ಲೇಖಕರು : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

‘When I write I am not conscious whether I write for home or international readership. It is a probe into reality in a language of the environment in which I grew up’ – Dr. U. R. Ananthmurthy.

ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಾಹಿತ್ಯಿಕ ಚಲನಚಿತ್ರೋತ್ಸವದಲ್ಲಿ ಭಾಗವಿಸಲು ಹೋಗಿದ್ದಾಗ, ನನಗಲ್ಲಿ ಡಾ. ಯು.ಆರ್.ಅನಂತಮೂರ್ತಿ ಅವರ ಅರ್ಧಾಂಗಿಯಾದ ಎಸ್ಟರ್ ಅನಂತಮೂರ್ತಿ ಅವರನ್ನು ಕಂಡು ನಾನು ಉತ್ಸಾಹದ ಪುಟಿಚೆಂಡಾದೆ; ಅನಂತಮೂರ್ತಿ ಅವರನ್ನು ಒಮ್ಮೆ ಭೇಟಿಯಾಡುವ ಅವಕಾಶವಂತೂ ಅವರ ಅಂತ್ಯದೊಂದಿಗೆ ನನ್ನಿಂದ ತಪ್ಪಿಹೋಗಿತ್ತು. ಅಂದು ಆಗಸ್ಟ್ 22, 2014 ರಾತ್ರಿ ಮಿತ್ರನೊಬ್ಬ ಕರೆಮಾಡಿ ನನ್ನ ಅಚ್ಚುಮೆಚ್ಚಿನ ಸಾಹಿತಿ ಅವರ ತೀರಿಹೋದ ವಾರ್ತೆಯನ್ನು ಹೇಳಿದಾಗ, ಅವರನ್ನು ಭೇಟಿಯಾಗುವ ನನ್ನ ತೀರ್ವಇಚ್ಛೆ ಒಡೆದು ನುಚ್ಚು ನೂರಾಯಿತು. ಆದರೆ, ಅವರ ಕೃತಿಗಳನ್ನು ಅಧ್ಯಯನಿಸುತ್ತ ನಾನು, ಅವರ ಇರುವಿಕೆಯನ್ನು ಕಲ್ಪಿಸತೊಡಗಿದೆ. ನೋಡನೋಡುತ್ತ, ಅವರ ನಿರ್ಗಮನಕ್ಕೆ ಏಳು ವರುಷಗಳಾದವು. ಅಂದು, ನಮ್ಮ ಕಾಲೇಜಿನ ಮ್ಯಾಗಜೀನ್ ಗಾಗಿ ನಾನು, ಅನಂತಮೂರ್ತಿಯವರ ನಿಧನಕ್ಕೆ ದಿಗ್ಗಜರು ನೀಡಿದ ಹೇಳಿಕೆಗಳನ್ನು ಒಟ್ಟುಗೂಡಿಸಿ, ಲೇಖನವೊಂದನ್ನು ಪ್ರಕಟಿಸಿದ್ದೆ. ಈಗ ಅವರ ಸಂಕ್ಷೀಪ್ತ ಪರಿಚಯದೊಂದಿಗೆ, ಅವರ ಸಾಧನೆಗಳನ್ನು ಒಳಗೊಂಡ ಲೇಖನವನ್ನು ಬರೆಯಲು ಹೆಮ್ಮೆ ಎನಿಸುತ್ತಿದೆ.

ಡಾ. ಯು.ಆರ್.ಅನಂತಮೂರ್ತಿ ಅವರ ಪತ್ನಿಯವರಾದ ಎಸ್ಟರ್ ಅನಂತಮೂರ್ತಿ ಅವರೊಂದಿಗೆ.

ಮಾತಿನ ಮೂಲಕ ಎಲ್ಲರ ಮನಸ್ಸು ಗೆದ್ದವರು ಹಲವರಿದ್ದಾರೆ; ಲೇಖನಿಯ ಮೇಲೆ ನಿಯಂತ್ರಣವಿಟ್ಟು, ಕೃತಿಗಳ ಮೂಲಕ ಚಿರಸ್ಥಾಯಿಯಾದರೂ ಹಲವರಿದ್ದಾರೆ. ಆದರೆ, ಮಾತು ಮತ್ತು ಕೃತಿಗಳ ಮೂಲಕ ನಾಡಿನ, ದೇಶದವರೊಂದಿಗೆ ವಿದೇಶಿಗರ ಮನಸ್ಸು ಗೆದ್ದವರು- ದಿವಂಗತ ಡಾ. ಯು.ಆರ್.ಅನಂತಮೂರ್ತಿಯವರು! ನಮ್ಮ ದೇಶದಲ್ಲಿ ಸಾಹಿತ್ಯಕ್ಕಾಗಿ ನೀಡುವ ಅಲ್ಟಿಮೇಟ್ ಪ್ರಶಸ್ತಿಯಿದ್ದರೆ, ಅದು ‘ಜ್ಞಾನಪೀಠ ಪ್ರಶಸ್ತಿ’. ಗೌರವಾನ್ವಿತ ಜ್ಞಾನಪೀಠ ಮತ್ತು ಅದರವರೆಗಿನ ಹೆಚ್ಚು ಕಡಿಮೆ ಎಲ್ಲಾ ಸಾಹಿತ್ಯಿಕ ಪ್ರಶಸ್ತಿಗಳನ್ನು ಶ್ರೀಯುತರು ಬಹಳ ವಿನಮ್ರತೆಯಿಂದ ಸ್ವೀಕರಿಸಿ ನಾಡಿಗೆ ಹೆಮ್ಮೆ ಎನಿಸಿಕೊಂಡರು. ಇಂತಹ ಮಹಾನ್ ಜ್ಞಾನ ಜ್ಯೋತಿಯ ಜೀವನ ಶೈಲಿಯ ಕುರಿತು ಒಂದಿಷ್ಟು ಖಾಸಗಿ ಚರ್ಚೆ ನಡೆಸುವುದು ನನಗೆ ಒಲಿದು ಬಂದ ಅದೃಷ್ಟ.

