ಸರ್ವರಿಗೂ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು – ಇಂಕ್ ಡಬ್ಬಿ ಬಳಗ
—ಶಾರೂಕ್ ತೀರ್ಥಹಳ್ಳಿ
8050801021
ಈದುಲ್ ಫಿತ್ರ್ ಸಾಮುದಾಯಿಕ ಐಕ್ಯತೆ, ಸಹೋದರತೆಯ ಸಂಕೇತವಾಗಿದೆ. ಶಿಸ್ತುಬದ್ಧ ಉಪವಾಸಾನುಷ್ಠಾನದ ಪವಿತ್ರ ತಿಂಗಳಾದ ರಮಝಾನ್, ಆತ್ಮಾಸಂಸ್ಸರಣೆಯ ಸಹಾನೂಭೂತಿಯ ತಿಂಗಳು ಕೂಡ ಹೌದು. ಈ ಪಾವನ ರಮಝಾನ್ ಮಾಸಕ್ಕೆ ವಿದಾಯ ಕೋರುವ ಈದುಲ್ ಫಿತ್ರ್, ರಮಝಾನ್ ಸಾರುವ ಉನ್ನತ ಆದರ್ಶಗಳ ಸವಿನೆನಪಿಗಾಗಿ ವಿಶ್ವದಾದ್ಯಂತ ಆಚರಿಸಲ್ಪಡುತ್ತದೆ.
ಸಮಗ್ರ ಮಾನವ ಕೋಟಿಯ ಕಲ್ಯಾಣಕ್ಕಾಗಿ ಪವಿತ್ರ ಕುರ್‍ಆನ್ ಪ್ರವಾದಿ ಮುಹಮ್ಮದರ(ಸ) ಮುಖಾಂತರ ಜಗತ್ತಿಗೆ ಅವತೀರ್ಣಗೊಂಡದ್ದು, ಪವಿತ್ರ ರಮಝಾನ್ ಮಾಸದ ಉಪವಾಸಾನುಷ್ಠಾನದ ಸಂದರ್ಭದಲ್ಲಿ ಹಸಿವೆ, ನೀರಡಿಕೆಯಿಂದ ತುಂಬಿದ ನಮ್ಮ ಉದರದಿಂದ ಕ್ಷಣ ಕ್ಷಣಕ್ಕೂ ಹೋರಡುವ ಹಸಿವಿನ ಧ್ವನಿಯು, ನಮ್ಮ ಆಸುಪಾಸಿನಲ್ಲಿ ಹಸಿವಿನಿಂದ ಬಳಲುವವರತ್ತ ನಮ್ಮ ಗಮನವನ್ನು ಮತ್ತು ಮಸೀದಿಗಳಲ್ಲಿ ಮಾರ್ದನಿಗೊಳ್ಳುವ ‘ ಅಲ್ಲಾಹು ಅಕ್ಬರ್’ (ದೇವನು ಮಹೋನ್ನತನು) ಅಲ್ಲಾಹನ ಸ್ತುತಿ ಹೇಗೋ, ಹಾಗೆಯೇ ಮಾನವೀಯ ಏಕತೆಯ ಸಂದೇಶವೂ ಆಗಿದೆ, ದೇವನು ಮಹೋನ್ನತನು ಎಂಬ ಧ್ಯೇಯ ವಾಕ್ಯವು, ಏಕತೆ, ಸಮಾನತೆ ಮತ್ತು ಸಹೋದರತೆಯ ಅಮರ ಸಂದೇಶವನ್ನು ಮನುಕುಲಕ್ಕೆ ಸಾರುತ್ತದೆ. ರಮಝಾನ್ ಉಪವಾಸಾನುಷ್ಠಾನದಿಂದ ಪಂಚೇದ್ರಿಯಗಳ ಮೇಲೆ ಪೂರ್ಣ ಹತೋಟಿ ಸಾಧಿಸಲು ನಮ್ಮಿಂದ ಸಾಧ್ಯವಾಗುತ್ತದೆ. ಒಂದು ಪೂರ್ಣ ಮಾಸಕಾಲ ಉಪವಾಸ ಆಚರಿಸಿದ ಮುಸ್ಲಿಮರೆಲ್ಲರಿಗೂ ಅನ್ನಹಾರ ಸೇವನೆಗೆ ಅನುಮತಿಸಲ್ಪಟ್ಟ ದಿನವೇ ಈದುಲ್ ಫಿತ್ರ್.
