ಲೇಖಕಿ: ರಹೀನಾ ತೊಕ್ಕೊಟ್ಟು

“ಸರ್ವೇ ಜನಾ ಸುಖೀನೋಭವತು””(ಸರ್ವರಿಗೂ ಸುಖವಾಗಲಿ ) “ರಬ್ಬನಾ ಆತಿನಾ ಫಿದ್ದುನ್ಯಾ ಹಸನತನ್ …”( ಓ ನನ್ನ ಪ್ರಭುವೇ ಎಲ್ಲರಿಗೂ ಒಳಿತನ್ನು ದಯಪಾಲಿಸು) ಭಾಷೆ ವಿಭಿನ್ನ. ಆಶಯ ಒಂದೇ,ಅನನ್ಯವಾದದು.

ಈ ಫೇಸ್ಬುಕ್ ಏನೋ ಒಂದು ರೀತಿಯ ವಿಶೇಷ ಶಕ್ತಿ ಹೊಂದಿದೆ ಅಂತಾ ಅನಿಸಲ್ವಾ ? ನಿಮಗೆ? ಸುತ್ತ ಮುತ್ತ ಏನೇ ಕಂಡರೂ ಫೇಸ್ಬುಕ್ ನೆನಪಾಗುತ್ತೆ ಮನೆಯೊಳಗೆ ಏನೇ ನಡೆದರೂ ಪೇಸ್ಬುಕ್ ಜೊತೆ ಹಂಚುವ ತುಡಿತ ಉಂಟಾಗುತ್ತೆ. ಸುಂದರ, ಭೀಕರ ದೃಶ್ಯ ಏನೇ ಕಂಡರೂ ಎಲ್ಲೇ ಕಂಡರೂ ಸೆರೆ ಹಿಡಿದು ಮುಖ ಪುಸ್ತಕ ದಲ್ಲಿ ಹಾಕುವ ಗೀಳು. ಜಗತ್ತಿನಲ್ಲಿ ಏನೇ ನಡೆದರೂ ಫೇಸ್ಬುಕ್ ಮೂಲಕ ಸ್ಪಂದಿಸುವ ಮನಸ್ಸಾಗುತ್ತೆ. ದೇಹಕ್ಕೆ ಅಸೌಖ್ಯ ಬಾದಿಸಿದಾಗ ಪೇಸ್ಬುಕ್ ಜೊತೆ ಹೇಳಿಕೊಂಡು ಸಮಾಧಾನ ಪಡುತ್ತೇವೆ. ಜಗಳ ಕಾದು ವೈರಿಗಳಾಗಿ ಕೆಸರೆರೆಚಿಕೊಳ್ಳಲೂ ಷೇಸ್ಬುಕ್ ಸಾಕ್ಷಿಯಾಗುತ್ತೆ. ಸುಖ ದುಃಖ ಸಂತೋಷ ಭಾವಚಿತ್ರ ಮನದಚಿತ್ರ ಎಲ್ಲವನ್ನೂ ಯಾರೊಂದಿಗೆ ಹಂಚಿಕೊಳ್ಳಲಿ ಎಂಬ ಚಿಂತೆಯಿಲ್ಲ. ಮೊದಲು ನೆನಪಾಗುವುದು ಈ ಮುಖ ಪುಸ್ತಕ…
ಮುದ್ರಣ ಮಾಧ್ಯಮ ದ ಮೂಲಕ ಬರಹಗಳಲ್ಲಿ ಪ್ರಾಧನ್ಯತೆ ಪಡೆದು ಹೆಸರು ಗಳಿಸಿ ಏಕಾಮೇವಾಧಿತ್ಯ ಮೆರೆಯುತ್ತಿದ್ದ ಕಾಲ ತನ್ನ ಮೆರುಗನ್ನು ಕಳಚಿಕೊಂಡು ಹೀಗೂ ಉಂಟೇ? ಎಂದಾಲೋಚಿಸುವ ಪರಿಸ್ಥಿತಿಯನ್ನು ಈ ಫೇಸ್ಬುಕ್ ಒದಗಿಸಿಕೊಟ್ಟಿದೆ. ಬರೆದ ಬರಹ ಕಸದ ಬುಟ್ಪಿ , ಸಂಪಾದಕನ ಕತ್ತರಿ, ಅಂಚೆಯವನ ಅಚಾತುರ್ಯ, ಇವುಗಳ ಧಾಳಿಗೆ ತುತ್ತಾಗುತ್ತೆ ಅನ್ನುವ ಭಯವಿಲ್ಲ. … ನಿರೂಪಣೆ ವ್ಯಾಕರಣ ಅಕ್ಷರ ಪದ ಬಳಕೆ ಯಾವುದೂ ಗಮನಿಸಬೇಕೆಂಬ ಪ್ರಜ್ಞೆ ಯ ಅಗತ್ಯವಿಲ್ಲ (ಕೆಲವರಿಗೆ ಮಾತ್ರ) ಇಂತಹ ಗುಣ ಇರುವ ಈ ಮಾಧ್ಯಮ ನಮ್ಮ ಜೋಡಿ ಅಲ್ಲದೇ ಇನ್ನೇನು….

