• ರವಿ ನವಲಹಳ್ಳಿ (ವಿದ್ಯಾರ್ಥಿ)

ಪ್ರವಾಸ ಅನುಭವ

ಕರುನಾಡಿನಲ್ಲಿ ಕನ್ನಡಿಗರು ನೋಡಲೇಬೇಕಾದ ತಾಣಗಳಲ್ಲಿ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯ ಮನೆ ೧೫೦ ವರ್ಷಗಳಷ್ಟು ಹಳೆಯದಾದ ಕುವೆಂಪು ಅವರು ಬೆಳೆದ ಮನೆಯನ್ನು ೨೦೦೧ ರಲ್ಲಿ ಪುನರ್ ನಿರ್ಮಿಸಲಾಯಿತು. ಮಲೆನಾಡಿನ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿರುವ ಮನೆಗೆ ಎಳ್ಳಷ್ಟು ಕುಂದು ಬರದೆ ಕಣ್ಮನ ಸೆಳೆಯುತ್ತಿದೆ. ಮನೆಯ ಎದುರಿನ ಹೂದೋಟ ಹುಲ್ಲುಹಾಸು ಮೊದಲಿಗೆ ನಮ್ಮನ್ನು ಸ್ವಾಗತಿಸುತ್ತದೆ. ಮುಖ್ಯದ್ವಾರದ ಮೂಲಕ ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮೂರು ದಿಕ್ಕಿಗೂ ಚೌಕಿಗಳುಳ್ಳ ಮೂರು ಅಂತಸ್ತಿನ ಹೆಮ್ಮನೆಯ ಒಳಾಂಗಣದ ದರ್ಶನವಾಗುತ್ತದೆ. ಅಂಗಳದ ನಡುವಿನ ತುಳಸಿ ಕಟ್ಟೆ ಗಮನ ಸೆಳೆಯುತ್ತದೆ. ಮನೆಯಲ್ಲಿ ದೊಡ್ಡ ಕಲಬಿಗಲು, ಕವಿ ಮದುವೆಯಾದ ಮಂಟಪ, ದಂಡಿಗೆ, ಕವಿಮನೆಯ ಹಳೆಯಬಾಗಿಲು ಮುಂತಾದ ದೊಡ್ಡ ವಸ್ತುಗಳನ್ನು ಇಡಲಾಗಿದೆ. ಇವುಗಳನ್ನು ನೋಡುತ್ತಾ ಮುಂದೆ ಸಾಗಿ ಎಡಕ್ಕಿರುವ ಬಾಗಿಲಿನಿಂದ ಆಚೆ ದಾಟಿದರೆ ಕವಿಯ ಅಜ್ಜಯ್ಯ ಅಭ್ಯಂಜನ ಮಾಡಿದಂಥ ಮಲೆನಾಡ ಬಚ್ಚಲು ಮನೆಯ ಮಾದರಿಯನ್ನು ನೋಡಬಹುದು. ಆಚೆ ಕಣ್ಣಾಡಿಸಿದರೆ ಕೆರೆ, ತೋಟ, ಕಾಡು, ನೀರಿನ ಝರಿ. ಮುಖ್ಯ ಮನೆಗೆ ಮುಂತುದಿಯಲ್ಲಿ ಮೂರು ಹಂತದ ಜಗುಲಿ ಇದೆ. ಇಲ್ಲಿರುವ ಮುಂಡಿಗೆಗಳು ಸುಂದರವಾದ ಕೆತ್ತನೆಯ ಕುಸುರಿ ಕೆಲಸದಿಂದ ಅಲಂಕೃತವಾಗಿವೆ. ಮೇಲ್ಛಾವಣಿಗೂ ವಿಶಿಷ್ಟ ವಾಸ್ತು ವಿನ್ಯಾಸದ ಪಕ್ಕಸಿಗಳನ್ನು ಬಳಸಲಾಗಿದೆ.