ಈದುಲ್ ಫಿತ್ರ್ ನಂದು ಇಸ್ಲಾಮ್ ಜಾರಿಗೊಳಿಸಿದ ಫಿತ್ರ್ ಝಕಾತ್ ಎಂಬ ನಿರ್ಬಂದ ದಾನವು ಬಡವರೂ ಹಬ್ಬದಲ್ಲಿ ಪಾಲ್ಗೊಡು ಸಂತೋಷ ಪಡಬೇಕೆಂಬ ಸದುದ್ದೇಶದಿಂದ ಕೂಡಿದೆ. ಈದುಲ್ ಫಿತ್ರ್ ಹಬ್ಬವನಾಚರಿಸಲು ಆರ್ಥಿಕ ಸಾಮಥ್ರ್ಯವಿಲ್ಲದ ಬಡವರಿಗೂ, ಅನಾಥರಿಗೂ, ಅಂಗವಿಕಲರಿಗೂ, ವಿಧವೆಯರಿಗೂ ಬಡತನದ ರೇಖೆಯಲ್ಲಿರುವ ನಿಕಟ ಸಂಬಂಧಿಕರಿಗೂ ಈ ನಿರ್ಬಂಧ ದಾನವನ್ನು ನೀಡಬಹುದಾಗಿದೆ.
ಸಮಾಜದ ದುರ್ಬಲ ವರ್ಗಗಳತ್ತ ಸದಾ ಅನುಕಂಪದಿಂದ ಇರಬೇಕೆಂಬ ನೀತಿ ಮಾರ್ಗವನ್ನು ಈ ವಿಶಿಷ್ಟ ದಾನವು ಮನುಕುಲಕ್ಕೆ ಸಾರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪತ್ತನ್ನು ತನ್ನ ಮತ್ತು ತನ್ನವರ ಸುಖಭೋಗಗಳಿಗೆ ಮಾತ್ರ ಖರ್ಚು ಮಾಡದೆ, ಆ ಸೊತ್ತಿನಲ್ಲಿ ಅನಾಥರ, ವಿಧವೆಯರ ಮತ್ತು ಅಪೇಕ್ಷಿತರ ಹಕ್ಕು ಇದೆ ಎಂಬುದನ್ನು ಮನಗಾಣಬೇಕು, ತಾನು ಗಳಿಸಿದ ಎಲ್ಲಾ ಸಂಪತ್ತನ್ನು, ತನ್ನ ಮತ್ತು ತನ್ನವರ ಹಿತಾಸತ್ತಿಗಾಗಿ ಮಾತ್ರ ವಿನಿಯೋಗಿಸುವುದನ್ನು ಇಸ್ಲಾಮ್ ನಿಷೇಧಿಸಿದೆ “ನೀನು ಗಳಿಸಿದ ಸಂಪತ್ತೂ ನಿನ್ನದಾಗುವುದಿಲ್ಲ, ಅದರಲ್ಲಿ ಶೇಕಡಾ ಎರಡೂವರೆ ಅಂಶವನ್ನು ನೀನು ಬಡವರಿಗೆ, ದೀನದಲಿತರಿಗೆ ಹಾಗೂ ಕಷ್ಟ ಕಾರ್ಪಣ್ಯಕ್ಕೊಳಗಾದವರಿಗೆ ಕಡ್ಡಯವಾಗಿ ನೀಡಲೇ ಬೇಕು ಇದು ನೀನು ದೇವನ ಮಾರ್ಗದಲ್ಲಿ ಪುಣ್ಯಸಂಪಾದನೆಗಾಗಿ ವ್ಯಯಿಸುವ ಪ್ರಕ್ರಿಯೆ. ಒಂದು ವೇಳೆ ನೀನು ಸ್ವಾರ್ಥ ದೃಷ್ಟಿಯಿಂದ ಅಲ್ಲಾಹನ ಕೃಪೆಯಿಂದ ಗಳಿಸಿರುವ ಸಂಪತ್ತಿನಲ್ಲಿ ಎರಡೂವರೆ ಅಂಶವನ್ನು “ಝಕಾತ್’ ನೀಡಲು ಹಿಂಜರಿಯುವೆ ಎಂದಾದರೆ ಆ ನಿನ್ನ ಎಲ್ಲಾ ಸಂಪತ್ತು ಅಲ್ಲಾಹನ ದೃಷ್ಟಿಯಲ್ಲಿ ಅಶುದ್ಧ ಮತ್ತು ಅದನ್ನು ಗಳಿಸಲು ಉಪಯೋಗಿಸಿದ ನಿನ್ನ ದೇಹವೂ ಮಲಿನವಿದೆ ಎಂದರ್ಥ. ನೀನು ಅಲ್ಲಾಹನ ಅನುಗ್ರಹದಿಂದ ಗಳಿಸಿರುವ ಸಂಪತ್ತಿನಲ್ಲಿ ದೀನದಲಿತರ ಬಡಬಗ್ಗರ ಹಾಗೂ ಕಷ್ಟ ಕಾರ್ಪಣ್ಯಕ್ಕೊಳಗಾದವರ ಒಂದು ಪಾಲು ಸೇರಿಕೊಂಡಿದೆಯೆಂದು ನೀನು ಅರ್ಥಮಾಡಿಕೊಳ್ಳಬೇಕು” ಎಂದು ಕುರ್‍ಆನ್ ಮಾನವಕುಲಕ್ಕೆ ಬೋಧಿಸಿದೆ.