ಡಾ. ಯು.ಆರ್.ಅನಂತಮೂರ್ತಿಯವರು ಡಿಸೆಂಬರ್ 21, 1932 ರಂದು ಹೆತ್ತವರ ಹಿರಿಯ ಸುಪುತ್ರರಾಗಿ ಜನ್ಮ ತಾಳಿದರು. ತಂದೆ ರಾಜಗೋಪಾಲಚಾರ್ಯ ಮತ್ತು ತಾಯಿ ಸತ್ಯಮ್ಮರವರಿಗೆ ಶ್ರೀಯುತರು ದಿವ್ಯ ಕಾಣಿಕೆಯಾದರು. ಯು.ಆರ್.ಎ ಹುಟ್ಟಿದ ಮನೆತನ ಶ್ರೀಮಂತವಾಗಿರಲಿಲ್ಲ; ಕಿತ್ತು ತಿನ್ನುವ ಬಡತನ ಪರಿಸರದಲ್ಲಿ ಹುಟ್ಟಿ ಬೆಳೆದರು. ಇವರ ಕುಟುಂಬ ಆರ್ಥಿಕವಾಗಿ ಹಿನ್ನಡೆಯಿದ್ದರೂ, ಸಾಂಸ್ಕೃತಿಕವಾಗಿ ಮೌಲ್ಯವುಳ್ಳದ್ದಾಗಿತ್ತು – ಅರಿವಿನ ಭದ್ರಕೋಟೆಯಾಗಿತ್ತು. ಅಜ್ಜಯ್ಯ ಪದ್ಮನಾಭ ಆಚಾರ್ಯ, ಶ್ರೀಯುತರಿಗೆ ಚಿಕ್ಕಿಂದಿನಿಂದಲೂ ಸಾಮರಸ್ಯದ-ವೈಚಾರಿಕತೆಯ ರಸದೌತಣವನ್ನು ಬಡಿಸಿ, ಬೆಳೆಸಿದರು. ಗುಣವಂತರೇ ಉತ್ತಮ ಕುಲದವರು; ಹುಟ್ಟಿನಿಂದ ಯಾರು ಮೇಲು-ಕೀಳರಲ್ಲ ಎಂದು ಮಗುವಿನ ಮೇಲೆ ಅಜ್ಜಯ್ಯವರ ಪ್ರಭಾವ ಗಾಢವಾಗಿ ಬೀರಿತು. ಹಾಗಾಗಿ, ಡಾ. ಯು.ಆರ್.ಎ ಅವರಿಗೆ ಮನೆಯಿಂದಲೇ ಪ್ರಾರಂಭಿಕ ಸುಶಿಕ್ಷಣ ಒದಗಿಸಿ, ಜ್ಞಾನದ ಭದ್ರ ಬುನಾದಿ ಹಾಕಲಾಯಿತು.

ಬದುಕಿನ ಪ್ರಾರಂಭಿಕ ದಿವಸಗಳಲ್ಲೇ ಯು.ಆರ್.ಎ ಅವರಿಗೆ ಜ್ಞಾನದಾಹ ಪ್ರಾರಂಭವಾಯಿತು. ಪ್ರೌಢ ಶಿಕ್ಷಣ ನಡೆಯುತ್ತಿರುವಾಗಲೇ, ಶಾಲೆಯ ಗ್ರಂಥಾಲಯದ ಬಹಳಷ್ಟು ಪುಸ್ತಕಗಳನ್ನು ಓದಿ, ತಮ್ಮ ಜ್ಞಾನದಾಹವನ್ನು ತಣಿಸಿ, ಅರಿವಿನ ಭಂಡಾರವನ್ನು ವೃದ್ಧಿಗೊಳಿಸಿದರು. ಶಾಲೆಯಲ್ಲಿ ನಡೆಯುತ್ತಿರುವ ಸಮಾರಂಭಗಳಿಗೆ ಗಣ್ಯಸಾಹಿತಿಗಳೆನಿಸಿದ ಬೇಂದ್ರೆ, ಮಾಸ್ತಿ, ಇಂತಹವರನ್ನೆಲ್ಲಾ ಉಪನ್ಯಾಸಗಳಿಗೆ ಆಹ್ವಾನಿಸುತ್ತಿದ್ದರು. ಮೂರ್ತಿ ಅವರು ಇಂತಹ ಸಭೆಗಳಿಗೆ ಗೈರು ಹಾಜರಾಗದೆ ಜ್ಞಾನದಿಗ್ಗಜರ ನುಡಿಮುತ್ತುಗಳಿಗೆ ಕಿವಿ ಕೊಟ್ಟು ಕೇಳಿ ಪ್ರಭಾವಿತರಾಗುತ್ತಿದ್ದರು. ಅಲ್ಲದೇ, ವಿದ್ಯಾಭ್ಯಾಸ ನಡೆಯುತ್ತಿರುವಾಗ, ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರಾದ ಕೆ.ವಿ.ಸುಬ್ಬಣ್ಣ ಅವರೊಂದಿಗೆ ಸ್ನೇಹ ಸಂಪರ್ಕ ಬೆಳೆಸಿ, ತಮ್ಮ ಅಕ್ಷರ ಸಂಪತ್ತನ್ನು ಇನ್ನೂ ವಿಸ್ತಾರಗೊಳಿಸಿದರು. ಇವರು ಬರೆದ ಹಲವು ಕಥೆ-ಕವನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಓದಗರಿಗಲ್ಲದೇ, ಗಣ್ಯಸಾಹಿತಿಗಳ ಮನ ಸೆಳೆದಿತ್ತು. ಅಲ್ಲದೇ, ಯು.ಆರ್.ಎ ರವರ ಸಾಹಿತ್ಯಾಸಕ್ತಿ ಎಷ್ಟರ ಮಟ್ಟಿಗೆ ಬೆಳೆದಿತ್ತು ಎಂದರೆ ಬೇಂದ್ರೆಯವರ ಹಾಗೆ ತಾವು ಚಿಕ್ಕಂದಿನಲ್ಲಿಯೇ ‘ಋಜುವಾತು’ ಎಂಬ ಕೈ ಬರಹ ಮಾಸ ಪತ್ರಿಕೆಯನ್ನು ಹೊರತಂದು, ನಿರ್ವಹಿಸಿದರು. ಹೀಗೆ ತಮ್ಮ ಸಾಹಿತ್ಯ ದಾಹ ತಣ್ಣರಿಸಲ್ಲದೇ, ಸಾಹಿತ್ಯಾಸಕ್ತರಿಗೆ ಸಂಪೂರ್ಣ ಪ್ರೋತ್ಸಾಹ ಒದಗಿಸಿ, ಎಲ್ಲರ ನಡುವೆ ಕಣ್ಮಣಿ ಎನಿಸಿಕೊಂಡರು.

