ನಿನಗೆ ಹಣ ಬೇಡ
ಆ ನೋಟಲಿ ಮಾತ್ರ ನೀನಿರುವಿ
ಗೋಡ್ಸೆಯ ಪಿಸ್ತೂಲಿಗಿರುವ ದೇಶಭಕ್ತಿ…!
ನಿನ್ನ ಕೈಯ ತುಂಡು ಕೋಲಿಗಿಲ್ಲ…
ಕ್ಷಮಿಸಿ ಬಿಡು ಬಾಪೂ…!

ಕುರುಡು ಕಾಂಚಾಣ ಝಣಝಣ
ಬೆಲೆಬಾಳುವ ಕೋಟು ಸೂಟಿನಲ್ಲಿರುವ ದೇಶ ಭಕ್ತಿ …
ನಿನ್ನ ತುಂಡುಡುಗೆಯಲ್ಲಿ ಇಲ್ಲ
ಕ್ಷಮಿಸಿ ಬಿಡು ಬಾಪೂ…!

ದ್ವೇಷಿಸುವ ಕೊಲ್ಲುವ
ಮನಸ್ಥಿತಿಗಿರುವ ದೇಶಭಕ್ತಿ…!
ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತಸ್ವರೂಪವೇ ಅಹಿಂಸೆ
ಎಂಬ ನಿನ್ನ ಮನಸ್ಥಿತಿಯಲ್ಲಿಲ್ಲ
ಕ್ಷಮಿಸಿ ಬಿಡು ಬಾಪೂ….!

ಹೊಡಿ ಬಡಿ ಕೊಲ್ಲು
ಅಕ್ರಮ ಅನ್ಯಾಯದಲ್ಲಿರುವ ದೇಶಭಕ್ತಿ….!
ಪ್ರೇಮ ತುಂಬಿದ ಬಟ್ಟಲಲ್ಲಿ ಇಲ್ಲ
ನಿನ್ನ ಒಡೆದ ಕನ್ನಡಕದಲಿಲ್ಲ
ಕ್ಷಮಿಸಿ ಬಿಡು ಬಾಪೂ….!

ಧರ್ಮ ದ್ವೇಷದಲ್ಲಿರುವ ದೇಶಭಕ್ತಿ…!
ನಿನ್ನ ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ
ಮಾತಲಿಲ್ಲ
ನಿನ್ನ ಬಾಗಿದ ದೇಹದಲಿಲ್ಲ
ಕ್ಷಮಿಸಿ ಬಿಡು ಬಾಪೂ…!

ದ್ವೇಷರಾಜಕಾರಣದಲ್ಲಿರುವ ದೇಶಭಕ್ತಿ….!
ನಿನ್ನ ಪ್ರಗತಿಯ ಆರೋಗ್ಯಕರ
ಸಂಕೇತಗಳಲ್ಲಿಲ್ಲ
ಕ್ಷಮಿಸಿ ಬಿಡು ಬಾಪೂ…!
.
ಸತ್ತು ಹೋದ
ಆತ್ಮಸಾಕ್ಷಿಯಲ್ಲಿರುವ ದೇಶಭಕ್ತಿ…!
ನಿನ್ನ ಪುಣ್ಯ ಆತ್ಮದಲ್ಲಿಲ್ಲ
ಸಣಕಲು ಜೀವದಲ್ಲಿಲ್ಲ
ಕ್ಷಮಿಸಿ ಬಿಡು ಬಾಪೂ….!

ನನ್ನ ಧರ್ಮ ಶ್ರೇಷ್ಠ ಎನ್ನುವ
ದೇಶ ಭಕ್ತಿ…!
ಎಲ್ಲ ಧರ್ಮಗಳ ಮೂಲ ಸತ್ಯವನ್ನು ನಾನು ನಂಬುತ್ತೇನೆ ಎಂದು ಹೇಳಿದ ನಿನ್ನ ಮಾತಲಿಲ್ಲ
ಕ್ಷಮಿಸಿ ಬಿಡು ಬಾಪೂ…!

