ಲೇಖಕರು: ಯಾಸೀನ್ ಕೋಡಿಬೆಂಗ್ರೆ

2008 ರಲ್ಲಿ ಕರಾವಳಿ ಕರ್ನಾಟದ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆಯೆಂದು ಉಡುಪಿಯ ಪಡುಬಿದ್ರಿಯ ಎಲ್ಲೂರಿಗೆ ಕಾಲಿಟ್ಟ ವಿಷಸರ್ಪ ‘ಪಡುಬಿದ್ರಿ ವಿದ್ಯುತ್ ಸ್ಥಾವರ’. ಆರಂಭದಿಂದಲೇ ಇದರ ವಿರುದ್ಧ ಪಡುಬಿದ್ರಿಯ ಸ್ಥಳೀಯರು‌ ಸೇರಿದಂತೆ, ಉಡುಪಿಯ ಪ್ರಜ್ಞಾವಂತ ನಾಗರಿಕರು, ಸಂಘಟನೆಗಳು, ಪರಿಸರವಾದಿಗಳು, ರೈತರು ಈ ದೈತ್ಯ ಯೋಜನೆಯ ದುಷ್ಪರಿಣಾಮ ಮನಗೊಂಡು ಇದರ ವಿರುದ್ಧ ಸಮರ ಸಾರಿದರು. ಅನಿರ್ದಿಷ್ಟವಾಧಿ ಉಪವಾಸ ಸತ್ಯಾಗ್ರಹ ಮಾಡಿದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳ ಲಾಲಸೆಯಿಂದ ಪ್ರತಿಭಟನೆಗಳ ದಿಕ್ಕು ತಪ್ಪಿಸಿ ಹೋರಾಟವನ್ನು ವಿಭಜಿಸಿ ಒಂದು ವರ್ಗ ಲ್ಯಾಂಕೊ ಇನ್ಫ್ರಾಟೆಂಕ್ ಸಂಸ್ಥೆಗೆ ತನ್ನನ್ನು ಮಾರಿಕೊಂಡು ಸ್ಥಾವರದ ಪರವಾಗಿ ನಿಂತು ಮಾತಡತೊಡಗಿದರು. ಇನ್ನೊಂದು ಕಡೆ ನಮ್ಮ ಪರಿಸರವನ್ನು ರಕ್ಷಿಸಬೇಕಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳು ಸಂಸ್ಥೆಯ ತಾಳಕ್ಕೆ ತಕ್ಕಂತೆ ಕುಣಿಯ ತೊಡಗಿದವು. ಇದರ ಫಲವಾಗಿ ಯಾವುದೇ ಭಯವಿಲ್ಲದೆ ಸ್ಥಳೀಯ ಪರಿಸರವನ್ನು ಸರ್ವನಾಶ ಮಾಡಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರ ಕಾರ್ಯಾರಂಭ ಆರಂಭಿಸಿತು.

ಇಂಡೋನೇಶಿಯಾದಿಂದ ಕಲ್ಲಿದ್ದಲು ತರಿಸಿ ದೈತ್ಯವಾದ ಎರಡು ಘಟಕಗಳಿಂದ 1200 ಮೆ.ವ್ಯಾಟ್ ವಿದ್ಯುತ್ ತಯಾರಿಸಿ ಖಾಸಗಿ ಸಂಸ್ಥೆಯೊಂದು ಕೋಟಿಗಟ್ಟಲೆ‌ ವ್ಯವಹಾರ ಆರಂಭಿಸಿತು. ಯಾವ ಜನಪ್ರತಿನಿಧಿಗಳು ಇದರ ವಿರುದ್ಧ ನಿಂತು ತಮಗೆ ಮತ ಹಾಕಿದ ಜನರ ನೋವಿಗೆ ಸ್ಪಂದಿಸಬೇಕಿತ್ತೊ ಆ ಜನರ ವಿರುದ್ಧ ನಿಂತು ಕಂಪೆನಿಯ ತಾಳಕ್ಕೆ ಕುಳಿದರು. ರೈತ ಸಂಘಗಳು, ಪ್ರಮಾಣಿಕ ಯುವ ಸಂಘಟನೆಗಳು ತಮ್ಮ ಧ್ವನಿ ಸಣ್ಣದಾದರೂ ಎ.ಸಿ ರೂಮಿನಲ್ಲಿ ಕುಳಿತು ಕರಾವಳಿಯ ಸುಂದರ ಪರಿಸರ ಹಾಳು ಮಾಡಲು ಬಂದ ಯುಪಿಸಿಎಲ್ ವಿರುದ್ಧ ಧ್ವನಿಯೆತ್ತುತ್ತಾ ಬಂದರು. ಅದು ಇಂದಿಗೂ ಮುಂದುವರಿದಿದೆ. ಆದರೆ ಆ ಧ್ವನಿಗೆ ಇಡೀ ಉಡುಪಿ ಜನತೆಯ ಸಾಥ್ ಸಿಗಬೇಕಾಗಿರುವುದು ಕೂಡ ವಾಸ್ತವ!

