ಮಹಾಂತೇಶ ದುರ್ಗ ಹೆಚ್.ಇ ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿ, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ

ಶಿಕ್ಷಕರು ರಾಷ್ಟ್ರದ ಭವಿಷ್ಯ ನಿರ್ಮಾಪಕರು; ಬದಲಾವಣೆಯ ಹರಿಕಾರರು ಅವರು ನಿತ್ಯ ಪರಿವರ್ತನೆ ಶೀಲರಾಗಿದ್ದು, ತಮ್ಮ ಸುತ್ತಲಿನ ಸಮಾಜವನ್ನು ಬದಲಿಸುವ ಪ್ರೇರಕ ಶಕ್ತಿಯಾಗಿರಬೇಕು ಸ್ವಾಭಿಮಾನ, ಆತ್ಮಗೌರವ, ಮತನಿರಪೇಕ್ಷತೆ, ಪ್ರಜಾಪ್ರಭುತ್ವ, ಸಮಾನತೆ ಮೊದಲಾದ ಮೌಲ್ಯಗಳಿಗೆ ಬದ್ಧರಾಗಿರಬೇಕು ಎಂದೆಲ್ಲಾ ವಿವಿಧ ವೇದಿಕೆಗಳಿಂದ ಚಿಂತಕರು ಪ್ರಾಜ್ಞರು ಹಾಗೂ ರಾಜಕಾರಣಿಗಳು ಧಾರಾಳವಾಗಿ ಹೇಳುತ್ತಿರುತ್ತಾರೆ ಆದರೆ ವಾಸ್ತವ ತೀರ ವ್ಯತಿರಿಕ್ತವಾಗಿದೆ.

ಶಿಕ್ಷಕರಲ್ಲಿ ಬಹುಪಾಲು ಜನ ಬದಲಾವಣೆಯ ವಿರೋಧಿಗಳು ಯಥಾಸ್ಥಿತಿವಾದಿಗಳು. ಶಿಕ್ಷಣರಂಗದಲ್ಲಿ  ಯಾವುದೇ ಹೊಸ ಯೋಜನೆ, ಕಾರ್ಯಕ್ರಮ ಬಂದರೆ ಇವರು ಅದನ್ನು  ವಿರೋಧಿಸುತ್ತಾರೆ. ಹಿಂದಿನ ಕ್ರಮಗಳನ್ನೇ ಪುರಸ್ಕರಿಸಿ ಅದನ್ನೇ ಅನುಸರಿಸುತ್ತಾರೆ. ನಾವು ಬಿ.ಎಡ್. ಮಾಡುವಾಗ ಮೇಷ್ಟ್ರು ಹೇಳಿಕೊಟ್ಟದ್ದು ಹೀಗೆ, ಅದೇ ಸರಿಯಾದ ಕ್ರಮ ನಾವು ಅದನ್ನು  ಬದಲಾಯಿಸೋಲ್ಲ ಎಂದೆಲ್ಲಾ ಕಡ್ಡಿ ಮುರಿದಂತೆ ನುಡಿಯುತ್ತಾರೆ. ಅಕ್ಷರ ದಾಸೋಹ, ಚೈತನ್ಯ ಬಾಲೆಯರಿಗೆ ಬೈಸಿಕಲ್ ಎಂಬ ಯಾವುದೇ ಕಾರ್ಯಕ್ರಮಗಳನ್ನೂ ಇವರು ಸ್ವಾಗತಿಸುವುದಿಲ್ಲ. ಸಿದ್ಧಾಂತದ ಹಾಗೂ ಆಚರಣೆಯ ನಡುವಿನ ಕಂದಕವನ್ನು ಗುರುತಿಸುವುದಿಲ್ಲ. ಕಾರ್ಯಕ್ರಮಗಳು ಯಶಸ್ವಿಯಾಗಿ ಜಾರಿಗೊಂಡರೂ ಅವನ್ನು ಒಪ್ಪಲಿಕ್ಕೆ ಮತ್ತು ತಮ್ಮ ಅಭಿಪ್ರಾಯಗಳನ್ನು ಪರಿಷ್ಕರಿಸಲಿಕ್ಕೆ ಸಿದ್ಧರಿಲ್ಲ. ಇಂಥ ಶಿಕ್ಷಕರು ಹೇಗೆ ತಾನೆ ಸಾಮಾಜಿಕ, ಸಾಂಸ್ಕøತಿಕ ಬದಲಾವಣೆಗಳ ಬಗ್ಗೆ ವಕಾಲತ್ತು ವಹಿಸಲು ಸಾಧ್ಯ? ಇವರು ಹೇಗೆ ತಾನೆ ತರಗತಿಗಳಲ್ಲಿ ಆಧುನಿಕ ಮೌಲ್ಯಗಳ ಬಗ್ಗೆ ಮಕ್ಕಳಲ್ಲಿ ಹೊಸ ಪ್ರಜ್ಞೆ ಮೂಡಿಸಲು ಸಾಧ್ಯ ? ಶಿಕ್ಷರು ಬದಲಾವಣೆಗಳಿಗೆ ಒಗ್ಗಿಕೊಳ್ಳದಿದ್ದರೆ, ಅವರ ತರಗತಿಗಳಲ್ಲಿ  ವರ್ತನೆಯ ಪರಿವರ್ತನೆಗಳು ಹೇಗೆ ಮೈದೋರಲು ಸಾಧ್ಯ?

