಂಡರ್ ಗಾರ್ಟನ್‍ಗಳು ಶಾಲೆಗಳನ್ನು ಮುಚ್ಚಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಜನರು ಸೇರದಂತೆಯೂ ಸೂಚಿಸಲಾಯಿತು. ಲಾಕ್‍ಡೌನ್ ಸಂದರ್ಭದಲ್ಲಿ ಜನರು ಸಮಯ ಕಳೆಯಬೇಕಾದ ರೀತಿಯ ಕುರಿತು ದೂರದರ್ಶನದಲ್ಲಿ ಮಾಹಿತಿ ನೀಡಿದರು. ಮೇಟ್ಟೇ ಫ್ರೆಡರಿ ಕ್ಸನ್‍ರ ಪ್ರಜೆಗಳ ಮೇಲಿನ ಕಾಳಜಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಕೋವಿಡ್ ವ್ಯಾಪಕವಾಗದೆ ನಿಯಂತ್ರಣ ವಿಧೇಯಗೊಳ್ಳಲು ಇದು ಸಹಾ ಯಕವಾಯಿತು.
ತೈವಾನ್‍ನಲ್ಲಿ ಜನವರಿಯಲ್ಲಿ ಕೋವಿಡ್-19 ವರದಿಯಾದ ಕೂಡಲೇ ಅಧ್ಯಕ್ಷೆ ಸಾಯ್ ಇಂಗ್‍ವೆನ್ ಕಾರ್ಯ ತತ್ಪರರಾದರು. ಜನರಿಗೆ ಪ್ರಯಾಣಕ್ಕೆ ನಿರ್ಬಂಧವಿಧಿಸಿ ಕ್ವಾರೆಂಟನ್ ತೀವ್ರ ಗೊಳಿಸಿದರು. ಸಾರ್ವಜನಿಕ ಸ್ಥಳಗಳು ಕಟ್ಟಡ ಸಂಕೀರ್ಣಗಳನ್ನು ಅಣುಮುಕ್ತ ಗೊಳಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಯಿತು. ಕೈಗಳನ್ನು ಸ್ವಚ್ಛಗೊಳಿಸುವ ಕುರಿತು ಜನತೆಗೆ ಜಾಗೃತಿ ಮೂಡಿಸಲಾಯಿತು. ಆದರೆ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಿಲ್ಲ. ಚೀನಾದ ಸಮೀಪದ ದೇಶವಾಗಿದ್ದು ಕೂಡಾ ಅವರು ತೆಗೆದುಕೊಂಡ ಮುನ್ನೆಚ್ಚರಿಕೆಯನ್ನು ವಿರೋಧ ಪಕ್ಷಗಳು ಕೂಡಾ ಹೊಗಳಿದವು. ತೈವಾನ್‍ನಿಂದ ಅಮೇರಿಕಾ ಹಾಗೂ ಯುರೋಪ್ ದೇಶಗಳಿಗೆ ಲಕ್ಷಗಟ್ಟಲೆ ಮಾಸ್ಕ್‍ಗಳನ್ನು ರಫ್ತು ಮಾಡಲಾಯಿತು.
ನಾರ್ವೆಯಲ್ಲಿ ಇದೇ ರೀತಿ ಸಮಾನ ವಾದ ಕ್ರಮಗಳ ಮೂಲಕ ಪ್ರಧಾನಮಂತ್ರಿ ಇರ್ನಾ ಸೋಲ್‍ಬರ್ಗ್ ಕೋವಿಡ್- 19ನ್ನು ನಿಯಂತ್ರಿಸಿದರು. ಆರಂಭದಲ್ಲೇ ಲಾಕ್‍ಡೌನ್ ಜಾರಿಗೊಳಿಸಿದ್ದೂ, ಪರೀಕ್ಷೆ ಯನ್ನು ತ್ವರಿತಗೊಳಿಸಿದ್ದೂ ಇದಕ್ಕೆ ಕಾರಣವೆಂದು ಅವರು ಹೇಳುತ್ತಾರೆ.
ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಆಡಳಿತಗಾರ್ತಿಯಾಗಿರುವ ಫಿನ್ಲೆಂಡ್‍ನ ಸನ್ನ ಮರೀನ ಮುಂಜಾಗರೂಕತಾ ಕ್ರಮಗಳ ಮೂಲಕ ವಿಶ್ವದ ಗಮನ ಸೆಳೆದರು. ಕೋವಿಡ್- 19ನ ವ್ಯಾಪಕತೆಯನ್ನು ತಡೆಯಲು ಅವರಿಗೆ ಸಾಧ್ಯವಾಯಿತು.

ಕೃಪೆ: ಅನುಪಮ ಮಹಿಳಾ ಮಾಸಿಕ

LEAVE A REPLY

Please enter your comment!
Please enter your name here