ಇವರು 1954ರಲ್ಲಿ ಪ್ರಥಮ ಶ್ರೇಣಿಯಲ್ಲಿ ಬಿ.ಎ. ಆನರ್ಸ್ ಪದವೀಧರರಾದರು. ಮುಂದೆ ಎಂ.ಎ ಪದವಿಯನ್ನು ಪಡೆದರು. 1963ರಲ್ಲಿ ಯು.ಆರ್.ಎ ರವರು ಕುಟುಂಬ ಸಮೇತ ಇಂಗ್ಲೆಂಡಿಗೆ ಹೋಗಿ ಪಿ.ಎಚ್.ಡಿ.ಗಾಗಿ ಅಧ್ಯಯನ ನಡೆಸಿದರು. ಪಿ.ಎಚ್.ಡಿ ಮುಗಿಸಿ ಭಾರತಕ್ಕೆ ಹಿಂದಿರುಗಿ ಮೂರ್ತಿಯವರು Regional College of Education ಎಂಬ ವಿದ್ಯಾಸಂಸ್ಥೆಯಲ್ಲಿ ಇಂಗ್ಲಿಷ್ ವಿಷಯದ ರೀಡರ್ ಆಗಿ ಮೂರು ವರುಷಗಳ ಕಾಲ ಸೇವೆ ಸಲ್ಲಿಸಿದರು. ನಂತರ, ಹತ್ತು ವರ್ಷಗಳ ಸುದೀರ್ಘ ಕಾಲ ಮೈಸೂರು ವಿವಿಯಲ್ಲಿ ಇಂಗ್ಲಿಷ್ ವಿಭಾಗದ ರೀಡರ್ ಆಗಿ ಸೇವೆ ಸಲ್ಲಿಸಿದರು. 1978ರಲ್ಲಿ ಟಿಫ್ಸ್ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕ ಅನುಭವ ಪಡೆದರು. 1986-87ರಲ್ಲಿ ಏಷ್ಯನ್ ಭಾಷೆಗಳ ವಿಭಾಗದಲ್ಲಿ ಫುಲ್ ಬ್ರೈಟ್ ಪ್ರೊಫೆಸರ್ ಹುದ್ದೆ ಸ್ವೀಕರಿಸಿದರು. 1980-87 ರವರೆಗೆ ಮೈಸೂರು ವಿವಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಶ್ರಮಿಸಿದರು.

ಜೀವನದುದ್ದಕ್ಕೂ ಯು.ಆರ್.ಎ. ಅವರು ಶಿಕ್ಷಣ-ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ಪರಿಣತರೆನಿಸುತ್ತಾ ಬಂದವರು. ನಿವೃತ್ತರಾದ ನಂತರವೂ ಶೈಕ್ಷಣಿಕ ಸಂಬಂಧವನ್ನು ಕಳಚಿಕೊಳ್ಳಲಿಲ್ಲ. 1987ರಿಂದ 1991 ರವರೆಗೆ ಕೇರಳ ರಾಜ್ಯದ ಕೊಟ್ಟಾಯಂನ ಮಹಾತ್ಮಗಾಂಧಿ ವಿವಿಯಲ್ಲಿ ಕುಲಪತಿ ಆಗಿದ್ದರು. ಆಗಲೂ ತರಗತಿಗಳಿಗೆ ಹೋಗಿ ಬೋಧಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಎಲ್ಲಾ ಕಾಲೇಜುಗಳಿಗೆ ವೈಯುಕ್ತಿಕ ಗಮನ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಿದರು. ಅಲ್ಲಿನ ಜನರ ಮನ ಗೆದ್ದರು. ಇವರಿಂದ ಪ್ರಭಾವಿತರಾದ ಅಲ್ಲಿನ ಮಂದಿ, ಇವರ ಕೃತಿಗಳನ್ನು ಮಲಯಾಳಂಗೆ ಭಾಷಾಂತರಿಸಲು ಒತ್ತಾಯ ತಂದರು. ಶ್ರೀಯುತರು ಅಸ್ತಂಗತರಾದಾಗ ಅಲ್ಲಿಯೂ ಮೌನ ಆವರಿಸಿತು. ಪತ್ರಿಕೆಗಳ ಮುಖಪುಟದಲ್ಲಿ ಇವರ ಚಿತ್ರಗಳು ರಾರಾಜಿಸಿದ್ದವು.