ಒಮ್ಮೊಮ್ಮೆ ಹೀಗೆ ಸುಮ್ ಸುಮ್ನೆ ವಿನಾ ಕಾರಣ ಬೋರ್ ಅನಿಸೋದು ಬೇಜಾರಾಗೋದು ಮನಸಿಗೆ ಕಿರಿ ಕಿರಿ ಅನಿಸೋದು ಎಲ್ಲಾ ಆಗುತ್ತೆ. ಆಗ ನೆನಪಾಗೋದು ಈ ಫೇಸ್ಬುಕ್. “Feeling bad” feeling bore ” ಅಂತ ಹಾಕಿ ನಿರಾಳ ಆಗುವ ಬಯಕೆ. ಆಮೇಲೆ ಬೋರ್ ಬ್ಯಾಡ್ ಗಳು ಮಯಾವಾಗಿ ಗೆಳೆಯರ ಕೀಟಲೆ ಲೈಕು ಸಾಂತ್ವನಗಳತ್ತ ಚಿತ್ತ……ಏನಾಯ್ತು ಸಹೋದರ ಅಂತ ಒಬ್ಬ ಗೆಳತಿ ಕೇಳುವುದೇ ತಡ ಬೋರ್ ಮಯಾ.ಏನಾಯ್ತು ?ನಿಮ್ಮ ದುಃಖ ದೂರವಾಗಲಿ ಅಂತ ಕೆಲವು ಗೆಳೆಯರು ಹಾರೈಸಿದ್ದೆ ತಡ ಈಕೆಗೇನೋ ಸಂತೃಪ್ತಿ. ಫೀಲಿಂಗ್ ಬ್ಯಾಡ್ ಎಂದು ಪೋಸ್ಟ್ ಮಾಡಿದವರ ಸಿಲ್ಲಿ ಮನೋಸ್ಥಿತಿಯನ್ನು ಕಂಡು ಕೆಲವು ಸೈಲೆಂಟ್ ಫೇಸ್ಬುಕ್ ಬಳಕೆದಾರರು ಏನು ಹುಚ್ಚು ಎಂದು ಹಲುಬಿದರೆ ಇನ್ನು ಕೆಲವರು ಓ ನನ್ನ ಹಾಗೆ ಇವರಿಗೂ ಆಗುತ್ತೆ ಅಂತಾ ಸಮಾಧಾನ ಪಡೋರು… ಒಂದು ಬರುತ್ತೆ ಒಂದು ಬರಲ್ಲ ಅಂತಿಲ್ಲ .ಜಗದ ನಾಟಕ ನೋಡಬೇಕೆ ದಿನಕ್ಕೊಮ್ಮೆ ಮುಖ ಪುಸ್ತಕ ನೋಡಿದರೆ ಸಾಕು ಮನ ಮಸ್ತಕ ಗೋಚರವಾಗುತ್ತೆ.. ಮೌನವಾಗಿ ನಾವು ಯಾರ್ಯಾರೊಂದಿಗೋ ಸಂವಹನ ಮಾಡುತ್ತೇವೆ ಮಾನವೀಯ ಅಗತ್ಯಗಳ ವಿನಿಮಯ ಮಾಡಿಕೊಳ್ಳುತ್ತೇವೆ. ನೋವು ದುಃಖ ಸಂತೋಷಗಳಿಗೆ ಮಾನಸಿಕವಾಗಿ ಸ್ಪಂದಿಸುತ್ತೇವೆ. ಅನಾರೋಗ್ಯದ ಕಾರಣ ಪ್ರವಾಸ ದ ಕಾರಣ ಕೆಲವು ದಿನ ಫೇಸ್ಬುಕ್ ಗೆ ವಿದಾಯ..ನಾನಿನ್ನು ಇಲ್ಲಿ ಬರೆಯುವುದಿಲ್ಲ ನನ್ನಿಂದ ನಿಮಗೆ ಬೇಸರವಾಗಿದ್ದರೆ ಕ್ಷಮಿಸಿ. …ಇತ್ಯಾದಿ ಪೋಸ್ಟ್ ಗಳನ್ನು ನಾವೆಲ್ಲ ನೋಡಿದ್ದೇವೆ.