• ಸುಮಾ ಕಿರಣ್

ಪುಸ್ತಕ ಪರಿಚಯ

ಮಿತ್ರರೇ, ಪ್ರೀತಿ ಎನ್ನುವ ವಿಷಯ ಸದಾ ಹೊಸತನದಿಂದ ತುಂಬಿರುತ್ತದೆ. ಅನಾದಿಕಾಲದಿಂದ ಇಂದಿನವರೆವಿಗೆ ಪ್ರೀತಿಯ ವಿಷಯದಲ್ಲಿ ನೂರಾರು… ಉಹೂ! ಸಾವಿರಾರು ಕತೆ, ಕಾದಂಬರಿ, ಕವನಗಳು ಬಂದಿದೆ. ಆದರೆ… ಮೊಗೆದಷ್ಟೂ ಮುಗಿಯದ ಭಾವವೇ ಪ್ರೀತಿ. ಜೊತೆಗೆ ಈ ಒಂದೇ ಒಂದು ವಿಷಯ ಎಲ್ಲಾ ಕಾಲಮಾನದವರೂ ಮೆಚ್ಚುವುದು ಕೂಡ! ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಹಾಗೆಯೇ ಪ್ರೀತಿಗೆ ಜಾತಿ, ಮತ, ಕುಲ, ಗೋತ್ರ, ದೇಶ-ಭಾಷೆ ಎಂಬುದರ ಪರಿಧಿಯೂ ಇಲ್ಲ. ಎಲ್ಲ ಎಲ್ಲೆಗಳನ್ನೂ ಮೀರಿ ನಿಂತಿದೆ, ಪ್ರೀತಿ.ಹೂಂ, ಅಂತೂ ಇವಳಿಗೆ ಪ್ರೀತಿಯ ಹುಚ್ಚು ತಲೆಗೇರಿತು… ಎಂದುಕೊಂಡಿರಾ! ಅಂತಹ ಹುಚ್ಚೇನು ತಲೆಗೆರಿಲ್ಲ. ಆದರೆ, ಪ್ರೀತಿಯ ಕವಿತೆಗಳನ್ನು ಓದಿ ಒಂದಷ್ಟು ಪ್ರೀತಿಯ ಮೋಡಿಗೆ ಬಿದ್ದಿದ್ದೇನೆ ಅಷ್ಟೇ. ಆದರೂ, ಒಂದೇ ವಿಷಯದ ಮೇಲೆ 150ಕ್ಕೂ ಅಧಿಕ ಕವನಗಳನ್ನು ಬರೆಯುವುದೂ, ಅದೂ ಓದುಗನಿಗೆ ಎಲ್ಲಿಯೂ ಬೇಸರ ಎನಿಸದೆ ಬರೆಯುವುದಿದೆಯಲ್ಲ… ಅದು ನಿಜಕ್ಕೂ ಸಾಹಸದ ಕೆಲಸವೇ ಸರಿ!ಇಷ್ಟೆಲ್ಲಾ ಹೇಳಿದ ಮೇಲೆ ಯಾವ ಕವನ ಸಂಕಲನ? ಕವಿ ಯಾರು? ಎಂದು ತಿಳಿಸದಿದ್ದರೆ ಹೇಗೆ? ಸಂತೆಬೆನ್ನೂರಿನ ಕವಿಗಳಾದ ಫೈಜ್ನಟ್ರಾಜ್ ಅವರ “ಕೇಳದೆ ನಿಮಗೀಗ” ಕವನ ಸಂಕಲನದ ಬಗ್ಗೆ ನಾನು ಹೇಳುತ್ತಿರುವುದು.