ಯು.ಆರ್.ಎ ಅವರ ಕಾದಂಬರಿಗಳು:
1) ಸಂಸ್ಕಾರ – 1965
2) ಭಾರತೀಪುರ – 1973
3) ಅವಸ್ಥೆ – 1978
4) ಭವ – 1994
5) ದಿವ್ಯ – 2001

ಮುಂದೆ ನವದೆಹಲಿಯ National Trust Board ನ ಅಧ್ಯಕ್ಷರಾದರು. 1993 ರಿಂದ 1998 ರವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದರು. ನಡುವೆ ವಿದೇಶ ಪ್ರವಾಸ ಕೈಗೊಂಡು ಹಲವು ಉಪನ್ಯಾಸಗಳನ್ನು ನೀಡುತ್ತಿದ್ದರು. ವಿದೇಶಿ ಸಾಹಿತಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. 1998ರಲ್ಲಿ ಸಿರಿಯಾ ದೇಶಕ್ಕೆ ಭೇಟಿ ನೀಡಿ ಅರಬ್ ಲೇಖಕರೊಂದಿಗೆ ಸಂವಾದ ನಡೆಸಿದರು.

ಸಾಹಿತ್ಯ ಕ್ಷೇತ್ರ ಕಂಡ ಅಪರೂಪದ ಕೃಷಿಕ:
ಡಾ. ಅನಂತಮೂರ್ತಿ ಅವರು ಬರೆದಿರುವುದು ಕಡಿಮೆ ಇರಬಹುದು. ಗ್ರಂಥರೂಪಗಳಲ್ಲಿ ಕಡಿಮೆ ಇದ್ದರೂ, ಬರೆದಿರುವಷ್ಟು ರಚನೆಗಳು ಅತ್ಯುತ್ಕೃಷ್ಟ ಅಲ್ಲದಿದ್ದರೂ, ಉತ್ಕೃಷ್ಟ ಎಂದರೆ ತಪ್ಪಾಗದಿರುವುದಿಲ್ಲ. ಡಾ. ಯು.ಆರ್.ಎ. ಕನ್ನಡ ಸಾರಸ್ವತ ಲೋಕ ಕಂಡ ಒಬ್ಬ ವಿಶಿಷ್ಟ ಸಾಹಿತಿಗಳು, ಶ್ರೇಷ್ಠ ಚಿಂತಕರು ಮತ್ತು ಸಾಮಾಜಿಕ ವಿಮರ್ಶಕರು. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತಮ್ಮ ಸಾಹಿತ್ಯವನ್ನು ಕನ್ನಡಿಗರ ಮುಂದಿರಿಸಿದ್ದ ಯು.ಆರ್.ಎ ಯಾವುದೇ ವಿವಾದಕ್ಕೊಳಗಾಗಲು ಬಯಸದೆಯೇ ವಿವಾದಗಳ ಸುಳಿಯಲ್ಲಿ ಸಿಲುಕದ ವಿಶಿಷ್ಟ ಚೇತನ. ಸಂಸ್ಕಾರ, ಭಾರತೀಪುರ, ಅವಸ್ಥೆಯಂತಹ ಕಾದಂಬರಿಗಳು; ಪೂರ್ವಾಪರ, ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ ಇತ್ಯಾದಿಯಂತಹ ವಿಮರ್ಶೆಗಳು; ಘಟಶ್ರಾದ್ಧ, ಮೌನಿ ಮುಂತಾದ ಕಥನಗಳು… ಇವೆಲ್ಲವೂ ಮನುಕುಲವನ್ನು ಮತ್ತು ಸಮಾಜದ ಅಭ್ಯುದಯವನ್ನು ಒಂದು ವಿಭಿನ್ನ ದೃಷ್ಟಿಯಿಂದ ನೋಡುವ ಪ್ರಯೋಗವಾಗಿದೆ. ಇದು ಅನಂತಮೂರ್ತಿಯವರ ಅರಿವಿನ ಹಿರಿಮೆ; ಅವರು ಸಾಹಿತ್ಯಪ್ರೇಮಿಗಳಲ್ಲಿ ಗಳಿಸಿದ ಪೀಠದ ಗರಿಮೆ!!

ಕವನ ಸಂಕಲನಗಳು :

  1. ಹದಿನೈದು ಪದ್ಯಗಳು
  2. ಅಜ್ಜನ ಹೆಗಲ ಸುಕ್ಕುಗಳು
  3. ಮಿಥುನ

“ಮೌನದ ಕಣಿವೆ” ಕೇರಳದ ಪರಿಸರವನ್ನು ಕುರಿತಾದ ನೈಸರ್ಗಿಕ ಸಿರಿಮೆಯ ಲೇಖನವೆನಿಸಿದೆ. ಮಲೆನಾಡಿನ ನಿಸರ್ಗದಿಂದ ಬಂದ ಯು.ಆರ್.ಎ ರವರು ಆಗಲೂ ತಮ್ಮ ಮನಸ್ಸಿನಲ್ಲಿ ಮೂಡಿದ ಹಲವಾರು ಹೊಸ ವಿಷಯಗಳನ್ನು ಓದುಗರ ಮುಂದೆ ಚಿತ್ರಿಸಿದ್ದಾರೆ.