ಮನೆಯ ತುಂಬೆಲ್ಲ ನೂರಾರು ಮರದ ಕಂಬಗಳದ್ದೆ ಕಾರುಬಾರು. ಹೊರ ಆವರಣದಲ್ಲೇ 4 ಕಂಬಗಳಿವೆ. ಮನೆಯ ಎಲ್ಲಾ ಭಾಗಗಳಲ್ಲಿ ದಪ್ಪ ಹಲಗೆಗಳ ನಾಗೊಂದಿಗೆಗಳಿವೆ. ಜಗುಲಿಯ ಬಲಭಾಗದಲ್ಲಿ ಮೇಜಿನ ಮೇಲೆ ಕವಿಯ ಅರ್ಧಾಕೃತಿಯ ಪ್ರತಿಮೆ ಇದೆ. ಹಿಂಭಾಗದ ಗೋಡೆಯಲ್ಲಿ ಕವಿ ಕಾಲನಕರೆಗೆ ಓಗೊಟ್ಟ ಕಾಲವನ್ನು ಸೂಚಿಸುವ ಸ್ತಬ್ಧವಾಗಿರುವ ಗಡಿಯಾರವಿದೆ. ಜಗುಲಿಯ ಎಡ ಭಾಗದಲ್ಲಿ ಮಂಚ, ಕುರ್ಚಿಗಳಿದ್ದು ಗೊದೆಗಳುನ್ತ ಕರಿಕೋಟು, ಕರಿಟೋಪಿ, ಕಂಬಳಿ ಮುಂತಾದವನ್ನು ನೇಲಿಸಲಾಗಿದೆ. ತಲೆ ತಗ್ಗಿಸಿ ಹೆಬ್ಬಾಗಿಲು ದಾಟಿ ಒಳನಡೆದರೆ ನಡುಮನೆ, ಅದರ ಬಲಕ್ಕೊಂದು ಚಿಕ್ಕ ಕೋಣೆ, ಎಡಕ್ಕೆ ಬಾಣಂತಿ ಕೋಣೆ, ಅದರಾಚೆ ಕದಿಮಾಡುಗಳಿವೆ. ನಡುಮನೆಯ ಗೋಡೆಗುಂಟ ವಿವಿಧ ನಿತ್ಯ ಉಪಯೋಗಿಸುತ್ತಿದ್ದ ವಸ್ತುಗಳನ್ನು ಜೋಡಿಸಲಾಗಿದೆ. ಬಾಣಂತಿಕೋಣೆ ತಾಯಿಯ ಹಾಸಿಗೆ ಮಗುವಿನ ತೊಟ್ಟಿಲುಗಳಿಂದ ಸಜ್ಜಾಗಿದೆ. ಮುಂದಿನ ಕಡಿಮಾಡಿನ ಗೋಡೆಗಳ ಮೇಲೆ ಕವಿ ಕುವೆಂಪುರವರ ಕುಟುಂಬದ ಸದಸ್ಯರ ಮತ್ತು ಅವರ ಹತ್ತಿರದ ಬಂಧುಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ನಡುಮನೆಯಿಂದ ನೇರ ಒಳನಡೆದರೆ ಅಡುಗೆಮನೆ, ಎಡಭಾಗದಲ್ಲಿ ಒಲೆಸರ, ಹೊಗೆ ಕಂಡಿ , ಗೋಡೆಗಳ ಪಕ್ಕ ಜೋಡಿಸಿಟ್ಟ ಕವಿಮನೆಯ ಪಾತ್ರೆಗಳು, ಮಡಿಕೆ, ಮಣ್ಣಿನ ಸರಗೋಲು, ಕಡಗೋಲು ಕಂಬ, ಅನ್ನ ಬಸಿಯುವ ಬಾಗುಮರಿಗೆ, ಕೊಚ್ಚು ಕೊರಡಾದಿಯಾದ ಹಲವು ಹತ್ತು ಸಲಕರಣೆಗಳನ್ನು ನೋಡಬಹುದು. ಇಲ್ಲಿಂದಲೇ ಉಪ್ಪರಿಗೆಗೆ ಮರದ ಏಣಿ ಏರಿ ಹೋದರೆ ಅಲ್ಲಿ ಸುತ್ತುವರಿದ ಪ್ರಾಂಗಣ. ಅದರಲ್ಲೂ ಹಲವು ಅಪರೂಪದ ವಸ್ತುಗಳ ಜೋಡಣೆ. ಗೋಡೆಗಳ ಮೇಲೆ ಕವಿಶೈಲದ, ಕುಪ್ಪಳ್ಳಿ ಸುತ್ತಲ ಪ್ರಕೃತಿ ಚಿತ್ರಗಳ ಪ್ರದರ್ಶನ. ಇವನ್ನ ನೋಡುತ್ತ ನಡುವಿನ ಕೋಣೆಯನ್ನು ಹೊಕ್ಕರೆ ಅಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಕವಿ ಬಳಸುತ್ತಿದ್ದ ಪೆನ್ನು, ಬಟ್ಟೆ, ಕನ್ನಡಕ, ಊರುಗೋಲು, ಚಪ್ಪಲಿ,ಅವರ ತಲೆಗೂದಲು ಮುಂತಾದವು, ಕವಿ ಪಡೆದ ಪ್ರಶಸ್ತಿ ಪತ್ರಗಳು, ಪಳಕಗಳು, ಸ್ಮರಣಿಕೆಗಳು ಪೂಜಾ ಸಾಮಾಗ್ರಿಗಳು ಇವನ್ನೆಲ್ಲ ಸುರಕ್ಷಿತವಾಗಿ ಇದಲಾಗಿದೆ. ಒಂದೆರೆಡು ಲೆಕ್ಕಕ್ಕೆ ನಿಲುಕದ ಕವಿಗೆ ಸಂಬಂಧಿಸಿದ ವಸ್ತು ವಿಷಯಗಳ ಭಂಢಾರವೇ ಅಲ್ಲಿದೆ.. !!

