ಲೇಖಕರು : ಉಮರ್ ಫಾರೂಕ್, ಇಸ್ಲಾಂಪೂರ (ಇಳಕಲ್ಲ).

1980 ರ ಅಗಸ್ಟ್ 13 ರಂದು ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡಕ್ಕೆ ಇಂದಿಗೆ 42 ವರ್ಷಗಳು ತುಂಬಿದವು.

ಇದು ಆಕಸ್ಮಾತ್ತಾಗಿ ಜರುಗಿದಂತಹ ಸನ್ನಿವೇಶವಲ್ಲ. ಅಮಾಯಕರ ಮೇಲಾದ ಅನಿರೀಕ್ಷಿತ ದಾಳಿಯೂ ಅಲ್ಲ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದವರ ಎದೆ ಮೇಲೆ ನಿಂತು ಕೇಕೆ ಹಾಕುತ್ತಿದ್ದ ರಾಕ್ಷಸರ ಪೂರ್ವ ನಿಯೋಜಿತ ಅಟ್ಟಹಾಸವಾಗಿತ್ತದು. 1980 ಆಗಸ್ಟ್ 13 ರಂದು ಉತ್ತರಪ್ರದೇಶದ ಮೊರಾದಾಬಾದ್ ಪಟ್ಟಣದ ಈದ್ಗಾವೊಂದರಲ್ಲಿ ಈದ್ ನಮಾಜ್‌ಗಾಗಿ 50 ಸಾವಿರಕ್ಕೂ ಹೆಚ್ಚು ಮುಸಲ್ಮಾನರು ನೆರೆದಿದ್ದರು. ಆಗ ಅಲ್ಲಿ ನೆರೆದಿದ್ದ ಮುಸಲ್ಮಾನರ ಮಧ್ಯೆ ಹಂದಿಗಳು ಓಡಾಡತೊಡಗಿದವು. ಹಂದಿ ಎಂಬ ಪ್ರಾಣಿಯು ಮುಸಲ್ಮಾನರಿಗೆ ಅಪವಿತ್ರ ಮತ್ತು ನಿಷಿದ್ಧ. ಇದನ್ನು ಅರಿತೇ‌ ಉದ್ದೇಶಪೂರ್ವಕವಾಗಿ ಮುಸಲ್ಮಾನರ ಪವಿತ್ರ ಹಬ್ಬದ ದಿನದಂದು ಈದ್ಗಾ ಮೈದಾನದಲ್ಲಿ ಹಂದಿಗಳನ್ನು ಸುತ್ತಾಡಲು ಬಿಡಲಾಗಿತ್ತು. ಮುಸಲ್ಮಾನರು ಹಂದಿಯನ್ನು ಅಲ್ಲಿಂದ ತೆರವುಗೊಳಿಸುವಂತೆ ಪೊಲೀಸರಿಗೆ ಶಾಂತಿಯುತವಾಗಿಯೇ ವಿನಂತಿಸಿದರು. ಆದರೆ ಪೊಲೀಸರು ಹಂದಿಗಳನ್ನು ಆ ಸ್ಥಳದಿಂದ ಒಂದಿಂಚೂ ಅಲ್ಲಾಡಿಸುವ ಪ್ರಯತ್ನವನ್ನೇ ಮಾಡಲಿಲ್ಲ! ಇದು ಮುಸಲ್ಮಾನರ ಮತ್ತು ಪೊಲೀಸರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಆಗ ಪೊಲೀಸರು ಮತ್ತು ಪ್ರಾಂತೀಯ ಸಶಸ್ತ್ರ ಪಡೆಯ(PAC) ಸಿಬ್ಬಂದಿಗಳು ಏಕಾಏಕಿ ಮುಸಲ್ಮಾನರ ಮೇಲೆ ಅನಿರೀಕ್ಷಿತವಾಗಿ ಗುಂಡಿನ ಮಳೆಗೆರೆದರು. ಈ ಹಗಲು ಹತ್ಯಾಕಾಂಡದಲ್ಲಿ ಪೊಲೀಸರ ಗುಂಡೇಟಿಗೆ ನೂರಾರು ಮುಸಲ್ಮಾನರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡರು.

