ಲೇಖಕರು: ಇಸ್ಮತ್

ಸಾಹಿರ್ ಲುಧಿಯಾನ್ವಿ ಸ್ವಾತಂತ್ರ್ಯ ಪೂರ್ವ ಕಾಲದಲ್ಲೇ ತನ್ನ ಅಸಾಧಾರಣ ಕಾವ್ಯ ಪ್ರತಿಭೆಯಿಂದ ಅವಿಭಜಿತ ಭಾರತದಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ ಕವಿ ಮತ್ತು ಸಿನಿಮಾ ಗೀತರಚನೆಕಾರ. ನಿಸ್ಸಂಶಯವಾಗಿಯೂ ಆತ ಓರ್ವ ಅದ್ಭುತ ಕವಿ.‌ಆತ ತನ್ನ ಕಾವ್ಯದಷ್ಟೇ ಪ್ರಸಿದ್ಧಿಯನ್ನು ಅಮೃತಾ ಪ್ರೀತಮಳೊಂದಿಗಿನ ಅನುರಾಗದಿಂದಲೂ ಪಡೆದ. ಇಂದು ಅಮೃತಾ ಪ್ರೀತಮ್‌ ಹುಟ್ಟಿದ ದಿನ.
ಹೊರನೋಟಕ್ಕೆ ಆಕೆಯ ಪ್ರೇಮವೇ ಒಂದು ಮರುಳಿನಂತೆ ಬಾಸವಾಗುತ್ತದೆ, ಅಸಲಿಗೆ ಸಾಹಿರ್‌ನ ಪ್ರೇಮವೇ ಆಕೆಯನ್ನು ಹುಚ್ಚಿಯನ್ನಾಗಿಸಿತ್ತು.
ಸಾಹಿರ್ ಸ್ವಾತಂತ್ರ್ಯ ಪೂರ್ವ ಕಾಲದ ಪ್ರಸಿದ್ಧ ಕವಿ ಮಾತ್ರವಲ್ಲದೇ ಬಾಲಿವುಡ್‌ನ ಗೀತ ರಚನೆಕಾರ. ಒಂದರ್ಥದಲ್ಲಿ ಸೆಲೆಬ್ರಿಟಿ… ಅಮೃತಾ ಏನು ಸಾಧಾರಣದವಳಲ್ಲ. ಪಂಜಾಬಿ ಮತ್ತು ಹಿಂದಿಯ ಪ್ರಸಿದ್ಧ ಕಾದಂಬರಿಕಾರ್ತಿ ಮತ್ತು ಕವಯತ್ರಿ. ಜ್ಞಾನಪೀಠ ಪ್ರಶಸ್ತಿಯನ್ನೇ ಮುಡಿಗೇರಿಸಿದಾಕೆ.‌

ಅಮೃತಾ ಮತ್ತು ಸಾಹಿರ್‌ರದ್ದು ಒಂದು ವಿಶಿಷ್ಟ ಪ್ರೇಮ ಕಥನ. ಅವರು ಬರೆದ ಪ್ರೇಮಪತ್ರಗಳನ್ನು ಸಂಗ್ರಹಿಸಿದರೆ ಅದೇ ಒಂದು ಅದ್ಭುತ ಸಾಹಿತ್ಯ ಕೃತಿಯಾಗುತ್ತಿತ್ತು.‌ ಅವರು ಮೌನದಲ್ಲಿ , ಮಾತಿನಲ್ಲಿ, ಪತ್ರದಲ್ಲಿ, ಸಾಹಿತ್ಯದಲ್ಲಿ, ಭಾವನೆಗಳಲ್ಲಿ ಹೀಗೆ ಎಲ್ಲೆಲ್ಲೂ,ಎಲ್ಲದರಲ್ಲೂ ಪ್ರೇಮವನ್ನೇ ಉಸಿರಾಡಿದರು.‌ಅದರಲ್ಲಿ ಅಮೃತಾಳದ್ದೇ ಹೆಚ್ಚು ತೂಕದ್ದು.

