ಲೇಖಕರು: ಶಮ್ಮಾಸ್ ಕನಕಮಜಲು.

ಈದುಲ್ ಫಿತರ್ ಮತ್ತು ಈದುಲ್ ಅಝಾ ಮುಸ್ಲಿಮರ ಪಾಲಿಗೆ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಕೂಡಿದ ದಿನವಾಗಿದೆ. ಮನಮನಗಳು ಪ್ರೀತಿ ಬಾಂಧವ್ಯವನ್ನು ಹೆಚ್ಚಿಸುವ, ಮನೆಮನೆಗಳಿಗೆ ಭೇಟಿ ನೀಡಿ ಉಪಚಾರ ನಡೆಸುವ ಸೊಬಗಿನ ದಿನಗಳಾಗಿವೆ. ಬಣ್ಣ ಬಣ್ಣದ ನವ ಉಡುಗೆ-ತೊಡುಗೆಗಳೊಂದಿಗೆ ಪುಟ್ಟ ಕಂದಮ್ಮಗಳ ಮುಖದಲ್ಲಿ ವಿಶೇಷ ನಗು ಅರಳುವ ರಂಗು ರಂಗಿನ ದಿನವದು. ಅಡುಗೆ ಕೋಣೆಗಳಲ್ಲಿ ವಿಧ ವಿಧದ ಸ್ವಾದಿಷ್ಟ ಬೋಜನೆಗಳು ತಯಾರಾಗುವ ರುಚಿಕರ ದಿನ.

ರುಚಿಕರ ಆಹಾರ ತಯಾರಾಗುವ ದಿನದಂದು ಭೋಜನಗಳ ಕುರಿತು ಹೇಳುವುದಾದರೆ ಸಾಮಾನ್ಯ ಹಬ್ಬ ಹರಿದಿನಗಳಲ್ಲಿ ಇರುವಂತೆ ಮಾಂಸ, ಬಿರಿಯಾನಿ, ತುಪ್ಪದೂಟ, ಮುಂತಾದವುಗಳಿಂದ ಕೂಡಿರುತ್ತದೆ. ಹಲವು ವೈವಿಧ್ಯತೆಯಿಂದ ಕೂಡಿರುವ ಭಾರತ ದೇಶದಲ್ಲಿ‌ ಊರ ನಡುವೆ ಭಾಷೆ ಹಾಗೂ ಸಂಸ್ಕೃತಿಯಲ್ಲಿ ವ್ಯತ್ಯಾಸ ಇರುವಂತೆ ಆಹಾರಗಳಲ್ಲೂ ಇದೆ. ಅದರಂತೆ ಈ ಹಬ್ಬದ ಆಹಾರಗಳಲ್ಲೂ ವಿಭಿನ್ನತೆಯು ಒಳಗೊಂಡಿದೆ.

ಒಮ್ಮೆ ವಯನಾಡಿನಲ್ಲಿ ಈದ್ ಆಚರಿಸಿದಾಗ ಕುತೂಹಲಕರವಾದ ಆಹಾರವು ಕಾಣಸಿಕ್ಕಿತು. ಅದೇನೆಂದರೆ ‘ಉನ್ನಿ ಅಪ್ಪ ಹಾಗೂ ಬೀಫ್’, ಆದರೆ ಇದರಂತೆ ‘ಪಯಪುರಿ ಬೀಫ್’ ಜೋಡಿ; ಮುಂತಾದವುಗಳು ಪಸಂದ್ ಎನ್ನುವವರಿದ್ದಾರೆಂದಾಗ ಇದು ಸಾಮಾನ್ಯ ಅಂದುಕೊಂಡೆ. ಮಾತ್ರವಲ್ಲ ಈ ತಿನಿಸುಗಳೇನೂ ಈದ್ ಗೆ ಪ್ರತ್ಯೇಕವಾದದಲ್ಲ. ಈದ್ ದಿನ ಭಕ್ಷ್ಯ ಭೋಜನೆಗಳಲ್ಲಿ ಅಥವಾ ತಿನಿಸುಗಳಲ್ಲಿ ನಾನು ವಿಶೇಷವಾಗಿ ಗುರುತಿಸಿಕೊಂಡದ್ದು ಕೇರಳದ ಕಾಸರಗೋಡು ಜಿಲ್ಲೆ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಂತಹ ಕೇರಳಕ್ಕೆ ಸಮೀಪವಾದ ಪ್ರದೇಶಗಳಲ್ಲಿ ಕಂಡುಬರುವಂತಹ ಪೆರುಣ್ಣಾಲ್ ಕರಿತಿಂಡಿ, ಇಲ್ಲಿ ಈದ್ ಹಬ್ಬದಂದು ಬಿರಿಯಾನಿ, ತುಪ್ಪದೂಟ, ಮಾಂಸ ಪದಾರ್ಥ, ಪಾಯಸ ಹಾಗೂ ಹಣ್ಣಿನ ರಸ ಇತ್ಯಾದಿಗಳಲ್ಲದೆ ಮನೆಯಲ್ಲಿಯೇ ತಯಾರು ಮಾಡಿದ ವಿವಿಧ ರೀತಿಯ ತಿಂಡಿಗಳನ್ನೂ ಕಾಣಬಹುದು.