ಹೀಗೆ ಕಂಡಾಗ ನನ್ನ ಆಲೋಚನಾ ಲಹರಿಯ ಹಾದಿ ತೆರೆದು ಕೊಂಡಿತ್ತು. ಅನಾರೋಗ್ಯ ವನ್ನು ಅಪರಿಚಿತ ಗೆಳೆಯರೊಂದಿಗೆ ಹೇಳಿ ಹಾರೈಕೆ ಪ್ರಾರ್ಥನೆ ಗಳಿಸುವ ಉದ್ದೇಶವೆ ಅಥವಾ ವಿದಾಯ ಹೇಳ್ತೇನೆ ಅನ್ನುವಾಗ ಬೇಡ ಹಾಗೆ ಹೇಳ್ಬೇಡಿ ನೀವು ಬರೀಬೇಕು ನೀವು ಬೆಳೀಬೇಕು ಎಂಬ ಪ್ರೋತ್ಸಾಹ ,ಪ್ರಶಂಸೆ ಒತ್ತಾಯ ಕೇಳಿ ಬರಲೆಂಬ ಉದ್ದೇಶವೋ ಏನೋ…ನಕಾರಾತ್ಮಕ ಸಕಾರಾತ್ಮಕ ಎರಡೂ ವಿಷಯಗಳು ಅದರಲ್ಲಿರಬಹುದು.
ಮುದ್ರಣ ಮಾಧ್ಯಮ ದಲ್ಲಿ ನಾವೇಷ್ಟು ಬರೆದರೂ ಓದಿದ ವರ ಮೆಚ್ಚಿದವರ ವಿಷಯ ನಮಗೆ ತಿಳಿಯದು .ಪತ್ರಿಕೆಯ ಮಾರಾಟದ ಮೇಲೆ ಲೆಕ್ಕ ಹಾಕಬಹುದಷ್ಟೆ. ಮುಖ ಪುಸ್ತಕ ದ ಬರಹ ಹಾಗಲ್ಲ ಜಗದಗಲದ ಸಾವಿರಾರು ಮಂದಿ ಓದಿದ್ದರೂ ಕೆಲವೇ ಕೆಲವು ಮಂದಿ ಸ್ನೇಹಿತರು ನೀಡಿದ ಲೈಕು ಕಮೆಂಟ್ ಗಳು ಇಡೀ ಜಗತ್ತೆ ನನ್ನ ಕವನ ಬರಹ ಲೇಖನ ಓದಿದೆ ಅನ್ನುವ ಭಾವ ತಾಳುತ್ತೇವೆ.ಭಾವಚಿತ್ರಕ್ಕೆ ಸಿಕ್ಕ ಲೈಕು ನೋಡಿ ಒಳಗೊಳಗೇ ಸಂತೋಷ ಪಟ್ಟು ಹೆಮ್ಮೆ ಪಡುತ್ತೇವೆ. ಹಿರಿತಲೆಮಾರು ಈ ಫೇಸ್ಬುಕ್ ಜಗತ್ತಿನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಕವನ ಲೇಖನ ಮುಂತಾದ ಪ್ರಕಾರದಲ್ಲಿ ಪ್ರಯೋಗ ಮಾಡುತ್ತಾ ತಮ್ಮ ಮಕ್ಕಳ ವಯಸ್ಸಿನ ಯುವಕ /ತಿ ಯರ ಮೆಚ್ಚುಗೆ ಗಳಿಸಲು ಪ್ರಯತ್ನಿಸುವುದು ಕಾಣುತ್ತೇವೆ.ಇದು ನಿವೃತ್ತಿ ಆಗಿದ್ದೇವೆ ವಯಸ್ಸಾಯಿತು ಎಂದು ಕೊರಗುವ ಇತರರಿಗೆ ಮಾದರಿ. ದೇಹಕ್ಕೆ ವಯಸ್ಸಾದರೂ ಮನಸ್ಸಿಗಲ್ಲ ಎಂಬ ನಿಲುವು 25 -40 ರ ಯುವ ಜನಾಂಗಕ್ಕೆ ಸವಾಲು ಒಡ್ಡುವ ಕಾರ್ಯ ಪಾಠಪ್ರದವಾಗಿದೆ.

