ಲೇಖಕರು: ವಿಲ್ಫರ್ಡ್ ಡಿಸೋಜಾ.(ಶ್ರಮಿಕರು, ಬರಹಗಾರರು,ಸಾವಯವ ಕೃಷಿಕರು, ಮಂಗಳೂರು)

ಒಬ್ಬ ದಲಿತ ಸಂಸದನಿಗೆ ತನ್ನ ಕ್ಷೇತ್ರದ ವ್ಯಾಪ್ತಿಯ ಊರಿಗೆ ಪ್ರವೇಶಕ್ಕೆ ನಿರಾಕರಿಸಿದ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ. ಅದು ಕೂಡ ” ಹಿಂದೂ ನಾವೆಲ್ಲ ಒಂದು” ಎನ್ನುವ ಘೋಷಣೆಯೊಂದಿಗೆ ಮತದಾರನ ವಿವೇಚನೆಗೆ ಮಂಕು ಹಿಡಿಸಿ ಅಧಿಕಾರಕ್ಕೆ ಬಂದಿರುವ ಪಕ್ಷದ ಸಂಸದ ಇಂತಹ ಅವಮಾನಕ್ಕೆ ಈಡಾಗಿದ್ದಾರೆ. ಸಂಸದನಿಗೆ ಊರಿನ ಪ್ರವೇಶ ನಿರಾಕರಿಸಿ ಅಸ್ಪೃಶ್ಯತೆ ಆಚರಿಸಿದವರು ಬ್ರಹ್ಮನ ಮುಖದಿಂದ ಹುಟ್ಟಿದ ಮೇಲ್ಜಾತಿಯ ಬ್ರಾಹ್ಮಣರಲ್ಲ. ಹಿಂದುಳಿದ ಸಮುದಾಯದ ಗೊಲ್ಲರು. ಅಂದರೆ ಬ್ರಹ್ಮನ ಪಾದದಿಂದ ಹುಟ್ಟಿದ ಶೂದ್ರರು. ಪಾದದಿಂದ ಹುಟ್ಟಿದ ಶೂದ್ರರು ಸಹಜ ಜೈವಿಕ ಕ್ರಿಯೆಯ ಮೂಲಕ ತಾಯಿಯ ಗರ್ಭದಲ್ಲಿ ಜೀವ ತಾಳಿದ ಮನುಷ್ಯನನ್ನು ನೀನು ಕೀಳು ಎಂದು ಅವಮಾನಿಸುವ ಸಂಸ್ಕೃತಿ ನಮ್ಮದು..!!

ಇಲ್ಲಿ ಕೀಳು ಮನಸ್ಥಿತಿಯವರು ಯಾರು..? ಅವಮಾನಕ್ಕೆ ಈಡಾದ ಈ ದೇಶದ ದಲಿತ ಸಂಸತ್ ಸದಸ್ಯ ಸೇರಿದಂತೆ ಪ್ರತಿ ನಿತ್ಯದ ತಮ್ಮ ಬದುಕಿನಲ್ಲಿ ಇಂತಹ ಸಾವಿರ ಅವಮಾನಗಳನ್ನು ಸಹಿಸಿ ಬದುಕುತ್ತಿರುವ ಕೋಟಿ ಕೋಟಿ ದಲಿತ ಜೀವಗಳಂತೂ ಖಂಡಿತ ಅಲ್ಲ.‌ ಮಾನವನ ಘನತೆಗೆ ಕಳಂಕವಾಗಿರುವ ಅಸ್ಪೃಶ್ಯತೆಯನ್ನು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಚರಿಸುವ, ಅನುಸರಿಸುವ ಹಿಂದುಳಿದ ಸಮಾಜದ ಜನರನ್ನು ಕೀಳು ಮನಸ್ಥಿತಿಯವರು ಎಂದು ಆರೋಪಿಸಲು ಮನಸ್ಸು ಒಪ್ಪುತ್ತಿಲ್ಲ. ಈ ಅಮಾನವೀಯ ಸಂಸ್ಕೃತಿಯ ಜನಕರು ಮತ್ತದರ ಪೋಷಕರು ಅತ್ಯಂತ ಕೀಳು ಮನಸ್ಥಿತಿಯ‌ ಜನರಾಗಿದ್ದಾರೆ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ.

