ಚಿತ್ರ ವಿಮರ್ಶೆ
- ಇರ್ಷಾದ್ ಕೊಪ್ಪಳ
ಉತ್ತಮ ‘ ಅಡಾಪ್ಟೆಡ್ ಸ್ಕ್ರೀನ್ ಪ್ಲೆ ‘ ಗಾಗಿ ಆಸ್ಕರ್ ಪ್ರಶಸ್ತಿ ಗೆದ್ದ ಈ ಚಿತ್ರವು 2 ನೇ ಮಹಾಯುದ್ಧದ ಸಮಯದಲ್ಲಿನ ಜರ್ಮನಿಯ ಕಥೆಯನ್ನು ಹೊಂದಿದೆ ಆದರೆ ಇಂದಿಗೂ ಪ್ರಸ್ತುತವೆನಿಸುತ್ತದೆ. ನಾಝಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ 10 ವರ್ಷದ ಹುಡುಗ ‘ ಜೋ ಜೋ ‘ ಗೆ ಯಹೂದಿಗಳೆಂದರೆ ರಾಕ್ಷಸರು, ಕ್ರೂರಿಗಳು ಮತ್ತು ಆರ್ಯನ್ ಜನಾಂಗ ಎಲ್ಲರಿಗಿಂತ ಶ್ರೇಷ್ಠವೆಂದು ಕಲಿಸಲಾಗುತ್ತದೆ. ಹಿಟ್ಲರ್ ನ ನಿರಂಕುಶ ಪ್ರಭುತ್ವದಲ್ಲಿ ಹುಟ್ಟಿ ಬೆಳೆಯುವ ಆ ಮುಗ್ಧ ಮನಸ್ಸಿನ ಮಗು ಅದನ್ನೇ ಸತ್ಯವೆಂದು ಸುಲಭವಾಗಿ ನಂಬುವುದು ಆಶ್ಚರ್ಯಕರ ಅನಿಸುವುದಿಲ್ಲ.
ಬಾಲ್ಯದಲ್ಲಿ ನಮಗೆ ಕಲಿಸಲಾಗುವ ಯಾವುದೇ ವಿಷಯಗಳು ನಮ್ಮ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರುತ್ತವೆ ಮತ್ತು ನಮ್ಮ ನಂಬಿಕೆಯ ಭಾಗವಾಗಿಬಿಡುತ್ತವೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷದ ಬೀಜ ಬಿತ್ತಿದ್ದರೆ ಅದು ಮುಂದೆ ಹೆಮ್ಮರವಾಗಿ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಪೂರ್ವಗ್ರಹ ಪೀಡಿತರಾಗುವ ಮಕ್ಕಳು ‘ ಜೋಜೋ ‘ ವಿನಂತೆಯೇ ತನಗೆ ಗೊತ್ತಿಲ್ಲದೆ ಒಂದು ಸಮುದಾಯವನ್ನು ದ್ವೇಷಿಸಲಿಕ್ಕೆ ಆರಂಭಿಸುತ್ತವೆ.
ಆದರೆ ಜೋಜೋಗೆ ಆಗುವಂತೆ ಜೀವನದ ಒಂದು ಹಂತದಲ್ಲಿ ನಾವು ಅತಿಯಾಗಿ ದ್ವೇಷಿಸುವ ವ್ಯಕ್ತಿ ಮುಖಾಮುಖಿಯಾದಾಗ ನಮಗೆ ಕಲಿಸಲಾದ ವಿಷಯಗಳೆಲ್ಲಾ ಸುಳ್ಳೆಂಬ ಅರಿವಾಗುತ್ತದೆ. ಸುಳ್ಳು ಪ್ರಚಾರವು ಹೇಗೆ ಗಲಭೆ , ಹತ್ಯಾಕಾಂಡ , ಯುದ್ಧದಂತಹ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದೇ ‘ ಜೋಜೋ ರಾಬಿಟ್ ‘ ಚಿತ್ರದ ಕಥಾವಸ್ತು
ಪ್ರಭುತ್ವದ ಸುಳ್ಳುಗಳಿಂದ ಪ್ರಭಾವಿತನಾಗುವ ಮುಗ್ಧ ಮಗು ಜೋಜೋ ‘ ಯಹೂದಿ ‘ ಜನಾಂಗವನ್ನು ದ್ವೇಷಿಸಲು ಆರಂಭಿಸುತ್ತಾನೆ ಆದರೆ ಅವನ ತಾಯಿ ತನ್ನ ಮನೆಯಲ್ಲಿ ಅಡಗಿಸಿಟ್ಟಿರುವ ‘ ಎಲ್ಸಾ ‘ ಎಂಬ ಯಹೂದಿ ಯುವತಿಯೊಂದಿಗೆ ನಡೆಸುವ ಸಂಭಾಷಣೆಗಳಿಂದ ಸತ್ಯ ಗೊತ್ತಾದಾಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ.