ಅನಂತಮೂರ್ತಿಯವರು ವಿವಾದಗ್ರಸ್ತರಾಗಿರುವುದನ್ನು ಕಂಡಾಗ ಕುವೆಂಪು ಅವರು ವಿಮರ್ಶೆಯ ಕುರಿತು ಹೇಳಿರುವ ಮಾತು ನೆನಪಾಗುತ್ತದೆ:
“ನಾ ಮುಳುಗುವಾಳಕ್ಕೆ ನೀ ಮುಳುಗಬಲ್ಯಾ?
ನಾ ಹಾರುವಗಲಕ್ಕೆ ನೀ ಹಾರಬಲ್ಯಾ?
ನಾನೇರುವೆತ್ತರಕೆ ನೀನೇರಬಲ್ಯಾ?”

ಆಗಸ್ಟ್ 22 2014 ರಂದು ಅನಂತ ಬೆಳಕು ಆರಿ, ದಿವ್ಯದೆಡೆಗೆ ಪಯಣ ಬೆಳೆಸಿದರು. ಅಮರ ಚೇತನದ ನಿರ್ಗಮನವಾಯಿತು. ಪ್ರಜ್ಞೆ, ಪರಿಸರದಲ್ಲಿ ಲೀನವಾದ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ದೇಶ ಹರಡಿತು. ಎಲ್ಲಾಕಡೆ ಮೌನ ಆವರಿಸಿತು. ವಿವಿಧ ಕ್ಷೇತ್ರದ ದಿಗ್ಗಜರು ಶ್ರೀಯುತರಿಗೆ ವಿವಿಧ ರೀತಿಯಲ್ಲಿ ಶೃದ್ಧಾಂಜಲಿ ಅರ್ಪಿಸಿದರು. ಕೆಲವುಗಳನ್ನು ಸಂಗ್ರಹಿಸಲು ಯತ್ನಿಸಿದೇನು!

‘ತಮ್ಮ’ನ ನಮನ:
“ಸಣ್ಣ ವಯಸ್ಸಿನಲ್ಲೇ ತಂದೆ ತೀರಿಕೊಂಡಾಗ ನನ್ನನ್ನು ಅಣ್ಣ ಚೆನ್ನಾಗಿ ನೋಡಿಕೊಂಡರು. ನಾನು ವೈದ್ಯಕೀಯ ವೃತ್ತಿ ಆಯ್ದುಕೊಂಡಾಗ ನನ್ನನ್ನು ಕರೆದು ಬರೀ ಹಣಕ್ಕಾಗಿ ವೃತ್ತಿ ಮಾಡಬೇಡ. ಮೌಲ್ಯಾಧಾರಿತ ಜೀವನ ನಡೆಸು ಎಂದು ಬೆನ್ನು ತಟ್ಟಿದರು” ಎಂದರು ಯು.ಆರ್.ಎ. ಅವರ ಸಹೋದರ ಡಾ.ಅನಿಲ್ ಕುಮಾರ್ ರವರು!

‘ವಿದ್ಯಾರ್ಥಿ’ಗಳ ‘ವಿದ್ಯಾ’ವಂತ ನಮನ:
ನಾಡಿನ ಸುಪ್ರಸಿದ್ಧ ಲೇಖಕಿ, ಬಹುಭಾಷಾ ಸಾಹಿತಿ, ಯು.ಆರ್.ಎ ಅವರ ವಿದ್ಯಾರ್ಥಿನಿ ಆದ ಪಾರ್ವತಿ. ಜಿ ಐತಾಳ್ ಅವರು “ಡಾ. ಯು.ಆರ್.ಎ. ನಾನು ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ ಮಾಡುತ್ತಿದ್ದಾಗ (1979-81) ನನಗೆ ಕಲಿಸಿದ ಮೇಷ್ಟ್ರು. ನಿಜ ಹೇಳಬೇಕು ಅಂದರೆ ನನಗೆ ಕಾವ್ಯವನ್ನು ಓದುವ ಕ್ರಮ ಹೇಗೆ ಅಂತ ಮೊದಲು ಹೇಳಿಕೊಟ್ಟವರೇ ಅವರು. ಮುಖ್ಯವಾಗಿ ನವ್ಯಕಾವ್ಯ ಸಂಕೀರ್ಣ ಶೈಲಿಯ ನವ್ಯ ಕವನಗಳಿಗೆ ಹೇಗೆ ಸ್ಪಂದಿಸಬೇಕು ಅನ್ನುವುದನ್ನು ಅವರು ತರಗತಿಯಲ್ಲಿ ಹೇಳಿಕೊಡುತ್ತಿದ್ದರು. ಕಾವ್ಯದ ಬರೇ ಹೊರಮೈಯನ್ನು ನೋಡಿದರೆ ಸಾಲದು. ಅದರ, ಒಳ ಸತ್ವದ ಬಗ್ಗೆ ಚಿಂತನೆ ಮಾಡುವ ಮೂಲಕ ಸತ್ಯವನ್ನು ಶೋಧಿಸಬೇಕು ಅನ್ನುತ್ತಿದ್ದರು. ಒಂದು ಹೊಸ ಕವನವನ್ನು ಕೈಗೆತ್ತಿಕೊಂಡ ಕೂಡಲೇ ಅದರ ಸಾರಾಂಶ ಹೇಳುವ ಮೂಲಕ ಅವರು ಕಳಿಸುತ್ತಿರಲಿಲ್ಲ. ಬದಲಾಗಿ, ನಮ್ಮಲ್ಲಿ ಕುತೂಹಲ ಮೂಡಿಸುತ್ತಿದ್ದರು. ನನಗೆ ಇನ್ನೂ ನೆನಪಿದೆ T.S. Eliot ನ ಪ್ರಸಿದ್ಧ ಕವನ ‘Waste Land’ನ್ನು ಕಲಿಸುವಾಗ ಅದಕ್ಕೆ ಸಮಾಂತರವಾಗಿ ನಿಲ್ಲುವ ಕನ್ನಡದ ಅಡಿಗರ ಕವನ ‘ಭೂಮಿಗೀತ’ದಿಂದ ಅನೇಕ ಸಾಲುಗಳನ್ನು ಉದ್ಧರಿಸುವ ಮೂಲಕ ನಮಗೆ ಚಿರಪರಿಚಿತವಾಗಿರುವ ಹಲವು ಪ್ರಮೆಯಗಳನ್ನು ಅವರು ನೀಡುತ್ತಿದ್ದರು. ಅಂಥವರ ವಿದ್ಯಾರ್ಥಿನಿ ಅಂತ ನಾನು ಇವತ್ತು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ” ಎಂದು, ನಾನು ಅವರಲ್ಲಿ ಯು.ಆರ್.ಎ ಅವರ ಕುರಿತು ಕೇಳಿದಾಗ, ಅವರು ಬರೆದು ಕೊಟ್ಟಿದ್ದರು.

