• ಉಮ್ಮು ಯೂನುಸ್. ಉಡುಪಿ

ವಾಟ್ಸಪ್ ಸಂದೇಶವೊಂದು ಹೀಗಿತ್ತು..

“ಕೊರೋನಾ ಹುಟ್ಟಿದ್ದು ಚೀನಾದಲ್ಲಿ, ಬೆಳೆದದ್ದು ಇಟೆಲಿಯಲ್ಲಿ, ಸುತ್ತಾಡಿದ್ದು ಅಮೇರಿಕಾದಲ್ಲಿ, ಮುಸಲ್ಮಾನನಾದದ್ದು ಭಾರತದಲ್ಲಿ..!!”

ಇದೊಂದು ತಮಾಷೆಗಾಗಿ ಮಾಡಿದ ಸಂದೇಶವಾಗಿದ್ದರೂ. ನಮ್ಮನ್ನು ಗಂಭೀರವಾದ ಚಿಂತನೆಗೆ ಹಚ್ಚುತ್ತದೆ.

ನಾವು ಭಾರತೀಯರು ಇದೆಂತಹಾ ಕಾಲದಲ್ಲಿದ್ದೇವೆ? ಇದ್ಯಾವ ರೀತಿಯ ಮನಃಸ್ಥಿತಿ ನಮ್ಮದು? ಈ ಸಂಧಿಗ್ಧ ಸ್ಥಿತಿಯಲ್ಲಿಯೂ ಕೂಡಾ ನಮ್ಮ ಮನಸ್ಸಿನಲ್ಲಿ ಇಂತಹಾ ಕಿರಾತಕ ಯೋಚನೆಗಳು ಹೇಗೆ ಮತ್ತು ಯಾಕಾಗಿ ಸುಳಿಯುತ್ತಿವೆ? ಈ ರೀತಿಯ ತುಚ್ಛವಾದ ವಿಚಾರ ನಮ್ಮ ಮನಸ್ಸಿನಲ್ಲಿ ಬರುತ್ತಿದೆಯೆಂದಾದರೆ ನಾವು ಕೊರೋನಕ್ಕಿಂತಲೂ ಭೀಕರ ರೋಗಕ್ಕೆ ತುತ್ತಾಗಿದ್ದೇವೆ ಎಂದರ್ಥ. ಮತ್ತು ನಾವು ಭಾರತೀಯರಾಗಿ ಉಳಿದ್ದೇವೆಯೇ ? ಅದಕ್ಕೂ ಮೊದಲು ಮಾನವರಾಗಿ ಉಳಿದ್ದೇವೆಯೇ ಎಂದು ನಮ್ಮ ಎದೆ ಮುಟ್ಟಿ ಕೇಳಿಕೊಳ್ಳಬೇಕಾದಂತಹಾ ಕಾಲಘಟ್ಟದಲ್ಲಿದ್ದೇವೆ ನಾವಿಂದು..