ನಮ್ಮ ಮನೆಯವನಾದ ಚೋಮ:

ಅಸ್ಪೃಶ್ಯತೆಯನ್ನು ಧಿಕ್ಕರಿಸಿ ಮಾನವನಾಗಿ ಬದುಕಲು ಕಲಿಸಿದ ಮೊದಲ ಗುರು ನನ್ನ ತಂದೆ. ನಮ್ಮ ಮನೆಯಲ್ಲಿ ಕಳೆದ 40 ವರ್ಷಗಳ ಹಿಂದೆಯೇ ಈ ಅಮಾನವೀಯ ಪದ್ಧತಿಗೆ ಇತಿಶ್ರೀ ಹಾಡಲಾಯಿತು. ನನ್ನ ಬಾಲ್ಯದಲ್ಲಿ ನಮ್ಮ ಮನೆಗೆ ದಲಿತ ಸಮುದಾಯದ ಅನೇಕ ಜನರು ಬರುತ್ತಿದ್ದರು. ಗದ್ದೆಯ ನಾಟಿ ಕೆಲಸಕ್ಕೆ ಬರುತ್ತಿದ್ದ ಮುದರು, ಐತೆ, ಕೊರಪ್ಪೊಲು. ಅಕ್ಕಿ ಮುಡಿ ಕಟ್ಟಲು ಮತ್ತು ಸತ್ತ ದನ ಹೂಳಲು ಬರುತ್ತಿದ್ದ ಓಮರ, ಹಬ್ಬದ ಸಂದರ್ಭದಲ್ಲಿ ಊಟ ಕಟ್ಟಿಕೊಂಡು ಹೋಗಲು ಮಧ್ಯಾಹ್ನದಿಂದ ರಾತ್ರಿಯ ತನಕವೂ ಬರುತ್ತಲೇ ಇದ್ದ ನಲಿಕೆಯವರು, ವರ್ಷಕ್ಕೆ ಒಂದೆರಡು ಬಾರಿ ಗೊಬ್ಬರ ಹೊರುವ ಬುಟ್ಟಿ, ಭತ್ತ ತುಂಬಿಸುವ ಬುಟ್ಟಿ, ಜೇನು ತೆಗೆದುಕೊಂಡು ಬರುತ್ತಿದ್ದ ಕೊರಗರು.., ಹೀಗೆ ನೆನಪಿಸಿಕೊಂಡರೆ ಅವರೆಲ್ಲರ ಮುಖಗಳು ಈಗಲೂ ನನ್ನ ಮುಂದೆ ಸುಳಿಯುತ್ತವೆ. ಇವರಿಗೆ ನಮ್ಮೂರಿನ ಮೇಲ್ಜಾತಿಗಳೆಂದು ಹೇಳಿಕೊಳ್ಳುವ ಯಾರ ಮನೆಯೊಳಗೂ ಪ್ರವೇಶ ಇರಲಿಲ್ಲ.(ಈಗಲೂ ಇಲ್ಲ) ಬಾಳೆ ಎಲೆ ಅಥವಾ ಅಡಿಕೆಯ ಹಾಳೆಯಲ್ಲಿ ಅವರಿಗೆ ಊಟ ಹಾಕಲಾಗುತ್ತಿತ್ತು. ದನದ ಕೊಟ್ಟಿಗೆ ಬದಿಯಲ್ಲೋ, ಬಚ್ಚಲು ಮನೆಯ ಮೋಟು ಗೋಡೆಯ ಮೇಲೆ ಕುಳಿತೋ ಇವರು ಊಟ ಮಾಡಬೇಕಿತ್ತು. ನಮ್ಮ ದಾಯಾದಿ ಸೋದರನ‌ ಮನೆಯಲ್ಲಿ ವರ್ಷಾನುಗಟ್ಟಲೆ ಜೀತಕ್ಕಿದ್ದ ಕೊರಗ್ಗು ಅನಿವಾರ್ಯವಾಗಿ ಆ ಮನೆಯ ಪ್ರಮುಖ ಸದಸ್ಯನ ಸ್ಥಾನ ಪಡೆದಿದ್ದರೂ ಅವನಿಗೆ ಎಲ್ಲರ ಜೊತೆ ಕುಳಿತು ಉಣ್ಣುವ, ರಾತ್ರಿ ಮನೆಯೊಳಗೆ ಮಲಗುವ ಅದೃಷ್ಟ ಇರಲಿಲ್ಲ. ನಾನು ಮತ್ತು ಕೊರಗ್ಗು ರಾತ್ರಿ ಗ್ಯಾಸ್ ಲೈಟ್ ಮತ್ತು ಉದ್ದನೆಯ ಕತ್ತಿ ಹಿಡಿದು ನೇತ್ರಾವತಿಯಲ್ಲಿ ಮೀನಿನ ಬೇಟೆಗೆ ಹೋಗುತ್ತಿದ್ದೆವು. ಅವನು ತಂದ ಮೀನನ್ನು ಮನೆ ಮಂದಿಯೆಲ್ಲ ಚಪ್ಪರಿಸಿ ತಿನ್ನುತ್ತಿದ್ದರೆ, ಕೊರಗ್ಗು ಮನೆಯ ಹೊರಗಡೆ ಮೋಟು ಗೋಡೆಯ ಮೇಲೆ ಕುಳಿತು ಊಟ ಮಾಡುತ್ತಿದ್ದ ದೃಷ್ಯ ನನಗೆ ನೆನಪಿದೆ. (ಕೊರಗ್ಗು ಈಗ ಕೊರಗಪ್ಪ. ನನ್ನ ದಾಯಾದಿಯ ಮನೆ ಕೆಲಸ ಬಿಟ್ಟ ಮೇಲೆ ಅರಣ್ಯ ಇಲಾಖೆಯಲ್ಲಿ ಗಿಡ ನಡುವ ಕೆಲಸಕ್ಕೆ ಸೇರಿದ. ಮುಂದೆ ಫಾರೆಸ್ಟ್ ವಾಚರ್ ಆಗಿ, ಗಾರ್ಡ್ ಆಗಿ ಕೆಲಸ ಮಾಡಿ ನಿವೃತ್ತನಾಗಿದ್ದಾನೆ)