ದಟ್ಟಣೆಯ ಜನ ಸಾಂದ್ರತೆಯ ಇರುವ ಪ್ರದೇಶದಲ್ಲಿ ಎಲ್ಲೊ ನಿರ್ಜನ ಪ್ರದೇಶದಲ್ಲಿ ಸ್ಥಾಪನೆ ಮಾಡಬೇಕಾದ ಸ್ಥಾವರವೊಂದನ್ನು ಸ್ಥಾಪಿಸಿ ಸರಕಾರಗಳು ಖಾಸಗಿ ಸಂಸ್ಥೆಯೊಂದಿಗೆ ಸೇರಿ ಸಂವಿಧಾನ ಬದ್ಧವಾದ ಬದುಕುವ ಹಕ್ಕನ್ನು ಕಸಿದುಕೊಂಡಿತು. ಕಳೆದು ಹನ್ನೆರಡು ವರ್ಷದಲ್ಲಿ ಈ ಪರಿಸರದಲ್ಲಿ ವಾಸಿಸುವ ಜನರ ಜೀವನ ಅಲ್ಲೋಲ ಕಲ್ಲೋಲವಾಗಿದೆ. ಕುಡಿಯುವ ನೀರು ಕಲುಷಿತಗೊಂಡಿದೆ. ವಿದ್ಯುತ್ ಸ್ಥಾವರದ ಹಾರು ಬೂದಿಯಿಂದಾಗಿ ಕೃಷಿ ಸರ್ವನಾಶವಾಗಿದೆ. ದನ ಕರುಗಳು ಜೀವ ಕಳೆದುಕೊಂಡಿದೆ. ಇದೀಗ ಕಳೆದ ವರ್ಷ (2018) ಹಾರು ಬೂದಿಯ ಸಮಸ್ಯೆಯಿಂದಾಗಿ ಬೂದಿ ಮಳೆ ಕೂಡ ಸಂಭವಿಸಿ ಮುಂಬರುವ ಮಾರಕ ದಿನಗಳ ಬಗ್ಗೆ ಮುನ್ಸೂಚನೆ ಕೂಡ ನೀಡಿದೆ. ಈಗಾಗಲೇ ರಾಷ್ಟ್ರೀಯ ಹಸಿರು ಪೀಠ ಪರಿಸರ ಮಾಲಿನ್ಯ ನಡೆಯುತ್ತಿರುವ ಆಧಾರದಲ್ಲಿ ಐದು ಕೋಟಿ ಠೇವಣಿ ದಂಡದ ರೂಪದಲ್ಲಿ ಇಡಲು ಹೇಳಿದ್ದು ಇತಿಹಾಸ. ಆದರೆ ಅಷ್ಟೊಂದು ಕೋಟಿ ವ್ಯವಹಾರ ಮಾಡುವ ಬಂಡವಾಳ ಶಕ್ತಿಗಳಿಗೆ ಐದು ಕೋಟಿಯ ಠೇವಣಿಯನ್ನು ವಿಶ್ಲೇಷಣೆಗೆ ಬಂದ ‘ಪರಿಣಿತ ತಂಡ’ ಕ್ಕೆ 4.89 ಕೋಟಿಯೊಳಗೆ ದಂಡ ಮುಗಿಸುವಂತೆ ಮಾಡುವುದು ದೊಡ್ಡ ವಿಷಯವೇನು ಅಲ್ಲ!