 ಸಾಂಕ್ರಮಿಕ ರೋಗವೊಂದು ತನ್ನ ಕರಾಳ ಹಸ್ತವನ್ನು ಚಾಚಿ, ಸಾವಿರಾರು ಜೀವಗಳ ಬಲಿ ಪಡೆಯುತ್ತಿದೆ. ಕಣ್ಣಿಗೂ ನಿಲುಕದ ಅತಿ ಸೂಕ್ಷ್ಮಜೀವಿಯೊಂದು ಆರಡಿ ಉದ್ದದ ಮಾನವನ ನಿದ್ದೆಗೆಡಿಸಿದೆ. ಜಗತ್ತಿಗೆ ಜಗತ್ತೇ ಇದರ ವಿರುದ್ಧ ಸಮರ ಹೂಡಿದೆ. ಇಂತಿರುವಾಗ ವಿಶ್ವದಲ್ಲೆಲ್ಲೂ ಈ ರೋಗಕ್ಕೆ ಜಾತಿಯ ಹೆಸರು ಸಿಕ್ಕಿರಲಿಲ್ಲ. ಜಾತಿ ಧರ್ಮದ ಭೇದವಿಲ್ಲದೇ ಸಿಕ್ಕ ಸಿಕ್ಕೆಲ್ಲವನ್ನೂ ಆಪೋಶನ ಪಡಕೊಳ್ಳುತ್ತಿದ್ದ ಈ ರೋಗ ನಮ್ಮ ದೇಶದಲ್ಲಿ ತನಗಿಂತಲೂ ಭಯಾನಕವಾಗಿರುವ  ಧಾರ್ಮಿಕ “ಸರ್ ನೇಮ”ನ್ನು ಅಂಟಿಸಿಕೊಂಡು ತಿರುಗಾಡುತ್ತಿದೆ ಎಚ್ಚರ..!! ಹೌದು ರೋಗವು ತೀವ್ರ ಸ್ವರೂಪದ್ದಾಗಿದೆ, ಮತ್ತು ಸೂಕ್ತ ಸಮಯಕ್ಕೆ ಜಾಗೃತರಾಗದಿದ್ದರೆ ಪರಿಣಾಮ ಭೀಕರವಾಗಬಹುದು. ಪ್ರಿಕಾಶನ್ (ಮುಂಜಾಗ್ರತೆ) ಮಾತ್ರವೇ ಈ ರೋಗದಿಂದ ಮಾನವನನ್ನು ರಕ್ಷಿಸಬಹುದಾಗಿದೆ. ಈ ಸಮಯದಲ್ಲಿ ಲಾಕ್ ಡೌನ್ ಸೂಕ್ತವಾದ ಕ್ರಮ ಇದರಲ್ಲಿ ಎರಡು ಮಾತಿಲ್ಲ. ಈ ಲಾಕ್ ಡೌನ್ ನಡುವೆಯೂ ಬಹಳಷ್ಟು ಕಾರ್ಯಕ್ರಮಗಳು ನಡೆದವು. ಅವುಗಳಲ್ಲಿ ಸಿಖ್ಖರ ಸಭೆ, ಸಾಯಿ ಬಾಬಾ ಮಂದಿರದಲ್ಲಿ ದರ್ಶನ, ನಿಝಾಮುದ್ದೀನ್ ಧಾರ್ಮಿಕ ಕಾರ್ಯಕ್ರಮ, ರಾಜಕಾರಣಿಗಳ ಮದುವೆ ಸಮಾರಂಭ, ರಾಮನವಮಿ ಕಾರ್ಯಕ್ರಮಗಳು, ದೇಶದ ನೂರಾರು ಕಡೆ ನಡೆದವು.

ಆದರೆ, ಬ್ರೇಕಿಂಗ್ ನ್ಯೂಸ್ ಆಗಿ, ವೈರಲ್ ವೀಡಿಯೋ ತುಣುಕುಗಳಾಗಿ ಪ್ರತಿ ನಿಮಿಷವೂ ಟೀವಿ ಪರದೆಗಳ ಮೇಲೆ, ಜಾಲತಾಣಗಳಲ್ಲಿ ದಿನದ 24 ಘಂಟೆಯೂ ರಾರಾಜಿಸಿದ್ದು ನಿಝಾಮುದ್ದೀನ್ ತಬ್ಲೀಗ್ ಸಮಾವೇಶ ಮಾತ್ರ!!? ಅದೇಕೆ ಹೀಗಾಯಿತು ಎಂದು ಪ್ರತ್ಯೇಕವಾಗಿ ಕೇಳಬೇಕೆಂದಿಲ್ಲ . ಕೇಳುಗನಿಗೂ ಉತ್ತರ ತಿಳಿದಿರುತ್ತದೆ. ಪ್ರಶ್ನೆ ಬರೇ ಸಮಾವೇಶದ್ದಾಗಿದ್ದರೆ ಖಂಡಿತವಾಗಿಯೂ ಖಂಡಿಸಬಹುದಿತ್ತು, ಆದರೆ ಇಲ್ಲಿ ಮಾಧ್ಯಮಗಳು ಧರ್ಮಾಧಾರಿತ ಹೊಲಸು ರಾಜಕಾರಣಕ್ಕೆ ತೊಡಗಿವೆ. ಕೇವಲ ಯಕಃಶ್ಚಿತ್ ಟಿ.ಆರ್.ಪಿ ಗಾಗಿ…

ಮಾಧ್ಯಮಗಳು ತಮ್ಮ ಘನತೆಯನ್ನು ಮರೆತು ಸುಳ್ಳುಗಳನ್ನು ಪದೇ ಪದೇ ಪುನರಾವರ್ತಿಸುತ್ತಾ ಸತ್ಯವಾಗಿಸುವ ಕೀಳು ಮಟ್ಟದ ಆಟವಾಡುತ್ತಿವೆ. ನಾವಿಲ್ಲಿ ಕೆಲವು ವಾಸ್ತವ ಸಂಗತಿಗಳತ್ತ ಗಮನ ಕೊಡಬೇಕಾಗಿದೆ. ತಬ್ಲೀಗ್ ಸಮಾವೇಶ ನಡೆಸಿದ್ದು ತಪ್ಪು ಎಂದು ನಾವು ಹೇಳುವುದಾದರೆ, ಹೌದು ಅದು ತಪ್ಪು ಒಪ್ಪಿಕೊಳ್ಳೋಣ. ಆದರೆ ಸಾವಿರ, ಎರಡು ಸಾವಿರಗಳಷ್ಟು ಜನ ಸೇರುವ ಸಮಾವೇಶಕ್ಕೆ ಅವಕಾಶ, ಮತ್ತು ಅನುಮತಿ ನೀಡಿದ್ದೂ ಕೂಡ ತಪ್ಪು. ಏಕೆಂದರೆ ಸಾಮಾನ್ಯ ನಾಗರಿಕರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಸಂದೇಶ ಸಿಗದಿದ್ದರೂ ದೇಶದ ಆಡಳಿತ ವ್ಯವಸ್ಥೆಗೆ ಮುಂಚಿತವಾಗಿಯೇ ಈ ಸಂದೇಶ ತಲುಪಿರುತ್ತವೆಯಷ್ಟೇ? ಹಾಗಿರುವಾಗ ಅಷ್ಟೊಂದು ಸಂಖ್ಯೆಯ ವಿದೇಶಿಗರಿಗೆ ವಿಸಾ ನೀಡಿದ್ದಾದರೂ ಯಾಕೆ ? ಅವರನ್ನು ವಿಮಾನ ನಿಲ್ದಾಣದಲ್ಲೇ ಸ್ಕ್ರೀನಿಂಗ್ ಮಾಡಿ ಅಲ್ಲಿಂದಲೇ ತಮ್ಮ ತಮ್ಮ ದೇಶಕ್ಕೆ ವಾಪಾಸಾಗುವಂತೆ ಸೂಚಿಸಬಹುದಿತ್ತಲ್ಲವೇ? ಇದಕ್ಕುತ್ತರವೇನು ಗೊತ್ತೇ? ಆ ಸಮಯದಲ್ಲಿ ಲಾಕ್ ಡೌನ್ ಆದೇಶ !! ಇದರಲ್ಲಿ ನಮ್ಮೆಲ್ಲರ ಪ್ರಶ್ನೆಗೂ ಉತ್ತರವಿದೆ, ತಬ್ಲೀಗಿ ಜಮಾಅತ್ ನ ಸದಸ್ಯರೂ ಸಮಾವೇಶಕ್ಕೆ ಸೇರಿದಾಗ ಲಾಕ್ ಡೌನ್ ಆದೇಶ ಬಂದಿರಲಿಲ್ಲ.( ಇದನ್ನೇ ಜಮಾಅತ್ ಪರಿಪರಿಯಾಗಿ ಹೇಳುತ್ತಿದ್ದರೂ ಯಾರೂ ಕೇಳಸಿಕೊಳ್ಳುತ್ತಲೇ ಇಲ್ಲ, ಅದಿರಲಿ!!) ಹಾಗಾಗಿಯೇ ವಿಮಾನ ನಿಲ್ದಾಣದಲ್ಲಿಯೇ ವೀಸಾ ಪಡೆದುಕೊಂಡು ಬರುವವರ ಸ್ಕ್ರೀನಿಂಗ್ ಮಾಡುವಲ್ಲಿಯೂ ಏರ್ ಪೋರ್ಟ್ ಅಥೋರಿಟಿಯೂ ಅಷ್ಟೊಂದು ಮುತುವರ್ಜಿ ವಹಿಸಲಿಲ್ಲ. ಒಂದು ವೇಳೆ ಆ ಸಂದರ್ಭದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಿದ್ದಿದ್ದರೆ, ಜಮಾತ್ ನ ಸಮಾವೇಶವನ್ನೂ ತಡೆಯಬಹುದಿತ್ತು, ಇಟೆಲಿಯ 16 ಮಂದಿಯ ಟೂರಿಸ್ಟ್ ಗ್ರೂಪನ್ನೂ ಮತ್ತು ಬಾಲಿವುಡ್ ಗಾಯಕಿ ಕನಿಕಾ ಕಪೂರ್ ರನ್ನೂ ಇನ್ನೂ ಅದೆಷ್ಟೋ ಅನಿವಾಸಿಗಳನ್ನು ಪರೀಕ್ಷಿಸಿ ತಡೆಯುವುದರೊಂದಿಗೆ ಬಹುದೊಡ್ಡ ಅನಾಹುತಗಳನ್ನು ತಪ್ಪಿಸಬಹುದಿತ್ತೇನೋ.. 