ಪರಸ್ಪರ ಧರ್ಮ ಧರ್ಮಗಳ
ಕಚ್ಚಾಡಿಸುವವರಲ್ಲಿರುವ ದೇಶ ಭಕ್ತಿ….!
ಸಕಲ ಜೀವಿಗಳೊಂದಿಗೆ ಸ್ನೇಹದಿಂದ ಇರುವವನೇ ಉತ್ತಮ ವ್ಯಕ್ತಿಯಾಗಬಲ್ಲ ಎಂಬ ನಿನ್ನ ತತ್ವದಲಿಲ್ಲ
ಕ್ಷಮಿಸಿ ಬಿಡು ಬಾಪೂ….!

ಮಾಡಿಟ್ಟ ಹಣ ಕೂಡಿಟ್ಟ ಸಂಪತ್ತು
ಚಿರಂಜೀವಿಗಳಂತೆ ಬದುಕುವ
ನಮ್ಮ ದೇಶ ಭಕ್ತಿ…!
ನಾಳೆಯೇ ನೀವು ಸಾಯುತ್ತೀರಿ ಎಂದೇ ಇಂದು ಬದುಕಿ ಎಂಬ ನಿನ್ನ ಆದ್ಯಾತ್ಮದಲ್ಲಿಲ್ಲ
ಕ್ಷಮಿಸಿ ಬಿಡು ಬಾಪೂ….!

ಪರಮಾಣು ಅಸ್ತ್ರ
ಯುದ್ದ ಇವುಗಳಲ್ಲಿರುವ ದೇಶಭಕ್ತಿ….!
ನೀನು ಹೇಳಿದ
ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂಬುದರಲ್ಲಿಲ್ಲ
ಕ್ಷಮಿಸಿ ಬಿಡು ಬಾಪೂ….!

ಆಶೆ ಸ್ವಾರ್ಥ ಅಧಿಕಾರ
ಅಹಂಕಾರದಲ್ಲಿರುವ ದೇಶಭಕ್ತಿ….!
ನಿನ್ನ ಸರಳತೆಯಲ್ಲಿಲ್ಲ
ನಿನ್ನ ಮೂರು ಮಂಗನಲ್ಲಿಲ್ಲ
ಕ್ಷಮಿಸಿ ಬಿಡು ಬಾಪೂ….!

ಭಾಷಣ ಬರಹ ಉಪನ್ಯಾಸದಲ್ಲಿರುವ ದೇಶಭಕ್ತಿ….!
ಈಶ್ವರ್ ಅಲ್ಲಾಹ್ ತೇರೇ ನಾಮ್
ಸಬ್ಕೋ ಸನ್ಮತಿ ದೇ ಭಗವಾನ್ ತತ್ವದಲ್ಲಿಲ್ಲ
ಕ್ಷಮಿಸಿ ಬಿಡು ಬಾಪೂ…!

ತಂತ್ರ ಯಂತ್ರ ಮಂತ್ರದಲ್ಲಿರುವ
ದೇಶ ಭಕ್ತಿ ….!
ನಿನ್ನ ಚರಕದಲ್ಲಿಲ್ಲ
ಕ್ಷಮಿಸಿ ಬಿಡು ಬಾಪೂ….!

ನಮ್ಮ ಕಪಟ ಆದ್ಯಾತ್ಮದಲ್ಲಿರುವ
ದೇಶ ಭಕ್ತಿ….!
ನೀನು ಕೊನೆಯ ಉಸಿರಲ್ಲಿ ಹೇಳಿದ
ಹೇ ರಾಮಲ್ಲಿ ಇಲ್ಲ
ಕ್ಷಮಿಸಿ ಬಿಡು ಬಾಪೂ…..!

ಜಲೀಲ್ ಮುಕ್ರಿ.

LEAVE A REPLY

Please enter your comment!
Please enter your name here