• ಶರೀಫ್ ಕಾಡುಮಠ

ಆತ ಎಲ್ಲದಕ್ಕೂ ಎದೆಯೊಡ್ಡಿ ನಿಲ್ಲಬಲ್ಲ ಆತ್ಮಸ್ಥೈರ್ಯದ ಯುವಕ. ತನ್ನ ಉಡುಪಿನ ಜೊತೆಗೆ ಕೊರಳಲ್ಲಿ ನಿತ್ಯವೂ ನೀಲಿ ಶಾಲು ಧರಿಸಿಕೊಂಡೇ ಇರುವ ಅಪ್ಪಟ ಅಂಬೇಡ್ಕರ್ ಪ್ರೇಮಿ. ಸಂವಿಧಾನದ ಬಲದಲ್ಲಿ ನಿರ್ಭೀತವಾಗಿ ಸವಾಲು, ಸಮಾಜವನ್ನು ಎದುರು ಹಾಕಿಕೊಳ್ಳುವ ಛಲಗಾರ. ಹೋರಾಟಗಳಲ್ಲಿ ಆತನ ಇರುವಿಕೆಯೇ ಜನತೆಗೆ ಇಮ್ಮಡಿ ಶಕ್ತಿ. ಉತ್ತರ ಪ್ರದೇಶದ ಸಹರಾಣ್ಪುರದಲ್ಲಿ ಭೀಮ್ ಆರ್ಮಿ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಹೊಸಯುಗದ ದಲಿತ ಧ್ವನಿಯಾಗಿ ನಿಂತ ಆ ಯುವಕ ಚಂದ್ರಶೇಖರ್ ಆಝಾದ್ ‘ರಾವಣ್’.
ಚಂದ್ರಶೇಖರ್ ಆಝಾದ್ ವ್ಯಕ್ತಿತ್ವವೇ ಹಾಗೆ. ಆತನ ಮಾತು, ನಡೆ, ದೂರದೃಷ್ಟಿ ಮತ್ತು ಆತನ ಆಲೋಚನೆಗಳಲ್ಲಿರುವ ಸ್ಪಷ್ಟತೆ ಎಲ್ಲವೂ ಒಂದು ಕ್ಷಣಕ್ಕೆ ಭಗತ್ ಸಿಂಗ್ ನನ್ನು ನೆನಪಿಸುವಂತೆ ಮಾಡುತ್ತದೆ. ತನ್ನ ಸಮುದಾಯಕ್ಕೆ ಧ್ವನಿಯಾಗಿ ನಿಲ್ಲುವ ಉದ್ದೇಶದಿಂದ ಸಂಘಟನೆ ಕಟ್ಟಿಕೊಂಡ ಆಝಾದ್, ಬಳಿಕ ರಾಜಕೀಯ ಪಕ್ಷವನ್ನೂ ಘೋಷಿಸಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಡಾ.ಕನ್ಹಯ್ಯಾ ಕುಮಾರ್ ತಮ್ಮ ಪ್ರಶ್ನೆಗಳ, ಮಾತಿನ ಚಾಟಿ ಬೀಸಿ ಆಡಳಿತ ಸರಕಾರದ‌ ನಿದ್ದೆಗೆಡಿಸುತ್ತಿದ್ದುದು ಒಂದೆಡೆಯಾದರೆ, ಇತ್ತ ತನ್ನ ಭೀಮ್ ಆರ್ಮಿ ಸಂಘಟನೆ ಮೂಲಕ ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುತ್ತ ದಲಿತರನ್ನು ಒಗ್ಗೂಡಿಸುವ ಆಝಾದ್ ಕೂಡಾ ಕೇಂದ್ರಕ್ಕೆ ಒಂದು ಬಗೆಯ ರಗಳೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ದೇಶಾದ್ಯಂತ ಹಲವಾರು ಘಟನೆಗಳು, ಹಿಂಸಾಚಾರ ನಡೆದಿವೆ. ಮೋದಿ ಸರಕಾರದ ಅವಧಿಯಲ್ಲಿ ಬಹಳಷ್ಟು ಜನ ನಿರೀಕ್ಷಿಸಿದಂತೆಯೇ ಹಿಂಸಾಚಾರ ಹೆಚ್ಚಿದೆ. ಸಿಎಎ, ಎನ್ನಾರ್ಸಿ ಪ್ರತಿಭಟನೆ ಸೇರಿದಂತೆ ಇತ್ತೀಚೆಗೆ ನಡೆದ ಹತ್ರಾಸ್ ಅತ್ಯಾಚಾರ ಪ್ರಕರಣದ ಪ್ರತಿಭಟನೆ ವರೆಗೆ ಹಲವಾರು ಸಾರ್ವಜನಿಕ ಹೋರಾಟಗಳಲ್ಲಿ ಚಂದ್ರಶೇಖರ್ ಆಝಾದ್ ಭಾಗವಹಿಸಿದ್ದಾರೆ. ಆದರೆ, ಆಝಾದ್ ಭಾಗವಹಿಸಲು ಹೊರಟ ಹಲವು ಪ್ರತಿಭಟನೆಗಳ ವೇಳೆ ಆತನನ್ನು ಬಂಧಿಸಲಾಗಿದೆ. ಹತ್ರಾಸ್ ಪ್ರತಿಭಟನೆ ಸಂದರ್ಭದಲ್ಲೂ ಆಝಾದ್ ಬಂಧನಕ್ಕೊಳಗಾದರು. ಸಿಎಎ ಹೋರಾಟದ ಸಂದರ್ಭಗಳಲ್ಲಂತೂ ಎಲ್ಲಿ ಭಾಷಣಕ್ಕೆ ಹೊರಟರೂ ವೇದಿಕೆ ತಲುಪುವ ಮೊದಲು ಪೊಲೀಸರು ಆತನನ್ನು ಸುತ್ತುವರಿದು ಬಂಧಿಸುತ್ತಿದ್ದರು. ಆಝಾದ್ ಭಾಗವಹಿಸಿದ್ದಾರೆ ಎಂದು ಭಾವಿಸಲಾಗುವ ಬಹಳಷ್ಟು ಕಾರ್ಯಕ್ರಮಗಳಲ್ಲಿ ಆತನನ್ನು ಬಂಧಿಸಿದ್ದೇ ಹೆಚ್ಚು. ಹಾಗಾಗಿ ಆಝಾದ್ ಗೆ ಪೊಲೀಸರು ತವರೂರಿಗೆ ಕರೆದೊಯ್ಯಲು ಬರುವ ಸಂಬಂಧಿಗಳಂತಾಗಿಬಿಟ್ಟಿದ್ದಾರೆ. ಬಂಧನಕ್ಕೆ ಪೊಲೀಸರು ನೀಡುವ ಕಾರಣವೆಂದರೆ, ಆತ ಭಾಗವಹಿಸಿದರೆ ಅಲ್ಲಿನ ಪರಿಸ್ಥಿತಿಯನ್ನು, ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದು. ಒಂದು ಬಗೆಯ ವಾಸ್ತವ ಇಲ್ಲಿದ್ದರೂ, ಇತರ ನಾಯಕರ ಕಾರ್ಯಕ್ರಮಗಳು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಿ ಯಾವುದೇ ಅಡೆಯಿಲ್ಲದೆ ನಡೆಯುವುವಾಗ, ಆಝದ್ ರನ್ನು ಬಂಧಿಸಿ ಹೀಗೊಂದು ಕಾರಣ ನೀಡುವುದರ ಹಿಂದೆ ಬೇರೆಯೇ ಉದ್ದೇಶ ಇರುವುದು ಗೋಚರಿಸುತ್ತದೆ.