ಇವರ ಪ್ರೇಮದ ಕುರಿತಂತೆ ತುಸು ಹೇಳುತ್ತೇನೆ. 1944ರ ಕಾಲ… ಅಮೃತಾ ಮತ್ತು ಸಾಹಿರ್‌ರ ಮೊದಲ ಭೇಟಿ ಒಂದು ಮುಶಾಯಿರಾದಲ್ಲಿ (ಕವಿಗೋಷ್ಟಿ)..
ಮೊದಲ ಭೇಟಿಯಲ್ಲೇ ಇಬ್ಬರೂ ಪರಸ್ಪರರಿಗೆ ಅರಿಯದೇ ಪ್ರೇಮಿಸತೊಡಗುತ್ತಾರೆ. ಅಮೃತಾ ಅದಾಗಲೇ ವಿವಾಹಿತೆ. ಆಕೆಗೆ ಹದಿನಾರರ ಹರೆಯದಲ್ಲೇ ಮದುವೆಯಾಗಿರುತ್ತದೆ. ಆಕೆ ಸಾಹಿರನ ಮೇಲೆ ಅದೆಂತಹ ಮೋಹ ಬೆಳೆಸುತ್ತಾಳೆಂದರೆ ಆತನಿಗಾಗಿ ಪತಿಯನ್ನು ತೊರೆಯಲೂ ಸಿದ್ಧಳಾಗುತ್ತಾಳೆ. ಸಾಹಿರನೂ ಆಕೆಯನ್ನು ಅದಮ್ಯವಾಗಿ ಪ್ರೇಮಿಸುತ್ತಾನೆ.. ಆದರೆ ಮದುವೆಯೆಂಬ ಬಂಧಕ್ಕೆ ಬೀಳಲು ಆತ ಸಿದ್ಧನಿರುವುದಿಲ್ಲ. ಸಾಹಿರನ ಮೋಹಕ್ಕೆ ಬಿದ್ದ ಅಮೃತಾ ಪತಿಯನ್ನು ತೊರೆಯುತ್ತಾಳೆ. ಸಾಹಿರ್ ಆಕೆಯನ್ನು ಪ್ರೀತಿಸುತ್ತಾನಾದರೂ ವಿವಾಹವಾಗಲು ಸಿದ್ಧನಿರುವುದಿಲ್ಲ. ಕೊನೆಗೆ ಆಕೆ ಆ ಕಾಲದ ಪ್ರಸಿದ್ಧ ಚಿತ್ರ ಕಲಾವಿದ ಇಮ್ರೋಝ್‌ನೊಂದಿಗೆ ವಿವಾಹವಾಗದೇ ಕೂಡಿ ಬಾಳುತ್ತಾಳೆ. ಇಮ್ರೋಝ್‌ಗೆ ಈಕೆಯ ಪ್ರೇಮ ಕತೆ ಗೊತ್ತಿಲ್ಲದ್ದಲ್ಲ. ಅದಾಗ್ಯೂ ಶಬರಿ ರಾಮನಿಗೆ ಕಾಯುವಂತೆ ಕಾಯುತ್ತಾನೆ. ಇಂದಲ್ಲ ನಾಳೆ ಆಕೆ ನನ್ನನ್ನು ಮಾತ್ರ ಪ್ರೀತಿಸುತ್ತಾಳೆಂದು…

ಇಮ್ರೋಝನೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುವಾಗ ಹಿಂಬದಿ ಸೀಟಲ್ಲಿ ಕೂತು ಇಮ್ರೋಝನ ಬೆನ್ನಲ್ಲೇ ತನ್ನ ಬೆರಳಿನಿಂದ ಸಾಹಿರನ ಹೆಸರು ಗೀಚುತ್ತಾಳೆ. ಹಲವಾರು ವರ್ಷಗಳಿಂದ ಒಟ್ಟಿಗಿದ್ದರೂ ಇಮ್ರೋಝ್ ಕೂಡಾ ಯಾವತ್ತೂ ಅಮೃತಾಳನ್ನು ತನ್ನನ್ನು ಒಪ್ಪುವಂತೆ ಒತ್ತಾಯಿಸುವುದಿಲ್ಲ… ಅರೆ… ಆಕೆ ಈತನನ್ನು ಒಪ್ಪಿಯೇ ತಾನೆ ಈತನೊಂದಿಗೆ ಬಾಳುತ್ತಿರುವುದು…
ಇಮ್ರೋಝ್ ಎಂತಹ ಅದ್ಭುತ ಮನುಷ್ಯನೆಂದರೆ ಆಕೆಗಿರುವ ಸಾಹಿರನ ಮೋಹವನ್ನು ಆಕೆಗಾಗಿಯೇ ಸಹಿಸುತ್ತಾನೆ..
ಸಾಹಿರನೂ ಅಷ್ಟೇ… ಆತ ಈಕೆಯನ್ನು ಅದೆಷ್ಟು ಅದಮ್ಯವಾಗಿ ಪ್ರೀತಿಸುತ್ತಾನೆಂದರೆ… ಒಮ್ಮೆ ಆತನ ಕಚೇರಿಯ ಟೇಬಲ್ ಮೇಲಿದ್ದ ಕೊಳಕಾದ ಕಾಫಿ ಕಪ್‌ನ್ನು ಆತನ ಸಹ ಗೀತರಚನೆಕಾರ ಜೈದೇವ್ ತೊಳೆದಿಡಲೆಂದು ಎತ್ತಿದಾಗ… ಏಯ್…. ಬಿಡು ಬಿಡು…
ಅಯ್ಯೋ ಕೊಳಕಾಗಿದೆ ಮಾರಾಯ….
ಇರಲಿ ಬಿಡೋ…
ಯಾಕೆ..?
ಅದು ನನ್ನ ಪ್ರಿಯತಮೆ ಕಾಫಿ ಕುಡಿದಿಟ್ಟದ್ದು…
ಅದರಲ್ಲಿ ನಾನಾಕೆಯನ್ನು ಆಸ್ವಾದಿಸುತ್ತೇನೆ…
ಅದಾಗ್ಯೂ ಮಿಲನದ ಸಾಧ್ಯತೆಯನ್ನು ಸಾಹಿರ್ ನಿರಾಕರಿಸುತ್ತಾನೆ. ಆತ ಬಾಲಿವುಡ್ ಗಾಯಕಿ ಸುಧಾ ಮಲ್ಹೋತ್ರಳನ್ನು ಕಟ್ಟಿಕೊಳ್ಳುತ್ತಾನೆ..
ಆ ಬಳಿಕ ಅಮೃತಾ ಅಕ್ಷರಶಃ ಹುಚ್ಚಿಯಂತಾಗುತ್ತಾಳೆ..