“ಫ್ರೆಂಚ್ ಲೇಖಕ ಅಲ್ಬರ್ಟ್ ಕಮೂ ತನ್ನ ‘Happy Death’ ಕಾದಂಬರಿಯಲ್ಲಿ ಹೇಳಿದಂತೆ – ಅವರಲ್ಲಿ ಜೀವನದ ಕೊನೆಯ ಕ್ಷಣದವರೆಗೆ ಇದ್ದದ್ದು Will to Renunciation ಅಲ್ಲ ಬದಲಾಗಿ ಇದ್ದದ್ದು Will to Happiness. ಈ ಸಂತೋಷ ಪಡುವ ಇಚ್ಚಾಶಕ್ತಿ ನಮಗೆಲ್ಲ ಆದರ್ಶಪ್ರಾಯವಾದುದು. ಈಗ ಅವರ ಶಿಷ್ಯರೆಂದು ಹೆಮ್ಮೆ ಪಡುವ ನಾವು ನಿರ್ಧರಿಸಿದ್ದೇವೆ. ನಮ್ಮ ಗುರು ಅನಂತಮೂರ್ತಿಯವರು ನಿಜವಾದ ಪ್ರಜಾಪ್ರಭುತ್ವವಾದಿಗಳಾಗಿದ್ದರು, ಸರ್ವೋದಯ ಬಯಸುವ ಸಮಾಜವಾದಿ ಆಗಿದ್ದರು. ಅವರ ಕನಸಿನ ನಿಜವಾದ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ತಾತ್ವಿಕ ಹೋರಾಟ ನಡೆಸುವುದೇ ನಾವು ನಮ್ಮ ಗುರುಗಳಿಗೆ ಸಲ್ಲಿಸುವ ಅರ್ಥಪೂರ್ಣ ಶೃದ್ಧಾಂಜಲಿಯಾಗಿರುತ್ತದೆ” ಎಂದು ಅವರ ನೇರ ಶಿಷ್ಯ ಮತ್ತು ನನ್ನ ನೆಚ್ಚಿನ ಗುರುಗಳಾದ ಡಾ.ಹಯವದನ ಉಪಾಧ್ಯಾಯ್ ಸರ್ ಅವರು ತಮ್ಮ ಗುರುಗಳ ಕುರಿತು ಬರೆದು ನಮನ ಸಲ್ಲಿಸಿದರು.