ಶಿಕ್ಷಕರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಿ ಬೆಳೆಯಬೇಕಾದವರು. ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವಿಲ್ಲ ತಾನೆ? ಶಿಕ್ಷಕರಲ್ಲಿ ಇಂದಿಗೂ ಹಲವರು ಊಳಿಗಮಾನ್ಯ ಮೌಲ್ಯಗಳನ್ನು, ನಿರಂಕುಶ ಮೌಲ್ಯಗಳನ್ನು ಪ್ರತಿಪಾದಿಸುವವರು. ಈ ದೇಶದಲ್ಲಿ ಇಂದಿಗೂ ಬ್ರಿಟಿಷರೇ ಇರಬೇಕಾಗಿತ್ತು. ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಲ್ಲ. ಇಂದಿರಾ ಗಾಂಧಿ ಜಾರಿ ಮಾಡಿದ ತುರ್ತು ಪರಿಸ್ಥಿತಿಯೇ ಉತ್ತಮ ಎಂದು ನಿರ್ಭಿಡೆಯಿಂದ ಘೋಷಿಸುವ ಇವರು, ತರಗತಿಗಳಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ನೀಡದವರು. ತಾವು ಹೇಳಿದ್ದನ್ನೇ ವಿದ್ಯಾರ್ಥಿಗಳು ಮಾಡಬೇಕು; ತಾವು ಹೇಳಿಕೊಟ್ಟ ಉತ್ತರಗಳನ್ನೇ ಬರೆಯಬೇಕು. ತಮ್ಮನ್ನು ಪ್ರಶ್ನಿಸಬಾರದು. ತಮ್ಮ ಆಜ್ಞೆಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂಬ ಧೋರಣೆಯುಳ್ಳವರು! ವಿದ್ಯಾರ್ಥಿಗಳ ಅಭಿಪ್ರಾಯಗಳಿಗೆ ಕಿವಿಕೊಡದಿರುವವರು ! ಪ್ರಜಾಪ್ರಭುತ್ವದ ಬಗ್ಗೆ ತರಗತಿಗಳಲ್ಲಿ ಬೋಧನೆ ಮಾಡುವುದು ಬೇರೆ; ಜೀವನದ ಆಚರಣೆ ಬೇರೆ ಎಂದು ತಿಳಿದವರಿಂದ ಯಾವ ಬದಲಾವಣೆ ನಿರೀಕ್ಷಿಸಬಹುದು?