ನಾನು ಹೈಸ್ಕೂಲು, ಪಿ.ಯು ಓದುವ ಸಂದರ್ಭದಲ್ಲಿ ನಮ್ಮ ಮನೆಗೆ ಚೋಮ ಹೆಸರಿನ‌ ದಲಿತ ಯುವಕ ಆಗಾಗ ಕೆಲಸಕ್ಕೆ ಬರಲಾರಂಭಿಸಿದ.‌ ಚೋಮ ಆಗ ನನ್ನ ಹೀರೋ. ಚಂದಮಾಮ ಪುಸ್ತಕದಲ್ಲಿ ನೋಡಿದ್ದ ಹನುಮಂತನಂತೆ ಉಬ್ಬಿದ ಮಾಂಸಖಂಡಗಳು, ಹುರಿಗಟ್ಟಿದ ಎದೆಯ ಭಲಿಷ್ಟ ದೇಹ ಅವನದು. ಮರ ಕಸಿ, ತೆಂಗು ಮತ್ತು ಅಡಿಕೆ ಮರಕ್ಕೆ ಹತ್ತುವ ವಿಶೇಷ ಕೌಶಲ್ಯ ಹೊಂದಿದ್ದ. ನಮ್ಮ ತೋಟದ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸಲು, ಅಡಿಕೆ ಕೊಯ್ಲು ಮಾಡಲು ಚೋಮ ಬರುತ್ತಿದ್ದ. ಒಬ್ಬ ನಾಲ್ಕಾಳುಗಳ ಕೆಲಸ ಮಾಡುತ್ತಿದ್ದ. ಅವನ ಪತ್ನಿ ನೀಲು. ಮುದ್ದು ಮುದ್ದಾಗಿ ಮಾತನಾಡುವ ಮುಗ್ಧ ಹೆಣ್ಣು. ಮದುವೆಯಾಗಿ ನಾಲ್ಕೈದು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ನಾನೇ ಅವರಿಬ್ಬರನ್ನೂ ಮಂಗಳೂರಿನ ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಕರೆದುಕೊಂಡು ಹೋಗಿದ್ದೆ. ಮಕ್ಕಳಾಗದೆ ಇರಲು ನೀಲು ಕಾರಣ ಅಲ್ಲ ಎಂದು ಗೊತ್ತಾಗಿತ್ತು. ಆದರೆ ಅದನ್ನು ಒಪ್ಪಿಕೊಳ್ಳದ ಚೋಮ ಕೆಲವು ವರ್ಷಗಳ ನಂತರ ಇನ್ನೊಂದು ಮದುವೆಯಾಗಿದ್ದ. ಆದರೆ ಮಕ್ಕಳಾಗಲು ಸಾಧ್ಯವಿರಲಿಲ್ಲ‌.‌