ಆದರೆ ಆಡಳಿತವರ್ಗಕ್ಕೆ ಈ ಆರೋಪದಿಂದ ಹೆಗಲು ತಪ್ಪಿಸಿಕೊಳ್ಳಬೇಕಿತ್ತು , ಹೇಗೂ ಮುಸ್ಲಿಂ ಸಮುದಾಯದ ಮೇಲೆ ಗೂಬೆ ಕೂರಿಸುವುದೆಂದರೆ ಅದು ಅತ್ಯಂತ ಸುಲಭ ಮತ್ತು ಅಷ್ಟೇ ಪರಿಣಾಮಕಾರಿಯಾಗಿಯೂ ಇರುತ್ತದೆ ಎಂಬುವುದು ಎಲ್ಲರಿಗೂ ತಿಳಿದಿರುವ ಸತ್ಯ. ಹಾಗಾಗಿ ಸಾಯಿಬಾಬಾ ಮಂದಿರದಲ್ಲಿ ದರ್ಶನಕ್ಕಾಗಿ ಬಂದ ಸಾವಿರಾರು ಭಕ್ತರು ಪಾಪ ಸಿಲುಕಿ ಕೊಂಡರು ಮತ್ತು ತಬ್ಲೀಗರು ರೋಗ ವಾಹಕರಾಗಿ ಬಿಂಬಿಸಲ್ಪಟ್ಟು ಅಪರಾಧಿಗಳಾದರು.