ಸರ್ವಸಮಾನತೆಯ ತತ್ವಗಳನ್ನು ಶಿಕ್ಷಕರು ಪ್ರತಿಪಾದಿಸಬೇಕು. ಎಲ್ಲ ವಿದ್ಯಾರ್ಥಿಗಳನ್ನು ಸಮಾನ ನೆಲೆಯಲ್ಲಿ ಪರಿಗಣಿಸಬೇಕು. ಎಲ್ಲ ಅರ್ಥಗಳಲ್ಲಿ ಎಲ್ಲ ವರ್ಗದ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಸಹಾನೂಭೂತಿಪರ ನಿಲುವು ತಳೆದು ಕಲಿಕೆಯ ಕ್ರಿಯೆಯಲ್ಲಿ ಅವರೊಡನೆ ಸಹಕರಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಆದರೆ ಈಗಿನ ಕೆಲವು ಶಿಕ್ಷಕರು ಹೇಳುವುದನ್ನು ಕೇಳಿದರೆ ಗಾಬರಿಯಾಗುತ್ತದೆ. ನಮ್ಮ ಶಾಲೆಯಲ್ಲಿ ಇತರ ಜಾತಿಯ ಮಕ್ಕಳ ಸಂಖ್ಯೆ ಹೆಚ್ಚು. ಅವು ಏನೂ ಪ್ರಯೋಜನವಿಲ್ಲ. ಅವಕ್ಕೆ ಕಲಿಸುವುದೇ ದಂಡ ಎನ್ನುವವರಿದ್ದಾರೆ. ಕನ್ನಡದ ಕವಿ ಕುವೆಂಪು ಅಂಥವರಿಗೆ ಇಂಥ ಶಿಕ್ಷಕರು ಹೀಗೆ ಹೇಳುವುದನ್ನು ಕೇಳಿದ್ದೇನೆ- ನಮ್ಮ ಶಾಲೆಯಲ್ಲಿ ಸಾಬರ ಮಕ್ಕಳೇ ತುಂಬಿದ್ದಾರೆ ಅವಕ್ಕೆ ಶಾಲೆ ಬೇಡ ದುಬೈ ದುಡ್ಡು ಬರ್ತದೆ. ಮಜಾ ಮಾಡ್ತವೆ ಮತ್ತೆ  ಉಂಟಲ್ಲ  ಭಯೋತ್ಪಾದನೆಯ ಕೆಲಸ!? ಈ ರೀತಿಯ ಪೂರ್ವಾಗ್ರಹಪೀಡಿತ ಶಿಕ್ಷಕರು ತರಗತಿಗಳಲ್ಲಿ ಹಿಂದುಳಿದ ಜನರಿಗೆ, ಜಾತಿಗಳವರಿಗೆ, ಅಲ್ಪಸಂಖ್ಯಾತರಿಗೆ ಏನು ತಾನೆ ಕಲಿಸಿಯಾರು?  ಇವರೆಲ್ಲ  ಚೆನ್ನಾಗಿ ಕಲಿಯದೇ ಇರಲಿ, ಪ್ರಗತಿ ಸಾಧಿಸದೇ ಇರಲಿ,   ತಮ್ಮ  ಮಟ್ಟಕ್ಕೆ ಬಾರದಿರಲಿ ಮತ್ತು ತಮಗಿಂತಲೂ ಮುಂದುವರಿಯದಿರಲಿ  ಎಂದು ಪ್ರಾರ್ಥಿಸುವ ಇಂಥ ಶಿಕ್ಷಕರು, ಭಯೋತ್ಪಾದನೆಯ ಇನ್ನೊಂದು ಮುಖವಲ್ಲವೆ?

ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಗೌರವ ಹಾಗೂ ಸ್ವಾಭಿಮಾನದಿಂದ ದುಡಿಯುವ ಶಿಕ್ಷಕರಿಗೆ  ಸಂಖ್ಯೆ ಅತ್ಯಲ್ಪ ಒಂದು ಬಗೆಯ ಗುಲಾಮಿ ಸಂಸ್ಕøತಿ ಶಿಕ್ಷಣ ವ್ಯವಸ್ಥೆಯಲ್ಲಿ  ಹುದುಗಿಕೊಂಡಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥಾ ಮುಖ್ಯಸ್ಥರ ಮಾತುಗಳನ್ನು ಇತರ ಶಿಕ್ಷಕರು ಮೀರುವಂತಿಲ್ಲ; ಮೀರಿದರೆ ಅಶಿಸ್ತು, ಅವಿಧೇಯತೆ ಎಂಬ ನೆಪದಲ್ಲಿ ನೋಟಿಸು ಕೊಡಲಾಗುತ್ತದೆ. ಮುಖ್ಯಸ್ಥರೂ ಸೇರಿದಂತೆ ಎಲ್ಲ ಸಿಬ್ಬಂದಿಯವರೂ ಸಂಸ್ಥೆಯ ಆಡಳಿತ ಮಂಡಳಿಯಲ್ಲಿರುವ ಶಾಸಕರ ಮುಂದೆ ಡೊಗ್ಗು ಸಲಾಮು ಹೊಡೆಯಲೇಬೇಕು, ಸರಕಾರ ಬದಲಾದ ಹಾಗೆ ಬೇರೆ-ಬೇರೆ ಶಾಸಕರುಗಳಿಗೆ ನಮಿಸಿ, ಕೊಂಡಾಡಿ, ಹಾಡಿ ಹೊಗಳಿ ಸಂಸ್ಥೆಗೆ ಬೇಕಾದುದನ್ನು ಪಡೆದುಕೊಳ್ಳಬೇಕು ತಮಗೆ ಬೇಕಾದಲ್ಲಿಗೆ ವರ್ಗಾವಣೆ ಪಡೆದುಕೊಳ್ಳಬೇಕು ತಮಗೆ  ಬೇಡದವರನ್ನು ಮತ್ತೆಲ್ಲಿಗೋ ಎತ್ತಂಗಡಿ ಮಾಡಿಸಬೇಕು. ಹೀಗಾಗಿ ಸರಕಾರ ಸಂಸ್ಥೆಗಳಲ್ಲಿ ಬಹುಮಂದಿ ‘ಜೀ ಹುಜೂರ್’ ಎನ್ನುವವರು; ವಂದಿ ಮಾಗಧರು; ಸುತ್ತಿಪಾಠಕರು. ಸರಕಾರ ಯಾವುದೇ ಧೋರಣೆಗಳ ಬಗ್ಗೆ  ತುಟಿಪಿಟಕ್ಕೆನ್ನದವರು ಟೀಕಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಯದ್ವಾತದ್ವಾ ಹೊಗಳಿದರೆ ವೈಯಕ್ತಿಕ ಸ್ವಾರ್ಥಸಾಧನೆ ಸಾಧ್ಯ. ಆದುದರಿಂದ ಬದುಕುವ ಮಾರ್ಗ ಉತ್ತಮವೆಂದು ಅದನ್ನೇ ಆಯ್ದುಕೊಳ್ಳುವವರು ಬಹುಮಂದಿ!