ಚೋಮ ನಮ್ಮ ಊರಿನಲ್ಲಿ ನಾನು ಭೂರಹಿತರಿಗೆ ಭೂಮಿ ಕೊಡಿಸಲು ನಡೆಸಿದ ದೊಡ್ಡ ಹೋರಾಟವೊಂದರ ನಾಯಕ ಕೂಡ.

ಚೋಮ ನಮ್ಮ ಮನೆಗೆ ಕೆಲಸಕ್ಕೆ ಬರಲು ಆರಂಭಿಸಿದ ಸಮಯದಲ್ಲೇ ನಮ್ಮ ಮನೆಗೆ ಎಡ ಪಂಥೀಯ ಸಿದ್ಧಾಂತ ಪ್ರವೇಶಗೊಂಡಿತ್ತು. ಹಾಸನದಲ್ಲಿ ಪ್ಲಾಂಟೇಶನ್ ಮತ್ತು ಕಾಫಿ ಕ್ಯೂರಿಂಗ್ ಕಾರ್ಮಿಕರ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ತರುತ್ತಿದ್ದ ಕಮ್ಯುನಿಸ್ಟ್ ಸಾಹಿತ್ಯವನ್ನು ಒಂದಕ್ಷರ ಬಿಡದೆ ಅಪ್ಪ ಓದುತ್ತಿದ್ದರು. ಅದು ಅವರ ಮೇಲೆ ಮಾಡಿದ ಪ್ರಭಾವವೇ ಇರಬೇಕು. ಒಂದು ದಿನ ಮನೆಗೆ ಕೆಲಸಕ್ಕೆ ಬಂದ ಚೋಮನಿಗೆ ಮಧ್ಯಾಹ್ನದ ಊಟವನ್ನು ನಾವೆಲ್ಲ ಊಟ ಮಾಡುವ ತಟ್ಟೆಯಲ್ಲೇ ಬಡಿಸಲು ಅಮ್ಮನಿಗೆ ಹೇಳಿದರು. ಅಮ್ಮನಿಂದ ವಿರೋಧ ಇರಲೇ ಇಲ್ಲ. ಆದರೆ ಚೋಮನನ್ನು ಒಪ್ಪಿಸಬೇಕಾದರೆ ಬಹಳ ಕಷ್ಟವಾಯಿತು. ಅಂದು ನಮ್ಮ ಮನೆಯಲ್ಲಿ ಆರಂಭಗೊಂಡ ಸಹಭೋಜನ‌ ಇಂದಿನ ತನಕವೂ ಯಾವುದೇ ತಡೆಯಿಲ್ಲದೆ ಮುಂದುವರಿದಿದೆ‌.‌ ಪೋಡಿಯ, ಓಡಿ, ಐತ, ಐತೆ, ಬಲ್ಲೆದಿ, ಕೊರಪ್ಪೊಲು.., ಹೀಗೆ ಅದೆಷ್ಟೋ ಜನರು ಉಳಿದೆಲ್ಲ ಮೇಲ್ಜಾತಿಯವರಿಗೆ ಸರಿ ಸಮಾನರಾಗಿ ನಮ್ಮ ಮನೆಯಲ್ಲಿ ಓಡಾಡಿದ್ದಾರೆ. ನಾವು ಊಟ ಮಾಡುವ ತಟ್ಟೆಯಲ್ಲಿ ನಮ್ಮ ಜೊತೆಗೆ ಕುಳಿತು ಊಟ ಮಾಡಿದ್ದಾರೆ. ಟೀ ಕುಡಿದಿದ್ದಾರೆ. ಅವರು ಊಟ ಮಾಡಿದ ತಟ್ಟೆ, ಲೋಟವನ್ನು ಕೂಡ ನಾವೇ ತೋಳೆದಿದ್ದೇವೆ, ಈಗಲೂ ತೊಳೆಯುತ್ತೇವೆ. ನಾನು ಅವರ ಮನೆಗೆ ಹೋದಾಗಲೂ ಅವರಲ್ಲಿ ಕೇಳಿ ಕಣ್ಣ ಚಾಯ ಮಾಡಿಸಿ ಕುಡಿದೇ ಬರುತ್ತೇನೆ. ಚೋಮನ ಮನೆಯ ಮೇಲ್ಚಾವಣಿಯ ದುರಸ್ತಿ ಕೆಲಸಕ್ಕೆ ಹೋದಾಗ (ನಾನು ಕೆಲವು ವರ್ಷ ಬಡಗಿ ಕೆಲಸ ಮಾಡುತ್ತಿದ್ದೆ) ನೀಲುವಿನ ಕೈಯ ಅಡುಗೆಯನ್ನೇ ಉಂಡಿದ್ದೇನೆ. ಅವಳೋ ಸಂಕೋಚದ ಮೂಟೆ. ನನ್ನ‌ ಒತ್ತಾಯಕ್ಕೆ ನನಗೂ ಅವರ ಮನೆಯೊಳಗೆ ಊಟ ನೀಡಿದಾಗ ಅವಳ ಮುಖದಲ್ಲಿ ಕಂಡ ಸಂಭ್ರಮ ಮರೆಯಲು ಸಾಧ್ಯವೇ ಇಲ್ಲ. ನನ್ನ ಮತ್ತು ನಮ್ಮ‌ಮನೆಯವರ ಈ ವರ್ತನೆಗಳನ್ನೆಲ್ಲ ನೋಡಿ ತಿರಸ್ಕಾರ ವ್ಯಕ್ತ ಪಡಿಸಿದ ಜನರೂ ಆಗಲೂ ಇದ್ದರು, ಈಗಲೂ ಇದ್ದಾರೆ. ಅವರಿಗೆ ನಾವು ತಲೆ ಬಾಗಲಿಲ್ಲ, ಬಾಗುವ ಅಗತ್ಯವೂ ಇಲ್ಲ. ಮಾನವರೆಲ್ಲ ಒಂದೇ ಎನ್ನುವ ಜೀವಪರ ಸಿದ್ಧಾಂತವನ್ನು ಅಂದಿನಿಂದ ಇಂದಿನವರೆಗೂ, ಇಂದಿನಿಂದ ಮುಂದಿನ ಪೀಳಿಗೆಗೂ ಮುಂದುವರೆಸುತ್ತೇವೆ.

ಇದು ನಮ್ಮ ಹೆಚ್ಚುಗಾರಿಕೆ ಅಲ್ಲ. ಮನುಷ್ಯರಾದವರು ಬದುಕಬೇಕಾದ ಪರಿ ಎಂದಷ್ಟೇ ಹೇಳಬಲ್ಲೆ.

LEAVE A REPLY

Please enter your comment!
Please enter your name here