“ಅನಂತಮೂರ್ತಿ ಎಂದೂ ತಾನೊಬ್ಬ ಬರಿಯ ಲೇಖಕ ಎಂಬಂತೆ ಇದ್ದವರಲ್ಲ ಎಂಬುವುದು ಅವರ, ಅವರ ಪೂರ್ವ ಸೂರಿಗಳು ಅವರಿಗೆ ದಯಪಾಲಿಸಿದ ವಿವೇಕದ ವಿಶೇಷ ಹಿರಿಮೆ. ಇವತ್ತು ಲೇಖಕರಾಗಿಯೂ, ಆಪ್ತ ಹಿರಿಯ ವಿವೇಕಯುತರಾಗಿಯೂ, ನಮ್ಮ ನಿಮ್ಮೆಲ್ಲರ ಮಿತ್ರ ಮಾರ್ಗದರ್ಶಿಯಾಗಿಯೂ, ಸುಟ್ಟ ಪಟಾಕಿಗಳ ಸೀದ ವಾಸನೆ ಅಡರಿದ ಮೇಲೆಯೂ ಸುರಗಿಯಾಗಿ ಕಮ್ಮನೆ ಅರಳಿ ನಮ್ಮೊಡನೆ ಬದುಕುತ್ತಿರುವವರು ಅವರು. ದ್ವೇಷವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅದನ್ನು ಸಂವಾದವಾಗಿ, ಆ ಮೂಲಕ ಪ್ರೀತಿಯಾಗಿ ಪರಿವರ್ತಿಸಲು ಗಾಂಧಿಯ ದಾರಿ ಹಿಡಿದು ಅವರು ದುಡಿದವರು. ಕಾರಂತರು, ಎಡ್ವರ್ಡ್ ಸೈದ್ ಪ್ರತಿಪಾದಿಸಿ ಪ್ರಸಿದ್ಧಗೊಳಿಸಿದ Speaking Truth to Power ಎಂಬ ಒಕ್ಕಣೆಯ ಮೂರ್ತರೂಪವಾಗಿದ್ದವರು.” ಎಂದು ಯು.ಆರ್.ಎ ಅವರ ನೆಚ್ಚಿನ ವಿದ್ಯಾರ್ಥಿಯಾದ ಪ್ರೊ.ಎಚ್. ಪಟ್ಟಾಭಿರಾಮ ಸೋಮಯಾಜಿ ಅವರು ತಮ್ಮ ಲೇಖನ ‘ಸೀದ ವಾಸನೆಯ ಭಾರತ ವರ್ಸಸ್ ಸೀಯದ ಸುರಗಿ’ಯಲ್ಲಿ ಬರೆದರು. ‘ಮುಖ್ಯ’ನುಭವ :
“ಮೊದಲಿನಿಂದ ಕೊನೆಯ ತನಕ ಅವರು ವೈಚಾರಿಕ ನಿಲುವು ಹೊಂದಿದ್ದರು. ಅವರ ನಿಧನ ಸಾರಸ್ವತ ಲೋಕಕ್ಕೆ ದೊಡ್ಡ ನಷ್ಟ. ನಾನು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಾಗ ಒಳ್ಳೆಯ ಕೆಲಸ ಮಾಡಲು ಸಲಹೆ ನೀಡಿದ್ದರು” ಎಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯವರು, ಅವರ ನಿಧನಕ್ಕೆ ಕಂಬನಿ ಮಿಡಿದರು.

ಪ್ರಬಂಧ ಸಂಕಲನ :
1) ಸನ್ನಿವೇಶ
2) ಸಮಕ್ಷಮ
3) ಕಾಲಮಾನ
4) ಪೂರ್ವಾಪರ
5) ಸದ್ಯ ಮತ್ತು ಶಾಶ್ವತ
6) ಪ್ರಜ್ಞೆ ಮತ್ತು ಪರಿಸರ

‘ಸಾಹಿತಿ’ಗಳ ಸಾಹಿತ್ಯಿಕ ‘ನುಡಿ’ನಮನಗಳು :
ಹಿರಿಯ ಸಾಹಿತಿಗಳು ಡಾ.ಯು.ಆರ್.ಎ ಅವರ ನಿಧನಕ್ಕೆ ನಾಡಿನ ಗಣ್ಯ ಸಾಹಿತಿಗಳು ತಮ್ಮ ನುಡಿನಮನ ಅರ್ಪಿಸಿದರು. ಕೆಲವರು ಅವರೊಂದಿಗಿದ್ದ ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿದ್ದಾರೆ.

ಹಿರಿಯ ಕವಿಗಳಾದ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರು, “ನನ್ನ ಮತ್ತು ಅವರ ಸ್ನೇಹ 50 ವರ್ಷಗಳಿಗಿಂತ ಹಳೆಯದು. ಯಾವುದೇ ಕಾರ್ಯಕ್ರಮಕ್ಕಾಗಲಿ ಬರುತ್ತೇನೆಂದು ಮಾತುಕೊಟ್ಟರೆ ಅವರೆಂದಿಗೂ ತಪ್ಪಿಸಿಕೊಳ್ಳುತ್ತಿರಲಿಲ್ಲ” ಎಂದರು. ಹಿರಿಯ ಸಾಹಿತಿಯರಾದ ಪ್ರೊ. ಚಂದ್ರಶೇಖರ ಪಾಟೀಲರವರು, “ಅನಂತಮೂರ್ತಿ, ಲಂಕೇಶ ಮತ್ತು ನಾನು ಒಂದೇ ಬಳ್ಳಿಯ ಹೂಗಳಂತೆ ಇದ್ದೆವು. ಎಡಪಂಥೀಯ ಚಿಂತನೆಗಳಿಗೆ ಬದ್ಧರಾಗಿದ್ದರು. ಅವರ ಅಗಲಿಕೆ ನೋವು ತಂದಿದೆ” ಎಂದು ತಮ್ಮ ಅವರೊಂದಿಗಿದ್ದ ಸಂಬಂಧವನ್ನು ವ್ಯಕ್ತಪಡಿಸಿದರೆ, ಗೀತ ರಚನೆಕಾರ, ಜಯಂತ ಕಾಯ್ಕಿಣಿಯವರು, “ಅನಂತಮೂರ್ತಿ ಅವರು ವಿಧಿವಶರಾಗಿದ್ದರಿಂದ ನಾಡಿನ ಸಾಹಿತ್ಯಲೋಕ ಹಿರಿಯರಿಲ್ಲದ ಮನೆಯಂತಾಗಿದೆ. ಅವರು ಬದುಕಿದ್ದಾಗ, ಅವರ ಬೆಲೆ ನಮಗೆ ಗೊತ್ತಾಗಲಿಲ್ಲ. ಈಗ ಅವರ ಬೆಲೆ ನಮಗೆ ಗೊತ್ತಾಗುತ್ತದೆ” ಎಂದರು.

