ಲೇಖಕರು: ಅಶೀರುದ್ದೀನ್ ಆಲಿಯಾ, ಮಂಜನಾಡಿ
ಕನ್ನಡದ ಕಂಪು ಪಸರಿದ ಗಡಿನಾಡುಗಳಲ್ಲಿ ಅತೀ ಹೆಚ್ಚು ಕನ್ನಡ ಭಾಷೆ ಸಂಸ್ಕøತಿ, ಆಚಾರ, ನಂಬಿಕೆ, ಸಂಪ್ರದಾಯಗಳನ್ನು ಹಚ್ಚಿಕೊಂಡು ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಾಸರಗೋಡು ಮೊದಲನೆಯದು. ಕಾಸರಗೋಡು ಕರ್ನಾಟಕದ ಭಾಗವಲ್ಲದಿದ್ದರೂ ಕನ್ನಡದ ಭಾಗ. ಯಕ್ಷಗಾನ, ಬಯಲಾಟ, ಕೋಲ, ತೆಯ್ಯ ಇತ್ಯಾದಿ ಸಂಸ್ಕøತಿಗಳ ಹಲವಾರು ಮುಖಗಳನ್ನು ಕಾಸರಗೋಡಿನಲ್ಲಿ ಕಾಣಬಹುದು. ಹಲವು ಭಾಷೆಗಳ ಸೊಗಡು ಸಪ್ತ ಭಾಷೆಗಳ ಸಂಗಮ ಭೂಮಿ ಎಂಬ ವಿಶೇಷತೆಗಳು ಜನಮನ್ನಣೆ ಪಡೆದಿದೆ. 14ನೇ ಶತಮಾನದಿಂದೀಚೆಗೆ ಮಂಗಳೂರು, ಹೊನ್ನಾವರ, ಭಟ್ಕಳ ಭಾಗದಲ್ಲಿ ವ್ಯಾಪಾರದ ಉದ್ದೇಶದಿಂದ ಬರುತ್ತಿದ್ದ ಅರಬರ ನಿರಂತರ ಭೇಟಿಯಿಂದಾಗಿ ಇಸ್ಲಾಮಿನ ಪರಿಚಯವೂ ಆಯಿತು. ಪ್ರವಾದಿಗಳ ಆರಂಭ ಘಟ್ಟದ ಸಹಚರರಲ್ಲೊಬ್ಬರಾದ ಮಾಲಿಕ್ ದೀನಾರ್‍ರವರ ಸಮಾಧಿ ಮತ್ತು ಪುಣ್ಯ ಕ್ಷೇತ್ರವೂ ಇಲ್ಲಿದೆ. ಸಣ್ಣಪುಟ್ಟ ರಾಜರು, ಪಾಳೆಗಾರರ ಹಸ್ತದಲ್ಲಿದ್ದ ಮಂಜೇಶ್ವರ, ಕುಂಬಳೆ, ಕಾಸರಗೋಡು, ಉದುಮ, ಪಡನ್ನ, ಚಂದ್ರಗಿರಿ, ಬೇಕಲ ಪ್ರದೇಶಗಳು 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತಾದರೂ 1763ರಲ್ಲಿ ಹೈದರರಾಲಿ, ಟಿಪ್ಪು ಸುಲ್ತಾನರ ಕಾಲದಲ್ಲಿ ಮಲಬಾರ್ ಕಾರ್ಯಾಚರಣೆಯಿಂದಾಗಿ ಮೈಸೂರು ಸಂಸ್ಥಾನಕ್ಕೂ ಸೇರಿತ್ತು.
ಕಸಿರು ಕೋಡು (ಗೋವಿನತಳಿ) ಎಂಬ  ಹೆಸರಿನಿಂದ ಕಾಸರಕೋಡು, ಕಾಸರಗೂಡು ಎಂಬ ಹೆಸರು ಬಂದಿದೆಯೆಂದು ಇತಿಹಾಸ ತಿಳಿಸುತ್ತದೆ. ಕನ್ನಡ ರಾಷ್ಟ್ರ ಕವಿಗಳಾದ ಎಂ. ಗೋವಿಂದ ಪೈ, ಕಯ್ಯರ ಕಿಂಞಣ್ಣ ರೈ ಅವರ ಹುಟ್ಟೂರು ನಮ್ಮ ಕಾಸರಗೋಡು. 1927ರ ಕಲ್ಲಿಕೋಟೆಯ ಸಮಾವೇಶದಲ್ಲಿ ಕಾಸರಗೋಡು ಮಲಬಾರಿನ ಭಾಗವೆಂದು, ಅದನ್ನು ಮಲಬಾರಿಗೆ ಸೇರಿಸಬೇಕೆಂಬ ಬೇಡಿಕೆಯ ಠರಾವನ್ನು ಅಂಗೀಕರಿಸಲಾಯಿತು. ಕೇಶವ ಮೆನನ್‍ರವರ ತೀವ್ರ ಪರಿಶ್ರಮದಿಂದಾಗಿ 1956 ನವೆಂಬರ್ 1ರಂದು ಕಾಸರಗೋಡನ್ನು ಅಧಿಕೃತವಾಗಿ ಕೇರಳದ ಭಾಗವೆಂದು ಘೋಷಿಸಲಾಯಿತು.