ನಮ್ಮ ಪೊಲೀಸರು ಸಭೆಗಳಲ್ಲಿ ಭಾಗವಹಿಸುವ ಸಾರ್ವಜನಿಕರನ್ನು ನಿಯಂತ್ರಿಸಲಾಗದಷ್ಟು ದುರ್ಬಲರೇ? ರಾಜಕೀಯ ತಂತ್ರಗಾರಿಕೆಯ ನಡುವೆ ಅಸಹಾಯಕರಾಗಿರುವ ಪೊಲೀಸರು ಇಂತಹ ಹೇಳಿಕೆಗಳನ್ನಷ್ಟೇ ನೀಡಬಲ್ಲರು ಎಂಬುದನ್ನು ಮತ್ತೆ ಹೇಳಬೇಕಿಲ್ಲ.
ಆಝಾದ್ ರನ್ನು ಏಕೆ ಬಂಧಿಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ನಮ್ಮ ಊಹೆಗೆ ನಿಲುಕದ್ದೇನಲ್ಲ. ಆಝಾದ್ ರ ಸಂಘಟನಾ ಶಕ್ತಿಯ ಅರಿವು, ಭಯ ಎಲ್ಲ ಪಕ್ಷಗಳಿಗೂ ಇದೆ. ಆತನ ನಡೆ, ನಿರ್ಭೀತತೆ ಖಂಡಿತವಾಗಿಯೂ ಅಪ್ರಾಮಾಣಿಕರನ್ನು, ಭ್ರಷ್ಟ ರಾಜಕೀಯ ನಾಯಕರನ್ನು ಅಲುಗಾಡಿಸಬಲ್ಲದು. ಅಲ್ಲದೆ ‘ದಲಿತರು ಸುಮ್ಮನಿರುತ್ತಾರೆ ಎಂದರೆ ಅವರು ಏನೂ ಮಾಡಲಾಗದ ದುರ್ಬಲರು ಎಂದು ಭಾವಿಸಬೇಡಿ. ನಾವು ಸಂವಿಧಾನದ ಮಾರ್ಗವನ್ನು ಅನುಸರಿಸುತ್ತಿದ್ದೇವೆ ಅಷ್ಟೆ’ ಎಂದು ಆಝಾದ್ ಹೇಳುವ ಮಾತು ಎರಡೂ ಬಗೆಯಲ್ಲಿ ಗಟ್ಟಿ ಗೋಡೆಯ ಹಾಗೆ ನಿಲ್ಲುತ್ತದೆ.

ಆಝಾದ್ ದೇಶಾದ್ಯಂತ ಸಂಚರಿಸಿ ಭಾಷಣ, ಪ್ರಚಾರ ಕೈಗೊಂಡರೆ, ಮುಂದಿನ ದಿನಗಳಲ್ಲಿ ದಲಿತ ಭಾರತದ ಹೊಸ ಚರಿತ್ರೆ ಬರೆಯಬೇಕಾದೀತು. ಆ ಸತ್ಯವೇ ಆಝಾದ್ ರನ್ನು ಆಗಾಗ ಬಂಧಿಸಿ, ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಮಾಡಲು ಕಾರಣ. ಬೆಂಗಳೂರಿಗೆ, ಹೈದರಾಬಾದಿಗೆ ತಲುಪಬೇಕಾಗಿದ್ದ ಆಝಾದ್, ಅರ್ಧ ದಾರಿಯಲ್ಲೇ ಬಂಧನಕ್ಕೊಳಗಾಗುತ್ತಾರೆ. ಇತ್ತ ದಲಿತ ಸಮುದಾಯದ ಜನರೂ ಸೇರಿದಂತೆ ಹೋರಾಟ ಮನೋಭಾವದ ಯುವಕರು ಆಝಾದ್ ಭಾಷಣ ಆಲಿಸಲು, ಆತನನ್ನು ಕಣ್ಣಾರೆ ಕಾಣಲು ತುದಿಗಾಲಲ್ಲಿ ನಿಂತಿರುವಾಗ ಇಂತಹ ನಿರಾಶೆಯ ಸುದ್ದಿಗಳು ಅವರ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಈ ವಾಸ್ತವವೂ ಆಝಾದ್ ಬಂದನಕ್ಕೆ ಸೂಚನೆ ನೀಡುವವರಿಗೆ ಗೊತ್ತಿರುತ್ತದೆ. ಆಝಾದ್ ಕುರಿತು ಕೇವಲ ಆಡಳಿತ ಪಕ್ಷವಷ್ಟೇ ತಲೆಕೆಡಿಸಿಕೊಂಡಿಲ್ಲ, ಬದಲಾಗಿ ಇತರ ಪ್ರಾದೇಶಿಕ ಪಕ್ಷಗಳಿಗೂ ಆಝಾದ್ ತಲೆನೋವಾಗಿ ಪರಿಣಮಿಸಿದ್ದಾರೆ.