ಕುವೆಂಪಜ್ಜನ ಕವಿಶೈಲದಲ್ಲಿನ ಅವರಿಗೆ ಪ್ರಿಯವಾದ ಬಂಡೆಗಳಡಿಯಲ್ಲಿ ಚಿರನಿದ್ರೆಗೆ ಜಾರಿ ವಿಶ್ರಾಂತಿ ಪಡೆಯುತ್ತಿರುವ ಮಹಾನ್ ಚೇತನದ ದಿವ್ಯ ತಾಣ ನಿಮ್ಮನ್ನು ಯಾವುದೋ ಸ್ವರ್ಗ ಲೋಕಕ್ಕೆ ಕರೆದೊಯ್ಯುತ್ತದೆ.

ಅದೇಕೋ ಗೊತ್ತಿಲ್ಲ, ಕುವೆಂಪಜ್ಜರವರ ಆ ಸಮಾಧಿ ನೋಡಿದ ಮೇಲೆ ಒಂದು ಕ್ಷಣ ಹಾಗೆಯೇ ಭಾವುಕನಾಗಿ ಹೋದೆ. ಆ ಪವಿತ್ರ ಬಂಡೆ ಯನ್ನು ಮುಟ್ಟಿ ಪಾವನನಾದಂತಹ ಅನುಭವ, ಅಲ್ಲಿಂದ ಬಿಟ್ಟು ಹೋಗಲಾರದಷ್ಟು ಸೆಳೆತ, ಕನ್ನಡ ನಾಡಿಗೆ, ಕನ್ನಡ ಮಣ್ಣಿಗೆ ವಿಶ್ವಮನ್ನಣೆ ತಂದಿತ್ತ ಮಹಾನ್ ಚೇತನದ ಸನಿಹದಲ್ಲೇ ಇದ್ದಂತಹಾ ಪುಣ್ಯದ ಭಾವ. ಅದಕ್ಕೇ ಹೇಳೋದು ಕನ್ನಡ ಇರುವವರೆಗೂ ಕುವೆಂಪು ಇರುತ್ತಾರೆ, ಸೂರ್ಯ ಚಂದ್ರ ಇರುವವರೆಗೂ ಅವರ ಕೃತಿಗಳಲ್ಲಿ ಅವರು ರಾರಾಜಿಸುತ್ತಾರೆ. ಅದಕ್ಕೇ ಅವರನ್ನು ಶತಮಾನದ ಕವಿ, ಯುಗದ ಕವಿ , ಜಗದ ಕವಿ ಎಂದೆಲ್ಲಾ ಕರೆಯುವುದು ‌.

ಅಂತೂ ಜೀವನದ ಕೆಲವೇ ಸಾರ್ಥಕ ಕ್ಷಣಗಳಲ್ಲಿ ಕುಪ್ಪಳ್ಳಿಯ, ಕವಿಶೈಲದ ಭೇಟಿಯೂ ಒಂದು ! ಸಾಧ್ಯವಾದಲ್ಲಿ ಒಮ್ಮೆ ಹೋಗಿಬನ್ನಿ, ನಿಮ್ಮ ಮನದ ದುಗುಡ, ಒತ್ತಡ, ಜಂಜಾಟಗಳೆಲ್ಲಾ ಮೂಲೆ ಸೇರಿ ನಂತರ ನಿಮ್ಮಲ್ಲಿ ಉಳಿಯುವುದು ಕೇವಲ ನಿಶ್ಕಲ್ಮಷವಾದ ಪ್ರಕೃತಿ ಭಾವ, ರಾಷ್ಟ್ರಕವಿಯ ಧ್ಯಾನ ಹಾಗೂ ಸ್ವರ್ಗಲೋಕದ ವಿಶೇಷ ಅನುಭವ ಇವಿಷ್ಟೇ… !!

LEAVE A REPLY

Please enter your comment!
Please enter your name here