ಹಲವಾರು ವಿಶೇಷತೆಗಳನ್ನು ಒಳಗೊಂಡ ಕಾಸರಗೋಡು ಅತ್ತ ಕರ್ನಾಟಕದ ಭಾಗವೂ ಆಗದೆ, ಇತ್ತ ಕೇರಳದವರ ಗಣನೆಗೂ ಬಾರದೆ, ನಿರ್ಲಕ್ಷ್ಯಕ್ಕೊಳಗಾದ ಒಂದು ಜಿಲ್ಲೆಯಾಗಿ ಉಳಿದಿದೆ. ಆರೋಗ್ಯ ಶಿಕ್ಷಣ, ವ್ಯಾಪಾರ, ಮೊದಲಾದ ಹೆಚ್ಚಿನ ಮೂಲ ಸೌಕರ್ಯಗಳಿಗೆ ಮಂಗಳೂರನ್ನೇ ಅವಲಂಬಿತರಾಗಿದ್ದಾರೆ. ರಸ್ತೆ ನಿರ್ಮಾಣ, ನಗರಾಭಿವೃದ್ಧಿಯಾಗಲಿ ಉತ್ತಮವಾಗಿಲ್ಲ. ಕೊಚ್ಚಿ ತಿರುವನಂತಪುರ ಪ್ರದೇಶಗಳಲ್ಲಿ ಕೆಟ್ಟು ಹೋದ ಸಾರಿಗಳನ್ನೇ ಸರಕಾರ ಈ ಜಿಲ್ಲೆಗಳಲ್ಲಿ ಮರು ಬಳಕೆ ಮಾಡುತ್ತದೆ. ಜಿಲ್ಲಾಡಳಿತ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳು, ಸರಕಾರಿ ಶಿಕ್ಷಣ ಸಂಸ್ಥೆಗಳು ಇನ್ನೂ ಶೋಚನೀಯ ಸ್ಥಿತಿಯಲ್ಲಿದೆ. ನಿರಂತರ ಅಧಿಕಾರಿಗಳ ವರ್ಗಾವಣೆಯೂ ಈ ನಾಡಿನ ಜನತೆಗೆ ದೊಡ್ಡ ತೊಡಕಾಗಿರುತ್ತದೆ. ತಮ್ಮ ಸರಕಾರದಿಂದಲೇ ನಿರ್ಲಕ್ಷಕ್ಕೆ ಒಳಗಾದ ಈ ಜಿಲ್ಲೆಯ ಕನ್ನಡದ ಪರಿಸ್ಥಿತಿ, ಅತ್ಯಂತ ಖೇದಕರವಾಗಿದೆ. ಮಲೆಯಾಳಿಗಳ ಹೀಯಾಳಿಕೆ, ನಿಂದನೆಗೆ ಒಳಗಾಗಿ ಕನ್ನಡ, ಕಾಸರಗೋಡಿನಲ್ಲಿ ನಾಮಾವಶೇಷವಾಗುತ್ತಿದೆ ಎಂಬ ದುರಾವಸ್ಥೆಯ ಚಿತ್ರಣವೇ ರಿಶಬ್ ಶೆಟ್ಟಿ ನಿರ್ದೇಶನದ “ಸರಕಾರಿ ಹಿ. ಪ್ರಾ. ಶಾಲೆ. ಕಾಸರಗೋಡು ಕೊಡುಗೆ ರಾವನ್ನಾ ರೈ”. ಗಡಿನಾಡ ಕನ್ನಡಿಗರಲ್ಲಿ ಕನ್ನಡ ಪ್ರೀತಿಯನ್ನು ಎತ್ತಿ ತೋರಿಸುವ ಚಿತ್ರ.