ಝಕಾತ್ ಎಂಬುದು ಮುಸ್ಲಿಮರಿಗೆ ಬದುಕಿನಲ್ಲಿ ತ್ಯಾಗದ ಮಹತ್ವವನ್ನು ಬೋಧಿಸುತ್ತದೆ. ಮಾತ್ರವಲ್ಲದೆ ಅಗತ್ಯವಿದ್ದಾಗ ತನ್ನ ಹೆಚ್ಚಿನ ಸಂಪತ್ತನ್ನೂ ದೇವಮಾರ್ಗದಲ್ಲಿ ಖರ್ಚು ಮಾಡಲು ಪ್ರೋತ್ಸಾಹ ನೀಡುತ್ತದೆ. ‘ ಝಕಾತ್’ ಇಸ್ಲಾಮಿನಲ್ಲಿ ಬಡವ-ಬಲ್ಲಿದರೆಂಬ ಅಸಮಾನತೆಯನ್ನು ತೊಡೆದು ಹಾಕಲು ಯತ್ತಿಸುವುದಲ್ಲದೆ, ಬದುಕಿನುದ್ದಕ್ಕೂ ಪರೋಪಕಾರ ಪ್ರಜ್ಞೆ ಅನುಕಂಪ, ಸಮಾನತೆ ಮತ್ತು ಸೌಹಾರ್ದತೆಯನ್ನು ಪಾಲಿಸಲು ಪ್ರೇರಣೆ ನೀಡುತ್ತದೆ. ‘ ತನ್ನ ನೆರೆಹೊರೆಯವರು ಹಸಿವಿನಿಂದ ಬಳಲುತ್ತಿರುವಾಗ ಹೊಟ್ಟೆ ತುಂಬಾ ಉಂಡು ತೇಗುವವನು ಮುಸಲ್ಮಾನನಲ್ಲ, ನೀವು ನಿಮ್ಮ ವೈಯಕ್ತಿಕ ಜೀವನಕ್ಕೆ ಏನಲ್ಲಾ ಒಳಿತನ್ನು ಅಪೇಕ್ಷಿಸುತ್ತೀರೋ, ಅವೆಲ್ಲವೂ ನಿಮ್ಮ ಸಹೋದರ ಬಾಂಧವರಿಗೂ ದೋರೆಯುವಂತೆ ಬಯಸಿರಿ. ಅಲ್ಲಿಯ ತನಕ ನೀವಾರೂ ಪರಿಪೂರ್ಣ ಸತ್ಯವಿಶ್ವಾಸಿಗಳಾಗಲಾರಿರಿ’ ಎಂದು ಪ್ರವಾದಿ ಮುಹಮ್ಮದ್ರವರು(ಸ) ಮನುಕುಲಕ್ಕೆ ಕರೆ ನೀಡಿರುವರು.