ವಿಶೇಷವೆಂದರೆ ಇದು ಈದ್ ಸಂದರ್ಭಗಳಲ್ಲದೆ ಇತರ ದಿನಗಳಲ್ಲಿ ಕಾಣುವುದು ತೀರ ವಿರಳ. ಈದ್ ಹಬ್ಬಕ್ಕೆ ಕೆಲ ದಿನಗಳು ಬಾಕಿ ಇರುವಾಗಲೇ ಇವರು ಇದರ ತಯಾರಿಕೆಯಲ್ಲಿ ನಿರತರಾಗುತ್ತಾರೆ. ಹೆಂಗಸರಂತೂ ಹಗಲು ರಾತ್ರಿ ಆಯಾಸವಿಲ್ಲದೆ, ಆಲಸ್ಯವಿಲ್ಲದೆ, ಬಹಳ ಉತ್ಸಾಹದಿಂದ ಹಾಗೂ ಹುಮ್ಮಸ್ಸಿನಿಂದ ತಯಾರಿಯಲ್ಲಿ ತೊಡಗುತ್ತಾರೆ. ತುಪ್ಪದೂಟ, ಮಾಂಸ ಪದಾರ್ಥ, ಪಾಯಸ ಹಾಗೂ ಹಣ್ಣಿನ ರಸ ಇತ್ಯಾದಿಗಳಲ್ಲದೆ ಮನೆಯಲ್ಲಿಯೇ ತಯಾರು ಮಾಡಿದ ವಿವಿಧ ರೀತಿಯ ತಿಂಡಿಗಳನ್ನೂ ಸಹ ಕಾಣಬಹುದು. ಈದ್ ಹಬ್ಬಕ್ಕೆ ಕೆಲ ದಿನಗಳು ಬಾಕಿ ಇರುವಾಗಲೇ ಇವರು ಇದರ ತಯಾರಿಕೆಯಲ್ಲಿ ನಿರತರಾಗುತ್ತಾರೆ. ಪೊರಿಯುಂಡೆ, ಬೀಡಿ ಅಪ್ಪೊ ಅಥವಾ ಇಂಜಿ ಅಪ್ಪೊ, ಇದನ್ನು ರೋಲ್ ಅಪ್ಪೊ ಎಂದೂ ಕರೆಯುತ್ತಾರೆ. ಬಾಟ್ ಪತಲ್, ಅಚ್ಚಪ್ಪೊ (ಅಚ್ಚಪ್ಪ) , ಈತಪ್ಪಾಯೊ ಕಾಯಿಚೆ (ಕರ್ಜೂರ ಕಾಯಿಸಿದ್ದು), ಸಿರೋಟಿ (ಶಿರೋಟಿ) ಅಪ್ಪೊ ಅಥವಾ ಇಂಜಿ ಅಪ್ಪೂ, ಮುಂತಾದ ಹತ್ತು ಹಲವಾರು ರೀತಿಯ ಬಗೆಬಗೆಯ ಎಣ್ಣೆಯಿಂದ ತಯಾರಿಸಲ್ಪಟ್ಟ ಕರಿತಿಂಡಿಗಳನ್ನು ಇಲ್ಲಿಯ ಹೆಚ್ಚಿನ ಮನೆಗಳಲ್ಲಿಯೂ ಈದ್ ಹಬ್ಬದಂದು ಕಾಣಲು ಸಾಧ್ಯವಿದೆ. ಬಕ್ರೀದ್ ಹಬ್ಬಕ್ಕಿಂತ ರಂಝಾನ್ ಹಬ್ಬಕ್ಕೆ ಹೆಚ್ಚಾಗಿ ಕಾಣಸಿಗುತ್ತದೆ. ಅದರಲ್ಲೂ ರಮಜಾನಿನ ಅಂತಿಮ ಹತ್ತು ದಿನಗಳಲ್ಲಿ, ಇದು ಸ್ನೇಹ ಸಂಬಂಧಗಳನ್ನು ಬೆಳೆಸುವ ಕರ್ಮವಾಗಿದ್ದರೂ ಆರಾಧನಾ ಕರ್ಮಕ್ಕೆ ಹೆಚ್ಚು ಒತ್ತು ನೀಡಬೇಕಾದ, ಲೈಲತುಲ್ ಖದ್ರಿನಂತಹ ಅತ್ಯಂತ ಶ್ರೇಷ್ಠ ದಿನರಾತ್ರಿಗಳ್ಳನ್ನೊಳಗೊಂಡ, ರಮಜಾನಿನ ಅಂತಿಮ ಹತ್ತರ ಹೆಚ್ಚಿನ ಸಮಯವನ್ನೂ ಇದಕ್ಕಾಗಿ ವ್ಯಯಿಸುವುದು ಅಷ್ಟು ಒಳ್ಳೆಯದಲ್ಲ, ಉತ್ತಮವಲ್ಲ ಎನ್ನುವೂದು ನನ್ನ ಅನಿಸಿಕೆ.