ಕಾಸರಗೋಡಿನ ಸಂಸ್ಕøತಿ, ಆಚಾರ, ವಿಚಾರ, ನಂಬಿಕೆ ಸೌಹಾರ್ದತೆ ಮತ್ತು ಯಕ್ಷಗಾನದ ಕಥೆಯೊಂದಿಗೆ ಆರಂಭಿಸಿದ ಸಿನಿಮಾ. ಸರ್ವೇ ಸಾಮಾನ್ಯ ಎಲ್ಲರೂ ತಮ್ಮ ಬಾಲ್ಯ ಮತ್ತು ಸರಕಾರಿ ಶಾಲೆಗಳ ದಿನಗಳಲ್ಲಿ ಅನುಭವಿಸುವ ಅವಿಷ್ಮರಣೀಯ ದಿನಗಳನ್ನು ಮೆಲುಕು ಹಾಕುತ್ತ ಚಿತ್ರ ಮುಂದೆ ಸಾಗುತ್ತವೆ. ಬಾಲ್ಯದಲ್ಲಿ ಸ್ವಾಭಾಗವಿಕವಾಗಿ ಹುಟ್ಟುವ ಪ್ರೀತಿ, ತುಂಟತನ, ದಾರದ್ರ್ಯ, ಬಡತನ ಮತ್ತು ಊರಿನ ಸುಂದರ ಸೊಬಗನ್ನು ರಸವತ್ತಾಗಿ ಚಿತ್ರೀಕರಿಸಿದ್ದಾರೆ. ಕನ್ನಡ ಶಾಲೆಗಳಲ್ಲಿ ಮಲೆಯಾಳಿ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರುವ ಕೇರಳ ಅಧಿಕಾರಿ ವರ್ಗಗಳ ದುರ್ನಡತೆಯು ಬಹಳ ಖೇದವನ್ನು ಬರಿಸುವಂತೆ ನಿರೂಪಿಸಲಾಗಿದೆ. ಅಧ್ಯಾಪಕರ ವೃತ್ತಿಗಾಗಿ ಲಕ್ಷಗಳಷ್ಟು ಪಡೆಯುವ ಭ್ರಷ್ಟಾಚಾರಿಗಳ, ಸರಕಾರಿ ವೇತನಕ್ಕಿಂತ ಹೆಚ್ಚಿನ ಸಂಪತ್ತನ್ನು ಅಧಿಕಾರಿ ವರ್ಗದಲ್ಲಿರುವುದು ಇತ್ಯಾದಿ ವಿಷಯಗಳನ್ನು ಸಿನಿಮ ಚರ್ಚಿಸುತ್ತದೆ. ಕರಾವಳಿ ಭಾಗದವರ ಕ್ರಿಕೆಟ್ ಹುಚ್ಚು. ಶಬರ ಮಲೆ ಅಯ್ಯಪ್ಪ ಸ್ವಾಮಿ ಮೇಲೆ ಇರುವ ಭಕ್ತಿಯನ್ನು ತೋರಿಸಿ, ತಾಯಿಯೊಂದಿಗಿನ ಪ್ರೇಮವನ್ನು ಸಣ್ಣ ರೂಪದಲ್ಲಿ ದೊಡ್ಡ ಆಶಯದೊಂದಿಗೆ ವಿವರಿಸಿದೆ.
ಸರಕಾರಿ ಶಾಲೆಗಳನ್ನು ತರಾತುರಿಯಲ್ಲಿ ಮುಚ್ಚಿಸಿ, ಖಾಸಗಿ ಶಾಲೆಗೆ ವಲವಿಟ್ಟು ಪೋಷಿಸಿ ಬೆಳೆಸುತ್ತಿರುವ ಅಧಿಕಾರಿ ವರ್ಗಗಳಿಗೆ ಕನ್ನಡದ ಅಭಿಮಾನವನ್ನು ತೋರಿಸುವ ಚಿತ್ರ ಗಡಿನಾಡಿನಲ್ಲಿ ಕನ್ನಡಕ್ಕೆ ಆಗುವ ಅವಮಾನದ ಜೊತೆಗೆ ಕನ್ನಡ ನಾಡಿನಲ್ಲಿಯೂ ಕನ್ನಡವನ್ನು ಉಪೇಕ್ಷಿಸಲಾಗುತ್ತಿದೆ ಎಂಬ ಸತ್ಯವನ್ನು ತಿಳಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇದೊಂದು ಬರೀ ಸಿನಿಮಾ ಆಗಿರದೆ, ಕನ್ನಡ ಮತ್ತು ಕನ್ನಡ ಶಾಲೆಗಳ ಉಳಿವಿನ ಹೋರಾಟದ ಒಂದು ಭಾಗವಾಗಿದೆ. ಕನ್ನಡ ಪರ ಹೋರಾಟಕ್ಕಾಗಿ ಮೈಸೂರಿನಿಂದ ಬರುವ ಅನಂತನಾಗ್‍ರ ಅಭಿನಯ ಅಮೋಘವಾಗಿದೆ. “ಕೊನೆಯ ತನಕ ಒಬ್ಬ ವಿದ್ಯಾಥಿ ಉಳಿಯುವ ತನಕ ಶಾಲೆಯನ್ನು ಮುಚ್ಚಬಾರದು, ಅವನಿಗೆ ಶಿಕ್ಷಣ ನೀಡಬೇಕು ಎಂದು ಎಚ್ಚರಿಕೆಯ ಕರೆಘಂಟೆಯನ್ನು ಬಾರಿಸಿದ್ದಾರೆ. ಮಕ್ಕಳ ಕೊರತೆಯಿಂದ ಶಾಲೆಗಳನ್ನು ಮುಚ್ಚಬಾರದು.  