ಈದುಲ್ ಫಿತ್ರ್ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಮನುಕುಲಕ್ಕೆ ಬೋಧಿಸಿ, ಬದುಕಿನ ಪಾವಿತ್ರ್ಯತೆಯನ್ನು ಹೆಚ್ಚಿಸುತ್ತದೆ ರವ್ಮಝಾನ್ ಮತ್ತು ಈದುಲ್ ಫಿತ್ರ್ ಸಾರುವ ಸತ್ಯ, ಶಾಂತಿ ಸೌಹಾರ್ದತೆಗಳು ಬದುಕಿನಲ್ಲಿ ಭರವಸೆಯನ್ನು, ಸ್ಪೂರ್ತಿಯನ್ನೂ ಮತ್ತು ನವ ಚೈತನ್ಯವನ್ನು ತುಂಬುದಕ್ಕೆ ನಮಗಿಂದು ಅಗತ್ಯವಾಗಿದೆ. ಬದುಕಿನ ಜಂಜಾಟ ಮರೆಯುತ್ತಿರುವ ನೈತಿಕ ಮೌಲ್ಯವನ್ನು ಮತ್ತು ಜಾಗೃತಗೊಳಿಸಿ, ಬದುಕಿಗೆ ಉನ್ನತ ಅರ್ಥವನ್ನು ಕಲ್ಪಿಪಸುವುದೇ ಹಬ್ಬಗಳ ಗುರಿ. ಈದುಲ್ ಫಿತ್ರ್ ಸಾರುವ ಸಮಾನತೆ ಮತ್ತು ಸಹೋದರತೆಯ ಮನುಷ್ಯನ ದೈನಂದಿನ ಬದುಕನ್ನು ಅರ್ಥಪೂರ್ಣಗೊಳಿಸುತ್ತದೆ ಮನುಷ್ಯನು ಸಂತೋಷಪಡಬೇಕಾದುದು ಕೇವಲ ತನ್ನೊಬ್ಬನ ವೈಯಕ್ತಿಕ ಏಳಿಗೆಯಲ್ಲಿ ಮಾತ್ರವಲ್ಲ ಬದಲಾಗಿ, ಸರ್ವ ಮನುಕುಲದ ಹಿತ ಸಾಧನೆಯಲ್ಲಿ ಸಂತೋಷಪಡಬೇಕು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಇಸ್ಲಾಮ್ ನೀಡಿದ ಉತ್ಕೃಷ್ಟ ಮೌಲ್ಯಗಳು ಬದುಕನ್ನು ಪಾವನಗೊಳಿಸುತ್ತದೆ.
ಈದುಲ್ ಫಿತ್ರ್ ಎಲ್ಲಾ ರೀತಿಯ ಮಾನವ ಪ್ರಯತ್ನಗಳ ಹೋರತಾಗಿಯೂ ಮತ್ತೂ ಕಾಲಿಡುತ್ತಿರುವ ಅಸಮಾನತೆ, ಜನಾಂಗ, ಭಾಷೆ ಪ್ರದೇಶಗಳ ಹೆಸರಿನಲ್ಲಿ ಹೋರಾಟ ಇನ್ನೊಬ್ಬರ ಹಕ್ಕುಗಳ ದಮನ, ದಿನಗಳಿದಂತೆಲ್ಲಾ ಸಮಾಜಿಕ ಬದುಕಿನಲ್ಲಿ ಕಾಣುವ ನೈತಿಕ ಮೌಲ್ಯಗಳ ಅಪಮೌಲ್ಯ ಇವೆಲ್ಲವುಗಳ ನಿವಾರಣೆಗಾಗಿ ಪ್ರವರ್ತಿಸುವ ಜನಾಂಗವಾಗಿ ಕಾರ್ಯ ಕ್ಷೇತ್ರಕ್ಕಿಳಿಯುವಂತೆ ನಮ್ಮನ್ನು ಒಳಿತಿನ ಕಡೆಗೆ ಆಹ್ವಾನಿಸುವ ಪಾವನ ಹಬ್ಬ.
ಈದುಲ್ ಫಿತ್ರ್ ಬೋಧಿಸುವ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಬದುಕಿನಲ್ಲಿ ರೂಡಿಸಿಕೊಂಡು ಮನುಕುಲದ ಶಾಂತಿಗಾಗಿ, ಸುಭಿಕ್ಷೆಗಾಗಿ, ನೆಮ್ಮದಿಗಾಗಿ ಅಲ್ಲಾಹನಲ್ಲಿ ಐಕ್ಯತೆಯಿಂದ, ಈ ಶುಭದಿನದಂದು ನಾವೆಲ್ಲಾ ಪ್ರಾರ್ಥಿಸೋಣ, ಈದುಲ್ ಫಿತರ್ ಸಂದೇಶವನ್ನು ನೆನಪಿಸಿಕೊಂಡು, ಮುಸ್ಲಿಮರಲ್ಲಿ ಮಾತ್ರವಲ್ಲ, ಮುಸ್ಲಿಮೇತರರಲ್ಲೂ ಸದಾ ಸೌಹಾರ್ದತೆಯಿಂದ ಅನ್ಯೋನ್ಯತೆಯಿಂದ, ಮಾನವೀಯತೆಯಿಂದ ಬದುಕನ್ನು ಸಾರ್ಥಕಗೊಳಿಸೋಣ, ಅರ್ಥಪೂರ್ಣವಾಗಿರಿಸೋಣ.