ಲ್ಯಾಂಕೋ ಇನ್ಫ್ರಾಟೆಂಕ್ ಸಂಸ್ಥೆಯು ಈ ಕಂಪೆನಿಯನ್ನು 6000 ಕೋಟಿಗೆ ಅದಾನಿ ಸಂಸ್ಥೆಗೆ ಮಾರಟ ಮಾಡಿದೆ. ಈಗಾಗಲೇ ಈ ಸ್ಥಾವರವನ್ನು ಇನ್ನಷ್ಟು ವಿಸ್ತರಿಸಲು ಮಾಸ್ಟರ್ ಪ್ಲ್ಯಾನ್ ರೂಪುಗೊಳ್ಳುತ್ತಿದೆ. ದುರಾದೃಷ್ಟವಶಾತ್ ಉಡುಪಿಯ ಜನತೆ ಮಾತ್ರ ನಿದ್ರಾವಸ್ಥೆಯಲ್ಲಿದ್ದಾರೆ. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ, ಉಡುಪಿಯ ಪರಿಸರದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಹಾಗೆ ಮಲಗಿ ಬಿಟ್ಟಿದ್ದಾರೆ.ದೈತ್ಯ ಸ್ಥಾವರಗಳು ವಿದ್ಯುತ್ ಪೂರೈಸುವ ಹೆಸರಿನಲ್ಲಿ ಉಡುಪಿಯ ಜನತೆಯ ಜೀವನವನ್ನು ಕಸಿದುಕೊಳ್ಳುವುದರೊಂದಿಗೆ ಅದಾನಿಯಂತಹ ಬಂಡವಾಳಶಾಹಿಗಳ ಜೇಬು ತುಂಬುತಿದೆ. ಅದಕ್ಕೆ ತಕ್ಕಂತೆ ಯುಪಿಸಿಎಲ್ ಪರ ನಿಲ್ಲುವ ಸ್ವಯಂ ಘೋಷಿತ ಪರಿಸರವಾದಿಯೆಂಬ ಸಾಕು ನಾಯಿಗಳನ್ನು ಕೂಡ ಬಲಿಷ್ಠವಾಗಿ ಸಾಕಿದೆ. ಇಂತಹ ಬಲಿಷ್ಠ ಕೋಟೆಯನ್ನು ಭೇದಿಸಿ ತಮಿಳುನಾಡಿನಲ್ಲಿ ಯಾವ ರೀತಿ ಜನ ಪ್ರತಿಭಟಿಸಿ ತುತುಕುಡಿಯಲ್ಲಿ ಸ್ಟೆರ್ಲೈಟ್ ಕಾಪರ್ ಸಂಸ್ಥೆಯನ್ನು ಮುಚ್ಚಿಸಲಾಯಿತೋ ಅದೇ ರೀತಿಯ ಬೃಹತ್ ಜನಾಂದೋಲನವಾಗಬೇಕಾಗಿದೆ. ಆಗ ಮಾತ್ರ ಕರಾವಳಿ ಉಳಿಯಲು ಸಾಧ್ಯ. ನಮ್ಮ ಮಕ್ಕಳಿಗೆ ಸುಂದರವಾದ ಪರಿಸರ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತದೆ.

