ಲೇಖಕರು:ವಿ. ಎಲ್. ನರಸಿಂಹಮೂರ್ತಿ
ಸಂಶೋಧನಾ ವಿದ್ಯಾರ್ಥಿ
ಬೆಂಗಳೂರು ವಿ.ವಿ.

ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಿ ವಿದೇಶಕ್ಕೆ ಕಳಿಸಿ ದುಡ್ಡು ಮಾಡುವ ಆಸೆ ಇಟ್ಟುಕೊಂಡಿರುವ ಕೋಟ್ಯಾಂತರ ವೀರ ಕನ್ನಡಿಗರು ಕನ್ನಡ ಶಾಲೆಗಳ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹಾಗಾಗಿಯೇ ಇವರು ಇವತ್ತು ಖಾಸಗಿ ಶಾಲೆಗಳನ್ನು ನಡೆಸುತ್ತಿರುವವರ ಜೇಬಿಗೆ ಲಕ್ಷ ಲಕ್ಷ ಸುರಿದು ಹಣವಂತರನ್ನಾಗಿಸಿ ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯುವ ಸ್ಥಿತಿ ತಂದಿಟ್ಟಿರುವುದು.
ಭಾಷೆಯೊಂದು ಜೀವಂತವಾಗಿ ಉಳಿಯುವುದು ನಮ್ಮ ಮಕ್ಕಳು ಕಲಿಯುವುದರಿಂದ, ಮಾತನಾಡುವುದರಿಂದಲೇ ಹೊರತು ಭಾಷಾಭಿಮಾನದ ವೀರಾವೇಶದ ಮಾತುಗಳು ಮತ್ತು ಉಗ್ರ ಹೋರಾಟಗಳಿಂದಲ್ಲ.
ಇವತ್ತು ನಮ್ಮ ಮಕ್ಕಳಿಗೆ ಕನ್ನಡ ಕಲಿಸದೇ ಇದ್ದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡದ ಬೊರ್ಡುಗಳನ್ನು ಎಷ್ಟು ದಪ್ಪ ಅಕ್ಷರಗಳಲ್ಲಿ ಬರೆದು ಹಾಕಿದರೂ ಓದುವುದಕ್ಕೂ ಜನ ಗತಿ ಇರುವುದಿಲ್ಲ.

ಮಕ್ಕಳನ್ನು ಓದನ್ನು ದುಡ್ಡು ಮಾಡುವ ಆಸೆಯ ದಂಧೆಯಂತೆ ಭಾವಿಸಿರುವ ಪೋಷಕರು ವ್ಯಾಪಾರ ಮಾಡಿ ಲಾಭ ಮಾಡಿಕೊಳ್ಳುವ ಮಾರ್ವಾಡಿಗಳಿಗಿಂತ ಯಾವುದರಲ್ಲಿ ಭಿನ್ನ?

ದೊಡ್ಡ ದೊಡ್ಡ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನ ಮಾಡಿಕೊಂಡು ಕ್ಯಾಪಿಟೇಷನ್ ಶುಲ್ಕದ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ಸರ್ಕಾರಿ ಸಂಸ್ಥೆಗಳನ್ನು ಮುಚ್ಚಲು ಪ್ರತ್ಯಕ್ಷ ಕಾರಣರಾಗಿರುವ ನಮ್ಮ ರಾಜಕಾರಣಿಗಳು ವ್ಯಾಪಾರ ಮಾಡಿ ಲಾಭ ಮಾಡಿಕೊಳ್ಳುವ ಮಾರ್ವಾಡಿಗಳಿಗಿಂತ ಹೇಗೆ ಭಿನ್ನ?

ಕನ್ನಡ ಚಳುವಳಿಗಾರರನ್ನು ಗೂಂಡಾಗಳಿಗೆ ಹೋಲಿಸಿ ಅದನ್ನು ಧರ್ಮಕ್ಕೆ ತಗಲು ಹಾಕಿ ಲಾಭ ಮಾಡಿಕೊಳ್ಳುವ ಆಸೆಬುರುಕ ಸಂಸದನೊಬ್ಬ ವ್ಯಾಪಾರ ಮಾಡಿ ಲಾಭ ಮಾಡಿಕೊಳ್ಳುವ ಮಾರ್ವಾಡಿಗಳಿಗಿಂತ ಹೇಗೆ ಭಿನ್ನ?

ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ದೇಶದ ಎಲ್ಲಿ ಬೇಕೆಂದರಲ್ಲಿ ನೆಲೆಸುವ, ತನಗೆ ಬೇಕಾದ ಭಾಷೆಯನ್ನು ಕಲಿಯುವ, ಮಾತನಾಡುವ ಹಕ್ಕು ನೀಡಿರುವಾಗ ತಮ್ಮ ಭಾಷೆ ಮಾತನಾಡದಿದ್ದಲ್ಲಿ ರಾಜ್ಯ ಬಿಟ್ಟು ತೊಲಗಿ ಎಂದು ಹೇಳುವ ಅಧಿಕಾರ ನಮಗೆ ಕೊಟ್ಟವರಾರು. ಕನ್ನಡಿಗರಾರೂ ಬೇರೆ ರಾಜ್ಯಗಳಲ್ಲಿ ಬದುಕು ಕಟ್ಟಿಕೊಂಡಿಲ್ಲವೇ? ಅಲ್ಲಿನ ಜನ ಕನ್ನಡಿಗರ ಮೇಲೆ ಏಕಾಏಕಿ ಮುಗಿಬಿದ್ದರೆ ನಾವು ಭಾಷೆಗಳ ಅಳಿವು ಉಳಿವಿನ ಬಗ್ಗೆ ಭಾಷಣ ಮಾಡುತ್ತಾ ಕೂರುತ್ತೇವೆಯೇ?
ಭಾರತ ವೈವಿಧ್ಯತೆಯ ದೇಶ ಎಂದು ಹೋರಾಟ ಮಾಡುವ ನಾವು ಎರಡು ದಿನಗಳಿಂದ ಹ್ಯಾಷ್‌ಟ್ಯಾಗ್ ಮಾಡಿ ಒಂದು ಜಾತಿಯನ್ನು, ಆ ಜಾತಿಯ ಕಸುಬನ್ನು, ಆ ಜಾತಿಯ ಜನರನ್ನು ಹೀಯಾಳಿಸುತ್ತಿದ್ದೇವೆ, ನಾವು ನಿಜವಾಗಿಯೂ ಸೂಕ್ಷ್ಮಜ್ಞರೇ?

ನಮ್ಮ ಭಾಷೆಯ ಅಳಿವು ಉಳಿವು ನಮ್ಮ ಮೇಲೆ ನಿಂತಿದೆಯೇ ಹೊರತು ಅನ್ಯ ಭಾಷಿಕರ ಮೇಲೆ ದ್ವೇಷ ಕಾರುವುದರಿಂದಲ್ಲ. ಎಷ್ಟೋ ವರ್ಷ ಇಲ್ಲೇ ನೆಲೆಸಿರುವವರು ಕನ್ನಡ ಕಲಿಯುವುದು ಧರ್ಮ. ಆದರೆ ಅನ್ಯಭಾಷಿಕರು ಕನ್ನಡ ಕಲಿಯುವಂತೆ, ಕನ್ನಡ ಸಂಸ್ಕೃತಿಯ ಒಳಗೆ ಬರುವಂತೆ ನಾವೇನಾದರೂ ಗಮನಾರ್ಹ ಪ್ರಯತ್ನ ಮಾಡಿದ್ದೇವೆಯೇ? ಹಾಗೆ ಪ್ರಯತ್ನ ಮಾಡಿದ್ದೂ ಅನ್ಯಭಾಷಿಕರು ಕನ್ನಡ ಕಲಿಯದಿದ್ದರೆ ಆಗ ಅದು ಅವರ ತಪ್ಪು.

ಕರ್ನಾಟಕದಲ್ಲಿ ಕನ್ನಡ ಅನ್ನದ, ಅರಿವಿನ ಭಾಷೆಯಾದಾಗ ಮಾತ್ರ ಉಳಿಯುತ್ತದೆ, ಇಲ್ಲದಿದ್ದರೆ ಎಂತಹ ಉಗ್ರ ಹೋರಾಟಗಳು ನಡೆದರೂ ಅಳಿಯುತ್ತದೆ.

ಜೈ ಕರ್ನಾಟಕ ಮಾತೆ.

LEAVE A REPLY

Please enter your comment!
Please enter your name here