ಕಥಾ ಸಂಕಲನಗಳು :
1) ಎಂದೆಂದೂ ಮುಗಿಯದ ಕಥೆ
2) ಆಕಾಶ ಮತ್ತು ಬೆಕ್ಕು
3) ಪಚ್ಛೆ ರೆಸಾರ್ಟ್
4) ಮೌನಿ
5) ಪ್ರಶ್ನೆ

“ಸಾಹಿತ್ಯಲೋಕ ಆಭರಣ-ಕಿರೀಟವನ್ನು ನಾವು ಕಳೆದುಕೊಂಡಿದ್ದೇವೆ. ಅವರ ಸಾವು ನಿರೀಕ್ಷಿತವೇ ಆದರೂ ಅದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದೈಹಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ; ವೈಚಾರಿಕವಾಗಿ ಮತ್ತು ಭಾವನಾತ್ಮಕವಾಗಿ ಅವರು ನಮ್ಮ ಜೊತೆ ಇದ್ದಾರೆ” ಎಂದು ಸಾಹಿತಿ ವೈದೇಹಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.

ಮದನಿ-ಕಂಬನಿ :

ಡಾ.ಯು.ಆರ್.ಎ ನಿಧನಕ್ಕೆ ಕೇರಳಕ್ಕೆ ಪಿ.ಡಿ.ಪಿ ಪಕ್ಷದ ಮುಖಂಡ, ಅಬ್ದುನ್ನಾಸಿರ್ ಮದನಿ ತೀವ್ರ ಸಂತಾಪ ವ್ಯಕ್ತಪಡಿಸಿದರು. “ನನ್ನ ಮಾನವ ಹಕ್ಕು ಉಲ್ಲಂಘನೆಯಾದಾಗ, ಯು.ಆರ್.ಎ ರವರು ಸಹೋದರರಂತೆ ನ್ಯಾಯಯುತ ಹೋರಾಟ ನಡೆಸಿದರು” ಎಂದು ಹೇಳಿ ಕಂಬನಿ ಮಿಡಿದರು.

‘ಅಂಕಣ’ಗಾರರ ‘ಅಕ್ಷರ’ ನಮನ :
ಸಾಹಿತಿ, ಅಂಕಣಗಾರ ಶೂದ್ರ ಶ್ರೀನಿವಾಸ ತಮ್ಮ ಅಂಕಣ ‘ಮಾತು ಮೌನದ ಮುಂದೆ’ಯಲ್ಲಿ ಡಾ.ಯು.ಆರ್.ಎ ರವರ ಕುರಿತು, “ಅವರ ಪ್ರತಿಕ್ರಿಯೆಗಳನ್ನು ನಾವು ಇತಿಹಾಸ ಪುಟಗಳಲ್ಲಿ ಬರೆದಿಡಬೇಕಾಗಿದೆ. ಅವರನ್ನು ಯಾರೇ ಎಷ್ಟೇ ನಿಂದಿಸಿದರೂ, ಅದಕ್ಕೆ ಸೂಕ್ತ ಉತ್ತರ ಕೊಡುತ್ತಿದ್ದರು” ಎಂದು ಹೇಳಿದ್ದಾರೆ.

“ಬದುಕಿನ ಕೊನೆಯ ಉಸಿರು ಇರುವವರೆಗೂ ತಮ್ಮ ಮಾತು ಮತ್ತು ಬರಹದ ಮೂಲಕ ಸುತ್ತಲಿನ ಜಗತ್ತಿಗೆ ಬೆಳಕಿನ ಕಿರಣಗಳನ್ನು ಚೆಲ್ಲುತ್ತಿದ್ದ ಕರ್ನಾಟಕದ ಈ ಸಾಕ್ಷಿ ಪ್ರಜ್ಞೆ ಇಂದಿಲ್ಲ ಎಂದು ನಂಬಲು ತುಂಬಾ ಕಷ್ಟವಾಗುತ್ತದೆ. ಆದರೆ, ಅವರು ಚೆಲ್ಲಿದ ಬೆಳಕು ನಿರಂತರವಾಗಿ ಕತ್ತಲಿನೊಂದಿಗೆ ಸೆಣಸುತ್ತಲೇ ಇರುತ್ತದೆ. ‘ಸಂಸ್ಕಾರ’, ‘ಭಾರತೀಪುರ’ ದಂತಹ ಸಾಹಿತ್ಯ ಕೃತಿಗಳು ರಚಿಸಿ ಪುರೋಹಿತಶಾಹಿ, ಜಾತಿವಾದಿಗಳ ಆಕ್ರೋಶಕ್ಕೆ ತುತ್ತಾದ ಅನಂತಮೂರ್ತಿಯವರು, ಎಂತಹ ದಾಳಿಗೂ ಹೆದರಲಿಲ್ಲ” ಎಂದು ‘ಪ್ರಚಲಿತ’ ಎಂಬ ಅಂಕಣದ ಅಂಕಣಗಾರ ಸನತ್ ಕುಮಾರ್ ಬೆಳಗಲಿ ಬರೆದು, ಡಾ. ಆನಂತಮೂರ್ತಿರವರ ದಿಟ್ಟತನಕ್ಕೆ ಶ್ಲಾಘಿಸಿದರು.

ಇಂದು ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ.ಅನಂತಮೂರ್ತಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ, ಅವರು ನಮ್ಮನ್ನು ಆಗಲಿ ಏಳು ವರುಷಗಳು ಕಳೆದರೂ, ಅವರ ಕೃತಿ-ವಿಚಾರಗಳು ಜೀವಂತವಾಗಿದ್ದು ಅವರ ನೈಜ ಯಶಸ್ಸಾಗಿದೆ. ಅವರ ನುಡಿ-ಬರಹಗಳ ಅಭಿಮಾನಿಯಾದ ನಾನು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸುತ್ತೇನೆ!!

LEAVE A REPLY

Please enter your comment!
Please enter your name here