ಜೀವನದ ಜವಾಬ್ದಾರಿಯ ಅರಿವು ನಿನಗಿರಲಿ
ಬದುಕಿನ ಹೊಣೆಗಾರಿಕೆಗಳನ್ನು ನಿಭಾಯಿಸುತ್ತ ಸಾಗು
ಮಾನವೀಯತೆ ಪ್ರೀತಿ ಸಹಬಾಳ್ವೆ ನಿನ್ನ ಜೊತೆಗಾರರಾಗಲಿ
ದ್ವೇಷ ಹಗೆತನ ನಿನ್ನ ಬಳಿ ಸುಳಿಯದಿರಲಿ
ನೀರಿನ ಜೊತೆ ಕಸವಾಗಿ ಹರಿದು ಬಿಡಬೇಡ
ಸಮುದ್ರದ ಅಲೆಗಳಿಗೂ ಸರಿಯದ ಬಂಡೆ ನೀನಾಗು
ಏರಿಳಿತ ಸುಖ ದುಃಖಗಳು ಸಹಜ ಇಲ್ಲಿ
ಎಲ್ಲವನ್ನೂ ಸ್ವೀಕರಿಸುವ ಸ್ವಭಾವ ನಿನ್ನದಾಗಲಿ
ನಿನ್ನಿಂದ ಯಾರ ಮುಗುಳ್ಳಗೆಯೂ ಮಾಯವಾಗದಿರಲಿ ಪಯಣವಿದು ನೀ ಸಾಗು ಮುಗುಲ್ನಗುತ್ತ
ಸತ್ಯ ನ್ಯಾಯ ಪ್ರಾಮಾಣಿಕತೆಗಳಿರಲಿ ನಿನ್ನಲಿ ಇವುಗಳ ಹೊರತು ತೃಪ್ತಿಜೀವನ ಸಾಧ್ಯವಿಲ್ಲ
ಆಕರ್ಷಣೆಗಳಿಗೆಲ್ಲ ತಲೆಕೊಡದೆ ಮುಂದೆ ನಡೆ
ಅದೆಷ್ಟೋ ಜೀವಗಳ ಭರವಸೆಗಳಿವೆ ನಿನ್ನ ಮೇಲೆ
ನಾನು ನಾನೆಂದು ಬೀಗಿದ ಎಷ್ಟೋ ದುರಹಂಕಾರಿಗಳಿಲ್ಲ ಇಂದು ಮೃದುತ್ವ, ವಿನಯತೆ ನಿನ್ನ ಪಯಣದ ಭಾಗವಾಗಲಿ
ಮಾತುಗಳ ಮಧ್ಯೆ ಮೌನ ಎದುರಾದಾಗ ಸಹನೆ ವಹಿಸು ಕತ್ತಲನ್ನು ಹೋಗಲಾಡಿಸುವ ಬೆಳಕನ್ನು ಬಿಗಿಯಾಗಿ ಅಪ್ಪಿಕೊ
ತಿಳಿದಿರಲಿ ನಿನಗೆ ಪಯಣವಿದು ಶಾಶ್ವತ ತಾಣವಲ್ಲ
ನಗು ನಗುತ್ತ ಹೋಗುವ ಸೌಭಾಗ್ಯ ಒಲಿಸಿಕೊ
ತಿಳಿದೊ ತಿಳಿಯದೋ ಎಲ್ಲರೂ ಸರದಿ ನಿಂತಿದ್ದಾರೆ
ನೆನೆಪಿರಲಿ ನಿನ್ನ ಸರದಿಯು ಬರಲಿದೆ
ನಿನ್ನನ್ನು ತುಳಿದರೂ ನೋವಾಗದ ಹೂವಾಗು ನೀನು
ಸಿದ್ಧತೆ ನಡೆಸು ಮುಗುಲ್ನಗುತ್ತ ಬಾಡಲು
ಪ್ರೀತಿ ಸಂತೋಷ ಹಂಚುವ ಮನುಜನಾಗಲು ಪ್ರಯತ್ನಿಸು
ಓ ಮನವೇ! ಪಯಣವಿದು ಆದರ್ಶ ಪ್ರಯಾಣ ನಿನ್ನದಾಗಲಿ…!


















