ನಳನನ್ನು ಕಾಯುತ್ತಿದ್ದ ದಮಯಂತಿಗೆ ಸಂಸಾರದ ಹಂಗಿತ್ತು…ರಾಮನನ್ನು ಕಾಯುತ್ತಿದ್ದ ಶಬರಿಗೆ ಭಕ್ತಿಯ ನೆಪವಿತ್ತು….
ಲೈಲಾ -ಮಜ್ನೂ….. ರೋಮಿಯೋ ಜೂಲಿಯೆಟ್ ಮುಂತಾದವರ ಕತೆಗಳನ್ನು ಓದಿದ್ದೇವೆ… ಕೇಳಿದ್ದೇವೆ… ಭಾರತೀಯ ಸಾಹಿತ್ಯ ಲೋಕದ ಅಮರ ಪ್ರೇಮಿಗಳಾದ ಅಮೃತಾ-ಸಾಹಿರ್‌ರ ಆರಾಧನಾ ಸ್ವರೂಪದ ಪ್ರೇಮ, ಮತ್ತವರ ಬರಹಗಳ ಕುರಿತಂತೆ ಆಪ್ತವಾಗಿ ಬರೆದ ಪುಸ್ತಕವೊಂದು ಕನ್ನಡದಲ್ಲೂ ಬಂದಿದೆ… ಹಸನ್ ನಯೀಂ ಸುರಕೋಡ ಅವರು ಬರೆದ “ಪ್ರೇಮಲೋಕದ ಮಾಯಾವಿ” … ಇದು‌‌ ಸಾಹಿತ್ಯ ಮತ್ತು ಪ್ರೇಮವನ್ನು ಆಸ್ವಾದಿಸುವ ರಸಿಕರೆಲ್ಲರೂ ಓದಲೇಬೇಕಾದ ಕೃತಿ..
ಸುರಕೋಡ ಸಾಹೇಬರು ಅಮೃತಾ ಪ್ರೀತಮಳ ಆತ್ಮ ಚರಿತ್ರೆ “ರಸೀದಿ ಟಿಕೇಟ್” ಕೂಡಾ ಕನ್ನಡಕ್ಕೆ ತಂದಿದ್ದಾರೆ. ಅದಕ್ಕಾಗಿ ಅವರು ಅನುವಾದ ಸಾಹಿತ್ಯ ವಿಭಾಗದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.

ವಾರ್ತಾಭಾರತಿ ಪತ್ರಿಕೆಯಲ್ಲಿ ಅಮೃತಾಳ ಹುಟ್ಟಿದ ದಿನವೆಂಬ ಟಿಪ್ಪಣಿ ನೋಡಿದಾಗ ನನ್ನನ್ನು ಅತಿಯಾಗಿ ಕಾಡಿದ ಈ ಪ್ರೇಮಕತೆ ನೆನಪಾಯಿತು…

LEAVE A REPLY

Please enter your comment!
Please enter your name here