ಇವರ ಪರಿಚಯ ನನಗೆ ಆದದ್ದು ನನ್ನ ಪ್ರೀತಿಯ ಪತ್ರಿಕೆಯಾದ ‘ಜನಮಿಡಿತದ’ ಮೂಲಕ. ಇವರಂತೆ ಹಲವು ಸಹೃದಯಿ ಸಾಹಿತ್ಯ ಮಿತ್ರರ ಪರಿಚಯ ಆಗಿದ್ದೂ ಜನಮಿಡಿತದ ಮೂಲಕವೇ. ಈ ವಿಷಯಕ್ಕೆ ನಾನು ಸದಾ ಜನಮಿಡಿತದ ಸಂಪಾದಕರಿಗೆ ಚಿರಋಣಿ.ಪ್ರಾರಂಭದ ದಿನಗಳಲ್ಲಿ ಫೈಜ್ನಟ್ರಾಜ್ ಅವರ ಕಥೆ-ಕವನಗಳನ್ನು ಓದದೇ ಇದ್ದರೂ… ಇತ್ತೀಚಿನ ಕೆಲವು ದಿನಗಳಲ್ಲಿ ಪ್ರತಿಲಿಪಿ ಹಾಗೂ ಹಲವಾರು ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಅವರ ಕಥೆ-ಕವನಗಳನ್ನು ಓದುತ್ತಾ ಬಂದಿದ್ದೇನೆ. ಸರಳವಾದ, ನೇರ ಭಾಷೆಯ ಜೊತೆಗೆ ಮನಸ್ಸಿಗೆ ಮುಟ್ಟುವಂತೆ ಬರೆಯುವುದು ಇವರ ವಿಶೇಷತೆ ಎಂದೇ ಹೇಳಬಹುದು.ಇನ್ನು ಕವನ ಸಂಕಲನದ ತುಂಬಾ ಪ್ರೀತಿಯ ವರ್ಷಧಾರೆಯನ್ನೇ ಕವಿ ಹರಿಸಿದ್ದಾರೆ. ಅದರಲ್ಲಿ ಮಿಂದು ನೆನೆಯುವ ಭಾಗ್ಯ ಮಾತ್ರ ಓದುಗನದ್ದು! ಇಲ್ಲಿ ಪ್ರೀತಿಯ ಸೆಳತವಿದೆ; ನೋವಿನ ಛಾಯೆಯಿದೆ; ವಿರಹದ ಕಾವಿದೆ. ಒಟ್ಟಿನಲ್ಲಿ ಪ್ರೀತಿಯ ನೆನಪೊಂದು ಕೈ ಹಿಡಿದು ಕಾಡಿದ ಅನುಭವ ಅಂತ್ಯದೊಳಗೆ ಓದುಗರಿಗಾಗುವುದು ಖಂಡಿತ.ಕುಡಿಯುವುದು ನಿನ್ನ ಮರೆಯೋಕ್ಕೂ ಅಲ್ಲ;ನೆನಪಿಗೂ ಅಲ್ಲ!ಎದೆಯಲಿರೋ ಪ್ರೀತಿ ಗಿಡ ಸುಡಲಷ್ಟೇ!ಎದೆಯಲ್ಲಿ ಹುದುಗಿರುವ ಪ್ರೀತಿಯನ್ನು ಕಿತ್ತೊಗೆಯಲು ಕಷ್ಟಪಡುವ ವ್ಯಕ್ತಿಯ ಭಾವನೆಯನ್ನು ಇಲ್ಲಿ ಕವಿ ಚುಟುಕಾಗಿ ಆದರೂ ಅರ್ಥವತ್ತಾಗಿ ಹನಿಸಿದ್ದಾರೆ.

ಹೋಗಿ ಬರುವೆನೆಂದ ಕಣ್ಣ ಹನಿಗೆಹೇಳಿದೆ ಹೀಗಂತ ಹೋಗೋದು ಹೋಗ್ತಿಯಾ ಹೋಗಿ ಅವಳಿಗೆ ಮಾತ್ರ ಹೇಳಬೇಡನಾ ನಿನ್ನಿಂದಾಗಿ ಹೊರಬಂದೆ ಅಂತ!ಆಹಾ! ಈ ಸಾಲುಗಳಲ್ಲಿ ಬಿಟ್ಟು ಎದ್ದು ನಡೆದ ಹುಡುಗಿಗೆ ತಲುಪಿಸುವ ಹುಡುಗನ ಅಂತರಾಳದ ನೋವು ಅಡಗಿದೆ. ಇನ್ನು ಬಿಟ್ಟು ಹೋದವಳಿಗೆ ತನ್ನ ಕಣ್ಣೀರು ಕಾಣಬಾರದೆಂಬ ಮನೋಭಾವವೂ ಇದೆ.