ಎಂಬ ಸಂದೇಶವನ್ನು ನೀಡುತ್ತದೆ. ಅನಂತ ಪದ್ಮನಾಭ ಪಿ. ಆಗಿ ಅನಂತನಾಗ್, ಅತಿಥಿ ಪಾತ್ರದಲ್ಲಿ ರಮೇಶ್ ಭಟ್, ಉಪಾಧ್ಯಾಯರಾಗಿ ಪ್ರಮೋದ್ ಶೆಟ್ಟಿ, ಬುಜಂಗನಾಗಿ, ರಂಗಭೂಮಿ ಕಲಾವಿದ ಪ್ರಕಾಶ್ ತುಮಿನಾಳ್,ಪೋಲೀಸ್ ಪಾತ್ರದಲ್ಲಿ ರಿಶಬ್ ಶೆಟ್ಟಿ ಅಭಿನಯಿಸಿದ್ದಾರೆ. ಅಶ್ಲೀಲತೆಯಿಲ್ಲದ ಕುಟುಂಬ ಸಮೇತ ಮುಕ್ತವಾಗಿ ನೋಡಬಹುದಾದ ಚಿತ್ರ.
ಪ್ರವೀಣ, ಮಹೇಂದ್ರ, ಮಮ್ಮುಟ್ಟಿ, ಬಾಲಕೃಷ್ಟ ಪಣಿಕ್ಕರ್, ನಂಬಿಯರ್ ಉಪಾಧ್ಯಾಯರು, ಬುಜಂಗ, ರಾಮಣ್ಣ ರೈ, ಪಲ್ಲವಿ, ಅನಂತ ಪದ್ಮನಾಭ ಪಿ. ಮುಂತಾದ ಪಾತ್ರಗಳು ಉತ್ತಮವಾಗಿದೆ. “ನಾನು ಫೈಲ್ ಆದ್ರೂ ಪರವಾಗಿಲ್ಲ, ಕನ್ನಡ ಶಾಲೆಯಲ್ಲೇ ಕಲಿಯುತ್ತೇನೆ.” ಕನ್ನಡಾಭಿಮಾನ ಭರಿಸುವ ಸಂಭಾಷಣೆಗಳು ಸಿನಿಮಕ್ಕೆ ಶಕ್ತಿ ತುಂಬುತ್ತದೆ. ಸಂಗೀತ ಛಾಯಾಗ್ರಹಣ ಉತ್ತಮವಾಗಿದೆ. ಹೇ ಶಾರದೇ, ದಡ್ಡದಡ್ಡ, ಅರೆಅರೆ ಅವಳ ನಗುವ ಹಾಡುಗಳು ವಿಭಿನ್ನವಾಗಿ ಮನರಂಜಿಸುತ್ತದೆ.
ನಡುನಾಡು, ಗಡಿನಾಡು ಮತ್ತು ಹೊರನಾಡಿನ ಕನ್ನಡ ಪ್ರೇಮ ಶಕ್ತಿಯುತವಾದದ್ದು, ನಾನು ಕೇರಳಕ್ಕೆ ಉನ್ನತ ವ್ಯಾಸಂಗಕ್ಕೆ ಹೋದಾಗ ಕಾಲೇಜಿನಲ್ಲಿ ಗೆಳೆಯರು ಸೇರಿ ಕನ್ನಡ ಸಂಘವನ್ನು ಕಟ್ಟಿದ್ದು, ಕನ್ನಡ ಕೈಪಿಡಿ ಪುಸ್ತಕ ಹೊರ ತಂದಿದ್ದು, ಕನ್ನಡ ಗ್ರಂಥಾಲಯಗಳನ್ನು ನಿರ್ಮಿಸಿದ್ದು, ಕನ್ನಡ ಭಾಷೆಗಳಲ್ಲಿ ನಾಟಕಗಳನ್ನು ಮಾಡಿ, ಕನ್ನಡ ಪ್ರೀತಿಯನ್ನು ಮೂಡಿಸಿ, ಮಲೆಯಾಳಿಗಳ ಬಾಯಲ್ಲಿ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡನ್ನು ಹಾಡಿಸಿದ್ದು, ಎಲ್ಲವನ್ನೂ ಸಿನಿಮಾ ನೆನಪಿಸಿತು.
“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” -ಕುವೆಂಪು

LEAVE A REPLY

Please enter your comment!
Please enter your name here