ಅನುದಾನಿತ ಶಿಕ್ಷಣ ಸಂಸ್ಥೆಗಳವರು ಸರಕಾರಿ ಶಿಕ್ಷಕರಿಗಿಂತ ಕೊಂಚ ಹೆಚ್ಚಿನ ಸ್ವಾತಂತ್ರ್ಯ ಅನುಭವಿಸುವವರು. ಸರಕಾರದ ಬಗ್ಗೆ ಇವರು ಟೀಕೆ ಟಿಪ್ಪಣಿಗಳನ್ನು ಮಾಡಿದರೂ ಸರಕಾರ ಅಥವಾ ಅಧಿಕಾರಿಗಳು ಇದನ್ನೆಲ್ಲ ಗಂಭೀರ ಪ್ರಕರಣವೆಂದು ಪರಿಗಣಿಸುವುದಿಲ್ಲ. ಆದರೆ, ತಮ್ಮನ್ನು ನೇಮಕ ಮಾಡಿಕೊಂಡ ಆಡಳಿತ ಮಂಡಳಿಗೆ ಇವರು ತಲೆಬಾಗಬೇಕು ಕಾಯುವ, ಕೊಲ್ಲುವ, ಅಧಿಕಾರ ಆಡಳಿತ ಮಂಡಳಿಗೆ ಇರುವುದರಿಂದ ಇವರೆಲ್ಲ ಆಡಳಿತ ಮಂಡಗಳಿಗಳ ಮುಂದೆ ಹಲ್ಲುಗಿಂಬುವವರೇ. ಮುಖ್ಯೋಪಾಧ್ಯಾಯರು ಹಾಗೂ ಪ್ರಾಂಶುಪಾಲರುಗಳಂತೂ ತಮ್ಮ ವ್ಯಕ್ತಿತ್ವವನ್ನು ಅಡವಿಟ್ಟು ಆಡಳಿತ ಮಂಡಳಿಯವರ ಅಭಿಪ್ರಾಯಗಳನ್ನೇ ಪ್ರಸಾದವೆಂದು ಸ್ವೀಕರಿಸುವ ದುಸ್ಥಿತಿಯಿದೆ. ಇದರಿಂದಾಗಿ ಕೆಲವೊಂದು ಸಂಸ್ಥೆಗಳ ಮುಖ್ಯಸ್ಥರುಗಳ ಬಗ್ಗೆ ಅವರ ಸಹೋದ್ಯೋಗಿಗಳು ನಮ್ಮ ಪ್ರಿನ್ಸಿಪಾಲರು ಮ್ಯಾನೇಜ್‍ಮೆಂಟ್ ಹೇಗೆ ಹೇಳುತ್ತೋ ಹಾಗೆ. ಈಗ ಹಗಲೆಂದರೆ ಹೌದು ಹಗಲು;  ಅಲ್ಲ, ರಾತ್ರಿ ಎಂದರೆ ಅಲ್ಲಲ್ಲ ರಾತ್ರಿ ಎನ್ನುವವರು ಎಂದು ಲೇವಡಿ ಮಾಡುತ್ತಾರೆ. ಆದರೆ ಈ ಲೇವಡಿಗಾರರು ಮುಖ್ಯಸ್ಥರಾದಾಗ ಅವರು ಇದೇ ಒಲೆಗೆ ತಾವಾಗಿಯೇ ಬೀಳುತ್ತಾರೆ! ಆದರೂ ಇದ್ದುದರಲ್ಲೇ  ಆಡಳಿತ ಮಂಡಳಿಯ ತಾಳಕ್ಕೆ ತಕ್ಕಂತೆ ಕುಣಿಯದೆ ತಮ್ಮದೇ ಆದ ಸ್ವತಂತ್ರ ನಿಲುವನ್ನು ತಳೆದು ವ್ಯವಹರಿಸುವ ಪ್ರಾಂಶುಪಾಲರುಗಳು, ಸಿಬ್ಬಂದಿ ವರ್ಗದವರು ಅಲ್ಲಲ್ಲಿ ಇದ್ದಾರೆ ಎಂಬುದು ಸಮಾಧಾನದ ಸಂಗತಿ.

ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಂತೂ ಸಂಪೂರ್ಣ ಗುಲಾಮಿ ಸಂಸ್ಕøತಿ ಹರಡಿಕೊಂಡಿದೆ ಪ್ರಜಾಪ್ರಭುತ್ವ, ಸಮಾನತೆ, ವ್ಯಕ್ತಿ ಗೌರವ ಇತ್ಯಾದಿಯಾದ ಯಾವ ಮೌಲ್ಯವನ್ನೂ ನೀವು  ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಕಾಣಲು ಸಾಧ್ಯವಿಲ್ಲ. ಇಡೀ  ಶಾಲೆಯಲ್ಲಿ ಹಾಜರು, ಶುಲ್ಕ ಸಂಗ್ರಹ, ಕಟ್ಟಡ ಕಾಮಗಾರಿ, ಶಿಕ್ಷಕರ ಮೇಲ್ವಿಚಾರರಣೆ ಎಲ್ಲವೂ ಈ ಮಹಾಶಯನದ್ದೇ, ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಅವರು ಕುರ್ಚಿಯಲ್ಲಿ ಆಸೀನರಾಗುವ ಈ ಮಹಾಶಯನ ಮುಂದೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮೂಗುಬ್ಬಸವಡುತ್ತ ಕಾರ್ಯ ನಿರ್ವಹಿಸಬೇಕು.  ಕೊಡುವ ಸಂಬಳ ಹೇಳಿಕೊಳ್ಳುವಂಥದ್ದಲ್ಲ.