ಷೇಸ್ಬುಕ್ ನಲ್ಲಿ ಬರೆದು ಏನು ಪ್ರಯೋಜನ ಬರೆದು ಪುಸ್ತಕ ಮಾಡು ಇಲ್ಲ ಯಾವುದಾದರೂ ಪತ್ರಿಕೆಗೆ ಬರೀ ಅನ್ನುವ ಮಾತುಗಳ ನಡುವೆಯೂ ಹೆಸರು ಪ್ರತಿಷ್ಠೆ ಪ್ರಶಸ್ತಿ ಗಾಗಿ ಬರೆಯಬೇಕೆಂಬ ಹಂಬಲ ಇದ್ದಾಗ ಮಾತ್ರ ಮೇಲಿನ ಮಾತಿಗೆ ಇಂಬು ದೊರಕೀತು ಮನಸ್ಸಾಮಧಾನಕ್ಕಾಗಿ ಬರೆಯುವ ಬೆರಳು ಪ್ರಶಸ್ತಿ ಗಾಗಿ ಹೆಸರಿಗಾಗಿ ತಡಕಾಡದು. ಮುಂದೊಂದು ದಿನ ಫೇಸ್ಬುಕ್ ಸಾಹಿತಿಗಳೇ ಫೇಸ್ಬುಕ್ ಸಾಹಿತಿಗಳಿಗಾಗಿ ಒಂದಾಗುವ ದಿನ ದೂರವಿಲ್ಲ” ಫೇಸ್ಬುಕ್ ಆಕಾಡಮಿ” ಸ್ಥಾಪನೆಯೂ ಆದೀತು. ಹೀಯಾಳಿಸುವಿಕೆ ಹೀಗೆಳೆಯುವಿಕೆ ನಕಾರಾತ್ಮಕ ಅಭಿಪ್ರಾಯ ಇದಕ್ಕಿದ್ದರೂ ಬಳಕೆ ಮಾಡುವವರ ಅಚಾತುರ್ಯ ಇಂತಹವುಗಳಿಗೆ ಪುಷ್ಟಿ ನೀಡುತ್ತ. ಈ ಮೂಲಕ ಮನುಷ್ಯನ ಮಾನಸಿಕ ಭೌಧ್ಧಿಕ ಏರುಪೇರುಗಳಲ್ಲಿ ಸಕ್ರೀಯವಾದ ಪಾತ್ರ ಹೊಂದಿದೆ. ಆರಂಭದಲ್ಲಿ ಎರಡು ಆಶಯಗಳ ಪ್ರಸ್ತಾಪ ಇದೆ ..ನಾವೆಲ್ಲರೂ ಅದನ್ನ ಜೀವನದಲ್ಲಿ ಸದಾ ಮನದಲ್ಲಿ ಪಠಿಸುತ್ತೇವೆ ಆ ಹಾರೈಕೆಯ ಒಳಗೆ ನಮ್ಮ ಆಪ್ತರು ಮಾತ್ರ ಬರುತ್ತಿದ್ದ ಕಾಲ ಮಯಾವಾಗಿ ಈಗ ನಮಗರಿವಿಲ್ಲದೆ ಯೇ ಆ ಆಶಯವನ್ನು ಆ ಹಾರೈಕೆಯನ್ನು ಅಪರಿಚಿತ ಸ್ನೇಹಿತರಿಗೂ ಬಯಸುವಂತೆ ಮಾಡಿದೆ ಈ ಫೇಸ್ಬುಕ್. ಆ ಮೂಲಕ ಮಹಾನ್ ಗ್ರಂಥಗಳ ಸಾರ್ವತ್ರಿಕತೆ ಯ ಆಗಾಧತೆಯನ್ನು ಮನಗಾಣಲು ಸಾಧ್ಯವಿದೆ…. ನೀವೆಲ್ಲರೂ ಒಂದೇ ಸಮುದಾಯ ಎಂದು ಸಾರಿ ಸಾರಿ ಹೇಳುತ್ತಿದೆ.

LEAVE A REPLY

Please enter your comment!
Please enter your name here