ಇಲ್ಲಿ ಸರಿ ತಪ್ಪುಗಳ ತೂಗಲು ಇರುವ ಏಕೈಕ ಮಾಪಕವೆಂದರೆ “ಜಾತಿ”ಯಾಗಿದೆ. ಹಿಂದೂ ಯುವಕನೊಬ್ಬ ಬಾಂಬು ಏರ್ ಪೋರ್ಟ್ ವರೆಗೆ ಕೊಂಡು ಹೋಗಿ ಸರಿಯಾದ ಜಾಗದಲ್ಲಿ ಪ್ಲಾಂಟ್ ಮಾಡಿದಾಗಲೂ ಅವನು ಮಾನಸಿಕ ಅಸ್ವಸ್ಥ, ಮುಗ್ಧನಾಗಿಬಿಡುತ್ತಾನೆ!.  ಅದೇ ಮುಸ್ಲಿಂ ಸಮುದಾಯದ ವಿರುದ್ಧ ಅಂತೆ ಕಂತೆಗಳೆಲ್ಲವನ್ನೂ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಮಾಡಿ ರಸವತ್ತಾಗಿ ಪ್ರಚಾರ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸಿಬಿಡುತ್ತದೆ. ಇದೇನೂ ಬರೇ ಪ್ರಾದೇಶಿಕ ಮಟ್ಟದ ಮಾಧ್ಯಮಗಳ ಮಾತಲ್ಲ; ಇದು ರಾಷ್ಟ್ರೀಯ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವುದೇ ದೊಡ್ಡ ದುರಂತ. ಅದರಲ್ಲೂ ಈ ಸಮಾವೇಶದ ಕುರಿತಾದ ಸುದ್ದಿ ಅರ್ನಬ್ ಗೋಸ್ವಾಮಿಯಂತಹಾ ತೀಕ್ಷ್ಣ ನಾಲಗೆಯ ಪತ್ರಕರ್ತನ ಕೈಯಲ್ಲಿ ಅದು ಯಾವ ತೀವ್ರತೆ ಪಡೆದುಕೊಂಡಿತೆಂದರೆ, ಆತ ಇಡೀ ದೇಶದ ಮಸೀದಿಗಳಲ್ಲಿ ತಬ್ಲೀಗಿಗಳು ಅವಿತಿದ್ದಾರೆಂಬ ದೊಡ್ಡ ಆರೋಪವನ್ನೇ ಹೊರಿಸಿಬಿಟ್ಟರು.. ದೇಶದಲ್ಲಿ ಲಾಕ್ ಡೌನ್ ಆದೇಶ ಪಾಲಿಸುತ್ತಾ ಮುಸ್ಲಿಮರು ತಮ್ಮ ಮಸೀದಿಗಳನ್ನು ಲಾಕ್ ಮಾಡಿದ್ದಾರೆಂಬುದನ್ನು ಮರೆತು ಆತನಾಡಿದ ಮಾತು ಅದೆಷ್ಟು ಮನಸುಗಳಲ್ಲಿ ರಾಡಿಯೆಬ್ಬಿಸಿರಬಹುದು? ಈ ಸಂಕಷ್ಟದ ಸಮಯದಲ್ಲಿ ಘಟನೆಯ ನೈಜತೆಯನ್ನು ತಿಳಿಸಿಕೊಟ್ಟು ಶಾಂತಿ ಸೌಹಾರ್ಧ ಕಾಪಾಡಬೇಕಿದ್ದ ಮಾಧ್ಯಮಗಳು ಸ್ವತಃ ಕೊಳ್ಳಿ ಇಟ್ಟುಬಿಟ್ಟವು.      

ಇದಾಗಿದೆ (ಅ)ಧರ್ಮದ ಅಮಲು.. “ಧರ್ಮವು ಅಫೀಮಾಗಿದೆ” ಎನ್ನುವ ಮಾತನ್ನು ಭಾರತೀಯರೆನಿಸಿ ಕೊಂಡವರು ಸಾಬೀತು ಪಡಿಸಿದರು. ಮದ್ಯ ಸೇವಿಸಿದವರು ಮತ್ತಿಳಿದ ನಂತರವಾದರೂ ವಾಸ್ತವವನ್ನರಿಯುವರು; ಆದರೆ, ಈ ಧರ್ಮದ ಅಫೀಮನ್ನು ಏರಿಸಿಕೊಂಡವರನ್ನು ವಾಸ್ತವಕ್ಕೆ ಹೇಗೆ ತರೋಣ?