ಈದ್ ಹಬ್ಬದಂದು ಕರೆ ಅಥವಾ ಆಮಂತ್ರಣವಿಲ್ಲದಿದ್ದರೂ ಸಂಬಂಧಿಕರ, ನೆರೆಹೊರೆಯವರ ಹಾಗೂ ಸ್ನೇಹಿತರ ಮನೆಗೆ ಭೇಟಿ ನೀಡುವುದು ಕಡ್ಡಾಯ. ಅಂದರೆ ಈದ್ ಹಬ್ಬಕ್ಕೆ ಆಮಂತ್ರಣದ, ಆಹ್ವಾನದ ಆವಶ್ಯಕತೆ ಇಲ್ಲ ಎನ್ನುವುದು. ಕಡ್ಡಾಯವಾದ ಭೇಟಿಯಲ್ಲಿ ಗಮ್ಮತ್ತು ತಿನ್ನಿಸುವ ಒತ್ತಾಯಕ್ಕೇನೂ ಕಮ್ಮಿ ಇಲ್ಲ. ಹತ್ತು ಹಲವಾರು ಮನೆಭೇಟಿಯನ್ನು ಒಳಗೊಂಡಿರುವುದರಿಂದ ಎಲ್ಲರ ಒತ್ತಾಯವನ್ನೂ ಮನ್ನಿಸಿ ಎಲ್ಲೆಡೆಯಿಂದಲೂ ಗಮ್ಮತ್ತು ಊಟ ಮಾಡುವುದು ಅಸಾಧ್ಯ. ಹೊಟ್ಟೆ ತುಂಬಿ ಸಾಧ್ಯವಿಲ್ಲವೆಂದರೂ ಬಿಡದ ಸ್ನೇಹ ಮಿಶ್ರಿತ ಒತ್ತಾಯ ಅದರಿಂದ ಮುಕ್ತಿ ಪಡೆಯಲೆಂದು ಯಾವುದೇ ಮನೆಗೆ ಭೇಟಿ ನೀಡದಿದ್ದರೂ, ಅಥವಾ ಬೇಟಿಯು ಕೆಲವು ಮನೆಗಳಿಗೆ ಸೀಮಿತ ಮಾಡಿದರೂ ತರಾಟೆಗೆ ತೆಗೆಯುವುದು ಖಂಡಿತ. ಬಹುಶಃ ಇಂತಹ ಸಂದರ್ಭಗಳಲ್ಲಿ ಈ ಒತ್ತಡದಿಂದ ಪಾರಾಗಲೆಂದೇ ಆಗಿರಬೇಕು ಈ ಕರಿ ತಿಂಡಿಯ ಅಸ್ತಿತ್ವಕ್ಕೆ ಕಾರಣ. ಗಮ್ಮತ್ತಾಗಿ ಊಟ ಮಾಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಆತಿಥೇಯರನ್ನು ತೃಪ್ತಿಪಡಿಸಲು ಈ ಕರಿ ತಿಂಡಿ ಸಹಾಯ ಮಾಡುತ್ತದೆ.

ಇಂತಹ ಪರಿಸರದಲ್ಲಿ ಹಬ್ಬದ ದಿನ ಮುಸ್ಲಿಮರ ಮನೆಗೆ ಮುಸ್ಲಿಮೇತರರೂ ಭೇಟಿ ನೀಡುತ್ತಾರೆ. ಇಲ್ಲದಿದ್ದಲ್ಲಿ ನಂತರದ ದಿನ ಹಬ್ಬದ ಕುರಿತು ಮಾತನಾಡಿಸುತ್ತಾರೆ ಮತ್ತು ಹಬ್ಬದ ಕರಿದ ತಿಂಡಿಗಳು ಸಿಗದಿದ್ದಲ್ಲಿ ಕೇಳಿಯೇ ಪಡೆಯುತ್ತಾರೆ. ಇದರಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮುಂಚೂಣಿಯಲ್ಲಿ ಇರುವರು ಎಂದು ಹೇಳಿದರೆ ತಪ್ಪಾಗಲಾರದು. ಒಟ್ಟಿನಲ್ಲಿ ಹೇಳುವುದಾದರೆ ಈ ಸಂಸ್ಕೃತಿಯಲ್ಲಿ ಕೂಡಿ ಬಾಳುವ ತತ್ವವಿದೆ, ಸಹಬಾಳ್ವೆಯ ಸುಂದರ ಬದುಕಿಗೆ. ಇದು ಸ್ನೇಹ ಮಿಶ್ರಿತ ತಿಂಡಿಗಳಾಗಿದ್ದು, ಇವುಗಳು ಪರಸ್ಪರ ನಮ್ಮಲ್ಲಿ ಸೌಹಾರ್ದತೆಯನ್ನು ಹಾಗೂ ಸಾಮರಸ್ಯತೆಯನ್ನು ಬೆಳೆಸುತ್ತಿವೆ ಅನ್ನುವುದರಲ್ಲಿ ತಪ್ಪಿಲ್ಲ. ‌

LEAVE A REPLY

Please enter your comment!
Please enter your name here