ಇನ್ನೊಂದು ವಿಷಯ ಆಗಸ್ಟ್ 13 ರಂದಾದ ಈ ಹತ್ಯಾಕಾಂಡ ಕೋಮುಗಲಭೆಯಾಗಿರಲಿಲ್ಲ. ಇದು ಪೊಲೀಸ್ ಮತ್ತು ಮುಸ್ಲಿಮರ ಮಧ್ಯೆ ಉಂಟಾದ ತಿಕ್ಕಾಟವಾಗಿತ್ತು. ಈ ತಿಕ್ಕಾಟವೇ ಹಿಂಸಾಚಾರ ರೂಪಕ್ಕೆ ತಿರುಗಿ ಭುಗಿಲೆದ್ದಿತ್ತು. ನಿರ್ದಾಕ್ಷಿಣ್ಯವಾಗಿ ಗುಂಡಿನ ಮಳೆಗೆರೆದ ಪೊಲೀಸರು ನೂರಾರು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದರು. ಈ ಹತ್ಯಾಕಾಂಡ ಮೊದಮೊದಲು ಕೋಮುವಾದಿಕರಣಗೊಂಡಿರಲಿಲ್ಲ. ಆದರೆ ಮರುದಿನ ಅಂದರೆ ಆಗಸ್ಟ್ 14 ರಂದು ಮುಸಲ್ಮಾನರ ಮೇಲಿನ ದ್ವೇಷವನ್ನೇ ಉಸಿರಾಗಿಸಿಕೊಂಡಿರುವ ಆರೆಸ್ಸೆಸ್ ಇಂತಹದ್ದೊಂದು ಸಂದರ್ಭದಲ್ಲಿ ಗಲಭೆ ಸೃಷ್ಟಿಸುವ ಉತ್ತಮ ವಾತಾವರಣವನ್ನು ಬಿಟ್ಟುಕೊಟ್ಟೀತೇ? ಅಂತೆಯೇ ಅಲ್ಲಲ್ಲಿ ಸಭೆಗಳನ್ನು ಪ್ರಾರಂಭಿಸಿದ ಆರೆಸ್ಸೆಸ್ ಅಮಾಯಕ ಹಿಂದೂ ಯುವಕರ ತಲೆಯಲ್ಲಿ ಕೋಮು ಭಿನ್ನಾಭಿಪ್ರಾಯಗಳನ್ನು ಬಿತ್ತತೊಡಗಿತು. ನಗರದಾದ್ಯಂತ ಮುಸ್ಲಿಮರ ವಿರುದ್ಧ ಅಭಿಯಾನ ನಡೆಸಿತು. ಪಿತೂರಿ ನಡೆಸತೊಡಗಿತು. ಪೊಲೀಸರಿಗೂ ಇದೇ ಬೇಕಾಗಿತ್ತು. ಏಕೆಂದರೆ ತಾವು ನಡೆಸಿದ ಹತ್ಯಾಕಾಂಡವನ್ನು ಹಿಂದೂ-ಮುಸ್ಲಿಂ ಗಲಭೆಯನ್ನಾಗಿ ಪರಿವರ್ತಿಸಿ, ತಾವು ಗುಂಡಿಕ್ಕಿ ನಡೆಸಿದ್ದ ಮುಸಲ್ಮಾನರ ಜನಾಂಗೀಯ ಹತ್ಯಾಕಾಂಡವನ್ನು ಮರೆಮಾಚಬೇಕಾಗಿತ್ತು.

ಆಗಸ್ಟ್ 14 ರಂದು ಆರೆಸ್ಸೆಸ್ ಕೋಮು ವಿಷ ಬೀಜ ಬಿತ್ತಿದ ಪರಿಣಾಮವಾಗಿ ಕೋಮುಗಲಭೆಗಳ ದಳ್ಳುರಿ ಮೊರಾದಾಬಾದ್ ಮಾತ್ರವಲ್ಲದೇ ನೆರೆಯ ನಗರವಾದ ಅಲಿಗಢ ಸಹಿತ ಗ್ರಾಮೀಣ ಪ್ರದೇಶಗಳಿಗೂ ಹರಡಿ ಅದರ ಬಿಸಿ ಅಲ್ಲಿಗೂ ತಟ್ಟಿತು. 2500 ಕ್ಕೂ ಹೆಚ್ಚು ಮುಸಲ್ಮಾನರ ಸಂಹಾರಕ್ಕೆ ಇದು ಕಾರಣವಾಯಿತು. ಕೋಮು ವಿಷಬೀಜ ತಲೆಯಲ್ಲಿ ತುಂಬಿಕೊಂಡ ಆರೆಸ್ಸೆಸ್ ಕಾರ್ಯಕರ್ತರು ಕೈಗೆ ಸಿಕ್ಕ ಮುಸಲ್ಮಾನರನ್ನೆಲ್ಲಾ ತುಂಡು ತುಂಡಾಗಿ ಕತ್ತರಿಸಿದರು. ಚಾಕುವಿನಿಂದ ಇರಿದು ಕೊಂದರು. ಮುಸ್ಲಿಂ ಎನ್ನುವ ಕಾರಣಕ್ಕೆ ಮಹಿಳೆಯರ ಮೇಲೆ ಮೃಗಗಳಂತೆ ಮುಗಿಬಿದ್ದು ಗುಂಪು ಅತ್ಯಾಚಾರವೆಸಗಿದರು. ದೊಡ್ಡವರು, ಚಿಕ್ಕವರು, ಮಕ್ಕಳು, ಮಹಿಳೆಯರೆನ್ನದೇ ಕೊಂದು ಬೆಂಕಿಯಲ್ಲಿ ಜೀವಂತ ದಹಿಸಿ ವಿಕೃತ ಆನಂದ ಪಟ್ಟರು. ದಲಿತ ಮುಸ್ಲಿಮರ ಮೇಲೆ ಜರುಗಿದ ಇಂತಹದೇ ಹಲವಾರು ಅಮಾನುಷ ಹತ್ಯಾಕಾಂಡಗಳ ಸಂಪೂರ್ಣ ಮಾಹಿತಿ ನನ್ನ “ಚಿಮ್ಮಿದ ರಕ್ತ” ಪುಸ್ತಕದಲ್ಲಿದೆ. ಕೃತಿಯನ್ನು ನಿರಂಕುಶ ಪ್ರಕಾಶನ ಬೆಂಗಳೂರು ಪ್ರಕಟಿಸಲಿದೆ.

ಪುಸ್ತಕ ಓದುವ ಆಸಕ್ತಿಯುಳ್ಳವರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ : +916366057457.

LEAVE A REPLY

Please enter your comment!
Please enter your name here