ಚಂದ್ರಶೇಖರ್ ಆಝಾದ್ ಕೇವಲ ದಲಿತರ ಧ್ವನಿಯಷ್ಟೇ ಅಲ್ಲ. ಆತ ಒಟ್ಟಿನಲ್ಲಿ ದಮಿನತರ ಧ್ವನಿ. ಸಿಎಎ ಹೋರಾಟದ ಸಂದರ್ಭಗಳಲ್ಲಿ ಆಝಾದ್ ಭಾಗವಹಿಸಿ, ಉಂಟುಮಾಡಿದ ಪ್ರಭಾವ, ಉತ್ತರ ಭಾರತದ ಮುಸ್ಲಿಂ ಸಮುದಾಯಕ್ಕೆ ಮರೆಯಲಸಾಧ್ಯವಾದುದು. ಜನರ ನಡುವೆ ಬೆರೆತು ಧೈರ್ಯ ತುಂಬಿದ ಆಝಾದ್, ಎಲ್ಲರ ಮನಸ್ಸಿನಲ್ಲಿಯೂ ಅಂಬೇಡ್ಕರ್ ಅವರನ್ನು ನೆಲೆ ನಿಲ್ಲಿಸುತ್ತಾರೆ. ಆಝಾದ್ ರಂತೆ, ಬಲಿಷ್ಠ ಹೋರಾಟದ ಶಕ್ತಿಯಾಗಿ ನಿಂತಿರುವ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಅಂಥವರಿಗೂ ಬಂಧನ ಸಹಜವೇ. ಹತ್ರಾಸ್ ಪ್ರತಿಭಟನೆ ವೇಳೆ ಜಿಗ್ನೇಶ್ ರನ್ನೂ ಬಂಧಿಸಲಾಗಿತ್ತು. ಇಂತಹ ಘಟನೆಗಳು ನಿಜಕ್ಕೂ ದಲಿತ ಸಮುದಾಯ ಮುಂದೆ ಬರವುದನ್ನು ನೇರವಾಗಿ ತಡೆಯುವುದನ್ನೇ ತೋರಿಸುತ್ತಿವೆ. ಆದರೆ ಅಂತಹ ತಡೆಗಳನ್ನೇ ಬೇಧಿಸಿ ಮುಂಬರುವ ಶಕ್ತಿ ಆಝಾದ್ ಗೆ ಖಂಡಿತಾ ಇದೆ. ತುಳಿದಷ್ಟೂ ಚಿಮ್ಮುವ ಅದಮ್ಯ ಸ್ಥೈರ್ಯ ಚಂದ್ರಶೇಖರ್ ಆಝಾದ್ ರನ್ನು ಭವಿಷ್ಯ ಭಾರತದ ನಾಯಕನಾಗಿ ನಿಲ್ಲಿಸುವುದರಲ್ಲಿ ಅನುಮಾನವಿಲ್ಲ.

LEAVE A REPLY

Please enter your comment!
Please enter your name here