ಇನ್ನೊಂದು ಅಸಹನೀಯವೆನಿಸುವ ವಿಷಯವಿದೆ. ಅವಾಸ್ತವಿಕ ಮಾನಸಿಕತೆ!! ಸಧ್ಯಕ್ಕೀಗ ಕೊರೋನಾ ಕಾಲಿಟ್ಟಂದಿನಿಂದ ನಮ್ಮ ಪ್ರಧಾನಿ ಮಹೋದಯರು ಈ ರೀತಿಯ ಖಿನ್ನತೆಯಿಂದ ಬಳಲುತ್ತಿದ್ದಾರೆನಿಸುತ್ತಿದೆ.. ದೇಶದ ವೈದ್ಯರೊಂದಿಗೆ ಚರ್ಚಿಸಬೇಕಾದ ಸಾಂಕ್ರಾಮಿಕ ಖಾಯಿಲೆಯ ವಿಷಯವನ್ನು ಕ್ರಿಕೆಟ್, ಟೆನಿಸ್, ಆಟಗಾರರೊಂದಿಗೆ ವೀಡಿಸೋ ಕಾನ್ಫರೆನ್ಸ್ ಮೂಲಕ ಚರ್ಚಿಸುತ್ತಿದ್ದಾರೆ..!! ಇದು ಯಾವುದೇ ರೀತಿಯಲ್ಲಾದರೂ ಅತ್ಯಗತ್ಯವಾಗಿತ್ತೇ? ಹಾಗಾದರೆ, ದೇಶದ ಸಧ್ಯದ ತುರ್ತು ಅಗತ್ಯವೇನು? ಔಷದ ಮತ್ತು ಉತ್ತಮ ಸೌಕರ್ಯಗಳಿರುವ, ಐಸೋಲೇಶನ್ ಸೌಲಭ್ಯವಿರುವ ಆಸ್ಪತ್ರೆಗಳಾಗಿವೆ. ಲಾಕ್ ಡೌನ್ ನಿಂದಾಗಿ ದುಡಿಮೆಯಿಲ್ಲದೇ, ಹೊಟ್ಟೆಗೆ ಹಿಟ್ಟಿಲ್ಲದೇ ಪರದಾಡುತ್ತಿರುವವರ ಹಸಿವು ತಣಿಸುವುದಾಗಿದೆ. ಆದರೆ ನಮ್ಮ ಪ್ರಧಾನಮಂತ್ರಿಗಳು ಮಾಡುತ್ತಿರುವುದೇನು?  ಸಂಜೆ ಐದು ಘಂಟೆಗೆ “ತಾಲೀ ಬಜಾವೊ?” ಅಥವಾ ಅನ್ನವಿಲ್ಲದೆ ಸೊರಗಿರುವ “(ಖಾಲಿ) ಥಾಲಿ ಬಜಾವೋ..??” ಈಗ ವೈರಸ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವಾಗ ಆನಿಟ್ಟಿನಲ್ಲಿ ಯಾವ ಯೋಜನೆಗಳನ್ನು  ಕೈಗೊಳ್ಳಬೇಕೆಂಬ ತೀರ್ಮಾನಿಸುವ ಬದಲಾಗಿ ರಾತ್ರಿ ಒಂಭತ್ತು ಘಂಟೆಗೆ ಮನೆಯ ದೀಪವಾರಿಸಿ ಬಾಗಿಲಲ್ಲಿ, ನಿಂತು “ದಿಯಾ ಜಲಾವೋ..!!????” ಎನ್ನುವಾಗ ಇವರು ನಮ್ಮ ದೇಶದ ಪ್ರಧಾನಿಗಳು ಹೌದೇ ಎನ್ನುವ ಸಂದೇಹ ಕಾಡದಿರದೇ?? ಇದೀಗ ನಮಗೆ ಯಾವುದೇ ಮಾಧ್ಯಮದ ಹೊಲಸು ವರದಿಗಳ ಕುರಿತು ಚಿಂತಿಸುವುದಕ್ಕಿಂತಲೂ ನಾವು ಯಾರಿಂದ ಆಳಲ್ಪಡುತ್ತಿದ್ದೇವೆ ಎಂದು ಚಿಂತಿಸಲು ಸಕಾಲವಾಗಿದೆ…

LEAVE A REPLY

Please enter your comment!
Please enter your name here