‘ ಜೋಜೋ’ ಮತ್ತು ‘ ಎಲ್ಸಾ ‘ ಮಧ್ಯೆ ನಡೆಯುವ ಸಂಭಾಷಣೆಯೇ ಇಡೀ ಚಿತ್ರದ ಜೀವಾಳು.

ಹೀಗೆ ನಮ್ಮೆಲ್ಲರ ಮನೆ ಮತ್ತು ಮನಸ್ಸಿನ ಒಂದು ಮೂಲೆಯಲ್ಲಿ ಒಬ್ಬ ‘ ಎಲ್ಸಾ ‘ ಅಡಗಿದ್ದಾಳೆ. ಕೆಲಮೊಮ್ಮೆ ನಮ್ಮ ಅಜ್ಞಾನ ಹಾಗೂ ಕುರುಡು ನಂಬಿಕೆಯಿಂದಾಗಿ ಆ ಮೂಲೆಯನ್ನು ನಮಗೆ ನೋಡಲು ಸಾಧ್ಯವಾಗುವುದಿಲ್ಲ. ಆದರೆ ನಾವು ಸತ್ಯದೊಂದಿಗೆ ಮುಖಾಮುಖಿಯಾದಾಗ ನಮ್ಮ ತಪ್ಪಿನ ಅರಿವಾಗುತ್ತದೆ.
ಪ್ರಭುತ್ವ ಮತ್ತು ರಾಜಕೀಯ ಪಕ್ಷಗಳು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಒಬ್ಬ ಕಾಲ್ಪನಿಕ ವೈರಿಯನ್ನು ಸೃಷ್ಟಿಸಿ ಅದರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಹರಡುತ್ತವೆ. ವಾಟ್ಸಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಅದು ಇನ್ನಷ್ಟು ಸುಲಭವಾಗಿದೆ.
ಚಿತ್ರದ ಒಂದು ಸನ್ನಿವೇಷದಲ್ಲಿ ನಗರದ ಬೀದಿಯಲ್ಲಿ ಕೆಲವರನ್ನು ಗಲ್ಲಿಗೇರಿಸಲಾಗಿರುವುದನ್ನು ನೋಡಿ ಜೋಜೋ ಇವರೇನು ಮಾಡಿದರೆಂದು ತಾಯಿ ಬಳಿ ಕೇಳಿದಾಗ ‘ ಅವರಿಂದ ಏನು ಸಾಧ್ಯವಿತ್ತೋ ಅದನ್ನು ಮಾಡಿದರು ‘ ಎಂದು ಉತ್ತರಿಸುತ್ತಾಳೆ. ಆ ಮಾತಿನ ಅರ್ಥ ಮುಂದೊಂದು ದಿನ ಅದೇ ರೀತಿಯಲ್ಲಿ ತನ್ನ ತಾಯಿಯ ಹೆಣ ಸಹ ಬೀದಿಯಲ್ಲಿ ನೇತಾಡುವುದನ್ನು ನೋಡಿದಾಗ ಜೋಜೋಗೆ ತಿಳಿಯುತ್ತದೆ.
ಹೀಗೆ ಯಹೂದಿಗಳ ಬಗ್ಗೆ ಕೇವಲ ಅಸಹನೆ ಮತ್ತು ದ್ವೇಷ ಮಾತ್ರ ತುಂಬಿಕೊಂಡಿರುವ ಸಮಾಜದಲ್ಲಿ ತನ್ನ ಪ್ರಾಣದ ಹಂಗು ತೊರೆದು ಯಹೂದಿ ಯುವತಿಯ ಜೀವ ಉಳಿಸಲು ಪ್ರಯತ್ನಿಸುವ ಜೋಜೋನ ತಾಯಿ ‘ರೂಸಿ’ ಯ ಪಾತ್ರವು ದ್ವೇಷದ ಕತ್ತಲಿನಲ್ಲೂ ಪ್ರೀತಿಯ ಆಶಾಕಿರಣ ಇದ್ದೇ ಇರುತ್ತದೆ ಎಂಬ ಭರವಸೆ ಮೂಡಿಸುತ್ತದೆ.