ಅಷ್ಟೇ ಮಾತ್ರವಲ್ಲ ವಿದ್ಯುತ್ ಸ್ಥಾವರ ಸಂಪೂರ್ಣವಾಗಿ ಸಮುದ್ರದ ನೀರನ್ನು ಸ್ಥಾವರ ತಂಪಾಗಿಸಲು ಮತ್ತು ಸ್ಥಾವರದ ದಿನ ನಿತ್ಯ ಬಳಕೆಗೆ ಉಪಯೋಗಿಸುತ್ತಿದೆ. ಬಳಸಿದ ಬಿಸಿ ಮತ್ತು ಕಲುಷಿತ ನೀರು ಸಮುದ್ರಕ್ಕೆ ಬಿಡುತ್ತಿದ್ದು ಇದರಿಂದಾಗಿ ಟನ್ ಗಟ್ಟಲೆ ಮೀನುಗಳ ಮಾರಣಹೋಮ ನಡೆಯುತ್ತಿದೆ. ಇದೆಲ್ಲವೂ ಕಣ್ಣ ಮುಂದೆ ನಡೆಯುತ್ತಿದ್ದರೂ ಜಿಲ್ಲಾಡಳಿತ, ಸರಕಾರ ಸಂಪೂರ್ಣ ಮೌನ ವಹಿಸಿದೆ. ಸ್ವತಃ ಪರಿಸರ ಮಾಲಿ‌ನ್ಯ ನಿಯಂತ್ರಣ ಸಂಸ್ಥೆಗಳ ಹೇಳಿಕೆಗಳು ಕೂಡ ಸ್ಥಾವರದ ಕಾರ್ಯ ವೈಖರಿಯನ್ನು ಸಮರ್ಥಿಸುವಂತಹದ್ದೇ!

ಇನ್ನು ಮಾಧ್ಯಮಗಳಂತೂ ಪವರ್ ಪ್ಲ್ಯಾಂಟ್ ಗೆ ಪರಿಸರ ಕಾಳಜಿಯ ಅವಾರ್ಡ್ ಸಿಕ್ಕಿದೆಯೆಂದು ಬಿಂಬಿಸುತ್ತದೆ. ಜನರ ಕಣ್ಣಿಗೆ ಮಣ್ಣೆರೆಚಲು ಕೆಲವೊಂದು ಸಾಮಾಜಿಕ ಕಳಕಳಿಯ ನಾಟಕವಾಡಿ ಒಂದು ದೊಡ್ಡ ‘ಪರಿಸರ ಮಾಲಿನ್ಯದ’ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ಕಳೆದ ವರ್ಷ ಬಿದ್ದ ಬೂದಿ ಮಳೆ ಮತ್ತೆ ಮತ್ತೆ ಉಡುಪಿಯಲ್ಲಿ ಕಾಣ ಸಿಗಲಿದೆ. ಪರಿಸರ ಸರ್ವನಾಶವಾಗಲಿದೆ. ಉಡುಪಿಯ ಕರಾವಳಿ ಭಾಗದಲ್ಲಿ ಮೀನುಗಳ ಮಾರಣಹೋಮವಾಗಲಿದೆ. ಉಸಿರಾಡಲು ದುಸ್ತರವಾಗಬಹುದು.ಕೃಷಿ ಸರ್ವನಾಶವಾಗಿ ಗಿಡ ಮರಗಳು ಕಣ್ಮರೆಯಾಗುವಂತಹ ಅಪಾಯವಿದೆ. ಇದೆಲ್ಲದರ ಸಂಭವ ಖಂಡಿತ ಇದೆ. 2012 ರಲ್ಲಿ ಪೂರ್ಣವಧಿಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿರುವ ಈ ಸಂಸ್ಥೆ ಈಗಾಗಲೇ ಅದೆಷ್ಟೋ ಪರಿಸರ ನಾಶ ಮಾಡಿದೆ. ಇನ್ನೂ ಪರಿಸರ ನಾಶ ಮಾಡಲು ನಾವು ಬಿಡುತ್ತೇವೆ ಎಂದಾದರೆ ಖಂಡಿತ ನಮ್ಮ ಮಕ್ಕಳ ಭವಿಷ್ಯವನ್ನು ನಮ್ಮ‌ ಕೈಯಾರೆ ನಾಶ ಪಡಿಸುತ್ತಿದ್ದೇವೆ ಎಂದೇ ಅರ್ಥ!

LEAVE A REPLY

Please enter your comment!
Please enter your name here