ನಾ ತಂದುಕೊಟ್ಟಿದ್ದು ಬೆಂಕಿಪಟ್ಣಅಡುಗೆಗೆ ಎಂದು! ನೀನೋ ಹಣತೆ ಹಚ್ಚಿ ಬೆಳಕಾಗಿಬಿಟ್ಟೆ! ತಂದುಕೊಟ್ಟ ಬೆಂಕಿಯ ಪಟ್ಟಣ ಒಲೆ ಉರಿಸಲು ಎಂದು. ಆದರೆ, ಆಕೆ ಬೆಳಗಿದ್ದು ಮಾತ್ರ ಮನದಲ್ಲಿ ಪ್ರೀತಿಯ ಹಣತೆಯನ್ನು.

ಹೆಣ್ಣು ಮನಸ್ಸು ಮಾಡಿದರೆ ಗಂಡಿನ ಜೀವನವನ್ನು ಉರಿಸಲೂ ಬಹುದು ಬೆಳಗಲೂ ಬಹುದು. ಚೈತ್ರಳಿಗೆ ವಸಂತನ ಮೇಲೆ ಮುನಿಸಿಲ್ಲಅದಕ್ಕೆ ಮೈ ತುಂಬಾ ಹಸಿರುಟ್ಟುಬಾಗಿ ನೆಲಕ್ಕೆ ಚುಂಬಿಸುತ್ತಿದ್ದಾಳೆ!ಪ್ರಕೃತಿಯಲ್ಲಿ ಆಗುವ ಋತು ಬದಲಾವಣೆಗಳು ಕವಿಯ ಕಣ್ಣಿಗೆ ಪ್ರೀತಿಯ ಸಂಕೇತದಂತೆ ಕಾಣುತ್ತಿದೆ. ಅದಕ್ಕೇ ಹಿರಿಯರು ಹೇಳಿದ್ದು ‘ರವಿ ಕಾಣದ್ದನ್ನು ಕವಿ ಕಂಡ’ ಎಂದು.ನಾ- ನೀನಾಗದ ನೀ- ನಾನಾಗದ ಒಲವುಎಂದೂ ಏನೂ ಬೆಳೆಯದ ಬೀಳು ಹೊಲವು ಬಹುಶಃ ಹೊಂದಿಕೊಂಡು ಪ್ರೀತಿಯಿಂದ ಬಾಳಲಾಗದ ಬದುಕಿಗೆ ಇದಕ್ಕಿಂತಲೂ ಉತ್ತಮ ವ್ಯಾಖ್ಯಾನ ಬೇರಿಲ್ಲ ಎನಿಸುತ್ತದೆ. ಎರಡು ದೇಹ ಒಂದೇ ಆತ್ಮವೆಂಬಂತೆ ಪ್ರೇಮಿಗಳು ಬದುಕಬೇಕು. ಹಾಗಿಲ್ಲದೆ ಹೋದರೆ ಅದು ಎಂದೂ, ಏನೂ ಬೆಳೆಯದ ಹೊಲ. ಅಲ್ಲಿ ಪ್ರೀತಿಯ ಫಸಲು ಬೆಳೆಯುವುದು ಅಸಾಧ್ಯ… ಎಂಬುದನ್ನು ಕವಿ ಬಹಳ ಚೆನ್ನಾಗಿ ಚುಟುಕಿನ ಸಾಲುಗಳಲ್ಲಿ ಹೇಳಿದ್ದಾರೆ. ಆಹಾ! ನಾನೇ ಹೀಗೆ ಇರುವ ಎಲ್ಲ 150 ಕವಿತೆಗಳನ್ನು ಹೇಳುತ್ತಾ ಕುಳಿತರೆ… ನೀವು ಓದುವುದು ಯಾವಾಗ? ನನ್ನ ಪಾಲು ಇಲ್ಲಿಗೆ ಮುಗಿಯಿತು. ಉಳಿದ ಪ್ರೀತಿಯ ಸಾಲುಗಳನ್ನು ಪುಸ್ತಕದಿಂದ ನೀವೇ ಮೊಗೆದು ಕುಡಿಯಿರಿ. ಬರಲೇ ಮಿತ್ರರೇ….

LEAVE A REPLY

Please enter your comment!
Please enter your name here