ಧರ್ಮ ಮತ್ತು ರಾಷ್ಟ್ರ ಪ್ರೇಮದ ಹೆಸರಲ್ಲಿ ಆಡಲಾಗುವ ಈ ಅಪಾಯಕಾರಿ ಆಟವು ಹೇಗೆ ಒಂದು ದೇಶ ಮತ್ತು ಅಲ್ಲಿನ ಜನರಿಗೆ ವಿನಾಶಕಾರಿಯಾಗಿ ಪರಿಣಮಿಸುತ್ತದೆ ಎಂಬುದನ್ನು ‘ ಜೋಜೋ ರಾಬಿಟ್ ‘ ಚಿತ್ರ ತುಂಬಾ ಮಾರ್ಮಿಕವಾಗಿ ತೋರಿಸುತ್ತದೆ. ಜೋಜೋನ ತಾಯಿ ‘ರೂಸಿ’ ಹೇಳುವಂತೆ ‘ ದೇಶಪ್ರೇಮವೆಂಬುದು ಇನ್ನಿತರ ದೇಶಗಳನ್ನು ದ್ವೇಷಿಸುವುದಲ್ಲ ‘
ಚಿತ್ರದುದ್ದಕ್ಕೂ ಜೋಜೋವಿನ ಜೊತೆಯಲ್ಲಿ ಹಿಟ್ಲರ್ ರೂಪದಲ್ಲಿ ಅವನ ಕಾಲ್ಪನಿಕ ಸೂಪರ್ ಹೀರೋ ಇರುತ್ತಾನೆ. ಜೋಜೋವಿನ ತಲೆಯಲ್ಲಿ ತುಂಬಲಾಗಿರುವ ನಾಝಿ ಚಿಂತನೆಗಳನ್ನು ಸದಾ ಕಾಲ ಜೀವಂತವಾಗಿಡುವುದೇ ಅವನ ಕೆಲಸ. ಕೊನೆಯಲ್ಲಿ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡು ಸತ್ತ ಎಂಬ ವಿಷಯ ತನ್ನ ಏಕೈಕ ಗೆಳೆಯ
‘ ಯೋರ್ಕಿ ‘ ಹೇಳಿದಾಗ ಜೋಜೋಗೆ ನಂಬಲಾಗುವುದಿಲ್ಲ. ತಾನು ಅತ್ಯಂತ ಶ್ರೇಷ್ಠ ಮತ್ತು ಬಲಿಷ್ಠವೆಂದು ಆರಾಧಿಸಿದ ಆ ಹೀರೋ ಎಷ್ಟು ಕೆಟ್ಟವನು ಮತ್ತು ದುರ್ಬಲವಾಗಿದ್ದ ಎಂದು ತಿಳಿದಾಗ ಜೋಜೋ ತನ್ನ ಕಾಲ್ಪನಿಕ ಹೀರೋವನ್ನೇ ಒದ್ದು ಹೊರಗೆ ದಬ್ಬುವ ದೃಷ್ಯ ತುಂಬಾ ಅರ್ಥಪೂರ್ಣವಾಗಿದೆ.
ಹೀಗೆ ಪ್ರತಿಯೊಬ್ಬ ವ್ಯಕ್ತಿಯು ಸಹ ಸತ್ಯ ಮತ್ತು ಸುಳ್ಳಿನ , ನೈಜ ಮತ್ತು ನಕಲಿ ದೇಶಪ್ರೇಮದ ವ್ಯತ್ಯಾಸ ಅರಿತು ದ್ವೇಷದ ರೂಪದಲ್ಲಿ ನಮ್ಮೊಂದಿಗಿರುವ ಹಿಟ್ಲರ್ ನನ್ನು ಹೊರದಬ್ಬುವ ಅವಶ್ಯಕತೆಯಿದೆಯೆಂಬ ಸಂದೇಶ ಚಿತ್ರ ನೀಡುತ್ತದೆ.
ಮತಾಂಧತೆ ಮತ್ತು ಒಂದು ಸಮುದಾಯದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಹೇಗೆ ಮುಗ್ಧ ಮನಸ್ಸಿನ ಒಂದು ತಲೆಮಾರನ್ನೇ ವಿನಾಶದ ಹಾದಿಗೆ ತಳ್ಳುತ್ತದೆಯೆಂಬ ಗಂಭೀರ ವಿಷಯವನ್ನು ‘ ಜೋಜೋ ರಾಬಿಟ್ ‘ ಚಿತ್ರವು ತಿಳಿ ಹಾಸ್ಯ ಮತ್ತು ವಿಡಂಬನೆಗಳ ಮೂಲಕ ನಮ್ಮ ಮುಂದಿಡುತ್ತದೆ.
ಪ್ರತಿಯೊಬ್ಬರು ತಮ್ಮ ಮಕ್ಕಳೊಂದಿಗೆ ನೋಡಿ ಚರ್ಚಿಸ ಬೇಕಾಗಿರುವಂತಹ ಚಿತ್ರ