ಹೆಸರು  ಇಂಗ್ಲಿಷ್ ಮೀಡಿಯಂ! ಖಾಸಗಿ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯವರನ್ನು ತೃಪ್ತಿಪಡಿಸಿದರೇನೇ ತಮ್ಮ ವೇತನ  ವೃದ್ಧಿ ಸಾಧ್ಯ ಎಂದು ಅರಿತ ಸಿಬ್ಬಂದ್ದಿ ವರ್ಗ ಚೆನ್ನಾಗಿ ನಾಟಕ ಮಾಡುವುದನ್ನು  ಕಲಿಯುತ್ತಾರೆ. ವಿವಿಧ ಸಂದರ್ಭಗಳಲ್ಲಿ ಕೃತಕ ವಿಧೇಯತೆ ಪ್ರದರ್ಶಿಸುತ್ತ ಅವರನ್ನು ಹಾಡಿಹೊಗಳುತ್ತ ತಮ್ಮ ಹಾಗೂ ಮಕ್ಕಳ ಸಾಧನೆಯನ್ನು ಉತ್ಟ್ರೇಕ್ಷಿಸುತ್ತ, ಅವರ ಹಾದಿಯಲ್ಲಿ ಮಕ್ಕಳಿಂದ ಹೂವು ಚೆಲ್ಲಿಸುತ್ತಾ ಹೀಗೆ ಏನೇನೋ ಮಂಗವಿದ್ಯೆ ಮಾಡುತ್ತಾರೆ. ‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬಂತೆ, ಸರಕಾರಿ ಶಿಕ್ಷಕ ಹುದ್ದೆ ಸಿಕ್ಕಿದೊಡನೆ ಕೆಲವರು ಬಂಧಮುಕ್ತವಾಗಿ ಹಾರಿ ಹೋಗುತ್ತಾರೆ; ಆ ಭಾಗ್ಯ ಇಲ್ಲದವರು ಕಟ್ಟುಪಾಡುಗಳೊಳಗೇ ನರಳುತ್ತಾ ನಡೆಯುತ್ತಾ ಕಾಲ ಸವೆಸುತ್ತಾರೆ.

ಮೌಲ್ಯ ಪ್ರಜ್ಞೆಯನ್ನು ಬೆಳೆಸಬೇಕಾದ ಶಿಕ್ಷಕರು ಗುಲಾಮಿ ಸಂಸ್ಕøತಿಯ ಬಂಧನದಲ್ಲಿ ಸಿಲುಕಿದ್ದಾರೆ. ಕೆಲವರು ತಾವಾಗಿಯೇ ಮತ್ತೆ ಕೆಲವರು  ಅನಿವಾರ್ಯವಾಗಿ ಪಂಜರಗಳಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಿರುವಾಗ ಶಿಕ್ಷಕ ಬದಲಾವಣೆಯ ಹರಿಕಾರ, ಯುಗ ಪ್ರವರ್ತಕ ಎಂಬುದು ಬರೀ ಆದರ್ಶವಾಗಿ ಗೋಚರಿಸುತ್ತದೆ. ತಾನೇ ಸರಿಯಾಗಿ ಉರಿಯದ, ಉರಿಯಲಾಗದ ಸೊಡರು ಬೇರೆ ಸೊಡರುಗಳನ್ನು ಬೆಳಗಿಸುವುದು ಹೇಗೆ?

 

 

 

 

1 COMMENT

  1. ನೀವೇಳಿದ ಹಾಗೆ …….ಎಲ್ಲವೂ …ಹಾಗೇ….ಬದಲಾವಣೆ ಮಾಡುವವರನ್ನು ಮಾಡ್ಲಿಕೆ ಬಿಡುವುದಿಲ್ಲ….

LEAVE A REPLY

Please enter your comment!
Please enter your name here